ರಾಮಾಯಣ ಎಂಬ ರಸಪಾಕ..

Share Button

ಕರ್ಕಟಕ ಮಾಸವನ್ನು ರಾಮಾಯಣ ಮಾಸ ಎಂದು ಕರೆದು ಕೇರಳದಾದ್ಯಂತ  ಒಂದು ತಿಂಗಳ ದಿನ ರಾಮಾಯಣ ಪಾರಾಯಣ ಮಾಡುವುದರ ಮೂಲಕ ರಾಮಭಕ್ತರಿಂದ ರಾಮೋಪಾಸನೆ  ನಡೆಯುತ್ತದೆ. ಇದೇ ಮಾಸದಲ್ಲಿಯೇ ವಾಲ್ಮೀಕಿ ಋಷಿಯು ಲವ-ಕುಶರಿಗೆ ರಾಮನ ಕಥೆಯನ್ನು ಹೇಳಿದರೆಂದೂ ಅದೇ ಕಾರಣದಿಂದ ರಾಮಾಯಣಕ್ಕೆ ಕರ್ಕಟಕ ಮಾಸ ವಿಶೇಷವೆಂದೂ ಜನಜನಿತವಾಯಿತು. ರಾಮಾಯಣವೆಂಬ ಕಾವ್ಯವೇ ಶ್ರೇಷ್ಟ. ಅದರಲ್ಲೊಳಗೊಂಡ ಎಲ್ಲಾ ಕಥಾಭಾಗಗಳೂ ಉತ್ತಮ ರಸಪಾಕಗಳು.ನಮ್ಮ ಜೀವನದ ಪ್ರತಿಯೊಂದು ಪಾತ್ರದಗಳಿಗೂ ರಾಮಾಯಣದೊಳಗೆ ಪರಿಹಾರವಿದೆ. ಪಿತೃವಾಕ್ಯ ಪರಿಪಾಲನೆಯಲ್ಲಿ ರಾಮಶ್ರೇಷ್ಠನಾದರೆ; ಸೀತೆ ಮಹಿಳಾಸಮೂಹಕ್ಕೆ ಆದರ್ಶ ಗೃಹಿಣಿ. ಹನುಮನ ಗುಣಸ್ವಾಮಿನಿಷ್ಠೆಯ ಪರಾಕಾಷ್ಟೆ! ಭರತನ ಭಾತೃಪ್ರೇಮ ಅಸದಳ!!.

ಇದರಿಂದ ನಾವು ಹೀರಬೇಕಾದ ಕೆಲವು ಪ್ರಮುಖ ರಸ ಹನಿಗಳುಃ-     

ವಾಲ್ಮೀಕಿಃ- ರಾಮಾಯಣವೆಂಬುದು ನಮ್ಮ ಸಂಸ್ಕೃತಿಯ ತಾಯಿಬೇರು.ಇದರಿಂದಲೇ ನಮಗೊಂದು ಅಸ್ಥಿತ್ವ. ಕೊಲೆಗಡುಕನಂತಹ   ಕೆಟ್ಟವನೂ ಸುಸಂದರ್ಭ ಒದಗಿ ಬಂದರೆ; ಪಶ್ಚಾತ್ತಾಪಗೊಂಡು ಗುರು ಉಪದೇಶದಿಂದ ಪರಿವರ್ತನೆಗೊಂಡು ಲೋಕಮಾನ್ಯನಾಗಿ  ಪ್ರಾತಃ ಸ್ಮರಣೀಯನಾಗಬಹುದು ಎಂಬುದಕ್ಕೆ  ಪ್ರಾಚೇತಸ  ವಾಲ್ಮೀಕಿಯಾದುದೇ ಸಾಕ್ಷಿ.

ರಾಮನ ನೀತಿಃ- ರಾಮನ ಆದರ್ಶಗಳು ರಾಮಾಯಣದುದ್ದಕ್ಕೂ ನಮಗಾಗಿ ಕಾದಿವೆ. ಮೊದಲನೆಯದಾಗಿ ಪಿತೃವಾಕ್ಯ ಪರಿಪಾಲನೆ, ಸೋದರ ಪ್ರೇಮ, ಮರ್ಯಾದಾ ಪುರುಷೋತ್ತಮ.ಪ್ರಜಾಹಿತ ಕಾಯುವದೇ ಪ್ರಥಮ ಕಾರ್ಯ ಎಂಬುದಕ್ಕೆ ಶ್ರೇಷ್ಟ ಉದಾಹರಣೆಯೇ  ಎಂಬುದಕ್ಕೆ ಏಕಪತ್ನಿ ವಲ್ಲಭ.

ಭರತಃ-ಭಾತೃಪ್ರೇಮಕ್ಕೆ ಭರತನೇ ಹೆಸರುವಾಸಿಯಾದವ.ತಾನಿಲ್ಲದ ವೇಳೆ ತನ್ನಮ್ಮ ಅಪ್ಪನಲ್ಲಿ ಹಠ ಹಿಡಿದು ತನ್ನ ಪ್ರೀತಿಯ ಅಗ್ರಜನಾದ ಶ್ರೀರಾಮನನ್ನು ಕಾಡಿಗೆ ಕಳುಹಿಸಿದ್ದಲ್ಲದೆ ತನಗೇ ರಾಜ್ಯದ ಒಡೆತನ ಕೊಡಬೇಕೆಂದು ಅತ್ಯಂತ ಹೀನಾಯ ದುರಾಸೆ ಪಟ್ಟಿದ್ದಕ್ಕಾಗಿ ಅತೀವ ನೊಂದುಕೊಂಡು; ಅಣ್ಣನನ್ನು ಕಾಣಲು ಅರಣ್ಯಕ್ಕೆ ತೆರಳಿ ಶ್ರೀರಾಮನನ್ನು ಸಂಧಿಸಿದ್ದಲ್ಲದೆ ರಾಮನಲ್ಲಿ ಕೂಡಲೇ ಅಯೋಧ್ಯೆಗೆ ಮರಳಿ ಬರಬೇಕೆಂದು ಆಗ್ರಹಿಸಿದ್ದು, ರಾಮಒಪ್ಪದಿದ್ದಾಗ ಆತನ ಪಾದುಕೆಗಳನ್ನು ಹೊತ್ತು ನಂದಿಗ್ರಾಮದಲ್ಲಿ ಸಿಂಹಾಸನದಲ್ಲಿರಿಸಿ ರಾಜ್ಯಭಾರ ಮಾಡುವ ಗುಣ ಅನನ್ಯ!.

ಸೀತೆಯ ಸಂದೇಶಃ- ಹೊರಕಣ್ಣಿಗೆ ಹೊಳಪು ಕಂಡು,ಚಿನ್ನ ಲೇಪಿತ ಒಂದೆರಡು ಮಾತಿಗೆ ಮರುಳಾಗಬೇಡಿ!. ನಿಜರೂಪ ತಿಳಿಯುವ ಮೊದಲೇ ಸಂಗಾತಿಯನ್ನ ಸ್ವತಃ ಆಯ್ಕೆ ಮಾಡಿಕೊಳ್ಳಬೇಡಿ!.ಯಾವುದೇ ಆಮಿಷಕ್ಕೆ ಬಲಿಯಾಗಿ ತಮ್ಮ ಶೀಲವನ್ನು ಕಳಕೊಳ್ಳಬಾರದು.  ಎಂದು ಇಂದಿನ ಯುವಕ-ಯುವತಿಯರಿಗೆ; ಸ್ವರ್ಣಮೃಗದ ಮಾರೀಚನ ಕತೆಯ ಮೂಲಕ  ಸೀತೆ ಸಂದೇಶ ನೀಡುತ್ತಾಳೆ.

ಜಾಂಬವಂತಃ-ಎಲ್ಲರೊಳಗೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ.ಅದು ಬೆಳಗುವುದಕ್ಕೆ; ಅದರಲ್ಲೂ ಮಕ್ಕಳಿಗೆ, ಹಿರಿಯರ, ಶಿಕ್ಷಕರ  ಪ್ರೋತ್ಸಾಹ, ಸಹಕಾರಗಳು ಅಗತ್ಯ ಎಂಬ ಕಿವಿಮಾತು  ಜಾಂಬವಂತ ನೀಡುತ್ತಾನೆ.

ಭಕ್ತ ಹನುಮಃ-ನಮ್ಮೊಳಗಿನ ಶಕ್ತಿ-ಯುಕ್ತಿಯನ್ನು ಹಿರಿಯರು ಅರಿತು ಎತ್ತಿ ತೋರಿಸುವಾಗ  ನಾವದಕ್ಕೆ ಸ್ಪಂದಿಸಬೇಕು ಎಂಬುದಾಗಿ ಆಂಜನೇಯ ಅನುಭವ ಹೇಳುತ್ತಾನೆ. ಹಾಗೂ  ಶ್ರೀರಾಮನಲ್ಲಿ ಭಕ್ತಿಪಾರಮ್ಯತೆ,ಪ್ರಾಮಾಣಿಕ ಶ್ರೇಷ್ಟತೆ,ವಾನರನಾಗಿಯೂ ರಾಮನ ಕಂಡು ರಾಮನ ಬಂಟನಾದ ಹನುಮ!. ದೇವರೆತ್ತರಕ್ಕೇರಿದರೆ; ಯಾತರ ಭಯವೂ ಇಲ್ಲ ಎನ್ನುವ ಸಂದೇಶ ಹನುಮನಿಂದ.

ರಾವಣಃ- ಕಳ್ಳನಲ್ಲೂ  ಒಂದೊಳ್ಳೆ ಗುಣವಿದೆ ಎನ್ನುವಂತೆ; ಸೀತೆಯ ಸಂಗವನ್ನು ಬಯಸಿದ ರಾವಣ, ಆಕೆಯ ಅನುಮತಿಗಾಗಿ ಕಾಯುತ್ತಾನೆ. ಆಧುನಿಕ ಯುಗದ ಸ್ತ್ರೀ ಅತ್ಯಾಚಾರಿಗಳು ಈ ರಾಕ್ಷಸರಿಗಿಂತಲೂ ಕೀಳು ಎಂಬುದನ್ನಿಲ್ಲಿ ಗಮನಿಸಬಹುದು.

ದಾಯಾದಿಗಳು ಲಕ್ಷ್ಮಣ,ಭರತರ ಸೋದರ ಪ್ರೇಮವನ್ನು ಅನುಸರಿಸಬೇಕು.

ಮಂಥರೆಯರಂತಹ ಕುಟಿಲ ಬುದ್ಧಿಯ ಪರಿಚಾರಿಕಾ ಸ್ನೇಹಿತೆಃ– ಮಂಥರೆಗೆ ಮಾಯೆಯಾಗಿ ಮನದೊಳಗೆ ಹೊಗುವ ಗುಣವಿತ್ತಂತೆ. ಆದರೆ ಈ ಗುಣವನ್ನು ಸದ್ವಿಚಾರಕ್ಕೆ ಬಳಸಬೇಕಿತ್ತು ಮಂಥರೆ. ಯಾರ ಮಾತನ್ನು ಕೇಳಬೇಕು,ಯಾರ ಮಾತನ್ನು ಕೇಳಲೇ ಬಾರದು. ಹಠಮಾರಿತನದಿಂದ ಪತಿಗೆ, ದುರ್ಭೋದನೆಯನ್ನಿತ್ತು  ಮನೆಯೊಳಗಿನ ಸಾಮರಸ್ಯವನ್ನ ಕೆಡಿಸಬಾರದು ಇದರಿಂದಾಗಿ ಪತಿಯ ಹರಣವಾಗಿ ಹೋಯ್ತು. ಎಂಬುದು ಕೈಕೆಗೆ ಕೈಮೀರಿದ ಮೇಲೆ ಪಶ್ಚಾತ್ತಾಪ!

ಸೀತೆಯು ನಾರೀಲೋಕಕ್ಕೆ ಆದರ್ಶರಾಶಿ- ಭೂಮಿತೂಕದ ಸಹನೆ!,ಜೀವನದ ಉದ್ದಕ್ಕೂ ತಾಳ್ಮೆಯಲಿ ತಗ್ಗುವ ತರುಣಿ!!

ಮರ್ಯಾದಾ ಪುರುಷೋತ್ತಮನಾದ ರಾಮನ ನೀತಿ, ಪಿತೃವಾಕ್ಯ ಪರಿಪಾಲನೆ, ಪ್ರಜಾ ಪ್ರೀತಿ ಸಂಯಮ ಬುದ್ಧಿ ಎಣೆಯಿಲ್ಲದುದು.

ರಾಮಾಯಣ ಮುಗಿಯದ ಕತೆ ಎಂಬ ಮಾತಿದೆ. ಹೌದು, ಅದು ನಿಶ್ಚಿತಾವಧಿಯೊಳಗೆ ತೀರುವಂತಹುದಲ್ಲ. ಅದರೊಳಗಿನ ತಿರುಳು  ನಿರಂತರ ನಮ್ಮ ಹೃದಯಕ್ಕಿಳಿಯ ಬೇಕಾಗಿದೆ. ಅದಕ್ಕಾಗಿ ಅನುಗಾಲವೂ ನಮಗದು ಬೇಕು. ಹಾಗಾಗಿ  ಅದು ಮುಗಿಯದ ಕತೆ. ಅದರೊಳಗಿರುವ ರಾಶಿ-ರಾಶಿ  ರಸಮೂಟೆಯಿಂದ  ಇಂತಹ ಕೆಲವು ಹನಿಗಳನ್ನಾದರೂ ಹೆಕ್ಕಿ ತೆಗೆದು, ಜನರು ಸುಶಿಕ್ಷಣ ಹೊಂದಬೇಕು ಎಂಬುದೇ ಸದಾಶಯ.

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

5 Responses

  1. ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೂ ವಂದನೆಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ. ಪ್ರತಿಯೊಂದು ಪಾತ್ರಗಳಲ್ಲಿರುವ ವಿಶೇಷತೆಯ ಪರಿಚಯ ಮಾಡಿಸಿದ್ದೀರಿ

  3. ಒಳ್ಳೆದಾಗಿದೆ

  4. ನಯನ ಬಜಕೂಡ್ಲು ಹಾಗು ಜಯಕುಮಾರಿಯವರಿಗೆ ಧನ್ಯವಾದಗಳು.

  5. ಶಂಕರಿ ಶರ್ಮ says:

    ರಾಮಾಯಣದ ಕೆಲವು ಬಹುಮುಖ್ಯ ಪಾತ್ರಗಳ ಅಮೂಲ್ಯ ಗುಣಗಳ ಬಗ್ಗೆ ಹಾಗೂ ಅವುಗಳನ್ನು ಈದಿನಗಳಲ್ಲಿ ಅಳವಡಿಕೊಳ್ಳುವ ಅಗತ್ಯತೆಗಳ ಬಗೆಗಿನ ಲೇಖನ ತುಂಬಾ ಚೆನ್ನಾಗಿದೆ ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: