ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 4: ‘ವಿಶಾಲಾ’ದ ಗುಜರಾತಿ ಥಾಲಿ

Share Button

ಅಂದಿನ (15/01/2019)  ವೇಳಾಪಟ್ಟಿ ಪ್ರಕಾರ, ನಾವು ಸಬರಮತಿ ಆಶ್ರಮಕ್ಕೆ ಭೇಟಿಯ ನಂತರ ಹೋಟೆಲ್ ಗೆ ಹಿಂತಿರುಗಿ ರಾತ್ರಿಯೂಟ ಮುಗಿಸಿ ವಿಶ್ರಾಂತಿ ಪಡೆಯುವುದಿತ್ತು. ಸಾಮಾನ್ಯವಾಗಿ ಟೂರಿಸ್ಟ್ ಸಂಸ್ಥೆಯ ಮೂಲಕ ಪ್ರವಾಸ ಮಾಡುವಾಗ ನಮ್ಮ ದಿನಚರಿಯು ಅವರ ನಿರ್ದೇಶನದಂತೆ  ಇರಬೇಕಾಗುತ್ತದೆ. ಅವರು ಆಯಾ ಸ್ಥಳದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಮಾತ್ರ ಕರೆದೊಯ್ಯುತ್ತಾರೆ. ಊಟದ ವ್ಯವಸ್ಥೆಯೂ ಅವರದ್ದೇ ಆಗಿರುತ್ತದೆ. ಆದರೆ ನನಗೆ, ಅಷ್ಟಾಗಿ ಖ್ಯಾತಿ ಪಡೆಯದಿದ್ದರೂ, ವಿಶಿಷ್ಟವಾಗಿರುವ ಸ್ಥಳಗಳಿಗೆ ಭೇಟಿ ಕೊಡುವುದು ಖುಷಿ ಕೊಡುತ್ತದೆ. ಮೇಲಾಗಿ,, ಒಂದಾದರೂ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಬೇಕು ಹಾಗೂ ಸಾಂಪ್ರದಾಯಿಕ ಗುಜರಾತಿ ಥಾಲಿ ಊಟ ಸವಿಯಬೇಕೆಂಬ ಆಸೆಯಿತ್ತು.

ಹಿಂದೊಮ್ಮೆ ತರಬೇತಿ ಕಾರ್ಯಕ್ರಮವೊಂದರ ನಿಮಿತ್ತ ಐ.ಐ.ಎಮ್. ಅಹ್ಮದಾಬಾದ್ ಗೆ ಬಂದಿದ್ದಾಗ, ಅಲ್ಲಿಯವರು ನಮ್ಮನ್ನು ಸ್ಥಳೀಯ ‘ವಿಶಾಲಾ ರೆಸ್ಟೋರೆಂಟ್’ ಗೆ ಕರೆದೊಯ್ದಿದ್ದರು.  ಅಲ್ಲಿ ಮಡಿಕೆ-ಕುಡಿಕೆಗಳ ಪ್ರದರ್ಶನ ( ಬರ್ತನ್  ಮ್ಯೂಸಿಯಮ್)  ನೋಡಿ, ಸ್ಥಳೀಯ ನೃತ್ಯವನ್ನೂ ವೀಕ್ಷಿಸಿ ಸಾಂಪ್ರದಾಯಿಕ ಊಟ ಮಾಡಿ ಬಂದಿದ್ದ ನೆನೆಪಿತ್ತು. ಹಾಗಾಗಿ  ಪುನ:  ‘ವಿಶಾಲಾ’ ಗೆ ಹೋಗಬೇಕು ಅನಿಸಿತು. ಈ ಬಗ್ಗೆ ಟ್ರಾವೆಲ್ಸ್ ನವರ ಬಳಿ ಹೇಳಿದಾಗ, ‘ನಮ್ಮ ಪ್ಲಾನ್ ನಲ್ಲಿ  ಇಲ್ಲ..ನಿಮ್ಮದೇ ವ್ಯವಸ್ಥೆಯಲ್ಲಿ ಹೋಗುವುದಾದರೆ ನಮ್ಮ ಅಡ್ಡಿ ಇಲ್ಲ, ನಿಮ್ಮಲ್ಲಿ ಎಷ್ಟು ಜನ ಹೋಗುತ್ತೀರಿ, ಯಾರೆಲ್ಲಾ ಅಲ್ಲಿ ಊಟ ಮಾಡುತ್ತೀರಿ ಎಂದು ಮುಂಚಿತವಾಗಿ ತಿಳಿಸಿ. ರಾತ್ರಿಯ ಅಡುಗೆ ವೇಸ್ಟ್ ಆಗಬಾರದಲ್ಲಾ.’. ಎಂದರು. ವಿಶಾಲಾ ರೆಸ್ಟೋರೆಂಟ್ ನಾವಿದ್ದ ಹೋಟೆಲ್ ನಿಂದ 12 ಕಿ.ಮೀ ದೂರದಲ್ಲಿದೆಯೆಂದು ಗೊತ್ತಾಯಿತು. ನನ್ನ ಅಭಿಪ್ರಾಯಕ್ಕೆ ಇನ್ನು ಕೆಲವರು ಆಸಕ್ತಿ ತೋರಿಸಿದರು. ಸುಮಾರು 15 ಮಂದಿ ಆಸಕ್ತರು   ಬಾಡಿಗೆ  ರಿಕ್ಷಾ ಮಾಡಿಕೊಂಡು ‘ವಿಶಾಲಾ’ ತಲಪಿದೆವು.

ನಾಲ್ಕೈದು ಎಕರೆ ಜಾಗದಲ್ಲಿರುವ ಪರಿಸರದಲ್ಲಿ ಎಲ್ಲಾ ಕಡೆಯೂ ಬೆಳಕಿಗಾಗಿ ನೂರಾರು ಲಾಟೀನುಗಳನ್ನು ತೂಗು ಹಾಕಿದ್ದರು. ಅಲ್ಲಿ ವಿವಿಧ ವಿನ್ಯಾಸಗಳ ಮಡಿಕೆ, ಕುಡಿಕೆ, ಕೊಪ್ಪರಿಗೆಯಂತಹ  ಬೃಹತ್ ಅಡುಗೆ ಪರಿಕರಗಳು, ವಿವಿಧ ಶೈಲಿಯ ಕತ್ತಿಗಳು, ದೀಪಗಳು…..ಹೀಗೆ ನಾನಾ ವಿಧದ  ವಸ್ತು ಪ್ರದರ್ಶನವಿದೆ. ಅಂಗೈಯಲ್ಲಿ ಹಿಡಿಯಬಹುದಾದ ನಸ್ಯದ ಬುರುಡೆಯಂತಹ ಪುಟಾಣಿ ಪಾತ್ರೆಗಳಿಂದ ಹಿಡಿದು, ನಾವು ಒಳಗೆ ನಿಂತುಕೊಂಡು ಫೊಟೊ ತೆಗೆಯಬಹುದಾದ ಹಂಡೆ, ಕೊಪ್ಪರಿಗೆಗಳಿವೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನೂ ಸೇರಿಸಿ ದೇಶ-ವಿದೇಶಗಳ ಖ್ಯಾತನಾಮರು ‘ವಿಶಾಲಾ’ಕ್ಕೆ ಬಂದಿದ್ದಾಗ ತೆಗೆದ ಫೊಟೊಗಳೂ ಇದ್ದುವು. ಮ್ಯೂಸಿಯಂ ಅನ್ನು ನೋಡಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವಲ್ಲಿಗೆ ಹೋದೆವು.

‘ವಿಶಾಲಾ’ ವಸ್ತು ಪ್ರದರ್ಶನ

ಊಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒಟ್ಟಾಗಿ ರೂ.650/- ರ ಟಿಕೆಟ್ ಬೆಲೆ ಇತ್ತು. ಅತಿಥಿಗಳಿಗೆ ಕೂರಲು, ತೆಂಗಿನ ಹುರಿಹಗ್ಗದಿಂದ ಹೆಣೆಯಲಾದ ಮಂಚಗಳಿದ್ದುವು. ಇದಕ್ಕೆ ‘ಚಾರ್ ಪಾಯಿ’ ಅನ್ನುತ್ತಾರೆ. ಎತ್ತ ನೋಡಿದರೂ, ಲಾಟೀನು, ದೊಂದಿಗಳದ್ದೇ ಬೆಳಕು.  ಒಂದೆಡೆ ಅಗ್ಗಿಷ್ಟಿಕೆಯಲ್ಲಿ ಉರಿಯುವ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಲು ಅವಕಾಶವಿತ್ತು. ಸ್ವಾಗತ ಪಾನೀಯವಾಗಿ ನಿಂಬೆ-ಪುದಿನಾ ಹಾಕಿದ ಶರಬತ್ತನ್ನು ಮಣ್ಣಿನ ದೊಡ್ಡ ಲೋಟದಲ್ಲಿ ತಂದು ಕೊಟ್ಟರು. ಮಿಣಮಿಣ ಮಿಂಚುವ ಕನ್ನಡಿಗಳುಳ್ಳ, ಗಾಢ ಬಣ್ಣದ ದಿರಿಸು ತೊಟ್ಟ ಬಾಲಕಿಯೊಬ್ಬಳು ತಲೆಯಲ್ಲಿ ಮಡಿಕೆಗಳನ್ನಿರಿಸಿ   ಸೊಗಸಾಗಿ ನೃತ್ಯ ಮಾಡುತ್ತಿದ್ದಳು. ಗುಜರಾತಿ ಕಚ್ಚೆ, ಪೇಟ ಧರಿಸಿದ್ದ ಇಬ್ಬರು ಡೋಲಕ್ ನಂತಹ ವಾದ್ಯವನ್ನು ನುಡಿಸುತ್ತಿದ್ದರು. ಆಮೇಲೆ ಗುಜರಾತಿ ನೃತ್ಯಗಳಾದ ಗರ್ಭಾ, ದಾಂಡಿಯಾ ಪ್ರದರ್ಶನಗೊಂಡುವು.  ನಡುನಡುವೆ, ಪ್ರೇಕ್ಷಕರನ್ನೂ ನೃತ್ಯಮಾಡಲು ಆಹ್ವಾನಿಸುತ್ತಿದ್ದರು. ಕೆಲವರು ನೃತ್ಯಕ್ಕೆ ಸಾಥ ಕೊಟ್ಟರು ಒಟ್ಟಿನಲ್ಲಿ ಅಪ್ಪಟ ಗ್ರಾಮೀಣ ಪರಿಸರದ ಮರುಸೃಷ್ಟಿ ಅಲ್ಲಿತ್ತು.

ಹೋಟೆಲ್ ನವರು ನಮ್ಮ ಬಳಿ “ಇಲ್ಲಿ ಕುಳಿತು ನೃತ್ಯ ನೋಡುತ್ತಿರಿ, ಊಟಕ್ಕೆ ನಿಮ್ಮ ಸರದಿ ಬಂದಾಗ ಕರೆಯುತ್ತೇವೆ” ಎಂದಿದ್ದರು. ಸುಮಾರು ಅರ್ಧ ಗಂಟೆಯ ನಂತರ ಊಟಕ್ಕೆ ಕರೆ ಬಂತು. ಊಟಕ್ಕೆ ಜಮಖಾನಾ ಹಾಸಿದ  ನೆಲದಲ್ಲಿ ಕೂರಬೇಕಿತ್ತು. ನಮ್ಮೆದುರು ಅಂದಾಜು ಎರಡು ಅಡಿ ಎತ್ತರದ ಮಣೆಯಂತಹ  ಅಗಲವಾದ ಬೆಂಚನ್ನು ಇರಿಸಿದ್ದರು.  ಅದರ ಮೇಲೆ ದೊಡ್ಡದಾಗಿದ್ದ  ಮುತ್ತುಗದ  ಎಲೆಯನ್ನಿರಿಸಿ, ಮಣ್ಣಿನ ಲೋಟದಲ್ಲಿ ನೀರು ತಂದಿರಿಸಿದರು. ವಿವಿಧ ಗಾತ್ರದ ದೊನ್ನೆಗಳಲ್ಲಿ ಹಾಗೂ ಕುಡಿಕೆಗಳಲ್ಲಿ  ಪಲ್ಯಗಳು,  ಗೊಜ್ಜುಗಳು, ಬೆಣ್ಣೆ, ಉಪ್ಪಿನಕಾಯಿಗಳು, ಚಟ್ನಿಪುಡಿಗಳು, ಮೊಳಕೆಕಾಳುಗಳು,  ಸಲಾಡ್, ಜಿಲೇಬಿ, ಲಾಡು, ಕಿಚಡಿ, ಬಾಜ್ರಾ, ಕಾಕ್ರ, ತೇಪ್ಲ, ಮೊದಲಾದ ರೊಟ್ಟಿಗಳು, ಹಪ್ಪಳ, ಮಜ್ಜಿಗೆ…ಹೀಗೆ 30  ಕ್ಕೂ ಹೆಚ್ಚು ಬಗೆಗಳನ್ನು ಬಡಿಸಿದರು. ಬಡಿಸುವವರು ಗುಜರಾತಿನ ಸಾಂಪ್ರದಾಯಿಕ ಕಚ್ಚೆ, ಪೇಟಾ ಧರಿಸಿದ್ದರು. ಬಡಿಸಲು ಉಪಯೋಗಿಸಿದ ಪಾತ್ರೆಗಳು ಕಂಚಿನವಾಗಿದ್ದವು. ಪ್ರತಿ ಅಡುಗೆಯನ್ನೂ ಪುನ: ವಿಚಾರಿಸಿ ಬಡಿಸುತ್ತಿದ್ದರು. ಗುಜರಾತಿ ಅಡುಗೆಯನ್ನುಂಡು ಅಭ್ಯಾಸವಿಲ್ಲದ ಕಾರಣ ನಮಗೆ ಊಟಕ್ಕಿಂತಲೂ ನೋಟವೇ ಚೆನ್ನ ಅನಿಸಿದ್ದು ಸತ್ಯ.

‘ವಿಶಾಲಾ ರೆಸ್ಟೋರೆಂಟ್ ‘ ನಲ್ಲಿ ಗುಜರಾತಿ ಥಾಲಿ

ಟಿಕೆಟ್ ನ ಬೆಲೆ ತುಸು ಜಾಸ್ತಿ ಎನಿಸಿದರೂ, ಅಷ್ಟು ಊಟವನ್ನು ಉಣ್ಣಲಾಗದಿದ್ದರೂ, ಲಾಟೀನಿನ ಬೆಳಕಿನಲ್ಲಿ, ನೆಲದ ಮೇಲೆ ಕುಳಿತುಕೊಂಡು, ಜಾನಪದ ನೃತ್ಯದ ಹಾಡನ್ನು ಕೇಳುತ್ತಾ ಉಣ್ಣುವ ಅನುಭವ ಬಹಳ ಸೊಗಸಾಗಿತ್ತು. ಊಟ ಬಡಿಸಲು ಪರಿಸರಸ್ನೇಹಿ ವಸ್ತುಗಳನ್ನು ಬಳಸಿದ್ದರು. ಬಿದಿರಿನ ತಟ್ಟೆ, ಮುತ್ತುಗದ ಎಲೆ ಮತ್ತು ಎಲೆಯ ದೊನ್ನೆಗಳು, 2-3 ಸೆ.ಮೀ ನಷ್ಟು ವ್ಯಾಸವುಳ್ಳ ಪುಟಾಣಿ ಕುಡಿಕೆಗಳು ಇತ್ಯಾದಿ. ಅಂತೂ ಒಬ್ಬರು ಉಂಡು ಏಳುವಾಗ, ಮಣ್ಣಿನಿಂದ ಮಾಡಿದ ಕನಿಷ್ಠ ಏಳೆಂಟು ಮಡಿಕೆ-ಕುಡಿಕೆ-ಲೋಟಗಳು ಖಾಲಿಯಾಗುವುದನ್ನು ಕಂಡು, ಇಷ್ಟು ಪಾತ್ರೆಗಳನ್ನು ತೊಳೆದು ಪುನರ್ಬಳಕೆ ಮಾಡುತ್ತೀರಾ? ಅಥವಾ ಎಸೆಯುತ್ತೀರಾ? ಎಂದು ಊಟ ಬಡಿಸುವವರನ್ನು ಕೇಳಿದೆ. ‘ ನಹೀಂ… ಯೇ ತೋ ಯೂಸ್ ಅಂಡ್ ಥ್ರೋ… ವಾಪಾಸ್ ಮಿಟ್ಟಿ ಸೆ ನಯಾ ಬರ್ತನ್ ಬನ್ ಜಾತಾ ಹೈ’ ಅಂದರು. ಹಾಗಾದರೆ ಕುಂಬಾರಿಕೆ ಕಸುಬನ್ನು ಪ್ರೋತ್ಸಾಹಿಸಲು ಇದು ಸಹಕಾರಿ ಅನಿಸಿತು.

ಕೆಲವರು ಅಲ್ಲಿ ಊಟ ಮಾಡಿದೆವು.  ಆಮೇಲೆ ಅವರವರ ವ್ಯವಸ್ಥೆ ಮೂಲಕ ರಿಕ್ಷಾದಲ್ಲಿ ಹೋಟೆಲ್ ಸೇರಿದೆವು.

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=30574

ಹೇಮಮಾಲಾ.ಬಿ.
(ಮುಂದುವರಿಯುವುದು)

8 Responses

  1. ಪ್ರಭಾಕರ ತಾಮ್ರಗೌರಿ ಗೋಕರ್ಣ says:

    ಲೇಖನ ಓದುತ್ತಾ ಹೋದರೆ ಮತ್ತೆ ಮತ್ತೆ ಓದ
    ಬೇಕೆನಿಸುತ್ತದೆ . ಮಾಹಿತಿ ವಿವರಗಳು ಚೆನ್ನಾಗಿವೆ .

  2. ನಯನ ಬಜಕೂಡ್ಲು says:

    ವಾವ್. Beautiful. ಹೇಮಕ್ಕ ಪ್ರವಾಸದಲ್ಲಿ ನೀವು ನೋಡಿದ, ಅನುಭವಿಸಿದ ಪ್ರತಿಯೊಂದು ಚಿಕ್ಕ ಚಿಕ್ಕ ವಿಚಾರಗಳೂ ಈ ಪ್ರವಾಸ ಕಥನವನ್ನು ಬಹಳ ಕುತೂಹಲಕಾರಿಯಾಗಿಸುತ್ತಿದೆ. ಲೇಖನದ ಈ ಭಾಗ ತುಂಬಾ ಇಷ್ಟವಾಯಿತು.

  3. ಬಿ.ಆರ್.ನಾಗರತ್ನ says:

    ನಾನು ನೋಡಿರುವ ಸ್ಥಳವಾದರೂ ಊಟದ ವಿವರಣೆ ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮ ಪದಾರ್ಥಗಳು ವಿವರಣೆ ನನಗೆ ಹೊಸದಾದ ಹೂರಣ.ಚೆನ್ನಾಗಿ ಮೂಡಿಬಂದಿದೆ.ಹೇಮಾ…ಅಭಿನಂದನೆಗಳು.

  4. .ಮಹೇಶ್ವರಿ.ಯು says:

    ಚೆನ್ನಾಗಿದೆ ಹೇಮಾ.

  5. ಶಂಕರಿ ಶರ್ಮ, ಪುತ್ತೂರು says:

    ಸೊಗಸಾದ ವಿವರಣೆ…ಪೂರಕ ಫೋಟೋಗಳು…ನಾವೇ ಅಲ್ಲಿದ್ದ ಅನುಭವವನ್ನು ನೀಡಿತು.ಧನ್ಯವಾದಗಳು ಮಾಲಾ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: