ಬೇಡಾಘಾಟಿನ ನೌಕಾವಿಹಾರ
ಕಳೆದ ವರ್ಷ ನವೆಂಬರಿನಲ್ಲಿ ನಾವು ಮಧ್ಯಪ್ರದೇಶ ರಾಜ್ಯಕ್ಕೆ ಪ್ರವಾಸಹೋಗಿದ್ದೆವು. ಗ್ವಾಲಿಯರ್,ಖಜು
ಒಂದು ದೊಡ್ಡ ದೋಣಿಯಲ್ಲಿ ಎಲ್ಲಾ ಇಪ್ಪತ್ತನಾಲ್ಕು ಪ್ರವಾಸಿಗರನ್ನೂ ಎದುರುಬದುರಾಗಿ ಸಮತೋಲನ ಕೆಡದಂತೆ ಕೂರಿಸಿಕೊಂಡು ಹೊರಟಾಗ ನದಿಯ ಮೇಲಿನ ತಂಗಾಳಿ ತೀಡಿ ಬಂದು ಎಲ್ಲರನ್ನೂ ಒಂದು ಆಹ್ಲಾದಕರ ಲೋಕಕ್ಕೆ ಕೊಂಡೊಯ್ದಿತು. ಈಗ ಎಲ್ಲರ ಬಾಯಲ್ಲಿ ದೋಣಿವಿಹಾರ ಕುರಿತ ಹಾಡುಗಳೇ. “ದೋಣಿ ಸಾಗಲಿ ಮುಂದೆ ಹೋಗಲಿ,” “ಸ್ನೇಹದ ಕಡಲಲ್ಲಿ”, “ಸಾಗಲಿ ಪ್ರೇಮ ತರಂಗದೊಳು” ಹೀಗೆ ಅವರವರ ಲಹರಿಗೆ ಅನುಸಾರ ಗುನುಗುತ್ತಿದ್ದರು. ನರ್ಮದೆಯ ಇಕ್ಕೆಲದ ಸುಂದರ ಭೂದೃಶ್ಯಗಳನ್ನು ಸುತ್ತಲಿನ ಪರಿವೆ ಇಲ್ಲದೆ ಆಸ್ವಾದಿಸುತ್ತಿದ್ದ ಮೌನಿಗಳೂ ಇದ್ದರು. ಕ್ಯಾಮೆರಾ, ಮೊಬೈಲ್ ಗಳಿಗೆ ಬಿಡುವಿಲ್ಲದ ಹಸಿವು.
ಆಗ ಇದ್ದಕ್ಕಿದ್ದಂತೆ ಎಲ್ಲ ಮೆಲುದನಿಗಳ ಅಡಗಿಸುವ ಒಂದು ಕಂಚಿನ ಕಂಠ ಮೊಳಗಿತು.“ಮೇರಾ ನಾಮನ ಸಾಗರ್,ಅಬ್ ಚಲೆ ನೌಕಾವಿಹಾರ್” ಯಾರದೀ ದನಿ ಎಂದು ಎಲ್ಲ ತಿರುಗಿದಾಗ ಅದು ಹುಟ್ಟು ಹಾಕುತ್ತಿದ್ದ ಅಂಬಿಗನ ದನಿ ಎಂದು ತಿಳಿಯಿತು. ದೋಣಿ ನಡೆಸುತ್ತಲೇ ಮಾರ್ಗದರ್ಶಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದ.
ಮೈಕಾಲ ಬೆಟ್ಟಗಳ ತಪ್ಪಲಿನ ಅಮರಕಂಟಕದಲ್ಲಿ ಉಗಮ ಗೊಳ್ಳುವ ನರ್ಮದಾ ನದಿ ರೇವಾ ನದಿ ಎಂದೂ ಹೆಸರು ಪಡೆದಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ಉದ್ದಕ್ಕೂ ಹರಿದು, ಗುಜರಾತಿನ ಕುಂಭತ್ ಕೊಲ್ಲಿಯಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಹರಿಯುವ ಹಾದಿಯಲ್ಲಿ ನರ್ಮದಾ ನದಿಯು ಧುವಾಧಾರ, ದೂದ್ ಧಾರಾ, ಕಪಿಲಧಾರಾ ಜಲಪಾತಗಳನ್ನು ನಿರ್ಮಿಸುತ್ತದೆ. ಸರ್ದಾರ್ ಸರೋವರ ಹಾಗೂನರ್ಮದಾ ಸಾಗರ್ ಅಣೆಕಟ್ಟು ನಿರ್ಮಾಣಕ್ಕೂ ಕಾರಣವಾಗಿರುವ ಜೀವದಾಯಿನಿ ನರ್ಮದಾ ನದಿ ಬಗ್ಗೆ ಇಂಥ ಉಪಯುಕ್ತ ವಿಷಯಗಳನ್ನು ಲಯಬದ್ಧ ವಾದ ಶಾಯಿರಿಗಳ ರೂಪದಲ್ಲಿ ತಿಳಿಸಿಕೊಟ್ಟ. ಪ್ರಯಾಣದುದ್ದಕ್ಕೂ ಕಂಡ ದೃಶ್ಯಗಳ ಬಗ್ಗೆ ಆಕರ್ಷಕ ಶೈಲಿಯಲ್ಲಿ ವಿವರಿಸಿದ.
ಇದ್ದಕ್ಕಿದ್ದಂತೆ ಹಾಥಿ ದೇಖೋ ಹಾಥಿ ಎಂದು ಉದ್ಗರಿಸಿದ. ಇದೆಲ್ಲಪ್ಪ ನೀರಿನ ಮಧ್ಯೆ ಆನೆ ಎಂದು ಅಚ್ಚರಿಯಿಂದ ಅವನು ತೋರಿಸಿದತ್ತ ನೋಡಿದಾಗ ನದಿ ಮಧ್ಯೆ ಆನೆ ಮಲಗಿದಂತೆ ಕಾಣುತ್ತಿದ್ದ ಬಂಡೆ. ಮುಂದೆ ಫಿಫಾ ಕಪ್ ಎಂದು ಎಡಬದಿಯತ್ತ ಗಮನ ಸೆಳೆದ. ಎತ್ತರವಾದ ಬಂಡೆಯೊಂದು ವಿಶ್ವ ಫುಟ್ಬಾಲ್ ಪ್ರಶಸ್ತಿ ಫಿಪಾ ಕಪ್ ಆಕಾರದಲ್ಲಿ ಕೊರೆತಗೊಂಡಿತ್ತು. ನೀಲಿ, ಹಳದಿ, ಬಿಳಿ ಅಮೃತ ಶಿಲೆಗಳ ಮಧ್ಯೆ ದಪ್ಪ ಗೆರೆಗಳ ವಿನ್ಯಾಸ ತೋರಿಸಿ,ವಿಮಲ್ ಸೀರೆ ಇಂಥ ಡಿಸೈನ್ ನಲ್ಲಿ ಬರುತ್ತಿತ್ತು, ನಿಮ್ಮ ಹತ್ತಿರ ಇದೆಯೇ ಎಂದು ಅಲ್ಲಿದ್ದ ಹೆಂಗಸರಿಗೆ ತಮಾಷೆಯಾಗಿ ಪ್ರಶ್ನಿಸಿದ.
ಸಾಗರ್ ಅಲ್ಲಿ ನಡೆದಿರುವ ಸಿನಿಮಾ ಶೂಟಿಂಗ್ ಗಳ ಒಂದು ಯಾದಿಯನ್ನೇ ಕೊಟ್ಟು ಬೇಲಾಘಾಟಿನ ಜನಪ್ರಿಯತೆ ಸಾರಿದ. ಈಗ ಡಬ್ಬಿಂಗ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತದ ಮೊದಲಿನ ದೃಶ್ಯಗಳು ಇಲ್ಲೇ ಚಿತ್ರೀಕರಣವಾಗಿತ್ತಂತೆ. ಜಿಸ್ ದೇಶ್ ಮೆ ಗಂಗಾ ಬಹತಿ ಹೈ ಚಿತ್ರದ ಒಂದು ಹಾಡು ಈ ನರ್ಮದೆಯ ಮಡಿಲಲ್ಲೇ ಚಿತ್ರೀಕರಣವಾಯಿತಂತೆ. ಅಶೋಕ, ಖೂನ್ ಭರಿ ಮಾಂಗ್ ಹೀಗೆ ಚಿತ್ರದ ಹೆಸರುಗಳನ್ನು ಹೋಟೆಲ್ ಮಾಣಿ ತಿಂಡಿಗಳ ಪಟ್ಟಿ ನೀಡುವಂತೆ ವದರಿದ. ಪ್ರಾಣ್ ಜಾಯೆ ಪರ್ ವಚನ್ ಜಾಯೆ ಚಿತ್ರೀಕರಣದ ಸ್ಥಳ ಬಂದಾಗ “ಇದರ್ ರಹೀ ಥಿ ರೇಖಾ, ಪ್ರೇಮ ನಾಥ್ ನೆ ದೇಖಾ, ಸಾಲಾ ದೇ ದಿಯಾ ದೋಖಾ” ಎಂದು ಎಂದಿನಂತೆ ಲಯಬದ್ಧವಾಗಿ ವಿವರಿಸಿದ.
ಒಂದು ಹಂತದಲ್ಲಿ ದೋಣಿ ವಾಪಸು ತಿರುಗಿಸಿದ. ಏಕೆ ಎಂದು ಯಾರೋ ಕೇಳಿದಾಗ ಇಲ್ಲಿಂದ ಮುಂದೆ ಯಾರಾದರೂ ಹೋದವರ ಸಾವಿನ ಸುದ್ಧಿಯನ್ನು ಬೆಳಿಗ್ಗೆ ಅವರ ಮನೆಯವರು ಚಹಾ ಜತೆ ಓದಬೇಕಾಗುತ್ತದೆ ಎಂದು ಅದೇ ಶಾಯಿರಿ ರೂಪದಲ್ಲೇ ಎಚ್ಚರಿಸಿದ.
ದೋಣಿಯ ಹುಟ್ಟು ಹಾಕುವ ಶಬ್ಧ, ಬಾಯಿಸೋಲದೆ ಅವನು ಆಡುತ್ತಿದ್ದ ಶಾಯಿರಿಗಳು ಎರಡೂ ನೌಕಾವಿಹಾರಕ್ಕೆ ಒಂದು ಮಧುರವಾದ ಸಾಂಗತ್ಯ ಒದಗಿಸಿತ್ತು. ದೋಣಿ ಮತ್ತೆ ದಡಕ್ಕೆ ಬಂದಾಗ ಅಬ್ ಸಮಾಪ್ತ್ ಹುವಾ ನೌಕಾವಿಹಾರ್ ಗೈಡ್ ಕೋ ದೇ ಉಪಹಾರ್ ಎಂದು ಶಾಯಿರಿಯಲ್ಲೇ ಟಿಪ್ಸ್ ಕೋರಿದ. ನಾನು ಅವನಿಗೆ ಐವತ್ತು ರೂ. ಕೊಟ್ಟು ಧನ್ಯವಾದ ಹೇಳಿದೆ. ಸಂತೋಷದಿಂದ ಬೀಳ್ಕೊಟ್ಟ. ಬೆಳಗಿನಿಂದ ಎಷ್ಟು ಬಾರಿ ಹೋಗಿ ಬಂದಿದ್ದರೋ ಈ ಅಂಬಿಗರು.? ಸಾಯಂಕಾಲದಲ್ಲೂ ಅದೇ ಉತ್ಸಾಹ, ದನಿ ಸೋಲದ ಛಲ. ಈ ಕಾಯಕಯೋಗಿಗಳ ಕಂಡು ಹೃದಯ ತುಂಬಿ ಬಂತು.
ಪ್ರವಾಸಿಗಳೇ ಇಲ್ಲದಂಥ ಈ ದುಷ್ಕಾಲದಲ್ಲಿ ದೋಣಿ ವಿಹಾರದಲ್ಲೇ ಅನ್ನ ಸಂಪಾದಿಸುತ್ತಿದ್ದ ಆ ಯುವಕರ ದುಸ್ಥಿತಿ ನೆನೆಸಿಕೊಂಡಾಗಲೆಲ್ಲ ದುಗುಡವಾಗುತ್ತದೆ. ಯಾವ ಕಟುಕನ ಸೃಷ್ಟಿಯೋ ಏನೋ ಈ ಮಹಾಮಾರಿ ಪ್ರವಾಸೋದ್ಯಮವನ್ನೇ ಕತ್ತು ಹಿಚುಕಿ ಕೊಂದಿದೆ.
-ಕೆ ಎನ್ ಮಹಾಬಲ
ಸೊಗಸಾಗಿದೆ ಸರ್.
ಧನ್ಯವಾದ
ಸುಪರ್ ದೋಣಿ ವಿಹಾರ.ಸರ್.ನನಗೂಹೋದಂತೆ.ಭಾಸವಾಯಿತು
ಸೊಗಸಾದ ದೋಣಿವಿಹಾರದ ಚಂದದ ನಿರೂಪಣೆ. ನಿಮ್ಮೊಂದಿಗೆ ನಮ್ಮ ವಿಹಾರವೂ ಆದಂತೆನಿಸಿತು….ಧನ್ಯವಾದಗಳು ಸರ್.
ಧನ್ಯವಾದ
ಧನ್ಯವಾದ
ನಿಮ್ಮ ಪ್ರವಾಸ, ದೋಣಿವಿಹಾರದ ಅನುಭವ ಬಹಳ ಚೆನ್ನಾಗಿತ್ತು.