ಬಿದಿರು – ಒಂದು ಚಿಂತನೆ

Share Button

ಮಾನವ ಈ ಭೂಮಿಗೆ ಬಿದ್ದಾಕ್ಷಣ ಬಿದಿರಿನ ತೊಟ್ಟಿಲೇ ಮೊದಲ ಆಸರೆ. ಹಾಗೆ ಇಹಲೋಕದ ಪಯಣಗಳನ್ನು ಮುಗಿಸಿದ ಮೇಲೆ ಪರಲೋಕ ಯಾತ್ರೆಗೆ ಪ್ರಯಾಣಿಸುವುದು ಬಿದಿರಿನ ಚಟ್ಟದ ಮೇಲೆ ಎಂತಹ ವಿಪರ್ಯಾಸ. ಈ ಜನನ ಮರಣದ ನಡುವೆ ಮನುಷ್ಯ ಜೀವನದ ಅವಿರ್ಭಾವ ಅಂಗ ಈ ಬಿದಿರು ಎಂದರೆ ಅತಿಶಯೋಕ್ತಿಯಲ್ಲ.

ಬಿದಿರು ಸಸ್ಯಶಾಸ್ತ್ರದಲ್ಲಿ ಬ್ಯಾಂಬೂಸಾಯ್ಡಿಯೇ ಎಂಬ ಮುಖ್ಯಪ್ರಭೇದಕ್ಕೆ ಸೇರಿದೆ. ಇದರಲ್ಲಿ ನಾನಾ ಬಗೆಯ ಉಪಪ್ರಭೇದಗಳು ಇವೆ. ಇವುಗಳ ಉಪಯೋಗಗಳ ಪಟ್ಟಿ ನಿರಂತರ. ಪ್ರಪಂಚದ ಎಲ್ಲಾ ಸಸ್ಯ ಪ್ರಭೇದಗಳಲ್ಲಿ ಬಿದಿರು ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ ಎಂದು ಹೆಸರು ಮಾಡಿದೆ. ಇದು ಪ್ರಪಂಚದ ಅತಿದೊಡ್ಡ ಹುಲ್ಲು ಎಂಬ ಖ್ಯಾತಿ ಇದಕ್ಕಿದೆ. ಆನೆಗಳಿಗೆ ಬಿದಿರು ಬಲು ಪ್ರಿಯವಾದ ಆಹಾರ ಎಂಬುದು ಜನಜನಿತ.

ಬಿದಿರಿನ ಚಪ್ಪರ, ಛಾವಣಿಯ ರೀಪು, ನಂದಿಕೋಲು ಹರಿಗೋಲು, ಬೀಸಣಿಗೆ, ಬಾಗಿನಮೊರ, ಧಾನ್ಯದ ಕಣಜ, ಏಣಿ ಊರುಗೋಲು, ಹರಿಗೋಲು, ತೊಟ್ಟಿಲು ಕೊನೆಗೆ ಮಸಣ ಯಾತ್ರೆಯ ಚಟ್ಟಕ್ಕೂ ಬೇಕು ಬಿದಿರು. ಹಳ್ಳಿಯ ಮಕ್ಕಳಾಟದ ಪೆಟ್ಲು, ಎಮ್ಮೆ, ಹಸು, ಕರುವಿಗೆ ಕಾಯಿಲೆ ಬಂದಾಗ ಔಷಧ ಕುಡಿಸಲು ನಳಿಕೆಯಾಕಾರದ ಬಿದಿರಿನ ಕೊಳವೆ ಇವತ್ತಿಗೂ ಹಳ್ಳಿಗಳಲ್ಲಿ ಪ್ರಚಲಿತ. ಇನ್ನು ಬಿಲ್ಲು ಬಾಣಗಳೂ ಇದರಿಂದ ನಿರ್ಮಿತ. ಆಸ್ಟ್ರೇಲಿಯಾದ ಮೂಲ ನಿವಾಸಿಗಳು ಉಪಯೋಗಿಸುತ್ತಿದ್ದ ಈಟಿಗಳು ಇದರಿಂದ ತಯಾರಾದವು. ಇನ್ನು ಹಳ್ಳಿಗಳಲ್ಲಿ ಹೋಮ, ಹವನಗಳಲ್ಲಿ ಬೆಂಕಿ ಉರಿಯುವಂತೆ ಮಾಡಲು ಈ ಕೊಳವೆಯೂ ಬಿದಿರಿನದ್ದೆ. ಇದಕ್ಕೆ ‘ವೇಣುಧಮನಿ’ ಎಂಬ ಸುಸಂಸ್ಕೃತ ಹೆಸರಿದೆ. ಇನ್ನು ಗೇರು, ಪೇರಳೆ ಹಣ್ಣು ಕೊಯ್ಯಲು ಕೊಕ್ಕೆ ಕಟ್ಟಿದ ಉದ್ದದ ಬಿದಿರಿನ ಕೋಲು ಇವತ್ತಿಗೂ ಹಳ್ಳಿಗಳಲ್ಲಿ ಉಪಯೋಗವಾಗುತ್ತಿದೆ.

ಏಣಿಯಂತು ನಗರ ಪ್ರದೇಶದಲ್ಲೂ ಜನಜನಿತ. ಬಿದಿರಿನ ಪಿಠೋಪಕರಣಗಳು ಬಲುಸುಂದರ ಮತ್ತು ಬಾಳಿಕೆ ಬರುವಂಥದ್ದು. ಬಿದಿರಿನ ಗೊಂಬೆಗಳು ಬಲು ಪ್ರಸಿದ್ಧ. ಬಿದಿರಿನಿಂದ ಓಲೆ, ಹಾರ ಮುಂತಾದ ಆಭರಣಗಳನ್ನು ತಯಾರಿಸುತ್ತಾರೆ. ಕಾಗದಗಳ ತಯಾರಿಕೆಯಲ್ಲಿ ಬಿದಿರಿನ ಪಾತ್ರ ಅವರ್ಣನೀಯ.

ಇನ್ನು ಬಿದಿರಿನ ನವೀನ ಪ್ರಯೋಗಗಳನ್ನು ನೋಡಬೇಕಿದ್ದರೆ ಚೀನಾದ ಬಿದಿರು ಸಂಶೋಧನೆ, ಪ್ರದರ್ಶನ ಹಾಗೂ ಮಾರಾಟ ಕೇಂದ್ರಕ್ಕೆ ಭೇಟಿ ಕೊಡಬೇಕು. ಬಿದಿರಿನ ಹೊಸ ಪ್ರಪಂಚವೇ ಅಲ್ಲಿ ಕಾಣಸಿಗುತ್ತದೆ. ಬಿದಿರಿನಿಂದ ತಯಾರಿಸಿದ ನೂರಾರು ವಸ್ತುಗಳು ಅಲ್ಲಿ ಲಭ್ಯ. ಬಟ್ಟೆಯಿಂದ ಹಿಡಿದು ತಿನಿಸಿನವರೆಗೂ ನಂಬಲಸಾಧ್ಯವಾದ ವಸ್ತುಗಳ ನಿರ್ಮಾಣವಾಗಿದೆ. ಬಿದಿರಿನಿಂದ ಪ್ರಪಂಚದ ಅತೀ ಪ್ರಮುಖ ಕಾರು ತಯಾರಕರಾದ ಫೋರ್ಡ್ ಕಂಪೆನಿಯವರು ಬಿದಿರನ್ನು ಕಾರಿನ ಬಹುಭಾಗಕ್ಕೆ ಅಳವಡಿಸುವ ಅಂತಿಮ ಹಂತದಲ್ಲಿದ್ದಾರೆ. ಬಿದಿರಿನ ಉಪಯೋಗ ಗಣಕ ಯಂತ್ರದ ತಂತ್ರಾಂಶದಲ್ಲೂ ಬಳಕೆಯಾಗಿದೆ ಎಂದರೆ ಬಿದಿರಿನ ಪ್ರಾಮುಖ್ಯ ಎಲ್ಲಿಗೆ ತಲುಪಿದೆ ಎಂದು ಅರಿಯಬಹುದು.

ಇನ್ನು ಎಳೆ ಬಿದಿರು, ಒಳ್ಳೆಯ ಖಾದ್ಯವಸ್ತು ಇದನ್ನು ಕಳಲೆ ಎಂದೇ ಕರೆಯುತ್ತಾರೆ. ಇದರಿಂದ ಪಲ್ಯ, ಹುಳಿ, ವಡೆ, ಖಾರದ ದೋಸೆ, ಉಪ್ಪಿನ ಕಾಯಿ, ಹೀಗೆ ಹಲವಾರು ಖಾದ್ಯಗಳನ್ನು ತಯಾರಿಸಬಹುದು. ದಕ್ಷಿಣ, ಕನ್ನಡ ಉತ್ತರ ಕನ್ನಡ  ಮತ್ತು ಕೊಡಗು ಜಿಲ್ಲೆಗಳಲ್ಲಿ ಇವು ಬಹಳ ಜನಪ್ರಿಯ ತಿನಿಸುಗಳು. ಇನ್ನು ಬಿದಿರಿಗೂ ಸಂವತ್ಸರಕ್ಕೂ ಏನೋ ನಂಟು. ಬಿದಿರು ಸರಿಯಾಗಿ 60 ವರ್ಷ ಬದುಕಿರುತ್ತದೆ. ಕೊನೆಯಲ್ಲಿ ಹೂಬಿಟ್ಟು ಭತ್ತವಾದರೆ ಬಿದಿರಿನ ಆಯಸ್ಸು ಮುಗಿದಂತೆ. ಬಿದಿರು ಹೂ ಬಿಟ್ಟರೆ ಬರಗಾಲ ಬರುತ್ತದೆ ಎಂಬ ನಂಬಿಕೆ ಇವತ್ತಿಗೂ ಹಳ್ಳಿಗಳಲ್ಲಿ ಇವೆ. ಇದು ಸ್ವಲ್ಪ ಮಟ್ಟಿಗೆ ನಿಜವೂ ಇರಬಹುದು. ಕಾಕತಾಳೀಯವೂ ಹೌದು. ಬಿದಿರಕ್ಕಿಯಿಂದ ಮಾಡಿದ ಗಂಜಿ, ಖಿಚಡಿ, ದೋಸೆ ಮುಂತಾದ ತಿನಿಸುಗಳು ಇಂದೂ ಗ್ರಾಮೀಣ ಭಾಗದಲ್ಲಿ ಜನಪ್ರಿಯ. ಬಿದಿರಿನಿಂದ ಕೆಲ ಔಷಧಗಳನ್ನು ತಯಾರಿಸುತ್ತಾರೆ.

ಬಿದಿರಿಗೆ ಸಂಸ್ಕೃತದಲ್ಲಿ ‘ವಂಶ’ ಎಂದು ಕರೆಯುತ್ತಾರೆ. ವಂಶದಿಂದ ಮಾಡಿದ ಕೊಳಲು ‘ವಂಶಿ’ ಆದ್ದರಿಂದಲೇ ಕೃಷ್ಣನಿಗೆ ವಂಶೀಧರ ಎಂಬ ಹೆಸರು ಇದೆ. ಸುಟ್ಟು ತೂತುಮಾಡಿದ ಕೊಳಲಿನಿಂದ ಎಂಥ ಸ್ವರ ಮಾಧುರ್‍ಯ ಹೊಮ್ಮುತ್ತದೆ! ಮನುಷ್ಯ ಕಂಡು ಹಿಡಿದ ಅತ್ಯಂತ ಪ್ರಾಚೀನ ವಾದ್ಯ ಬಿದಿರಿನ ಕೊಳಲು ! ಇದಕ್ಕೆ ಉತ್ತರ ಭಾರತದಲ್ಲಿ ಬಾನ್ಸುರಿ ಎಂದೂ ಕರೆಯುತ್ತಾರೆ. ಇದಲ್ಲದೆ ಇನ್ನು ಬಿದಿರಿನ ಹಲವಾರು ವಾದ್ಯಗಳು ಪ್ರಚಲಿತದಲ್ಲಿದೆ. ಬಿದಿರಿನ ತಮಟೆ, ಡೋಲು ಪ್ರಸಿದ್ಧ. ಮಣಿಪುರದ ಬಿದಿರು ಕೋಲು ನೃತ್ಯ ವಿಶ್ವವಿಖ್ಯಾತ.

 

ಜಾನಪದದಲ್ಲಿ ಬಿದಿರಿನ ಸೊಗಡು ಬಲುಚೆನ್ನ. ‘ಬಿದಿರಮ್ಮ ತಾಯಿ ಕೇಳೆ’ ಅಟ್ಟಕ್ಕೆ ಏಣ್ಯಾಸೆ, ಬೆಟ್ಟಕ್ಕೆ ಬಿದಿರಾಸೆ, ಏಗಿಣಿಯೇ ಹೆಣ್ಣುಮಕ್ಕಳಿಗೆ ತೌರೂರಾಸೆ ಏಗಿಣೀಯೇ ಜನಪ್ರಿಯ ಜಾನಪದ ಗೀತೆಗಳು. ರಾಮನಗರದ ಬಳಿ ಇರುವ ಶ್ರೀಯುತ ನಾಗೇಗೌಡರ ಕೂಸಾದ ಜಾನಪದ ಲೋಕದಲ್ಲಿ ಬಿದಿರಮ್ಮ ತಾಯಿ ಕೇಳೆ ಜನಪದ ಗೀತೆಯನ್ನು ಬಿದಿರು ಮಳೆಯ ಪಕ್ಕದಲ್ಲೇ ಫಲಕದಲ್ಲಿ ಬರೆದಿದ್ದನ್ನು ಕಾಣಬಹುದು. ಈ ಬಿದಿರಿನ ಕಸುಬಿನಲ್ಲಿ ಸಾವಿರಾರು ಸಂಸಾರಗಳು ಜೀವನ ಸಾಗಿಸುತ್ತಿವೆ. ಬಿದಿರಿನ ಸಣ್ಣ ಅಲಂಕಾರಿಕ ಗಿಡಗಳು ಮನೆಯಲ್ಲಿಡಲು ಬಲು ಸುಂದರ. ಬಿದಿರಿನ ಮನೆಗಳು ಇವತ್ತಿಗೂ ಕಾಡಿನ ಗಿರಿಜನರ ವಾಸದ ಆಸರೆಗಳು. ಪ್ರಾಣಿ, ಪಕ್ಷಿ, ವೀಕ್ಷಣೆಗೂ ಬಿದಿರಿನ ಅಡ್ಡೆ ಕಾಡಿನಲ್ಲಿ ಸಾಮಾನ್ಯ.

ಹೀಗೆ ಹುಟ್ಟಿನಿಂದ ಸಾಯುವವರೆಗೂ ಬಿದಿರು ಒಂದಲ್ಲ ಒಂದು ರೀತಿಯಲ್ಲಿ ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿದೆ.

ಕೊನೆ ಪದರ :
ಒಬ್ಬ ನಾಸ್ತಿಕ, ಆಸ್ತಿಕನನ್ನು ಪ್ರಶ್ನಿಸುತ್ತಾನೆ. ಇಷ್ಟೆಲ್ಲಾ ಕೃಷ್ಣನ ಬಗ್ಗೆ ಕೊಳಲಿನ ಬಗ್ಗೆ ಮಾತಾಡುತ್ತೀರಲ್ಲ, ಕೃಷ್ಣನ ಕೈಯಲ್ಲಿರುವ ಬಿದಿರಿನ ಕೊಳಲು ಏಕೆ ಚಿಗುರಿಲ್ಲ? ಆಸ್ತಿಕ ಉತ್ತರಿಸುತ್ತಾನೆ. ಬಿದಿರಿಗೂ ಗೊತ್ತು, ತಾನು ಚಿಗುರಿದರೆ ಕೃಷ್ಣ ಅದನ್ನು ಬಿಸುಡುತ್ತಾನೆ ಎಂದು. ಅದರಿಂದ ಚಿಗುರದೇ ಅವನ ಕೈ ಅಲಂಕರಿಸಿದೆ. ನಾಸ್ತಿಕ ಬೆಪ್ಪಾದ ಎಂದು ಹೇಳಬೇಕಿಲ್ಲ.

– ಕೆ. ರಮೇಶ್ , ಮೈಸೂರು

8 Responses

 1. ನಿರ್ಮಲ says:

  ಬಹಳ ಸೊಗಸಾಗಿದೆ ಬಿದಿರಿನ ಪಯಣ. ಅದರ ಜೊತೆಗೆ ಪ್ರಾರಂಭವಾಗಿ, ಸಾಗಿ, ಮುಕ್ತಾಯವಾಗುವ ಮನುಜನ ಪಯಣ. ನಾನೂ ಜಾನಪದದ ಬಿದಿರಿನ ಹಾಡನ್ನು ಜಾನಪದ ಲೋಕದಲ್ಲಿ ಕಂಡು ಅಚ್ಚರಿಪಟ್ಟಿದ್ದೆ. ಕೊನೆ ಪದರದಲ್ಲಿರುವ ಆಸ್ತಿಕ, ನಾಸ್ತಿಕರ ನಡುವಿನ ವಾಗ್ವಾದ ಸೂಪರ್. ಅಭಿನಂದನೆಗಳು

 2. Anonymous says:

  ವಾವ್ ಚಂದದ ಮಾಹಿತಿ ನೀಡಿರುವ ಬರಹ.ಅಭಿನಂದನೆಗಳು ಸಾರ್.

 3. ನಯನ ಬಜಕೂಡ್ಲು says:

  ಮಾಹಿತಿಪೂರ್ಣ ಬರಹ. ಒಂದು ನೋವಿನ ಸಂಗತಿ ಎಂದರೆ ಬಿದಿರು ಕೂಡಾ ಇವತ್ತು ಅಳಿವಿನಂಚನ್ನು ತಲುಪುತ್ತಿದೆ.

 4. Savithri bhat says:

  ಬಿದಿರಿನ ಉಪಯೋಗ,ಮಹತ್ವ ಬಹಳ ಚೆನ್ನಾಗಿ ಬರೆದಿರಿ ಧನ್ಯವಾದಗಳು ಸರ್ ನಿಮಗೆ..ಸುರಹೊನ್ನೆ ಗೆ

 5. Hema says:

  ಬಹಳ ಕೂತೂಹಲಕಾರಿಯಾದ ಮಾಹಿತಿಗಳುಳ್ಳ ಚೆಂದದ ಬರಹ. ‘ಕೊನೆಯ ಪದರ’ ಸೂಪರ್.

 6. ಶಂಕರಿ ಶರ್ಮ says:

  ಉತ್ತಮ ಮಾಹಿತಿಪೂರ್ಣ ಸಕಾಲಿಕ ಲೇಖನ‌.ಧನ್ಯವಾದಗಳು ಸರ್.

 7. Anonymous says:

  ಬಿದಿರು ‌ ಅದರ ಉಗಮ ಉಪಯೋಗ ವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ನನಗೆ ತಿಳಿದಮಟ್ಟಿಗೆ ಬಿದರ್ ಎಂಬ ಉೂರಿನ ಹೆಸರು ಅಲ್ಲಿಯ ಬಿದುರಿನ ಕುಸುರಿಕೆಲಸದಿಂದ ಬಂತು ಅನ್ನುವ ಮಾಹಿತಿ ಇದೆ. ಅಭಿನಂದ’ನೆಗಳು

  ಸುಬ್ಬರಾವ್

 8. ಗಾಯತ್ರಿ ಮೂರ್ತಿ says:

  ರಮೇಶರವರೆ, ಬಿದಿರಿನ ಬಗ್ಗೆ ನಿಮ್ಮ ಚಿಂತನೆ ಸೊಗಸಾಗಿದೆ.
  ಕೊನೆಯ ಪದರವಂತೂ ಬಹಳ ಮೆಚ್ಚುಗೆಯಾಗುತ್ತದೆ.
  ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: