ಶತಾಯುಷಿಯಾದರು ನವೋದ್ಯಮಿ
ಕೇರಳದಲ್ಲಿ ಹುಟ್ಟಿದ ಪದ್ಮಾ ನಾಯರ್, ಮದುವೆಯ ನಂತರ 1945 ರಲ್ಲಿ ಮುಂಬಯಿಗೆ ಬಂದರು. ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡ, ಐದು ಜನ ಮಕ್ಕಳ ಜೊತೆ ಸುಖಿ ಸಂಸಾರ ನೆಡೆಸುತ್ತಿದ್ದವರು ಪದ್ಮಾ. ತಮ್ಮ ಮಕ್ಕಳಿಗೆ ಉಡುಪುಗಳನ್ನು ತಾವೇ ವಿನ್ಯಾಸ ಮಾಡಿ ಹೊಲಿಯುತ್ತಿದ್ದರು. ಮಾರುಕಟ್ಟೆಯಲ್ಲಿ ಬರುವ ಉತ್ತಮ ಗುಣಮಟ್ಟದ ಹಾಗೂ ಹೊಸ ವಿನ್ಯಾಸದ ಉಡುಪುಗಳಂತೆ ಪದ್ಮಾ ಹೊಲಿಯುತ್ತಿದ್ದ ಉಡುಪುಗಳು ಇವೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಮಕ್ಕಳಿಗೆ ಉಡುಪು ವಿನ್ಯಾಸ ಮಾಡುವುದು ಮತ್ತು ಹೊಲಿಯುವುದು ನನಗೆ ಇಷ್ಟವಾಗಿತ್ತು. ಅದರೆ ಅನೇಕ ಜನರು ಕೇಳಿದರೂ, ನನಗೆ ಅದನ್ನು ಉದ್ಯಮವಾಗಿ ಮಾಡುವ ಉದ್ದೇಶವಿರಲಿಲ್ಲ ಎಂದು ಪದ್ಮಾ ಹೇಳುತ್ತಾರೆ.ಮಕ್ಕಳ ಮದುವೆಯಾಗಿ, ಮೊಮ್ಮಕ್ಕಳಾದಾಗ, ಮೊಮ್ಮಕ್ಕಳಿಗೆ ಉಡುಪು ವಿನ್ಯಾಸ ಮಾಡಿ ಹೊಲಿಯುವುದನ್ನು ಪದ್ಮಾ ಮುಂದುವರೆಸಿದರು. ಮಗಳು ಮತ್ತು ಸೊಸೆಯ ಒತ್ತಾಸೆಗೆ ಮಣಿದು ತಮ್ಮ ಅರವತ್ತರ ವಯಸ್ಸಿನಲ್ಲಿ ಪದ್ಮಾರವರು, ಕೈಯಿಂದ ಪೇಂಟ್ ಮಾಡಿದ ಸೀರೆಗಳು ಹಾಗೂ ಟೇಬಲ್ ಕ್ಲಾತ್‌ಗಳನ್ನು ಮಾಡುವ ಕೆಲಸವನ್ನು ಪ್ರಾರಂಭಿಸಿದರು.
ಅರವತ್ತು ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದರೂ, ನಾನು ಜೀವನದಲ್ಲಿ ಸ್ವಂತ ದುಡಿಮೆಯಿಂದ ದುಡ್ಡು ಸಂಪಾದಿಸಿರಲಿಲ್ಲ. ಮಗಳು ಮತ್ತು ಸೊಸೆಯ ಪ್ರೋತ್ಸಾಹದಿಂದ ಈ ಕೆಲಸವಾರಂಭಿಸಿದೆ. ಮೊದಲ ಬಾರಿ ಸೀರೆಯೊಂದಕ್ಕೆ ಕೈಯಿಂದ ಪೇಂಟ್ ಮಾಡಿ, ಆ ಸೀರೆ ಮಾರಾಟವಾದಾಗ, ನಾನು ಕೂಡಾ ಜೀವನದಲ್ಲಿ ಹಣ ಸಂಪಾದನೆ ಮಾಡಿದೆ ಎಂದು ಬಹಳ ಸಂತೋಷವಾಯಿತು ಎಂದು ಪದ್ಮಾ ನಾಯರ್ ನೆನಪು ಮಾಡಿಕೊಳ್ಳುತ್ತಾರೆ.
100 ವರ್ಷದ ಹರೆಯದ ಪದ್ಮಾ ನಾಯರ್, ಪ್ರತಿದಿನ ಬೆಳಿಗ್ಗೆ 5.30 ಯಿಂದ 6.30 ರ ಅವಧಿಯಲ್ಲಿ ಏಳುತ್ತಾರೆ. ಉಪಹಾರ ಸೇವನೆಯ ನಂತರ 10.30 ಕ್ಕೆ ಸೀರೆಯನ್ನು ಪೇಂಟ್ ಮಾಡುವ ಕೆಲಸವಾರಂಭಿಸುವ ಇವರು, ಸತತವಾಗಿ ಮೂರು ಗಂಟೆಗಳ ಕಾಲ ಈ ಕೆಲಸದಲ್ಲಿ ಏಕಾಗ್ರತೆಯಿಂದ ಕೆಲಸ ಮಾಡುತ್ತಾರೆ. ದಿನಕ್ಕೆ ಮೂರು ಗಂಟೆಯಂತೆ ಕೆಲಸ ಮಾಡಿದರೆ ಇವರಿಗೆ ಒಂದು ಸೀರೆಯನ್ನು ಸಿದ್ಧಪಡಿಸಿ, ಗ್ರಾಹಕರಿಗೆ ನೀಡಲು ಒಂದು ತಿಂಗಳು ಬೇಕಾಗುತ್ತದೆ. ಸೀರೆಯ ಬೆಲೆಯೂ ಸೇರಿದಂತೆ, ಇವರು ಒಂದು
ಸೀರೆಗೆ 11,000 ರೂಪಾಯಿಗಳನ್ನು ಪದ್ಮಾ ನಾಯರ್ ಪಡೆಯುತ್ತಾರೆ. ಇದೇ ರೀತಿ ಪ್ರತಿ ದುಪ್ಪಟ್ಟಾಗೆ 3,000 ರೂಪಾಯಿಗಳನ್ನು ಪಡೆಯುತ್ತಾರೆ.
ಒಂದು ಸೀರೆ ಮಾಡಲು ಇವರಿಗೆ ಒಂದು ತಿಂಗಳು ಬೇಕಾಗುತ್ತೆ ಅಂದರೆ ಗ್ರಾಹಕರು ಕೇಳಬೇಕಲ್ಲ ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ ಪದ್ಮಾ ನಾಯರ್‌ರವರ ಕೈಯಿಂದ ಪೇಂಟ್ ಮಾಡಿದ ಸೀರೆ ಬೇಕು ಎಂದು ಪೂರ್ತಿ ಹಣವನ್ನು ಮುಂಗಡವಾಗಿ ಕೊಟ್ಟು ಐದು, ಆರು ತಿಂಗಳು ಕಾಯುವ ಗ್ರಾಹಕರು ಇದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಇ-ಮೇಲ್ ಮೂಲಕ ಸ್ವತಃ ಪದ್ಮಾ ನಾಯರ್ ಅವರೇ ತಮ್ಮ ಗ್ರಾಹಕರ ಜೊತೆ ಸಂಪರ್ಕ ಸಾಧಿಸುತ್ತಾರೆ. ಗ್ರಾಹಕರ ಅಗತ್ಯಗಳನ್ನು ತಿಳಿದುಕೊಳ್ಳುವುದು, ಹಣ
ಪಡೆಯುವುದು, ಹೀಗೆ ಪ್ರತಿಯೊಂದು ಕೆಲಸವನ್ನು ಪದ್ಮಾ ನಾಯರ್ ಸ್ವತಃ ಮಾಡುತ್ತಾರೆ.
ತಾವು ಗಳಿಸುವ ಹಣವನ್ನು ಮೊಮ್ಮಕ್ಕಳಿಗಾಗಿ ಖರ್ಚು ಮಾಡುವ ಪದ್ಮಾ ನಾಯರ್, ತಮಗೆಂದು ಇದುವರೆಗೂ ಒಂದು ರೂಪಾಯಿ ಕೂಡಾ ಉಳಿಸಿಕೊಂಡಿಲ್ಲ. ಮೊಮ್ಮಕ್ಕಳ ಸಂತೋಷದಲ್ಲಿ ನನ್ನ ಸಂತೋಷವಿದೆ ಎಂದು ನಗುವ ಇವರು, ಹೊಸದಾಗಿ ನವೋದ್ಯಮ ಪ್ರಾರಂಭಿಸುವವರಿಗೆ ನೀಡುವ ಸಲಹೆ ಹೀಗಿದೆ:
ನವೋದ್ಯಮ ಪ್ರಾರಂಭಿಸಲು ವಯಸ್ಸು ಅಡ್ಡ ಬರುವುದಿಲ್ಲ. ಪ್ರತಿದಿನ ತಮಗೆ ದೊರೆಯುವ ಬಿಡುವಿನ ಸಮಯದಲ್ಲಿ ಗೃಹಿಣಿಯರು ನವೋದ್ಯಮಕ್ಕಾಗಿ ಕೆಲಸ ಮಾಡಬಹುದು. ಆದರೆ ಪ್ರತಿದಿನ ನವೋದ್ಯಮಕ್ಕಾಗಿ ನಿರ್ದಿಷ್ಟ ಸಮಯ ಮೀಸಲಾಗಿಡಬೇಕು, ಏಕಾಗ್ರತೆಯಿಂದ ಕೆಲಸ ಮಾಡಬೇಕು ಮತ್ತು ನಮ್ಮ ಕೆಲಸ ಚೆನ್ನಾಗಿದೆ ಅಂದರೆ ಗ್ರಾಹಕರು ಕೂಡಾ ಹೆಚ್ಚಾಗುತ್ತಾರೆ. ಕುಟುಂಬದ ಸದಸ್ಯರ ಬೆಂಬಲ ಕೂಡಾ ಅತ್ಯಗತ್ಯ.
ಶತಾಯುಷಿ ಪದ್ಮಾ ನಾಯರ್‌ರವರ ಜೀವನೋತ್ಸಾಹ ಇತರರಿಗೆ ಮಾದರಿಯಾಗಿದೆ. ಈಗ ಪುಣೆಯಲ್ಲಿ ನೆಲೆಸಿರುವ ಇವರಿಂದ ಪ್ರೇರಣೆ ಪಡೆದು ಒಬ್ಬ ಮಗಳು ವಸ್ತ್ರ ವಿನ್ಯಾಸದ ಸಂಸ್ಥೆ ಪ್ರಾರಂಭಿಸಿದ್ದಾರೆ.
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30725
– ಡಾ.ಉದಯ ಶಂಕರ ಪುರಾಣಿಕ
ಬಹಳ ಸ್ಪೂರ್ತಿದಾಯಕವಾಗಿದೆ ಸರ್ ಲೇಖನ ಸರಣಿ. ಜೀವನದಲ್ಲಿ ಚಿಕ್ಕದಿರಲಿ, ದೊಡ್ಡದಿರಲಿ ಏನಾದರೂ ಸಾಧನೆ ಮಾಡಬೇಕು ಅನ್ನುವುದು ಮನಸಿಗೆ ಬರುತ್ತದೆ ಇದನ್ನು ಓದುವಾಗ. ಧನ್ಯವಾದಗಳು ಸರ್ ಒಳ್ಳೆಯ ಬರಹವನ್ನು ನಮಗೆಲ್ಲ ನೀಡುತ್ತಿರುವುದಕ್ಕಾಗಿ.
ಮನಸ್ಸು ಇದ್ದರೆ ವಯಸ್ಸು ಅಡ್ಡಬರುವುದಿಲ್ಲ ಎನ್ನುವ ಹೇಳಿಕೆಗೆ ಅನ್ವರ್ಥ ವಾಗಿದೆ ನಿಮ್ಮ ಲೇಖನ ಸಾರ್ ಪರಿಚಯಿಸುವ ಕ್ರಮ ಉತ್ತಮವಾಗಿದೆ.ಅಭಿನಂದನೆಗಳು
ನಿಮ್ಮ ಲೇಖನ ಬಹಳ ಉತ್ತಮವಾಗಿದೆ. ವಯಸ್ಸು ಒಂದು ಸಂಖ್ಯೆ ಮಾತ್ರ. ಉತ್ಸಾಹ ಮತ್ತು ತಮ್ಮ ಆಸಕ್ತಿಯನ್ನು ಕಾರ್ಯ ರೂಪಕ್ಕೆ ತಂದು, ಸಮಯ ಉಪಯೋಗಿಸಿಕೊಳ್ಳುವ ಪದ್ಮ ನಾಯರ್ ಅಂತಹವರನ್ನು ಪರಿಚಯಿಸುವ ಮೂಲಕ ತಾವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಇವರ ಜೀವನ ಬೇರೆಯವರಿಗೆ ಮಾದರಿಯಾಗಲಿ.
ಉತ್ಸಾಹವಿದ್ದರೆ, ಯಾವ ಕೆಲಸಕ್ಕೂ ವಯಸ್ಸು ಅಡ್ಡಿಯುಂಟು ಮಾಡಲಾರದೆಂಬುದನ್ನು ಪದ್ಮನಾಯರ್ ಜೀವನವು ಮನದಟ್ಟು ಮಾಡುವುದರ ಜೊತೆಗೆ ಅವರ ನಿಸ್ವಾರ್ಥ ಬದುಕು ಎಲ್ಲರಿಗೂ ಪ್ರೇರಕವಾಗಿದೆ. ಈ ಅತ್ಯುತ್ತಮ ಲೇಖನವು ಜೀವನಸ್ಫೂರ್ತಿ ತುಂಬುವಂತಿದೆ. ಸೊಗಸಾದ ಲೇಖನ ಮಾಲೆ..ಧನ್ಯವಾದಗಳು ಸರ್.
ಶ್ರೀಮತಿ ಪದ್ಮಾ ನಾಯರ್ ಅವರ ಜೀವನೋತ್ಸಾಹಕ್ಕೆ ಶರಣು. ಇಂತಹ ಅಪರೂಪದ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಪರಿಚಯಿಸುತ್ತಿರುವ ನಿಮಗೆ ಧನ್ಯವಾದಗಳು
ಪದ್ಮಾ ನಾಯರ್ ಲೇಖನ ಓದಿ ಸಂತೋಷವಾಯಿತು. ಅಪರೂಪದ ವ್ಯಕ್ತಿ ತ್ವ. ಸ್ವಂತ ದುಡಿಮೆ ಮಾಡಿ ಜೀವನ
ಸಾಗಿಸಲು ಉತ್ತಮ ಲೇಖನ ಇಂದಿನ ಯೂವಕರಿಗೆ
ಮಾರ್ಗದರ್ಶನ ನೀಡಬಲ್ಲದು. ವಂದನೆಗಳು.