ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟ 34: ಮರಳಿ ಮನೆಗೆ…
18. 5.2019ನೇ ತಾರೀಕು, ಶನಿವಾರದ ಬೆಳಗು…ಯಾಕಾಗಿ ಬೆಳಗಾಯ್ತೋ ಎಂದು ಅನ್ನಿಸುವ ಪ್ರಭಾತ. ಆದರೆ ಜೀವನ ಚಕ್ರವು ಉರುಳಲೇ ಬೇಕಲ್ಲ! ಕಳೆದ ಹತ್ತು ದಿನಗಳು ನಾಗಾಲೋಟದಿಂದ ಓಡಿದ್ದು ತಿಳಿಯಲೇ ಇಲ್ಲ. ಪ್ರೀತಿಯ ಸಹ ಪ್ರವಾಸೀ ಬಂಧುಗಳನ್ನು ಅಗಲುವ ಸಮಯ. ತಮ್ಮ ತಮ್ಮ ಕುಟುಂಬದ ಜೊತೆ ಅನುಕೂಲಕ್ಕೆ ತಕ್ಕಂತೆ ರೈಲು ಅಥವಾ ವಿಮಾನದಲ್ಲಿ ಗಮ್ಯಸ್ಥಾನವನ್ನು ಸೇರುವ ತವಕವೂ ಇಲ್ಲದಿಲ್ಲ. ನಾವು ಎರಡು ಕುಟುಂಬದವರಿಗಾಗಿ (ನಾವಿಬ್ಬರು, ಗೌರಿ ಅಕ್ಕ ಮತ್ತು ವನಿತಕ್ಕ-ಶ್ಯಾಮ್ ಪ್ರಸಾದ ಅಣ್ಣ ದಂಪತಿಗಳು) ಟ್ಯಾಕ್ಸಿ ಗೊತ್ತು ಮಾಡಿದ್ದರು ಬಾಲಣ್ಣನವರು. ನಾವು ಮೂರು ಮಂದಿ, ನಮ್ಮ ಹೋಟೆಲ್ ನಿಂದ ಸುಮಾರು 69ಕಿ.ಮೀ.ದೂರದ ಸಿಲಿಗುರಿಯ ಬಗ್ಡೋಗ್ರ ವಿಮಾನ ನಿಲ್ದಾಣ ಹಾಗೂ ಶ್ಯಾಮಣ್ಣ ದಂಪತಿಗಳು ದಾರಿ ಮಧ್ಯದಲ್ಲಿ ಸಿಗುವ ಸಿಲಿಗುರಿ ರೈಲು ನಿಲ್ದಾಣಕ್ಕೆ ಹೋಗಬೇಕಿತ್ತು. ವಿಮಾನವು ಮಧ್ಯಾಹ್ನ ಎರಡು ಗಂಟೆಗೆ ಇದ್ದರೂ, ವನಿತಕ್ಕನವರ ರೈಲು ಸ್ವಲ್ಪ ಬೇಗನೇ ಇದ್ದುದರಿಂದ, ಅಲ್ಲದೆ ಕಡಿದಾದ ರಸ್ತೆ ಪಯಣಕ್ಕೆ ಸಾಧಾರಣ ಎರಡೂವರೆ ಗಂಟೆಗಳಷ್ಟು ಸಮಯ ತಗಲಬಹುದಾದುದರಿಂದ ಎಲ್ಲರೂ ಜೊತೆಯಾಗಿ ಬೆಳಿಗ್ಗಿನ ಉಪಹಾರ ಬೇಗನೇ ಮುಗಿಸಿ ಎಂಟು ಗಂಟೆಗೆ ಹೊರಟು ಬಿಟ್ಟೆವು. ಮಧ್ಯಾಹ್ನದ ಊಟಕ್ಕಾಗಿ ನಮಗೆಲ್ಲರಿಗೂ ಒಳ್ಳೆಯ ಗಂಜಿ, ಸಾಂಬಾರು ಬುತ್ತಿ ಕಟ್ಟಿಸಿಕೊಟ್ಟಿದ್ದರು ಬಾಲಣ್ಣನವರು. ನನಗಂತೂ, ತಾಯಿ ತವರು ಮನೆಯಿಂದ ಹೊರಡುವ ತನ್ನ ಮಗಳಿಗೆ ಬುತ್ತಿ ಕಟ್ಟಿಕೊಡುವ ಪ್ರೀತಿ ಕಂಡಂತಾಯ್ತ!.
ಹತ್ತು ದಿನಗಳ ಕಾಲ ಜೊತೆಯಿದ್ದ ನಮ್ಮ ಪ್ರವಾಸಿ ಬಂಧುಗಳನ್ನು ಅಗಲಿದಾಗ ಸಹಜವಾಗಿಯೇ ಭಾವೋದ್ವೇಗಕ್ಕೆ ಒಳಗಾಗಿದ್ದೆವು ಎಲ್ಲರೂ. ಮಗದೊಂದು ಪ್ರವಾಸದಲ್ಲಿ ಒಟ್ಟು ಸೇರುವ ಭರವಸೆಯೊಂದಿಗೆ, ಪ್ರಸಿದ್ಧ ವಿಶ್ವ ಪಾರಂಪರಿಕ ತಾಣ, ಪ್ರೀತಿಯ ಡಾರ್ಜಿಲಿಂಗ್ ನ್ನು ಭಾರದೆದೆಯೊಂದಿಗೆ ಬೀಳ್ಕೊಟ್ಟಾಗ ಬೆಳಗ್ಗಿನ ಗಂಟೆ ಎಂಟು. ಪರ್ವತ ತಪ್ಪಲಿನಿಂದ ಬಯಲು ಪ್ರದೇಶಕ್ಕೆ ಹೋಗುತ್ತಿದ್ದ ಅಗಲ ಕಿರಿದಾದ, ಅತಿ ಕ್ಲಿಷ್ಟ ತಿರುವುಗಳ ರಸ್ತೆಯ ಇಕ್ಕೆಲಗಳಲ್ಲಿ ದಟ್ಟ ಹಸಿರಿನ ಕಾಡು ಮನತುಂಬಿತು. ಮುಂದಕ್ಕೆ ಹೋದಂತೆ ಮೈಲುಗಟ್ಟಲೆ ಕಾಣುವ ಟೀ ತೋಟದ ಸುಂದರ ವಿಹಂಗಮ ನೋಟ ಕಣ್ಣೆವೆ ಮುಚ್ಚದಂತೆ ಮಾಡಿತು. ಬೆಟ್ಟವಿಡೀ ಹಸಿರು ವೆಲ್ವೆಟ್ ಹೊದ್ದುಕೊಂಡು ನಗುತ್ತಿತ್ತು. ರಸ್ತೆಯ ಪಕ್ಕದಲ್ಲೇ ಹಾದು ಹೋಗುತ್ತಿತ್ತು, ಡಾರ್ಜಿಲಿಂಗ್ ನಿಂದ ಸಿಲಿಗುರಿಗೆ ಹೋಗುತ್ತಿರುವ ನ್ಯಾರೋಗೇಜ್ ಉಗಿಬಂಡಿಯ ಹಳಿ. ಅದರಲ್ಲಿ ದಿನಕ್ಕೊಂದು ಸಲ ಉಗಿಬಂಡಿ ಈಗಲೂ ಚಲಿಸುತ್ತಿರುವುದು ನಿಜಕ್ಕೂ ವಿಶೇಷವೇ! ರಸ್ತೆಯ ಬದಿಯಲ್ಲಿ ವಿವಿಧ ಬಣ್ಣಗಳ ಧ್ವಜಗಳು ಸಾಲಾಗಿದ್ದ ಎತ್ತರದ ಕಂಬಗಳ ಮೇಲೆ ಹಾರಾಡುವುದು ಅಲ್ಲಲ್ಲಿ ಕಾಣುತ್ತಿದ್ದುವು. ಚಾಲಕ ಬಳಿ ಅದರ ಬಗ್ಗೆ ಕೇಳಿದಾಗ ತಿಳಿದ ಸಂಗತಿ ನಿಜಕ್ಕೂ ಕುತೂಹಲಕಾರಿಯಾಗಿತ್ತು. ಜಗತ್ತಿನ ಐದು ಶಕ್ತಿಮೂಲಗಳಾದ ಬ್ರಹ್ಮಾಂಡ/ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ ಇವುಗಳು ಕ್ರಮವಾಗಿ ನೀಲಿ, ಬಿಳಿ, ಕೆಂಪು, ಹಸಿರು, ಹಳದಿ ಬಣ್ಣಗಳ ಐದು ಪ್ರಾರ್ಥನಾ ಧ್ವಜಗಳ ರೂಪದಲ್ಲಿ ಆರಾಧಿಸಲ್ಪಡುತ್ತವೆ. ಹೆಚ್ಚಾಗಿ, ಮನೆ ಮುಂದೆ ಹಾರಾಡುವ ಈ ಧ್ವಜಗಳು ಅದೃಷ್ಟದ ಸಂಕೇತವಾಗಿ, ಒಳ್ಳೆಯದನ್ನುಂಟು ಮಾಡುವುದೆಂಬ ಬಲವಾದ ನಂಬಿಕೆ ಅಲ್ಲಿಯ ಜನ ಮನದಲ್ಲಿ ಹಾಸುಹೊಕ್ಕಾಗಿದೆ.
ಒಂದು ಗಂಟೆ ಪ್ರಯಾಣದ ಬಳಿಕ ಪುಟ್ಟ ಹೋಟೆಲ್ ಬಳಿ ಕಾರು ನಿಲ್ಲಿಸಿ ಟೀ ಕುಡಿದು ಮುಂದುವರಿಯಿತು ನಮ್ಮ ಪಯಣ ಸಿಲಿಗುರಿಯತ್ತ. ಹೋಟೆಲ್ ನ ನೀರಿನ ಟ್ಯಾಂಕ್ ಗೆ ಎತ್ತರದ ಬೆಟ್ಟದಿಂದ ನಿರಂತರ ಬಂದು ಬೀಳುತ್ತಿದ್ದ ಸ್ವಚ್ಛ ನೀರಿನ ಹರಿವು ನೋಡಲು ಖುಷಿಯಾಯ್ತು… ಆ ನೀರಂತೂ, ಮುಟ್ಟಿದರೆ ಮಂಜುಗಡ್ಡೆಯಷ್ಟು ತಣ್ಣಗಿತ್ತು.
ಕಾರು ಮುಂದೋಡುತ್ತಿದ್ದಂತೆಯೇ ಥಟ್ಟನೆ ಬಿಸಿ ಗಾಳಿಯ ಅನುಭವ ಆಗತೊಡಗಿತು. ಸ್ವಲ್ಪ ದಿನಗಳು ಬೆಟ್ಟದ ಮೇಲಿನ ತಣ್ಣಗಿನ ಗಾಳಿಗೆ ಹೊಂದಿಕೊಂಡಿದ್ದ ದೇಹ ಬೆವರತೊಡಗಿತು. ನಾವು ಮೂರು ಜನರನ್ನು ಸಿಲಿಗುರಿಯಲ್ಲಿ ಇಳಿಸಿದ ಕಾರು ಚಾಲಕ, ಅನಿತಕ್ಕ ದಂಪತಿಗಳನ್ನು ರೈಲು ನಿಲ್ದಾಣದತ್ತ ಕರೆದೊಯ್ಯುವ ಮೊದಲೇ ಬಾಲಣ್ಣನವರ ಸೂಚನೆಯಂತೆ ನಮಗಾಗಿ ಅಟೋರಿಕ್ಷವನ್ನು ಗೊತ್ತುಪಡಿಸಿ, ಅದರ ನಿಗದಿತ ಬಾಡಿಗೆಯನ್ನೂ ಅವನು ಅಲ್ಲೇ ತೆತ್ತು ಮುಂದುವರಿಯಿತು ಆ ಕಾರು. ಮುಂದೆ ಒಂದರ್ಧ ಗಂಟೆಯಲ್ಲಿ ನಾವು ವಿಮಾನ ನಿಲ್ದಾಣದೊಳಗಿದ್ದೆವು. ಸಿಲಿಗುರಿ ಪಟ್ಟಣದ ಪಶ್ಚಿಮ ಭಾಗದಲ್ಲಿರುವ ಈ ಬಗ್ಡೋಗ್ರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು, ಗಿರಿಧಾಮಗಳಿಗಿರುವ ಅತೀ ಪ್ರಮುಖ ಹೆಬ್ಬಾಗಿಲಾಗಿದೆ. ಇಲ್ಲಿಂದ ಸಿಕ್ಕಿಂ ರಾಜಧಾನಿ ಗೇಂಗ್ಟೋಕ್ ಗೆ ಹೆಲಿಕಾಪ್ಟರ್ ಸೌಲಭ್ಯವೂ ಇದೆ. ಉತ್ತಮ ಸವಲತ್ತುಗಳನ್ನು ಹೊಂದಿರುವ ಮಧ್ಯಮ ಗಾತ್ರದ ಈ ನಿಲ್ದಾಣದಲ್ಲಿ ಸಾಕಷ್ಟು ಪ್ರವಾಸಿಗರು ಕಂಡುಬಂದರು.
ಅಲ್ಲಿಳಿಯುತ್ತಿದ್ದಂತೆಯೇ ಬಾಲಣ್ಣನವರ ಫೋನ್ ಬಂದಾಗ ಆಶ್ಚರ್ಯವಾಯಿತು. ನಮ್ಮ ಸುಖ ಪ್ರಯಾಣದ ಬಗ್ಗೆ ಖಚಿತ ಪಡಿಸಿಕೊಂಡು, ವಿಚಾರವೊಂದನ್ನು ತಿಳಿಸಿದಾಗ ನಿಜಕ್ಕೂ ಗಾಬರಿಯಾಯ್ತು. ಹಿಂದಿನ ದಿನ ವಿಮಾನದಲ್ಲಿ ಮಂಗಳೂರಿಗೆ ಹಿಂತಿರುಗಿದ್ದ ಚಂದ್ರಕುಮಾರಣ್ಣನವರ ಸೂಟ್ ಕೇಸ್ ಗಳು ಅವರಿಗೆ ತಲಪಿರಲಿಲ್ಲವಂತೆ. ಸಾಮಾನ್ಯವಾಗಿ, ವಿಮಾನ ಪ್ರಯಾಣದಲ್ಲಿ ನಾವು ತಲಪಬೇಕಾದ ಸ್ಥಳಕ್ಕೆ ಸೀದಾ ವಿಮಾನವಿಲ್ಲವಾದರೆ, ಪ್ರಯಾಣದ ಮಧ್ಯೆ ನಾವು ವಿಮಾನ ಬದಲಾಯಿಸಬೇಕಾಗುತ್ತದೆ. ಆ ಸಮಯದಲ್ಲಿ ನಮ್ಮ ಸೂಟ್ಕೇಸ್ ಗಳನ್ನು ಕೈಯಲ್ಲಿಯೇ ಕೊಂಡೊಯ್ಯಬೇಕಾಗಿಲ್ಲ. ವಿಮಾನದ ಸಿಬ್ಬಂದಿಗಳು ಮೊದಲ ನಿಲ್ದಾಣದಲ್ಲಿಯೇ ಅವುಗಳನ್ನು ಸೀಲ್ ಮಾಡಿ ರಶೀದಿಯನ್ನು ನೀಡುತ್ತಾರೆ. ಆಮೇಲೆ ಅವುಗಳನ್ನು ನೇರವಾಗಿ ನಮ್ಮ ಕೊನೆಯ ನಿಲ್ದಾಣದಲ್ಲಿ ಪಡೆಯುವ ವ್ಯವಸ್ಥೆಯಿರುತ್ತದೆ. ಸಾಮಾನ್ಯವಾಗಿ ಈ ಲಗ್ಗೇಜ್ ಗಳು ಕಳೆದು ಹೋಗುವುದು ಬಹಳ ಅಪರೂಪ. ಒಂದು ವೇಳೆ ಕಳೆದು ಹೋದರೆ, ನಮ್ಮಲ್ಲಿರುವ ರಶೀದಿಯನ್ನು ಉಪಯೋಗಿಸಿಕೊಂಡು ಅವುಗಳನ್ನು ಪಡೆಯಬಹುದಾದರೂ ಆತಂಕದ ಜೊತೆ ಸ್ವಲ್ಪ ಕಷ್ಟ ಪಡಬೇಕಾಗುವುದು. ಚಂದ್ರಣ್ಣನವರ ಪಡೆದಿದ್ದ ರಶೀದಿ ವಿವರಗಳನ್ನು ಫೋನ್ ಮೂಲಕ ನನಗೆ ಕಳುಹಿಸಿ, ಅದರ ಬಗ್ಗೆ ನಿಲ್ದಾಣದಲ್ಲಿ ವಿವರಗಳನ್ನು ಪಡೆಯಬೇಕಾಗಿ ವಿನಂತಿಸಿಕೊಂಡರು. ನಮ್ಮ ವಿಮಾನಕ್ಕೆ ಇನ್ನೂ ತಡವಿದ್ದುದರಿಂದ ಆ ಕೆಲಸ ಮಾಡಲು ಖುಷಿಯಿಂದಲೇ ಒಪ್ಪಿಕೊಂಡು, ಕೂಡಲೇ ಅಲ್ಲಿಯ ವಿಚಾರಣಾ ವಿಭಾಗದ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ಉತ್ಸಾಹದಾಯಕ ಉತ್ತರವೇನೂ ಸಿಗಲಿಲ್ಲ. “ಇಲ್ಲಿ ಎಲ್ಲಾ ಸರಿಯಿದೆ. ನಾವು ಅವುಗಳನ್ನು ಕಳುಹಿಸಿಯಾಗಿದೆ, ಮಂಗಳೂರಲ್ಲಿ ವಿಚಾರಿಸಿ” ಎಂದು ಪಟ್ಟು ಹಿಡಿದರು. ಆದರೆ ನಾನೂ ಬಿಡಲಿಲ್ಲವೆನ್ನಿ. ಛಲ ಬಿಡದ ತ್ರಿವಿಕ್ರಮನಂತೆ, ಪದೇ ಪದೇ ಅವರಲ್ಲಿ ವಿಚಾರಿಸುತ್ತಲೇ ಇದ್ದೆ. ಒಂದು ದೂರು ಬರಕೊಡಲು ಹೇಳಿದರು. ಅದನ್ನು ಚಂದ್ರಣ್ಣನವರಿಗೆ ತಿಳಿಸಿದೆ. (ಅಂತೂ ಒಂದು ದಿನ ಬಿಟ್ಟು ಎಲ್ಲಾ ಸೂಟ್ಕೇಸ್ ಗಳೂ ಸುರಕ್ಷಿತವಾಗಿ ಅವರಿಗೆ ತಲಪಿದ್ದು ತಿಳಿದು ನೆಮ್ಮದಿಯಾಯ್ತು!) 12ಗಂಟೆ ಹೊತ್ತಿಗೆ ನಮ್ಮ ಬುತ್ತಿಯಲ್ಲಿದ್ದ ತಂಪಾದ ಗಂಜಿ ಮತ್ತು ಸಾಂಬಾರು ಉದರ ಸೇರಿದಾಗ ಹಾಯೆನಿಸಿತು. ಹಾಗೆಯೇ ಸೂಟ್ಕೇಸ್ ಗಳನ್ನು ವಿಮಾನದ ಲಗ್ಗೇಜ್ ಗೆ ಕಳುಹಿಸಿ, ಸಮಯಕ್ಕೆ ಸರಿಯಾಗಿ ವಿಮಾನವೇರಿದಾಗ, ಮನಸ್ಸು ಸಂತೋಷ ಹಾಗೂ ಬೇಸರದ ಸಂಮಿಶ್ರ ಭಾವದಿಂದ ಆರ್ದ್ರಗೊಂಡಿತ್ತು.
ಈ ಪ್ರವಾಸ ನನ್ನ ಪಾಲಿಗೆ ನಿಜವಾಗಿಯೂ *ಬಯಸದೇ ಬಂದ ಭಾಗ್ಯ* ವಾಗಿತ್ತು! ಅಭೂತಪೂರ್ವ ಯಶಸ್ಸಿನೊಂದಿಗೆ ಅತ್ಯಂತ ಆನಂದದಾಯಕವಾಗಿ ಕೊನೆಗೊಂಡ ಈ ಪ್ರವಾಸದ ಕಥನ ಬರೆಯುವ ಬಗ್ಗೆ ಯೋಚನೆಯಿರಲಿಲ್ಲ.. ಜೊತೆಗೆ ಬರೆದು ಅನುಭವವೂ ಇರಲಿಲ್ಲ. ಆದರೆ, ನನ್ನದೇ ರೀತಿಯಲ್ಲಿ ಅನುಭವಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದಂತೆಯೇ, ನಿಮ್ಮೆಲ್ಲರ ಪ್ರೋತ್ಸಾಹದಿಂದಾಗಿ ಇಂದಿನ ಈ ಕೊನೆಯ ಪುಟದ ವರೆಗಿನ ಪಯಣ ಸಾಧ್ಯವಾಯಿತು.
ನಿತ್ಯ ಜಂಜಡದ ಜೀವನದಲ್ಲಿ ಮನಸ್ಸನ್ನು ಪ್ರಫುಲ್ಲವಾಗಿರಿಸುವಲ್ಲಿ ಇಂತಹ ಪ್ರವಾಸಗಳ ಪಾತ್ರ ಬಹಳ ಮಹತ್ವದ್ದು.
ನಾರಾಯಣಣ್ಣ, ಕೇಶವಣ್ಣ, ಗೋಪಾಲಣ್ಣ, ಗಿರಿಗದ್ದೆ ಅಣ್ಣ, ಮಹೇಶಣ್ಣ ಇವರೆಲ್ಲರ ಹಾಸ್ಯ ಚಟಾಕಿಗಳು, ಚುರುಕು ಮಕ್ಕಳೆಲ್ಲರ ಸಹವಾಸ, ಸಮಯಕ್ಕೆ ಸರಿಯಾಗಿ ಒದಗುತ್ತಿದ್ದ ಸುಗ್ರಾಸ ಭೋಜನ, ತಿಂಡಿ ತಿನಿಸುಗಳು, ಪ್ರವಾಸದ ಪ್ರತಿ ಹಂತದಲ್ಲೂ ಪ್ರತಿಯೊಬ್ಬರ ಬಗೆಗೂ ಪ್ರವಾಸದ ರೂವಾರಿ ಹಾಗೂ ನಿರ್ವಾಹಕರು ವಹಿಸುತ್ತಿದ್ದ ವಿಶೇಷ ಕಾಳಜಿ ಎಲ್ಲವೂ ಅನನ್ಯ! ಸವಿ ನೆನಪುಗಳ ಮೂಟೆ ಬಿಚ್ಚಿಡಲು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನನ್ನ ಅನಂತಾನಂತ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ …ಇನ್ನು ವಿರಮಿಸಲೇ..??
….….ಮುಗಿಯಿತು.
ಈ ಪುಟದೊಂದಿಗೆ, ಶಂಕರಿ ಶರ್ಮಾ ಅವರು ಬರೆದ ‘ಪುರಿ-ಡಾರ್ಜಿಲಿಂಗ್ ‘ ಪ್ರವಾಸಕಥನವು ಕೊನೆಗೊಳ್ಳುತ್ತಿದೆ. ತಮ್ಮ ಪ್ರವಾಸದ ಪೂರ್ವತಯಾರಿ, ಸಂಭವಿಸಿದ ಅನಿರೀಕ್ಷಿತ ಘಟನೆಗಳು, ಭೇಟಿಕೊಟ್ಟ ಸ್ಥಳಗಳು, ವಿವಿಧ ಘಟನಾವಳಿಗಳು, ಪ್ರಕೃತಿ ಸೌಂದರ್ಯ,ಸ್ಥಳ ವೈಶಿಷ್ಟ್ಯ, ಸಹಪ್ರಯಾಣಿಕರ ಒಡನಾಟ, ಊಟೋಪಚಾರ….ಹೀಗೆ ಸ್ಮರಣೀಯ ವಿಚಾರಗಳನ್ನು ಸೊಗಸಾಗಿ ವಿವರಿಸಿದ್ದಾರೆ. ಈ ಮಾಹಿತಿಯು ಪ್ರವಾಸಾಸಕ್ತರಿಗೆ ಕೈಪಿಡಿಯಂತೆ ಸಹಕಾರಿಯಾಗಬಲ್ಲುದು.
ಶಂಕರಿ ಶರ್ಮಾ ಅವರಿಗೆ ಧನ್ಯವಾದಗಳು – ಸುರಹೊನ್ನೆತಂಡ
ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=29218
– ಶಂಕರಿ ಶರ್ಮ, ಪುತ್ತೂರು.
ನಾವೂ ನಿಮ್ಮೊಡನೆ ಅದೇ ಸ್ಥಳಗಳಿಗೆ ಮತ್ತೊಮ್ಮೆ ಪ್ರವಾಸ ಹೋಗುತ್ತಿದ್ದವೇನೋ ಎಂಬಂತಿತ್ತು.ಮೇ 28 ರಿಂದ ಜೂನ್ 11 ರವರೆಗೆ ನಿರ್ಮಲಾ ಟ್ರಾವೆಲ್ಸ್ ನವರ ಅವಿಸ್ಮರಣೀಯ ಆತಿಥ್ಯದಲ್ಲಿ ಇದೇ ಸ್ಥಳಗಳಿಗೆ ಹೋಗಿದ್ದೆವು.ವಿವರಗಳನ್ನು ಆಪ್ತವಾಗಿ ದಾಖಲಿಸುವ ನಿಮ್ಮ ಶೈಲಿ ಅನನ್ಯ
ಮಹಾಬಲ
ನಾವೂ ಡಾರ್ಜಿಲಿಂಗ್ ಪ್ರವಾಸ ಮಾಡಿದಂತಾಯಿತು.
ಸುಂದರ ಅನುಭವಗಳ ಸರಮಾಲೆ. ಚೆನ್ನಾಗಿತ್ತು ಮೇಡಂ.
ಮೊದಲನೆಯದಾಗಿ, ಈ 34 ಪುಟಗಳ ದೀರ್ಘ ಪ್ರವಾಸ ಪುಟಗಳನ್ನು ತಮ್ಮ ಪತ್ರಿಕೆಯಲ್ಲಿ ತುಂಬಾ ಚೆನ್ನಾಗಿ ಪ್ರಕಟಿಸಿ ಪ್ರೋತ್ಸಾಹಿಸಿದ ನಮ್ಮೆಲ್ಲರ ಪ್ರೀತಿಯ ಸುರಹೊನ್ನೆಯ ಸಂಪಾದಕಿ ಹೇಮಮಾಲಾ ಮತ್ತು ತಂಡದವರಿಗೆ ಸದಾ ಆಭಾರಿ. ಹಾಗೆಯೇ, ಪುಟಗಳನ್ನು ತಿರುವಿ ಹಾಕಿ ..ಓದಿ ಮೆಚ್ಚುಗೆ ವ್ಯಕ್ತಪಡಿಸಿ, ಸದಾ ಪ್ರೋತ್ಸಾಹಿಸಿದ ಸಾಹಿತ್ಯಾಸಕ್ತ ಸುರಹೊನ್ನೆ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.. ನಮನಗಳು.