ದಾನಶೂರ ಕರ್ಣ

Share Button

ಮಾನವನು ತನ್ನ ಜೀವಿತದಲ್ಲಿ ಕೈಲಾದಷ್ಟು ದಾನ ಮಾಡಬೇಕಂತೆ.ದಾನಗಳಲ್ಲಿ ಹಲವು ರೂಪದ ದಾನಗಳು, ಅನ್ನ, ವಸ್ತ್ರ, ಧನಕನಕ, ಭೂಮಿ ಹೀಗೆ ಸ್ಥಿರ-ಚರ ವಸ್ತುಗಳಲ್ಲಿ ಯಾವುದನ್ನಾದರೂ ಕೈಲಾದಷ್ಟು ದಾನ ಮಾಡಬೇಕಂತೆ. ನಮ್ಮ ಸನಾತನದಿಂದಲೇ ಬಂದ ಧರ್ಮಸಂದೇಶವಿದು. ಇದಲ್ಲದಕ್ಕೂ ಮಿಗಿಲಾಗಿ ಯುಗದಲ್ಲಿ ಮನುಷ್ಯ ದೇಹದ ಅಂಗಗಳಾದ ನೇತ್ರ, ಕಿಡ್ನಿ, ಲಿವರ್ ಮೊದಲಾದವುಗಳನ್ನು  ಸತ್ಪಾತ್ರರಿಗೆ  ಸಮಯೋಚಿತವಾಗಿ ದಾನ ಮಾಡಬಹುದಾಗಿದೆ. ರಾಜರು, ಶ್ರೀಮಂತ ಧನಕನಕಾದಿಗಳನ್ನು ದಾನ ಮಾಡಿ ದಾನಶೂರರೆಂದು ಹೆಸರು ಗಳಿಸಿದ್ದಾರೆ, ಆದರೆ ಅತ್ಯಂತ ಅಪರೂಪವೂ ವಿಶೇಷವೂ ಆದ ದುಬಾರಿ ಅಂಗವಾದ ಕವಚ ಕುಂಡಲವನ್ನೇ ದಾನಮಾಡಿ ಆ ಚಂದ್ರಾರ್ಕ ಹೆಸರು ಉಳಿಯುವಂತೆ ಮಾಡಿದವನೊಬ್ಬನಿದ್ದಾನೆ. ಅವನೇ ದಾನಶೂರ ಕರ್ಣನೆಂದು ಬಿರುದಾಂಕಿತ ಮಹಾಭಾರತದ ಕರ್ಣ, ಅವನ ಕೀರ್ತಿ ಅಷ್ಟು ಮಾತ್ರವಲ್ಲ ತನ್ನ ಗುರುಗಳಿಗಾಗಿ ರಕ್ತಧಾರೆಯನ್ನೇ ಹರಿಸಿದ್ದಾನೆ. ಆದರೆ ಅದರಿಂದ ಅವನಿಗಾದ ಲಾಭ? ಗುರುಗಳ ಕೋಪಕ್ಕೆ ಗುರಿಯಾಗಿ ಅವರಿಂದ ಶಾಪ! ಅ..ಬ್ಬ..ಬ್ಬ! ಊಹಿಸಿದರೆ ಎದೆ ನಡುಗುತ್ತದೆ. ಕರ್ಣನ ಜನನ ಎಲ್ಲಿ ಆಯಿತು? ಹೇಗಾಯಿತು? ಎಲ್ಲಿ ಬೆಳೆದ ?  ಕರ್ಣಕುಂಡಲವನ್ನು ಯಾರಿಗೆ ಯಾಕೆ ದಾನಮಾಡಿದ ?  ಆತ ಗುರು ಶಾಪಕ್ಕೆ ಯಾಕೆ ತುತ್ತಾದ ಎಂಬುದನ್ನು ತಿಳಿಯೋಣ.

ಶೂರರಾಜನ ಮಗಳೂ ಕುಂತಿಭೋಜನ ಸಾಕು ಮಗಳೂ ಆದ ಕುಂತಿಯು  ವಿವಾಹಕ್ಕೆ ಮೊದಲು ದೂರ್ವಾಸ ಮುನಿಗಳ ಆದರಕ್ಕೆ ಒಳಗಾದಳು. ಅವರಿಂದ ವರ ಪಡೆದಳು. ಇದರಿಂದಾಗಿ ಒಂದು ದಿನ ಸ್ನೇಹಿತೆಯರೆಲ್ಲ ಮಣ್ಣಿನ ಬೊಂಬೆಯಲ್ಲಿ ಆಟ ಆಡುತ್ತಿದ್ದರೆ ಕುಂತಿ ಮಾತ್ರ ದೂರ್ವಾಸಮುನಿಗಳ ವರಬಲದಿಂದ ಸೂರ್ಯನಾರಾಯಣನನ್ನು ಬೇಡಿದಳು. ಪರಮಾಶ್ಚರ್ಯ! ಆತನು ಒಂದು ಗಂಡು ಶಿಶುವನ್ನು ಕರುಣಿಸಿದ. ಕುಂತಿ ತನ್ನ ಕನ್ನಿಕಾವಸ್ಥೆಯಲ್ಲಿ ಮಗುವನ್ನು ಹಡೆದ ಕಾರಣ ಅವನು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿಬಿಟ್ಟಳು. ಅದು ನೀರಿನಲ್ಲಿ ತೇಲುತ್ತಾ ಹೋಗಿ ನದಿ ದಡದಲ್ಲಿರುವ ಮಕ್ಕಳಿಲ್ಲದ ಸೂತಜಾತಿಯ ಅಧಿರಥನಿಗೆ ದೊರೆಯುತ್ತದೆ. ಆತನ ಹೆಂಡತಿ ರಾಧೆ ಈ ಶಿಶುವನ್ನು ಪ್ರೀತಿಯಿಂದ ಸಾಕುತ್ತಾಳೆ. ಶಿಶುವಿಗೆ ವಿಶೇಷವಾಗಿ ಕವಚ ಹಾಗೂ ಕುಂಡಲಗಳಿರುವುದರಿಂದ ಅವನಿಗೆ ಕರ್ಣ ಎಂದು ಹೆಸರಿಡುತ್ತಾರೆ. ಇವನು ಮಂತ್ರ ಮಹಿಮೆಯಿಂದ ವಿವಾಹಕ್ಕೆ ಮೊದಲು ಕನ್ನಿಕೆಗೆ ಹುಟ್ಟಿದ ಮಗನಾದುದರಿಂದ ಇವನಿಗೆ ಕಾನೀನ ಎಂದೂ ಹೆಸರಿದೆ. ಅದಿರಥಿ, ರಾಧೇಯ,ವಸುಷೇಣ, ಮತ್ತು ಅರ್ಧರಥಿ ಎಂಬ ಹೆಸರುಗಳೂ ಇವೆ. ಇವನು ದ್ರೋಣರಿಂದ ಬಿಲ್ಲು  ವಿದ್ಯಾಭ್ಯಾಸ ಕಲಿಯುತ್ತಾನೆ. ಕೌರವನು ಕರ್ಣನನ್ನು ಗೆಳೆಯನನ್ನಾಗಿ ಮಾಡಿಕೊಂಡು ಅಂಗರಾಜ್ಯದ ಅಧಿಪತಿಯಾಗಿ ಮಾಡುತ್ತಾನೆ. ಕರ್ಣನಿಗೆ ಸೂತ ಕನ್ಯೆಯೊಡನೆ ವಿವಾಹವಾಗುತ್ತದೆ. ಅವನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪರಶುರಾಮರನ್ನು ಸೇರುತ್ತಾನೆ.ತಾನು ಬ್ರಾಹ್ಮಣ ಪುತ್ರನೆಂದು ಹೇಳಿ ಕರ್ಣನು ಪರಶುರಾಮರ ಶಿಷ್ಯನಾಗುತ್ತಾನೆ.

ಒಂದು ದಿನ ಪರಶುರಾಮರು ಕರ್ಣನ ತೊಡೆಯ ಮೇಲೆ ತಲೆಯಿಟ್ಟು ನಿದ್ರಿಸುತ್ತಾರೆ. ಇದೇ ತಕ್ಕ ಸಮಯವೆಂದು ಒಬ್ಬ ಹೊಂಚು ಹಾಕುತ್ತಿದ್ದ. ಬಿಲ್ಲು ವಿದ್ಯೆಯಲ್ಲಿ ಬಹಳ ಶೂರನು ಪರಾಕ್ರಮಿಯೂ ಆದ ಕರ್ಣನು ಮುಂದೆ ತನ್ನ ಮಗ ಅರ್ಜುನನ ಪರಾಜಯಕ್ಕೆ ಕಾರಣವಾಗಬಹುದೆಂಬ ದೂರದ ಆಲೋಚನೆಯಿಂದಿದ್ದ ದೇವೇಂದ್ರ. ಸರಿ! ಈ ಸಮಯವನ್ನು ಸದುಪಯೋಗಪಡಿಸಿಕೊಂಡ ದೇವೇಂದ್ರ ದುಂಬಿಯ ರೂಪದಲ್ಲಿ ಬಂದು ಕರ್ಣನ ತೊಡೆಯನ್ನು ಕೊರೆಯತೊಡಗಿದ. ಮಲಗಿದ್ದ ಗುರುಗಳಾದ ಪರಶುರಾಮರ ನಿದ್ರೆಗೆ ಭಂಗ ಬರಬಾರದೆಂಬ ಉದ್ದೇಶದಿಂದ ಕರ್ಣನು ತನ್ನ ನೋವನ್ನು ಸಹಿಸಿದ, ಎಷ್ಟು ಸಹಿಸಿದನೆಂದರೆ ಕ್ರಮೇಣ ರಕ್ತ ಧಾರಾಕಾರವಾಗಿ ಹರಿಯುತ್ತದೆ. ಆದರೂ ಕರ್ಣ ದೃತಿಗೆಡಲಿಲ್ಲ. ರಕ್ತ ಹರಿದು ಪರಶುರಾಮರ ತಲೆಯನ್ನು ತೋಯಿಸುತ್ತದೆ. ಪರಿಣಾಮವಾಗಿ ಪರಶುರಾಮರಿಗೆ ಎಚ್ಚರವಾಗಿ ನೋಡುತ್ತಾರೆ! ಕರ್ಣನ ತೊಡೆಯಿಂದರಕ್ತದ ಕೋಡಿ ಹರಿಯುತ್ತಾ ಇರುತ್ತದೆ. ಅವರಿಗೆ ಪರಮಾಶ್ಚರ್ಯ! ಅವರಿಗೆ ಅನುಕಂಪ ಮೂಡುವ ಬದಲು ಮೂಡುವ ಬದಲಾಗಿ ಅಸಾಧ್ಯ ಸಿಟ್ಟು ನೆತ್ತಿಗೇರುತ್ತದೆ. ಭಯಂಕರ ಕೋಪದಿಂದ ಶಿಷ್ಯನಿಗೆ ಶಾಪ ಕೊಡುತ್ತಾರೆ. ಯಾಕೆಂದರೆ ಇಂತಹ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕ್ಷತ್ರಿಯನಿಗಲ್ಲದೆ ಬ್ರಾಹ್ಮಣ ಪುತ್ರನಿಗೆ ಬರಲಾರದು. ಸೂತ ಪುತ್ರನಿಗೆ ಪರಶುರಾಮರು ಬಿಲ್ಲು  ವಿದ್ಯೆಯನ್ನು ಹೇಳಿಕೊಡಲಾರರೆಂಬ ಉದ್ದೇಶದಿಂದ ಗುರುಗಳಲ್ಲಿ ತಾನು ಬ್ರಾಹ್ಮಣ ಪುತ್ರನೆಂದು ಹೇಳಿದ್ದ. ಕ್ಷತ್ರಿಯರ ವೈರಿ ಪರಶುರಾಮ!  ಕರ್ಣನಿಗೆ ತನ್ನ ಜನ್ಮ ರಹಸ್ಯ ಗೊತ್ತಿತ್ತೋ ಇಲ್ಲವೋ ಅಂತೂ ಅಮಾಯಕನಾದ ಕರ್ಣ! ಗುರುಹಿತವನ್ನು ಮನಸಾರೆ ಬಯಸಿದ ಶಿಷ್ಯ!! ಅವರ ಘೋರ ಶಾಪಕ್ಕೆ ಗುರಿಯಾಗುವುದು ಅವನ ಬಾಳಿನ ದುರಂತ. ಗುಟ್ಟು ಮುಚ್ಚಿಟ್ಟು ನನ್ನಿಂದ ವಿದ್ಯೆ ಕಲಿತೆಯಲ್ಲ! ಮುಂದೆ ನೀನು ಯುದ್ಧ ಮಾಡುವ ಸಂದರ್ಭದಲ್ಲಿ ನಿನ್ನ ಅಸ್ತ್ರ್ರಗಳೆಲ್ಲ ವಿಫಲವಾಗಲಿ’ ಎಂದು ಶಾಪ ಕೊಡುತ್ತಾರೆ. ತಾನು ಬಿಲ್ಲುವಿದ್ಯೆ ಕಲಿಯಬಯಸಿ ಒಂದು ಸಣ್ಣ ತಪ್ಪು ಮಾಡಿದ್ದಕ್ಕಾಗಿ ಈ ಶಾಪವೇ? ಏನು ಮಾಡೋಣ? ಬಹಳ ವ್ಯಾಕುಲಚಿತ್ತನಾದ ಕರ್ಣ ತಪ್ಪೊಪ್ಪಿಕೊಂಡು , ಗುರುಪಾದಕ್ಕೆರಗಿದಾಗ ಕೊಟ್ಟ ಶಾಪ ಹಿಂತೆಗೆಯಲಾರದೆ ‘ಮುದ್ರ ದೇಶಾಧಿಪತಿಯಾದ ಶಲ್ಯನು ನಿನ್ನ ಸಾರಥಿಯಾಗಿ ರಥವನ್ನು ನಡೆಸುವಷ್ಟು ಕಾಲ ನಾನು ಕಲಿಸಿದ ಮಹಾವಿದ್ಯೆ ನಿನ್ನ ಸ್ಮರಣೆಯಲ್ಲಿದ್ದು ಜಯ’ ನಿನ್ನದಾಗಲಿ ಎಂದು ಪರಶುರಾಮರು ಶಾಪದ ಕಠಿಣತೆಯನ್ನು ಕಡಿಮೆ ಮಾಡಿದರೂ ಶಲ್ಯನ ನಂತರ ಈತನಿಗೆ ಸೋಲು ಶತಃಸಿದ್ದವೆಂದಾಯಿತಲ್ಲವೇ. ಹೌದು, ಕೊನೆಗೆ ಕರ್ಣ ಅರ್ಜುನನಿಂದಲೇ ಹತನಾಗುತ್ತಾನೆ.

ಮಹಾಭಾರತದ ಸೂತ್ರಧಾರಿಯಾದ ಹಾಗೂ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾದ ಶ್ರೀಕೃಷ್ಣ ಕುಂತಿಯನ್ನು ಕರ್ಣನ ಬಳಿ ಕಳುಹಿಸುತ್ತಾನೆ. ಆಕೆ ಕರ್ಣನಿಗೆ ‘ನೀನು ನನ್ನಪುತ್ರನೂ ಪಾಂಡವರ ಹಿರಿಯಣ್ಣನೂ ಆಗಿರುವೆಯೆಂದೂ ಪಾಂಡವರ ಪಕ್ಷ ಸೇರಬೇಕೆಂದೂ’ ತನ್ನ ಬೇಡಿಕೆ ಮುಂದಿಡುತ್ತಾಳೆ. ಇದಕ್ಕೆ ಮುನ್ನ ಕೃಷ್ಣನೂ ಕರ್ಣನಿದ್ದೆಡೆ ಬಂದು ಕರ್ಣನ ಜನ್ಮರಹಸ್ಯ ಹೇಳುತ್ತಾನೆ. ಹೀಗೆ ಕೃಷ್ಣ ಮತ್ತು ಕುಂತಿ ಇಬ್ಬರೂ ಬೇರೆ ಬೇರೆ ಸನ್ನಿವೇಶಗಳಲ್ಲಿ ಪಾಂಡವರ ಪಕ್ಷ ಸೇರುವಂತೆ ಮನವೊಲಿಸುವಲ್ಲಿ ವಿಫಲರಾಗುತ್ತಾರೆ. ಏನೇ ಆದರೂ ತನ್ನನ್ನು ಸಾಕಿ, ಅಂಗರಾಜ್ಯದ ಅಧಿಪತಿಯನ್ನಾಗಿ ಮಾಡಿದ ಕೌರವನನ್ನು ಬಿಟ್ಟು ಬರಲು ಕರ್ಣ ಒಪ್ಪುವುದಿಲ್ಲ. ವಿಶ್ವಾಸಕ್ಕೆ ಹಾಗೂ ಸಖ್ಯಧರ್ಮದಲ್ಲಿ ಕರ್ಣನಷ್ಟು ಒಳ್ಳೆಯ ಪಾತ್ರ ಮಹಾಭಾರತದಲ್ಲಿ ಬೇರಿಲ್ಲ ಎನ್ನಬಹುದು.

ನಾನು ಕೌರವನ ಋಣದಲ್ಲಿ ಈತನಕ ಬದುಕಿರುವವನು. ಅವನು ನನ್ನನು ನೆಚ್ಚಿ, ಮೆಚ್ಚಿ  ಸಲಹಿದಾನೆ. ನಾನು ಸೂತಜಾತಿಯವನೆಂದು ತಿಳಿದೂ ಕೌರವ ನನಗೆ ಅಂಗರಾಜ್ಯ ನೀಡಿ ಗೌರವಿಸಿದ್ದಾನೆ. ಕೌರವನ ಪಕ್ಷದಲ್ಲಿದ್ದುಕೊಂಡೇ ಯುದ್ಧ ಮಾಡುವುದಂತೂ ಖಂಡಿತ. ಆತನ ಗೆಳೆತನಕ್ಕೆ ನಾನು ಎರಡೆಣಿಸಲಾರೆ ಎಂದು ಹೇಳುವ ಕರ್ಣನ ಸಖ್ಯತನದ ವಿಶ್ವಾಸಕ್ಕೆ ಎಣೆಯೇ ಇಲ್ಲ.

‘ಕರ್ಣ, ನಿನಗೆ ಉತ್ತರಿಸುವ ನೈತಿಕ ಹಕ್ಕು ನನಗಿಲ್ಲ. ನನ್ನಿಂದ ನಿನಗೆ ಅಪರಾಧವಾಗಿದೆ. ಆದರೂ  ನಾನು ನಿನ್ನಲ್ಲಿ ಕೇಳಿಕೊಳ್ಳುವುದೇನೆಂದರೆ ತಮ್ಮಂದಿರಾದ ಪಾಂಡವರನ್ನು ಸಮರ  ಯಜ್ಞದಲ್ಲಿ ಆಹುತಿ ಮಾಡಬೇಡ. ಒಮ್ಮೆ ಕೊಟ್ಟ ಬಾಣವನ್ನು ಇನ್ನೊಮ್ಮೆ  ತೊಡಬೇಡ, ಇಟ್ಟ ಗುರಿಯನ್ನು ಬದಲಾಯಿಸಬೇಡ, ಇದೇ ಈ ನಿನ್ನ ಬಡ ತಾಯಿಯ ಬೇಡಿಕೆ’  ಎನ್ನುತ್ತಾಳೆ ಕುಂತಿ, ‘ಆಗಲಿ ಅಮ್ಮ ನಿಮ್ಮಿಚ್ಛೆಯಂತೆ ನಡೆಯುತ್ತೇನೆ’ ಎಂದು ತಾಯಿಗೆ  ವಚನ ಕೊಡುತ್ತಾನೆ ಕರ್ಣ. ಯುದ್ಧದಲ್ಲಿ ಅರ್ಜುನ ಸಾಯಬಹುದು ನಾನು ಉಳಿಯಬಹುದು , ಇಲ್ಲವೇ ನಾನು ಅಳಿದು ಅರ್ಜುನ ಉಳಿಯಬಹುದು. ನಿನ್ನ ಮಕ್ಕಳಲ್ಲಿ ಅಳಿದು ಉಳಿದ ಐದು ಮಂದಿ ಉಳಿಯುತ್ತಾರೆ’  ಎಂದು ತಾಯಿಯಲ್ಲಿ ಕರ್ಣ ನುಡಿಯುತ್ತಾನೆ.

ಕರ್ಣಾವಸಾನ

ಶಲ್ಯನ ಸಾರಥ್ಯದಲ್ಲಿ ಕರ್ಣ ಕೌರವನ ಪಕ್ಷದಿಂದ ಯುದ್ದ ಮಾಡುತ್ತಾನೆ. ಆದರೆ ಶಲ್ಯನಾದರೋ ಕರ್ಣನನ್ನು ನಿಂದಿಸಿ ಅವನ ಏಕಾಗ್ರತೆಯನ್ನು ಭಂಗಗೊಳಿಸುತ್ತಾನೆ. ಧರ್ಮರಾಯ ಮತ್ತು ಕರ್ಣರ ನಡುವೆ ಯುದ್ದವೇರ್ಪಡುತ್ತದೆ. ಭೀಮ ಮತ್ತು ಕರ್ಣರ  ಸಂಘರ್ಷವಾಗುತ್ತದೆ. ಆಗ ಶಲ್ಯನು ನಿನ್ನ ಪೌರುಷವನ್ನು ಪಾರ್ಥನಲ್ಲಿ ತೋರು ಎನ್ನುತ್ತಾನೆ. ಅರ್ಜುನನೊಡನೆ ಘನಘೋರ ಯುದ್ದವಾಗಿ ಕೊನೆಗೆ ಕರ್ಣ ಅರ್ಜುನನಿಂದ ಹತನಾಗುತ್ತಾನೆ. ಕರ್ಣ ವೀರ ಮರಣವನ್ನಪ್ಪುತ್ತಾನೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. Hema says:

  ನಮ್ಮ ಅಜ್ಜಿಯೋ, ಅಮ್ಮನೋ, ಅತ್ತೆಯೋ..ತಮ್ಮ ಬಿಡುವಿನ ಸಮಯದಲ್ಲಿ, ಕತೆ ಹೇಳೆಂದು ಪೀಡಿಸುವ ಪುಟ್ಟ ಮಕ್ಕಳನ್ನು ಹತ್ತಿರ ಕೂರಿಸಿಕೊಂಡು ನೀತಿಕತೆ ಬೋಧಿಸುವಂತೆ ಇರುವ ಈ ಪೌರಾಣಿಕ ಕಥಾಸರಣಿ ಸೊಗಸಾಗಿ ಮೂಡಿ ಬರುತ್ತಿದೆ. ನಿಮಗೆ ಕೃತಜ್ಞತೆಗಳು.

 2. ಬಿ.ಆರ್.ನಾಗರತ್ನ says:

  ಪೌರಾಣಿಕ ಕಥೆಗಳನ್ನು ಚೆಂದವಾಗಿ ಕಟ್ಟಿಕೊಡುವ ನಿಮ್ಮ ಬರವಣಿಗೆ ಗೆ ನನ್ನದೊಂದು ನಮನ.

 3. ನಯನ ಬಜಕೂಡ್ಲು says:

  ಪೌರಾಣಿಕ ಕಥೆಗಳ ಸೊಗಡೇ ಬೇರೆ. ಆವಾಗಾವಾಗ ನೀವು ಬರೆಯುವ ಇಂತಹ ಕಥೆಗಳನ್ನು ಓದಲೂ ತುಂಬಾ ಖುಷಿ. ಚೆನ್ನಾಗಿದೆ ಮೇಡಂ.

 4. Anonymous says:

  ಪ್ರಕಟ ಮಾಡಿದ ಹೇಮಮಾಲಾ ಹಾಗೂ ಓದಿ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

 5. ಶಂಕರಿ ಶರ್ಮ, ಪುತ್ತೂರು says:

  ದಾನಕ್ಕೆ ಇನ್ನೊಂದು ಹೆಸರೇ ಕರ್ಣ. ಅಂತಹ ಮಹಾನ್ ಚೇತನದ ಕಥಾರೂಪದ ಪ್ರಸ್ತುತಿ ಬಹಳ ಸೊಗಸಾಗಿ ಮೂಡಿಬಂದಿದೆ…ಧನ್ಯವಾದಗಳು ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: