ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 8

Share Button

72 ಜಿನಾಲಯ ಮಹಾತೀರ್ಥ-ಜೈನ ಮಂದಿರ

ವೇಳಾಪಟ್ಟಿಯ ಪ್ರಕಾರ ನಮ್ಮ ಮುಂದಿನ ಗುರಿ ‘ಮಾಂಡ್ವಿ’ ಬೀಚ್ ಆಗಿತ್ತು. ರಸ್ತೆಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ಕುರುಚಲು ಗಿಡಗಳು ಮತ್ತು ಮರಳು. ಹಸಿರಿನ ಸುಳಿವೇ ಇಲ್ಲ. ಇನ್ನು ಅಲ್ಲಿಯ ಸಮುದ್ರತೀರದಲ್ಲಿ ಅಲೆಗಳೇ ಇಲ್ಲ. ಮರಳೂ ಇಲ್ಲ .ಸಮುದ್ರದ ಒಳಗೆ ಸುಮಾರು ಅರ್ಧ ಕಿ.ಮೀ ವರೆಗೂ ಕೆಸರು ಮಣ್ಣು. ಅಲ್ಲಲ್ಲಿ ಕಾಣಿಸುವ ಕೆಲವು ಪಕ್ಷಿಗಳು ಮೀನು ಹಿಡಿಯುವ ಪ್ರಯತ್ನದಲ್ಲಿದ್ದುವು. ಒಟ್ಟಿನಲ್ಲಿ ಸಮುದ್ರ ತೀರಕೆಕ್ ಹೋದರೂ ಆಸಕ್ತರಿಗೆ ನೀರಿನಲ್ಲಿ ಈಜಾಡಲು ಸಾಧ್ಯವಿಲ್ಲ, ಬೀಚ್ ಗಳು ಆಕರ್ಷಕವಾಗಿಯೂ ಇಲ್ಲ.  ಇಷ್ಟು  ವಿವರ ಹೇಳಿದ ಟ್ರಾವೆಲ್ಸ್೪ಯು ಗಣೇಶ್ ಅವರು,  ನಿಮಗೆ ಬೀಚ್ ಗೆ ಹೋಗಬೇಕೆ, ಸೀದಾ ಹೋಟೆಲ್ ಗೆ ಹೋಗಬಹುದೇ ಅಥವಾ ಪಟ್ಟಿಯಲ್ಲಿ ಇಲ್ಲದಿದ್ದರೂ  ಬೇರೆ ಯಾವುದಾದರೂ ಸ್ಥಳಗಳನ್ನು ತೋರಿಸಲೇ ಅಂದರು. ನಾವೆಲ್ಲರೂ ಮೂರನೆಯ ಆಯ್ಕೆಗೆ ಕೈಯೆತ್ತಿದೆವು.

ಹಾಗಾಗಿ ಮಾಂಡ್ವಿಯಲ್ಲಿರುವ 72 ತೀರ್ಥಂಕರರ ಜಿನಾಲಯಕ್ಕೆ ಕರೆದೊಯ್ದರು. ಶಾಂತವಾದ   ಪರಿಸರದಲ್ಲಿ, ಸೌಂದರ್ಯ ಹಾಗೂ ಶುಚಿತ್ವವನ್ನು ಕಾಪಾಡಿಕೊಂಡು ಬರುತ್ತಿರುವ ಈ ಜಿನಾಲಯವು ಸಂಪೂರ್ಣವಾಗಿ ಮಾರ್ಬಲ್ ನಿಂದ ಕಟ್ಟಲ್ಪಟ್ಟಿದೆ. ಜಿನಾಲಯದ ಸುತ್ತಲೂ ವೃತ್ತಾಕಾರದಲ್ಲಿ , ಪುಟ್ಟ ಗೋಪುರಗಳುಳ್ಳ ಗುಡಿಗಳಲ್ಲಿ  72 ಮಂದಿ ಜೈನ ಗುರುಗಳ ಮೂರ್ತಿಗಳಿವೆ. ವಿಸ್ತಾರವಾದ ಪ್ರಾಕಾರದಲ್ಲಿರುವ ಈ ಜಿನಾಲಯದಲ್ಲಿ ಧರ್ಮಶಾಲೆಯೂ ಇದೆಯಂತೆ. ಜಿನಾಲಯಗಳಲ್ಲಿ ಆರತಿ, ಧೂಪ-ದೀಪ, ಪೂಜೆ ಇತ್ಯಾದಿ ಇಲ್ಲದಿರುವುದರಿಂದ ಪರಿಸರವು ನಿಶ್ಶಬ್ದವಾಗಿ, ಕಸಕಡ್ಡಿಗಳಿಲ್ಲದೆ ಕಂಗೊಳಿಸುತ್ತದೆ.

72 ತೀರ್ಥಂಕರರ ಜಿನಾಲಯ, ಮಾಂಡ್ವಿ

ಅಲ್ಲಿಂದ ಮುಂದುವರಿದು ಮಾಂಡ್ವಿಯಲ್ಲಿರುವ ‘ಅಂಬೆಧಾಮ್’ ಮಂದಿರಕ್ಕೆ ಭೇಟಿಕೊಟ್ಟೆವು. ಬಹಳ ವಿಶಾಲವಾದ ಸ್ಥಳದಲ್ಲಿ ಕಟ್ಟಲಾದ ಈ ಮನಮೋಹಕ ಮಂದಿರದಲ್ಲಿ ಅಂಬಾಮಾತೆಯ ಮೂರ್ತಿಯಿದೆ. ಮಂದಿರದ ಒಳಗಿನ ಕುಸುರಿ  ಕಲಾವಂತಿಕೆ  ಸೊಗಸಾಗಿದೆ. ಪಕ್ಕದಲ್ಲಿ ಮ್ಯೂಸಿಯಂ ಇದೆ. ಪೌರಾಣಿಕ ಕಥಾನಕಗಳನ್ನು ತೋರಿಸುವ ನೂರಾರು ಪ್ರಸ್ತುತಿಗಳಿವೆ.

‘ಅಂಬೆಧಾಮ್’ ಮಂದಿರ, ಮಾಂಡ್ವಿ

ಇವನ್ನು ನೋಡಿ ಹೊರಗಡೆ ಬರುವಲ್ಲಿ, ವಿಶಿಷ್ಟವಾಗಿ ನಿರ್ಮಿಸಿದ ‘ವೈಷ್ಣೋದೇವಿ’ ಮಂದಿರದ ಮಾಡೆಲ್ ಇದೆ. ಜಮ್ಮು-ಕಾಶ್ಮೀರದಲ್ಲಿರುವ  ವೈಷ್ಣೋದೇವಿ ಮಂದಿರವನ್ನು ಹತ್ತಲು 14 ಕಿಮಿ. ಹತ್ತಬೇಕು. ಈ ಮಾದರಿ ಬೆಟ್ಟದಲ್ಲಿ, 0.6  ಕಿ.ಮೀ ಏರಿದಾಗ ದೇವಿಯ ದರ್ಶನವಾಗುತ್ತಿದೆ. ಬಹಳಷ್ಟು ಮಟ್ಟಿಗೆ ವೈಷ್ಣೋದೇವಿ ಯಾತ್ರೆಯ  ದಾರಿಯಲ್ಲಿ ಎದುರಾಗುವ ಅಂಶಗಳನ್ನು ಕೃತಕವಾಗಿ ಅಳವಡಿಸಿಕೊಂಡು ನಿರ್ಮಿಸಿದ ಈ ‘ವೈಷ್ಣೋದೇವಿ’ ಬೆಟ್ಟ ಚೆನ್ನಾಗಿದೆ.

 

‘ವೈಷ್ಣೋದೇವಿ’ ಮಂದಿರದ ಪ್ರತಿಕೃತಿ, ಮಾಂಡ್ವಿ, ಗುಜರಾತ್

ಅಲ್ಲಿಂದ ಎಲ್ಲರೂ ಬಂದ ಮೇಲೆ, ಪಕ್ಕದಲ್ಲಿಯೇ ಇದ್ದ ‘ಉಡುಪಿ ಹೋಟೆಲ್’ ಹೋದೆವು. ದೂರದ ಗುಜರಾತ್ ನಲ್ಲಿ ‘ಉಡುಪಿ’ ಹೆಸರು ನೋಡಿ ಖುಷಿಯಾಯಿತು. ಅಲ್ಲಿ ಕಾಫಿ ಕುಡಿದು ಗುಜರಾತ್ ನ ಕಾಕ್ರ ತಿಂದೆವು. ತುಳು ಭಾಷೆ ಮಾತನಾಡಲು ಗೊತ್ತಿದ್ದ ಹೋಟೆಲ್ ಮಾಲೀಕರು  ಕೆಲವು ವರ್ಷಗಳಿಂದ  ಗುಜರಾತ್ ನಿವಾಸಿಯಾಗಿದ್ದಾರೆ. ಆಮೇಲೆ ನಾವು ಉಳಕೊಂಡಿದ್ದ  ಹೋಟೆಲ್ ತಲಪಿ, ಊಟ , ವಿಶ್ರಾಂತಿ ಮಾಡಿದೆವು.

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ :  http://surahonne.com/?p=31106

-ಹೇಮಮಾಲಾ.ಬಿ
(ಮುಂದುವರಿಯುವುದು)

7 Responses

 1. ಬಿ.ಆರ್.ನಾಗರತ್ನ says:

  ಪ್ರವಾಸ ಕಥನ ಆಕರ್ಷಕವಾಗಿ ಸಾಗುತ್ತಿದೆ.ಅಭಿನಂದನೆಗಳು ಹೇಮಾ.

 2. ನಯನ ಬಜಕೂಡ್ಲು says:

  ಪರವೂರಲ್ಲಿ ನಮ್ಮ ಊರಿನ ಕಡೆಯವರು ಸಿಗುವಾಗ ಆಗುವ ಸಂತೋಷವೇ ಬೇರೆ. ನಮ್ಮ ಊರಿನವರು ಅನ್ನುವ ಆಪ್ತ ಭಾವ ಅರಿವಿಲ್ಲದಂತೆಯೇ ಮನಸ್ಸನ್ನು ಆವರಿಸಿರುತ್ತದೆ. ಬಹಳ ಸೊಗಸಾಗಿ ಸಾಗುತ್ತಿದೆ ಲೇಖನ.

 3. ಶಂಕರಿ ಶರ್ಮ says:

  ಮಾಂಡ್ವಿಯ ಜಿನ ದೇವಾಲಯ, ಅಂಬೆಧಾಮ್ ಮಂದಿರ, ವೈಷ್ಣೋದೇವಿ..ಎಲ್ಲದರ ಬಗ್ಗೆ ನೀಡಿದ ವಿವರಗಳು ಬಹಳ ಸೊಗಾಸಾಗಿವೆ. ಚಂದದ ಪ್ರವಾಸದಂಕಣ.. ಧನ್ಯವಾದಗಳು ಮಾಲಾ ಅವರಿಗೆ.

 4. Anonymous says:

  ಹೇಮಮಾಲಾರ ಪ್ರವಾಸ ಕಥನ ಸೊಗಸಾಗಿ ಓದುವಂತೆ ಪ್ರೇರೇಪಿಸುವ ಶೈಲಿಯಿದೆ.

 5. Savithri bhat says:

  ಪ್ರವಾಸ ಕಥನ ಬಹಳ ಚೆನ್ನಾಗಿ ಬರುತ್ತಿದೆ..

 6. B.k.meenakshi says:

  ಸೊಗಸಾಗಿದೆ. ಓದಿಸಿಕೊಂಡು ಹೋಗುವ ಶೈಲಿ ನಿಮ್ಮ ಬರವಣಿಗೆಯಲ್ಲಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: