ಮಾಯಾಬೇಧನ

Spread the love
Share Button

ರೂಢಿಪಾಲರು ಪಂಚವಟಿಯಲಿ
ಕಾಡ ಬಾಹೆಗೆ ಬಂದು ನಿಲ್ಲುತ
ಮಾಡಿಕೊಂಡರು ಪರ್ಣಕುಟಿಯನು ನದಿಯ ತೀರದಲಿ
ಹಾಡಿಯೊಳಗಡೆ ಹೋಗಿ ಲಕ್ಷ್ಮಣ
ನೋಡಿ ಫಲಗಳ ತರುತಲಿದ್ದಿರೆ
ಕೂಡಿ ಸಂತಸದಲ್ಲಿ ತಿನ್ನುತ ಸಮಯ ಕಳೆದಿಹರು||

ಘೋರದೈತ್ಯರು ಕಾಡುತಿದ್ದಿರೆ
ನಾರು ವಸ್ತ್ರದ ಮುನಿಗಳೆಲ್ಲರು
ದೂರುಪೇಳಲು ರಾಮನಲ್ಲಿಗೆ ಜೊತೆಗೆ ಬಂದಿಹರು
ಧಾರುಣಿಯ ರಕ್ಷೆಯನು ಮಾಡುವ
ವೀರ ರಾಘವ ಧೈರ್ಯ ನೀಡುತ
ತೋರುವೆನು ಮಾರ್ಗವನೆನುತ್ತಲಿ ಕೊಟ್ಟ ಭರವಸೆಯ||

ರೆಕ್ಕೆ ಬಿಚ್ಚುತ ಗಗನವೇರುತ
ಹಕ್ಕಿತಿಂತಿಣಿ ಬೆಚ್ಚಿಬಿದ್ದವು
ರಕ್ಕಸರ ಬೊಬ್ಬೆಯನು ಕೇಳುತಲೋಡಿ ಖಗಮಿಗವು
ಹೊಕ್ಕಿನಾಸಿಕದೊಳಗೆ ವಾಸನೆ
ಸೊಕ್ಕಿನಿಂದಲಿ ಬಂದು ರಕ್ಕಸಿ
ಮುಕ್ಕಿತಿನ್ನುವೆ ಜನರನೆಂದಳು ಸುಟ್ಟು ಕೆಂಡದೊಳು||

ಏರು ದನಿಯಲಿ ಗರ್ಜಿಸುತ್ತಿಹ
ಘೋರರೂಪದ ಶೂರ್ಪನಖೆಯಾ
ಜೋರಿನಾರ್ಭಟ ಕೇಳಿ ರಾಮನು ಚಾಪ ಧರಿಸಿದನು |
ಕೋರಡಿಪ ದಾನವರ ನೆನೆಯುತ
ಮೋರೆ ಬಾಡಿಸಿ ಸೀತೆ ನಡುಗಲು
ನೀರೆಯೊಳಗಡೆ ಛಾತಿ ತುಂಬಿದ ಪತಿಯು ತಾ ಹೊರಟ||

ರೊಚ್ಚು ಮನಸಿನ ಕೆಟ್ಟ ರಕ್ಕಸಿ
ಕಚ್ಚಿ ಕೊಲ್ಲಲು ಬರುವಳೆನ್ನುತ
ನೆಚ್ಚಿಕೊಂಡಿಹ ಸೀತೆ ರಾಮನ ಪೋಗಗೊಡದಿರಲು
ಹುಚ್ಚುಹುಡುಗಿಯೆ ಭೀತಿಯೇತಕೆ
ಮುಚ್ಚಿಕೊಂಡಿರು ನಯನವೆರಡನು
ಕೊಚ್ಚಿಮೂಳಿಯ ಮಣ್ಣುಗೊಳಿಸುವೆನೆಂದು ನಸುನಕ್ಕ||

ಧೀರಮಾರನ ರೂಪ ನೋಡುತ
ದೂರದಿಂದಲೆ ನೋಡಿದಸುರೆಯು
ಕೋರೆದಾಡೆಯ ತಿರುಗಿಸುತ ಗಹಗಹಿಸಿ ನಗುತಿರಲು
ವೀರನನು ಕರೆತಂದು ಮನೆಯಲಿ
ತೋರಿ ಕೂರ್ಮೆಯ ಗಂಡನಾಗಿಸಿ
ನೂರುಮಕ್ಕಳ ಪಡೆದು ಸಂತಸದಿಂದ ಬಾಳುವೆನು||

ಎಂದು ಯೋಚಿಸಿ ಮನದಿ ಧನುಜೆಯು
ಹೊಂದುವಂತಹ ಚೆಲುವ ರೂಪವ
ಕುಂದು ಬಾರದ ತೆರದಿ ತಾಳುವ ಸಂಚು ಮಾಡುತಲೀ
ಚಂದದಿಂದಲೆ ಮಾಯೆ ರಚಿಸುತ
ಗೊಂದಲವು ಬರದಂಥ ಸೊಗಸಿನ
ಸುಂದರತೆಯಲಿ ಧರಿಸಿ ಹೊಂದುತ ಕಪಟ ಕಾಯವನೂ||

ಶೋಭೆಯಿಂದಲಿ ತನುವ ಮರೆಯಲಿ
ಲೋಭ ಹುದುಗಿದ ಮನವು ಮೆರೆಯಿತು
ಲಾಭಪಡೆಯುವ ಸಂಚು ರೂಪಿಸಿ ಮುದವ ತಾಳಿದಳು
ನಾಭನಾಗಿಸಿ ರಾಮ ದೇವನ
ಗೂಬೆ ಮನವದು ಕನಸು ಕಂಡಿತು
ಹೂಬನದ ಸುಮ ನಲಿದ ತೆರದಲಿ ಚದುರೆ ಮಿನುಗಿದಳು||

ಶೃಂಗರಿಸಿ ಹದಿಹರೆಯ ತಾಳುತ
ಕಂಗಳಿಗೆ ಕರಿಬಣ್ಣ ಹಚ್ಚುತ
ಛಂಗನೇರುವ ಹುಬ್ಬತೀಡುತ ಬಾಗಿಸುತಲಾಗ
ಹೊಂಗಿನಿಂದಲೆ ಸೀರೆಯುಡುತಲಿ
ಹಿಂಗದಂದವ ನೆರಿಗೆಯಾಗಿಸಿ
ಸಂಗತದ ಸೆರಗನ್ನು ಹಾಸುತ ಕಪಟ ಮುಚ್ಚಿದಳು||

ಮಾಯರೂಪವ ಧರಿಸಿ ನಿಂದಳು
ಕಾಯವಡಗಿಸಿ ಚೆಲುವೆ ಪೊರಟಳು
ಪಾಯಬಳುಕಿಸಿ ಮಂದಗಮನೆಯು ರಾಮನಲ್ಲಿಗೆಯು
ತೋಯುವಂತಹ ಬೆಡಗು ಲಾಸವು
ಪೇಯವಾಗಿಸಲೊಲವು ರಾಮನ
ಬೀಯಗೊಳಿಸುತ ಬುದ್ಧಿ ಚುರುಕಲಿ ಲಲನೆ ನೋಡಿದಳು||

ಸಾರುತಲಿ ಬಳಿ ರಾಮನಿದ್ದೆಡೆ
ಬೀರಿ ಬಿಂಕವ ನಡೆದು ಕುಲುಕುತ
ಸೇರಿಸೆನುತಲಿ ಬಳುಕಿ ಪೋಗುತ ನೋಡಿ ಸರಸದಲಿ
ತೋರಲಿಲ್ಲವು ಸರಿಯ ಜನಗಳು
ಮಾರರೂಪನೆ ರತಿಯ ಪೋಲುವೆ
ಬಾರೊ ರಾಣಿಯನಾಗಿಸುತ ಸವಿ ಬಾಳು ನೀಡೆನುತ||

ಚದುರೆ ಸತಿ ಬಳಿಯಲ್ಲಿ ನೆಲೆಸುತ
ಬದಲಿಗೊಬ್ಬಳನೆಂತು ಪೊಂದಲಿ
ಮದನ ಚೆಲುವಿನ ತಮ್ಮನಿರುವನು ನಿನಗೆ ಸರಿಯವನು
ಪದುಳದಿಂದಲಿ ಪೋಗಿಯಲ್ಲಿಗೆ
ಮುದದಿವೊಲಿಸಿಕೊ ವರಿಸಿಕೊಳ್ಳುವ
ಹದವಗೊಳಿಸಲು ದುರುಳ ಮನವನು ರಾಮ ಕಳಿಸಿದನು||

ಸೂಸಿ ನಗುವನು ಬಂದಳಲ್ಲಿಗೆ
ಹಾಸುತಲಿ ಬೆಡಗನ್ನು ಚಿಮ್ಮಿಸಿ
ಲೇಸು ಮಾತಲಿ ಕಾಮ ಸನ್ನಿಭನೆಂದು ಕರೆಯುತಲಿ
ಲೇಶದಲೆ ಸಿಲುಕಿಹೆನು ಮೋಹಕೆ
ಪಾಶ ಹೊಂದಿಸಿ ಸೆಳೆದು ಕೂಡುತ
ತೋಷವಾಗಿಸು ಸರಸ ಮಾತಲಿ ಮುದ್ದು ಮಾಡೆನುತ ||

ಸೃಷ್ಟಿಯಾಗಿಹ ಚೆಲುವ ನೋಡುತ
ಮುಷ್ಠಿಬಿಗಿಯುತ ಕೋಪ ತಾಳುತ
ಪುಷ್ಟಕಾಯದ ರಾಮನನುಜನು ಕತ್ತಿ ಪಿಡಿಯುತಲಿ|
ತುಷ್ಟಿ ಹೊಂದಲು ಮರೆಸಿ ಮೈಸಿರಿ
ದುಷ್ಟಮದದಲಿ ಹುದುಗಿ ನಿಜವನು
ನಿಷ್ಟನಾಗುತ ರಾಮವಚನಕೆ ಮಾಯೆ ಬೇಧಿಸಿದ||

(ಭಾಮಿನಿ ಷಟ್ಪದಿಯಲ್ಲಿ)

-ಪದ್ಮಾ ಆಚಾರ್ಯ

2 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್. ನನಗೆ ಈ ಶೈಲಿಯ ಬರಹ ಹೊಸದು. ಬಹಳ ವರ್ಷಗಳ ಮೊದಲು ಕಾಲೇಜು ದಿನಗಳಲ್ಲಿ ಓದಿದ್ದೆ. ತುಂಬಾ ಚೆನ್ನಾಗಿದೆ.

  2. ಶಂಕರಿ ಶರ್ಮ says:

    ಮಾಯಾ ಶೂರ್ಪನಖಿಯ ಕಪಟ, ಸೀತಾಮಾತೆಯ ತುಮುಲ, ಶ್ರೀರಾಮಚಂದ್ರನ ಧೀಮಂತಿಕೆ, ಲಕ್ಷ್ಮಣನ ಭಾತೃಪ್ರೇಮ ಮೇಳೈಸಿ ರಚಿತಗೊಂಡ ಷಡ್ಪದಿ ಬಹಳ ಅದ್ಭುತ!!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: