ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 5: ಭುಜೋಡಿಯ ಸಂಸತ್ತಿನ ಮೋಡಿ!

Share Button

ಪ್ರವಾಸದ ಎರಡನೆಯ ದಿನವಾದ, 16.01.2019 ರಂದು ನಮಗೆ 0600 ಗಂಟೆಗೆ ಲಗೇಜು ಸಮೇತ ಸಿದ್ದರಾಗಿ ಬರಹೇಳಿದರು. ಶ್ಯಾವಿಗೆ ಉಪ್ಪಿಟ್ಟು, ಕೇಸರಿ ಭಾತ್ ಇದ್ದ ಉಪಾಹಾರವನ್ನು ಸೇವಿಸಿ ಬಸ್ಸನ್ನೇರಿದೆವು.  ಅಂದು ಅಹ್ಮದಾಬಾದ್ ನಿಂದ ಅಂದಾಜು 330  ಕಿ.ಮೀ ದೂರದಲ್ಲಿರುವ ‘ಭುಜ್ ‘ಗೆ ಪ್ರಯಾಣಿಸಬೇಕಿತ್ತು. 2001 ರಲ್ಲಿ ಗುಜರಾತ್ ನ ಭುಜ್ ಪ್ರದೇಶವು ಭೂಕಂಪದಿಂದಾಗಿ ಹಾನಿಗೊಳಗಾಗಿದ್ದುದನ್ನು ದೂರದರ್ಶನದಲ್ಲಿ ನೋಡಿದ್ದೆವಾದುದರಿಂದ ಈಗ ಹೇಗಿದೆಯೋ ಎಂಬ ಕಾತರವಿತ್ತು .ಬೆಳಗಿನ ಸಮಯ ತುಸು ಚಳಿ ಇತ್ತು. ಸ್ವೆಟರ್ ಧರಿಸಿಕೊಂಡು ತೂಕಡಿಸಿಕೊಂಡು ಪ್ರಯಾಣಿಸಿದೆವು. ದಾರಿಯಲ್ಲಿ ಕೆಲವೆಡೆ ಹಸಿರು ಗದ್ದೆಗಳು, ಸಾಸಿವೆ ಹೊಲಗಳು ಕಂಡರೆ ಇನ್ನು ಕೆಲವೆಡೆ ಒಣಭೂಮಿಯಿತ್ತು.

ಪ್ರಯಾಣ ಮುಂದುವರಿದು,  ದಾರಿಯಲ್ಲಿ ಒಂದೆಡೆ ಊಟವನ್ನೂ ಮುಗಿಸಿದೆವು.  ಪ್ರವಾಸದ ಎಲ್ಲಾ ದಿನಗಳಲ್ಲೂ ಶ್ರೀ ಸತೀಶ್ ಭಟ್ ಮತ್ತು ಸಹಾಯಕರು  ನಮ್ಮ  ತಂಡಕ್ಕೆ ಸಮಯಕ್ಕೆ ಸರಿಯಾಗಿ ಶುಚಿ-ರುಚಿಯಾದ ಊಟ-ತಿಂಡಿಯ ವ್ಯವಸ್ಥೆ ಮಾಡಿದ್ದರು. ತಂಡದ ಯಾರಿಗೂ ಆಹಾರಸಂಬಂಧಿ ತೊಂದರೆಗಳಾಗದಿರುವುದು ಕೂಡ ಗಮನಾರ್ಹ. ಅಡುಗೆಯವರೂ ನಮ್ಮ ಜೊತೆಯಲ್ಲಿ ಪ್ರಯಾಣಿಸಬೇಕಾದ ದಿನಗಳಲ್ಲಿ ಬೆಳಗ್ಗೆ ಎರಡು ಗಂಟೆಗೆ ಎದ್ದು ತಿಂಡಿ ಹಾಗೂ ಊಟವನ್ನು ತಯಾರಿಸಿ ಕಂಟೈನರ್ ಗಳಲ್ಲಿ ತರುತ್ತಿದ್ದರು. ಮಾರ್ಗ ಮಧ್ಯೆ ಯಾವುದಾದರೂ ಅವಕಾಶ ಕೊಡುವ ಹೋಟೆಲ್ ನಲ್ಲಿ ಅವರ ಅನುಮತಿ ಪಡೆದು, ನಮ್ಮ ಊಟ ಬಡಿಸುತ್ತಿದ್ದರು.

ಮಧ್ಯಾಹ್ನದ ವೇಳೆಗೆ ಭುಜ್ ನ ‘ಹೋಟೆಲ್ ತುಳಸಿ’ ತಲಪಿದೆವು. ಗುಜರಾತ್ ನ ಪ್ರಮುಖ ನಗರಗಳಲ್ಲೊಂದಾದ ಭುಜ್ ನಿಂದ  ಹೊರಟ ನಮ್ಮ ಬಸ್ಸು, ಕೆಲವು ಹಳ್ಳಿಪ್ರದೇಶಗಳನ್ನು  ಹಾದು ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ‘ಭುಜೋಡಿ’ಗೆ ತಲಪಿಸಿತು. ಆಗ ಸಂಜೆಯಾಗತೊಡಗಿತ್ತು.  ಬಹುತೇಕ ಒಣಭೂಮಿಯಂತಿದ್ದ ಆ ಪರಿಸರದಲ್ಲಿ ಅಲ್ಲಲ್ಲಿ ಪುಟ್ಟ ಮನೆಗಳು, ಹಸು, ಕುರಿಗಳನ್ನು ಮೇಯಿಸಿಕೊಂಡು ಹೋಗುವವರು ಬಿಟ್ಟರೆ ವಿಶೇಷ ಎನಿಸುವಂತಹ ಆಕರ್ಷಣೆಗಳು ಇದ್ದಂತಿರಲಿಲ್ಲ. ‘ ಈ ಊರಿನಲ್ಲಿ ನೋಡಲು ಏನು ಮಹಾ ಇರಬಹುದು’ ಎಂಬ ಭಾವ ಹುಟ್ಟುತ್ತಿದ್ದ ಕ್ಷಣಗಳಲ್ಲಿ  ಬಸ್ಸು ಬೃಹತ್ತಾದ ಪ್ರಾಕಾರವೊಂದರ ಮುಂದೆ ನಿಂತಿತು. ಅದು   ‘ಆಶಾಪುರ್ ಫೌಂಡೇಶನ್ ನವರು  ನಿರ್ಮಿಸಿದ ‘ಹೀರಾಲಕ್ಷ್ಮಿ ಕ್ರಾಫ್ಟ್ ಪಾರ್ಕ್’ ಎಂಬ ಕಲಾ ಗ್ರಾಮ.

ಇಲ್ಲಿ ಕಲಾಗ್ರಾಮದ ಒಳಗೆ ಪ್ರವೇಶಿಸಲು 50 ರೂ ಟಿಕೆಟ್  ಪಡೆದುಕೊಳ್ಳಬೇಕು. ವಂದೇ ಮಾತರಂ ಮೆಮೋರಿಯಲ್ ಹಾಲ್ ನಲ್ಲಿ ತೋರಿಸಲಾಗಿವ 4ಡಿ ಪ್ರದರ್ಶನವನ್ನು ವೀಕ್ಷಿಸಲು ರೂ.100/- ಟಿಕೆಟ್ ಕೊಳ್ಳಬೇಕು. ಇನ್ನೊಂದು ಲೇಸರ್ ಶೋ ಉಚಿತ, ಉದ್ಯಾನದ ಹುಲ್ಲುಹಾಸಿನಲ್ಲಿ ಕುಳಿತು ವೀಕ್ಷಿಸಲು ಸಾಧ್ಯವಾಗುತ್ತದೆ. ‘ಹೀರಾಲಕ್ಷ್ಮಿ ಕ್ರಾಫ್ಟ್ ಪಾರ್ಕ್’  ಬೆಳಗ್ಗೆ  10 ಗಂಟೆಯಿಂದ ರಾತ್ರಿ 09  ಗಂಟೆಯ ವರೆಗೆ ತೆರೆದಿರುತ್ತದೆ. ವಂದೇ ಮಾತರಂ ಮೆಮೋರಿಯಲ್ ಭವನವು ಬೆಳಗ್ಗೆ  10 ಗಂಟೆಯಿಂದ ರಾತ್ರಿ 07 ಗಂಟೆಯ ವರೆಗೆ ತೆರೆದಿರುತ್ತದೆ. ಲೇಸರ್ ಶೋ ಕಾರ್ಯಕ್ರಮವು ಚಳಿಗಾಲದಲ್ಲಿ ರಾತ್ರಿ 0800 ಗಂಟೆಗೆ ಹಾಗು ಇತರ ಋತುಗಳಲ್ಲಿ 0830 ಗಂಟೆಗೆ ನೆರವೇರುತ್ತದೆ.

ವಂದೇ ಮಾತರಂ ಮೆಮೋರಿಯಲ್ ಹಾಲ್, ಭುಜೋಡಿ

‘ಹೀರಾಲಕ್ಷ್ಮಿ ಕ್ರಾಫ್ಟ್ ಪಾರ್ಕ್’ ನ ಒಳಗೆ ಹೊಕ್ಕಾಗ ಸುಂದರವಾದ ವಿಶಾಲ ಉದ್ಯಾನದಲ್ಲಿ ‘ಸಂಸತ್ ಭವನ’ದ ಆಕಾರದಲ್ಲಿ ರಚಿಸಲಾದ ಭವ್ಯವಾದ  ‘ವಂದೇ ಮಾತರಂ ಮೆಮೋರಿಯಲ್’  ಕಾಣಿಸಿತು . ಈ ‘ಸಂಸತ್ ಭವನ’ದಲ್ಲಿ, ಭಾರತಕ್ಕೆ ಬ್ರಿಟಿಷರ  ಆಗಮನವಾದಂದಿನಿಂದ (1608), ಅವರ ಆಳ್ವಿಕೆಯ ಅವಧಿಯ ಕೆಲವು  ಘಟನಾವಳಿಗಳು  ಹಾಗೂ ಸ್ವಾತ್ರಂತ್ರ್ಯ ಸಂಗ್ರಾಮದ ಪ್ರಮುಖ ಮೈಲಿಗಲ್ಲುಗಳನ್ನು ಹಂತಹಂತವಾಗಿ ತೋರಿಸುವ  4ಡಿ  ಪ್ರದರ್ಶನದ ವ್ಯವಸ್ಥೆ ಇದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಪಾತ್ರ ಹಾಗೂ ಅವರ ಅಚಲ ನಿರ್ಧಾರಗಳಿಗೆ ಪ್ರೇರಕವಾದ ಘಟನೆಗಳನ್ನು ಬಹಳ ಮನೋಜ್ಞವಾಗಿ ನಿರೂಪಿಸಿದ್ದಾರೆ.  ಬೇರೆ ಬೇರೆ ಕೋಣೆಗಳಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರು, ಬ್ರಿಟಿಷರು, ಸೈನಿಕರು ಮತ್ತಿತರ ಪ್ರಾತ್ಯಕ್ಷಿಕೆಗಳಿವೆ. ಸ್ವಾತಂತ್ಯ್ತಹೋರಾಟದ ವಿವಿಧ ಹಂತಗಳನ್ನು ಅನುಕ್ರಮವಾಗಿ ಬಿಂಬಿಸುವ ಧ್ವನಿ, ಬೆಳಕು, ದೃಶ್ಯ ಮತ್ತು ಚಲನೆಯ ಸಂಯೋಜನೆಯುಳ್ಳ  ಈ ಅದ್ಭುತವಾದ ಪ್ರದರ್ಶನವು 90 ನಿಮಿಷಗಳ ಕಾಲ ಮುಂದುವರಿಯುತ್ತದೆ.

ಸ್ವಾತಂತ್ಯ್ರ ಹೋರಾಟಗಾರರ ತ್ಯಾಗ, ಬಲಿದಾನ, ಬ್ರಿಟಿಷರ ಕಾರ್ಯಾಚರಣೆಗಳು, ಅಹಿಂಸಾ ಸತ್ಯಾಗ್ರಹ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ (1919), ಬಾರ್ದೋಲಿ ಸತ್ಯಾಗ್ರಹ(1928) , ಉಪ್ಪಿನ ಸತ್ಯಾಗ್ರಹ (1930), ಸ್ವದೇಶೀ ಚಳವಳಿ, ದುಂಡುಮೇಜಿನ ಪರಿಷತ್ತು (1930), ಕ್ವಿಟ್ ಇಂಡಿಯಾ (1942),  ಆಜಾದ್ ಹಿಂದ್ ಸೇನೆ (1943) ಮೊದಲಾದ ಹಂತಗಳನ್ನು ದಾಟಿ ಪ್ರದರ್ಶನದ ಕೊನೆಯ ಪ್ರಾತ್ಯಕ್ಷಿಕೆಯಲ್ಲಿ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ, ರಾಷ್ಟ್ರಗೀತೆಯು ಮೊಳಗುವಾಗ ನಮ್ಮ ಹೃದಯ ಹೆಮ್ಮೆಯಿಂದ ಹಿಗ್ಗುತ್ತದೆ! ‘ಮೇರಾ ಭಾರತ್ ಮಹಾನ್!  ದೆಹಲಿಯಲ್ಲಿರುವ ಪಾರ್ಲಿಮೆಂಟ್ ಭವನಕ್ಕೆ ಅಧಿಕೃತವ್ಯಕ್ತಿಗಳಿಗೆ ಮಾತ್ರ ಪ್ರವೇಶ. ಆದರೆ ಭುಜೋಡಿಯ  ‘ಪಾರ್ಲಿಮೆಂಟ್’ ಭವನಕ್ಕೆ ನಿಗದಿತ ಟಿಕೆಟ್ ಕೊಟ್ಟವರೆಲ್ಲರಿಗೂ ಮುಕ್ತ ಪ್ರವೇಶದ ಜೊತೆಗೆ  ದೇಶದ ಚರಿತ್ರೆಯ ಪುನರಾವಲೋಕನದ ಅವಕಾಶ ಲಭ್ಯ. ಇದೇ ನೋಡಿ,  ಭುಜೋಡಿಯ ಸಂಸತ್ತಿನ ಮೋಡಿ.

ದಂಡಿಯಾತ್ರೆಯ ಪ್ರಾತ್ಯಕ್ಷಿಕೆ..

ಇದಲ್ಲದೆ, ಈ ಕಲಾಗ್ರಾಮದಲ್ಲಿ ಬಹಳಷ್ಟು ಪ್ರವಾಸಿ ಆಕರ್ಷಣೆಗಳಿವೆ .ಗುಜರಾತಿನ ಈ  ಭಾಗದ ಜನರು  ಬಟ್ಟೆಯ ಮೇಲೆ ಪುಟ್ಟ ಕನ್ನಡಿಗಳನ್ನು ಪೋಣಿಸಿ,  ಅಂದವಾಗಿ ಹೊಲಿಯುವ ‘ಕಛ್  ಕಸೂತಿ’ ಕಲೆಯು ಬಹಳ ಹೆಸರುವಾಸಿ. ಇಲ್ಲಿ ಕರಕುಶಲ ವಸ್ತುಗಳ ಮಾರಾಟ ಕೇಂದ್ರಗಳಿವೆ. ಕಲಾಗ್ರಾಮದಲ್ಲಿರುವ ಅಂಗಡಿಯೊಂದರಲ್ಲಿ  ಬಟ್ಟೆ ನೇಯುವುದನ್ನು ಕೂಡ ಕಂಡೆವು.  ಅದೇ ಆವರಣದಲ್ಲಿ ಸೊಗಸಾಗಿ ನಿರ್ಮಿಸಿದ ‘ದೆಹಲಿಯ ಕೆಂಪುಕೋಟೆ’ಯ ಮಾದರಿಯೂ ಇದೆ.ಗಾಂಧೀಜಿಯವರ ಹಲವಾರು ಪ್ರತಿಕೃತಿಗಳೊಂದಿಗೆ ಫೊಟೊ ತೆಗೆದುಕೊಳ್ಳಲು ಅನುಕೂಲವಾಗುವಂತೆ ಹಲವಾರು ‘ಸೆಲ್ಫಿ ಪಾಯಿಂಟ್’ ಗಳಿವೆ.   ಒಟ್ಟಿನಲ್ಲಿ ಆಸಕ್ತರಿಗೆ ಛಾಯಾಗ್ರಹಣ ಮಾಡಲು ಸಾಕಷ್ಟು ಸ್ಥಳಗಳಿವೆ.

ಕತ್ತಲಾದ ಮೇಲೆ, ಎಂಟು ಗಂಟೆಗೆ, ವಂದೇ ಮಾತರಂ ಮೆಮೋರಿಯಲ್ ಹಾಲ್ ನ ಮೇಲೆ ಬಿಂಬಿಸಲ್ಪಡುವ  12  ನಿಮಿಷಗಳ  ಲೇಸರ್ ಶೋ ಕಾರ್ಯಕ್ರಮವು, ಬಣ್ಣ,ಬೆಳಕು,ಸಂಗೀತ, ರಾಷ್ಟ್ರಪ್ರೇಮದ ಮೆರುಗಿನಿಂದ ಕೂಡಿದ್ದು ಬಹಳ ಸೊಗಸಾಗಿದೆ.  ಸುಂದರವಾದ ವಾಸ್ತುವಿನ್ಯಾಸ, ಉತ್ತಮವಾದ ನಿರ್ವಹಣೆ ಹಾಗೂ ಆಧುನಿಕ ತಂತ್ರಜ್ಞಾನದ ನೆರವಿನಿಂದ ವಂದೇಮಾತರಂ ಮೆಮೋರಿಯಲ್ ಅನ್ನು ಬಹಳ ಸೊಗಸಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಭಾರತೀಯರೆಲ್ಲರೂ ಹೆಮ್ಮೆಯಿಂದ ನೋಡಬೇಕಾದ ಪ್ರದರ್ಶನವಿದು ಅನಿಸಿತು. ಶಾಲಾ ಮಕ್ಕಳಿಗೆ ಚರಿತ್ರೆ ಪಾಠದಲ್ಲಿ ಕಲಿತ ವಿಷಯಗಳನ್ನು ಮನನಮಾಡಿಕೊಳ್ಳಲು ಸಹಕಾರಿಯಾಗಬಲ್ಲುದು.

ಆಮೇಲೆ ಹೋಟೆಲ್ ಗೆ ಮರಳಿ ಊಟ ಮಾಡಿ, ವಿಶ್ರಾಂತಿಗೆ ಹೋದೆವು.

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=30658

ಹೇಮಮಾಲಾ.ಬಿ.
(ಮುಂದುವರಿಯುವುದು)

11 Responses

 1. ಬಿ.ಆರ್.ನಾಗರತ್ನ says:

  ನಿಮ್ಮ ಪ್ರವಾಸದ ಬರಹಕ್ಕೆ ನನ್ನದೊಂದು ನಮನ.ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ ಹೇಮಾ.ಇದರಿಂದ ನಿಮಗೂ ಹೊಸ ತಾಣ ಗಳಿಗೆ ಭೇಟಿ ಕೊಟ್ಟಾಗ ಸೊಕ್ಷವಾಗಿ ನೋಡುವ ಬುದ್ಧಿ ಬರಬಹುದು.ಶುಭವಾಗಲಿ.

  • Hema says:

   ಹೌದು..ಪ್ರವಾಸ, ಬರವಣಿಗೆ ಒಂದಕ್ಕೊಂದು ಪೂರಕ..ನಿಮಗೆ ಅನಂತ ಧನ್ಯವಾದಗಳು.

 2. ನಯನ ಬಜಕೂಡ್ಲು says:

  ಗಾಂಧಿ ತಾತನ ಜೊತೆ ಕುಶಲ ಕ್ಷೇಮ ವಿಚಾರಿಸುತ್ತ ಆರಾಮ ಕೂತಿರೋ ಹಾಗಿದೆ, ಹಾಗೇನೇ ಕಾರ್ ಡ್ರೈವ್ ಮಾಡ್ತಾ ಸುತ್ತಾಡಿ ಬಂದಿದ್ದೂ ಸೂಪರ್. ನಿಮ್ಮ ಪ್ರವಾಸ ಕಥನ ತುಂಬಾ ಸೊಗಸಾಗಿ ಬರ್ತಿದೆ.

  • Hema says:

   ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುವ ನಿಮಗೆ ಅನಂತ ಧನ್ಯವಾದಗಳು.

 3. ಹರ್ಷಿತಾ says:

  ಭುಜೋಡಿಯ ಕುರಿತು ಸವಿವರವಾಗಿ ತಿಳಿಸಿದ್ದೀರಿ… ಧನ್ಯವಾದಗಳು

 4. ಶಂಕರಿ ಶರ್ಮ, ಪುತ್ತೂರು says:

  ಈ ಸಲದ ಭುಜೋಡಿ ಪ್ರವಾಸ ಕಥನವು ಅತ್ಯಂತ ರೋಚಕವಾಗಿ ಮೂಡಿಬಂದಿದೆ. ಅಲ್ಲಿಯ ಸಾಂಸ್ಕೃತಿಕ, ಕಲಾವೀಕ್ಷಣೆಯ ವಿಸ್ತೃತ ಬರಹವು ನಮಗೆ ಅಲ್ಲಿಯೇ ಇರುವಂತಹ ಅನುಭವವನ್ನು ಉಂಟು ಮಾಡಿತು. ಗಾಂಧಿ ತಾತನೊಂದಿಗಿನ ಪೂರಕ ಚಿತ್ರಗಳು ಅತ್ಯಂತ ಜೀವಂತಿಕೆಯಿಂದ ಕೂಡಿದೆ. ಅದ್ಭುತ ಅನುಭವವನ್ನು ನೀಡುವ ಪ್ರವಾಸ ಕಥನಕ್ಕಾಗಿ ಮಾಲಾ ಅವರಿಗೆ ಧನ್ಯವಾದಗಳು.

 5. ಪ್ರಭಾಕರ ತಾಮ್ರಗೌರಿ says:

  ಪ್ರವಾಸ ಲೇಖನ ತುಂಬಾ ಚೆನ್ನಾಗಿ ಬರ್ತಾ ಇದೆ . ಮುಂದಿನ ಲೇಖನ ಯಾವಾಗ ಬರುತ್ತೆ ಎಂದು ಕಾಯುವಂತೆ ಮಾಡುತ್ತದೆ . ಬರವಣಿಗೆ ತುಂಬಾ ಚೆನ್ನಾಗಿದೆ .

 6. Savithri bhat says:

  ಸೊಗಸಾದ ಪ್ರವಾಸ ಕಥನ..ಸುಂದರ ಚಿತ್ರಗಳು..ಧನ್ಯವಾದಗಳು

 7. ನಿರ್ಮಲ says:

  ನಾನೂ ಭುಜೋಡಿ ನೋಡಿ ಅನಂದಿಸಿದ್ದೇನೆ. ಸುಂದರ ನೆನಪುಗಳನ್ನು ನೀಡಿರುವ ತಾಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: