ಮಳೆಯ ನೆನಪುಗಳು

Share Button

ಹೀಗೆ ಒಂದು ದಿನ ಮಳೆ ಎಡೆಬಿಡದೆ ಸುರಿಯುತ್ತಿತ್ತು.ಕುಳಿತಿದ್ದ ಬಸ್ ನಲ್ಲಿ  ಕಾಲ ಸರಿಯದೆ, ಬಸ್ ಮಾತ್ರ ಮುಂದೆ ಹೋಗುತ್ತಿದ್ದರೂ ಒಳಕುಳಿತವರೆಲ್ಲ  ಜಡತ್ವಕ್ಕೆ ಅತ್ತ್ಯುತ್ತಮ  ಉದಾಹರಣೆಯಂತೆ ಕುಳಿತು,ಕಾಲ ದೇಶಗಳೆಲ್ಲ ನಿಂತೇ  ಹೋದಂತೆ  ಅನಿಸಿಬಿಟ್ಟಿತು. ನಿದ್ದೆಯೂ ಬಾರದೆ, ಜಡಿ ಮಳೆ ತಂದ ಬೇಸರದಿಂದಲೂ ತಲೆ ಚಿಟ್ಟು ಹಿಡಿಯುವಂತೆ ಆದಾಗ, ಆಧುನಿಕ ಮಾಯಾದೀಪವಾದ ಸ್ಮಾರ್ಟ್ ಫೋನ್ ಉಜ್ಜಿದಾಗ ಗೂಗಲ್ ಜಿನ್ ಪ್ರತ್ಯಕ್ಷವಾಗಿ “ಕ್ಯಾ ಹುಕಂ ಹೈ ಮೇರೆ ಅಕ್ಕಾ”ಎಂದಾಗ,ಏನೂ ಕೇಳಲು ತೋಚದೆ, ಸುಮ್ಮನೆ ಹೊಳೆದ  “ಎಲೈ ಗೂಗಲನೆ  ಮನುಷ್ಯನಿಗೆ  ಸಂತೋಷ ಕೊಡುವ ವಸ್ತು,  ವಿಷಯಗಳಾವುವು?”ಎಂದಾಗ ಆತ ಸುತ್ತಿ ಸುತ್ತಿ ಸುತ್ತಿ ಯಾವ್ಯಾವುದೋ ಲಿಂಕುಗಳ ಬಲೆಯಲ್ಲಿ ಸಿಲುಕಿಸಿ “ಅಕ್ಕ ಇನ್ಮೇಲೆ  ನೀನೇ   ಹುಡಿಕೊಳ್ಳಕ್ಕ, ನನ್ನ ಬುಟ್ಬುಡೂ,ಇಂಥ ತಲೆ ಕೆಟ್ಟ  ಪ್ರಶ್ನೆಗೆ ಉತ್ರ ಹೇಳದಲ್ಲ  ನನ್ ಕೆಲ್ಸ,ಏನಾದ್ರೂ  ಪುಕ್ಸಟ್ಟೆ  ಐಡಿಯಾ  ಬೇಕಾ  ಹೇಳ್ ಕೊಟ್ಟೇನು, ಅದು  ಬುಟ್  ಬುಟ್ಟು  ಹಿಂಗೆಲ್ಲಾ  ನನ್  ತಲೆಗೆ ಹುಳ  ಬುಡ್ಬೇಡ” ಅಂತ ಥೇಟ್ ನಮ್ಮೂರು ಮಾತಲ್ಲಿ  ಹೇಳಿ ಮಾಯವಾದ. ಅಂತೂ  ಇಂತೂ  ಸಿಕ್ಕಿಕೊಂಡಿದ್ದ  ಲಿಂಕ್ ಗಳನ್ನೆಲ್ಲ ಕೆದಕಿ ಕೆದಕಿ ಹುಡುಕಿ ಹುಡುಕಿ ಯೂಟ್ಯೂಬ್ ನ  ಯಾವುದೋ  ಒಂದು ವಿಡಿಯೋದಲ್ಲಿನ ಒಬ್ಬ ವ್ಯಕ್ತಿತ್ವ  ವಿಕಸನದ  ಗುರುವೊಬ್ಬ “ಸುಖ  ಎನ್ನುವುದು  ನಿನ್ನೊಳಗೆ  ಇದೆ, ವಸ್ತು ವಿಷಯಗಳಲ್ಲಲ್ಲ,ದೊಡ್ಡ ದೊಡ್ಡ ಸಂಗತಿಗಳಲಿ ಹುಡುಕ ಬೇಡ,ಸಣ್ಣ ಸಣ್ಣ ವಿಷಯಗಳಲ್ಲೂ ನೆಮ್ಮದಿ ಕಾಣು” ಎಂದಪ್ಪಣೆ ಕೊಡಿಸಿದ.

ಮೊದಲೇ ಜಡಿ ಮಳೆ ತಂದ ಮಂಕು, ಅದರಲ್ಲಿ ಇವನ ತಲೆ ಹರಟೆ ಸೇರಿ,ಸುರಿವ ಮಳೆಯಲ್ಲಿ ಎಸೆದು ಬಿಡೋಣ ಅನ್ನಿಸಿ ಬಿಟ್ಟಿತು. ಮಳೆಗಾಲದಲ್ಲಿ  ಬಸ್ ಪ್ರಯಾಣ ವೆಂದರೆ ಒಂದು ಶಿಕ್ಷೆಯೇ ಸರಿ.ಕಿಟಕಿಯಿಂದ ಏನೂ ಕಾಣದೇ,ಹೊಡೆವ ಎರಚಲಿನ ಒದ್ದೆ,ಹತ್ತಿ ಇಳಿಯುವವರ ಹೆಜ್ಜೆ ಗಳಿಂದ ಒದ್ದೆ ಒದ್ದೆ ಯಾದ ಬಸ್ ತಳದ ಗೊಜ್ಜೆ, ಕಿಟಕಿಗಳ ತೆರೆಯಲಾರದೆ ಕುಳಿತವರ ಬೆವರ ವಾಸನೆಯ ದುರ್ಗಂಧ ಎಲ್ಲಾ ಸೇರಿ ಮಳೆ ಎಂದರೆ ಮನೆಯಲ್ಲಿ ಇದ್ದರೇ ಸರಿ ಅನಿಸಿ ಬಿಡುತ್ತದೆ.

ಮಳೆಗಾಲ ಅಂದರೆ ನನಗಂತೂ ಕಳೆದರೆ ಸಾಕಪ್ಪಾ ಸಾಕು. ಮನೆಯಲ್ಲೇ ಇದ್ದು ಬೆಚ್ಚಗೆ ಹೊದ್ದು ಮಲಗಿ,ತಿನ್ನಲು ಬಿಸಿ ಬಿಸಿ ಯಾಗಿ ಅಡಿಗೆ ಮಾಡಿ ಕೊಡುವವರಿದ್ದರೆ ಮಾತ್ರ ಮಳೆ ಬರಬೇಕು. ಹೊರಗಡೆ ಕೆಲಸ ಮಾಡಲು ಮಳೆಯಲ್ಲಿ ಹೋಗುವುದೆಂದರೆ ಬೇಡವೇ ಬೇಡ ಅನಿಸಿ ಬಿಡುತ್ತೆ. ಎಷ್ಟೋ ಜನ ” ಮಳೆ ಎಂದರೆ ಮಧುರ ಭಾವ,ಜೀವ ಪೊರೆಯುವ ಕಾಲ,” ಎಂದೆಲ್ಲ ಹೇಳುವುದು ಕೇಳಿದರೆ, “ಮಳೆಯಲ್ಲಿ ಕೆಲಸ ಮಾಡಿ ನೋಡ್ರಪ್ಪ” ಅನ್ಬೇಕು.ತೋಟ,ಹೊಲ ,ಗದ್ದೆ ಗಳಲ್ಲಿ ಕೆಲಸ ಮಾಡುವವರ ಪಾಡು ಅವರಿಗೇ ಗೊತ್ತು. ನಿಜ ಮಳೆಯಿಲ್ಲದೆ ಇಳೆಯ ಜೀವನ ಸಾಗದು.ಆದರೆ ಕೆಲಸ ಮಾಡಲು ಕಷ್ಟ ಕೂಡ ಹೌದು.

ತುಂಬಾ ಚಿಕ್ಕವಳಿದ್ದಾಗ ಮೊದಲ ಬಾರಿ ಮಳೆ ನೋಡಿದ ನೆನಪು ಅಂದರೆ,ನಮ್ಮಜ್ಜಿ ಮನೆಯ ಜಗಲಿ ಮೇಲೆ ನಿಂತು ಸೂರಿನಿಂದ ಕೆಳಗಿಳಿಯುತ್ತಿದ್ದ ನೀರಿಗೆ ಕೈಯೊಡ್ಡಿ ಕುಡಿಯಲು ಹೋದಾಗ ನಮ್ಮ ಮಾವ ಬಂದು “ಕುಡಿ ಬಾರ್ದು ಕಣಪ್ಪ ” ಅಂತ ಎತ್ತಿಕೊಂಡು, ಬರಿ ಪಾದಗಳು ನೆನೆಯುವಂತೆ ನೀರಿನಲ್ಲಿ ಆಟವಾಡಿಸಿದ್ದು ಇವತ್ತು ನಡೆದಂತಿದೆ. ಅದೇ ರೀತಿ ಅವರು ಇನ್ನೊಮ್ಮೆನನ್ನ ಎತ್ತಿಕೊಂಡು ತೋಟದ ದೊಡ್ಡ ತೊಟ್ಟಿಯ ಮೇಲೆ ಕುಳಿತುಕೊಂಡು ನನ್ನ ಪಾದಗಳನ್ನು ನೀರಿನಲ್ಲಿ ಪಟ ಪಟ ಬಡಿಸಿ ಆಡಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಅವರ ಕೈನಿಂದಾ ನಾನು ಜಾರಿ ತೊಟ್ಟಿಯ ನೀರಿನಲ್ಲಿ ಮುಳುಗಿ ನೀರು ಕುಡಿದು ಉಸಿರು ಕಟ್ಟಿ, ಏನಾದರೂ ಅನಾಹುತ ಆಗುವಷ್ಟರಲ್ಲಿ ಮಾವ ಎತ್ತಿಕೊಂಡು ಉಳಿಸಿದ್ದರು.ಹೀಗೆ ಮುಂಚಿಂದಲೂ ನನಗೆ ನೀರಲ್ಲಿ ಆಡುವುದು ರೂಡಿಯಾಗಿ ಇಷ್ಟ ವಾದರೂ ,ಮಳೆಯಲ್ಲಿ ನೆನೆದು ಒದ್ದೆ  ಆಗುವುದು ಅಂದ್ರೆ ಅದ್ಯಾಕೋ ಆಗದು.ಹೊಳೆ, ಕೆರೆಗಳ ದಡದಲ್ಲಿ ಆಡುವುದು ಚಂದವೇ, ಆದರೆ ಮಳೆ ಮಾತ್ರ ಬೇಡ.

ಚಿಕ್ಕವರಿದ್ದಾಗ ಶಾಲೆಗೆ ನಡೆದೇ ಹೋಗುತ್ತಿದ್ದೆವು, ಮಳೆಗಾಲ ದಲ್ಲಿ,ಛತ್ರಿ ಇದ್ದರೂ,ಮೈ ಕೈ ಎಲ್ಲಾ ತಣ್ಣ ತಣ್ಣ ಗಾಗಿ, ಕಿಚ ಪಿಚ ಅಂತ ಒದ್ದೆ ರಸ್ತೆಯಲ್ಲಿ ನಡೆಯುವುದು ಒಂದು ಶಿಕ್ಷೆ ಅನಿಸಿ ಬಿಡುತ್ತಿತ್ತು. ಇನ್ನು ಬಾಲ್ಯದಲ್ಲಿ ಸಿಕ್ಕಾಬಟ್ಟೆ ಮಳೆ ಹುಯ್ಯುತ್ತಿದ್ದ ಮಲೆನಾಡು ಪ್ರದೇಶದ ಭದ್ರಾವತಿ, ಮದುವೆಯಾದ ಬಳಿಕ ಅತೀ ಅಂದ್ರೆ ಅತೀ ಮಳೆಯ ಕೊಡಗಿನಲ್ಲಿ ವಾಸ ಅಂದ ಮೇಲೆ ಮಳೆ ನೋಡಿ ನೋಡಿ ಬಿಡಿದು ಹೋಗಿದೆ. “ದೇವಾ,ಬರಿ ಹೊಲ ಗದ್ದೆಗಳು ತೋಟಗಳಿಗೆ ಮಾತ್ರ,ನದಿ ಒಳಗೆ ಮಾತ್ರ ಬೀಳುವಂತೆ ಎಷ್ಟು ಬೇಕೋ ಅಷ್ಟು ಮಾತ್ರ ಮಳೆ ಹುಯ್ಯುವಂತೆ ಏನಾದ್ರೂ ಮಾಡಪ್ಪ”ಎಂದು ಅನಿಸಿ ನಗು ಬರುತ್ತದೆ.


ಮಳೆಯ ಜೊತೆಗೆ ಎಷ್ಟೋ ಜನಕ್ಕೆ ಮಧುರ ನೆನಪುಗಳು ಇರ ಬಹುದೇನೋ. ಆದರೆ ಮಳೆ ನನಗೆ ಮಾತ್ರ ಖಿನ್ನತೆಯ ಭಾವ ತುಂಬಿ ತರುತ್ತದೆ. ಹೀಗೆ ಒಂದು ಮಳೆಗಾಲದಲ್ಲಿ ಅಮ್ಮ ಖಾಯಿಲೆ ಬೀಳಲು ಶುರುವಾಗಿ, ಮನೆಯಲ್ಲಿ ಯಾವುದೋ ಒಂದು ಹೇಳಲಾಗದ ಯಾತನೆಯ ಭಾವ ತುಂಬಿ ಹೋಗಿ,ಈಗಲೂ ಮಳೆ ಹುಯ್ಯಲು ಶುರುವಾದರೆ ಅದೇ ನೋವಿನ ನೆನಪು ನುಗ್ಗಿ ಬರುತ್ತದೆ.

ಮೊದಲ ಮಗುವಿನ ತಾಯಿಯಾದಾಗ ಕೂಡ ಹೀಗೆಯೇ ಮಳೆಗಾಲ,ಬಾಣಂತನದ, ಮಗುವಿನ ಆರೈಕೆಯ ಒತ್ತಡ,ಸಿಸೇರಿಯನ್ ನಿಂದಾಗಿ ಕುಗ್ಗಿದ್ದ ದೇಹದ ತ್ರಾಣ, ಅದರಲ್ಲಿ ಜೊಯ್ಯೋ ಎಂದು ಹುಯ್ಯತ್ತಿದ್ದ ಮಳೆಯ ತಲೆ ಚಿಟ್ಟು ಹಿಡಿಸುವಿಕೆ, ಎಲ್ಲದರಿಂದ ಉಂಟಾದ ಖಿನ್ನತೆಯಿಂದ ಪಾರಾಗಲು ನಾನು ಪಟ್ಟ ಪಾಡು ,ಇದೆಲ್ಲವೂ ಮಳೆಯ  ನೆನಪುಗಳ  ಜೊತೆ ಸೇರಿಕೊಂಡು ಮಳೆ ಎಂದರೆ ನನಗೆ ಆಗದು ಅಂದ್ರೆ ಆಗದು.

ಮಳೆಯ ಬಗ್ಗೆ ನನ್ನ ಒಂದೇ ಒಂದು ಒಳ್ಳೆಯ ಭಾವನೆ ಅಂದರೆ, ಮಳೆಯ ಬಗ್ಗೆ ಇರುವ ನೂರಾರು ಹಳೆಯ ಹಿಂದಿ ಹಾಡುಗಳು. “ರಿಂ ಜಿಮ್ ಗಿರೆ ಸಾವನ್..” ಎಂದು ಅಮಿತಾಭ್ ಮೌಸಮಿ ಚಟರ್ಜಿ ಮುಂಬಯಿಯ ರಸ್ತೆ ರಸ್ತೆಗಳಲ್ಲಿ ಮಳೆಯಲ್ಲಿ ನೆನೆಯುತ್ತ ಸುತ್ತುವುದು ಮಳೆಯ ಬೆಸ್ಟ್ ಹಾಡು ನನ್ನ ಪ್ರಕಾರ. ಮಳೆ ಬೀಳುವಾಗ ಎಲ್ಲ ಫೇವರಿಟ್ ಹಳೇ ಹಾಡುಗಳ ಕೇಳುತ್ತ, ಬಿಸಿ ಬಿಸಿ ಕಾಫಿ ಕುಡಿಯುತ್ತ ಬೆಚ್ಚಗೆ ಮನೆಯಲ್ಲಿ ಇರೋದಾದ್ರೆ ಸರಿ, ಆದ್ರೆ ಹೊರಟು ಕೆಲಸಕ್ಕೆ ಹೋಗು ಅಂದ್ರೆ ಅಳುವೇ ಬಂದು ಬಿಡುತ್ತೆ.

ಕೊಡಗಿನಲ್ಲಿ ಮಳೆಗಾಲದಲ್ಲಿ ಪ್ರವಾಹ ಸ್ಥಿತಿ ಉಂಟಾದಾಗ ಶಾಲೆಗಳಿಗೆ ಕೆಲ ದಿನಗಳು ರಜೆಯೇ ಕೊಟ್ಟು ಬಿಡುತ್ತಾರೆ.ಇಲ್ಲದಿದ್ದರೆ ಚಿಕ್ಕ ಚಿಕ್ಕ ಮಕ್ಕಳು ಕೊಡಗಿನಂತಹ ಗುಡ್ಡ ಗಾಡು ಪ್ರದೇಶದಲ್ಲಿ, ಜಡಿ ಮಳೆಯಲ್ಲಿ ಶಾಲೆಗೆ ಬರುವುದು ಅಪಾಯವೇ ಸರಿ. ಕಳೆದೆರಡು ವರ್ಷಗಳಲ್ಲಿ ಯಂತೂ ಕೊಡಗು ಪ್ರವಾಹದಿಂದಾಗಿ ಎದುರಿಸಿರುವ ಹಾನಿ ಅಷ್ಟಿಷ್ಟಲ್ಲ. ಆದರೆ ಕೊಡಗಿನ ಜನ ಅದನ್ನು ಎದುರಿಸಿರುವ ರೀತಿಯೂ ಅದ್ಭುತವೇ. ಪ್ರವಾಹ ಬಂದು ಹೋದ ಬಳಿಕ, ಹಾನಿಯ ನಡುವೆಯೂ ,ಅಪಾರ ಜೀವನೋತ್ಸಾಹದಿಂದ ಎಲ್ಲವನ್ನು ಮತ್ತೆ ಸಾಧ್ಯವಾದಷ್ಟು ಮುಂಚಿನಂತೆ ಮಾಡಲು ಶ್ರಮಿಸಿ,ಬದುಕಿನ ಬಗ್ಗೆ ಭರವಸೆ ಕಳೆದುಕೊಳ್ಳದ ಜನರಿರುವ ತನಕ ಮಳೆ ಏನೂ ಮಾಡಲು ಆಗದು.

– ಸಮತಾ.ಆರ್‍

12 Responses

 1. km vasundhara says:

  ಬಹಳ ವಿಭಿನ್ನವಾಗಿ ನಿಮ್ಮ ಅಭಿಪ್ರಾಯ ಹೇಳಿದ್ದೀರಿ… ಚೆನ್ನಾಗಿದೆ.

 2. SmithaAmrithraj. says:

  ಚೆನ್ನಾಗಿದೆ ಸಮತಾ

 3. ಬಿ.ಆರ್.ನಾಗರತ್ನ says:

  ಸುಖಾಸುಮ್ಮನೆ ಓದಿ ಸಿಕೊಂಡು ಹೋಗುವ ಸುಂದರ ಅನುಭವ ದ ಬರವಣಿಗೆ ಅಭಿನಂದನೆಗಳು ಮೇಡಂ

 4. Latha v.p. says:

  Thumba chennagide

 5. ನಯನ ಬಜಕೂಡ್ಲು says:

  ಪೂರ್ತಿ ಮಳೆಗಾಲದ ಚಿತ್ರಣ ಇಲ್ಲಿದೆ. Very nice

 6. ನೂತನ says:

  ಭಿನ್ನ ಶೈಲಿ… ಚೆನ್ನಾಗಿದೆ

 7. Hema says:

  ಸಕಾಲಿಕ ಬರಹ ..ಸೊಗಸಾಗಿದೆ.

 8. Samatha.R says:

  ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

 9. sangeetha raviraj says:

  chennagide akka samatha.

 10. sangeetha raviraj says:

  baraha chennagide akka

 11. Dayananda says:

  Super article, experiences have been nicely brought into article

 12. Dayananda says:

  Nice article

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: