ಅಪಘಾತ ತಂದ ಸಂಪತ್ತು

Share Button

ಒಂದು ಹೆಜ್ಜೆ ಹಿಂದಿದ್ದರೆ..ಅಬ್ಬಾ.. ಆ ಕ್ಷಣವೇ ಯಮಧರ್ಮರಾಯನ ಅತಿಥಿಯಾಗುತ್ತಿದ್ದೆ. ರಸ್ತೆ ದಾಟಲು ಒಂದು ಕಾಲು ಮುಂದಿಟ್ಟಿದ್ದೆ, ಇನ್ನೊಂದು ಕಾಲನ್ನು ಮುಂದಿಡಲು ಎತ್ತಿದ್ದೆ – ಆಗ ಬಂತು ನೋಡ್ರಿ ಶರವೇಗದಲ್ಲಿ ಒಂದು ಕಾರು. ಎಡ ಪಾದಕ್ಕೆ ಕಾರು ಬಡಿದು ಧಡ್ ಎಂದು ಫುಟ್‌ಪಾತಿನ ಮೇಲೆ ಬಿದ್ದೆ. ಎರಡು ಹೆಜ್ಜೆ ಮುಂದಿದ್ದ ಯಜಮಾನರು ಓಡಿ ಬಂದು ಕೈ ಹಿಡಿದು ಎಬ್ಬಿಸಿದರು. ನಾಲ್ಕಾರು ಜನ ತಮ್ಮ ತಮ್ಮ ಕಾರು ನಿಲ್ಲಿಸಿ ನಮಗೆ ಸಹಾಯ ಮಾಡಲು ಧಾವಿಸಿ ಬಂದರು. ನನಗೆ ಅಪಘಾತ ಮಾಡಿದ್ದ ಕಾರಿನ ಒಡತಿ, ಸುಮಾರು ಇಪ್ಪತ್ತು ವರ್ಷದವಳಿರಬಹುದೇನೋ – ನಡುಗುತ್ತಾ ‘I am sorry, I am very sorry ‘ ಎಂದು ಅಳುವ ಧ್ವನಿಯಲ್ಲಿ ಬೇಡುತ್ತಾ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದೆ ಬಂದಳು. ನಾವು ಮನೆಗೆ ಹೋಗಬೇಕು ಎಂದಾಗ ಮನೆಗೇ ತನ್ನ ಕಾರಿನಲ್ಲಿ ಕರೆದೊಯ್ದಳು.

ಈ ಘಟನೆ ನಡೆದದ್ದು ಇಂಗ್ಲೆಂಡಿನ ‘ನ್ಯೂ ಕ್ಯಾಸೆಲ್’ ಎಂಬ ಊರಿನಲ್ಲಿ. ಮಗನ ಮನೆಗೆ ಹೋದವರು, ಊರ ಹೊರವಲಯದಲ್ಲಿ ವಾಕ್ ಹೋಗಿದ್ದೆವು. ಅಲ್ಲಿ ‘ಪಾದಾಚಾರಿಗಳು ದಾಟುವ ರಸ್ತೆ’ ಎಂಬ ಫಲಕ ನೋಡಿ ರಸ್ತೆ ದಾಟುವಾಗ ಆದ ಘಟನೆ. ವೇಗದ ಮಿತಿ ಇಪ್ಪತ್ತು ಮೈಲಿಗಳು ಎಂದು ಹಾಕಿದ್ದರೂ ಆ ಹೆಣ್ಣುಮಗಳು ಎಂಬತ್ತು ಮೈಲಿ ವೇಗವಾಗಿ ಕಾರು ಓಡಿಸುತ್ತಿದ್ದಳು. ಅಲ್ಲಿ ನೆರೆದವರೆಲ್ಲಾ ಅವಳನ್ನು ಬಯ್ಯುತ್ತಿದ್ದರು. ಆ ಕ್ಷಣ ನನಗೆ ಕಾಲಿನ ನೋವಿನ ಬಗ್ಗೆ ಗಮನವೇ ಇರಲಿಲ್ಲ. ಈ ಪರದೇಶದಲ್ಲಿ ಪೊಲೀಸು, ಕೋರ್ಟು, ಆಸ್ಪತ್ರೆ ಅಂತ ಅಲೆಯಬೇಕಲ್ಲ ಎಂಬ ಚಿಂತೆ. ಆಸ್ಪತ್ರೆಯಲ್ಲಿ ಪ್ಲಾಸ್ಟರ್ ಹಾಕಿಸಿಕೊಂಡು ನಮ್ಮ ಊರಿಗೆ ಹೋಗಿಬಿಟ್ಟರೆ ಸಾಕು ಎಂಬ ಭಾವ. ನಾವು ಮನೆ ತಲುಪುವ ಹೊತ್ತಿಗೆ ವೈದ್ಯನಾಗಿದ್ದ ಮಗ ಆಗಲೇ ಆಸ್ಪತ್ರೆಗೆ ಹೋಗಿದ್ದ. ನನ್ನ ಸೊಸೆ ತಕ್ಷಣವೇ ಟ್ಯಾಕ್ಸಿ ಮಾಡಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದಳು. ಮೊಮ್ಮಗಳಿಗೆ ಆಗಿನ್ನೂ ಒಂದೂವರೆ ತಿಂಗಳು. ಮಗುವನ್ನು ತಾತನ ಬಳಿ ಬಿಟ್ಟು ನಾವು ಆಸ್ಪತ್ರೆಗೆ ಹೋಗಬೇಕಾಯ್ತು. ನಾವು ಆಸ್ಪತ್ರೆ ತಲುಪುವ ಹೊತ್ತಿಗೆ ಪೊಲೀಸರು ಅಲ್ಲಿ ಹಾಜರಿದ್ದರು. ನಡೆದ ವಿವರಗಳನ್ನು ದಾಖಲಿಸಿದರು. ನಾನು – ಮಗ ಬರುವನೇನೋ ಎಂದು ಕಾತರದಿಂದ ನಿರೀಕ್ಷಿಸುತ್ತಿದ್ದೆ. ಆದರೆ ಅವನು ತನ್ನ ಕೆಲಸ ಬಿಟ್ಟು ಬರುವಂತಿರಲಿಲ್ಲ. ಅಲ್ಲಿನ ಶಿಸ್ತಿನ ಬಗ್ಗೆ ಮೆಚ್ಚುಗೆಯ ಜೊತೆಗೆ ಬೇಸರವೂ ಆಯಿತೆನ್ನಿ.

(ಸಾಂದರ್ಭಿಕ ಚಿತ್ರ ,ಅಂತರ್ಜಾಲದಿಂದ)

ಪೊಲೀಸರು ಹೊರಟ ತಕ್ಷಣ ವೈದ್ಯರು ನನ್ನ ಕಾಲನ್ನು ಪರೀಕ್ಷಿಸಿ ಎಕ್ಸ್ ರೇ ಮಾಡಿಸಿ ಎಡ ಪಾದದಲ್ಲಿ ಐದು ಮೂಳೆ ಮುರಿದಿದೆ ಎಂದರು. ಆಗಲೇ ನನಗೆ ಆ ಪುಟ್ಟ ಪಾದದಲ್ಲಿ ಅಷ್ಟೊಂದು ಮೂಳೆಗಳು ಇವೆ ಎಂದು ಗೊತ್ತಾಗಿದ್ದು. ಹಿಮ್ಮಡಿಯ ಬಳಿ ಸ್ಥಳಾಂತರ ಬೇರೆ ಆಗಿತ್ತು. ಅಲ್ಲಿನ ಪದ್ದತಿಯಂತೆ ವೈದ್ಯರು ನನಗೆ ಎಲ್ಲ ವಿವರ ನೀಡಿ ಎರಡು ಆಯ್ಕೆಗಳನ್ನು ನನ್ನ ಮುಂದಿಟ್ಟರು. ಮುರಿದ ಮೂಳೆಗಳನ್ನು ಹಾಗೆಯೇ ಜೋಡಿಸಿವುದು ಅಥವಾ ಆಪರೇಷನ್ ಮಾಡಿ ಜೋಡಿಸುವುದು. ನಾನು – ನೀವು ಈ ಕ್ಷೇತ್ರದಲ್ಲಿ ಪರಿಣಿತರು. ನಿಮಗೆ ಯಾವುದು ಸೂಕ್ತವೋ ಅದನ್ನು ಮಾಡಿ – ಎಂದೆ. ನನ್ನ ಉತ್ತರ ಕೇಳಿ ಅವರಿಗೆ ಅಚ್ಚರಿಯಾಯಿತು. ನನ್ನನ್ನು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿ ವೈದ್ಯರು -ಆಪರೇಷನ್ ಇಲ್ಲದೆಯೇ ಮೂಳೆಗಳನ್ನು ಜೋಡಿಸಲು ಪ್ರಯತ್ನಿಸುತ್ತೇವೆ. ಆಗದಿದ್ದಲ್ಲಿ ಆಪರೇಷನ್ ಮಾಡುತ್ತೇವೆ ಎಂದರು. ನನಗೆ ಎಚ್ಚರ ಬಂದಮೇಲೆ ವಾರ್ಡ್‌ಗೆ ಸ್ಥಳಾಂತರಿಸಿದರು. ಆಗ ಸಂಜೆ ಆಗಿತ್ತು. ಆಗ ಮಗ ಬಂದು ಆಪರೇಷನ್ ಬೇಕಾಗಲಿಲ್ಲ. ಹಾಗೆಯೇ ಪ್ಲಾಸ್ಟರ್ ಹಾಕಿ ಜೋಡಿಸಿದ್ದಾರೆ ಎಂದು ಹೇಳಿದ. ಮಗನನ್ನು ನೋಡಿ ನನಗೆ ಜೀವ ಬಂದ ಹಾಗಾಯಿತು. ಕಣ್ಣಲ್ಲಿ ನೀರು ಬಂತು. ಅಪಘಾತದ ಕೇಸ್ ಆಗಿದ್ದರಿಂದ ನಾನು ಎರಡು ದಿನ ಅಲ್ಲಿಯೇ ಇರಬೇಕಾದ ಅನಿವಾರ್ಯತೆ ಇತ್ತು. ಅಲ್ಲಿನ ಕಾಯಿದೆಯಂತೆ ರಾತ್ರಿ ವಾರ್ಡ್‌ನಲ್ಲಿ ಯಾರೂ ಇರುವಂತಿರಲಿಲ್ಲ. ನನಗೋ ಒಬ್ಬಳೇ ಇರಲು ಗಾಬರಿ. ಅವರೆಲ್ಲಾ ಮಾತಾಡುತ್ತಿದ್ದುದು ಇಂಗ್ಲಿಷಿನಲ್ಲಿಯಾದರೂ ನನಗೆ ಅವರ ಉಚ್ಚಾರಣೆ
ಅರ್ಥ ಆಗುತ್ತಿರಲಿಲ್ಲ. ಮೂವತ್ತು ವರ್ಷಗಳ ಕಾಲ ಕಾಲೇಜಿನಲ್ಲಿ ಇಂಗ್ಲಿಷ್ ಬೋಧಿಸಿದ್ದು ವ್ಯರ್ಥ ಎನ್ನಿಸಿತು. ‘Put your leg up’ ಎನ್ನುವಾಗ ಅಪ್ ಎನ್ನಲು ‘ಉಪ್’ ಎಂದೂ discharge you on Monday- ಎನ್ನುವಾಗ ಮಂಡೆ ಬದಲಿಗೆ ಮುಂಡೆ ಎಂದಾಗ ನಗುವುದೋ, ಅಳುವುದೋ ತಿಳಿಯಲಿಲ್ಲ.

ಮಗ ಹೋದ ಮೇಲೆ ಸುತ್ತಲೂ ನೋಡಿದೆ. ಅಲ್ಲಿ ಇನ್ನೂ ಮೂರು ಜನ ಇದ್ದರು. ಎಲ್ಲರೂ ಬಿಳಿಯರೇ. ಅವರಲ್ಲಿ ನನ್ನ ಬಗ್ಗೆ ನಿರ್ಲಕ್ಯ ಮನೋಭಾವ ಎದ್ದು ಕಾಣುತ್ತಿತ್ತು. ನನಗೆ ತುಂಬಾ ಹಸಿವಾಗಿತ್ತು. ಮಾತ್ರೆ ಕೊಡಲು ನರ್ಸ್ ಬಂದಾಗ ಸಂಕೋಚ ಬದಿಗಿಟ್ಟು – ನನಗೆ ಹಸಿವಾಗಿದೆ, ನಾನು ಸಸ್ಯಾಹಾರಿ ಎಂದೂ ಸೇರಿಸಿದೆ. ಬ್ರೆಡ್ ಆಮ್ಲೆಟ್ ತಂದು ಕೊಟ್ಟಳು. ನಾನು ಮೊಟ್ಟೆಯನ್ನೂ ತಿನ್ನುವುದಿಲ್ಲ ಎಂದಾಗ – Shall I get you a boiled jacketed potato.. ನನಗೋ ಅವಳು Jack fruit ‌ಎಂದ ಹಾಗೆ ಕೇಳಿಸಿತು. ಆದರೆ ಅವಳು ತಂದಿದ್ದು ಒಂದು ಸಣ್ಣ ತೆಂಗಿನಕಾಯಿ ಗಾತ್ರದ ಸಿಪ್ಪೆ ಸಮೇತ ಬೇಯಿಸಿದ ಆಲೂಗಡ್ಡೆ, ಜೊತೆಗೆ ಚೀಸ್- ನಾನು ಆಲೂ ಮಹಾಶಯನನ್ನು ಚಾಕುವಿನಿಂದ ಕತ್ತರಿಸಿ ಫೋರ್ಕ್ ನಿಂದ ತಿನ್ನಲು ಹರಸಾಹಸ ಮಾಡಿದೆ. ಆಗಲಿಲ್ಲ. ನನ್ನ ಫಜೀತಿ ನೋಡಿದ ಒಬ್ಬ ನರ್ಸ್ ಒಂದು ದೊಡ್ಡ ಬಟ್ಟಲು ತುಂಬಾ ಐಸ್‌ಕ್ರೀಮ್ ತಂದು ಕೊಟ್ಟಳು. ಆ ದಿನ ತಿಂದ ಐಸ್‌ಕ್ರೀಮ್ ರುಚಿ ಎಂದೂ ಮರೆಯಲು ಸಾಧ್ಯವಾಗಿಲ್ಲ. ಜೊತೆಗೆ ಆ ನರ್ಸ್‌ಳ ಕಳಕಳಿಯನ್ನು ಮರೆಯಲು ಸಾಧ್ಯವೇ?

ಮಾರನೆಯ ದಿನ ಶನಿವಾರ. ಮಗ, ಸೊಸೆ, ಮಗಳು, ಅಳಿಯ, ಗಂಡ, ಒಂದೂವರೆ ತಿಂಗಳ ಮೊಮ್ಮಗಳೂ ಬಂದಿದ್ದರು. ವೈದ್ಯರು ಸೋಮವಾರ ಮನೆಗೆ ಕಳುಹಿಸುವುದಾಗಿ ತಿಳಿಸಿದರು. ಅವರೆಲ್ಲಾ ಹೊರಟು ನಿಂತಾಗ, ನಾನೊಬ್ಬಳೇ ಇನ್ನೂ ಎರಡು ದಿನ ಇರಬೇಕಲ್ಲಾ ಎಂದು ಬೇಸರವಾಯಿತು. ಆ ದಿನ ಸಂಜೆ ಹೊತ್ತಿಗೆ ಅಕ್ಕ ಪಕ್ಕದವರ ಪರಿಚಯವಾಯಿತು. ನಾನು ನನಗಾದ ಅಪಘಾತದ ಬಗ್ಗೆ ಹೇಳಿದೆ. ಅವರ ಮಾತು ಸರಿಯಾಗಿ ಅರ್ಥ ಆಗುತ್ತಿರಲಿಲ್ಲ. ಮಾತಿಗೊಮ್ಮೆ beg your pardon  ಎನ್ನುತ್ತಿದ್ದೆ. ಅವರು ನಿಧಾನವಾಗಿ ಬಿಡಿಸಿ ಬಿಡಿಸಿ ಹೇಳುವಾಗ ಅರ್ಥವಾಗುತ್ತಿತ್ತು. ನನ್ನ ಬಲಗಡೆಯಿದ್ದವಳು ಸಾರಾ. ಮನೆಯಲ್ಲಿ ಜಾರಿ ಬಿದ್ದು ಪೃಷ್ಠದ ಭಾಗದ ಮೂಳೆ ಮುರಿದಿತ್ತು. ಅವಳು 65 ವರ್ಷದವಳು. ಗಂಡನನ್ನು ಡೈವೋರ್ಸ್ ಮಾಡಿದ್ದಳು. ಅವಳಿಗೆ ನಾಲ್ಕು ಮಕ್ಕಳು. ಎಲ್ಲರೂ ಮದುವೆಯಾಗಿ ಬೇರೆ ಬೇರೆ ಬಿಡಾರ ಹೂಡಿದ್ದರು. ಸ್ನಾನಗೃಹ, ಮಲಗುವ ಕೊಠಡಿ ಮಹಡಿ ಮೇಲೆ ಇದ್ದುದರಿಂದ ಅವಳು ಮನೆಗೆ ಹೋಗಲು ಸಿದ್ದಳಿರಲಿಲ್ಲ. ಮಕ್ಕಳು ಅವಳನ್ನು ತಮ್ಮ ಜೊತೆ ಕರೆದೊಯ್ಯಲು ಸಿದ್ದರಿರಲಿಲ್ಲ. ಅವಳ ಹಾಸಿಗೆಯ ಸುತ್ತಾ- ಬೇಗ ಗುಣಮುಖರಾಗಿ ಎಂದು ಹಾರೈಸುವ ಕಾರ್ಡ್‌ಗಳು, ಪುಷ್ಪಗುಚ್ಛಗಳು, ದ್ರಾಕ್ಷಾರಸದ ಬಾಟಲುಗಳೂ ಇದ್ದವು. ಅವಳನ್ನು ನೋಡಲು ಬಂದ ಮಕ್ಕಳು ತಾಯಿಗೆ ಕೆನ್ನೆಗೆ ಮುತ್ತಿಟ್ಟು ಹೊರಟುಬಿಡುತ್ತಿದ್ದರು. ಆ ರಾತ್ರಿ ಸಾರಾ -ನೀವೆಷ್ಟು ಪುಣ್ಯವಂತರು. ನಿಮ್ಮ ಕುಟುಂಬಕ್ಕೆ ನಿಮ್ಮ ಬಗ್ಗೆ ಎಷ್ಟೊಂದು ಪ್ರೀತಿ ಇದೆ- ಎಂದಳು. ನನ್ನ ಮಕ್ಕಳ ಪ್ರೀತಿ ಈ ಗ್ರೀಟಿಂಗ್ ಕಾರ್ಡ್‌ನಲ್ಲಿದೆ ನೋಡಿ ಎಂದು ನಿಟ್ಟುಸಿರುಬಿಟ್ಟಳು. ನಾನು ಮೌನವಾಗಿ ಅವಳನ್ನು ನೋಡಿದೆ.

ಇನ್ನೊಂದು ಬದಿಯಲ್ಲಿದ್ದ ಮೇರಿ ಎರಡು ಬಾರಿ ದೈವೋರ್ಸ್ ಆದವಳು. ಮೂರನೆಯವನ ಜೊತೆಗೆ Live-in-relation ನಲ್ಲಿ ಇದ್ದಳು. ಅವಳಿಗೆ ನನ್ನ ಬಗ್ಗೆ ಅಪಾರವಾದ ಅನುಕಂಪ. ಏಕೆ ಅಂತೀರಾ? -ನೀನು ಮೂವತ್ತು ವರ್ಷದಿಂದ ಒಬ್ಬನೇ ಗಂಡನ ಜೊತೆ ಹೇಗಿದ್ದೀಯಾ? ಕುಡಿಯುವುದಿಲ್ಲ, ಇಸ್ಪೀಟ್ ಆಟ ಗೊತ್ತಿಲ್ಲ, ಗೆಳೆಯರ ಜೊತೆ ಪಾರ್ಟಿ ಮಾಡಲ್ಲ – ನಿನ್ನ ಜೀವನ ನೋಡಿದರೆ ಅಯ್ಯೋ ಎನಿಸುತ್ತಿದೆ – ಎಂದಳು. ನಾನು ಮೌನಕ್ಕೆ ಶರಣಾದೆ. ನಾನು ಹೇಳುವ ಯಾವ ಮಾತೂ ಅವಳಿಗೆ ರುಚಿಸುತ್ತಿರಲಿಲ್ಲ.

ಎದುರಿಗೆ ಇದ್ದವಳು ಅನ್ನಾ. ಅವಳು ನನ್ನ ಹಾಗೇ ಟೀಚರ್ ಆಗಿದ್ದಳು. ಅನ್ನಾಗೆ ನಮ್ಮ ಸಂಸ್ಕೃತಿಯ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳು ಇದ್ದವು. ವರದಕ್ಷಿಣೆ ಬಗ್ಗೆ, ಸೊಸೆಯರನ್ನು ಸುಡುವ ಅತ್ತೆಯರ ಬಗ್ಗೆ ಚರ್ಚೆ ಮಾಡಿದಳು. ಇದಕ್ಕೆಲ್ಲಾ ಮೂಲಕಾರಣ Arranged Marriages  ಎಂದಳು. ನಾನು -ಮದುವೆ ಕೇವಲ ಎರಡು ವ್ಯಕ್ತಿಗಳ ಮಧ್ಯೆ ನಡೆಯುವ ಸಂಗತಿಯಲ್ಲ. ಅದು ಎರಡು ಕುಟುಂಬಗಳ ನಡುವಿನ ಬೆಸುಗೆ. ಹೀಗೆ ನಡೆದ ಮದುವೆಗಳಲ್ಲಿ 80 ಪ್ರತಿಶತ ಜನರು ಸುಖವಾಗಿರುತ್ತಾರೆ. ಆದರೆ ಕೆಲವು ದುರಂತಗಳು ನಡೆದುಬಿಡುತ್ತವೆ. ದುರಾಸೆಯ ಜನ ಎಲ್ಲ ಕಡೆಯೂ ಇದ್ದಾರಲ್ಲವೇ? ನನ್ನ ಮಕ್ಕಳ ಬಳಿ ನೀವು ಮಾತಾಡಿ. ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದೆ. ಮಾರನೆಯ ದಿನ ಅನ್ನಾಳನ್ನು ನನ್ನ ಮಕ್ಕಳಿಗೆ ಪರಿಚಯಿಸಿದೆ. ಅವಳು ಅವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದಳು. ಆ ದಿನ ಸಂಜೆ ನಾವು ನಾಲ್ಕೂ ಜನ ನಮ್ಮ ಸಮಾಜ, ಮದುವೆ, ಧರ್ಮ – ಇವುಗಳ ಬಗ್ಗೆ ನಮ್ಮ ನಮ್ಮ ಭಾವನೆಗಳನ್ನು ಹಂಚಿಕೊಂಡೆವು. ಅನ್ನಾ – ನಿಮ್ಮ ಮದುವೆ ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿದ್ದಕ್ಕೆ ಕ್ಷಮೆ ಇರಲಿ ಗೆಳತಿ-ಎಂದಳು.

ಮಾರನೆಯ ದಿನ ನನ್ನ ಮತ್ತು ಅನ್ನಾಳ ಬಿಡುಗಡೆ ಇತ್ತು. ಎರಡು ದಿನದಲ್ಲಿ ನಮ್ಮ ಮಧ್ಯೆ ಒಂದು ಮಧುರವಾದ ಬಾಂಧವ್ಯ ಬೆಳೆದಿತ್ತು. ಮೊದಲನೆಯ ದಿನ ನನ್ನ ಬಗೆಗೆ ತಿರಸ್ಕಾರ ತೋರಿದ ಜನರ ಮನದಲ್ಲಿ ಆತ್ಮೀಯತೆಯ ಭಾವ ಚಿಗುರೊಡೆಯ ತೊಡಗಿತ್ತು. ಅವರು ಹೇಳಿದ ಮಾತುಗಳು ನನ್ನ ಮನದಲ್ಲಿ ಈಗಲೂ ಮಾರ್ದನಿಸುತ್ತವೆ.-ನೀವು ಭಾರತೀಯರು ತುಂಬಾ ಶ್ರಮಜೀವಿಗಳು, ಬುದ್ಧಿವಂತರು. ನಮ್ಮ ದೇಶದ ಆಸ್ಪತ್ರೆಗಳಲ್ಲಿ ಭಾರತೀಯರಿಗೇ ಬೇಡಿಕೆ ಹೆಚ್ಚು. ನೀವು ಮಾತಾಡುವ ಇಂಗ್ಲಿಷ್ ಭಾಷೆ ಕೇಳಲು ಸೊಗಸು.

ಮನೆಗೆ ಬಂದು ಒಂದು ವಾರ ಕಳೆದಿತ್ತು. ಆಗ  National Accident Helpline  ನ ಒಬ್ಬ  ಅಧಿಕಾರಿ ಬಂದರು. ಅವರು No Win- No Claim -ಎಂಬ ಪಾಲಿಸಿಯ ಮೇಲೆ ತಮ್ಮ ಕೆಲಸ ಎಂದರು. ಅವರ ಪ್ರಶ್ನೆಗಳು ವಿಚಿತ್ರವಾಗಿದ್ದವು. ಅಪಘಾತದಿಂದ ನನಗೆ ಆಗಿರುವ ಮಾನಸಿಕ ಹಿಂಸೆ, ಭಾವನಾತ್ಮಕವಾದ ನೋವು, ನನ್ನ ಗಂಡ ಹಾಗೂ ನನ್ನ ಕುಟುಂಬಕ್ಕಾದ ಆಘಾತಗಳಿಗೆ ಬೆಲೆ ಕಟ್ಟಿ ಪರಿಹಾರದ ಮೊತ್ತ ಲೆಕ್ಕ ಹಾಕುತ್ತಿದ್ದರು. ಎರಡು ಮೂರು ಬಾರಿ ಬಂದು ಹೋದರು. ಆರು ತಿಂಗಳ ಬಳಿಕ ಈ ಅಪಘಾತದಿಂದ ಪರಿಹಾರದ ಮೊತ್ತವಾಗಿ 5,000 ಪೌಂಡ್ ಬಂದಿತು ಅಂದರೆ 4,90,000 ರೂಗಳು. ಈ ದೇಶದ ಪೊಲೀಸರ ಬಗ್ಗೆ, ವೈದ್ಯರ ಬಗ್ಗೆ, ಕೋರ್ಟಿನ ಬಗ್ಗೆ ಬಹಳವಾದ ಗೌರವ ಮೂಡಿತು. ಅಪಘಾತ ನಡೆದ ಅರ್ಧ ಗಂಟೆಯಲ್ಲೇ ಮನೆಗೆ ಬಂದು ಮಾಹಿತಿ ಪಡೆದ ಪೊಲೀಸಿನವರು, ಆಸ್ಪತ್ರೆಗೆ ಹೋದ ತಕ್ಷಣವೇ ಯಾವುದೇ ಶುಲ್ಕವಿಲ್ಲದೇ ಉತ್ತಮವಾದ ಶುಶ್ರೂಷೆ ನೀಡಿದ ವೈದ್ಯರು, ಒಂದು ದಿನವೂ ಕೋರ್ಟು ಮೆಟ್ಟಿಲು ಹತ್ತದೇ ಪರಿಹಾರ ಕೊಡಿಸಿದ ವಕೀಲರು. ಇದೆಲ್ಲಾ ನನ್ನ ಪಾಲಿಗೆ ನಂಬಲು ಅಸಾಧ್ಯವಾದ ಮ್ಯಾಜಿಕ್ ಆಗಿತ್ತು. ನನ್ನ ಖರ್ಚನ್ನೆಲ್ಲಾ ಭರಿಸಿದವರು ಕಾರಿಗೆ ಮಾಡಿಸಿದ್ದ ವಿಮಾ ಪಾಲಿಸಿಯವರಂತೆ.

ಅಪಘಾತ ತಂದ ಸಂಪತ್ತು ಇಲ್ಲಿಗೇ ಮುಗಿಯುವುದಿಲ್ಲ. ಸೊಸೆಯ ಬಾಣಂತಿತನ ಮಾಡಲು ಬಂದವಳು ಅವರಿಂದಲೇ ಆರೈಕೆ ಮಾಡಿಸಿಕೊಳ್ಳುವ ಪರಿಸ್ಥಿತಿ ನನ್ನದಾಗಿತ್ತು. ಇದುವರೆಗೂ ಗಂಡನ ಸೇವೆ ಮಾಡಿದ ನನಗೆ ಈಗ ಅವರಿಂದಲೇ ಸೇವೆ ಮಾಡಿಸಿಕೊಳ್ಳಬೇಕಾಯಿತು.. ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ’ ಎಂಬುವ ಚಿತ್ರಗೀತೆಯ ನೆನಪಾಯಿತು. ಹೆಜ್ಜೆ ಹೆಜ್ಜೆಗೂ ನನ್ನ ಆರೈಕೆ ಮಾಡುತ್ತಿದ್ದ ಗಂಡನನ್ನು ಕಂಡಾಗ (ನನಗಾದ ಅಪಘಾತದಿಂದ) ಅವರೊಳಗಿದ್ದ ಮಮತಾಮಯಿ ತಾಯಿಯನ್ನು ಕಂಡೆ. ಸೊಸೆ ಮಗಳಂತೆ ನನ್ನ ನೋಡಿಕೊಳ್ಳುತ್ತಿದ್ದಳು. ಆಸ್ಪತ್ರೆಯಲ್ಲಿ ನನ್ನ ಜೊತೆಗಿದ್ದ ಸಾರಾ, ಮೇರಿ, ಅನ್ನಾ ನನ್ನ ಗೆಳತಿಯರಾದರು. ಅಲ್ಲಿನ ನರ್ಸ್‌ಗಳ ಕರ್ತವ್ಯನಿಷ್ಠೆ, ಅವರು ತೋರಿದ ಮಾನವೀಯತೆ ಮನದಲ್ಲಿ ಅಚ್ಚಳಿಯದೆ ನೆಲೆಸಿವೆ.

ಅಪಘಾತ ನಡೆದು ಹದಿನೈದು ವರ್ಷಗಳಾಗಿವೆ. ಮೂಳೆ ಮುರಿದ ಕುರುಹೂ ಇಲ್ಲ. ಪಡೆದ ಪರಿಹಾರ ಮೊತ್ತ ಖರ್ಚಾಗಿದೆ. ಆದರೆ ಅಂದು ನಾನು – ಗಂಡನಿಂದ, ಸೊಸೆಯಿಂದ, ಮಕ್ಕಳಿಂದ, ವೈದ್ಯರಿಂದ, ಗೆಳತಿಯರಿಂದ – ಪಡೆದ ಪ್ರೀತಿ, ವಾತ್ಸಲ್ಯ, ಆತ್ಮೀಯತೆ – ಅಂದಿಗೂ, ಇಂದಿಗೂ, ಎಂದೆಂದಿಗೂ ಅಕ್ಷಯ ಪಾತ್ರೆಯಂತೆ ನನ್ನ ಬಳಿಯೇ ಇದೆ.

-ಡಾ.ಗಾಯತ್ರಿ  ಸಜ್ಜನ್, ಶಿವಮೊಗ್ಗ

16 Responses

 1. ನಯನ ಬಜಕೂಡ್ಲು says:

  ಮೇಡಂ ತುಂಬಾ ಸೊಗಸಾಗಿದೆ ಲೇಖನ. ನಗುವಿದೆ, ನಮ್ಮ ಸಂಸ್ಕೃತಿ ಹಾಗೂ ಪರದೇಶದವರ ರೀತಿ ನೀತಿಗಳ ಉಲ್ಲೇಖ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಸಾರುವಂತಿದೆ, ನಿಕೃಷ್ಟವಾಗಿ ಕಂಡವರು ಮೆಚ್ಚಿದ ಕುರಿತಾದ ಉಲ್ಲೇಖ ಇಷ್ಟವಾಯಿತು, ಒಟ್ಟಲ್ಲಿ ತಿಳಿ ಹಾಸ್ಯ ಮಿಶ್ರಿತ ಚಂದದ ಬರಹ.

 2. Nirmala says:

  Wonderful article atte.. Ty for sharing

 3. ಗೀತಾ says:

  ಸವಿಯುವ ಮನದಾಳದ ನೆನಪುಗಳು. ನಿಮ್ಮ ನೆನಪುಗಳು ನಮ್ಮದಾಗಿವೆ.

 4. ಜಲಜಾರಾವ್ says:

  ಆಪ್ತ ಬರಹ. ಆಗ್ಗೂ ಈಗ್ಗೂ ಬಹಳಷ್ಟು ಬದಲಾವಣೆ ಕಂಡಿದ್ದರೂ ವಿದೇಶಿ ಸಂಸ್ಕೃತಿಯು ನಮ್ಮ ದೇಶದ ಉದಾತ್ತ ಧ್ಯೇಯಗಳಿಗೆ ತಲೆಬಾಗಲೇಬೇಕು. ಅಪಘಾತದ ತೀವ್ರತೆ ಹೆಚ್ಚು ನೋಯಿಸದೆ ಎಲ್ಲರ ಪ್ರೀತಿ, ಅಂತಃಕರಣ ದೊರಕಿಸಿಕೊಟ್ಟಿದ್ದು ಓದಿ ಖುಷಿಯಾಯಿತು.

 5. Anonymous says:

  ಚಂದದ ಬರಹ

 6. ಎನ್ ಶೈಲಜಾ ಹಾಸನ says:

  ನಿಮ್ಮ ಅನುಭವವನ್ನು ತುಂಬಾ ಸೊಗಸಾಗಿ ನಿರೂಪಣೆ ಮಾಡಿದ್ದಿರಿ.ಅಭಿನಂದನೆಗಳು.

 7. Asha nooji says:

  ವಿದೇಶದಲ್ಲಿ.. ಅಪಘಾತದ ಮತ್ತು ವೈದ್ಯಕೀಯ ಶುಶ್ರೂಷೆ ಎಲ್ಲವನ್ನೂ ವಿವರಿಸಿ ಬರೆದ ಬರಹ

 8. Hema says:

  ಸೊಗಸಾದ ಬರಹ….ನಮ್ಮ ಸಂಸ್ಕೃತಿಯೇ ಮೇಲು .

 9. Arpitha K c says:

  Nice

 10. sudha says:

  Very nice article. good and bad when you are outside your country

 11. ಶಂಕರಿ ಶರ್ಮ says:

  ಬಹಳ ಆಪ್ತವಾದ ಸ್ವಾನುಭವ ಲೇಖನವು ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿದಿದೆ. ನಾನು ಕೂಡಾ ಅಮೇರಿಕದಲ್ಲಿರುವ ಮಗಳಲ್ಲಿಗೆ ಹೋಗಿದ್ದಾಗ ನಿಮ್ಮದೇ ಕೆಲವು ಅನುಭವಗಳು ನನಗೂ ಆಗಿದ್ದುದು ನೆನಪಾಯ್ತು. ತಿಳಿ ಹಾಸ್ಯ ಮಿಶ್ರಿತ ಲೇಖನ ಇಷ್ಟವಾಯ್ತು. ಧನ್ಯವಾದಗಳು ಮೇಡಂ.

 12. Gayathri Sajjan says:

  Thank you

 13. Savithri bhat says:

  ನಿಮ್ಮ ಲೇಖನದಲ್ಲಿ, ಅಪಘಾತದ ನೋವಿನಲೂ ನಲಿವು ತುಂಬಿಸಿದಿರಿ..ಕಷ್ಟ,ಸುಖದ ಅನುಭವ ಹಂಚಿದ ರೀತಿ ತುಂಬಾ ಸುಂದರವಾಗಿತ್ತು.

 14. Kiran says:

  Nice narrative madam. Even i have attended ur English classes when I was Studying BSc@ Sahydadri College 1998-2001.

Leave a Reply to ಎನ್ ಶೈಲಜಾ ಹಾಸನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: