ತಂದೆಯ ಉದರದಿಂದ ಜನಿಸಿದ ಮಗ ಮಾಂಧಾತ
ಪ್ರಕೃತಿಯಲ್ಲಿ ಅಸಂಖ್ಯಾತ ಜೀವಿಗಳಿವೆ. ಅವುಗಳಲ್ಲಿ ಎಷ್ಟೊಂದು ವೈಚಿತ್ರ್ಯಗಳಿವೆ. ಜೀವಿಗೆ ಹುಟ್ಟು ಇರುವಂತೆ ಸಾವೂ ನಿಶ್ಚಿತವು , ಈ ಹುಟ್ಟು ಸಾವುಗಳ ಗುಟ್ಟನ್ನು ಪ್ರಕೃತಿ ಇನ್ನೂ ಬಿಟ್ಟುಕೊಟ್ಟಿಲ್ಲ ಎಂದೇ ಹೇಳಬೇಕು. ಮಾನವರಲ್ಲಿ ಕುಟುಂಬ ಯೋಜನೆ ಮಾಡುತ್ತಾರೆ, ಮಾಡಿಸುತ್ತಾರೆ. ಆದರೆ ಒಂದು ಮಗುವೂ ಇಲ್ಲದವರಿಗೆ, ಬೇಕೆನಿಸಿದವರಿಗೆ ಹಲವು ಕಾಲ ತಪಸ್ಸು ಮಾಡಿದರೂ ಮಕ್ಕಳಾಗುವುದಿಲ್ಲ. ಈಗಿನ ವಿಜ್ಞಾನ ಬಹಳಷ್ಟು ಮುಂದುವರಿದು ಮಕ್ಕಳಿಲ್ಲದವರಿಗೆ ಪ್ರನಾಳ ಶಿಶು, ಕೃತಕ ಗರ್ಭದಾನ ಮೊದಲಾದ ಆಧುನಿಕ ತಂತ್ರಜ್ಞಾನವನ್ನು ಬಳಸಿ, ಮಕ್ಕಳಿಲ್ಲದವರ ಕಣ್ಣೀರೊರೆಸಿ ಪರಿಹಾರ ತೋರುತ್ತದೆ. ಆದರೂ ನೂರಕ್ಕೆ ನೂರರಷ್ಟು ಯಶಸ್ವಿಯಾಗಿಲ್ಲ. ಕಾರಣ ಅಂತಹ ದುಃಖಿತರು ಬಹಳಷ್ಟು ಮಂದಿ ಕಾಣಸಿಗುತ್ತಾರೆ.
ವಿಜ್ಞಾನ ಎಷ್ಟೇ ಮುಂದುವರಿದರೂ ಶಿಶುವಿಗೆ ಜನ್ಮ ನೀಡುವವಳು ಹೆಣ್ಣು. ಬೀಜ ಬಿತ್ತುವವನು ಗಂಡು, ಪ್ರಕೃತಿಯ ಈ ನಿಯಮ ವ್ಯತ್ಯಾಸಗೊಳ್ಳುವುದಿಲ್ಲ. ಏರುಪೇರಾಗುವುದಿಲ್ಲ. ಆದರೆ… ಇದಕ್ಕೆ ಅಪವಾದವೆಂಬಂತೆ ನಮ್ಮ ಪುರಾಣದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಗಂಡು ತನ್ನ ಉದರದಲ್ಲಿಟ್ಟು ಮಗುವನ್ನು ಭೂಮಿಗಿಳಿಸಿದ ಉದಾಹರಣೆ ಇದೆ ಎಂದಾಗ ಆಶ್ಚರ್ಯವಾಗುತ್ತದೆಯಲ್ಲವೇ. ಇದಕ್ಕೆ ನಿದರ್ಶನವಾಗಿ ಮಾಂಧಾತ ಎಂಬ ಚಕ್ರವರ್ತಿಯ ಕತೆ ನಮ್ಮ ಮುಂದಿದೆ. ಅವನ ತಂದೆ ಯಾರು? ಅವನು ತಂದೆಯ ಉದರದಲ್ಲಿ ಹೇಗೆ? ಯಾಕೆ ಜನಿಸಿದ, ಬೆಳೆದ ಎಂಬುದು ಬಹಳ ವಿಶಿಷ್ಟವೂ ರೋಚಕವೂ ಆದ ಕತೆ.
ಇಕ್ಷಾಕು ವಂಶದಲ್ಲಿ ಯುವನಾಶ್ವನೆಂಬ ಒಬ್ಬ ಮಹಾರಾಜನಿದ, ಈತನು ಅನೇಕ ಯಾಗಗಳನ್ನಲ್ಲದೆ ಒಂದು ಸಾವಿರ ಅಶ್ವಮೇಧ ಯಾಗಗಳನ್ನೂ ಮಾಡಿದನು. ಈತನಿಗೆ ನೂರು ಮಂದಿ ಪತ್ನಿಯರಿದ್ದೂ ಮಕ್ಕಳಾಗಿರಲಿಲ್ಲ. ಮಕ್ಕಳನ್ನು ಪಡೆಯಲೇಬೇಕೆಂಬ ಉತ್ಕಟಾಭಿಲಾಶೆಯಿಂದ ರಾಜ, ರಾಜ್ಯಾಡಳಿತವನ್ನು ಮಂತ್ರಿಗೆ ವಹಿಸಿಕೊಟ್ಟು ಹೆಚ್ಚು ಕಾಲವೂ ತಪಸ್ಸಿನಲ್ಲಿಯೇ ಕಾಡಿನಲ್ಲಿ ಕಳೆಯುತ್ತಿದ್ದ. ಅಲ್ಲಿ ಭೃಗು ಪುತ್ರನಾದ ಚ್ಯವನ ಮಹರ್ಷಿಯನ್ನು ಕಂಡು ತನ್ನ ಕಾಮನೆಯನ್ನು ನಿವೇದನೆ ಮಾಡಿದ್ದನು ಯುವನಾಶ್ವರಾಜ. ಆತನ ಪ್ರಾರ್ಥನೆಯನ್ನು ಮನ್ನಿಸಿ ಚ್ಯವನನು ಒಂದು ಯಜ್ಞಮಾಡಿ ಮುಗಿಸಿದನು. ಯಜ್ಞವೇದಿಕೆಯ ಬಳಿಯಲ್ಲಿ ಮಂತ್ರಿಸಲ್ಪಟ್ಟ ಒಂದು ಪೂರ್ಣಕುಂಭವು ಸ್ಥಾಪಿತವಾಗಿದ್ದಿತು. ಚ್ಯವನನು ತನ್ನ ತಪಸ್ಸಿನ ಫಲವೆಲ್ಲವನ್ನೂ ಮಂತ್ರಿಸಿ ಕುಂಭದಲ್ಲಿ ಬೀಜರೂಪವಾಗಿ ನಿಕ್ಷೇಪಿಸಿದ್ದನು. ಈ ತೀರ್ಥವನ್ನು ರಾಜನ ಪತ್ನಿಯು ಕುಡಿದು ಅವಳಲ್ಲಿ ಸರ್ವಶ್ರೇಷ್ಠನಾದ ಮಗನು ಹುಟ್ಟಬೇಕಾಗಿತ್ತು. ಆದರೆ ಆಗಿದ್ದೇ ಬೇರೆ. ರಾತ್ರಿಯಲ್ಲಿ ಬಹಳ ಹೊತ್ತು ಕಳೆದಿದ್ದರಿಂದ ಮಹರ್ಷಿಗಳೆಲ್ಲರೂ ಮಲಗಲು ಹೋದರು..
ಇಷ್ಟು ಹೊತ್ತಿಗಾಗಲೇ ಯುವನಾಶ್ವನು ಹಸಿವು ಬಾಯಾರಿಕೆಗಳಿಂದ ಬಳಲಿ ಆಶ್ರಮ ಪ್ರವೇಶಿಸಿದನು. ಆತನಿಗೆ ನೀರಿನ ಅವಶ್ಯಕತೆಯಿತ್ತು. ನಾಲಿಗೆ ಒಣಗಿ ಹೋಗಿತ್ತು. ಅವನ ಬಾಯಾರಿಕೆ ತಣಿಸಲು ಅಲ್ಲಿ ಯಾರೂ ಎಚ್ಚರದಿಂದಿರಲಿಲ್ಲ. ರಾಜನ ಕಣ್ಣಿಗೆ ಉದಕ ಕುಂಭವು ಕಂಡಿತು. ಒಡನೆಯೇ ಅದರಲ್ಲಿದ್ದ ತೀರ್ಥವನ್ನೆಲ್ಲ ಕುಡಿದು ಬಿಟ್ಟನು. ಸಂತೃಪ್ತಿಯಿಂದ ಮಲಗಿದನು. ಸ್ವಲ್ಪದರಲ್ಲಿ ಎಚ್ಚೆತ್ತ ಚ್ಯವನನು ನೋಡುತ್ತಾನೆ.! ಮಂತ್ರಪು ರಸ್ಸರವಾಗಿಟ್ಟ ಉದಕವು ಖಾಲಿಯಾಗಿದ್ದಿತು. ರಾಜನೊಡನೆ ವಿಚಾರಿಸಲಾಗಿ ತಾನು ಕುಡಿದಿರುವುದಾಗಿ ಆತ ಒಪ್ಪಿದನು. ‘ರಾಜಾ, ನೀನು ತಪ್ಪು ಮಾಡಿದ್ದೀಯೋ, ಇದು ನಿನ್ನ ಪತ್ನಿಗೆ ಕೊಡುವುದಕ್ಕಾಗಿ ಮಂತ್ರಿಸಲ್ಪಟ್ಟ ಉದಕ, ಅವಳು ಕುಡಿದು ಅವಳಲ್ಲಿ ಉತ್ತಮನೂ ಸರ್ವಸಂಪನ್ನನೂ ಆದ ಕುವರನು ಜನಿಸುವುದಕ್ಕಾಗಿ ಜಪಿಸಲ್ಪಟ್ಟಿತ್ತು’ ಎಂದನು. ಅದನ್ನು ಕೇಳಿದ ರಾಜನಿಗೆ ಅತೀವ ದುಃಖವಾಯಿತು. ಆಗ ಋಷಿಯು ಆತನನ್ನು ಸಾಂತ್ವನಗೊಳಿಸುತ್ತಾ ‘ರಾಜ, ಇದು ದೈವ ಪ್ರಚೋದನೆಯೇ ಇರಬೇಕು. ನನಗೆ ಹೇಳಲು ಬರುವುದಿಲ್ಲ. ಇನ್ನು ನಿನ್ನ ಉದರ ಸೇರಿದ ತೀರ್ಥ ಪಿಂಡರೂಪ ತಾಳುವುದಕ್ಕಾಗಿ ಪರಮಾದ್ಭುತವಾದ ಒಂದು ಯಾಗವನ್ನು ಮಾಡುವೆವು. ಆ ಯಾಗದ ಫಲದಿಂದ ನೀನು ಗರ್ಭಧರಿಸುವೆ ಚಿಂತಿಸದಿರು’ ಎಂದು ಹೇಳಿ ರಾಜನನ್ನು ಸಮಾಧಾನಿಸಿದನು.
ಹೀಗೆ ಕೆಲವು ಕಾಲ ಕಳೆಯಿತು. ಒಂದು ದಿನ ಯುವನಾಶ್ವನ ಹೊಟ್ಟೆಯ ಎಡಭಾಗವನ್ನು ಸೀಳಿಕೊಂಡು ಸೂರ್ಯ ಸಮಾನವಾದ ತೇಜಸ್ಸಿನಿಂದ ಕೂಡಿದ ಶಿಶು ಹೊರಬಂದನು. ಯುವನಾಶ್ವನಿಗೆ ಯಾವ ಯಾತನೆಯೂ ಆಗಲಿಲ್ಲ. ಇಂತಹ ಅದ್ಭುತವಾದ ಶಿಶುವನ್ನು ನೋಡಲು ದೇವತೆಗಳೊಡನೆ ಇಂದ್ರನೂ ಯುವನಾಶ್ವನಿಗೆ ಅರಮನೆಗೆ ಬಂದನು. ಆಗ ದೇವತೆಗಳು ಇಂದ್ರನಿಗೆ ದೇವೆಂದ್ರ, ಈ ಮಗುವಿಗೆ ಸ್ತನ್ಯಪಾನವೆಲ್ಲಿಯದು ? ಹೇಗೆ ಬದುಕಿತು ? ಎಂದರು. ಆಗ ಮಹೇಂದ್ರನು ‘ಅಯಂ ಮಾಂಧಾಸ್ಯತಿ ‘ ನನ್ನನ್ನೇ ಇವನು ಕುಡಿಯುತ್ತಾನೆ’ ಎನ್ನುತ್ತಾ ತನ್ನ ತೋರುಬೆರಳಲ್ಲಿ ಅಮೃತ ರಸತುಂಬಿ ಚೀಪುವಂತೆ ಮಾಡಿದನು. ದೇವೇಂದ್ರನು ತನ್ನ ತರ್ಜನಿಯನ್ನು ನೀಡಿ ಮಾಂಧಾಸ್ಯತಿ ಎಂದು ಹೇಳಿದ್ದರಿಂದ ದೇವತೆಗಳು ಆ ಶಿಶುವಿಗೆ ಮಾಂಧಾತ ಎಂದು ನಾಮಕರಣ ಮಾಡಿದರು.
ಶಿಶುವು ಬೆರಳನ್ನು ಚೀಪಿದ ಕ್ಷಣದಲ್ಲಿ ಹದಿಮೂರು ಗೇಣುಗಳಷ್ಟು ಬೆಳೆಯಿತು. ಇವನು ಬೆಳೆಯುತ್ತಾ ಅನ್ಯರ ಸಹಾಯವಿಲ್ಲದೆ ವಿದ್ಯೆಯನ್ನೂ ಕಲಿತನು. ಅಸ್ತ್ರಗಳೆಲ್ಲ ತನ್ನಷ್ಟಕ್ಕೆ ಬಂದು ಅವನಿದ್ದೆಡೆಗೆ ಸೇರಿದವು. ಕೇವಲ ಧ್ಯಾನಾಸಕ್ತನಾದ ಮಾತ್ರದಿಂದಲೇ ಸಕಲ ವಿದ್ಯೆಗಳನ್ನೂ ಕವಚ-ಧನುಬಾಣಗಳನ್ನು ಪಡೆದ ಮಹಾಪರಾಕ್ರಮಿಯಾದ ಮಾಂಧಾತನಿಗೆ ಇಂದ್ರನೇ ಸಾಮ್ರಾಜ್ಯ ಪಟ್ಟಾಭಿಷೇಕವನ್ನು ಮಾಡಿದನು. ನಂತರ ಇವನು ವಿಷ್ಣುವಿನೋಪಾದಿಯಲ್ಲಿ ಮೂರು ಲೋಕಗಳನ್ನೂ ಪರಾಕ್ರಮದಿಂದ ಜಯಿಸಿದನು.ಇವನು ಯುವನಾಶ್ವನಂತೆಯೇ ಬಹುದಕ್ಷಿಣಾಕವಾದ ಯಾಗಗಳನ್ನು ಮಾಡಿದನು, ಪೃಥ್ವಿಯ ನಾಲ್ಕು ದಿಕ್ಕುಗಳಲ್ಲಿಯೂ ಅವನು ಪ್ರತಿಷ್ಠಾಪಿಸಿದ ಯೂಪಸ್ತಂಭಗಳು ಈಗಲೂ ಇವೆ ಎಂದು ಪುರಾಣದಲ್ಲಿ ಹೇಳಲ್ಪಡುತ್ತದೆ.
ಒಮ್ಮೆ ಅವನ ಆಳ್ವಿಕೆಯಲ್ಲಿ ವೀರಾಕ್ಷಾಮವಂಟಾಗಿ ಮಳೆ- ಬೆಳೆಗಳು ಇಲ್ಲವಾಯಿತು. ಆಗ ಮಾಂಧಾತನೇ ಮೋಡಗಳಿಗೆ ಅಜ್ಞೆ ಮಾಡಿ ಸಸ್ಯಗಳ ಅಭಿವೃದ್ಧಿಗಾಗಿ ಮಳೆಯಾಗುವಂತೆ ಮಾಡಿದನು. ಇವನ ಪರಾಕ್ರಮ ಇಂದ್ರನ ಪರಾಕ್ರಮಕ್ಕಿಂತಲೂ ಮಿಗಿಲಾಯಿತು.
ಹೀಗೆ ವಿಶಿಷ್ಟ ಜನನವಾಗಿ ತಂದೆಯ ಉದರದಿಂದ ಉದಿಸಿದ ಮಗ, ಮಾಂಧಾತ. ಯಾಗ, ಯಜ್ಞ ಧರ್ಮಾದಿಗಳಿಂದಲೂ, ಪರಾಕ್ರಮದಿಂದಲೂ ತನ್ನ ಹೆಸರು ಆಚಂದ್ರಾರ್ಕವಾಗಿ ಪುರಾಣ ಪುರುಷರತ್ನನಾಗಿ ಶೋಭಿಸುತ್ತಾನೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಕುತೂಹಲಕಾರಿಯಾಗಿದೆ ಕಥೆ.
ಕುತೂಹಲಕಾರಿ ಕಥೆ..ಚಂದದ ನಿರೂಪಣೆ
ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.
ವಿಶಿಷ್ಟವಾದ ಕಥೆ…ಸೊಗಸಾದ ನಿರೂಪಣೆ. ಶ
ನಮ್ಮ ಪುರಾಣದಲ್ಲಿ ಚಿತ್ರ ವಿಚಿತ್ರವಾದ ಕಥೆಗಳಿವೆ. ನಂಬಲೇ ಕಷ್ಟವಾಗಬಹುದಾದಂತಹ ರೋಚಕ ಕಥೆಗಳು ನಿಜಕ್ಕೂ ಅದ್ಭುತ! ತಿಳಿದಿರದ ಸೊಗಸಾದ ಕಥೆಯೊಂದರ ನಿರೂಪಣೆ ಬಹಳ ಚಂದ ಇದೆ ವಿಜಯಕ್ಕ..ಧನ್ಯವಾದಗಳು.
ವಾವ್ ಅತ್ಯಂತ ಕುತೂಹಲಕಾರಿ ಕಥೆ.ಅಭಿನಂದನೆಗಳು ಮೇಡಂ.