ಉತ್ತರ ಕನ್ನಡ ಜಿಲ್ಲೆಗೆ ಬನ್ರಿ ಮಾರಾಯ್ರೆ…

Share Button

‘ಓಹೊ ಬನ್ರಿ ಮಾರಾಯ್ರೆ… ಆ ಬದಿಗೆ ಬಾನಿ ಒಳಗೆ ನೀರಿದ್ದು, ಕೈಕಾಲು -ಮೊರೆ ತೊಳ್ಕಂಡು ಒಳಬದಿಗ್ ಬನ್ನಿ’.

‘ಕುಡಿಲಕ್ಕೆ ಮುರಗಲಹಣ್ಣಿನಪಾನಕಅಡ್ಡಿಲ್ಯೆ ನಿಮಗೆ? ಹೊಯ್ ಆಸರಿಂಗೆ ‘  ‘ತೆಳ್ಳೆವು,   ಕಾಯಿಚಟ್ನಿ ಮಾಡಿದ್ನಿ, ಒಂದೆರಡು   ತಿನ್ನಲಕ್ಕಿ ಬನ್ನಿ. ಕವಳ ಪೇಟಿ ಇದ್ದು, ಕವಳ ಹಾಕುದಿದ್ರೆ ಹಾಕಿ.. ಹಂಗೆ ಊರ್ ಬದಿಗೆ ತಿರ್ಗಾಡಲೇ ಹೋಪ…’

ಇದೇನಿದು? ಯಾವ ಭಾಷೆ? ಕನ್ನಡವೇ ಹೌದಾ!? ಅಂತ ಮೂಗಿನ ಮೇಲೆ ಬೆರಳು ಇಡಬೇಡಿ. ಇದು ಹವ್ಯಕ ಕನ್ನಡ. ನಾವು ಇವತ್ತು ಹೋಗ್ತಾ ಇರೊದು ಉತ್ತರ ಕನ್ನಡ ಜಿಲ್ಲೆ ನೋಡೊಕೆ. ಹವ್ಯಕರು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ದಲ್ಲಿ ನೆಲೆಸಿದಾರೆ. ಅದ್ರಲ್ಲೂ ಉತ್ತರ ಕನ್ನಡದ ಯಲ್ಲಾಪುರ, ಶಿರಸಿ ಭಾಗದ ಹವ್ಯಕ ಕನ್ನಡ ಒಂದು ರೀತಿಯದ್ದಾದರೆ, ಕುಮಟಾ ಹವ್ಯಕ ಕನ್ನಡ ಮತ್ತೊಂದು ರೀತಿಯದ್ದು. ಇನ್ನು ಕುಂದಾಪುರ ಮತ್ತು ಕಾಸರಗೋಡು ಹವ್ಯಕ ಕನ್ನಡ ಎರಡರಲ್ಲೂ ಸಾಕಷ್ಟು ವಿಭಿನ್ನತೆ ಇದೆ. ಮತ್ತೆ ಸಾಗರ, ತೀರ್ಥಹಳ್ಳಿಯ ಹವ್ಯಕ ಕನ್ನಡ ಅಂತು ಮತ್ತೂ ವಿಭಿನ್ನ. ಒಟ್ಟಿನಲ್ಲಿ ಹವ್ಯಕ ಕನ್ನಡ ಆಡಲು ಹಾಗೂ ಕೇಳಲು ಹಿತವೆನಿಸುವ ಭಾಷಾ ಶೈಲಿ.

ಉತ್ತರ ಕನ್ನಡ(ಕಾರವಾರ) ಜಿಲ್ಲೆ ಎಷ್ಟು ದೊಡ್ಡದಿದೆ ಅಂದ್ರೆ, ಮುಂಡಗೋಡ, ಯಲ್ಲಾಪುರ ಮೊದಲಾಗಿ  ಶಿರಸಿ, ಸಿದ್ದಾಪುರ, ಬನವಾಸಿ, ಭಟ್ಕಳ, ಕುಮಟಾ, ಹೊನ್ನಾವರ, ಗೋಕರ್ಣ, ಮುರುಡೇಶ್ವರ, ಇಡುಗುಂಜಿ, ಅಂಕೋಲಾ ಹಾಗೂ ಕಾರವಾರದ ವರೆಗೂ ಹಬ್ಬಿದೆ. ಉತ್ತರ ಕನ್ನಡ ಜಿಲ್ಲೆಗೆ ಜಲಪಾತಗಳ ತವರು ಅಂತ ಕರೀತಾರೆ. ಧರ್ಮಾ, ಕಾಳಿ, ಅಘನಾಶಿನಿ ಹಾಗೂ ಶಾಲ್ಮಲಾ ನದಿಯ ಹಿನ್ನೀರು ಅನೇಕ ಜಲಪಾತಗಳ ಉಗಮಕ್ಕೆ ಕಾರಣವಾಗಿದೆ. ಸಾತೊಡ್ಡಿ ಜಲಪಾತ(ಫಾಲ್ಸ್) ಮೊದಲ್ಗೊಂಡು ಮಾಗೊಡು, ಉಂಚಳ್ಳಿ, ಶಿವಗಂಗೆ, ಗಣೇಶ, ಶಿರ್ಲೆ, ವಿಭೂತಿ, ಬುರುಡೆ ಫಾಲ್ಸ್, ವಾಟೆ ಹೊಳೆ, ಮುಕ್ತಿ ಹೊಳೆ, ನೆಟ್ಗೋಡ್ ಫಾಲ್ಸ್, ತುಮರಗೋಡು, ನಿಪ್ಲಿ ಹಾಗೂ ಅಪ್ಸರಕೊಂಡ  ಮುಂತಾದ ಇನ್ನೂ ಅನೇಕ ತೆರೆಮರೆಯಲ್ಲಿರುವ ಜಲಪಾತಗಳಿವೆ. ಎಲ್ಲೆಡೆಯಿಂದ ಜನರು ಪ್ರವಾಸಕ್ಕಾಗಿ ಇಲ್ಲಿಗೆ ಬರುತ್ತಾರೆ. ಪ್ರಕೃತಿಯ ಮಡಿಲಲ್ಲಿ ಮಿಂದು ಮೈ ಮನ ತಣಿಸಿಕೊಂಡು ತಮ್ಮೂರಿಗೆ ಮರಳುತ್ತಾರೆ.

ಎಲ್ಲಿ ನೋಡಿದರಲ್ಲಿ ಬೆಟ್ಟಗುಡ್ಡ; ಮೈದುಂಬಿ ಹರಿಯುವ ನದಿ; ಚಿಮ್ಮುವ ತೊರೆ; ಧುಮ್ಮಿಕ್ಕಿ ಹರಿಯುವ ಜಲಪಾತ; ಹಚ್ಚ ಹಸುರಿನ ಗದ್ದೆ ತೋಟ; ಎತ್ತರೆತ್ತರಕ್ಕೆ ಬೆಳೆದ ಗಿಡಮರಗಳು; ಉದ್ದಗಲಕ್ಕೂ ಹರಡಿರುವ ದಟ್ಟವಾದ ಅರಣ್ಯ; ಹುಲಿಯ ಕಾನು; ಬಾನೆತ್ತರಕ್ಕೆ ಚಾಚಿದ ಅಡಿಕೆ ಮರಗಳು; ವಿಧವಿಧವಾದ ಅಪರೂಪದ ಕಾಡು ಹಣ್ಣುಗಳು; ಭಟ್ಕಳ ಮಲ್ಲಿಗೆಯ ಸುವಾಸನೆ; ಬೆಚ್ಚಿ ಬೀಳಿಸುವ ಉರಗಗಳು; ಬಾನಾಡಿಗಳ ಕಲರವ; ಸ್ವಚ್ಛಂದವಾಗಿ ಮೇಯುತ್ತಿರುವ ದನಕರುಗಳು… ಆಹಾಹಾ!! ಏನ್ ಚೆಂದ ರೀ ನಮ್ಮೂರು. ವರ್ಣಿಸಲು ಪದಗಳೇ ಸಾಲದು. ಅದಕ್ಕೆ ಅಲ್ವೇನ್ರೀ ನಮ್ಮ ಸಿನಿ ಕವಿ ಆರ್.ಎನ್.ಜಯಗೋಪಾಲ್ ರವರು,  ಎಂಥಾ ಸೌಂದರ್ಯನೋಡು ನಮ್ಮಕರುನಾಡಬೀಡು ಅಂತ ಹೊಗಳಿದ್ದು.

ಮುಂಡಗೋಡದಲ್ಲಿ ಟಿಬೇಟಿಯನ್ ಕ್ಯಾಂಪ್, ಅತ್ತಿವೇರಿ ಪಕ್ಷಿಧಾಮ ನೋಡಿ ಅಲ್ಲಿಂದ ಯಲ್ಲಾಪುರಕ್ಕೆ ಹೋಗಬಹುದು.
ಯಲ್ಲಾಪುರದಲ್ಲಿ  ಸಾತೊಡ್ಡಿ ಫಾಲ್ಸ್, ಮಾಗೊಡು ಫಾಲ್ಸ್, ಶಿರ್ಲೆ ಫಾಲ್ಸ್, ವಿಭೂತಿ ಫಾಲ್ಸ್ ಗಳಲ್ಲಿ ಮಿಂದೆದ್ದು, ಯಾಣದ ಚಾರಣ(ಟ್ರೆಕಿಂಗ್) ಮುಗಿಸಿ, ಗಂಟೆ ಗಣಪತಿಯ ದರ್ಶನ ಮಾಡಿ ದಾಂಡೇಲಿಗೆ ಹೊರಡಬಹುದು. ಹ್ಞಂ ಅಂದ ಹಾಗೆ, ಯಾಣಕ್ಕೆ ಬರುವಾಗ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ. ಅಲ್ಲಿ ಜಿಗಣೆಗಳು(leach) ಜಾಸ್ತಿ ಹಾಗಾಗಿ. ಇಲ್ಲಿ ಹಾಲಕ್ಕಿ ಮತ್ತು ಸಿದ್ಧಿ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುತ್ತಾರೆ. ಅವರ ಭಾಷಾ ಶೈಲಿ, ಉಡುಗೆ-ತೊಡುಗೆ, ಜೀವನಕ್ರಮ ಎಲ್ಲವೂ ತುಂಬಾ ವಿಶಿಷ್ಟವಾದದ್ದು.

ದಾಂಡೇಲಿ ವನ್ಯಜೀವಿ ಸಂರಕ್ಷಣಾ ಕೇಂದ್ರವಾಗಿದ್ದು, ಯಾತ್ರಿಕರ ಪರಿಸರದ ವಿಶೇಷ ಅಭಿರುಚಿಗಾಗಿ ಕುಳಗಿ ಪ್ರಕೃತಿ ಶಿಬಿರವನ್ನು ನಿರ್ಮಿಸಿದೆ. ದಾಂಡೇಲಿ ಪೇಪರ್ ಫ್ಯಾಕ್ಟರಿ ಜನಪ್ರಿಯವಾದದ್ದು. ದಾಂಡೇಲಿಯಲ್ಲಿ ಹುಲಿಯ ಸಫಾರಿ ಪಾರ್ಕ್, ಸಿಂಥೇರಿ ರಾಕ್ಸ್, ರಿವರ್ ರಾಫ್ಟಿಂಗ್, ಉಳವಿ ಗ್ರಾಮದ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಇವು ಇಲ್ಲಿನ ಸುಪ್ರಸಿದ್ಧ ತಾಣಗಳು. ಯಾತ್ರಿಕರಿಗೆ ತಂಗಲು ಸಾಕಷ್ಟು ಜಂಗಲ್ ರೆಸಾರ್ಟ್ ಗಳು, ಹೋಮ್ ಸ್ಟೇ ಗಳು ಇವೆ. ದಾಂಡೇಲಿಯಲ್ಲಿ ಕೊಂಕಣಿ ಭಾಷಿಗರು ಅಂದ್ರೆ ಗೌಡ ಸಾರಸ್ವತ ಬ್ರಾಹ್ಮಣರು (GSB) ಇಲ್ಲಿ ಹೆಚ್ಚು ವಾಸಿಸುವ ಸಮುದಾಯ.

ಶಿರಸಿಯನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಶಿರಸಿಗೆ ಬಂದಮೇಲೆ ಗ್ರಾಮದೇವತೆ ಮಾರಿಕಾಂಬೆಯ ದರುಶನ ಮಾಡದೇ ಹೋಗುವಂತಿಲ್ಲ. ಊರನ್ನು, ಊರ ಜನರನ್ನು ಕಾಯುವ ಮಹಾಮಾತೆ, ಶಕ್ತಿದಾತೆ ಈಕೆ. ಪ್ರತಿ ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುವ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಜಗತ್ಪ್ರಸಿದ್ಧಿ ಪಡೆದಿದೆ.
ಶಿರಸಿ-ಸಿದ್ದಾಪುರ ಮಾರ್ಗದಲ್ಲಿ ನಿಲೇಕಣಿ ಗಣಪತಿ ದೇವಸ್ಥಾನ ಇದೆ. ಇಲ್ಲಿನ ಗಣಪತಿ ದೇವರು ನಿಲೇಕಣಿ ಮನೆತನದ ಕುಲದೇವರು. ಯಾರು ಈ ನಿಲೇಕಣಿ ಮನೆತನದವ್ರು ಅಂತಿರಾ? ನಂದನ್ ನಿಲೇಕಣಿ ಇವರು ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕರು.

ಶಿರಸಿಯ ಮಾರಿಕಾಂಬಾ ದೇವಾಲಯ

ಸೋದೆ ಶ್ರೀ ವಾದಿರಾಜ ಮಠ, ಶ್ರೀ ಭೂತರಾಜರ ಸನ್ನಿಧಿ,  ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ ಜೈನ ಬಸದಿ ಇವುಗಳು ಇಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳು. ರಾಜಾ ರಮಾತ್ರಿವಿಕ್ರಮನ ಕೋಟೆಯು ಸಹ ಸೋದೆಯಲ್ಲಿ ನೋಡಲು ಸಿಗುತ್ತದೆ.

ಶಿರಸಿಯ ಆಸು ಪಾಸಿನಲ್ಲೇ ಶಿವಗಂಗಾ ಫಾಲ್ಸ್, ಗಣೇಶ ಫಾಲ್ಸ್ ಸಿಗುತ್ತದೆ. ಶಿರಸಿ-ಸೋಂದಾ ಮಾರ್ಗದಲ್ಲಿ ಸಹಸ್ರಲಿಂಗ ದರ್ಶನ ಹಾಗೂ ಅದಕ್ಕೆ ಸಮೀಪದಲ್ಲಿರುವ ತೂಗುಸೇತುವೆಯನ್ನು ನಾವಿಲ್ಲಿ ನೋಡಬಹುದು.

ಇಲ್ಲಿನ ಪ್ರಮುಖ ಬೆಳೆ ಕಂಗು (ಅಡಿಕೆ). ಶಿರಸಿ ಅಡಿಕೆ ಅಂದ್ರೆ ಜಗದ್ವಿಖ್ಯಾತ. ಜೊತೆಗೆ ಜೋನಿಬೆಲ್ಲದ ಕಬ್ಬು ಸಹ ಬೆಳೆಯುತ್ತಾರೆ. ಪ್ರತಿವರ್ಷ ಚಳಿಗಾಲ ಕಳೆದು ಬೇಸಿಗೆ ಪ್ರಾರಂಭದಲ್ಲಿ ಆಲೆಮನೆ ಹಬ್ಬ ಮಾಡುತ್ತಾರೆ. ಕಟಾವಿಗೆ ಬಂದಿರುವ ಕಬ್ಬಿನ ಹಾಲನ್ನು ಸಂಗ್ರಹಿಸಿ ಜೋನಿಬೆಲ್ಲ ತಯಾರಿಸುತ್ತಾರೆ.

ಶಿರಸಿ-ಕುಮಟಾ ಓಡಾಡುವವರಿಗೆ ದೇವಿಮನೆ ಘಾಟ್ ಅಂದ್ರೆ ಚಿರಪರಿಚಿತ. ಕುಮಟಾ ರಸ್ತೆಯಲ್ಲಿ ಸಾಗಿದರೆ ಶ್ರೀಕ್ಷೇತ್ರ  ಮಂಜುಗುಣಿ  ವೆಂಕಟರಮಣ ದೇವಸ್ಥಾನ ಸಿಗುತ್ತದೆ. ಇದನ್ನು ಕರ್ನಾಟಕದ ತಿರುಪತಿ ಅಂತಲೂ ಕರೆಯುತ್ತಾರೆ. ಕಾರಣ ಈ ದೇವಸ್ಥಾನದ ವೆಂಕಟರಮಣನ ಮೂರ್ತಿ ಸ್ವಯಂ ಉದ್ಭವಿಸಿದ್ದು. ಅಲ್ಲದೇ ಆಂಧ್ರದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹೇಳಿಕೊಂಡ ಹರಕೆಯನ್ನು ಒಂದು ಪಕ್ಷ ಕಾರಣಾಂತರಗಳಿಂದ ಸಕಾಲಕ್ಕೆ ತಿರುಪತಿಗೆ ಹೋಗಲು ಸಾಧ್ಯವಾಗದಿದ್ದಲ್ಲಿ ಇಲ್ಲಿಗೆ ಬಂದು ಹರಕೆ ತೀರಿಸಬಹುದು. ಕುಮಟಾ-ಹೊನ್ನಾವರ ಮಾರ್ಗವಾಗಿ ಹೋಗುವಾಗ ಉಂಚಳ್ಳಿ ಫಾಲ್ಸ್ ಹಾಗೂ ಅಪ್ಸರಕೊಂಡ ಕಾಣಸಿಗುತ್ತವೆ. ಅಲ್ಲದೇ ಕುಮಟಾ ಬೀಚ್, ಹೊನ್ನಾವರ ಬೀಚ್, ಮುರುಡೇಶ್ವರ ಬೀಚ್, ಕಾರವಾರ ಬೀಚ್ ಹಾಗೂ ಗೋಕರ್ಣ ಬೀಚ್ ಎಲ್ಲವೂ ಈ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

ಇಡಗುಂಜಿ ಮಹಾಗಣಪತಿ ದೇವಸ್ಥಾನ, ಮುರುಡೇಶ್ವರ ದೇವಾಲಯ, ಗೋಕರ್ಣ ಮಹಾಬಲೇಶ್ವರ, ಅಂಕೋಲಾ ಮಹಾಲಸಾ ದೇವಾಲಯ ಇವು ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಜನಪ್ರಿಯ ದೈವ ಸನ್ನಿಧಿಗಳು. ಇಡಗುಂಜಿ ಹಾಗೂ ಗೋಕರ್ಣದ ದೇವಾಲಯಗಳಿಗೆ ತ್ರೇತಾಯುಗದ ಇತಿಹಾಸವಿದೆ. ಊರು ಯಕ್ಷಗಾನಕ್ಕೆ ಪ್ರಸಿದ್ಧಿ. ಯಕ್ಷಗಾನದ ಆ ಗೆಜ್ಜೆಯ ಘಳಿರು ನಿನಾದ.. ಭಾಗವತರ ತಾಳ.. ಕಲಾವಿದರ ಕಂಚಿನ ಕಂಠ ಆಹಾ!! ಮನಸೂರೆಗೊಳ್ಳುವವು..!! ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ಹೆಸರಾಂತ ಯಕ್ಷಗಾನ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಕೆರೆಮನೆ ಶಂಭು ಹೆಗಡೆ ಯವರನ್ನು ನೆನೆಯದಿರಲು ಹೇಗೆ ಸಾಧ್ಯ?

ನಂತರ ಅಲ್ಲಿಂದ, ಗೋಕರ್ಣದ ಮಿರ್ಜಾನ್ ಕೋಟೆ ನೋಡಿ ಬಂದರೆ ಕುಮಟಾ, ಹೊನ್ನಾವರ, ಭಟ್ಕಳ, ಗೋಕರ್ಣ, ಅಂಕೋಲಾ, ಹಾಗೂ ಕಾರವಾರದ ಸುತ್ತಾಟ ಮುಗಿದಂತೆ. ಕುಮಟಾದಲ್ಲೂ ಸಹ GSB ಸಮುದಾಯದವ್ರು ಸಿಗುತ್ತಾರೆ. ಕೊನೆಯದಾಗಿ ಆದರೂ ಕನಿಷ್ಟವಲ್ಲ ಕನ್ನಡದ ಮೊಟ್ಟ ಮೊದಲ ರಾಜ ಮನೆತನ ಕದಂಬರ ರಾಜಧಾನಿ ಬನವಾಸಿಮಧುಕೇಶ್ವರ ದೇವಾಲಯ ಮತ್ತು ಕದಂಬರ ಕೋಟೆ ವೀಕ್ಷಣೆ ಮಾಡಬಹುದು.

ಇನ್ನು, ಸಿದ್ದಾಪುರ ತಾಲೂಕಿನ ಕುರಿತು ಒಂದಿಷ್ಟು ಹೇಳಲೇ ಬೇಕು.. ಎಲ್ಲಾದರೂ ಕನ್ನಡಮ್ಮನ ದೇವಾಲಯ ಇರುವುದರ ಕುರಿತು ಕೇಳಿದ್ದೀರಾ?? ಇಲ್ಲ ಅಲ್ವ!! ಈಗ ಕೇಳಿ.. ಸುಮಾರು ಮೂರು ಶತಮಾನದ ಹಿಂದೆ ವಿಜಯನಗರ ಅರಸರ ಕಾಲದಲ್ಲಿ, ಸಿದ್ದಾಪುರ ತಾಲೂಕಿನ ಬಿಳಗಿಯ ಸಾಮಂತ ದೊರೆ ಕನ್ನಡ ನಾಡಿನ ಮೇಲಿರುವ ಅಪಾರ ಪ್ರೀತಿಗಾಗಿ ತನ್ನ ವ್ಯಾಪ್ತಿಯಲ್ಲಿ ಬರುವ ಭುವನಗಿರಿ ಗ್ರಾಮದಲ್ಲಿ ತಾಯಿ ಭುವನೇಶ್ವರಿ ದೇವಿಯ ದೇವಾಲಯ ನಿರ್ಮಿಸಿದ. ಅಂದಿನಿಂದ ಇಂದಿನವರೆಗೂ ತಾಯಿ ಭುವನೇಶ್ವರಿ ಪ್ರತಿನಿತ್ಯ ಮಂತ್ರಘೋಷ, ಅರ್ಚನೆ, ಅಭಿಷೇಕಗಳಿಂದ ಪೂಜಿಸಲ್ಪಡುತ್ತಾಳೆ. ಇಲ್ಲೆ ಸಮೀಪದಲ್ಲಿ ಭೀಮನ ಗುಡ್ಡ ಹಾಗೂ ಸಣ್ಣಪುಟ್ಟ ಝರಿ ತೊರೆಗಳನ್ನು ಸಹ ನೋಡಬಹುದು.

ಭುವನಗಿರಿಯ ಭುವನೇಶ್ವರಿ ದೇವಿ ದೇವಾಲಯ

ಸಿದ್ದಾಪುರದ ಚಂದ್ರಗುತ್ತಿ ಗ್ರಾಮದಲ್ಲಿ ಜಗಜ್ಜನನಿಯ ಶಕ್ತಿಪೀಠ ಇದೆ. ಅದೇ ಭಗವಾನ್ ಪರಶುರಾಮರ ತಾಯಿ, ಜಮದಗ್ನಿ ಋಷಿಯ ಪತ್ನಿ ಶ್ರೀ ರೇಣುಕಾಂಬಾ ದೇವಿಯ ಸನ್ನಿಧಿ. ಪ್ರತಿವರ್ಷವೂ ಇಲ್ಲಿ ಜಾತ್ರೆ ನಡೆಯುತ್ತದೆ. ಸಮೀಪದಲ್ಲಿ ಮೇದಿನಿ ಕೋಟೆಯನ್ನು ಸಹ ನೋಡಬಹುದು. ಸಿದ್ದಾಪುರದಲ್ಲೂ ಶ್ರೀ ಆದಿ ಶಂಕರರ ಮಠ ಇದೆ. ಇನ್ನೂ ಒಂದು ಹೆಮ್ಮೆಯ ಸಂಗತಿ ಎಂದರೆ ನಾಡಿನ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆಯವರು ಇದೇ ಸಿದ್ದಾಪುರ ತಾಲೂಕಿನವರು.
ಇಲ್ಲಿಗೆ, ಉತ್ತರ ಕನ್ನಡ ಜಿಲ್ಲೆಯ ನಿಮ್ಮ ಪ್ರವಾಸ ಒಂದು ಹಂತದಲ್ಲಿ ಪೂರ್ಣಗೊಂಡಂತೆ…

ಇಲ್ಲಿನ ಊಟೋಪಚಾರದ ಬಗ್ಗೆ ಹೇಳಬೇಕೆಂದರೆ, ಜನರು ಪ್ರಕೃತಿಯ ಮಡಿಲಲ್ಲಿ ನೈಸರ್ಗಿಕವಾಗಿ ಬೆಳೆದ ಪೌಷ್ಟಿಕ ಹಾಗೂ ಔಷಧೀಯ ಗುಣವಿರುವ ಸೊಪ್ಪು, ತರಕಾರಿ, ಗೆಡ್ಡೆಗೆಣಸುಗಳನ್ನೆ ಆಹಾರವಾಗಿ ಬಳಸುತ್ತಾರೆ. ಈಗಂತೂ ಮಾವಿನ ಸೀಜನ್.. ಮಾವಿನಕಾಯಿ ಅಪ್ಪೆಹುಳಿ ಅಂದ್ರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಉಪ್ಪು,ಹುಳಿ, ಖಾರ (ಸೂಜಿ ಮೆಣಸು/ಮೇಲ್ಮೂತಿ ಮೆಣಸಿನ ಖಾರ) ಹದವಾಗಿ ಬೆರೆಸಿದ ಮಾವಿನಕಾಯಿ ನೀರುಗೊಜ್ಜಿಗೆ ಅಪ್ಪೆ ಹುಳಿ ಅಂತ ಹೆಸರು. ಮಾವಿನ ಹಣ್ಣಿನ ಸಾಸುವೆ, ಅಮಟೆಕಾಯಿ ಕಾಯಿರಸ & ಗಟ್ಟಿ ಗೊಜ್ಜು, ಕಂಚಿಕಾಯಿ ಗೊಜ್ಜು & ಪಾನಕ, ಹೆರಳೇಕಾಯಿ ಉಪ್ಪಿನಕಾಯಿ, ಮುರುಗಲ ಹಣ್ಣು/ಅಮಸೋಲು ಸಾಂಬ್ರಾಣಿ(ಖಡಿ) & ಕೋಕಂ ಶರಬತ್ತು, ಅಂಬೆಹಳದಿ (ಮಾವಿನಶುಂಠಿ)ಯ ತಂಬುಳಿ, ಸುವರ್ಣ ಗೆಡ್ಡೆ ಪಲ್ಯ, ಬಾಳೆಕಾಯಿ ಹಸಿ, ಬಸಳೇ ಸೊಪ್ಪಿನ ಸಾಸುವೆ & ಮುದ್ದೆ ಪಲ್ಯ, ಕುಂಬಳಕಾಯಿ ಗಶಿ, ಮೊಗೇಕಾಯಿ & ಹಲಸಿನಕಾಯಿ ಹುಳಿ(ಸಾಂಬಾರ್), ದೊಡ್ಡಪತ್ರೆ(ಸಾವಿರ ಸಾಂಬಾರ ಸೊಪ್ಪು) ಕಚಡಿ, ತೆಳ್ಳೆವು(ನೀರು ದೋಸೆ), ಕೊಟ್ಟೆ ಕಡುಬು, ಕೆಸುವಿನೆಲೆಯ ಪತ್ರೊಡೆ ಒಂದೇ ಎರಡೇ ತರಹೇವಾರಿ ಅಡುಗೆಗಳು… ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿನ ಜನರು ಅಡುಗೆಗೆ ನಿಂಬೆಹಣ್ಣು ಮತ್ತು ಹುಣಸೆಹಣ್ಣಿನ ಹುಳಿಗೆ ಬದಲಾಗಿ ಕಂಚಿಹಣ್ಣು ಮತ್ತು ಮುರುಗಲ ಹಣ್ಣನ್ನು ಬಳಸುತ್ತಾರೆ.

ಹ್ಞಂ ಹಲಸಿನಹಣ್ಣು ಅಂದಾಗ ನೆನಪಾಯ್ತು… ಹಲಸಿನಕಾಯಿಯ ಸಾಂಬಾರ್ ಬಗ್ಗೆ ಈಗಾಗಲೇ ಹೇಳಿರುವೆ. ಹಲಸಿನಕಾಯಿಯ ಹಪ್ಪಳ ಹಾಗೂ ಚಿಪ್ಸ್ ಬಗ್ಗೆಯೂ ಗೊತ್ತಿರಬಹುದು ನಿಮಗೆ. ಹಲಸಿನಿಂದ ಇನ್ನೂ ಅನೇಕ ಖಾದ್ಯಗಳನ್ನು ತಯಾರಿಸ್ತಾರೆ. ಅದರಲ್ಲಿ ಪ್ರಮುಖವಾಗಿ ಹಲಸಿನ ಹಣ್ಣಿನ ಸಿಹಿ ಕಡುಬು ಮತ್ತು ಮುಳಕ. ಹಲಸಿನಲ್ಲಿ ಸುಮಾರು ವಿಧಗಳಿವೆ… ಬೇರು ಹಲಸು, ಅಂಬಲಿ, ಬಿಳಿ ಬಕ್ಕೆ, ಚಂದ್ರ ಬಕ್ಕೆ ಇತ್ಯಾದಿ.. ಚಂದ್ರ ಬಕ್ಕೆ ಇಲ್ಲಿ ಗಿಂತ  ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಬೇರು ಹಲಸು ಪಲ್ಯ, ಸಾಂಬಾರ್, ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ. ಅಂಬಲಿ ಹಣ್ಣು ಹಾಗೆ ತಿನ್ನಲು ಮತ್ತೆ ಕಡುಬು, ಮುಳಕ, ಹಪ್ಪಳ ತಯಾರಿಸಲು ಉಪಯೋಗಿಸುತ್ತಾರೆ. ಬಕ್ಕೆ ಹಣ್ಣು ಹಾಗೆ ತಿನ್ನೊದೆ ಜಾಸ್ತಿ. ಚಿಪ್ಸ್ & ಹಪ್ಪಳ ಮಾಡಲು ಸಹ ಉಪಯೋಗಿಸುತ್ತಾರೆ.

ಹಣ್ಣುಗಳ ವಿಷಯಕ್ಕೆ ಸಂಬಂಧಿಸಿದಂತೆ ಹೇಳಬೇಕೆಂದರೆ ಬಲು ಅಪರೂಪದ ವೈವಿಧ್ಯಮಯ ಕಾಡು ಹಣ್ಣುಗಳು ಅದರ ಬಣ್ಣ, ಆಕಾರ, ರುಚಿ ಸ್ವರ್ಗಕ್ಕೆ ಕಿಚ್ಚು…. ಮುಳ್ಳು ಹಣ್ಣು, ಕವಳಿ ಹಣ್ಣು, ಜಂಬೆ ಹಣ್ಣು, ಪನ್ನೇರಳೆ, ಜಂಬು ನೇರಳೆ, ಕರಂಡೆ ಹಣ್ಣು, ನಕ್ಷತ್ರದ ಹಣ್ಣು, ಗೇರು ಹಣ್ಣು, ಮುರುಗಲ ಹಣ್ಣು, ರಾಜನೆಲ್ಲಿ, ಬೆಟ್ಟದ ನೆಲ್ಲಿ…. ಅದರ ಸವಿ ಬಲ್ಲವರಿಗೆ ಗೊತ್ತು.

ಇಲ್ಲಿನ ಜನರು ಅತ್ಯಂತ ಕಡಿಮೆ ಪ್ರಮಾಣದ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಕಾರಣ, ಪ್ಲಾಸ್ಟಿಕ್ ಬಳಕೆ ತೀರಾ ಕಡಿಮೆ. ಪ್ಲಾಸ್ಟಿಕ್ ಬದಲಾಗಿ ಮುತ್ತುಗದ ಎಲೆ, ಅಡಿಕೆ ಹಾಳೆ ಹಾಗೂ ಬಾಳೆ ಎಲೆಯನ್ನು ಎಲ್ಲಾ ಸಂದರ್ಭದಲ್ಲೂ ಬಳಸುವುದರಿಂದ ಪರಿಸರ ಸ್ನೇಹಿ ನಾಗರಿಕರಾಗಿದ್ದಾರೆ.

ಉರಗದ ವಿಚಾರ ಹೇಳಬೇಕೆಂದರೆ ಸುತ್ತಲೂ ದಟ್ಟ ಕಾಡು ಪ್ರದೇಶವಾದ್ದರಿಂದ, ತೇವಾಂಶದಿಂದ ಕೂಡಿರುವುದರಿಂದ ಚಿತ್ರ ವಿಚಿತ್ರ ವಿಷಕಾರಿ ಉರಗಗಳನ್ನು ಕಾಣಬಹುದು. ನೀವು ಕೇವಲ ನಾಗ ಸರ್ಪ, ಕೇರೆ ಹಾವು, ಹಸಿರು ಹಾವು, ಹೆಬ್ಬಾವು, ಕಾಳಿಂಗ ಸರ್ಪ ಮಾತ್ರ ಕೇಳಿರಬಹುದು/ನೋಡಿರಬಹುದು. ಆದರೆ, ಬಹುಶಃ ಇಂತಹ ಹೆಸರುಗಳು ಕೇಳಿರಲು ಅಥವಾ ಕಣ್ಣಾರೆ ನೋಡಿರಲು ಸಾಧ್ಯವೇ ಇಲ್ಲ… ಅವುಗಳು ಕನ್ನಡಿ ಹಾವು, ಕೊಳಕ ಮಂಡಲ, ಕುದುರೆ ಬಳ್ಳ, ಇತ್ಯಾದಿ..

ಇಲ್ಲಿನ ಜನರು ಜಾನುವಾರು ಪ್ರೇಮಿಗಳು. ಪ್ರತಿಯೊಬ್ಬರ ಮನೆಯಲ್ಲೂ ದನಕರುಗಳು ಸಾಕಿರುತ್ತಾರೆ. ಅವುಗಳನ್ನು ತಮ್ಮ ಮನೆಯ ಮಕ್ಕಳಂತೆ ಪ್ರೀತಿಯಿಂದ ಕಾಣುತ್ತಾರೆ. ಇಲ್ಲಿನ ಮನೆಗಳ ವಾಸ್ತುಶಿಲ್ಪದ ಶೈಲಿ ಅತ್ಯಂತ ವಿಶೇಷವಾದದ್ದು… ಕೆಂಪು ಹೆಂಚಿನ ಛಾವಣಿ, ಜಂಬಿಟ್ಟಗೆ ಕಲ್ಲಿನ ಗೋಡೆಗಳು, ಸಾಗುವಾನಿ ತೇಗ ಬೀಟೆಯಿಂದ ಮಾಡಿದ ಮನೆಯ ಬಾಗಿಲುಗಳು, ಸಗಣಿಯಿಂದ ಸಾರಿಸಿದ  ನೆಲ, ಕುಡಿಯಲು & ಬಳಸಲು ಶುದ್ಧವಾದ ಬಾವಿ ನೀರು. ಹೇಳುತ್ತಾ ಕುಳಿತರೆ ಬೆಳೆಯುತ್ತಲೇ ಹೋಗುತ್ತದೆ. ನೀವೊಮ್ಮೆ ಇಲ್ಲಿಗೆ ಬರಲೇ ಬೇಕು. ಇಲ್ಲಿನ ಪ್ರಕೃತಿಯಲ್ಲಿ ನಿಮ್ಮೆಲ್ಲಾ ಜಂಜಾಟವನ್ನು ಮರೆತು ಸಂಭ್ರಮ ಪಡಬೇಕು.
ಬರ್ತೀರಿ ಅಲ್ಲಾ? ತಪ್ಪಿಸಬಾರದು…!!

-ಮೇಘನಾ ದುಶ್ಯಲಾ

12 Responses

  1. Dharmanna dhanni says:

    ಉತ್ತರ ಕನ್ನಡ ಜಿಲ್ಲೆಯ ಕುರಿತು ಸಮಗ್ರ ಮಾಹಿತಿ ಮಾಡಲಾಗಿದೆ. ಕೆಲ ಊರುಗಳು ನಾವು ನೊಡಿರುವೆ.ಉತ್ತಮ ಬರಹ.ಧನ್ಯವಾದಗಳು

  2. ನಯನ ಬಜಕೂಡ್ಲು says:

    ಆಹಾ…. ಇನ್ನೇನಾದ್ರೂ ಬಾಕಿ ಇದೆಯಾ ಉತ್ತರ ಕನ್ನಡದ ಬಗ್ಗೆ ಹೇಳೋಕೆ….???
    ಇಡೀ ಜಿಲ್ಲೆಯನ್ನು ಒಂದು ಲೇಖನದೊಳಗೆನೇ ಸುತ್ತಾಡಿಸಿಬಿಟ್ರಿ, ಪ್ರಕೃತಿಯ ಬಗ್ಗೆ ಓದುವಾಗ ಅಂತೂ ಮನಸ್ಸು ಸುಂದರ ಕಲ್ಪನೆಯೊಳಗೆ ಲೀನ. ತುಂಬಾ ಚಂದದ ಬರಹ.

  3. ನಯನ ಬಜಕೂಡ್ಲು says:

    ಹವ್ಯಕ ಭಾಷೆಯ ಕುರಿತಾಗಿ ಹೇಳಿದ್ದೂ ಲಾಯ್ಕ್ ಇದ್ದು.

  4. ಬಿ.ಆರ್.ನಾಗರತ್ನ says:

    ಅಂತೂ ಉತ್ತರ ಕನ್ನಡ ಜಿಲ್ಲೆಯ ಒಂದು ಸುತ್ತು ಹಾಕಿಸಿ ಅಲ್ಲಿ ನಾ ಮಾಹಿತಿ ಕೊಟ್ಟಿದ್ದಕ್ಕೆ ನನ್ನ ದೊಂದು ನಮಸ್ಕಾರ ಕಂಡ್ರೀ . ಚಂದದ ಬರಹ ಗೆಳತಿ ಅಭಿನಂದನೆಗಳು.

  5. B.k.meenakshi says:

    ನನಗಂತೂ ಈ ಹವ್ಕಕ ಭಾಷೆಯ ಕತೆಗಳೆಂದರೆ ತುಂಬ ಇಷ್ಟ. ಉತ್ತರಕನ್ನಡವನ್ನು ಪೂರ್ಣ ಹವ್ಯಕದಲ್ಲೇ ಸುತ್ತಾಡಿಸಬೇಕಿತ್ತು. ಇನ್ನೂ ಖುಷಿಯಾಗುತ್ತಿತ್ತು. ನಾನು ಸಿರಸಿ, ಬನವಾಸಿ, ಮುಂತಾದ ಸ್ಥಳಗಳನ್ನು ನೋಡಿರುವೆ.ತುಂಬ ಚೆನ್ನಾಗಿ ಬರೆದಿದ್ದೀರಿ. ಪ್ರವಾಸ ಹೋಗಿ ಬಂದಹಾಗನಿಸಿತು

  6. ಶಂಕರಿ ಶರ್ಮ says:

    ಸೊಗಸಾದ ಕನ್ನಡ..ಹವ್ಯಕ ಕನ್ನಡ. ಹಲವಾರು ವರ್ಷ, ನೌಕರಿಯ ಸಲುವಾಗಿ ಕುಮಟಾದಲ್ಲಿ ಇದ್ದುದು ನೆನಪಾಯ್ತು.. ಹಳೆಯ ಸಂಪ್ರದಾಯಗಳನ್ನು ಇಂದಿಗೂ ಮೈಗೂಡಿಸಿಕೊಂಡಿರುವ ಅಲ್ಲಿಯ ಹಳ್ಳಿಯ ಜೀವನ ಸೊಗಸೇ ಸೊಗಸು. ಚಂದದ ಲೇಖನ ಕಣ್ರೀ..ಧನ್ಯವಾದಗಳು ತಮಗೆ.

  7. Savithri bhat says:

    ಉತ್ತರಕನ್ನಡದ ಬಗ್ಗೆ ಬಹಳ ಸುಂದರ ಮಾಹಿತಿಯನ್ನು ನೀಡಿದ್ದೀರಿ,ಚಂದದ ನಿರೂಪಣೆ

  8. sudha says:

    Oh! beautiful description of uttarakannada.

  9. ಕನ್ನಡದ ಅದ್ಭುತ ಕಥೆಗಾರ್ತಿ ವೈದೇಹಿ ಅವರ ಕಥೆ ಓದಿ ದಂತಾಯಿತು
    ವಂದನೆಗಳು

  10. ನೂತನ ದೋಶೆಟ್ಟಿ says:

    ಜಿಲ್ಲೆಯ ಪರಿಚಯ ಸಮಗ್ರವಾಗಿ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: