ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 15 :ಬೇಟ್ ದ್ವಾರಕಾ ..ನಾಗೇಶ್ವರ ಜ್ಯೋತಿರ್ಲಿಂಗ
ಬೇಟ್ (Beyt) ದ್ವಾರಕಾ
ದ್ವಾರಕೆಯಿಂದ ಸುಮಾರು 30 ಕಿಮೀ ದೂರಲ್ಲಿರುವ ದ್ವೀಪ ‘ಬೇಟ್ ದ್ವಾರಕಾ’. ಇಲ್ಲಿ ಶ್ರೀಕೃಷ್ಣನು ತನ್ನ ಪರಿವಾರದೊಂದಿಗೆ ವಾಸವಾಗಿದ್ದನಂತೆ. ಚರಿತ್ರೆಯ ಪ್ರಕಾರ ಪ್ರಾಚೀನ ‘ಹರಪ್ಪಾ’ ನಾಗರಿಕತೆಯ ಕುರುಹುಗಳು ಈ ಜಾಗದಲ್ಲಿ ಲಭ್ಯವಾಗಿವೆ. ಇಲ್ಲಿರುವ ದ್ವಾರಕಾಧೀಶನ ಮೂರ್ತಿಯು ಐದುಸಾವಿರ ವರ್ಷಕ್ಕೂ ಹಿಂದಿನದು. ‘ಬೇಟ್ ದ್ವಾರಕಾ’ ದ್ವೀಪವನ್ನು ತಲಪಲು ‘ಓಖಾ’ ಎಂಬಲ್ಲಿರುವ ಜೆಟ್ಟಿಯಿಂದ ಫೆರ್ರಿದೋಣಿಯನ್ನೇರಿ ಸಮುದ್ರದಲ್ಲಿ ಸುಮಾರು 15 ನಿಮಿಷ ಪ್ರಯಾಣಿಸಬೇಕು. ಓಖಾ ತೀರದಿಂದ 5 ಕಿ.ಮೀ ದೂರದಲ್ಲಿ ಬೇಟ್ ದ್ವಾರಕೆಯಿದೆ. ಬೇಟ್ ದ್ವಾರಕೆಯ ಜೆಟ್ಟಿಯಲ್ಲಿ ಫೆರ್ರಿಯಿಂದಿಳಿದ ಮೇಲೆ, ದೊಡ್ಡದಾದ ಸೇತುವೆಯೊಂದನ್ನು ದಾಟಿ, ಅಂದಾಜು ಅರ್ಧ ಕಿ.ಮೀ ನಡೆದಾಗ ಮಂದಿರ ಸಿಗುತ್ತದೆ.
ಮಂದಿರದ ಆಸುಪಾಸು, ಸುತ್ತಲೂ ಆವರಿಸಿದ ಸಮುದ್ರ, ಚೆಂದದ ವಾಸ್ತುಶಿಲ್ಪ ಹಾಗೂ ಉತ್ತಮ ನಿರ್ವಹಣೆಯಿಂದಾಗಿ ಬೇಟ್ ದ್ವಾರಕಾ ಮಂದಿರವು ಸೊಗಸಾಗಿ ಕಾಣಿಸುತ್ತದೆ. ದ್ವಾರಕಾಧೀಶನ ಸುಂದರವಾದ ದೇವಸ್ಥಾನದ ಜೊತೆಗೆ ಅವನ ಪರಿವಾರದವರಾದ ಬಲರಾಮ, ಹನುಮಾನ್ , ದೇವಕಿ, ಪ್ರದ್ಯುಮ್ನ, ಅನುರುದ್ದ ಮೊದಲಾದವರ ಮಂದಿರಗಳೂ ಇವೆ. ಪರಮ ಭಕ್ತೆಯಾದ ಚಿತ್ತೋರ್ ಗಡ್ ನ ರಾಣಿ ಮೀರಾಬಾಯಿಯು ತನ್ನ ಕೊನೆಯ ದಿನಗಳಲ್ಲಿ ಶ್ರೀಕೃಷ್ಣನನ್ನು ಸ್ತುತಿಸುತ್ತಾ ಇಲ್ಲಿ ವಾಸವಾಗಿದ್ದಳಂತೆ. ಬೇಟ್ ದ್ವಾರಕದಲ್ಲಿ ಮೀರಾಬಾಯಿಯ ಮಂದಿರವೂ ಇದೆ. ಬೇಟ್ ದ್ವಾರಕೆಯಲ್ಲಿ ಹಿಂದೆ ಶಂಖಾಸುರನಿದ್ದನಂತೆ ಹಾಗೂ ಶ್ರೀಕೃಷ್ಣನು ಅವನನ್ನು ಸಂಹರಿಸಿದನಂತೆ. ಹಾಗಾಗಿ ಇಲ್ಲಿಗೆ ಶಂಖೋಧರ ಎಂಬ ಹೆಸರು ಕೂಡ ಇದೆ. ಅಲ್ಲಿರುವ ಹಲವಾರು ಅಂಗಡಿಗಳಲ್ಲಿ ಶಂಖ, ಚಿಪ್ಪು, ವಿವಿಧ ಮಣಿ ಹಾಗೂ ಹರಳುಗಳಿಂದ ತಯಾರಿಸಿದ ಆಭರಣ, ಕರಕುಶಲ ವಸ್ತುಗಳನ್ನು ಮಾರುತ್ತಾರೆ.
ನಾಗೇಶ್ವರ ಜ್ಯೋತಿರ್ಲಿಂಗ
ಬೈಟ್ ದ್ಬಾರಕಾದಿಂದ ಪ್ರಯಾಣವು ಮುಂದುವರಿದು, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ‘ನಾಗೇಶ್ವರ’ ಕ್ಷೇತ್ರವನ್ನು ತಲಪಿದೆವು. ಸುಂದರವಾದ ಪರಿಸರದಲ್ಲಿ ಕಟ್ಟಲಾದ ಭವ್ಯ ಮಂದಿರವಿದು. ಆವರಣದಲ್ಲಿ ಆಧುನಿಕ ಶೈಲಿಯ ಬೃಹದಾಕಾರದ ಶಿವನ ಮೂರ್ತಿಯಿದೆ. ದೇವಾಲಯದ ಒಳಗಡೆ ಮಾರ್ಬಲ್ ಶಿಲೆಯ ವಿವಿಧ ರೀತಿಯ ಕೆತ್ತನೆಗಲಿವೆ. ಗರ್ಭಗುಡಿಯಲ್ಲಿ ನಾಗೇಶ್ವರ ಜ್ಯೋತಿರ್ಲಿಂಗವೂ, ಪಕ್ಕದಲ್ಲಿ ‘ನಾಗೇಶ್ವರಿ’ ಎಂಬ ಹೆಸರಿನ ಪಾರ್ವತಿಯ ಮಂದಿರವೂ ಇದೆ. ನಾಗೇಶ್ವರ ಜ್ಯೋತಿರ್ಲಿಂಗದ ದರ್ಶನದಿಂದ ಎಲ್ಲಾ ಅಭೀಷ್ಟಗಳೂ ಪೂರ್ಣಗೊಳ್ಳುತ್ತವೆ ಎಂಬುದು ಭಕ್ತರ ನಂಬಿಕೆ.
ಸ್ಥಳ ಪುರಾಣದ ಪ್ರಕಾರ, ಹಿಂದೊಮ್ಮೆ ಬ್ರಹ್ಮ ಮತ್ತು ವಿಷ್ಣು ಮಧ್ಯೆ ಯಾರು ಶ್ರೇಷ್ಠರೆಂಬ ಪೈಪೋಟಿ ಆದಾಗ, ಶಿವನ ಅಭಿಪ್ರಾಯ ಕೇಳುತ್ತಾರೆ. ಶಿವನು ಮೂರು ಲೋಕಗಳನ್ನು ಬೇಧಿಸುವ ಜ್ಯೋತಿರ್ಲಿಲಿಂಗವನ್ನು ಸೃಷ್ಟಿಸಿ ವಿಷ್ಣು ಮತ್ತು ಬ್ರಹ್ಮರಿಗೆ ಅದರ ಮೇಲಿನ ಮತ್ತು ಕೆಳಗಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಜ್ಯೋತಿರ್ಲಿಂಗದ ಆಳವನ್ನು ಅರಿಯಲು ಕೆಳಮುಖವಾಗಿ ತೆರಳಿದರೆ, ಬ್ರಹ್ಮನು ತಾನು ಮೇಲ್ಮುಖವಾಗಿ ಆಕಾಶದತ್ತ ಹೊರಟನು. ವಿಷ್ಣುವ ತನಗೆ ಆದಿಯನ್ನು ಕಂಡುಹಿಡಿಯಲಾಗಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡನು .ಆದರೆ ಬ್ರಹ್ಮನು ತಾನು ಜ್ಯೋತಿರ್ಲಿಂಗದ ಮೇಲ್ತುದಿಯನ್ನು ನೋಡಿದೆನೆಂದು ಸುಳ್ಳು ಹೇಳುತ್ತಾನೆ. ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದ ಶಿವನು ಅವನಿಗೆ ಪೂಜೆಯಿಲ್ಲದಿರಲಿ ಎಂದು ಶಪಿಸಿದನು. ಈ ಕಥೆ ನಡೆದ ಸ್ಥಳವು ಈಗಿನ ‘ನಾಗೇಶ್ವರ’ ಎಂಬುದು ಪ್ರಚಲಿತವಿರುವ ದಂತಕಥೆ.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=31644
-ಹೇಮಮಾಲಾ.ಬಿ
ಮಾಹಿತಿಪೂರ್ಣ ಲೇಖನ ಮೇಡಂ
ಸೊಗಸಾಗಿ ಮುಂದುವರಿಯುತ್ತಿದೆ ಪ್ರವಾಸ ಕಥನ
ಪ್ರವಾಸ ಕಥನ ಉತ್ತಮ ಮಾಹಿತಿಯನ್ನೊಳಗೊಂಡು ಸಾಗುತ್ತಿದೆ. ಆಸ್ಥಳಗಳನ್ನು ನೋಡಿದ್ದರೂ.ಈ ಲೇಖನ ಓದುತ್ತಿದ್ದಂತೆ ಮತ್ತೊಮ್ಮೆ ನೋಡಬೇಕು ಎನಿಸುವ ರೀತಿಯಲ್ಲಿ.ಸಾಗುತ್ತಿದೆ.ಅಭಿನಂದನೆಗಳು ಗೆಳತಿ ಹೇಮಾ.
ಒಳ್ಳೆಯ ಕುತೂಹಲ ಭರಿತ ಪ್ರವಾಸಕಥನ ಹೇಮಮಾಲಾ. ಬ್ರಹ್ಮನಿಗೆ ಪೂಜೆಯಿಲ್ಲದ ಕಾರಣ ಈ ಕಥೆಯಿಂದ ತಿಳಿಯಿತು.
ಧನ್ಯವಾದ ಗಳು.
ಉತ್ತಮ ಮಾಹಿತಿಯಿಂದ ಮೂಡಿಬರುತ್ತಿದೆ ಪ್ರವಾಸ ಕಥನ.
ಬೇಟ್ ದ್ವಾರಕಾ ಮತ್ತು ಜ್ಯೋತಿರ್ಲಿಂಗಗಳ ಬಗೆಗಿನ ಸೊಗಸಾದ ಮಾಹಿತಿಪೂರ್ಣ ಲೇಖನವು ಚಂದದ ಪೂರಕ ಚಿತ್ರಗಳಿಂದ ಮತ್ತಷ್ಟು ಅಂದವಾಗಿದೆ.. ಧನ್ಯವಾದಗಳು.
Very good information
ಉತ್ತಮ ಮಾಹಿತಿ ನೀಡುತ್ತಾ ಹೋಗುತ್ತಿದೆ.
ಧನ್ಯವಾದಗಳು.