ವಿಶ್ವ ರೇಬಿಸ್ ದಿನಾಚರಣೆ
ವಿಶ್ವ ರೇಬಿಸ್ ದಿನಾಚರಣೆ-ರೇಬೀಸ್‍ನಿಂದ ಮುಕ್ತವಾಗಲು – ಲಸಿಕೆ ಹಾಕಿಸಿ ಕೈಜೋಡಿಸಿ.
ಪ್ರತಿವರ್ಷ ಸೆಪ್ಟೆಂಬರ್ 28 ರಂದು ರೇಬಿಸ್ ಸೋಂಕಿನ ಬಗ್ಗೆ ವಿಶ್ವದಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ರೇಬಿಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2020ರ ರೇಬೀಸ್ ದಿನಾಚರಣೆಯನ್ನು “ರೇಬೀಸ್ ಅಂತ್ಯವಾಗಲಿ” ಎಂಬ ಘೋಷಣೆಯೊದಿಗೆ ಆಚರಿಸಲಾಗುತ್ತಿದೆ.
ಸಾಮಾನ್ಯವಾಗಿ ಸಾಕು ಪ್ರಾಣಿಗಳ ಕಡಿತದಿಂದಾಗಿ ಅದರಲ್ಲೂ ಹುಚ್ಚುನಾಯಿ ಕಡಿತದಿಂದಾಗಿಯೇ ಬರುವಂತಹ ರೇಬೀಸ್ ಕಾಯಿಲೆಯಿಂದ ಜಗತ್ತಿನಾದ್ಯಂತ ಶೇಕಡಾ 99%ರಷ್ಟು ಜನ ಸಾಯುತ್ತಿದ್ದಾರೆ. ಅದರಲ್ಲೂ ಈ ಸೋಂಕಿನಿಂದಾಗಿ ಸಾಯುವವರ ಸಂಖ್ಯೆಯು ಪ್ರಮುಖವಾಗಿ ಏಷ್ಯಾ ಹಾಗೂ ಆಫ್ರಿಕಾ ದೇಶಗಳಲ್ಲೇ ಶೇಕಡಾ 95ರಷ್ಟು ಹೆಚ್ಚಾಗಿದೆ. ವಿಶ್ವದಲ್ಲಿ ರೇಬೀಸ್ ಕಾಯಿಲೆಗೆ ಲಸಿಕೆ ಲಭ್ಯವಿದ್ದರೂ ಈ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಸಾರ್ವಜನಿಕರಲ್ಲಿ ರೇಬೀಸ್ ಕಾಯಿಲೆಯ ಬಗ್ಗೆ ನಿಖರವಾದ ಮಾಹಿತಿ,ನಿರ್ಲಕ್ಷ್ಯ ಹಾಗೂ ಜಾಗೃತಿ ಇಲ್ಲದ ಕಾರಣ ಅಂತರಾಷ್ಟ್ರೀಯ ರೇಬೀಸ್ ನಿಯಂತ್ರಣ ಒಕ್ಕೂಟ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ 2007ರಿಂದ ಪ್ರತಿವರ್ಷ ಸೆಪ್ಟೆಂಬರ್ 28ರಂದು ರೇಬೀಸ್ ಕಾಯಿಲೆಗೆ ಲಸಿಕೆ ಕಂಡುಹಿಡಿದ ಪ್ರಸಿದ್ದ ವಿಜ್ಞಾನಿ ಲೂಯಿಸ್ ಪ್ಯಾಶ್ಚರ್ ರವರ ಪುಣ್ಯತಿಥಿಯ ಸ್ಮರಣಾರ್ಥವಾಗಿ ವಿಶ್ವ ರೇಬಿಸ್ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ.
ರೇಬೀಸ್ ಎಂದರೇನು?
ರೇಬೀಸ್ ಎನ್ನುವುದು ವೈರಲ್ ಸೋಂಕಾಗಿದ್ದು ಪ್ರಾಣಿಗಳ ಜೊಲ್ಲಿನಿಂದ ಹರಡುವುದು. ಈ ವೈರಸ್ ಮಾನವನ ಮೆದುಳನ್ನು ಪ್ರವೇಶಿಸಿ ಮೆದುಳಿನ ಸೋಂಕಿಗೆ ಕಾರಣವಾಗುತ್ತವೆ. ಜಾಗತಿಕವಾಗಿ ಸುಮಾರು ಶೇಕಡಾ 99ರಷ್ಟು ರೇಬೀಸ್ ಪ್ರಕರಣಗಳು ನಾಯಿಕಡಿತದಿಂದ ಸಂಭವಿಸುತ್ತವೆ. ಅಮೇರಿಕಾ ದೇಶದಲ್ಲಿ ಬಾವುಲಿಗಳ ಕಡಿತದಿಂದ ರೇಬೀಸ್ ಪ್ರಕರಣಗಳು ದಾಖಲಾಗುತ್ತಿವೆ.
ರೇಬೀಸ್ ಲಕ್ಷಣಗಳು
ರೇಬೀಸ್ ಲಕ್ಷಣಗಳು ಪ್ರಾರಂಭಿಕವಾಗಿ ಒಂದು ತಿಂಗಳಿಂದ ಮೂರು ತಿಂಗಳವರೆಗೆ ನಿಧಾನವಾಗಿ ಗೋಚರಿಸುತ್ತವೆ. ಪ್ರಾರಂಭಿಕವಾಗಿ ಜ್ವರದಂತ ಸಾಮಾನ್ಯ ಲಕ್ಷಣಗಳಿಂದ ಗೋವರಿಸಿ ಮೆದುಳಿಗೆ ವೈರಸ್ ಪ್ರವೇಶಿಸಿ ಸೋಂಕನ್ನು ಹರಡಿ ಆತಂಕ,ಗೊಂದಲ,ವಿಪರೀತ ಚಟುವಟಿಕೆ ಅತಿಯಾಗಿ ಜೊಲ್ಲು ಸುರಿಸುವಿಕೆ,ಜಲಭೀತಿ,ನಿದ್ರಾಹೀನತೆ ಹಾಗೂ ಆಂಶಿಕ ಪಾಶ್ವವಾಯು ಮುಂತಾದ ಲಕ್ಷಣಗಳು ಮುಂದುವರೆದು ವ್ಯಕ್ತಿ ಮರಣ ಹೊಂದಬಹುದು.
ರೇಬೀಸ್‍ಗೆ ಕಾರಣಗಳು
ರೇಬೀಸ್ ಸೋಂಕು ಸಾಕು ಪ್ರಾಣಿಗಳು ಹಾಗೂ ಕಾಡುಪ್ರಾಣಿಗಳಿಂದ ಬರುವುದು. ಪ್ರಮುಖವಾಗಿ ನಾಯಿ, ಬಾವಲಿ, ಬೆಕ್ಕು, ದನಕರುಗಳು, ಕುದುರೆ, ನರಿ, ಮಂಗ ಇತ್ಯಾದಿ ಪ್ರಾಣಿಗಳಿಂದ ಹರಡುವುದು. ಸೋಂಕಿತ ಪ್ರಾಣಿಗಳ ಜೊಲ್ಲಿನಲ್ಲಿರುವ ವೈರಸ್ ಮಾನವನಿಗೆ ಕಚ್ಚಿದಾಗ ಅಥವಾ ಸೋಂಕಿತ ಪ್ರಾಣಿಯು ದೇಹವನ್ನು ನೆಕ್ಕಿದಾಗ ಸುಲಭವಾಗಿ ಹರಡುತ್ತದೆ.
ವೈದ್ಯರನ್ನು ಯಾವಾಗ ಭೇಟಿಮಾಡಬೇಕು?
ನಿಮಗೆ ಯಾವುದೇ ಪ್ರಾಣಿ ಕಚ್ಚಿದಾಗ ತಕ್ಷಣವೇ ವೈದ್ಯರನ್ನು ಭೇಟಿಮಾಡುವುದು ಉತ್ತಮ. ಕಚ್ಚಿರುವ ಗಾಯದ ತೀವ್ರತೆಯ ಆಧಾರದ ಮೇಲೆ ವೈದ್ಯರು ರೇಬೀಸ್ ಲಸಿಕೆಯನ್ನು ನೀಡುವರು.
ರೇಬೀಸ್ ತಡೆಗಟ್ಟುವ ಕ್ರಮಗಳು
- ಯಾವುದೇ ಪ್ರಾಣಿ ಕಚ್ಚಿದ ಕೂಡಲೆ ಕಚ್ಚಿದ ಭಾಗವನ್ನು ಸೋಪು ಮತ್ತು ನೀರಿನಿಂದ ತೊಳೆಯಬೇಕು.
- ಮನೆಯಲ್ಲಿ ಸಾಕುವ ಪ್ರಾಣಿಗಳಿಗೆ ಪಶುವೈದ್ಯರ ಸೂಚನೆಯಂತೆ ಸಕಾಲಕ್ಕೆ ಚುಚ್ಚುಮದ್ದನ್ನು ನೀಡುವುದು.
- ಸಾಕು ಪ್ರಾಣಿಗಳನ್ನು ಇತರರಿಗೆ ತೊಂದರೆ ಕೊಡದಂತೆ ನೋಡಿಕೊಳ್ಳುವುದು.
- ಕಾಡು ಪ್ರಾಣಿಗಳ ಬಳಿಗೆ ತೆರಳದಂತೆ ಎಚ್ಚರ ವಹಿಸುವುದು.
- ಬಾವಲಿಗಳು ಮನೆಯ ಸುತ್ತಮುತ್ತಲಿರದಂತೆ ನೋಡಿಕೊಳ್ಳುವುದು
ರೇಬೀಸ್ ಚಿಕಿತ್ಸೆ
ಯಾವುದೇ ಪ್ರಾಣಿಯು ಕಚ್ಚಿದರೆ ವೈದ್ಯರನ್ನು ಭೇಟಿಮಾಡಿದಾಗ ರೇಬೀಸ್ ಲಸಿಕೆಯನ್ನು ನೀಡುವರು.ಪ್ರಾಣಿ ಕಚ್ಚಿದ ಭಾಗದ ಪಕ್ಕದಲ್ಲೆ ಲಸಿಕೆಯನ್ನು ನೀಡಲಾಗುತ್ತದೆ.ಲಸಿಕೆಯನ್ನು 14ದಿನಗಳಲ್ಲಿ 4 ಇಂಜೆಕ್ಷನ್ನು ನೀಡಲಾಗುತ್ತದೆ.
ರೇಬೀಸ್ ಕಾಯಿಲೆಗೆ ಸೂಕ್ತವಾದ ಲಸಿಕೆ ಇದ್ದರೂ ಸಹ ಇದರಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ರೇಬೀಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ ತಿಳುವಳಿಕೆ ನೀಡುವುದರ ಮೂಲಕ ರೇಬೀಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ನಾವು ನೀವೆಲ್ಲರೂ ಪಣತೊಡೋಣ. ರೇಬೀಸ್ 2030ರ ಹೊತ್ತಿಗೆ ಜಾಗತಿಕವಾಗಿ ಕೊನೆಗೊಳ್ಳಲಿ ಎಂಬುದೇ ವಿಶ್ವಸಂಸ್ಥೆಯ ಆಶಯ.
-ಮಹೇಶ್ ಕೆ.ಎನ್, ಚಿತ್ರದುರ್ಗ
ಜಾಗೃತಿ ಮೂಡಿಸುವಂತಹ ಲೇಖನ