‘ರೀತಿಗೌಳ’ ರಾಗವೇ ಈ ರೀತಿ!

Share Button
Photo-Shruthi

ಶ್ರುತಿ ಶರ್ಮಾ

ಚಲನಚಿತ್ರ ಸಂಗೀತದಲ್ಲಿ ಭಕ್ತಿಪೂರ್ವಕವಾದ ಹಾಡುಗಳನ್ನು ಸಂಯೋಜಿಸುವುದು ಒಂದು ಸವಾಲಿನ ಕೆಲಸವೆಂದೇ ಎನ್ನಬಹುದು. ಅದರಲ್ಲೂ ಆಧುನಿಕತೆಯ ಸಣ್ಣ ಲೇಪನದೊಂದಿಗೆ ಸಂಯೋಜಿಸುವುದಂತೂ ಕಠಿಣ. ನಮ್ಮ ನೆರೆಯ ಕೇರಳ, ತಮಿಳ್ನಾಡುಗಳಲ್ಲಿ ಇಂತಹ ಹಾಡುಗಳಿಗೆ ನಿರ್ದೇಶಕರು ಹೆಚ್ಚಾಗಿ ಮೊರೆ ಹೋಗುವುದು “ರೀತಿಗೌಳ” ರಾಗಕ್ಕೆ. ಅದರಲ್ಲೂ ಕೇರಳದ ನಾಡಹಬ್ಬ ಓಣಂ ನ ಹಲವಾರು ಹಾಡುಗಳು ಈ ರಾಗದಲ್ಲೇ ಸಂಯೋಜಿಸಲಾಗಿದ್ದು, ಕೇಳುತ್ತಾ ಹೋದಂತೆ ಸಾಂಪ್ರದಾಯಿಕತೆಯು, ಒಂದು ತೆರನಾದ ಪವಿತ್ರತೆಯು ಸುತ್ತೆಲ್ಲಾ ತುಂಬಿದಂತಾಗುತ್ತದೆ.

ರೀತಿಗೌಳ – ಶಾಸ್ತ್ರೀಯ ಸಂಗೀತದ ಒಂದು ಸುಂದರ, ಗಂಭೀರ ರಾಗ ಸೃಷ್ಟಿ.  ಭಕ್ತಿ, ಕರುಣ ರಸಪ್ರಧಾನವಾದ, ಜೊತೆಗೆ ಆನಂದವನ್ನೂ ಸೂಸಲು ಸಾಧ್ಯವಿರುವ ಇದನ್ನು ಹಾಡಲು, ಕೇಳಲು, ಯಾವುದೇ ಪ್ರತ್ಯೇಕವಾದ ಸಮಯವು ಹೇಳಲಾಗಿಲ್ಲ ಎಂಬುದೇ ಅದರ ವಿಶೇಷತೆಯ ಮಟ್ಟವನ್ನು ತಿಳಿಸುತ್ತದೆ. ಮೂರು ಸ್ಥಾಯಿಗಳಲ್ಲೂ ಅತಿ ಮನೋಹರ! ಅದರಂತೆಯೇ ಗಾಂಭೀರ್ಯವನ್ನು ಹೊಂದಿದ್ದು, ಕೇಳುತ್ತಾ ಹೋದಂತೆ ಸಂಗೀತ ಪ್ರೇಮಿಗಳಿಗೆ ಸಂಗೀತದ ಮೇಲೂ ಅದರಂತೆಯೇ ಹಾಡಿದವರ ಮೇಲೂ ಕೂಡ ಆರಾಧನೆಯ ಭಾವವನ್ನುಂಟು ಮಾಡುತ್ತದೆ. ಈ ರಾಗವನ್ನು ಗುರುತಿಸಲು ಸಂಗೀತದ ಆಸಕ್ತಿಯಿದ್ದು ಕೇಳುವ ಅಭ್ಯಾಸವಿದ್ದರೂ ಸಾಕು. ಸ್ವರವಿಸ್ತಾರದ ಪ್ರತಿ ಅಂಕು-ಡೊಂಕಿನಲ್ಲೂ ವಿಶೇಷವಾದ ಲಾವಣ್ಯವನ್ನು ಹೊಮ್ಮಿಸುವ ಈ ರಾಗಕ್ಕೆ ಮನಸೋಲದವರೇ ಇಲ್ಲ.

ಸಂಗೀತ ಪ್ರಪಂಚದಲ್ಲಿ ರೀತಿಗೌಳವು ಒಂದು ನಿಧಿಯಿದ್ದಂತೆ. ಅದನ್ನು ಕಚೇರಿಗಳಲ್ಲಿ ಹಾಡುವವರಿಗೇ ಒಂದು ವಿಶೇಷ ಗೌರವ. ಸಂಗೀತ ಸಭೆಗಳಲ್ಲಿ ಆರಂಭಿಕ ವರ್ಣ, ಗಣಪತಿ ಸ್ತುತಿಗಳ ಬಳಿಕ, ಕೇಳುಗರ ಚಿತ್ತವನ್ನು ಕೇಂದ್ರೀಕರಿಸಲು ಕೆಲವು ಗಾಯಕರು ತಂತ್ರಪೂರ್ವವಾಗಿ ಈ ರಾಗವನ್ನು ಆಯ್ದುಕೊಂಡು ಕಛೇರಿಗೆ ಕಳೆಗಟ್ಟುತ್ತಾರೆ. ಹಲವರ ಪ್ರಿಯ ರಾಗವಾದ ರೀತಿಗೌಳವನ್ನು ಸಮರ್ಥವಾಗಿ ಸಭೆಗಳಲ್ಲಿ ಪ್ರಸ್ತುತಪಡಿಸಲೂ ಅಪಾರ ನೈಪುಣ್ಯ ಅಗತ್ಯ. ಒಬ್ಬ ಉತ್ತಮ ಗಾಯಕ/ಕಿ ರೀತಿಗೌಳವನ್ನು ಹೃದಯ ತುಂಬಿ ಪ್ರಸ್ತುತಿಪಡಿಸಿದಾಗ ಇಹಪರದ ಗೊಡವೆಯಿಲ್ಲದೆ ಕೇಳುವ ಕೇಳುಗರಿಗೆ ಕಣ್ಣಂಚು ಒದ್ದೆಯಾಗುವುದುಂಟು. ಸ್ವರಗಳ ತಿರುವುಗಳಲ್ಲಿನ ಕರುಣ ರಸದ ವ್ಯಾಕರಣವು, ಶಬ್ದಗಳಿಗಿಂತಲೂ ಮಾತಿಗಿಂತಲೂ ಹೆಚ್ಚು ಆಲಾಪನೆಯಲ್ಲೇ ಆಪ್ತವಾಗಿಬಿಡುತ್ತವೆ. ಮನತುಂಬ ಕರುಣೆ-ಭಕ್ತಿಯ ಭಾವವನ್ನು ತುಂಬಿಸಿಕೊಂಡು ಗಾಯನದ ಕೊನೆಯಂಚಿಗೆ ಬಂದು ತಲುಪಿದಾಗ, ಕಾಲವನ್ನು ಸ್ವಲ್ಪ ರಿವೈಂಡ್  ಮಾಡಬಹುದಾಗಿದ್ದರೆ! ಎನಿಸುವುದು.

“ಖರಹರಪ್ರಿಯ” ರಾಗದಲ್ಲಿ ಜನಿಸಿದ ಘನ ರಾಗವಾದ ರೀತಿಗೌಳದ ಆರೋಹಣ ಅವರೋಹಣಗಳು:

reethigowlaಸ ಗ೨ ರಿ೨ ಗ೨ ಮ೧ ನಿ೨ ಧ೨ ಮ೧ ನಿ೨ ನಿ೨ ಸ

ಸ ನಿ೨ ಧ೨ ಮ೧ ಗ೨ ಮ೧ ಪ ಮ೧ ಗ೨ ರಿ೨ ಸ

ರಾಗಲಕ್ಷಣಗಳ ಅರಿವಿಲ್ಲದಿದ್ದರೂ, ಉತ್ತಮ ಕೇಳ್ವಿ ಜ್ನಾನವಿರುವ ಸಂಗೀತಪ್ರಿಯರಿಗೆ ಹಾಡು ಕೇಳುತ್ತಿದ್ದಂತೆ ಅದರ ರಾಗವನ್ನು ಗುರುತು ಹಿಡಿಯುವುದು ಸುಲಭ.

ತ್ಯಾಗರಾಜರ ’ದ್ವೈತಮು ಸುಖಮ’, ’ಬಡಲಿಕ ಧೀರ’, ’ರಾಗರತ್ನ’, ’ಜೋ ಜೋ ರಾಮಾ’, ಶ್ಯಾಮ ಶಾಸ್ತ್ರಿಗಳ ’ನಿನ್ನುವಿನಾ’, ಸುಬ್ರಾಯ ಶಾಸ್ತ್ರಿಗಳ ’ಜನನೀ ನಿನ್ನುವಿನಾ’, ಸ್ವಾತಿ ತಿರುನಾಳರ ’ಪರಿಪಾಲಯಮಾಂ’, ಅಂಬುಜಂ ಕೃಷ್ಣರ ಗುರುವಾಯುರಪ್ಪನೇ.. ಹೀಗೆ ಸಂಗೀತ ಪ್ರಿಯರು ಸದಾ ಪ್ರೀತಿಸುವ ರೀತಿಗೌಳ ರಾಗ ಸಂಯೋಜನೆಯ ಕೀರ್ತನೆಗಳ ಪಟ್ಟಿ ನೀಳವಾಗುತ್ತದೆ.

ಬಾಲ ರಾಮನಿಗೆ ಹಾಡುವ ಜೋಗುಳ ಹಾಡು ಜೋ.. ಜೋ.. ರಾಮಾ… ಪ್ರಿಯ ಓದುಗರಿಗಾಗಿ ಬಾಂಬೆ ಜಯಶ್ರೀಯವರ ಕಂಠದಲ್ಲಿನ ಜೋ ಜೋ ರಾಮಾ ಹಾಡು ಇಲ್ಲಿ ಕೊಡಲಾಗಿದೆ. ದಯವಿಟ್ಟು ಸ್ಪೀಕರ್ ಗಳ ವಾಲ್ಯೂಮ್ ಅನ್ನು ಹೊಂದಿಸಿಕೊಂಡು ಕೇಳಿ 🙂

ರಚನೆ : ತ್ಯಾಗರಾಜರು.  ರಾಗ: ರೀತಿಗೌಳ. ತಾಳ: ಆದಿ

===============

ಎಸ್ ಅಶ್ವತಿರವರ ಕಂಠದಲ್ಲಿನ ಪರಿಪಾಲಯಮಾಂ :

ರಚನೆ : ಸ್ವಾತಿ ತಿರುನಾಳ್.  ರಾಗ: ರೀತಿಗೌಳ.  ತಾಳ: ರೂಪಕ.


=====

ಆಸಕ್ತರು ಈ ಯೂಟ್ಯೂಬ್ ಲಿಂಕ್ ಮೂಲಕ ಟಿ ಎಂ ಕೃಷ್ಣ “ಬಡಲಿಕ ಧೀರಾ” ದ ಅದ್ಭುತ ಪ್ರಸ್ತುತಿಯನ್ನು ಕೇಳಬಹುದು. ಇಲ್ಲಂತೂ ರೀತಿಗೌಳವನ್ನು ಅದರ ಅತ್ಯುನ್ನತ ಗಾಂಭೀರ್ಯದಿಂದ ಪ್ರಸ್ತುತಿಗೈದಿದ್ದಾರೆ ಗಾಯಕರು:


================

ದಕ್ಷಿಣ ಭಾರತದ ಸಂಗೀತದ ಒಂದು ರಸದೌತಣವಾದ ರೀತಿಗೌಳದ ಆಕರ್ಷಣೆಯು ಯಾರನ್ನೂ ಬಿಡದು. ಕನ್ನಡ ಚಿತ್ರ ಸಂಗೀತದ ವಿಷಯಕ್ಕೆ ಬಂದರೆ ಇಲ್ಲಿ ರೀತಿಗೌಳವನ್ನು ಬಳಸಿಕೊಂಡಿರುವವರು ವಿರಳ. ನೆರೆ ರಾಜ್ಯಗಳಲ್ಲಿ ಇಳಯರಾಜ, ಎ.ಆರ್ ರಹಮಾನ್, ಶರತ್ ರಂತಹ ನಿರ್ದೇಶಕರು ರೀತಿಗೌಳವನ್ನು ಬಳಕೆ ಮಾಡಿ ಸಿನಿಮಾ ಸಂಗೀತಕ್ಕೆ ಅಪಾರ ಕೊಡುಗೆಯನ್ನಿತ್ತಿದ್ದಾರೆ. ಸಂತೋಷ, ದುಃಖ, ಭಕ್ತಿ, ಪ್ರೀತಿ ಈ ಎಲ್ಲ ತರದ ಭಾವಗಳನ್ನೂ, ವಿವಿಧ ಸಾಹಿತ್ಯಗಳನ್ನು ಸಂಯೋಜಿಸಲು ಈ ಸವಾಲಿನ ರಾಗವನ್ನು ಬಳಸಿಕೊಂಡು ಸೈ ಅನ್ನಿಸಿಕೊಂಡಿದ್ದಾರೆ. ಕರುಣೆ ಭಕ್ತಿ ಮಾತ್ರವಲ್ಲದೆ, ಸಂತೋಷವನ್ನೂ ಪ್ರೀತಿಯನ್ನೂ ಸೂಸಲು ಸಾಧ್ಯವಿರುವ ರೀತಿಗೌಳದ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಎನಿಸಿಕೊಂಡು ಸರ್ವಕಾಲಪ್ರಿಯವಾಗಿವೆ.

 

– ಶ್ರುತಿ ಶರ್ಮಾ

 

 

 

 

10 Responses

 1. Hema says:

  ಬಲು ಸೊಗಸಾದ ನಿರೂಪಣೆ…ಸುಮಧುರವಾದ ಸಂಗೀತ.. ಕೇಳುತ್ತಾ ಕುಳಿತಿರಬೇಕು ಅನಿಸುತ್ತದೆ. ಆದ್ರೆ ಆಫೀಸಿಗೆ ಹೊರಡುವ ಹೊತ್ತಾಯಿತು. ಹೋಗಲು ಮನಸ್ಸು ಬರುತ್ತಿಲ್ಲ! ಇದೇ ‘ರೀತಿ’ ‘ಶ್ರುತಿ’ ಬದ್ಧವಾಗಿ ಬರೆಯುತ್ತಾ ಇರಿ ಶ್ರುತಿ ಅವರೇ….

  • Shruthi says:

   ತುಂಬಾ ಧನ್ಯವಾದಗಳು ಹೇಮಾ ಅವರೇ, ನಿಮ್ಮ ಪ್ರೋತ್ಸಾಹದ ನುಡಿಗಳಿಗೆ 🙂 ಬಿಡುವಾದಾಗಲೆಲ್ಲಾ ಹಾಡುಗಳನ್ನು ಕೇಳುತ್ತಿರಿ! ಮುಂದೆಯೂ ಬರೆಯುವ ಪ್ರಯತ್ನವನ್ನು ಮಾಡುತ್ತಿರುತ್ತೇನೆ!

 2. VINAY KUMAR V says:

  ತುಂಬಾ ಚೆನ್ನಾಗಿದೆ ಶ್ರುತಿ 🙂

 3. jayashree says:

  Excellent Shruti. Symphony of sweetness and light!

 4. Ravikumara Kadumane says:

  ಇದು ನನ್ನ ಇಷ್ಟದ ರಾಗ.ನನಗೆ ಸಂಗೀತ ಜ್ಞಾನ ಇಲ್ಲ.ಸುಮಾರು ಸಮಯದ ವರೆಗೆ ಆನಂದಭೈರವಿ ಮತ್ತು ರೀತಿಗೌಳದ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ.ಸುಬ್ರಹ್ಮಣ್ಯಪುರಂ ತಮಿಳು ಸಿನೆಮಾದ “ಕಂಗಳಿರಂಡಾಲ್”,ಕಮಲಹಾಸನ್ ಅಭಿನಯದ “ಪಾರ್ತ ಮುದಲ್ ನಾಳೈ”ಹಳೆಯ “ಪೋಯ್ ವಾ ಮಗಳೇ ಪೋಯ್ ವಾ” ಹಾಡುಗಳನ್ನೆಲ್ಲಾ ಡೌನ್ ಲೋಡ್ ಮಾಡಿಕೊಂಡಿದ್ದೇನೆ.ಶಾಸ್ತ್ರೀಯ ಸಂಗೀತದಲ್ಲಿ “ಗುರುವಾಯೂರಪ್ಪನೆ ಅಪ್ಪನ್”,”ತತ್ವಮರಿಯ ತರಮಾ”,”ಪರಿಪಾಲಯಮಾಂ”,ನನ್ನು ವಿಡಚಿ ಕದಲಕೂರಾ” ಎಲ್ಲವೂ ಒಂದಕ್ಕಿಂತ ಒಂದು ಅದ್ಭುತ..!

  Sent from my iPad

 5. Shruthi Sharma says:

  ಸಂಗೀತದ ಒಳ-ಹೊರ ಬಲ್ಲ ತಮ್ಮ ಪ್ರತಿಕ್ರಿಯೆ ಓದಿ ಸಂತೋಷವಾಯಿತು. ರೀತಿಗೌಳ ಮತ್ತು ಆನಂದಭೈರವಿ ಗಳ ನಡುವೆ ಸಣ್ಣ ವ್ಯತ್ಯಾಸ ಮಾತ್ರ. ರೀತಿಗೌಳವನ್ನು ನೀವು ಇಷ್ಟಪಡುವುದಾದರೆ ಇಲ್ಲೊಂದಷ್ಟು ಲಿಂಕ್ ಗಳಿವೆ.. ಕೇಳಿ ಆನಂದಿಸಿರಿ .. 🙂

  http://www.youtube.com/watch?v=gydEqbxeeuA
  http://www.youtube.com/watch?v=HWp10fogd0A
  http://www.youtube.com/watch?v=kdufZDXoaKE
  http://www.youtube.com/watch?v=-NV2ov1ELmA
  http://www.youtube.com/watch?v=d9eF_4vxbKE
  http://www.youtube.com/watch?v=vVeF9nNP0B8

 6. swathibhat says:

  ರಾಗದಷ್ಟೇ ಸುಂದರವಾಗಿ ಲೇಖನವೂ ಮೂಡಿಬಂದಿದೆ. ಖರಹರಪ್ರಿಯ ರಾಗದ ಎಲ್ಲಾ ಜನ್ಯ ರಾಗಗಳೂ ಅತ್ಯಂತ ಸುಂದರವಾಗಿ, ಅದರಲ್ಲೂ ರೀತಿಗೌಳ, ಆನಂದ ಭೈರವಿ, ಅಭೋಗಿ, ಕಾನಡ, ಕಾಪಿ, ಶ್ರೀರಂಜಿನಿ ಕೇಳುಗರ ಮನದಲ್ಲಿ ಭಕ್ತಿಯ ಸುಧೆಯನ್ನೇ ಹರಿಸುತ್ತದೆ. ಸುಂದರ ಹಾಡುಗಳನ್ನು ಆಲಿಸುವಂತೆ ಮಾಡಿದ ನಿಮಗೆ ಧನ್ಯವಾದಗಳು.

 7. nayana bhide says:

  ನನಗೆ ಅಭೊಗಿಯಷ್ಟೇ ಆಪ್ತ ರೀತಿಗೌಳ…..ತು೦ಬಾ ಚೆನ್ನಾಗಿದೆ ಮಾಹಿತಿ, ಹಾಡುಗಳು …

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: