ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 1       

Share Button

 

ಪ್ರಾಚೀನ ಸಿಂಧೂ ನದಿ ಕಣಿವೆಯ ನಾಗರಿಕತೆಗೆ ಸಾಕ್ಷಿಯಾದ  ‘ಸೌರಾಷ್ಟ್ರ ದೇಶ’ ವು ಇಂದಿನ  ಭಾರತದ ಗುಜರಾತ್ ರಾಜ್ಯದಲ್ಲಿದೆ.  ದ್ವಾಪರದ ಶ್ರೀಕೃಷ್ಣನ ದ್ವಾರಕೆ ಹಾಗೂ ಜ್ಯೋತಿರ್ಲಿಂಗಗಳಿರುವ ಪುಣ್ಯಭೂಮಿ ಗುಜರಾತ್ . ಅಮರ ಸ್ನೇಹಿತ ಸುದಾಮನ ಮಂದಿರವೂ ಅಲ್ಲಿಯೇ ಇದೆ.  ಪೌರಾಣಿಕ ಹಿನ್ನೆಲೆ ಹೊಂದಿದ್ದು, ಪದೇ ಪದೇ ಪರಕೀಯರ ಆಕ್ರಮಣಕ್ಕೆ ತುತ್ತಾಗಿಯೂ, ಪ್ರತಿಬಾರಿಯೂ ಮತ್ತಷ್ಟು ಸೊಗಸಾಗಿ,  ಭಾರತೀಯರ ಸ್ವಾಭಿಮಾನದ ದ್ಯೋತಕವಾಗಿ ಜೀರ್ಣೋದ್ಧಾರಗೊಂಡ ಸೋಮನಾಥ ಕ್ಷೇತ್ರವಿರುವ ಜಾಗವಿದು.  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮಸ್ಥಳ ಹಾಗೂ ಆಶ್ರಮಗಳು ಗುಜರಾತ್ ನಲ್ಲಿವೆ.  2018 ರ ನವೆಂಬರ್ ತಿಂಗಳಲ್ಲಿ ಪ್ರಪಂಚದಲ್ಲಿಯೇ ಅತಿ ದೊಡ್ಡದಾದ ಪ್ರತಿಮೆ ಎಂಬ ಖ್ಯಾತಿ ಗಳಿಸಿದ  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಗುಜರಾತ್ ನಲ್ಲಿ  ಸ್ಥಾಪಿಸಲಾಯಿತು. ಆಸ್ತಿಕರಿಗೆ ಹಾಗೂ ಪ್ರವಾಸಾಸಕ್ತರಿಗೆ, ತಿರುಗಾಟಕ್ಕೆ ಹೊರಡಲು ಇಷ್ಟು ಸಾಕು ತಾನೇ ?

ಇದಕ್ಕೆ ಪೂರಕವಾಗಿ, ದೂರದರ್ಶನದಲ್ಲಿ, ಸಾಂಪ್ರದಾಯಿಕ ಗುಜರಾತಿ ಉಡುಗೆ ತೊಟ್ಟ ಮೇರುನಟ ಅಮಿತಾಭ್ ಬಚ್ಚನ್ ಅವರು, ಕಛ್ ನ ಸಮುದ್ರ ತೀರದಲ್ಲಿ ನಡೆಯುತ್ತಾ, ‘ ಆಪ್ ನೇ ಕಛ್ ನಹಿ ದೇಖಾ ತೋ ಕುಛ್ ನಹಿ ದೇಖಾ ! ಕುಛ್  ದಿನ ತೋ ಗುಜಾರಿಯೇ ಗುಜರಾತ್ ಮೇ ‘ ಎಂದು ಹೇಳುವ   ‘ರಣ್ ಉತ್ಸವದ’ ಜಾಹೀರಾತನ್ನು  ನೋಡಿದಾಗ, ಒಂದು ಬಾರಿ ಕಛ್ ಗೆ ಹೋಗಬೇಕೆಂಬ ಆಸೆ ಗರಿಗೆದರಿತ್ತು.  ನಮ್ಮ ಆಸಕ್ತಿಗೆ ಮೈಸೂರಿನ ಸ್ನೇಹಿತರಾದ ಬಾಲಚಂದ್ರಪ್ಪ, ಶೈಲಜಾ ದಂಪತಿ ಮತ್ತು ಭಾರತಿ ದನಿಗೂಡಿಸಿದರು,

ಈಗಾಗಲೇ ಮುಕ್ತಿನಾಥ ಪ್ರವಾಸದ ಸಂದರ್ಭದಲ್ಲಿ ಪರಿಚಿತರಾಗಿದ್ದ ಬೆಂಗಳೂರಿನ ‘ಟ್ರಾವೆಲ್ಸ್4ಯು’ ಸಂಸ್ಥೆಯವರು ಆಯೋಜಿಸಿದ್ದ ಜನವರಿ 15-25, 2019 ರ ವರೆಗಿನ ಗುಜರಾತ್ ನ  ಭುಜ್ – ಕಛ್  ಪ್ರವಾಸಕ್ಕೆ ಹೆಸರನ್ನು ನೋಂದಾಯಿಸಿದೆವು. ಟ್ರಾವೆಲ್ಸ್4ಯು ಮೂಲಕ ನಮ್ಮ ಟಿಕೆಟ್ ಲಭ್ಯವಾಗಿತ್ತು. ನಮ್ಮ ತಂಡದ ಟೂರ್ ಮ್ಯಾನೇಜರ್ ಆಗಿ ಶ್ರೀ ಮನೋಜ್ ಮತ್ತು ಶ್ರೀ ಗಣೇಶ್ ಬರಲಿರುವರೆಂದು ಗೊತ್ತಾಗಿತ್ತು. ಮೈಸೂರಿನಿಂದ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿ, ಅಲ್ಲಿಂದ ಅಹ್ಮದಾಬಾದ್ ಗೆ ವಿಮಾನದ ಮೂಲಕ ನಾವು ತಲಪಬೇಕಿತ್ತು. ಆಮೇಲೆ 10 ದಿನ  ಟ್ರಾವೆಲ್ಸ್4ಯು ಅವರ ಮಾರ್ಗದರ್ಶನದಲ್ಲಿ ನಾವು ಇರುವುದರಿಂದ ನಿಶ್ಚಿಂತರಾಗಿದ್ದೆವು.   ಅಂತರ್ಜಾಲದಲ್ಲಿ ಸ್ವಲ್ಪ ಹುಡುಕಾಡಿ ರಣ್ ಉತ್ಸವ ಹಾಗೂ  ಹವಾಮಾನದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನಮ್ಮ ಲಗೇಜನ್ನು  ಸಿದ್ದಪಡಿಸಿ, ಜನವರಿ 15 ಆಗುವುದನ್ನು ಕಾಯುತ್ತಿದ್ದೆವು.

PC: Internet

ಆರಂಭ ವಿಘ್ನ..ಟ್ಯಾಕ್ಸಿ ಪ್ರಹಸನ

ಜನವರಿ 15,2019 ರಂದು ಬೆಳಗ್ಗೆ,   ಬೆಂಗಳೂರಿನಿಂದ ಅಹ್ಮದಾಬಾದ್ ಗೆ ಹೋಗಲು 10 ಗಂಟೆಗೆ ಇಂಡಿಗೋ ವಿಮಾನದಲ್ಲಿ ಟಿಕೆಟ್ ಕಾದಿರಿಸಲಾಗಿತ್ತು. ಮೈಸೂರಿನಿಂದ ಮುಂಜಾನೆ  0430 ಗಂಟೆಗೆ ಹೊರಟು, ದಾರಿಯಲ್ಲಿ ಹೋಟೆಲ್ ನಲ್ಲಿ ಉಪಾಹಾರ ಸೇವಿಸಿ, ಒಟ್ಟು ನಾಲ್ಕು ಗಂಟೆಯ ರಸ್ತೆ ಪ್ರಯಾಣದ ಬಳಿಕ, ಸಕಾಲದಲ್ಲಿ ದೇವನಹಳ್ಳಿಯಲ್ಲಿರುವ  ವಿಮಾನನಿಲ್ದಾಣ ಸೇರಲು ಟ್ಯಾಕ್ಸಿ ಬುಕ್ ಮಾಡಿದ್ದೆವು. ಟ್ಯಾಕ್ಸಿಯ ಚಾಲಕನು ಮುನ್ನಾ ದಿನವೇ ನಮ್ಮ ಮನೆಯ ಸಮೀಪ ಬಂದು, ನಾಳೆ ಬೆಳಗಿನ ಜಾವದ ಕತ್ತಲಿನಲ್ಲಿ ಮನೆ ವಿಳಾಸ ಕಂಡುಹಿಡಿಯುವುದು ಕಷ್ಟವಾಗುವುದೆಂದೂ, ತನ್ನ  ಕೆಲಸದ ನಂತರ ರಾತ್ರಿ ನಮ್ಮ ಮನೆಯ ಮುಂದೆ ಬಂದು ಕಾರು ಪಾರ್ಕ್ ಮಾಡಿ ತಾನು ಅದರಲ್ಲಿಯೇ ಮಲಗುವೆನೆಂದೂ  ತಿಳಿಸಿದ್ದ. ನಮ್ಮ ಮನೆಯ ಮಹಡಿಯಲ್ಲಿ ಉಳಕೊಳ್ಳಬಹುದೆಂದು ನಾವು ತಿಳಿಸಿದೆವು. ಟ್ಯಾಕ್ಸಿ ನಮ್ಮ ಮನೆಯ ಮುಂದೆಯೇ ಇದ್ದರೆ ಒಳ್ಳೆಯದೇ ಆಯಿತು, ಅಕಸ್ಮಾತ್ ಸರಿಯಾದ ಸಮಯಕ್ಕೆ ಬರದಿದ್ದರೆ ಎಂಬ ಆತಂಕವಿಲ್ಲ ಎಂದು ಖುಷಿಪಟ್ಟೆವು.

ನಮ್ಮ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ರಾತ್ರಿ ಹನ್ನೆರಡು ಗಂಟೆಯ ವರೆಗೂ ಆಗಾಗ ಟ್ಯಾಕ್ಸಿ ಬಂದಿದೆಯೇ ಎಂದು ಗಮನಿಸುತ್ತಿದ್ದೆ.  ಬಂದಿರಲಿಲ್ಲ. ಮುಂಜಾನೆ ಬರಬಹುದು ಎಂದುಕೊಂಡೆವು. ಆದರೆ  0400 ಗಂಟೆ ಆದರೂ ಟ್ಯಾಕ್ಸಿಯ ಸುಳಿವಿಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿತ್ತು! ಈ ನಡುವೆ ಟ್ಯಾಕ್ಸಿಯ ಮಾಲಿಕರೂ ಹಲವು ಬಾರಿ ಡ್ರೈವರ್ ನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಂತೆ.  ಫೋನ್ ಸ್ವಿಚ್ ಆಫ್ ಆಗಿದ್ದುದರಿಂದ ಅನುಮಾನಗೊಂಡು ಅವರು ನನಗೆ ಕರೆ ಮಾಡಿ  ಕಾರು ಬಂದಿದೆಯೇ ಎಂದು ವಿಚಾರಿಸುತ್ತಿದ್ದರು. ನಿಗದಿತ ಸಮಯದ ಪ್ರಕಾರ ನಾವು ಮುಂಜಾನೆ 0430 ಗಂಟೆಗೆ ಮೈಸೂರು ಬಿಡಬೇಕಿತ್ತು. ಹಲವಾರು ಬಾರಿ ಟ್ಯಾಕ್ಸಿಯ ಸೇವೆ ಪಡೆದಿದ್ದರೂ, ಇದುವರೆಗೆ ಈ ರೀತಿ ಆಗಲಿಲ್ಲ, ವಿಮಾನ ನಿಲ್ದಾಣವನ್ನು ಸಕಾಲದಲ್ಲಿ ಸೇರದಿದ್ದರೆ ನಮ್ಮ ಟಿಕೆಟ್ ಗಳು ವ್ಯರ್ಥವಾಗುವುದೆಂದು ಕಳವಳ ಆರಂಭವಾಯಿತು.

ಆಷ್ಟರಲ್ಲಿ, ಟ್ಯಾಕ್ಸಿಯ ಮಾಲಿಕರು ನಮಗೆ ತೊಂದರೆಯಾಗಬಾರದೆಂದು, ಇನ್ನೊಂದು ಕಾರು ಮತ್ತು ಬೇರೊಬ್ಬ ಡ್ರೈವರ್ ಅನ್ನು ಅಲ್ಪಕಾಲದಲ್ಲಿ ವ್ಯವಸ್ಥೆ ಮಾಡಿ, ನಮಗೆ ಕರೆ ಮಾಡಿ ‘ನಿಮ್ಮನ್ನು 0900 ಗಂಟೆ ಒಳಗೆ ವಿಮಾನ ನಿಲ್ದಾಣಕ್ಕೆ ತಲಪಿಸುವ ಜವಾಬ್ದಾರಿ ನಮ್ಮದು. ಇನ್ನೊಬ್ಬ ಡ್ರೈವರ್ ಅನ್ನು ಎಬ್ಬಿಸಿ ಈಗ ಕಳುಹಿಸುತ್ತೇನೆ. ಅವರಿಗೆ ನಿಮ್ಮ ಮನೆಯ ದಾರಿ ತಿಳಿಸಿ. ಇನ್ನು ಸ್ವಲ್ಪ ಸಮಯದಲ್ಲಿ   ನಿಮ್ಮ ಮನೆಗೆ ಬರುತ್ತಾರೆ’ ಅಂದರು. ನಿಜಕ್ಕೂ ಮಾಲೀಕರು ಮತ್ತು ಇನ್ನೊಬ್ಬ ಡ್ರೈವರ್ ಅವರ  ಕರ್ತವ್ಯನಿಷ್ಠೆ ಶ್ಲಾಘನೀಯ. ಅಂತೂ 0500 ಗಂಟೆಗೆ ಮನೆಗೆ ಟ್ಯಾಕ್ಸಿ ಬಂತು. ನಮ್ಮ ಲಗೇಜುಗಳನ್ನು ಕಾರಿನಲ್ಲಿ  ಜೋಡಿಸಿ,  ಪಕ್ಕದ ರಸ್ತೆಯಲ್ಲಿರುವ  ಬಾಲಚಂದ್ರಪ್ಪ ದಂಪತಿ ಅವರ ಮನೆಗೆ ತಲಪಿದ್ದೆವಷ್ಟೆ.

ಆಷ್ಟರಲ್ಲಿ ಇನ್ನೊಂದು ಕಾರು ಬಂತು! ಹಾಗಾದರೆ ನಾವು ಲಗೆಜುಗಳನ್ನಿರಿಸಿದ ಕಾರು ಯಾವುದು ಎಂಬ ಗೊಂದಲವುಂಟಾಗಿ ಡ್ರೈವರ್‍ ಅನ್ನು ಕೇಳಿದಾಗ, ಆತ  ಮುಂಜಾನೆ 0330 ಗಂಟೆಗೆ ಬರುತ್ತೇನೆಂದು ಹೇಳಿದ ವ್ಯಕ್ತಿಯಾಗಿದ್ದ.  ಈಗ ತಾನೇ ಬಂದ ಇನ್ನೊಂದು ಕಾರು ಬೆಳಗ್ಗೆ ತರಾತುರಿಯಲ್ಲಿ ವ್ಯವಸ್ಥೆ ಮಾಡಿದ್ದಾಗಿತ್ತು!  ಡ್ರೈವರ್ ಹೇಳಿದ ಪ್ರಕಾರ ನಮ್ಮ ಮನೆಯ ಪಕ್ಕದ ಬೀದಿಯಲ್ಲಿಯೇ ಆತ ಟ್ಯಾಕ್ಸಿಯಲ್ಲಿ ಮಲಗಿದ್ದನಂತೆ. ಫೋನ್ ನಲ್ಲಿ ಚಾರ್ಜ್ ಇಲ್ಲದೆ ಸ್ತಬ್ಧವಾಗಿತ್ತಂತೆ.  ಕಾರಣವೇನೇ ಇರಲಿ, ಇದು ಆತನ ಬೇಜವಾಬ್ದಾರಿ .  ಇದು ಸುಳ್ಳಿರಬಹುದೆಂಬ ಅನುಮಾನವೂ ಕಾಡಿತು. ಪುನ: ಮಾಲೀಕರಿಗೆ ವಿಷಯ ತಿಳಿಸಿದೆವು. ಅವರ ಆದೇಶದ ಮೇರೆಗೆ , ತಕ್ಷಣವೇ ಬರಲೊಪ್ಪಿದ ಇನ್ನೊಬ್ಬ ಡ್ರೈವರ್ ಗೆ ಸ್ವಲ್ಪ ಹಣವನ್ನು ಭಕ್ಷೀಸಾಗಿ ಕೊಟ್ಟು, ತುಂಬಾ ಥ್ಯಾಂಕ್ಸ್ ಅಂದು ಬೀಳ್ಕೊಟ್ಟೆವು.   ಹೀಗೆ ಅನಗತ್ಯ ಕಿರಿಕಿರಿಗಳ ನಡುವೆ ನಮ್ಮ ಪ್ರಯಾಣ ಮೈಸೂರಿನಿಂದ ಆರಂಭವಾಯಿತು. ಒಂದು ಗಂಟೆ  ತಡವಾಗಿ ಹೊರಟರೂ, ಡ್ರೈವರ್ ಉತ್ತಮವಾಗಿ  ಕಾರನ್ನು ಚಲಾಯಿಸಿ, ನಮ್ಮನ್ನು ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲಪಿಸಿದಾಗ   ನಮಗೆ ನಿರಾಳವೆನಿತು.

-ಹೇಮಮಾಲಾ.ಬಿ
(ಮುಂದುವರಿಯುವುದು)

16 Responses

 1. Kiran says:

  You made me remember one early morning taxi confusion I had in Hyderabad last year

 2. ಪ್ರಭಾಕರ ತಾಮ್ರಗೌರಿ ಗೋಕರ್ಣ says:

  ನಿಮ್ಮ ಪ್ರವಾಸ ಕಥನ ಚೆನ್ನಾಗಿದೆ . ಭಾರತದಲ್ಲಿಯೇ ನೋಡತಕ್ಕಂತ ಸ್ಥಳಗಳು ಬೇಕಾದಷ್ಟು ಇವೆ . ನಿಮ್ಮ ಪ್ರವಾಸದಿಂದ ಮಾಹಿತಿ ಸಿಗುವುದು .ನಮಗೆ ಹೋಗಲು ಆಗದೆ ಇದ್ದರೂ ನಾವೇ ಸ್ವತಃ ನೋಡಿದಷ್ಟು ಖುಷಿಯಾಗುತ್ತದೆ . ಇನ್ನಷ್ಟು ಮಾಹಿತಿಗೋಸ್ಕರ ಕಾಯುತ್ತಿದ್ದೇನೆ .

 3. ಬಿ.ಆರ್.ನಾಗರತ್ನ says:

  ಪ್ರವಾಸ ಕಥನ ಪ್ರಾರಂಭವೇ ಕುತೂಹಲ ಹುಟ್ಟಿಸುತ್ತಿದೆ.ಹೇಮಾ ಬರವಣಿಗೆ ಸಾಗಲಿ.

 4. ಹರ್ಷಿತಾ says:

  ಗುಜರಾತ್ ಪ್ರವಾಸ ಮಾಲಿಕೆಗೆ ಶುಭ ಹಾರೈಕೆಗಳು.

 5. ಮಹೇಶ್ವರಿ.ಯು says:

  ಪ್ರವಾಸ ಕಥನವೆಂದರೆ ನನಗಿಷ್ಟವೇ.ನಿಮ್ಮ ಪ್ರವಾಸದ ಮುಂದಿನ ಅನುಭವವನ್ನು ಓದಲು ಉತ್ಸುಕಳಾಗಿದ್ದೇನೆ.

 6. ನಯನ ಬಜಕೂಡ್ಲು says:

  ಪ್ರವಾಸ ಕಥನದ ಆರಂಭವೇ ಕುತೂಹಲಕರ ರೀತಿಯಲ್ಲಿದೆ ಹೇಮಕ್ಕ. ಈಗ ಮುಂದಿನ ಕಂತಿಗೆ ಕುತೂಹಲದಿಂದ ಕಾಯುವಂತಾಗಿದೆ.

 7. ಶಂಕರಿ ಶರ್ಮ says:

  ಸೊಗಸಾದ ಪ್ರವಾಸ ಕಥನ..ಮುಂದಿನ ಹೆಜ್ಜೆಗೆ ಕಾಯುತ್ತೇವೆ.

 8. ಪಾರ್ವತಿಕೃಷ್ಣ. says:

  ಗುಜರಾತ್ನಲ್ಲೇ ಕುಳಿತು ನಿಮ್ಮ ಪ್ರವಾಸ ಕಥನ ಓದುತ್ತ ಇರುವೆ. ಸೋಮನಾಥ ದ್ವಾರಕೆ ನೋಡಿದರೂ ನಿಮ್ಮ ಅನುಭವ ಓದಲು ಬಹು ರುಚಿಕರ .ಇನ್ನಿನ ಕಂತಿಗೆ ಕಾಯುತ್ತಿರುವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: