ಮನುಷ್ಯ…
ಜಗ ನನಗಾಗಿಯೇ ಹರಡಿದೆಯೆಂದು
ಭೂಮಿ ನನಗಾಗಿಯೇ ಹುಟ್ಟಿದೆಯೆಂದು
ಜೀವರಾಶಿಗಳೆಲ್ಲಾ ನನ್ನಾಳುಗಳೆಂದು
ದಿಟವಾಗಿ ನಂಬಿದ ಮನುಷ್ಯ ನಾನು…ಮನುಷ್ಯ ನಾನು
ಅವನಿಯನ್ನು ಅಮ್ಮ ಎನ್ನುತ್ತೇನೆ ನಾನು
ಆದಿತ್ಯನನ್ನು ಅಪ್ಪ ಎನ್ನುತ್ತೇನೆ ನಾನು
ನಡಿಗೆ ಬರುವವರೆಗೂ ತಗ್ಗಿಬಗ್ಗಿ ಇರುತ್ತೇನೆ
ನಾ ಹಾರಿದಾಗ ಮೋಡ ತಡೆಯಬಾರದೆಂದು
ಹೆಜ್ಜೆಯೂರಿದಾಗ ಕಾಡು ದಾರಿ ಬಿಡಬೇಕೆಂದು
ದೋಣಿಯೇರಿದರೆ ಅಲೆಗಳು ಮಣಿಯಬೇಕೆಂದಿರುವೆ ನಾನು
ತಾಯಿಯ ಗರ್ಭದಲ್ಲಿ ಬಂಗಾರವಿದೆಯೆಂದು ಅಗೆದಿದ್ದೇನೆ
ಸಾಗರ ಗರ್ಭದಲ್ಲಿ ತೈಲ ನಿಕ್ಷೇಪಕ್ಕಾಗಿ ಮಥಿಸಿದ್ದೇನೆ
ಮತ್ತೆ ನಾಳೆಗೆಯೆಂದಾಗ ನಾನಿರುವುದಿಲ್ಲವೆಂದು ನಕ್ಕುಬಿಟ್ಟಿದ್ದೇನೆ
ನೆಲದಮೇಲೆ ಗೆರೆಯೆಳೆದು ನಿನ್ನದು ನನ್ನದೆಂದು ಹಂಚಿದ್ದೇನೆ
ನಾನಿರುವ ವರ್ತಮಾನ ನಂತರ ಭವಿಷ್ಯವೆಂದು ಕಾಲವನ್ನು ವಿಭಜಿಸಿದ್ದೇನೆ
ನಾನೆ ರಾಜನೆಂದಿದ್ದೆನೆ ಉಳಿದಿದ್ದೆಲ್ಲ ನನ್ನ ರಾಜ್ಯವೆಂದಿದ್ದೇನೆ
ನನ್ನ ಹೊಡೆದಾಟಗಳು ಇತಿಹಾಸವೆಂದಿದ್ದೇನೆ
ಸಾಕ್ಷಿಗಾಗಿ ಕಲ್ಲುಗಳ ಹೂತಿದ್ದೇನೆ
ನಾ ಹೇಳಿದಹಾಗೆ ನಡೆಯುವ ನಾ ಕೆತ್ತಿದಹಾಗೆ ಕಾಣುವ
ನನ್ನಂತೆ ಕಾಣುವ ದೇವರನ್ನು ಸೃಷ್ಟಿಸಿಕೊಂಡಿದ್ದೇನೆ
ನನ್ನ ನಡೆಸುವುದು ಅವನೆಂದು ನಂಬಿಸಿದ್ದೇನೆ
ಎಲ್ಲೆಂದು ಕೇಳಿದರೆ ಕೈ ಮೇಲೆತ್ತಿ ತೋರಿದ್ದೇನೆ
ಅದನ್ನು ಇದನ್ನು ಕೊಂದು ತಿಂದಿದ್ದೇನೆ
ವಿಚಿತ್ರ ಖಾಯಿಲೆಗೆ ತುತ್ತಾಗಿ ಊರೆಲ್ಲಾ ಸುತ್ತಿದ್ದೇನೆ
ವಿಪತ್ತು ಕಳೆಯುವವರೆಗೂ ಹೊಸಿಲು ದಾಟುವುದಿಲ್ಲವೆಂದಿದ್ದೆ
ನಾ ಬರಮಾಡಿಕೊಳ್ಳದೆ ವಸಂತಕಾಲ ನಿಂತಿದೆಯೇ?!
ನಾ ಸ್ವಾಗತಿಸದೆ ಚೈತ್ರ ಹಾಡು ನಿಲ್ಲಿಸಿದೆಯೇ
ನಾ ಕುಸಿದು ಕುಳಿತಾಗ ಭೂಭ್ರಮಣ ನಿಂತಿದೆಯೇ
ನನ್ನ ಚಟುವಟಿಕೆ ಇಲ್ಲವೆಂದು ಆಕಾಶ ಉದುರಿದೆಯಾ
ರಾಜನಲ್ಲ ಬೂಜು ಅಲ್ಲ ಬಾಡಿಗೆ ಮನುಷ್ಯ ನಾನು
ಬದುಕಿದರೆ ಸಾಕೆಂದು ಬಾರಿ ಬಾರಿ ಕೊಗುತ್ತೇನೆ
ನಿನ್ನ ಮಾತು ಕೇಳುತ್ತೇನೆಂದು ಮಣ್ಣು ಮುಟ್ಟಿ ಹೇಳುತ್ತೇನೆ
ಮನವರಿಕೆಯಾಗಿದೆಯೆಂದು ವಿನಯವನ್ನು ಒಸರುತ್ತೇನೆ
ಔಷಧೋಪಚಾರ ದೊರೆತನಂತರ ಮತ್ತೆ ಗದ್ದುಗೆ ಏರುತ್ತೇನೆ
ಚೇತರಿಸಿಕೊಂಡನಂತರ ನಿನ್ನಿರವನ್ನು ಮರೆಯುತ್ತೇನೆ
ನನಗಾರು ಸಮವೆಂದು ಮತ್ತೆ ಮೊದಲಿನಂತಾಗುತ್ತೇನೆ
ಮನುಷ್ಯ ನಾನು… ಮಾಯಾವಿ ಮನುಷ್ಯ ನಾನು!!
(ಈ ಪದ್ಯವನ್ನು ಯಸ್ ಪಿ ಬಿ ಅವರು ಕಡೆಯದಾಗಿ ತೆಲುಗಿನಲ್ಲಿ ಅವರ ಖುಷಿಗಾಗಿ ಹಾಡಿನಂತೆ ಹಾಡಿಕೊಂಡಿರುತ್ತಾರೆ)
ತೆಲುಗು ಮೂಲ : ತಂಗೆಳ್ಳ ರಾಜಗೋಪಾಲ್
ಅನುವಾದ : ರೋಹಿಣಿಸತ್ಯ
ಅರ್ಥಪೂರ್ಣ ಕವನ
ನಾವು …ಹುಲುಮಾನವರ ಕ್ರೂರತ್ವವನ್ನು ಯಥಾವತ್ತಾಗಿ ಚಿತ್ರಿಸಿದ ಕವನ.. ಮನಸ್ಸು ಭಾರವಾಗಿಸುತ್ತದೆ..
ಮನುಷ್ಯನನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ.ಅನುವಾದವೂ ಅಷ್ಟೇ ನೈಜವಾಗಿದೆ.
ಅಭಿನಂದನೆಗಳು