ಸಿನೆಮಾದಲ್ಲಿ ಚಿಲ್ಲರೆ ದುಡ್ಡು.

Share Button

ಐವತ್ತು ವರ್ಷಗಳಿಗೂ ಹಿಂದಿನ ಪ್ರಕರಣ. ಆಗಿನ ಮನರಂಜನೆಯ ಮಾಧ್ಯಮಗಳೆಂದರೆ ಪತ್ರಿಕೆಗಳು, ರೇಡಿಯೋ ಮತ್ತು ಸಿನೆಮಾ. ಸಿನೆಮಾಗಳನ್ನು ನೊಡಲು ಎಲ್ಲರೂ ಟಾಕೀಸುಗಳಿಗೆ ಹೋಗಬೇಕಿತ್ತು. ದೊಡ್ಡ ಪಟ್ಟಣಗಳಲ್ಲಿ ಮಾತ್ರ ಥಿಯೇಟರ್‌ಗಳಿರುತ್ತಿದ್ದವು. ಸಣ್ಣ ಪಟ್ಟಣಗಳಲ್ಲಿ ಟೆಂಟ್‌ಗಳು. ಆದರೂ ಜನರನ್ನು ಸಿನೆಮಾಗಳು ಬಹಳವಾಗಿ ಆಕರ್ಶಿಸಿದ್ದವು.
ಸಿನೆಮಾ ಜೊತೆಗೆ ಹಲವಾರು ಪ್ರಸಿದ್ಧ ನಾಯಕನಟರಿಗೆ ಅಪಾರ ಅಭಿಮಾನಿಗಳಿದ್ದರು. ಅವರ ಸಿನೆಮಾಗಳನ್ನು ಹೇಗಾದರೂ ಮೊದಲನೆಯ ದಿನವೇ ಕಷ್ಟಪಟ್ಟು ನೋಡಲೇಬೇಕೆಂದು ಬಯಸುತ್ತಿದ್ದರು. ಆ ದಿನ ಬೇಗನೇ ಥಿಯೇಟರ್‌ಗೆ ಹೋಗಿ ಗಂಟೆಗಟ್ಟಲೆ ಬಿಸಿಲಿರಲಿ, ಮಳೆಯಿರಲಿ ಕ್ಯೂನಲ್ಲಿ ಕಾಯ್ದು ಟಿಕೆಟ್ ಗಿಟ್ಟಿಸುವುದರಲ್ಲಿ ಜಯಶಾಲಿಯಾದರೆ  ಯಾವುದೋ ರಾಜ್ಯ ಗೆದ್ದಷ್ಟು ಸಂತಸ ಪಡುತ್ತಿದ್ದರು. ಕನ್ನಡ ಚಲನಚಿತ್ರಗಳಲ್ಲಿ ನಾಯಕನಟ ರಾಜಕುಮಾರ್‌ರವರಿಗೇ ಅಗ್ರಸ್ಥಾನ. ಅವರ ಅಭಿಮಾನಿಗಳ ಸಂಖ್ಯೆ ಅಪಾರ. ನನಗೂ ಸಿನೆಮಾಕ್ಕೆ ಹೋಗಬೇಕೆಂಬ ಚಪಲವಿದ್ದರೂ ಮಧ್ಯಮ ವರ್ಗದ, ಅದರಲ್ಲಿಯೂ ಹೆಚ್ಚುಜನ ಮಕ್ಕಳಿರುವ ಕುಟುಂಬ ನಮ್ಮದು. ಹಾಗಾಗಿ ನಮ್ಮ ಮನೆಯಲ್ಲಿ ಸಿನೆಮಾಕ್ಕೆ ಹೋಗುತ್ತಿದ್ದುದು ವಿರಳ. ನನ್ನ ಗೆಳತಿಯರನೇಕರು ಅನುಕೂಲಸ್ಥರ ಮನೆಯಿಂದ ಬರುತ್ತಿದ್ದವರು. ಅವರು ಯಾವ ಯಾವುದೋ ಸಿನೆಮಾಗಳನ್ನು ನೋಡಿ ಬರುತ್ತಿದ್ದರು. ಅವರ ಬಾಯಿಂದ ಕಥೆಗಳನ್ನು ಬಾಯಿಬಿಟ್ಟುಕೊಂಡು ನಾವು ಕೇಳುತ್ತಿದ್ದೆವು. ಅವರಿಗೆ ಮನೆಯಲ್ಲಿ ಪಾಕೆಟ್ ಮನಿ ಸಿಗುತ್ತಿತ್ತು. ನಮಗಂತೂ ಅದು ಸಾಧ್ಯವೇ ಇರಲಿಲ್ಲ.

ಒಮ್ಮೆ ಹೇಗೊ ಮನೆಯವರನ್ನೆಲ್ಲ ಒಪ್ಪಿಸಿ ಗೆಳತಿಯರೊಂದಿಗೆ ರಾಜಕುಮಾರ್ ಮಾಡಿದ್ದ ಒಂದು ಸಿನೆಮಾಕ್ಕೆ ಹೊರಟೆ. ಅದು ನನ್ನ ಜೀವನದ ಅತ್ಯಂತ ಸುದಿನ. ಗೆಳತಿಯರು ಅನುಭವಸ್ಥರು ಕೆಲವರು ಮುಂದಾಗಿಯೇ ಥಿಯೇಟರ್‌ಗೆ ಹೋಗಿ ಎಲ್ಲರಿಗೂ ಟಿಕೆಟ್ ಖರೀದಿಸಿ ಅಲ್ಲಿ ಕಾಯುತ್ತಿದ್ದರು. ಉಳಿದವರು ನಂತರ ಅವರನ್ನು ಸೇರಿಕೊಂಡು ಒಟ್ಟಿಗೆ ಒಳಹೋಗುವುದು ಎಂದಾಯಿತು. ಒಟ್ಟು ಎಂಟು ಜನರಿದ್ದೆವು. ಸ್ಕೂಲಿನ ಯೂನಿಫಾರಂನಲ್ಲೇ ನಾನು ಹೋಗಿದ್ದೆ. ನನ್ನ ಗೆಳತಿಯರು ಜೇಬಿರುವ ಲಂಗವನ್ನು ತೊಟ್ಟುಕೊಂಡು ಬರಬೇಕೆಂದು ಹೇಳಿದ್ದರು. ಅದೊಂದರಲ್ಲೇ ಜೇಬಿತ್ತು. ಕಾರಣವೇನೆಂದು ತಿಳಿದಿರಲಿಲ್ಲ. ನಾವು ಖರೀದಿಸಿದ್ದು ಅತಿ ಕಡಿಮೆ ದರದ ಟಿಕೆಟ್. ಅಲ್ಲಿಂದ ಸ್ಕ್ರೀನಿಗೆ ಅತ್ಯಲ್ಪ ದೂರ. ಪಾತ್ರಧಾರಿಗಳು ಬೃಹದ್ಗಾತ್ರದಲ್ಲಿ ಗೋಚರಿಸುತ್ತಿದ್ದರು. ಒಳಗೆ ಹೋದ ನಂತರ ನಾವೆಲ್ಲರೂ ಒಟ್ಟಿಗೆ ಕೂಡಲಿಲ್ಲ. ಅಲ್ಲಲ್ಲಿ ಚದುರಿದಂತೆ ಕೂಡಬೇಕೆಂದು ನಮ್ಮ ನಾಯಕಮಣಿಯ ಆದೇಶ. ಅದರಲ್ಲೇನೋ ಗುಟ್ಟಿದೆ ನಿನಗೆ ಆಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಳು.

ಸಿನೆಮಾ ಪ್ರಾರಂಭವಾಯಿತು. ಹೆಸರುಗಳ ವಿವರಗಳು ಆದ ನಂತರ ನಾಯಕನಟ ‘ರಾಜಕುಮಾರ್’ ಎಂದು ಕಾಣಿಸಿದ ತಕ್ಷಣವೇ ನೂರಾರು ಜನರ ಸಿಳ್ಳೆಗಳ ಸದ್ದು ಮೊಳಗಿತು. ಜೊತೆಗೆ ಚಿಲ್ಲರೆ ನಾಣ್ಯಗಳನ್ನು ಪರದೆಯತ್ತ ಎಸೆದರು. ಅವೆಲ್ಲ ಪರದೆಗೆ ಎದುರಾಗಿ ಸಮೀಪದಲ್ಲೇ ಕುಳಿತಿದ್ದ ನಮ್ಮತ್ತ ಉರುಳಿಕೊಂಡು ಬರುತ್ತಿದ್ದವು. ನನ್ನ ಗೆಳತಿಯರು ಸದ್ದಿಲ್ಲದೆ ಕತ್ತಲಲ್ಲೇ ಕೈಗೆ ಸಿಕ್ಕ ಚಿಲ್ಲರೆ ದುಡ್ಡನ್ನು ಆಯ್ದುಕೊಳ್ಳುತ್ತಿದ್ದರು. ನನಗೂ ಅದನ್ನೇ ಮಾಡಲು ಸಂಜ್ಞೆ ಮಾಡಿದರು. ಸಿನೆಮಾ ಮಧ್ಯದಲ್ಲಿ ನಾಯಕನು ಹೊಡೆದಾಡುವ ದೃಶ್ಯಗಳಲ್ಲಿ ವಿಜಯಿಯಾದ ಕೂಡಲೇ ಮೊದಲಿನಂತೆ ಸಿಳ್ಳೆ, ಚಪ್ಪಾಳೆಗಳ ಸುರಿಮಳೆ ಮತ್ತು ಚಿಲ್ಲರೆ ಕಾಸುಗಳ ಎರಚಾಟ ನಡೆಯುತ್ತಿತ್ತು. ಅಂತೂ ನಾನು ಗೆಳತಿಯರು ಸಾಕಷ್ಟು ಕಾಸುಗಳನ್ನು ಒಟ್ಟುಗೂಡಿಸಿದ್ದೆವು. ಗೆಳತಿಯರೆಲ್ಲ ತಾವಾರಿಸಿದ್ದ ಎಲ್ಲ ಕಾಸುಗಳನ್ನು ಒಟ್ಟುಗೂಡಿಸಿ ನನ್ನ ಕೈಯಿಗೆ ಕೊಟ್ಟು ಜೇಬಿನಲ್ಲಿಟ್ಟುಕೊಳ್ಳಲು ಸೂಚಿಸಿದರು. ಅದರ ಶಬ್ಧ ಕೇಳಿಸಬಾರದೆಂದು ಕೈಯಿಂದ ಜೇಬನ್ನು ಭದ್ರವಾಗು ಹಿಡಿದು ಹೊರಡಲು ಅನುವಾದೆವು. ನನಗೆ ತುಂಬ ಮುಜುಗರವಾಗುತ್ತಿತ್ತು. ಬಾಗಿಲಿನ ಬಳಿ ಬಂದಾಗ ಅಲ್ಲಿ ಕುಳಿತಿದ್ದ ಮುದುಕ ಗೇಟ್‌ಕೀಪರ್ ಕೈಗೆ ಎಲ್ಲವನ್ನೂ ಕೊಟ್ಟು ನಿರಾಳವಾದೆ.

ಚಿತ್ರಮೂಲ: ಅಂತರ್ಜಾಲ

ಬೀದಿಗೆ ಬಂದು ಸ್ವಲ್ಪ ದೂರದಲ್ಲಿ ಬಾಗಿಲು ಮುಚ್ಚಿದ್ದ ಒಂದು ಅಂಗಡಿಯ ಮುಂದೆ ಗೆಳತಿಯರೆಲ್ಲರೂ ನಿಂತರು. ಎಲ್ಲಿ ನಿನ್ನ ಕೈಯಿಗೆ ಕೊಟ್ಟಿದ್ದ ದುಡ್ಡನ್ನೆಲ್ಲ ತೆಗೆ. ಎಲ್ಲರೂ ಹಂಚಿಕೊಳ್ಳೋಣ ಎಂದಾಗ ನನಗೆ ಭಯವಾಯಿತು. ನಾನು ಇದ್ದದ್ದನ್ನು ಇದ್ದಂತೆ ಹೇಳಿಬಿಟ್ಟೆ. ನನಗೆ ನಾವು ಮಾಡಿದ್ದು ಸರಿಕಾಣಿಸಲಿಲ್ಲ. ಇನ್ನೇನು ನನ್ನ ಗೆಳತಿಯರು ನನಗೆ ಹೊಡೆಯುತ್ತಾರೆ ಎನ್ನುವುದರೊಳಗೆ ನಮ್ಮ ಮನೆಯ ಬಳಿಯಿದ್ದ ಮಾಷ್ಟರೊಬ್ಬರು ಕಾಣಿಸಿದರು. ಇಲ್ಲೇನು ಮಾಡುತ್ತಿದ್ದೀಯಮ್ಮಾ, ನಡಿ ಮನೆಗೆ ಹೋಗೋಣ ಎಂದರು. ನಾನು ಅಪಾಯದಿಂದ ಪಾರಾದೆ. ಮಾಷ್ಟರರ ಜೊತೆಯಲ್ಲಿ ಮನೆ ಸೇರಿದೆ. ಮೂರ್‍ನಾಲ್ಕು ದಿನ ನನ್ನ ಗೆಳತಿಯರಿಂದ ತಪ್ಪಿಸಿಕೊಂಡು ತಿರುಗಾಡಿದೆ. ಮತ್ತೆಂದೂ ಇಂತಹ ಸಾಹಸ ಮಾಡಲಿಲ್ಲ.

-ಬಿ.ಆರ್.ನಾಗರತ್ನ. ಮೈಸೂರು.

5 Responses

 1. Hema says:

  ಅಹಾಹಾ..ಬಲು ಘಾಟಿ ಬಾಲಕಿಯರು :)ಚೆಂದದ ಬರಹ..ಸವಿನೆನಪುಗಳು ಬೇಕು ಸವಿಯಲೀ ಬದುಕು!

 2. ನಯನ ಬಜಕೂಡ್ಲು says:

  ವಾವ್. ಸವಿ ಸವಿ ನೆನಪು

 3. ಪದ್ಮಾ ವೆಂಕಟೇಶ್ says:

  ಆಗಲಿಂದನೂ ದಾನ ಧರ್ಮದ ಬುದ್ಧಿ.

 4. ಶಂಕರಿ ಶರ್ಮ, ಪುತ್ತೂರು says:

  ಓಹೋ.. ಕಿಲಾಡಿ ಹುಡುಗಿಯರದು ಭಲೇ ಕರಾಮತ್ತು… ಚೆನ್ನಾಗಿತ್ತು ನಿಮ್ಮ ಸವಿ ನೆನಪು.

 5. B.k.meenakshi says:

  ವಾವ್… ಮನಸಿಗೆ ಇಚ್ಛೆಯಿಲ್ಲದ್ದು , ಅಪರಂಜಿಯಾದರೂ ನನಗೆ ಬೇಡ ಎಂಬುದನ್ನು ಮನದಟ್ಟು ಮಾಡಿದ್ದೀರಿ. ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: