ಕೂಡು ಕುಟುಂಬ
ಒಂದು ಮನೆಯು ಸ್ವರ್ಗದಂತಾಗಬೇಕೆಂದರೆ, ಮನೆಯವರೆಲ್ಲ ಹೊಂದಿಕೊಂಡು ಸಾಗಬೇಕು. ನಾನು ಎಂಬ ಮನದಲ್ಲಿರುವ ಅಹಂ ಅನ್ನು ಅಳಿಸಿ, ನಾವು ಎಂಬ ಪದದಿಂದ ಸೇತುವೆಯನ್ನು ಕಟ್ಟಬೇಕು. ಮನೆಯವರ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು. ಇಲ್ಲಿ ಜಗಳಕ್ಕಿಂತ ಸ್ನೇಹಕ್ಕೆ ಹೆಚ್ಚು ಬೆಲೆ ನೀಡಿದರೆ, ಸುಂದರವಾದ ಪರಿಸರ ನಿರ್ಮಾಣವಾಗುವುದು. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಮಗಳಂತೆ ಭಾವಿಸಿದರೆ, ಬಂದ ಸೊಸೆಯು ಅತ್ತೆಯನ್ನು ದೇವತೆ ಅಥವಾ ಮಾತೆಯಂತೆ ಕಂಡರೆ, ಇಲ್ಲಿ ಜಗಳ ಎಂಬ ಪದಕ್ಕೆ ಪ್ರವೇಶವೇ ಇರುವುದಿಲ್ಲ. ಇನ್ನು ಉಳಿದ ಸದಸ್ಯರೆಲ್ಲರೂ ಇವರಿಬ್ಬರ ಪ್ರೀತಿ ವಿಶ್ವಾಸಕ್ಕೆ ನೀರೆರೆದು ಪೋಷಿಸುತ್ತಾ ಬಂದರೆ ನಂಬಿಕೆಯಿಂದ ಕುಟುಂಬ ಸ್ವರ್ಗವಾಗುತ್ತದೆ.
ನಾವು ಮನೆಯನ್ನೇ ಮಂತ್ರಾಲಯವನ್ನಾಗಿ ಮಾಡಬೇಕು. ಹುಟ್ಟುತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುತ್ತಾರೆ. ಹೀಗೇಕೆ ? ಒಂದೆ ಮನೆಯಲ್ಲಿ ರಕ್ತ ಹಂಚಿಕೊಂಡು, ಒಬ್ಬ ತಾಯಿಯ ಮಡಿಲಲ್ಲಿ ಮುದ್ದಾಗಿ ಬೆಳೆದವರು, ಆಸ್ತಿಗಾಗಿ, ಅಧಿಕಾರಕ್ಕಾಗಿ, ಮನಸ್ತಾಪ ಮಾಡಿಕೊಳ್ಳುವರು. ಯಾಕೆ ? ಇಲ್ಲಿ ನ್ಯಾಯವಾಗಿ ನಡೆದರೆ ಯಾರಿಗೂ ಸಮಸ್ಯೆಯಾಗಲಾರದಲ್ಲವೆ. ಹೆಚ್ಚು ಹೆಚ್ಚು ಎಂದು ಹುಚ್ಚರಂತಾಗಿ ಬಾಂಧವ್ಯವನ್ನೇ ಕಳೆದುಕೊಂಡರೆ. ನಮ್ಮವರು ಅಂತ ಯಾರಿರುವರು. ದೇವರನ್ನು ನಂಬುತ್ತೇವೆ ಎಂದ ಮೇಲೆ, ಅವನೆಲ್ಲ ನೋಡುತ್ತಿರುತ್ತಾನೆ.ಇಂದು ಮಾಡಿದ ಪಾಪ ಕರ್ಮ ಎರಡನ್ನೂ ನಾವು ಇದೆ ಜನ್ಮದಲ್ಲಿ ಅನುಭವಿಸುತ್ತೇವೆ. ನಾವೇಕೆ ಕಿತ್ತಾಡಬೇಕು. ಹುಚ್ಚು ಕುದುರೆಯನ್ನೇರಿ, ಓಡುತ್ತಿರುವುದೇಕೆ.ಪ್ರೀತಿ ಬಾಂಧವ್ಯದಿಂದ ಎಲ್ಲರೂ ಹೊಂದಿಕೊಂಡು ಹೋದರೆ, ಒಗ್ಗಟ್ಟಿನಿಂದ ಬದುಕಬಹುದಲ್ಲವೆ. ಇದರಿಂದ ಬಲ ಹೆಚ್ಚಾಗಬಹುದಲ್ಲವೆ.
ನಮ್ಮಗಳ ರಕ್ತವೂ ಒಂದೇ ಮನಸ್ಸುಗಳ ಮಾತುಗಳೂ ಒಂದೆ ಇರುವಾಗ, ಕುಟುಂಬದಲ್ಲಿ ಕಲಹ ತಂದಿಡುವವರ ಮಾತನ್ನು ಕೇಳದೆ, ನಮ್ಮವರೊಂದಿಗೆ ನಾವಿರಬೇಕು. ಕುಟುಂಬದ ನೆಮ್ಮದಿಗಾಗಿ ನಂಬಿಕೆಯ ಗೂಡನ್ನು ಕಟ್ಟಬೇಕು. ಪ್ರೀತಿಯ, ಸವಿಯಾದ, ನುಡಿಗಳಿಂದ ಬಾಂಧವ್ಯವನ್ನು ಬೆಸೆಯಬೇಕು. ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಬುದ್ಧಿವಂತ ಸದಸ್ಯರ ಮನವನ್ನು ಅರಿತು, ಮನೆಯ ಏಳ್ಗೆಗೆ ಶ್ರಮಿಸುವ ಜೀವಕ್ಕೆ ಆಸರೆಯಾಗಿ ನಿಲ್ಲಬೇಕು. ಬರುವ ಕಷ್ಟಗಳನ್ನು ಹಂಚಿಕೊಂಡು ನಿಭಾಯಿಸಿ, ಬಂದಿರುವ ಸುಖವನ್ನು ಜೊತೆಯಾಗಿ ಅನುಭವಿಸಿ ನಡೆದಾಗ, ಮನೆಗಳು ಒಡೆಯೊ ಮಾತೆ ಬರುವುದಿಲ್ಲ. ಮನಸ್ಸುಗಳು ಛಿದ್ರಗೊಳ್ಳುವುದಿಲ್ಲ.
ಒಂದು ಕುಟುಂಬಕ್ಕೆ ಹೆಣ್ಣೇ ಆಧಾರ ಎನ್ನುತ್ತಾರೆ. ಕಾರಣ ಹೆಣ್ಣು ಸಂಸಾರದ ಕಣ್ಣು. ಹೌದು ಹೆಣ್ಣು ಮಕ್ಕಳಲ್ಲಿ ತಾಳ್ಮೆ ಹೆಚ್ಚು, ಕ್ಷಮಾ ಗುಣ, ಮಾತೆಯ ಮಮತೆ ತೋರಿದವಳು, ಬುದ್ಧಿವಂತೆ, ಮನೆಯಲ್ಲಿ ಹೆಣ್ಣು ಮಕ್ಕಳು ಹೊಂದಾಣಿಕೆಯಾಗಿದ್ದರೆ, ಗಂಡಸರಲ್ಲಿ ಚೈತನ್ಯ ಮೂಡಿ, ಮತ್ತಷ್ಟು ಬೆಸುಗೆ ಮೂಡುತ್ತದೆ. ಮನೆ ಬೃಂದಾವನದಂತಾಗುತ್ತದೆ. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮನೆಯನ್ನು ಒಡೆಯದಂತೆ ಕಾಪಾಡಿಕೊಂಡರೆ ಕೂಡು ಕುಟುಂಬ ಸ್ವರ್ಗವಾಗುತ್ತದೆ. ನಮ್ಮ ಭಾರತೀಯ ಮಹಿಳೆಯರು ಎಷ್ಟೋ ಜನ ಕೂಡು ಕುಟುಂಬವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಗೌರವಿಸೋಣ. ಅವರಂತೆ ನಾವಾಗೋಣ.
-ಮಧುಮತಿ ಪಾಟೀಲ್ , ಬಳ್ಳಾರಿ.
ಬಾಂಧವ್ಯ ದ ಮಹತ್ವ ಸಾರುವ ಬರಹ.
ಚೆನ್ನಾಗಿದೆಬರಹ
ಕೂಡಿ ಬಾಳಿದರೆ ಸ್ವರ್ಗ ಸುಖ.ನಿಜ.ನಾನು ಅವಿಭಕ್ತ ಕುಟುಂಬದಿಂದ ಬಂದವಳು.ಆ ನೆನಪುಗಳು ಇಂದಿಗೂ ಸವಿ ಸವಿಯಾಗಿದೆ..ಬರಹ ಸೊಗಸಾಗಿದೆ ಧನ್ಯವಾದಗಳು.
ಅವಿಭಕ್ತ ಕುಟುಂಬದ ಹಿರಿಮೆ ಸಾರುವ ಸೊಗಸಾದ ಲೇಖನ.