ಹರಿನಾಮ ಸುಂದರ…
ಆಗ ಅತೀವ ಕಾಲುನೋವು, ಕೀಲುಗಳಲ್ಲಿ ಉರಿಯೊಂದಿಗೆ ಸೆಳೆತ, ಬಿಟ್ಟು ಬಿಟ್ಟು ಬರುವ ಜ್ವರದಿಂದ ಬಳಲುತ್ತಿದ್ದೆ. ವಾರದ ಮಟ್ಟಿಗೆ ಆಸ್ಪತ್ರೆಗೂ ದಾಖಲಾಗಿದ್ದೆ. ವೈರಲ್ ಆರ್ಥ್ರೈಟಿಸ್ ಎಂದಿದ್ದರು ಡಾಕ್ಟ್ರು. ಡಿಸ್ಚಾರ್ಜ್ ಆಗಿ ಬಂದ ಮೇಲೆ ಸುಮಾರು ಆರೇಳು ತಿಂಗಳು ನಡೆಯಲು ಸಾಧ್ಯವಾಗದೆ ವೀಕ್ನೆಸ್ನಿಂದ ಮಂಕಾಗಿ ಬಿಟ್ಟಿದ್ದೆ. ಕಾಲೇಜು ಓದುತ್ತಿದ್ದ ಮಕ್ಕಳು, ಯಾವಾಗಲೂ ಕೆಲಸದ ಬಿಜಿಯಲ್ಲೇ ಮುಳುಗಿ ತೇಲಾಡುತ್ತಿದ್ದ ಗಂಡ. ನನ್ನ ಸಹಾಯ ಸಿಗದೆ ಅಡಿಗೆ ಮನೆ, ಇತರ ಕ್ಲೀನಿಂಗ್ ಕೆಲಸಗಳನ್ನೂ ಇವರುಗಳೇ ಹೇಗೋ ಹಂಚಿಕೊಂಡರೂ ನಿಭಾಯಿಸಲು ಸಾಧ್ಯವಾಗದೆ ವೈಮನಸ್ಸು, ಕೋಲ್ಡ್ ವಾರ್ ಗಳಿಂದ ಮನೆಯ ವಾತಾವರಣ ಅಸಹನೀಯ ಎನಿಸತೊಡಗಿತು. ಮನೆಯೊಂದು ಮೂರು ಬಾಗಿಲಿನಂತಾಗಿ ನನ್ನ ಮಾತನ್ನು ಯಾರೂ ಕೇಳದೆ ಪ್ರತಿದಿನ ದೂರುಗಳು, ಜಗಳಗಳು ಸಾಮಾನ್ಯವಾಗತೊಡಗಿತು. ಜೀವನ ತೀರಾ ಬಣ್ಣ ಕಳೆದುಕೊಂಡ ಕ್ಯಾನ್ವಾಸಿನಂತೆ ಭಾಸವಾಗತೊಡಗಿತು.
ಅದೇ ಸಮಯಕ್ಕೆ ಒಂದು ಅದ್ಭುತ ಘಟಿಸಿಯೇಬಿಟ್ಟಿತು. ಮನೆಯ ಸದಸ್ಯರೆಲ್ಲರೂ ಇಂತಹುದಕ್ಕೇ ಕಾದಿದ್ದವರಂತೆ ಮತ್ತೆ ಪ್ರೀತಿಯಿಂದ ಒಂದಾಗಿಬಿಟ್ಟೆವು. ಅಂತಃಕರಣ ಅಕ್ಷಯವಾಗತೊಡಗಿತು. ಬರಡಾಗಿದ್ದ ಬದುಕಿಗೆ ಬಣ್ಣ ತುಂಬಿ, ಹಿಡಿದಿಟ್ಟ ಭಾವನೆಗಳನ್ನು ಹರಿಯಬಿಡಲು ಸ್ಪೂರ್ತಿಯಾದವನ ಹೆಸರು ‘ಹರಿ’. ನಮ್ಮನೆಯ ನಾಲ್ಕು ಕಾಲಿನ ಮುದ್ದು ಮಗು.
ಇವನು ನಮ್ಮನ್ನು ಸೇರುವ ಮುಂಚೆ 🐕 ನಾಯಿ ಸಾಕುವುದಿರಲಿ ಅವುಗಳನ್ನು ಮುಟ್ಟಿಸಿಕೊಳ್ಳಲೂ ಹಿಂಜರಿಕೆ ಇತ್ತು. ಹಳ್ಳಿಮನೆಯಲ್ಲಿ ಹಸು, ಎಮ್ಮೆ ಜೊತೆಗೆ ನಾಯಿಯೂ ಇದ್ದಿತಾದರೂ ಅವುಗಳಿಗೆ ಎಷ್ಟು ಬೇಕೋ ಅಷ್ಟೇ, ಹೀಗೆ ಹಚ್ಚಿಕೊಂಡಿರಲಿಲ್ಲ. ಯಾರಾದರೂ ಅವರ ಮನೆಯ ಪೆಟ್/ ನಾಯಿ ಹುಟ್ಟು ಹಬ್ಬ ಸಮಾರಂಭದ ಫೋಟೋಗಳನ್ನು ಶೇರ್ ಮಾಡಿದರೆ ವಿಚಿತ್ರ ಅನಿಸುತ್ತಿತ್ತು. ನಾಯಿಗೊಂದು ಹೆಸರೇ….!, ಅದಕ್ಕೆ ಬರ್ತ್ ಡೇ ಮಾಡೋದೇನು, ದೊಡ್ಡವರಾದಿಯಾಗಿ ಕುಣಿಯೋದೇನು.. ಇಶ್ಷಿ
..ಕರ್ಮ.. ಕರ್ಮ.. ಅಂತ ಮೂಗು ಮುರಿಯುತ್ತಿದ್ದೆ. ಮನುಷ್ಯರ ಥರ ನಾಯಿಯನ್ನು ಮಾತನಾಡಿಸುವುದು, ಮುದ್ದು ಮಾಡೋದು ಬಣ್ಣದ ಬಟ್ಟೆ ಹಾಕಿ ಅಲಂಕರಿಸೋದು ನೋಡಿದರಂತೂ ರೇಗಿಯೇ ಹೋಗುತ್ತಿತ್ತು. ಇವರೆಲ್ಲರಿಗೂ ಹುಚ್ಚೇ, ಅದಕ್ಕೇನಾದರೂ ಗೊತ್ತಾಗುತ್ತದೆಯೇ – ಅಂತೆಲ್ಲಾ ಯೋಚನೆಗಳು!
ಇದೆಲ್ಲವನ್ನೂ ಸುಳ್ಳು ಮಾಡುವಂತೆ ಇವ ಬಂದ! ಒಂದೂವರೆ ಅಂಗೈಯಷ್ಟು ಉದ್ದವಿದ್ದ, ಎರಡೂವರೆ ತಿಂಗಳ ಪಾಕ್ಸರ್ ಜಾತಿಯ ಮುದ್ದಾಗಿದ್ದ ನಾಯಿ ಮರಿ. ಬೂದು ಬಣ್ಣದ ಹಣೆಯಲ್ಲಿ ಬಿಳಿನಾಮವಿರುವ, ಪಿಳಿಪಿಳಿ ಕಣ್ಣು ಬಿಡುತ್ತಾ ಅಬೋಧ ನೋಟ ಬೀರುತ್ತಿದ್ದವ ಆಸರೆಗಾಗಿ ಎತ್ತಿಕೋ ಎನ್ನುವಂತಹ ಮೂಕಭಾಷೆಯ ಕೋರಿಕೆ ಮನಸಿಗೆ ಮುಟ್ಟಿತ್ತು. ತನಗೆ ಬೇಕಿದ್ದೆಲ್ಲವನ್ನೂ ಮಗುವಿನಂತೆಯೇ ಹಠ ಮಾಡಿ ನಮ್ಮೆಲ್ಲರನ್ನೂ ಅವನೆಡೆಗೆ ಎಳೆದುಕೊಂಡ. ದಿನೇದಿನೇ ಅವನ ದೇಖಾರೇಖಿಗಳನ್ನು ನೋಡುತ್ತಾ ನಾವೂ ಅವನೊಂದಿಗೆ ಬೆಳೆದೆವು. ಸೂಕ್ಷ್ಮ ಸಂವೇದನೆಯಿಂದ, ಮನುಷ್ಯನಿಗಿರದ ನಿಯತ್ತಿನಿಂದ, ತನ್ನ ಚಿನ್ನಾಟದಿಂದ ಪ್ರಾಣಿಗಳ ಬಗ್ಗೆ ನನಗಿದ್ದ ಪೂರ್ವಾಗ್ರಹವನ್ನು ಬದಲಿಸಿಯೇ ಬಿಟ್ಟ ‘ಹರಿ’…! ಈಗಂತೂ ಯಾರೇನೇ ಅಂದುಕೊಳ್ಳಲಿ, ನನ್ನ ಮಗನೆಂದೇ ಹೇಳುವಷ್ಟು ಪರಿವರ್ತನೆ ಆಗಿದೆ. ಆ ಪುಟ್ಟ ಹೃದಯದ ನಿಷ್ಕಲ್ಮಶ ಪ್ರೀತಿಗೆ ಮನಸು ಮೂಕವಾಗಿದೆ.
ಮೊದಲು ಬೀದಿನಾಯಿಗಳನ್ನು ನೋಡಿದರೆ ಹೆದರಿ ಓಡುತ್ತಿದ್ದೆ. ಈಗ ಜಾಣತನದಿಂದ ಎದುರಿಸುವ ಧೈರ್ಯ ಬಂದಿದೆ. ಲಾಕ್ಡ್ ಡೌನ್ ಆದಾಗಿನಿಂದ ನಮ್ಮ ರಸ್ತೆ ಸೇರಿದಂತೆ ಬೇರೆ ಬೇರೆ ರಸ್ತೆಯ ಏಳೆಂಟು ನಾಯಿಗಳಿಗೆ ದಿನವೂ ಊಟ ಕಲೆಸಿ ಹಾಕಿ ಖಾಯಂ ಗೆಳೆಯರಾಗಿಬಿಟ್ಟಿದ್ದಾರೆ.
ನಮ್ಮ ಹರಿಗೆ ಬೆಳಿಗ್ಗೆ, ಸಂಜೆ ವಾಕಿಂಗ್ ಮಾಡಿಸಲು, ಎರಡು ವಾರಕ್ಕೊಮ್ಮೆ ಸ್ನಾನ ಮಾಡಿಸಲು ಅಪ್ಪ ಬೇಕು, ಹೊಸ ಹೊಸ ಆಟ ಹೇಳಿ ಕೊಡಲು ಅಕ್ಕ ಬೇಕು, ಗಾಡಿಯಲ್ಲಿ ಸುತ್ತಿಸಲು ಅಣ್ಣ ಬೇಕು, ವಿಧವಿಧದ ತಿಂಡಿ ತಿನಿಸುಗಳನ್ನು ಮಾಡಿ ಮುದ್ದಿನಿಂದ ತಿನ್ನಿಸಲು ಅಮ್ಮ ಬೇಕೇ ಬೇಕು…! ಮನೆಯಲ್ಲಿ ಯಾರೊಬ್ಬರಿಲ್ಲದಿದ್ದರೆ ಅವರು ಮರಳಿ ಬರುವವರೆಗೂ ಬಾಗಿಲಲ್ಲೇ ನಿಂತು ಕಾಯುತ್ತಾನೆ, ಬಂದ ತಕ್ಷಣ ಮೇಲೆ ಹಾರಿ ಕೆನ್ನೆ, ಮುಖ ನಾಕಿ ಬಾಲವಲ್ಲಾಡಿಸುತ್ತಾ ತನ್ನ ಪ್ರೀತಿ ವ್ಯಕ್ತಪಡಿಸುತ್ತಾನೆ. ಅವನನ್ನು ಅಪ್ಪಿಕೊಂಡು ಸಮಾಧಾನ ಮಾಡುವವರೆಗೂ ಬಿಡುವುದೇ ಇಲ್ಲ.
ಇವನು ಮಲಗುವುದೂ ನಮ್ಮೆಲ್ಲರ ಹಾಸಿಗೆ ಮೇಲೇ.. ರಾತ್ರಿ ಅಪ್ಪನ ತೋಳ ಮೇಲೆ ಮಲಗಿ ನಿದ್ದೆ ಮಾಡಿದ್ದವ ಒಂದೆರಡು ಗಂಟೆಯಲ್ಲಿ ಎದ್ದು ಅಕ್ಕನ ಕಾಲ ಬಳಿ ಮಲಗುತ್ತಾನೆ. ಬೆಳಗ್ಗೆ ಎದ್ದಾಗ ಅಣ್ಣನ ರೂಮಿನಿಂದ ಆಕಳಿಸುತ್ತಾ ಬರುವ ದೃಶ್ಯ ನಗು ತರಿಸುತ್ತದೆ. ನಾನು ಗದರಿದಾಗಷ್ಟೇ ತನ್ನ ಪುಟ್ಟ ಬೆಡ್ ಗೆ ಹೋಗಿ ಮಲಗುವ ಅಭ್ಯಾಸ ಅವನದು. ನನ್ನ ಕಂಡರೆ ತುಸು ಭಯವಿದೆ, ಸಧ್ಯ. 😁
ನಮ್ಮೊಂದಿಗೆ ಕಾರಿನಲ್ಲಿ ಚೆನ್ನೈ, ಮಂತ್ರಾಲಯ, ಉಡುಪಿ, ಮೈಸೂರು, ಕೊಯಮತ್ತೂರು.. ಮೊನ್ನೆ ಮೊನ್ನೆ ಸಕಲೇಶಪುರದ ಹತ್ತಿರ ಬೆಳಗೋಡು, ಬೇಲೂರು ಹಳೇಬೀಡು ಹೀಗೆ ದಕ್ಷಿಣ ಭಾರತದ ಸುಮಾರು ಜಾಗಗಳಿಗೆ ಸಹಪ್ರಯಾಣಿಕನಾಗಿದ್ದಾನೆ. ಈಗಂತೂ ಅವನಿಗಾಗಿ ಒಂದು ಟ್ರಾವೆಲ್ ಕಿಟ್ ಸಿದ್ಧವಾಗಿಯೇ ಇಟ್ಟಿರುತ್ತೇನೆ. ಅದರಲ್ಲಿ ಟವಲು, ಬೆಡ್ಶೀಟ್, ಡಾಗ್ ಶ್ಯಾಂಪೂ, ಸೋಪು, ಗಾಯವಾದರೆ ಹಚ್ಚಲು ಆಯಿಂಟ್ಮೆಂಟು, ಟಿಕ್ ಪೌಡರ್, ಅವನ ಪ್ರೀತಿಯ ಆಟದ ಸಾಮಾನುಗಳು, ಬೊಂಬೆಗಳನ್ನು ತುಂಬಿಸಿದ್ದೇನೆ. ಹರಿಯನ್ನು ಬಿಟ್ಟು ಎಲ್ಲಾದರೂ ಹೋಗಲೇಬೇಕಾದ ಜರೂರತ್ತು ಬಂದರೆ ಯಾರಾದರೂ ಒಬ್ಬರು ಅವನಿಗಾಗಿ ಮನೆಯಲ್ಲೇ ಇರುತ್ತೇವೆಯೇ ಹೊರತು ಎಲ್ಲೂ ಬಿಡುವುದಿಲ್ಲ ಎಂದು ನಿರ್ಧರಿಸಿ ಕೊಂಡಿದ್ದೇವೆ.
ದಿನವೂ ಎರಡು ಬಾರಿ ಹಾಲನ್ನ ಸ್ವಲ್ಪ ಮಜ್ಜಿಗೆ ಬೆರೆಸಿ ಕೊಟ್ಟರೆ ಅವ ಸಂತೃಪ್ತ. ದೋಸೆ, ಚಪಾತಿ, ರವೆ ಇಡ್ಲಿ, ಬೆಂದ ಬೇಳೆಯೊಂದಿಗೆ ಕಿವುಚಿದ ಅನ್ನ, ಬೆಂದ ಪಾಲಾಕ್ ಸೊಪ್ಪಿನೊಂದಿಗೆ ಚಪಾತಿ ಚೂರುಗಳು, ಆಗಾಗ ಕ್ಯಾರೆಟ್, ಆಲೂಗೆಡ್ಡೆ, ಬಟಾಣಿ ಒಟ್ಟಿಗೆ ಬೇಯಿಸಿ ಕೊಟ್ಟರೆ ಬಲು ಖುಷಿ! ಸ್ವಲ್ಪ ಬಾಳೆ, ಮಾವಿನ ಹಣ್ಣಿನ ರಸ, ಕರ್ಬೂಜದ ಹಣ್ಣು ಕೂಡಾ ಹರಿಗಿಷ್ಟವೇ..
ಅವನಿಗಾಗಿಯೇ ಗೂಗಲ್ ಮಾಡಿ ಸಸ್ಯಾಹಾರ ವ್ಯಂಜನಗಳನ್ನು ತಯಾರಿಸುತ್ತಾ ಇರುತ್ತೇನೆ.
ವಾತ್ಸಲ್ಯ, ಅಂತಃಕರಣವನ್ನು ಹಂಚಲು ನಮ್ಮ ಮಡಿಲಿಗೆ ಹರಿಯನ್ನು ದೇವರೇ ಕಳಿಸಿದನೇನೋ ಅನ್ನುವ ಭಾವ ದಟ್ಟವಾಗಿದೆ. ನಾಲ್ಕು ಜನರಿದ್ದ ನಮ್ಮ ಸಂಸಾರವೀಗ ಐದನೇಯವನಿಂದಲೇ ಸೊಬಗು ಹೆಚ್ಚಿಸಿಕೊಂಡಿದೆ, ಬದುಕಿನ ಅರ್ಥ ಇನ್ನಷ್ಟು ಹಿರಿದಾಗಿದೆ.
-ಜಲಜಾ ರಾವ್, ಬೆಂಗಳೂರು
ನಿಮ್ಮ ಹೊಸಸದಸ್ಯನ .ಹೊಗಳಿಕೆಯ ಲೇಖನ
ಹೊಸಬನಲ್ಲ, ನಿನ್ನೆಯಷ್ಟೇ ಹರಿಯ ಮೂರನೇ ಹುಟ್ಟು ಹಬ್ಬ ಆಚರಿಸಿದೆವು. ಇದು ನನ್ನ ಅನುಭವದ ಲೇಖನ. ಓದಿಗೆ ಧನ್ಯವಾದ.
ವ್ಹಾವ್ ನಿಮ್ಮ ಹರಿ ಮನೆಯ ಸಂತೋಷ ಆನಂದವನ್ನು ಹೆಚ್ಚಿಸಿ ನಿಮ್ಮ ಮನೆಯ ಮಗುವೇ ಆಗಿದ್ದಾನೆ. ಹರಿ ತುಂಬಾ ಮುದ್ದೂ. ನಾನೂ ಕೂಡ ನಮ್ಮ ಮನೆಯ ಪೆಟ್ ಕಿಲ್ಲರ್ ಅನ್ನು ಹರಿ, ನಾರಾಯಣ,ಕೃಷ್ಣ , ಪಾಂಡುರಂಗ, ಗೋವಿಂದ, ಕಿಟ್ಟಪ್ಪ, ಗಣಪ, ಎಂದೆಲ್ಲ ಕರೆಯುತ್ತೇನೆ. Beautifully penned. ಪ್ರೀತಿ ತುಂಬಿದ ಲೇಖನ❤️
ಧನ್ಯವಾದ ಉಮಾ
ತುಂಬಾ ಚೆನ್ನಾಗಿದೆ #ಹರಿಕಥೆ…ಅವನು ಬರುವ ಮೊದಲಿನ, ಬಂದ ಮೇಲಿನ ಬದುಕನ್ನು ಉತ್ತಮ
ವಾಗಿ ಕಟ್ಟಿಕೊಟ್ಟಿದ್ದೀರಿ…
ಧನ್ಯವಾದ.
ವಾವ್ ಮೇಡಂ. ನಿಮ್ಮ ಪ್ರಾಣಿ ಪ್ರೀತಿ fb ಮೂಲಕ ಚಿರಪರಿಚಿತ ಈಗ ಆ ಪ್ರೀತಿಗೆ ಹೀಗೆ ಅಕ್ಷರ ರೂಪ ನೀಡಿ ನಮ್ಮೆಲ್ಲರನ್ನೂ ತಲುಪುವಂತೆ ಮಾಡಿದ್ದು ನಿಮ್ಮ ಒಳ್ಳೆಯ ಪ್ರಯತ್ನ. ಮುಂದೆಯೂ ಹೀಗೆಯೇ ಹರಿಯ ಜೊತೆಗಿನ ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತ ಇರಿ.
ಧನ್ಯವಾದ ನಯನಾ
ನಿಮ್ಮ ಹರಿ ಯಂತೆ ನಮ್ಮ ಮನೆ ಮಗಳು ಎರಡೂವರೆ ವರ್ಷದ ‘ಸಿರಿ’
ಈಗ ಐದು ಪುಠಾಣಿ ಮರಿಗಳ ಅಮ್ಮನಾಗಿದಾಳೆ.
ಓಹೋ… ಹೌದಾ..ಸಿರಿಗೂ, ಅವಳ ಮಕ್ಳಿಗೂ ಒಳ್ಳೆಯದಾಗಲಿ. ಅವರು ಬಗ್ಗೆ ಬರೆದು ಫೋಟೋ ಹಾಕಿ. ನೋಡೋಣ.
ತುಂಬಾ ಚೆನ್ನಾಗಿದೆ ಹರಿಯ ಕಥೆ.
“ಹರಿ”ಚಿತ್ತ ಸತ್ಯ !
_/\_
ನಿಮ್ಮ ಜೀವ ಪ್ರೀತಿಗೆ
ಚೆಂದದ ಬರಹ
ಸಾಕುಪ್ರಾಣಿಗಳ ಮೇಲೆ ಬೆಳೆದು ಬರುವ ಪ್ರೀತಿಯ ರೀತಿ ಸಾಕಿದವರಿಗೇ ಗೊತ್ತು. ನಮ್ಮಲ್ಲಿಯೂ ಹಲವಾರು ವರ್ಷ ನಾಯಿಗಳನ್ನು ಮನೆಯವರಂತೆಯೇ ಸಾಕಿದ್ದೆವು. ವಿದೇಶ ಪ್ರಯಾಣದ ಸಮಯದಲ್ಲಿ ಸಾಕಲು ಬೇರೆಯವರಿಗೆ ಕೊಟ್ಟ ಮೇಲೆ ಅವುಗಳನ್ನು ಸಾಕುವುದನ್ನು ಬಿಟ್ಟಿರುವೆವು. ಆ ದಿನಗಳ ಸವಿನೆನಪುಗಳು ಮರುಕಳಿಸುವಂತೆ ಮಾಡಿತು ತಮ್ಮ ಅತ್ಮೀಯ ಹರಿ ಲೇಖನ!
Jalaja madam, I appreciate your love for Hari. May your tribe increase.