ಪ್ರವಾಸ ಪ್ರಯಾಸವಾಗದಿರಲಿ
“ಕಣ್ಣಾರೆ ನೀ ನೋಡು ಕನ್ನಡ ಸೀಮೆ, ಮನಸಾರೆ ಕೊಂಡಾಡು ಈ ತಾಯ ಹಿರಿಮೆ”.- ಈ ಕವಿಸಾಲುಗಳು ಎಷ್ಟೊಂದು ಅದ್ಭುತ!. “ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಮಾತು ಕೂಡ ಇದೆ. ಪ್ರವಾಸ ಹೋಗುವುದು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?. ನಾವು ಬಾಲ್ಯದಲ್ಲಿದ್ದಾಗ ನಮ್ಮ ತಂದೆ ನಗರ ಪ್ರದೇಶದ ಕಡೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದಾಗ ರಾತ್ರಿ ನಿದ್ದೆ ಮಾಡುತ್ತಿರಲಿಲ್ಲ!. ಎಷ್ಟೊತ್ತಿಗೆ ಬೆಳಗ್ಗೆ ಆಗುತ್ತೆ ಎಂದು ಕಾಯುತ್ತಿದ್ದೆವು. ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ ನಾವು ಇದ್ದುದ್ದರಿಂದ ನಗರ ಪ್ರದೇಶಕ್ಕೆ ಹೋಗುವುದು ಎಂದರೆ ಎಲ್ಲಿಲ್ಲದ ಸಡಗರ ಸಂಭ್ರಮ!. ದೊಡ್ಡ-ದೊಡ್ಡ ಕಟ್ಟಡಗಳು, ಬಸ್ಸಲ್ಲಿ ಹೋಗುವುದು, ಹೋಟೆಲ್ ರುಚಿ ಏನಾದರೊಂದು ಖರೀದಿಸಿ ಕೊಡುತ್ತಾರೆ ಎಂಬ ಸಣ್ಣ ಆಸೆ. ಹೀಗೆ ಇತ್ಯಾದಿ ಇತ್ಯಾದಿ ಇವೆಲ್ಲವನ್ನೂ ಮನದುಂಬಿಸಿ, ಕಣ್ತುಂಬಿಸಿಕೊಳ್ಳುವ ಆಸೆ.
ಆಗ ನಮಗೆ ಪ್ರವಾಸ ಹೋಗಲು ಸಿಗುತ್ತಿದ್ದ ಅವಕಾಶಗಳೇ ಕಡಿಮೆ. ಅದೇನಿದ್ದರೂ ಅಜ್ಜಿಮನೆಗೆ, ಸೋದರತ್ತೆ ಮನೆಗೆ ಮಾತ್ರ. ಅದರಲ್ಲೂ ದೂರದ ಸಂಬಂಧಗಳು ತೀರ ಕಡಿಮೆ ಇದ್ದವು. ಒಟ್ಟು ಕುಟುಂಬದ ಪರಿಕಲ್ಪನೆಯಲ್ಲಿ ಅಲ್ಲಲ್ಲೇ ಮದುವೆಗಳು ಆಗುತ್ತಿದ್ದರಿಂದ ಕನಿಷ್ಠ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಮ್ಮ ಜೀವನ ಸಾಗುತ್ತಿತ್ತು.
ಆದರೆ ಈಗ ಎಲ್ಲ ಎಲ್ಲೆಗಳನ್ನು ಮೀರಿ ಮಾನವನ ನಾಗಲೋಟದ ಬದುಕು ನಿರಂತರವಾಗಿ ಪ್ರವಾಸದತ್ತ ಸಾಗುತ್ತಿದೆ. ಪರಿಕಲ್ಪನೆಗಳ ಮೂಲಕ ಸ್ಪಷ್ಟ ಗುರಿಯ ಮೂಲಕ ಸಾಗುತ್ತಿದೆ ಜೀವನ ಬಂಡಿ. ಒಂದರ್ಥದಲ್ಲಿ ನಮಗೆ ನಮ್ಮ ಬಾಲ್ಯವೇ ಚಂದ. ಅದನ್ನು ಮೀರಿಸುವ ಮತ್ತೊಂದು ಇದುವರೆಗೂ ಯಾವುದೂ ಕೂಡ ಸಿಗುವುದಿಲ್ಲ. ಶಾಲೆಯಿಂದ ಶಿಕ್ಷಕರು ಪ್ರವಾಸ ಕೈಗೊಳ್ಳುತ್ತಿದ್ದರು. ಆ ಪ್ರವಾಸಕ್ಕೂ ಕೂಡ ಕೆಲವು ತಂದೆತಾಯಿಗಳು ಮಕ್ಕಳನ್ನು ಹೆದರಿಕೆಯಿಂದ ಕಳಿಸುತ್ತಿರಲಿಲ್ಲ. ಆದರೆ ನಮ್ಮ ಮಕ್ಕಳ ಪಾಲಿಗೆ ವಾತಾವರಣದಲ್ಲಿ ಆಧುನಿಕತೆಯ ಸ್ಪರ್ಶ ಅಡಗಿದೆ.
ಈಗಿನ ಮಕ್ಕಳಿಗೆ ಪ್ರವಾಸ ಎಂದರೆ ಹೋಗಲು ದಿನಾನೂ ರೆಡಿ. ಸೌಕರ್ಯಗಳು ಅಷ್ಟೊಂದು ಇವೆ. ಸ್ನೇಹಿತರ ಜೊತೆಗೆ ಪ್ರವಾಸಮಾಡಿ ಬರುವುದೇ. ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಒಂದು ದಿನದ ಮಟ್ಟಿಗೆ ಎಂಜಾಯ್ ಮಾಡಿಕೊಂಡು ಬರುತ್ತಾರೆ. ಹಿಂದೆ ನಡೆದು ಪ್ರವಾಸ ಕೈಗೊಳ್ಳುವ ಕಾಲವೊಂದಿತ್ತು. ನಂತರದ ದಿನಗಳಲ್ಲಿ ಎತ್ತಿನಗಾಡಿಯನ್ನು ಅವಲಂಬಿಸಿದ್ದು, ಬರುಬರುತ್ತಾ ಸೈಕಲ್ನಲ್ಲಿ ಹೆಚ್ಚಿನ ಪ್ರವಾಸ ಮಾಡಿದವರು ಉಂಟು. ಸೈಕಲ್ ಬಡವರ ಸವಾರಿ ಆಗಿತ್ತು. ಬರುಬರುತ್ತಾ ಬಸ್ಸಿನಲ್ಲೋ, ರೈಲಿನಲ್ಲೋ ಹೋಗುತ್ತಿದ್ದ ಕಾಲ ಮುಗಿದುಹೋಗಿದೆ. ಇನ್ನೇನಿದ್ದರೂ ಈಗ ಸ್ವತಹ ತಮ್ಮ ತಮ್ಮ ವಾಹನಗಳಲ್ಲಿ ಪ್ರವಾಸ ಮಾಡುವುದು ಒಂದು ದಿನಚರಿಯಾಗಿದೆ. ಮತ್ತಷ್ಟು ಮಗದಷ್ಟು ಹಣವುಳ್ಳವರು ಹೀಗೆ ಹೋಗಿ ಹಾಗೆ ಬಂದುಬಿಡುತ್ತಾರೆ!
ದಿನಪೂರ್ತಿ, ವಾರಪೂರ್ತಿ ಬರೀ ಪ್ರಯಾಣದಲ್ಲಿ ಸಮಯ ಕಳೆಯುತ್ತಿದ್ದ ನಮಗೆ ಈಗ ವಿಮಾನ ಬಂದಿದೆ. ಒಂದು ದಿನದಲ್ಲೇ ಸಾವಿರಾರು ಮೈಲಿಗಳಷ್ಟು ದೂರ ಪಯಣಿಸಿ ವಾಪಸ್ ಬರಬಹುದು. ಹೀಗೆಲ್ಲಾ ಪ್ಯಾಕೇಜ್ ಯುಗ. ಪ್ರವಾಸದ ಹಣ ಹೊಂದಿಸಿಕೊಂಡು ಕಟ್ಟಿದರೆ ಮುಗಿಯಿತು. ಊಟ-ವಸತಿ ಪ್ರಯಾಣ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಕಾಸಿದ್ರೆ ಕೈಲಾಸ!
ನಿಜಕ್ಕೂ ಈ ಪ್ರವಾಸ ಇದೆಯಲ್ಲ ಅದು ಭಾವನೆಗಳ ಸಂಗಮ, ಹೃದಯಂಗಮ. ನಾಲ್ಕು ಗೋಡೆಗಳ ಮಧ್ಯದಲ್ಲಿ ಇರುತ್ತಿದ್ದ ನಮಗೆ ಮಾನವಸಂಸ್ಕೃತಿ ನಾಗರಿಕತೆಯನ್ನು ಪಡೆದುಕೊಂಡು, ಈಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಾ ಆಯಾ ಸ್ಥಳಗಳಲ್ಲಿ ಸಂಸ್ಕೃತಿ, ಜಾನಪದ ವೇಷಭೂಷಣ, ಮುಖ್ಯವಾಗಿ ಅಲ್ಲಿನ ಬದುಕು-ಬವಣೆ, ನೋವು ನಲಿವು, ಸುಖ ದುಃಖ, ಒಟ್ಟಾರೆ ನಾಗರಿಕತೆಯ ಸ್ಪರ್ಶವನ್ನು ಅನುಭವಿಸುತ್ತಾನೆ.
ಪ್ರವಾಸದಿಂದ ವಿವಿಧ ಬುಡಕಟ್ಟು ಸಂಸ್ಕೃತಿ ವೈವಿಧ್ಯತೆ ಕಾಣಸಿಗುತ್ತದೆ. ಯಾವುದೇ ಸೌಕರ್ಯಗಳಿಲ್ಲದ ಕಾಲದಲ್ಲೇ ಪ್ರವಾಸ ಒಂದು ರೀತಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಈಗ ಅಂತಹ ಪ್ರವಾಸಕ್ಕೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದರ ಮೂಲಕ ಆಧುನಿಕತೆಯ ಸ್ಪರ್ಶ ನೀಡುವುದರ ಜೊತೆಗೆ ಎಲ್ಲರನ್ನೂ ಆಯಾ ಕೇಂದ್ರಗಳಿಗೆ ಸೆಳೆಯುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ರೂಪಿತವಾಗುತ್ತಿದೆ. ಪ್ರತ್ಯೇಕವಾಗಿ ಪ್ರವಾಸೋದ್ಯಮ ಇಲಾಖೆಯೇ ಮೈತಾಳಿ ನಿಂತಿದೆ. ಇಂತಿಷ್ಟು ಹಣ ಎಂದು ನಿಗದಿಪಡಿಸಿ ರುವುದನ್ನು ನಾವು ಕಟ್ಟಿಬಿಟ್ಟರೆ ಸಾಕು ಊಟ, ವಸತಿ, ಪ್ರಯಾಣ ಎಲ್ಲವೂ ಸಹ ಸರಾಗವಾಗಿ ನಡೆದು ಬಿಡುತ್ತದೆ. ಪ್ರವಾಸೋದ್ಯಮ ಹಲವರಿಗೆ ಜೀವನವನ್ನು, ಜೀವನ ಅಮೃತವನ್ನು ನೀಡಿದೆ. ಹಂತಹಂತವಾಗಿ ಪ್ರವಾಸೋದ್ಯಮ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.
ಮುಖ್ಯವಾಗಿ ನಾವು ಪ್ರವಾಸವನ್ನು ಕೈಗೊಳ್ಳುವಾಗ ಎಷ್ಟು ಎಷ್ಟೊಂದು ಕಾರ್ಯಕ್ರಮವನ್ನು ರೂಪಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ. ಏಕೆಂದರೆ ನಾವು ಪ್ರವಾಸ ಮಾಡುವಾಗ ಏನೆಲ್ಲ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಳ್ಳಬೇಕು ಎಂಬಿತ್ಯಾದಿಗಳ ಬಗ್ಗೆ ಪಟ್ಟಿ ಮಾಡಿಕೊಳ್ಳಬೇಕು. ನಾವು ಪ್ರವಾಸವನ್ನು ಹೋಗಬೇಕೆಂದು ಯೋಜನೆ ಹಾಕಿಕೊಂಡಾಗ ಅದು ಯಾವ ಕಾಲದಲ್ಲಿ ,ಆಯಾ ಸ್ಥಳದಲ್ಲಿ ವಾತಾವರಣ ಹೇಗಿರುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ಆಯಾ ಕಾಲಮಾನಕ್ಕೆ ತಕ್ಕಂತೆ ನಮ್ಮ ವೇಷಭೂಷಣಗಳು ಸಹ ಬದಲಾಗಬೇಕು. ಜೊತೆಗೆ ಆಹಾರ ಪದ್ಧತಿಯೂ ಕೂಡ.
ನಾವು ಪ್ರವಾಸವನ್ನು ಕೈಗೊಳ್ಳುವಾಗ ನಮ್ಮ ಪ್ರವಾಸದ ತಂಡದಲ್ಲಿ ವಯಸ್ಕರು ಎಷ್ಟು ಮುಂದೆ ಇದ್ದಾರೆ, ಮಕ್ಕಳು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಕೂಡ ಪಟ್ಟಿ ಮಾಡಿಕೊಂಡು ಅವರಿಗೆ ತಕ್ಕುದಾದ ವಾತಾವರಣವನ್ನು ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು.
ಪ್ರವಾಸದ ಜೊತೆಯಲ್ಲಿ ಔಷಧಿ ಉಪಕರಣಗಳ ಕಿಟ್ ನಮ್ಮ ಬಳಿ ಸದಾ ಇರಲೇಬೇಕು ಇರಲೇಬೇಕು. ನಮ್ಮ ಪ್ರವಾಸದ ಲಗೇಜ್ ಎಷ್ಟು ಚಿಕ್ಕದಾಗಿರುತ್ತದೆ ಅದರ ಮೇಲೆ ನಮ್ಮ ಪ್ರವಾಸ ಚೊಕ್ಕವಾಗಿ ಸಾಗುತ್ತದೆ. ಮುಖ್ಯವಾಗಿ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಆದ್ಯತೆ, ಜೊತೆಗೆ ನಮ್ಮ ಆಹಾರ ಪದ್ಧತಿಗಳ ಬಗ್ಗೆ ಆದ್ಯತೆ ನೀಡಬೇಕು.
ನಾವು ಎಲ್ಲಿಗೆ ಪ್ರವಾಸವನ್ನು ಕೈಗೊಂಡಾಗ ಆಯಾ ಸ್ಥಳದ ಗೈಡ್ಗಳು ಇದ್ದೇ ಇರುತ್ತಾರೆ. ಅವರ ನೆರವನ್ನು ಪಡೆಯಬೇಕು. ಇದರಿಂದಾಗಿ ಅವರ ಜೀವನವು ಕೂಡ ಸಾಗುತ್ತದೆ. ನಾವು ಪ್ರವಾಸವನ್ನು ಎಲ್ಲಿಂದ ಪ್ರಾರಂಭಿಸಬೇಕು? ಎಲ್ಲಿಗೆ ಅಂತಿಮಗೊಳಿಸಬೇಕು? ಜೊತೆಗೆ ಒಂದು ದಿನದಲ್ಲಿ ಎಲ್ಲಾ ಪ್ರವಾಸಿತಾಣಗಳನ್ನು ನಾವು ನೋಡಬಹುದಾ? ಎಂದು ಮುಂದಾಲೋಚನೆ ಮಾಡಿಕೊಳ್ಳಬೇಕು. ಸ್ಥಳಗಳನ್ನು ನೋಡಿಕೊಂಡು ಒಂದು ದಿನಹೆಚ್ಚಾದರೂ ಪರವಾಗಿಲ್ಲ ನಮ್ಮ ದೀರ್ಘಕಾಲದ ಪ್ರವಾಸವನ್ನು ಮುಗಿಸಬಹುದು.
ನಾವು ವಾಹನಗಳಲ್ಲಿ ಪ್ರವಾಸ ಕೈಗೊಳ್ಳುವಾಗ ವಾಹನದಿಂದ ಕೆಳಗೆ ಇಳಿದು ಸ್ಥಳಗಳ ವೀಕ್ಷಣೆಯ ಮಾಡುವ ನೆಪದಲ್ಲಿ ವಯಸ್ಸಾದವರನ್ನು, ಮಕ್ಕಳನ್ನು, ಅನಾರೋಗ್ಯ ಪೀಡಿತರನ್ನು ಮರೆಯಬಾರದು. ಅವರ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು. ನಾವು ಹೋಗುವ ಯಾವುದೇ ಸ್ಥಳದ ಕಡೆ ವೀಕ್ಷಿಸುವಾಗ ಮುನ್ನೆಚ್ಚರಿಕೆ ವಹಿಸಲೇಬೇಕು. ಈಗಲಂತೂ ಮೊಬೈಲ್ ಯುಗ. ಜೊತೆಗೆ ಸೆಲ್ಫಿ ಯುಗ! ಅದರಲ್ಲೂ ಹದಿಹರೆಯದವರ ಕೈಯಲ್ಲಿ ಮೊಬೈಲ್ ಬಂದರೆ ಮಂಗನಿಗೆ ಮಾಣಿಕ್ಯ ಕೊಟ್ಟಂತೆ!. ಪ್ರಪಂಚದ ಪರಿವೇ ಇರುವುದಿಲ್ಲ. ಯಾವುದೋ ಒಂದು ಲೋಕದಲ್ಲಿ ಮುಳುಗಿ ಬಿಟ್ಟಿರುತ್ತಾರೆ. ಫೋಟೋಗಳನ್ನು ತೆಗೆದು ಕೊಳ್ಳುವ ನೆಪದಲ್ಲಿ ಅಪಾಯದ ಸ್ಥಳಗಳಲ್ಲೂ ಸಹ ತಮ್ಮ ಪ್ರಾಣದ ಹಂಗನ್ನು ತೊರೆದು ಫೋಟೋ ಕ್ಲಿಕ್ಕಿಸುವ ಸಾಹಸವನ್ನು ಎಂದೂ ಕೂಡ ನಾವು ಮಾಡಬಾರದು. ಒಮ್ಮೆ ನಮ್ಮ ಜೀವನವನ್ನು ಕಳೆದುಕೊಂಡರೆ ಅದು ಮರಳಿಬಾರದು. ಜೊತೆಗೆ ಅಂತಹ ಪ್ರವಾಸ ಕಹಿ ಘಟನೆಯಾಗಿ ಪರಿಣಮಿಸುತ್ತದೆ.
ನೀರಿನ ಸ್ಥಳಗಳಿಗೆ ಹೋದಾಗ ಅಲ್ಲಿ ಸ್ಥಳಗಳನ್ನು ಭೇಟಿ ಮಾಡಿ, ನೀರಿನ ಆಳ ಅಗಲದ ಬಗ್ಗೆ ತಿಳಿದುಕೊಂಡು, ಅಲ್ಲಿನ ಮಾರ್ಗಸೂಚಿಗಳನ್ನು ಓದಿಕೊಂಡು, ಅದರಂತೆ ಸದಾ ಜಾಗೃತರಾಗಿರಬೇಕು. 2 ಅಥವಾ 3 ವಾಹನಗಳಲ್ಲಿ ಹೋದಾಗ ಪರಸ್ಪರ ಬಾಜಿ ಮಾಡುವ ಪ್ರವೃತ್ತಿಯನ್ನು ಖಂಡಿತ ಬಿಡಬೇಕು. ನಿಧಾನವೇ ಪ್ರಧಾನವಾಗಬೇಕು. ದಾರಿಯಲ್ಲಿ ಸಿಕ್ಕ ಸಿಕ್ಕ ಪದಾರ್ಥಗಳನ್ನು ತಿನ್ನಲೇಬಾರದು. ರುಚಿಯಾದ, ಶುಚಿಯಾದ ಆಹಾರ ಪದಾರ್ಥಗಳು ಎಲ್ಲಿ ಸಿಗುತ್ತದೆ ಎಂಬುದನ್ನು ಕೂಡ ನಮ್ಮ ಪ್ರವಾಸದ ಮಾರ್ಗ ಪಟ್ಟಿಯಲ್ಲಿ ಅಳವಡಿಸಿಕೊಂಡಿರಬೇಕು.
ರಾತ್ರಿಯ ವೇಳೆ ಖಂಡಿತ ನಮ್ಮ ಪ್ರಯಾಣವನ್ನು ಯಾವುದೇ ಕಾರಣಕ್ಕೂ ಮುಂದುವರಿಸ ಬಾರದು. ಎಲ್ಲಿಯಾದರೂ ಒಂದು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡು ನಂತರವೇ ಪ್ರಯಾಣವನ್ನು ಮುಂದುವರಿಸಬೇಕು. ಇನ್ನೂ ನಾವು ಯಾವುದೇ ಕಡೆಗೆ ಪ್ರವಾಸ ಕೈಗೊಂಡರೂ, ಆಯಾ ಸ್ಥಳಗಳ, ಮಾರ್ಗಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡು ನೋಡಿದ ಸ್ಥಳಗಳನ್ನೆಲ್ಲಾ ಒಂದೆಡೆ ಬರೆದುಕೊಳ್ಳಬೇಕು. ಅವೆಲ್ಲ ಮಾಹಿತಿ ಮುಂದಿನ ಪ್ರವಾಸ ಮಾಡಲು ಅನುಕೂಲವಾಗುತ್ತದೆ.
ಈಗಲಂತೂ ತಂತ್ರಜ್ಞಾನ ಬೆಳೆದಂತೆ ಪ್ರವಾಸ ಸ್ಥಳಗಳು ಅವುಗಳ ಮಾರ್ಗಗಳನ್ನು ನೋಡುವಂತಿಲ್ಲ. ಕ್ಷಣಾರ್ಧದಲ್ಲೇ ನಮಗೆ ಎಲ್ಲವೂ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಪ್ರವಾಸ ಸ್ಥಳಗಳು ಇರಬಹುದು, ಮಾರ್ಗಗಳ ಬಗ್ಗೆ ಇರಬಹುದು, ಎಲ್ಲವೂ ಕೂಡ ಸುಲಿದ ಬಾಳೆ ಹಣ್ಣಿನಂತೆ ಸುಗಮ.
ನಾವು ಯಾವುದೇ ಪ್ರವಾಸ ಸ್ಥಳಕ್ಕೆ ಹೋದರೆ ಅಲ್ಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅದು ಮೊದಲು ಹೇಗಿತ್ತು ಅದೇ ರೀತಿ ಆ ಸ್ಥಳವನ್ನು ಬಿಟ್ಟು ಬರಬೇಕು. ಕಾಡು ಪ್ರದೇಶಗಳ ಅಲ್ಲಿನ ಪ್ರಾಣಿ-ಪಕ್ಷಿಗಳ ಜೀವಕ್ಕೆ ಯಾವುದೇ ರೀತಿಯಲ್ಲಿ ಹಾನಿಯನ್ನು ಉಂಟು ಮಾಡದೆ, ಅವುಗಳನ್ನು ಅವುಗಳ ಇಷ್ಟಕ್ಕೆ ಬಿಡಬೇಕು ಪ್ರಾಣಿಗಳ ಅಕ್ಕಪಕ್ಕದಲ್ಲಿ ನಿಂದು ಫೋಟೋ ತೆಗೆಯುವ ಹುಚ್ಚು ಸಾಹಸ ಮಾಡಬಾರದು.
ನಮ್ಮ ಧಾರಾಳತನ ನೋಡಿ ಹಣ ಸುಲಿಯುವವರು ಕೂಡ ಇದ್ದೇ ಇರುತ್ತಾರೆ ಎಚ್ಚರಿಕೆವಹಿಸಬೇಕು. ರಾಜ್ಯದ ಪ್ರವಾಸದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಅಲ್ಲವೇ ವಿದೇಶ ಪ್ರವಾಸ ಮಾಡುವವರು ಅದಕ್ಕೆ ತಕ್ಕದಾದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಒಟ್ಟಿನಲ್ಲಿ ನಾವು ಪೂರ್ವ ಸಿದ್ಧತೆಯೊಂದಿಗೆ ಪ್ರವಾಸವನ್ನು ಕೈಗೊಂಡಿದ್ದೆ ಆದಲ್ಲಿ ಅದು ಅದು ಯಶಸ್ಸು ಪಡೆಯುತ್ತದೆ. ಆದರೂ ಕೂಡ ಪ್ರವಾಸದ ಸಮಯದಲ್ಲಿ ನಾವು ಆಯಾ ಸ್ಥಳಗಳ ಬಗ್ಗೆ ಯಾವ ರೀತಿಯಲ್ಲಿ ಆಸಕ್ತಿ ವಹಿಸುತ್ತೇವೆ ಅದರ ಮೇಲೆ ಅವಲಂಬಿತವಾಗಿರುತ್ತದೆ. ಅದರಿಂದ ಪ್ರವಾಸದ ಸಮಯದಲ್ಲಿ ನಾವು ಪ್ರಕೃತಿಯೊಂದಿಗೆ, ಸ್ಥಳಗಳೊಂದಿಗೆ ಸಂಭಾಷಣೆಯನ್ನು ಮಾಡುವಂತಿರಬೇಕು.
ಕಳೆದ ಭಾನುವಾರವಷ್ಟೇ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಿದ್ದೇವೆ. ಈ ಕೊರೊನಾ ಸಂದರ್ಭದಲ್ಲಿ ಪ್ರವಾಸ ಮಾಡುವುದು ಕೂಡಾ ಕಷ್ಟ. ಆದರೂ ಕೂಡ ನಾವು ಹಿಂದೆ ಹೋಗಿರುವ ಪ್ರವಾಸದ ನೆನಪುಗಳನ್ನು ಮನದಲ್ಲಿ ನೆನಪಿಸಿಕೊಳ್ಳೋಣ. ಎಲ್ಲರಿಗೂ ಶುಭಾಶಯಗಳು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಚೆನ್ನಾಗಿದೆ
Very nice article
ಪ್ರವಾಸ ಕೈಗೊಳ್ಳುವ ಮೊದಲ ತಯಾರಿಯ ಕುರಿತಾದ ಬರಹ, nice one. ಸಧ್ಯದ ಪರಿಸ್ಥಿತಿಯಲ್ಲಂತೂ ಪ್ರವಾಸ ಕನಸಿನ ಮಾತೇ ಸರಿ
ಪ್ರವಾಸದ ಬಗ್ಗೆ ಚಿಕ್ಕಂದಿನಲ್ಲಿ ತಮಗಿದ್ದ ಆಸೆ. ಕುತೊಹಲ ಆಗ ಇದ್ದ ಸಂಚಾರ ಮಾರ್ಗ ಗಳು ಅನುಕೂಲ ನಂತರ ಬಂದ ಹೊಸಹೊಸ ಆವಿಷ್ಕಾರ ಗಳು ಅನುಕೂಲ ಎಲ್ಲಾ ವಿಷಯಗಳತ್ತ ಗಮನ ಹರಿಸುತ್ತಾ ಪ್ರವಾಸ ಹೋಗಬೇಕಾದಾಗ ತೆಗೆದು ಕೊಳ್ಳವ ಎಚ್ಚರಗಳ ಕಡೆ ಲೇಖನ ಮೂಡಿ ಈಗಿನ ಪ್ರಸ್ತುತಿ ಯವರೆಗೆ ಅಚ್ಚುಕಟ್ಟಾಗಿ ಮೂಡಿಬಂದಿದೆ.ಅಭಿನಂದನೆಗಳು ಸಾರ್.
ಸುಪರ್.ಪ್ರವಾಸ.ಕಥನ
ಮನ ಅರಳಿಸುವ ಪ್ರವಾಸದ ಬಗೆಗೆ ಉತ್ತಮ ಪೂರಕ ಮಾಹಿತಿಗಳನ್ನೊಳಗೊಂಡ ಸಕಾಲಿಕ ಲೇಖನ ಚೆನ್ನಾಗಿದೆ.
ನಿಮ್ಮ ಬಾಲ್ಯದ ನೆನಪುಗಳು,ಪ್ರವಾಸದ ಬಗ್ಗೆ ಈಗಿನ ಸುಗಮ ಪ್ರವಾಸ,ಮಾಹಿತಿ ಚೆನ್ನಾಗಿ ಬರೆದು
ದ್ದೀರಿ
ನನ್ನ ಬಾಲ್ಯದ ಪ್ರವಾಸ ತಯಾರಿ. ಪ್ರವಾಸಕ್ಕಿಂತ ಮುಂಚಿನ ತಯಾರಿಯ ಸಂಭ್ರಮವನ್ನು ಚೆನ್ನಾಗಿ ವರ್ಣಿಸಿದ್ದೀರಿ. ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೆ ನಿಮ್ಮ ಸಾಹಿತ್ಯ ಸೇವೆ ಮುಂದುವರೆಯಲಿ. ಶುಭಾಶಯಗಳು.