ಶಿವಮೊಗ್ಗ ಜಿಲ್ಲೆಯ ಪರಿಚಯ ಲೇಖನ
ನಮಸ್ಕಾರ ಶಿವಮೊಗ್ಗ ಜಿಲ್ಲೆಗೆ ಸ್ವಾಗತ.. ಶಿವಮೊಗ್ಗ ಕ್ಕೆ ಈ ಹೆಸರು ಬರಲು ಎರಡು ಕಾರಣಗಳಿವೆ. ಶಿವನು ಬಾಯಾರಿ ಬಂದಾಗ ಮೊಗ್ಗೆ(ಮಡಿಕೆ) ಯಿಂದ ತುಂಗಾ ನದಿಯ ನೀರು ಕುಡಿದನಂತೆ ಹಾಗಾಗಿ ಈ ಊರಿಗೆ ಶಿವಮೊಗ್ಗ ಎನ್ನುವ ಹೆಸರು ಬಂತು ಎಂಬ ಪ್ರತೀತಿ ಇದೆ. ಇನ್ನೊಂದು ಸನ್ನಿವೇಶದಲ್ಲಿ, ಸಿಹಿನೀರಿನ ಮಡಿಕೆ ಎನ್ನುವುದು ಕಾಲಾನಂತರದಲ್ಲಿ ಶಿವಮೊಗ್ಗ ಎಂದು ವ್ಯುತ್ಪತ್ತಿ ಹೊಂದಿತು.
ಶಿವಮೊಗ್ಗ ನಗರವು ಶಿವಮೊಗ್ಗ ಜಿಲ್ಲೆಯ ಮುಖ್ಯ ಆಡಳಿತ ಪ್ರದೇಶವಾಗಿದೆ. ಸಾಗರ,ಸೊರಬ, ತೀರ್ಥಹಳ್ಳಿ, ಹೊಸನಗರ ಹಾಗೂ ಭದ್ರಾವತಿ ಎಂಬ ತಾಲೂಕುಗಳನ್ನು ಹೊಂದಿದ್ದು; ಕಾರ್ಗಲ್,ಆನಂದಪುರ,ರಿಪ್ಪನ್ ಪೇಟೆ, ಆನವಟ್ಟಿ ಮುಂತಾದ ಪಟ್ಟಣ ಪಂಚಾಯತಿ ಹೊಂದಿರುತ್ತದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಇರುವ ಅಪ್ಪಟ ಮಲೆನಾಡು ನಮ್ಮ ಈ ಶಿವಮೊಗ್ಗ ಜಿಲ್ಲೆ. ಇಲ್ಲಿ ಹವ್ಯಕರಲ್ಲದೆ, ಈಡಿಗರು, ದೀವ ನಾಯಕರು ಹಾಗೂ ಜೈನರು ವಾಸಿಸುತ್ತಾರೆ.
ಶಿವಮೊಗ್ಗ ಜಿಲ್ಲೆಯು ತ್ಯಾವರೆಕೊಪ್ಪ ಹಾಗೂ ಭದ್ರಾ ಎಂಬ ಎರಡು ವನ್ಯಜೀವಿ ಧಾಮವನ್ನು ಹೊಂದಿದ್ದು; ಗುಡವಿ ಹಾಗೂ ಮಂಡಗದ್ದೆ ಎಂಬ ಎರಡು ಪಕ್ಷಿಧಾಮವನ್ನು ಸಹ ಹೊಂದಿರುತ್ತದೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲು ಗ್ರಾಮದಲ್ಲಿ ಆನೆಗಳ ತರಬೇತಿ ಶಿಬಿರವು ಸಹ ಪ್ರಸಿದ್ಧಿ ಪಡೆದಿದೆ.ಶಿವಮೊಗ್ಗದ ಭದ್ರಾವತಿಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಅತ್ಯಂತ ಪ್ರಾಚೀನ ಕಾಲದ್ದು. ಇನ್ನೊಂದು ಅಚ್ಚರಿಯ ವಿಷಯವೇನೆಂದರೆ, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಶತಮಾನ ಕಾಣಲು ಸಮೀಪದಲ್ಲಿದೆ.
ಸಾಗರ ಊರು ಶ್ರೀಗಂಧದ ಹಾಗೂ ಬೀಟೆ ಮರದ ಕಲಾಕೃತಿ ಕೆತ್ತನೆಗೆ ಹೆಸರುವಾಸಿಯಾಗಿದೆ. ಸಾಗರದಲ್ಲಿ ಪ್ರವಾಸಿಗರಿಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳು ನೋಡಲು ಸಿಗುತ್ತದೆ. ಸಹ್ಯಾದ್ರಿ ಪರ್ವತದ ತಪ್ಪಲಿನ ಮಲೆನಾಡಿನ ಪ್ರಕೃತಿಯ ಸೊಬಗು ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲಸಾಧ್ಯ. ಖುದ್ದಾಗಿ ಹೋಗಿ ನೋಡಿಯೇ ಕಣ್ತುಂಬಿಕೊಳ್ಳಬೇಕು. ಅದರಲ್ಲೂ ಭಾರತದ ನಯಾಗರ ಎಂದೇ ಹೆಸರುವಾಸಿಯಾಗಿರುವ ಜಗದ್ವಿಖ್ಯಾತ ಜೋಗ ಜಲಪಾತ ಇರುವುದು ಸಾಗರದ ಜೋಗ ಗ್ರಾಮದಲ್ಲಿ. ಜೋಗ ಜಲಪಾತವು ಮೈದುಂಬಿ ಹರಿಯುವ ಶರಾವತಿ ನದಿಯಿಂದ ಉಗಮವಾಗಿ ರಾಜಾ, ರಾಣಿ, ರೋರರ್ & ರಾಕೆಟ್ ಎಂದು ನಾಲ್ಕು ಜಲಪಾತಗಳಾಗಿ ಒಡೆದು ಆಳೆತ್ತರದಿಂದ ಭೋರ್ಗರೆದು ಧುಮುಕುತ್ತದೆ. ಶರಾವತಿ ನದಿಯ ಹಿನ್ನೀರಿನಲ್ಲಿ ಬೃಹತ್ ಲಿಂಗನಮಕ್ಕಿ ಜಲಾಶಯ ಕೂಡ ಇದೆ. ಸ್ಥಳೀಯ ಪ್ರದೇಶಗಳಿಗೆ ಅಗತ್ಯವಿರುವ ವಿದ್ಯುತ್ ಸರಬರಾಜು ಲಿಂಗನಮಕ್ಕಿ ಪವರ್ ಹೌಸ್ ನಿಂದ ಒದಗಿಸಲಾಗುತ್ತದೆ.ಜೋಗ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಸಾಗುವಾಗ ಕೆಲವೇ ಕೆಲವು ಮೈಲಿ ದೂರದಲ್ಲಿ ಮಾವಿನಗುಂಡಿ ಎಂಬ ಚಿಕ್ಕ ಝರಿಯನ್ನು ನೋಡಬಹುದು. ಜೋಗ ಗ್ರಾಮದಲ್ಲಿ, ಬ್ರಿಟಿಷರ ಕಾಲದ ಬಂಗಲೆಯನ್ನು ಸಹ ನಾವಿಲ್ಲಿ ಕಾಣಬಹುದು.
ಸಾಗರದಲ್ಲಿರುವ ಕೊಡಚಾದ್ರಿ ಶಿಖರ ಭೂಲೋಕದ ಸ್ವರ್ಗವೆಂದೇ ಖ್ಯಾತಿ ಪಡೆದಿದೆ. ಸಾಗರದ ಕವಲೆದುರ್ಗದ ಕೋಟೆ, ಹುಂಚದ ಪದ್ಮಾವತಿ ದೇವಸ್ಥಾನ, ಸಿಗಂಧೂರು ಚೌಡೇಶ್ವರಿ ದೇವಸ್ಥಾನ, ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ, ಕೆಳದಿ ರಾಮೇಶ್ವರ ದೇವಾಲಯ, ಕೆಳದಿ ಶಿವಪ್ಪನಾಯಕನ ಅರಮನೆ, ಹೊಸಗುಂದದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ಹಾಗೂ ಮಹಾನ್ ತಪಸ್ವಿ ಶ್ರೀ ಶ್ರೀಧರ ಸ್ವಾಮಿಗಳ ತಪೋವನವಾದ ವರದಹಳ್ಳಿ/ವರದಪುರ ಶ್ರೀ ಶ್ರೀಧರಾಶ್ರಮ ಇವು ಸಾಗರದ ಪ್ರಮುಖ ಐತಿಹಾಸಿಕ/ಧಾರ್ಮಿಕ/ಪ್ರೇಕ್ಷಣೀಯ ಸ್ಥಳಗಳು.
ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳರು ಆಳಿದ ಊರು ನಮ್ಮ ಸಾಗರ. ಝಾನ್ಸಿಯ ರಾಣಿ ಮಣಿಕರ್ಣಿಕಾಳಷ್ಟೇ ಕೆಚ್ಚೆದೆ ಹೊಂದಿದ್ದ ರಾಣಿ ನಮ್ಮ ಕೆಳದಿಯ ಚೆನ್ನಮ್ಮ.ಛತ್ರಪತಿ ಶಿವಾಜಿಯಷ್ಟೆ ಮಹಾ ಪರಾಕ್ರಮಶಾಲಿ ಕೆಳದಿಯ ಶಿವಪ್ಪನಾಯಕ. ಶಿಸ್ತಿಗೆ ಇನ್ನೊಂದು ಹೆಸರೇ ನಮ್ಮ ಶಿವಪ್ಪನಾಯಕ.(ಹೋಲಿಕೆಯಲ್ಲ.. ಕಲ್ಪನೆ ಮಾಡಿಕೊಳ್ಳಲು ಅನುವಾಗಲಿ ಎನ್ನುವ ಆಶಯ ಅಷ್ಟೆ. ದಯವಿಟ್ಟು ತಪ್ಪು ಭಾವಿಸಬೇಡಿ)
ಸಾಗರದ ಪೇಟೆಯಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಇದೆ. ಅದರ ಹೊರಗೋಡೆಗೆ ತಾಗಿಯೆ ಮಸೀದಿಯೊಂದು ಇದೆ. ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ಸಂಕೇತವಾಗಿದೆ ಈ ಸ್ಥಳ. ಪ್ರತಿವರ್ಷ ಯುಗಾದಿ ಹಬ್ಬದ ಸಮಯದಲ್ಲಿ ಮಹಾಗಣಪತಿ ಜಾತ್ರೆ ನಡೆಯುತ್ತದೆ. ಸಾಗರದ ಬಗ್ಗೆ ಇನ್ನೂ ಸ್ವಲ್ಪ ಜಾಸ್ತಿನೇ ಹೇಳಬೇಕು ಅಂದ್ರೆ ಇಲ್ಲಿನ ರಿಪ್ಪನ್ ಪೇಟೆ ಅಪ್ಪೆಮಿಡಿ ಹೆಸರು ಕೇಳಿದರೆ ಮಿಡಿ ಉಪ್ಪಿನಕಾಯಿ ಪ್ರಿಯರ ಕಿವಿ ಚುರುಕಾಗುತ್ತದೆ..ಬಾಯಲ್ಲಿ ನೀರೂರುತ್ತದೆ.
ಹೊಸನಗರ ತಾಲೂಕಿನ ಕುರಿತು ಹೇಳಬೇಕೆಂದರೆ ಆಗಿನ ರಾಜನು ಕೋಟೆಯ ಆಸ್ತಿಪಾಸ್ತಿಗಳನ್ನು ಹೈದರ ಅಲಿಯ ಕುಟಿಲ ಆಕ್ರಮಣದಿಂದ ರಕ್ಷಿಸಲು ಕೋಟೆಯಲ್ಲಿದ್ದ ಮುತ್ತು, ರತ್ನ, ವಜ್ರ ವೈಡೂರ್ಯವನ್ನು ಬೃಹತ್ ಗಾತ್ರದ ಬೀಸುವ ಮತ್ತು ರುಬ್ಬುವ ಕಲ್ಲಿನಲ್ಲಿ ಹಾಕಿ ಪುಡಿ ಮಾಡಿ ವಿಶಾಲವಾದ ಪ್ರಾಂಗಣದ ಮೂಲೆ ಮೂಲೆಗಳಲ್ಲಿ ಚೆಲ್ಲಿದ್ದನಂತೆ. ಮೊನ್ನೆ ಮೊನ್ನೆಯವರೆಗೂ ಕಣ್ಣಿಗೆ ಕಾಣುತ್ತಿದ್ದವಂತೆ. ಆದರೆ, ಬಾಚಿ ಕೊಳ್ಳುವ ಧೈರ್ಯ ತೋರಲಿಲ್ಲ ಯಾರೂ..ಕಾರಣ, ಸುತ್ತಲೂ ವಿಷ ಸರ್ಪಗಳ ಕಾವಲು ಇದೆ ಹಾಗಾಗಿ.
ಪುರಾಣ ಕಾಲದಿಂದಲೂ ತುಂಗಾ ಸ್ನಾನ-ಗಂಗಾ ಪಾನ ನಾಣ್ನುಡಿ ಖ್ಯಾತಿಯ ಊರು ತೀರ್ಥಹಳ್ಳಿ. ತ್ರೇತಾಯುಗದಲ್ಲಿ, ಪರಶುರಾಮನು ಭೂಮಂಡಲದಲ್ಲಿ 21 ಬಾರಿ ಪರ್ಯಟನೆ ಮಾಡಿ ಅನ್ಯಾಯದ ಹಾದಿ ಹಿಡಿದ ರಾಜರನ್ನು ವಧೆ ಮಾಡಿದ ನಂತರ ತನ್ನ ಪರಶು(ಕೊಡಲಿಯನ್ನು) ಇದೇ ತುಂಗಾ ನದಿಯಲ್ಲಿ ತೊಳೆದಿದ್ದನಂತೆ; ಮತ್ತು ಭವಿಷ್ಯದಲ್ಲಿ ಈ ಸ್ಥಳ ತೀರ್ಥ ಕ್ಷೇತ್ರವಾಗಿ ಹೊರಹೊಮ್ಮಲಿ ಎಂದು ನುಡಿದಿದ್ದನಂತೆ. ಅಲ್ಲದೇ, ದ್ವಾಪರಯುಗದಲ್ಲಿ ವನವಾಸದ ಸಂದರ್ಭದಲ್ಲಿ, ಪಾಂಡವರು ಈ ನದಿಯಲ್ಲಿ ತೀರ್ಥ ಸ್ನಾನ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಆದಕಾರಣ ಈ ಊರಿಗೆ ತೀರ್ಥಹಳ್ಳಿ ಎಂಬ ಹೆಸರು ಬಂತು ಎಂದು ಹೇಳುತ್ತಾರೆ.
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಗ್ರಾಮವು ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ. ಆಗುಂಬೆ ಮಳೆಯ ರಮಣೀಯ ನರ್ತನ ಆಸ್ವಾದಿಸಲು ಸ್ವರ್ಗವೇ ಭುವಿಗಿಳಿದಂತೆ ಭಾಸವಾಗುತ್ತದೆ. ಮನ ಸೂರೆಗೊಳ್ಳುವ ಆಗುಂಬೆಯ ಸೂರ್ಯಾಸ್ತಮಾನ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಸೂರ್ಯಾಸ್ತ ವೀಕ್ಷಿಸಲು ನಾನಾ ಕಡೆಗಳಿಂದ ಪ್ರವಾಸಿಗರು ಆಗುಂಬೆಗೆ ಭೇಟಿ ನೀಡುತ್ತಾರೆ. ಆಗುಂಬೆಯ ದಟ್ಟ ಕಾಡುಗಳನ್ನು ಸೀಳಿ ಹೋಗುವ ಸರ್ಪದಂತೆ ಸಾಗುವ ಆಗುಂಬೆ ಘಾಟ್ ಎಂದರೆ ಎಂತವರಿಗೂ ಮೈನವಿರೇಳಿಸುತ್ತದೆ. ತೀರ್ಥಹಳ್ಳಿಯ ತುಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ನಿರ್ಮಾಣದ ಕೀರ್ತಿ ಭಾರತರತ್ನ ಸರ್.ಎಮ್.ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ.
ಇಲ್ಲಿನ ಸುಪ್ರಸಿದ್ಧ ರಾಮೇಶ್ವರ ದೇವಾಲಯಕ್ಕೂ ಒಂದು ಇತಿಹಾಸವಿದೆ. ಪರಮಾತ್ಮ ಶ್ರೀ ರಾಮಚಂದ್ರ ಮತ್ತು ಈಶ್ವರನು ಸಂಧಿಸಿದ ಜಾಗದ ನೆನಪಿಗಾಗಿ ಇಲ್ಲಿ ರಾಮೇಶ್ವರ ದೇವಾಲಯ ನಿರ್ಮಾಣವಾಯಿತು ಎನ್ನಲಾಗಿದೆ. ಪ್ರತಿವರ್ಷ ಸಂಕ್ರಾಂತಿ ಹಬ್ಬದ ಸಮಯದಲ್ಲಿ ರಾಮೇಶ್ವರ ದೇವಾಲಯದ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ, ಬೇರೆಬೇರೆ ಊರಿನಿಂದ ಭಕ್ತಾದಿಗಳು ತೀರ್ಥಸ್ನಾನಕ್ಕಾಗಿ ಇಲ್ಲಿಗೆ ಬರುತ್ತಾರೆ. ತ್ರೇತಾಯುಗದ ಇತಿಹಾಸ ಹೊಂದಿರುವ ತೀರ್ಥಹಳ್ಳಿಯ ಮತ್ತೊಂದು ಪ್ರಸಿದ್ಧ ಸ್ಥಳ ಮೃಗವಧೆ. ಇದು ರಾಮ-ಲಕ್ಷ್ಮಣರು ಜಿಂಕೆ ರೂಪದ ರಾಕ್ಷಸ ಮಾರೀಚನನ್ನು ವಧೆ ಮಾಡಲಾದ ಸ್ಥಳ.
ತೀರ್ಥಹಳ್ಳಿ ಎಂದೊಡನೆ ಥಟ್ ಅಂತ ನೆನಪಿಗೆ ಬರೊದೇ ನಾಡು ಕಂಡ ಶ್ರೇಷ್ಠ ಕವಿ. ಅವರು ಯಾರೆಂದು ಬಲ್ಲಿರಾ?! ವಿಶ್ವಕ್ಕೆ ಮಾನವತೆಯ ಸಂದೇಶ ಸಾರಿದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ.. ಅಂದರೆ, ನಮ್ಮ ನಿಮ್ಮೆಲ್ಲರ ನೆಚ್ಚಿನ ಕುವೆಂಪು. ತೀರ್ಥಹಳ್ಳಿಗೆ ಹೋದಾಗ ಕುವೆಂಪುರವರ ಕವಿಶೈಲ ನೋಡದೆ ಹಾಗೆ ಬರಲು ಮನಸ್ಸೇ ಆಗುವುದಿಲ್ಲ. ಮಲೆನಾಡಿನ ಗರ್ಭದಲ್ಲಿ ಜನಿಸಿದ ಕುವೆಂಪುರವರ ಮನೆ ಕವಿಶೈಲವನ್ನು ಪ್ರವಾಸೋದ್ಯಮ ಇಲಾಖೆಯವರು ವಸ್ತು ಸಂಗ್ರಹಾಲಯವಾಗಿ ಮಾರ್ಪಾಟು ಮಾಡಿದ್ದಾರೆ.
ಈ ರಾಷ್ಟ್ರ ಕವಿಯ ಕುಲಪುತ್ರನಾದ ಪೂರ್ಣಚಂದ್ರ ತೇಜಸ್ವಿಯವರು ಸಹ ನಾಡು ಕಂಡ ಹೆಸರಾಂತ ಸಾಹಿತಿ. ಇಂತಹ ವಿಶ್ವ ಮಾನವನ ಜನ್ಮ ಸ್ಥಳವಾದ ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಅನೇಕ ಸಾಹಿತಿಗಳು ಜನಿಸಿ, ಕನ್ನಡ ನಾಡು-ನುಡಿಗೆ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ ಹಾರೊಗದ್ದೆ ಮಾನಪ್ಪ ನಾಯಕ (ಹಾ.ಮಾ.ನಾಯಕ), ನಿತ್ಯೋತ್ಸವ ಕವಿ ಕೆ.ಎಸ್.ನಿಸ್ಸಾರ್ ಅಹಮದ್, ನಾ.ಡಿಸೋಜ ಮತ್ತು ಶ್ರೀನಿವಾಸ ಉಡುಪ ಪ್ರಮುಖರು.ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಕಾಗೋಡು ತಿಮ್ಮಪ್ಪ ಹಾಗೂ ಎಸ್.ಬಂಗಾರಪ್ಪ ನವರು ನಮ್ಮ ಸಾಗರದವರೇ. ಹೊಸನಗರ ತಾಲೂಕಿನವರಾದ, ಸಂಗೀತ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಕನ್ನಡ ನಾಡಿನ ಹೆಸರಾಂತ ಗಾಯಕಿ ಶ್ರೀಮತಿ ಅರ್ಚನಾ ಉಡುಪರವರು ಸಾಹಿತಿ ಶ್ರೀನಿವಾಸ ಉಡುಪರ ಹೆಮ್ಮೆಯ ಪುತ್ರಿ.
ಟಿ.ಎಸ್.ನಾಗಾಭರಣ ನಿರ್ದೇಶನದ ಮೈಸೂರು ಮಲ್ಲಿಗೆ ಚಲನಚಿತ್ರದಲ್ಲಿ ನಟಿಸಿದ, ಕನ್ನಡ ರಂಗಭೂಮಿಯ ಅತ್ಯಂತ ಕ್ರೀಯಾಶೀಲ ನಿರ್ದೇಶಕರಾದ ಸಾಗರದ ಹೆಗ್ಗೋಡು ನಿವಾಸಿ ಪ್ರಸನ್ನ ಹೆಗ್ಗೋಡು ಅವರ ಚರಕ ಖಾದಿ ಸಂಸ್ಥೆ ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಸರು ಗಳಿಸಿದೆ.ವೃತ್ತಿ ರಂಗಭೂಮಿಯಲ್ಲಿ ಬೆರಗುಗೊಳಿಸುವ ಸಾಧನೆ ಮಾಡಿದ ಮಹಾನ್ ಮೇಧಾವಿ ರಂಗಕರ್ಮಿ ಕೆ.ವಿ.ಸುಬ್ಬಣ್ಣರವರು ಹುಟ್ಟು ಹಾಕಿದ ಶ್ರೀ ನೀಲಕಂಠೇಶ್ವರ ನಾಟಕ ಸಂಘ(ನೀನಾಸಂ ರಂಗಶಾಲೆ) ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಕನ್ನಡ ನಾಡಿಗೆ ನೀಡಿದೆ.
ಶಿವಮೊಗ್ಗ ಜಿಲ್ಲೆಯನ್ನು ಇದಕ್ಕಿಂತ ಹೆಚ್ಚು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ಕೋಶ ಓದು..ದೇಶ ಸುತ್ತು ಎಂಬ ನಾಣ್ನುಡಿಯಂತೆ ಈ ಲೇಖನ ಓದಿದ ನೀವು ಒಮ್ಮೆ ಶಿವಮೊಗ್ಗ ಜಿಲ್ಲೆಯ ಪ್ರವಾಸ ಕೈಗೊಂಡು ಪ್ರಕೃತಿಯ ಸೊಬಗನ್ನು ಮನಸಾರೆ ಸವಿಯಿರಿ.
-ಮೇಘನಾ ದುಶ್ಯಲಾ
ಶಿವಮೊಗ್ಗ ಜಿಲ್ಲೆಯ ಸುವಿಸ್ತಾರವಾದ ಪರಿಚಯಾತ್ಮಕ ವಾದ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ.ಅಭಿನಂದನೆಗಳು ಗೆಳತಿ.
ಧನ್ಯವಾದಗಳು
ಎಷ್ಟೊಂದು ವಿಚಾರಗಳನ್ನು ತಿಳಿದುಕೊಂಡಿದ್ದೀರಿ ಮೇಘನಾ…. ಅದನ್ನು ಇಲ್ಲಿ ಲೇಖನ ರೂಪದಲ್ಲಿ ಪ್ರಸ್ತುತ ಪಡಿಸಿದ ರೀತಿಯೂ ತುಂಬಾ ಸೊಗಸಾಗಿದೆ. ನಿಮ್ಮ ಜ್ಞಾನ ಭಂಡಾರ ನಿಜಕ್ಕೂ ಅದ್ಭುತವಾಗಿದೆ.
Nayana Bajakudlu ಅನಂತ ಧನ್ಯವಾದಗಳು ಗೆಳತಿ
ನಾನಿನ್ನೂ ಕರ್ನಾಟಕ ಹೊರತು ಬೇರೆ ಯಾವ ರಾಜ್ಯಕ್ಕೂ ಹೋಗಿಲ್ಲ.
ಈ ವರೆಗೂ ಸುತ್ತಿರುವ ನಮ್ಮ ರಾಜ್ಯದ ಜಿಲ್ಲೆಗಳ ಕುರಿತು ನನಗೆ ತಿಳಿದಷ್ಟು ಹಂಚಿಕೊಳ್ಳಲು ಪ್ರಯತ್ನಿಸುತ್ತಿರುವೆ.
ಶಿವಮೊಗ್ಗದ ಪರಿಚಯ
ಪೌರಾಣಿಕ ಹಿನ್ನೆಲೆ, ಇತಿಹಾಸ, ಪ್ರೇಕ್ಷಣೀಯ ಸ್ಥಳಗಳ ಕಿರು ಚಿತ್ರಗಳು ಚೆನ್ನಾಗಿ ಮೂಡಿಬಂದಿವೆ. ಧನ್ಯವಾದಗಳು
ಅನೇಕ ವೇಳೆ ಧನ್ಯವಾದಗಳು ಮೇಡಂ
ಶಿವಮೊಗ್ಗದ ಕಿರುಪರಿಚಯ ಲೇಖನವು ಬಹಳ ಚೆನ್ನಾಗಿದೆ.. ತುಂಬಾ ವಿಷಯಗಳನ್ನು ತಿಳಿದುಕೊಳ್ಳುವಂತಾಯಿತು. ಪೂರಕ ಚಿತ್ರಗಳು ಅದರ ಚೆಲುವನ್ನು ಇನ್ನೂ ಹೆಚ್ಚಿಸಿವೆ.. ಧನ್ಯವಾದಗಳು..ಮೇಘನಾ ಮೇಡಂ.
ಶಿವಮೊಗ್ಗದ ಸಿರಿ ಯನ್ನು ಸಾರಿದ ಲೇಖನ ತುಂಬಾ ಚೆನ್ನಾಗಿದೆ.ಎಸ್ಟೊಂದು ವೈವಿಧ್ಯ ಮಯ ತಾಣ ಗಳನ್ನೂ ಪರಿಚಯಿಸಿದ ಲೇಖನ ತುಂಬಾ ಸೊಗಸಾಗಿದೆ
ಧನ್ಯವಾದಗಳು