ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 33

Share Button

ಡಾರ್ಜಿಲಿಂಗ್ ನಲ್ಲಿ  ವಿದಾಯಕೂಟ

ನಮ್ಮ ಪ್ರವಾಸದ ಕೊನೆಯ ದಿನದ ಕೊನೆಯ ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತೆನ್ನಬಹುದು..ಅದುವೇ ಪ್ರಾಣಿ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯಗಳ ವೀಕ್ಷಣೆ. ಅದೇ ಗುಂಗಿನಲ್ಲಿ ಮಧ್ಯಾಹ್ನದ ಸಿಹಿಯೂಟ ಉಂಡು, ಸ್ವಲ್ಪ ವಿಶ್ರಾಂತಿಯ ಬಳಿಕ ಇಷ್ಟವಿದ್ದವರು ಹೊರಗಡೆ ಸುತ್ತಾಡಲು ಹೋಗಬಹುದೆಂದರು ಬಾಲಣ್ಣನವರು.  ಹೋಗುವುದೇನೋ ಸರಿ..ಆದರೆ ಹೊಸ ಜಾಗದಲ್ಲಿ ನಾವೇ ಕಳೆದು ಹೋಗಬಾರದಲ್ಲ! ತಿನ್ನಲು ಒಳ್ಳೆಯ ಹಣ್ಣು ಏನಾದರೂ ಸಿಗುವುದೇನೋ ಎಂದು ನಾವಿಬ್ಬರು ಹೋಟೆಲ್ ನ ಗುರುತನ್ನು ಸರಿಯಾಗಿ ನೆನಪಿನಲ್ಲಿರಿಸಿಕೊಂಡು ಹೊರಟೆವು. ರಸ್ತೆಯ ಇಕ್ಕೆಲಗಳಲ್ಲಿ, ನಡೆದಾಡಲು ಸರಿಯಾದ ಕಾಲುದಾರಿಯನ್ನೂ ಬಿಡದೆ ಒತ್ತೊತ್ತಾಗಿ ಇದ್ದವು..ಸಣ್ಣ ದೊಡ್ಡ ಅಂಗಡಿಗಳು. ಕೆಲವು ಕಡೆ ಇವುಗಳು ರಸ್ತೆಗಿಂತ ನಾಲ್ಕೈದು ಅಡಿಗಳಷ್ಟು ಎತ್ತರದಲ್ಲಿದ್ದುವು. ಹೆಚ್ಚಿನ ಅಂಗಡಿಗಳಲ್ಲಿ ಚಂದದ ಚಳಿ ಉಡುಪುಗಳು,  ವಿವಿಧ ರೀತಿಯ ಸ್ವೆಟರ್ ಗಳು, ಪಾದಾಚಾರಿಗಳು ನಡೆದಾಡುವಾಗ ತಲೆಗೆ ತಾಗುವಂತೆ ನೇತಾಡುತ್ತಿದ್ದವು. ಪ್ರವಾಸಿಗರನ್ನು ವ್ಯಾಪಾರಕ್ಕೆ ಸ್ಪರ್ಧೆಯಲ್ಲಿ ಕರೆಯುತ್ತಿದ್ದರು.

ನಮಗೆ ಒಂದೇ ಒಂದು ಹಣ್ಣಿನ ಅಂಗಡಿ ಕೂಡಾ ಕಾಣಲಿಲ್ಲ. ಸ್ವಲ್ಪ ದೂರ ನಡೆದ ಬಳಿಕ ಅಲ್ಲಿಯ ಅತ್ಯಂತ ಹಳೆಯ ಉಗಿಬಂಡಿಯ ನಿಲ್ದಾಣದ ಬಳಿಯೇ ಕಂಡಿತು ಒಂದು ಪುಟ್ಟ ಅಂಗಡಿ. ಅದರ ಬಳಿ ಹೋದಾಗ ನಮಗೆ ಅಚ್ಚರಿ ಕಾದಿತ್ತು. ಒಬ್ಬ ಒಳ ಹೋಗಬಹುದಾದಂತಹ, ಗೂಡಂಗಡಿ ತರಹದ, ಸಣ್ಣ ಜಾಗದಲ್ಲಿ,ವ್ಯಾಪಾರಿಯೇ ಕಾಣದಷ್ಟು ಸಾಮಾನುಗಳು ತುಂಬಿ ತುಳುಕುತ್ತಿದ್ದವು. ನಮಗೆ ಬೇಕಾದ ಹಣ್ಣು ಕೂಡಾ ಅಲ್ಲಿತ್ತು. ರಭಸವಾಗಿ ಓಡಾಡುತ್ತಿದ್ದ ಆ ಜನನಿಬಿಡ ಫೂಟ್ ಪಾತ್ ನಲ್ಲಿ ನಮಗೆ ನಿಲ್ಲಲೂ ಜಾಗವಿರಲಿಲ್ಲ. ಸಾಲಾಗಿ ಅಂತಹುದೇ ಅಂಗಡಿಗಳಲ್ಲಿ ನಡೆಯುತ್ತಿದ್ದ ವ್ಯಾಪಾರ ಜೋರಾಗಿಯೇ ಇತ್ತು. ಒಟ್ಟಿಗೇ ನಮ್ಮಂತಹ ನಾಲ್ಕೈದು ಗಿರಾಕಿಗಳೊಡನೆ ನಗುನಗುತ್ತಾ, ಪಕ್ಕದ ಅಂಗಡಿಯವರೊಡನೆಯೂ ತಮಾಷೆ ಮಾತಾಡುತ್ತಾ, ಬಹಳ ಚಾಕಚಕ್ಯತೆಯಿಂದ ವ್ಯವಹರಿಸುತ್ತಿದ್ದುದು ನೋಡುವುದಕ್ಕೆ ಮೋಜೆನಿಸಿತು. ಅವರ ಜೀವನ ಪ್ರೀತಿ ಕಂಡು  ಖುಷಿಯಾಯ್ತು.
ಇಕ್ಕಟ್ಟಾದ ರಸ್ತೆಗಳು ಸ್ವಚ್ಛವಾಗಿಲ್ಲದೆ, ಹೆಜ್ಜೆ ಇಡಲು ಮುಜುಗರಪಡುವಂತಾಯ್ತು. ನಡೆದಾಡುತ್ತಿದ್ದಾಗ ಇನ್ನೊಂದು ವಿಷಯ ಗಮನ ಸೆಳೆಯಿತು. ಎಲ್ಲಿ ನೋಡಿದರೂ, ರಸ್ತೆ ಪಕ್ಕದ ಕಂಬಗಳಲ್ಲಿ ಹತ್ತಾರು ಪ್ಲಾಸ್ಟಿಕ್ ಕೊಳವೆಗಳು ಎಲ್ಲೆಲ್ಲಿಗೋ ಹರಡಿ ಹಬ್ಬಿಕೊಂಡಿದ್ದುವು. ಅಕ್ಕಪಕ್ಕದ ಗೋಡೆಗಳಲ್ಲಿಯೂ ಅವುಗಳು ಹಾಯ್ದು ಹೋಗುತ್ತಿದ್ದುವು. ನಾನು ದೂರವಾಣಿ ಇಲಾಖೆಯವಳಾದ್ದರಿಂದ ಸಹಜವಾಗಿ ತುಂಬಾ ಕುತೂಹಲವುಂಟಾಯ್ತು. ಇಡೀ ಪಟ್ಟಣದ ಅಂದವನ್ನೇ ಹಾಳುಗೆಡವಿದ್ದ ಆ ಕೊಳವೆಗಳ ಒಳಗೆ ದೂರವಾಣಿಯ ತಂತಿಗಳಿರಬಹುದೆಂದು ನನ್ನ ಗ್ರಹಿಕೆ. ಏನೆಂದು ತಿಳಿದುಕೊಳ್ಳಬೇಕೆಂಬ ಆಸಕ್ತಿ ಹೆಚ್ಚಾಗಿ, ವ್ಯಕ್ತಿಯೊಬ್ಬರಲ್ಲಿ ಕೇಳಿದಾಗ ತಿಳಿಯಿತು, ಅವುಗಳು ನೀರಿನ ಕೊಳವೆಗಳೆಂದು! ನಿಜಕ್ಕೂ ನನಗೆ ನಂಬಲಾಗಲೇ ಇಲ್ಲ. ಸಾಮಾನ್ಯವಾಗಿ ನೀರನ್ನು ದೊಡ್ಡ ಕೊಳವೆಗಳಲ್ಲಿ ಹಾಯಿಸಿ, ಆಮೇಲೆ ಕಟ್ಟಡಗಳಿಗೆ ಸಣ್ಣ ಕೊಳವೆಗಳಲ್ಲಿ ಸಾಗಿಸುವುದು ರೂಢಿ. ಸರಿಯಾಗಿ ಗಮನಿಸಿದಾಗ ಹಾಳಾದ ಕೊಳವೆಗಳಲ್ಲಿ ನೀರು ಜಿನುಗುವುದು ಕಾಣುತ್ತಿತ್ತು. ಅತ್ಯಂತ ಅಧ್ವಾನವಾಗಿತ್ತು ಅಲ್ಲಿಯ ಈ ವ್ಯವಸ್ಥೆ!

ನಿಜವಾಗಿಯೂ, ಡಾರ್ಜಿಲಿಂಗ್ ನಲ್ಲಿ ನೀರಿನ ವ್ಯವಸ್ಥೆ ಮೊದಲು ತುಂಬಾ ಚೆನ್ನಾಗಿತ್ತು. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ, ಅಂದಿನ ಜನಸಂಖ್ಯೆಗೆ ಅನುಗುಣವಾಗಿ(ಸುಮಾರು10,000),  ಸೇಚಲ್ ಎಂಬಲ್ಲಿಯ ಎತ್ತರದ ಪ್ರದೇಶದಲ್ಲಿರುವ ಎರಡು  ನೀರು ಸಂಗ್ರಹಣಾ ಸರೋವರಗಳಿಂದ ಭೂಗತ ಕೊಳವೆಗಳ ಮೂಲಕ ಜನರಿಗೆ ಉಚಿತವಾಗಿ ನೀರು ಸರಬರಾಜು ಆಗುತ್ತಿತ್ತು. ಸರೋವರಗಳ ಸಂಗ್ರಹಣಾ ಸಾಮರ್ಥ್ಯವು, ಜನಸಂಖ್ಯೆಯು ಸುಮಾರು ‌15,000 ಆಗುವ ವರೆಗೆ  ಸಾಲುವಷ್ಟಿತ್ತು. ಸ್ವಾತಂತ್ರ್ಯಾನಂತರದಲ್ಲಿ ಜನಸಂಖ್ಯೆ  ಹೆಚ್ಚಾಗುತ್ತಾ ಹೋಗಿ, ಸದ್ಯಕ್ಕೆ ಸುಮಾರು 1,32,000ರಷ್ಟಿರುವ ಜನರಿಗೆ ನೀರಿನ ಸರಬರಾಜಿನ ವ್ಯವಸ್ಥೆಯಲ್ಲಿ ಏನೂ ಬದಲಾವಣೆಯಾಗಲಿಲ್ಲ.  ಜನರು ನೀರಿಗಾಗಿ ಖಾಸಗಿ ಸರಬರಾಜನ್ನು ಅವಲಂಬಿಸಬೇಕಾಯ್ತು.ಅದರ ಫಲವೇ ಡಾರ್ಜಿಲಿಂಗ್ ನ ಅಂದವನ್ನು ಹಾಳುಗೆಡವಿದ ಈ ತರಹದ, ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಜೋತಾಡುವ ನೀರ ಕೊಳವೆಗಳು. ನೀರು ಸಂಗ್ರಹಣಾ ಸರೋವರಗಳಿಗೆ ಬೇಸಿಗೆಯಲ್ಲಿ ಮಂಜು ಕರಗಿ ಹರಿದು ಬರುವ ನೀರೇ ಆಧಾರ. ಇತ್ತೀಚೆಗೆ, ಬಾಲ್ಸಂ ನದಿಯ ನೀರನ್ನು ಮೇಲೆತ್ತಿ ಸರೋವರಗಳನ್ನು ತುಂಬಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಜೆಯ ಫಲಾಹಾರವನ್ನು ಖಾಲಿ ಮಾಡಿದ ಮೇಲೆ ನಮಗಾಗಿಯೇ ಇತ್ತು ಮುಂದಿನ ಪೂರ್ತಿ ಸಮಯ. ಬೀದಿಗಳನ್ನು ಸುತ್ತಿ ,ಸ್ಥಳದ ನೆನಪಿಗೋಸ್ಕರ ಬೇಕಾದ್ದು ಖರೀದಿಸಿ, ಬೇಕಾದ್ದು ತಿಂದು ತೇಗುವ ಮುಕ್ತ ಅವಕಾಶ! ಹೊರಟವು ನಮ್ಮ ದಂಡುಗಳು.. ಅವರವರಿಗೆ ಇಷ್ಟವಾಗಿರುವದನ್ನು ಹುಡುಕುತ್ತಾ. ನಾನು ಮತ್ತು ನಮ್ಮ ಲೀಲಕ್ಕ ಜೊತೆಗೆ ಹೊರಟೆವು. ಆಗಲೇ ಕತ್ತಲು ಕವಿಯಲಾರಂಭಿಸಿತ್ತು. ಲೀಲಕ್ಕ ಖರೀದಿಯಲ್ಲಿ ಭಾರೀ ಹುಶಾರು. ನಾವಿಬ್ಬರೂ ಒಂದು ಗಂಟೆ ಹೊತ್ತು ಸುತ್ತಾಡಿದ್ದೇ ಸುತ್ತಾಡಿದ್ದು. ರಸ್ತೆಯಲ್ಲಿ ಕೆಲವು ಕಡೆಗೆ ಬೆಳಕಿಲ್ಲದೆ ಮಬ್ಬುಗತ್ತಲಲ್ಲಿಯೇ ನಡೆದಾಡಿದೆವು..ಬೇಕಾದ್ದನ್ನು ಖರೀದಿಸಿದೆವು..ಫೋಟೋ ಕ್ಲಿಕ್ಕಿಸಿ ಖುಷಿ ಪಟ್ಟೆವು. ಆಗಾಗ ನಮ್ಮ ಪ್ರವಾಸಿ ಬಂಧುಗಳು ಎದುರಿಗೆ ಸಿಗುತ್ತಿದ್ದುದರಿಂದ ನಮಗೆ ಧೈರ್ಯವಾಗುತ್ತಿತ್ತು.

ರಾತ್ರಿ ಎಂಟು ಗಂಟೆಗೆ ಹೋಟೇಲಿಗೆ ಹಿಂತಿರುಗುವ ಹೊತ್ತಿಗೆ ಅಲ್ಲಿ ಒಂದು ವಿಶೇಷ ಕಾರ್ಯಕ್ರಮಕ್ಕಾಗಿ ವೇದಿಕೆ ಸಜ್ಜುಗೊಳ್ಳುತ್ತಿತ್ತು. ಪ್ರವಾಸದ ಕೊನೆಯ ದಿನದ..ದಿನ ಕೊನೆಗೊಳ್ಳುವ ಹಂತದಲ್ಲಿ, ಎಲ್ಲರಿಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶ.  ಮಹೇಶಣ್ಣನ ನಿರೂಪಣೆಯೊಂದಿಗೆ ಚಾಲನೆಗೊಂಡ ಕಾರ್ಯಕ್ರಮವು, ಸುಬ್ರಹ್ಮಣ್ಯ ಶರ್ಮರ ಸುಶ್ರಾವ್ಯ ಹಾಡಿನೊಂದಿಗೆ ಆರಂಭವಾಯ್ತು.  ಒಂದರ್ಧ ತಾಸು  ಅನಿಸಿಕೆಗಳ ರಸವತ್ತಾದ ಹನಿಗಳ ಸಿಂಚನದ ಸುಖವನ್ನು ಎಲ್ಲರೂ ಅನುಭವಿಸಿದೆವು.ನಮ್ಮ ಪ್ರವಾಸದ ಉಸ್ತುವಾರಿ ವಹಿಸಿಕೊಂಡಿದ್ದ ಬಾಲಕೃಷ್ಣ ಹಾಗೂ ಅವರ ಬಳಗದವರನ್ನು ನೆನೆದು ಕೃತಜ್ಞತೆ ಸಲ್ಲಿಸದವರೇ ಇಲ್ಲ.
ಅತ್ಯಂತ ಯಶಸ್ವಿಯಾಗಿ ಪೂರೈಸಿ, ಕೊನೆಯ ಹಂತಕ್ಕೆ ತಲಪಿದ ನಮ್ಮ ಪ್ರವಾಸದ ರೂವಾರಿ ನಾರಾಯಣಣ್ಣ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ವಿಶೇಷವಾಗಿ, ಅತ್ಯಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಏರ್ಪಡಿಸಿದ ಈ ಪ್ರವಾಸದ ಮುಖ್ಯ ಕೇಂದ್ರ ಬಿಂದು ಬಾಲಕೃಷ್ಣರಿಗೆ ಹಾಗೂ ಸಮಯ ಸಮಯಕ್ಕೆ, ರುಚಿಕಟ್ಟಾದ ಆರೋಗ್ಯಕರ ಊಟ ತಿಂಡಿಗಳನ್ನು ತಯಾರಿಸಿ ಉಣಬಡಿಸಿದ ರಾಜೇಶಣ್ಣ ಮತ್ತು ಅವರ ಬಳಗದವರಿಗೆ ಕೃತಜ್ಞತೆಗಳನ್ನು ಸೂಚಿಸಿ ನಮ್ಮೆಲ್ಲರ ನೆನಪಿನ ಕಾಣಿಕೆಯನ್ನು ಎಲ್ಲರೂ ಸೇರಿ ಧನ ರೂಪದಲ್ಲಿ ನೀಡಿ ಗೌರವಿಸಿದೆವು.  ಆ ರಾತ್ರಿಯ ಬಹುಬಗೆಯ ಭೋಜನಕೂಟ ಅವಿಸ್ಮರಣೀಯ! ಮರುದಿನ ಬೆಳಗ್ಗಿನಿಂದ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ, ಬೇರೆಬೇರೆ ಸಾರಿಗೆ ವ್ಯವಸ್ಥೆಗಳ ಮೂಲಕ ಪ್ರಯಾಣಿಸುವ ಸಮಯ. ಆದ್ದರಿಂದ ಈ ಘಳಿಗೆಯು ಪುಟ್ಟ ನೋವಿನೊಂದಿಗೆ ಪರಸ್ಪರ ಬೀಳ್ಕೊಡುವಂತೆಯೇ, ಚಿರಸ್ಮರಣೀಯ ಅನುಭವಗಳ ಮೂಟೆ ಹೊತ್ತು ಹಿಂತಿರುಗುವ ಸಂತಸದ ಸಮಯವೂ ಆಗಿದ್ದುದು ಸುಳ್ಳಲ್ಲ. ಪರಸ್ಪರ ಶುಭರಾತ್ರಿ ವಿನಿಮಯ ಮಾಡಿಕೊಂಡು, ಮರುದಿನ ಪ್ರಯಾಣಕ್ಕೆ ಸಿದ್ಧತೆ ಮಾಡುವ ತುರಾತುರಿಯಲ್ಲಿಯೇ,  ಡಾರ್ಜಿಲಿಂಗ್ ನ ತಂಪಾದ ಮಡಿಲಿನಲ್ಲಿ ಕೊನೆಯ ರಾತ್ರಿಯ ನಿದ್ದೆಗೆ ಶರಣಾದೆವು..

(ಮುಂದುವರಿಯುವುದು..)
ಹಿಂದಿನ ಸಂಚಿಕೆ ಇಲ್ಲಿದೆ:  ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 32

-ಶಂಕರಿ ಶರ್ಮ, ಪುತ್ತೂರು.

5 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ.

  2. Savithri bhat says:

    ಸೂಪರ್ ಪ್ರವಾಸ ಕಥನ

  3. km vasundhara says:

    ದಿನಚರಿಯಂತೆ ಪ್ರವಾಸದ ಪ್ರತಿಕ್ಷಣವನ್ನೂ ಉತ್ಸಾಹದಿಂದ ಕಟ್ಟಿಕೊಡುತ್ತಿರುವಿರಿ. ಓದಲು ಖುಷಿ ಎನಿಸುತ್ತದೆ.

Leave a Reply to Savithri bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: