ಟೀಚರ್ ನಮ್ ಕ್ಲಾಸ್ ಗೆ ಯಾವಾಗ ಬರ್ತೀರಾ…

Share Button

ನಾನು ಒಂದು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿ ಜಿ ಟಿ ಶಿಕ್ಷಕಿಯಾಗಿ ಕೆಲಸ ಮಾಡುವುದು.ಎಲ್ಲೆಲ್ಲಿ ಪ್ರೌಢ ಶಾಲೆಗಳು ಹಿರಿಯ ಪ್ರಾಥಮಿಕ ಶಾಲೆಗಳಿಂದ ದೂರವಿದ್ದಾವೋ,ಅಂತಹ ಶಾಲೆಗಳಲ್ಲಿ ಹದಿನಾಲ್ಕು ವರ್ಷದವರೆಗೆ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಸಲುವಾಗಿ ಈಗ್ಗೆ ಸುಮಾರು ಹದಿನೇಳು ವರ್ಷಗಳ ಹಿಂದೆ ಸರ್ಕಾರ ಎಂಟನೆಯ ತರಗತಿ ಕೂಡ ಸೇರಿಸಿತು. ಅಲ್ಲಿಯ ಮಕ್ಕಳಿಗೆ ಬೋಧಿಸುವ ಸಲುವಾಗಿ ಓರ್ವ ಪ್ರೌಢಶಾಲಾ ಪಿ ಸಿ ಎಂ ಅಂದರೆ ಗಣಿತ ಶಿಕ್ಷಕರನ್ನು ನೇಮಕಾತಿ ಮಾಡಲಾಯಿತು.ಗಣಿತದವರೆಂದರೆ ವಿಜ್ಞಾನ ಮತ್ತು ಇಂಗ್ಲಿಷ್ ಕೂಡ ಕಲಿಸಬಹುದು ಎನ್ನುವ ಆಲೋಚನೆ ರ್ಕಾರದವರದ್ದು. ಅದರಂತೆ ಆಯ್ಕೆಯಾಗಿ ನಾನು ಕರ್ತವ್ಯ ನಿರ್ವಹಿಸುತ್ತಿರುವುದು.

ಗಣಿತ ಮತ್ತು ವಿಜ್ಞಾನ ನನ್ನ ಬೋಧನಾ ವಿಧಾನದ ವಿಷಯಗಳಾದರೂ ಇಂಗ್ಲಿಷ್ ಕಲಿಸಬೇಕಾಗಿ ಬಂತು.ಅದರಂತೆ ಸುಮಾರು ವರ್ಷ 6ರಿಂದ 8 ರ ವರೆಗೆ ಇಂಗ್ಲಿಷ್ ಕೂಡ ಕಲಿಸಿದೆ.ಪ್ರಾರಂಭದಲ್ಲಿ ಕಷ್ಟವೆನಿಸಿದರು ಇಲಾಖೆಯ ತರಬೇತಿಗಳ ಸಹಾಯದಿಂದ ಬರು ಬರುತ್ತಾ ರೂಢಿಯಾಯಿತು.ತಮಾಷೆಯೆಂದರೆ ಗಣಿತ ವಿಜ್ಞಾನಗಳ ಬೋಧನೆಗಿಂತ ಇಂಗ್ಲಿಷ್ ತರಗತಿಗಳೇ ನನಗೆ ಹೆಚ್ಚು ಖುಷಿ ಕೊಟ್ಟದ್ದು.

ಹೀಗಿರುವಾಗ ಶಾಲೆಯಲ್ಲಿ ಒಮ್ಮೆ ಶಿಕ್ಷಕರ ವರ್ಗಾವಣೆ ,ನಿವೃತ್ತಿ ಇತ್ಯಾದಿ ಕಾರಣಗಳಿಂದ ಶಿಕ್ಷಕರ ಕೊರತೆಯಾಗಿ, ಕೆಲವು ವಿಷಯಗಳ ಬೋಧನೆಗೆ ಶಿಕ್ಷಕರು ಸಾಲದೆ, ಹೆಚ್ಚಿನ ಕಾರ್ಯಭಾರ ಹಂಚಿ ಕೊಳ್ಳ ಬೇಕಾಯಿತು.ಹಾಗೆ ಹಂಚಿಕೊಂಡರೂ  ಕೂಡ ನಾಲ್ಕನೇ ತರಗತಿ ಇಂಗ್ಲಿಷ್ ಅನಾಥವಾಗಿ ಉಳಿದು ಬಿಟ್ಟಿತು.ಕೊನೆಗೆ ನಮ್ಮ ಹೆಚ್ ಎಂ” ಮೇಡಂ, ಇದೊಂದು ಕ್ಲಾಸ್  ತೊಗೊಂಡು ಬಿಡಿ , ನಿಮ್ಮನ್ನು ನಾನು ಯಾವ ದಾಖಲೆಗಳನ್ನು ಕೂಡ ಕೇಳುವುದಿಲ್ಲ,ಸ್ವಲ್ಪ ಇಂಗ್ಲಿಷ್ ಮಾತನಾಡಲು, ಓದಲು ಬರೆಯಲು ಕಲಿಸಿಬಿಡಿ ಸಾಕು”ಎಂದು ಕೇಳಿಕೊಂಡರು. “ಇನ್ನೇನು ಮಾಡೋದು, ಈ ಚಿಲ್ಟುಗಳಿಗೆ.ಎಬಿಸಿಡಿ ಕಲಿಸಿದರೆ ಸಾಕಲ್ವಾ” ಅಂದುಕೊಂಡು ಒಪ್ಪಿಕೊಂಡು ಬಿಟ್ಟೆ. ಆದರೆ ನಾಲ್ಕನೇ ತರಗತಿ ಇಂಗ್ಲಿಷ್ ಬುಕ್, ಮತ್ತು ಕಲಿಕಾ ಸಾಮರ್ಥ್ಯಗಳ ಪಟ್ಟಿ ಕೈಗೆ ಬಂದಾಗಲೇ ಅನ್ನಿಸಿದ್ದು”ಎಸೆಸೆಲ್ಸಿ ಗೆ ಇಂಗ್ಲಿಷ್ ಕಳಿಸಿ ಬಿಡಬಹುದು ಆದರೆ ಈ ಚಿಲ್ಟುಗಳಿಗಲ್ಲ” ಅಂತ.

ಸರಿ ಸ್ವಲ್ಪ ದಿನ,ಕ್ಲಾಸ್ಗಳು ಜಾಸ್ತಿ,ಟ್ರೈನಿಂಗ್,ಕೆಲಸದ ಒತ್ತಡ ಜಾಸ್ತಿ ಅಂತೆಲ್ಲ ನಾಲ್ಕನೇ ಕ್ಲಾಸ್ ಗೆ ಹೋಗದೆ ಕಳ್ಳಾಟ ಆಡಿದೆ. ಆದರೆ ವೇಳಾಪಟ್ಟಿಯಲ್ಲಿ ನನ್ನ ಹೆಸರು ಇಂಗ್ಲಿಷ್ ವಿಷಯದಲ್ಲಿ ನೋಡಿದ್ದ ಮಕ್ಕಳು ಒಂದೇ ಸಮನೆ ಕಾಡಲಾರಂಭಿಸಿದರು. ಬೆಳಿಗ್ಗೆ ಗೇಟ್ ತೆಗೆದು ಇನ್ನೂ ಶಾಲೆಯೊಳಗೆ ಅಡಿ ಇಡೋದಿಕ್ಕೆ ಗತಿಯಿಲ್ಲ “ಟೀಚರ್ ನಮ್ಮ ಕ್ಲಾಸ್ ಗೆ ಯಾವಾಗ ಬರ್ತೀರಾ”ಅನ್ನೋ ರಾಗ ಕೋರಸ್ ನಲ್ಲಿ ಕೇಳ ತೊಡಗಿತು. ನಾನು ಆದರೂ ಕದ್ದು ತಿರುಗಿದೆ.ಆದರೆ ಅವರು ಬಿಟ್ಟಾರೆಯೇ!ಸಿಕ್ಕ ಸಿಕ್ಕ ಟೀಚರ್ನ್ನೆಲ್ಲ, ಅದರಲ್ಲೂ ನಮ್ಮ ಹೆಚ್ ಎಂ ರವರನ್ನ “ಇಂಗ್ಲೀಷ್ ಟೀಚರ್ ಯಾವಾಗ ನಮ್ಮ ಕ್ಲಾಸ್ ಗೆ ಬರ್ತಾರೆ” ಅಂತ ಕಾಡಲು ಶುರು ಮಾಡಿಬಿಟ್ಟರು.ಕೊನೆಗೆ ಒಂದು ದಿನ ಹೆಚ್.ಎಂ ಮೇಡಂ” ಮೇಡಂ ದಿನಕ್ಕೆ ಒಂದು ಹತ್ತು ನಿಮಿಷವಾದರೂ ಹೋಗಿ, ಮಕ್ಕಳ ಕಾಟ ತಡೆಯಲಾಗುತ್ತಿಲ್ಲ”ಎಂದಾಗ ನಾಚಿಕೆಯಾಯಿತು.

ಸರಿ ಆದಿನ ಮನೆಗೆ ಹೋಗಿ ಆ ಇಂಗ್ಲಿಷ್ ಪಠ್ಯ ಪುಸ್ತಕ ತೆಗೆದು ನೋಡಿ, ಸಾಮರ್ಥ್ಯಗಳ ಪಟ್ಟಿಯಂತೆ ಕಲಿಸಬೇಕಾದ ಅಂಶಗಳ ಗುರುತಿಸಿಕೊಂಡು ತಯಾರಾದೆ.ಮರುದಿನ ಸಕಲ ಸಿದ್ಧತೆಯೊಂದಿಗೆ ನಾಲ್ಕನೇ ತರಗತಿಗೆ ಕಾಲಿಟ್ಟಿದ್ದಾಯಿತು. ಇದುವರೆಗೆ ತರಗತಿಗಳಲ್ಲಿ ದೊಡ್ಡ ಮಕ್ಕಳನ್ನು ನೋಡಿದ್ದ ಕಣ್ಣುಗಳಿಗೆ, ಈ ಮೊಳಕಾಲುದ್ದಕ್ಕೆ ಕುಳಿತಿದ್ದ ಮಕ್ಕಳ ನೋಡಲು ಹೊಂದಿಕೊಳ್ಳಲು ಕಷ್ಟವೇ ಆಯಿತು.

PC: Internet

 

“ಗುಡ್ ಮಾರ್ನಿಂಗ್ ಟೀಚರ್” ಅನ್ನೋ ರಾಗ ಸ್ವಾಗತವನ್ನು ಕೋರಿತು.ಮಕ್ಕಳ ಉತ್ಸಾಹ, ನೋಡಿ ಖುಷಿಯಾಗಿ, ಅವರಿಂದ ರೈಮ್ ಹೇಳಿಸಿ ಪಾಠ ಪ್ರಾರಂಭಿಸಲು ಶುರುವಾದೆ.ಅವತ್ತಿನ ಪಾಠದ ಪ್ರಕಾರ ಮರದ ಚಿತ್ರವೊಂದನ್ನು ತೋರಿಸುತ್ತಾ”ಚಿಲ್ಡ್ರೆನ್ ವಾಟ್ ಇಸ್ ದಿಸ್” ಎಂದಾಗ “ಟ್ರೀ” ಅನ್ನೋ ಕೋರಸ್ ಉತ್ತರ ಬಂತು.ಜೊತೆಗೆ “ಟೀಚರ್ ಈ ಮರ ನಮ್ಮನೇಲಿ ಇದೆ, ತುಂಬಾ ಮಾವಿನ ಕಾಯಿಬಿಡುತ್ತೆ”ಅಂತ ಒಂದು ಕೀಚಲು ಕಂಠ ಹೇಳಿತು.”ಹೌದೆನಪ್ಪ”ಅಂದು ಮುಂದುವರೆಯುವ ಅನ್ನುವಷ್ಟರಲ್ಲಿ ಮತ್ತೊಂದು ಚಿಲ್ಟೂ”ಮೇಡಂ, ಅವತ್ತು ನಮ್ಮನೆ ಹತ್ರ ಮರದಲ್ಲಿ ಒಂದು ಗಿಣಿ ಕೂತಿತ್ತು.ಅದನ್ನ  ನಮ್ಮನೆ ಪಕ್ಕದ ಮನೆ ಅಣ್ಣ ಹಿಡಿದ”ಅಂತ ಕಥೆ ಶುರುವಾಯಿತು.ಸರಿ ಎಲ್ಲಾ ಕಣ್ಣುಗಳು ಅವನ ಕಡೆ ತಿರುಗಿದವು. ಇನ್ನು ಆ ಗಿಣಿ, ಅದರ ಬಣ್ಣ,ಅದು ತಿಂದ ಮೆಣಸಿನಕಾಯಿ,ಅದನು ಹಿಡಿಯಲು ಬಂದ ಬೆಕ್ಕು ಎಲ್ಲಾ ವರ್ಣನೆ ಆಗುವವರೆಗೆ ನಾನು ಪಾಠ ಮಾಡಲು ಸಾಧ್ಯವೇ? ಅಂತೂ ಆ ಗಿಣಿ ರಾಮನನ್ನು ಸುಮ್ಮನಿರಿಸಿ, ಪಾಠ ಮುಂದುವರೆಸಿದೆ.

*ಮರದ* ಭಾಗಗಳನ್ನು ಪರಿಚಯಿಸುತ್ತಾ ,ಮರದ ಕಾಂಡದ ಹೆಸರು ಇಂಗ್ಲಿಷ್ ನಲ್ಲಿ ಪರಿಚಯಿಸುವಾಗ ಒಂದು ಪಿಲ್ಟು ಹೇಳಿತು “ಅವತ್ತು ,ನಾನು ನಮ್ಮಜ್ಜಿ ಮನೆಗೆ ಹೋಗಿದ್ದಾಗ,ಮರದ ಬುಡದಲ್ಲಿ ಒಂದು ಹಾವಿತ್ತು” ಅಂದದ್ದೆ ತಡ ಇಡೀ ತರಗತಿ ಅವಳ ಕಡೆ ಮುಖ ತಿರುಗಿಸಿ ಕುಳಿತುಬಿಟ್ಟಿತು.  ತೊಗೊ ಮತ್ತೊಂದು ಸುತ್ತು, ಎಲ್ಲರು ನೋಡಿರುವ ಹಾವುಗಳು,ಕೇಳಿರುವ ಹಾವಿನಕಥೆಗಳು, ಟಿ ವೀ ಯಲ್ಲಿ ಬರುವ ನಾಗಿಣಿ ಸೀರಿಯಲ್ ನ ಕಥೆ ಎಲ್ಲಾ ಪುಂಖಾನಪುಂಖವಾಗಿ ಹರಿದು ಬರತೊಡಗಿದವು.ಅಂತೂ ಆ ಕಥೆಗಳನ್ನೆಲ್ಲ ಕಷ್ಟಪಟ್ಟು ಕೇಳಿಕೊಂಡು ,ನಗು ತಡೆದುಕೊಂಡು ಇನ್ನೂ ಪಾಠ ಮುಂದುವರೆಸುವ ಅನ್ನುವಷ್ಟರಲ್ಲಿ ಆ ಪೀರಿಯಡ್ ಮುಗಿದ ಘಂಟೆ ಹೊಡೆಯಿತು. ಸ್ಟಾಫ್ ರೂಮ್ಗೆ ಹೋಗಿ ಸಹೋದ್ಯೋಗಿಗಳೊಂದಿಗೆ ನನ್ನ ಈ ಮೊದಲ ಕ್ಲಾಸ್ ನ ಅನುಭವ ಹೇಳಿಕೊಂಡು ನಕ್ಕೆ. ಉಳಿದವರು ನಕ್ಕರೂ,”ಮೇಡಂ ಜೋಪಾನ, ಕಥೆ ಹೇಳಿಕೊಂಡು, ಕೇಳಿಕೊಂಡು ಆಮೇಲೆ, ಟೀಚರ್ ಸ್ಟೂಡೆಂಟ್ಸ್ ಇಬ್ಬರೂ ಸೇರಿ ಇಂಗ್ಲಿಷ್ ಕಥೆ ಮುಗಿಸಿ ಬಿಡಬೇಡಿ” ಎಂದು ಎಚ್ಚರಿಸಿದರು.

ಸರಿ ಮಾರನೇ ದಿನ ಕ್ಲಾಸ್ ಗೆ ಹೋದ ಶುರುವಿನಲ್ಲಿಯೆ, ಮಕ್ಕಳಿಗೆ “ನೋಡಿ ನಿಮ್ಮ ಕಥೆ ಹೇಳೋದು ಎಲ್ಲಾ ಕ್ಲಾಸ್ ನ ಕೊನೆಯಲ್ಲಿ, ಪಾಠ ಆಗುವವರೆಗೆ ಎಲ್ಲರೂ ಇಂಗ್ಲಿಷ್ ನಲ್ಲೇ ಮಾತನಾಡಬೇಕು,ಕ್ಲಾಸ್ ಮುಗಿದ ಮೇಲೆ ಬೇಕಾದರೆ ನಾನು ಮನೆಕೆಲಸ, ಕಾಪಿ ರೈಟಿಂಗ್ ತಿದ್ದುವಾಗ ಮಾತ್ರ ಬೇರೆ ವಿಷಯ ಮಾತನಾಡಿ” ಎಂದು ಹೇಳಿದಾಗ, ಹೂಂ ಗುಟ್ಟಿಕೊಂಡು, ಹೇಳಿದ ಹಾಗೆಯೇ ಮಾಡಿದರು.

ಸರಿ ಕ್ಲಾಸ್ ಮುಗಿಸಿ, ಟೇಬಲ್ ನಲ್ಲಿ ಕುಳಿತು ಅವರ ಬರವಣಿಗೆ ಎಲ್ಲಾ ತಿದ್ದಲು ಶುರು ಮಾಡಿದಾಗ ಎಲ್ಲರೂ ನನ್ನ ಟೇಬಲ್ ಸುತ್ತವೆ ಸುತ್ತಿಕೊಂಡು ನಿಂತು ಮಾತನಾಡಲು ಶುರು ಹಚ್ಚಿಕೊಂಡರು. ಒಬ್ಬೊಬ್ಬರದು ಒಂದೊಂದು ಕಥೆ. ಕೆಲವರಿಗೆ ನನ್ನ ಮನೇ ಎಲ್ಲಿ ಎನ್ನುವ ಕುತೂಹಲ,ಇನ್ನೂ ಕೆಲವರಿಗೆ ತಮ್ಮ ಮನೆ ಕೆಲಸ  ಪುಸ್ತಕದಲ್ಲಿ ಗುಡ್ ಹಾಕಿಸಿಕೊಳ್ಳುವ ಆಸೆ. ಒಂದಿಬ್ಬರು ಕಲಿಯಲು ಹುಶಾರಿರುವವರು ಬೇಗ ಬೇಗ ತಮ್ಮ ಪುಸ್ತಕ ತೋರಿಸಿಯಾದ ತಕ್ಷಣವೇ,”ಟೀಚರ್,ಅವನು ಬರೆದಿಲ್ಲ,ಇವಳು ಬರೆದಿಲ್ಲ,ನೋಡಿ” ಅನ್ನೋ ಚಾಡಿ ಬೇರೆ. ಸರಿ ಎಲ್ಲರನ್ನೂ ಸಮಾಧಾನಿಸಿ ಕ್ಲಾಸ್ ಮುಗಿಸುವಷ್ಟರಲ್ಲಿ ಸುಸ್ತೋ ಸುಸ್ತು.

ಪ್ರತಿ ದಿನವೂ ಈ ಕ್ಲಾಸಿನ ಕೊನೆಯಲ್ಲಿ ಈ ಮಕ್ಕಳ ದುಂಡು ಮೇಜಿನ ಪರಿಷತ್ತು ಜರುಗುವುದು ರೂಡಿಯಾಗಿ ಹೋಯಿತು. ಅವರ ಮನೆಯಲ್ಲಿ ಮಾಡಿದ್ದ ತಿಂಡಿ ಅಡುಗೆಗಳು,ಬಂದಿದ್ದ ನೆಂಟರು,ಇವರು ಹೋಗಿದ್ದ ಮದುವೆ,ಹಬ್ಬ ಹರಿದಿನಗಳು,ಸಾಕಿರುವ ಬೆಕ್ಕು, ನಾಯಿ, ಹಸು,ಕರು, ಆಡು, ಕುರಿಗಳ ಕಥೆ, ಎಲ್ಲವನ್ನೂ ನನ್ನ ಕಿವಿಗೆ ತುಂಬಬೇಕು. ಕಥೆ ಹೇಳುವುದರಲ್ಲಿ ಮಕ್ಕಳಂತಹ ಪ್ರತಿಭಾಶಾಲಿಗಳು ಬೇರಿಲ್ಲ ಬಿಡಿ.ಮಕ್ಕಳ ಮುಗ್ಧ ಲೋಕದ ಅನಾವರಣ ಆದಂತೆಲ್ಲ ನಾನು ಅವರಿಗೆ ಕಲಿಸಿದೇನೋ,ಇಲ್ಲ ಅವರಿಂದ ನಿಷ್ಕಳಂಕ ಪ್ರೀತಿ ಕಲಿತೆನೊ ತಿಳಿಯದು.

ಮಂಗಾಟಗಳಿಗೂ ಏನೂ ಕೊರತೆಯಿರಲಿಲ್ಲ.”ಮನೆಕೆಲಸ ಹೊರ ತೆಗೆಯಿರಿ” ಅಂದ ತಕ್ಷಣ ನಾಲ್ಕೈದು ಜನರಿಗೆ ಬಾತ್ ರೂಂ ಗೆ ಹೋಗಲು ಅವಸರವಾಗುತ್ತಿತ್ತು. ಇನ್ನು “ಟೀಚರ್ ರ್ ರ್ ರ್ *”* ಅನ್ನುವ ರಾಗ ಕೇಳಿದ *ಕ್ಷಣವೇ** “*ಓಹ್ ಒಂದು ಚಾಡಿ ಇದೆ” ಅಂತಾ ಹೊಳೆದು ಹೋಗುತ್ತಿತ್ತು. ಕೆಲವೊಮ್ಮೆ ತಮ್ಮ ಗೆಳೆಯರನ್ನು ರಕ್ಷಿಸುವಲ್ಲಿ ಕೂಡ ಮುಂದು. ಒಮ್ಮೆ ಒಬ್ಬ ಹುಡುಗ ಕಾಪಿ ರೈಟಿಂಗ್ ಬರೆದಿಲ್ಲದ್ದಕ್ಕೆ ಕಾರಣ ಕೇಳಿದರೆ, ಪಕ್ಕದಲ್ಲೇ ಇದ್ದ ಆತನ ಗೆಳೆಯನೆ “ಪಾಪ ಮೇಡಂ, ಇವತ್ತು ಅವನ ಬರ್ಥ್ ಡೇ, ಹೋಗ್ಲಿ ಬಿಡಿ” ಅನ್ನುವ ಸಮಜಾಯಿಷಿ ಬೇರೆ. ಇನ್ನು “ನಾಳೆ ನೋಟ್ಸ್ ನೋಡ್ತೀನಿ” ಅಂತ ಹೇಳಿದರೆ ಹೊಟ್ಟೆನೋವು ಬಂದು ಒಂದಿಬ್ಬರು ಖಂಡಿತಾ ರಜಾ ಮಾಡೇ ಮಾಡುತ್ತಾರೆ.

ಎಷ್ಟೇ ತುಂಟತನ, ಗಲಾಟೆ ಮಾಡಿದರೂ ಪ್ರೀತಿ ಮಾತಿಗೆ ಬಗ್ಗುವ ಹಾಗೆ ಮಕ್ಕಳು ಬೆದರಿಕೆ ಹೆದರಿಕೆಗಳಿಗೆ ಬಗ್ಗಲಾರರು ಅನ್ನುವುದು ನನ್ನ ಅನುಭವ. ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆ ಹಾಗೆ ಅದರಲ್ಲಿ ನಾವು ಶಿಕ್ಷಕರು ಏನು ಬರೆಯುತ್ತೇವೆ ಅದು ಅಚ್ಚಾಗಿ ನಿಲ್ಲುತ್ತದೆ. ಯಾವುದೇ ಬೇಧ ಭಾವ ಇಲ್ಲದ, ನಿಷ್ಕಲ್ಮಶ, ನಿಷ್ಕಳಂಕ ಬಾಲ್ಯದ ಮುಗ್ಧ ಲೋಕ ಬೆಳೆಯುತ್ತಾ ಬೆಳೆಯುತ್ತಾ ಎಲ್ಲಿ ಹೋಗುತ್ತದೆ? ದೊಡ್ಡ ತರಗತಿಗಳಿಗೆ ಹೋದ ಹಾಗೆಲ್ಲ ಮಕ್ಕಳ ಭಾಷೆ ಕೂಡಾ ಯಾಕೆ ತನ್ನ ಮುಗ್ಧತನ ಕಳೆದು ಕೊಳ್ಳುತ್ತಾ ಹೋಗುತ್ತದೆ?  ದಿನಾ ಬಸ್ನಲ್ಲಿ ಕಂಡು ಬರುವ ಕಾಲೇಜ್ ಮಕ್ಕಳು ಆಡುವ ಭಾಷೆ ಕೇಳಿ ಎಷ್ಟೋ ಬಾರಿ ದಂಗಾಗಿದ್ದೇನೆ. ಅವರ ಉಪನ್ಯಾಸಕರ ಹೆಸರು ಹೇಳಿ ಏಕವಚನದಲ್ಲಿ,”ಅವನು ಹಂಗೆ,ಇವಳು ಹಿಂಗೆ” ಎಂದು ಆಡಿಕೊಂಡು ನಗುವಾಗ ಬೇಸರವಾಗುತ್ತದೆ.  ಶಾಲೆಯಲ್ಲಿ, ಕಾಲೇಜ್ ನಲ್ಲಿ ಕಲಿಸದ ಈ ದುರ್ಭಾಷೆ ಮಕ್ಕಳು ಅದೆಲ್ಲಿ ಕಲಿಯುತ್ತಾರೆ? ಇದನ್ನೆಲ್ಲ ನೋಡುವಾಗ ಮೌಲ್ಯ ಶಿಕ್ಷಣ ನಮ್ಮ ಶಿಕ್ಷಣ ವ್ಯವಸ್ಥೆಯ ಒಂದು ಕಡ್ಡಾಯ ವಿಷಯವಾಗಬೇಕು ಎಂದು ಎಷ್ಟೋ ಬಾರಿ ಅನಿಸಿದೆ.

ತರಗತಿ ಕೋಣೆಗಳಲ್ಲು ಮಕ್ಕಳ ಬಳಿ ಈ ಬಗ್ಗೆ ಎಷ್ಟೋ ಬಾರಿ ಚರ್ಚಿಸಿದ್ದೇನೆ.”ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಅಲ್ಲವೇ. ಮಕ್ಕಳೇ” ಎಂದರೆ ಎಲ್ಲರೂ ಹೌದು ಎಂದು ತಲೆದೂಗಿದರು. ಆದರೆ ಬೆಳೆದು ದೊಡ್ಡವರಾಗಿ ಹೋದ ಬಳಿಕ ನಮ್ಮ ಮಾತುಗಳನ್ನು ಎಷ್ಟು ಪಾಲಿಸುತ್ತಾರೆ ತಿಳಿಯದು.ಆದರೆ ಶಿಕ್ಷಕರಾಗಿ ಮಕ್ಕಳ ಭಾಷೆ ತಿದ್ದುವ ಕಾರ್ಯ ನಾವು ಮಾಡಲೇಬೇಕಲ್ಲವೇ. ಅಂತೂ ಇಂಗ್ಲಿಷ್ ಕಲಿಸಲು ಹೋಗಿ, ಒಂದು ಮುಗ್ಧ ಲೋಕದ ದರುಶನವಾಗಿ,ಉತ್ಸಾಹದಿಂದಲೇ ಆ ವರ್ಷದ ಬೋಧನೆ ಮುಗಿಸಿದೆ.

ಹೋದ ವರ್ಷದ ನಾಲ್ಕನೇ ತರಗತಿಯಲ್ಲಿದ್ದ ಮಕ್ಕಳ, ತಮ್ಮ ತಂಗಿಯರು, ಕಸಿನ್ ಗಳು, ಅಕ್ಕಪಕ್ಕದ ಗೆಳೆಯರು ಈ ವರ್ಷದ ನಾಲ್ಕನೇ ತರಗತಿಯಲ್ಲಿದ್ದು, ಶಾಲೆ ಪ್ರಾರಂಭದ ಮೊದಲ ದಿನದಿಂದಲೇ, ನಾನು ಗೇಟ್ ದಾಟಿ ಒಳ ಹೋದ ತಕ್ಷಣವೇ “ಟೀಚರ್ ಈ ವರ್ಷ ನಮ್ಮ ಕ್ಲಾಸ್ಗು ನೀವೇ ಇಂಗ್ಲಿಷ್ ಮಾಡ್ತೀರಾ? ಯಾವಾಗ ಬರ್ತೀರಾ”ಅಂತ ಕೇಳಲಾರಂಭಿಸಿದರು!

-ಸಮತಾ.ಆರ್

16 Responses

 1. Veena Manjunath says:

  This article is really mesmerizing n heart warming for me I could sense t bondage U created n t warmth u gave it to them. U must b lk an oasis to them….I was jus swaying in your world…it was lk a cool breeze in the summer Samatha

 2. Ashamani says:

  Super

 3. ನಯನ ಬಜಕೂಡ್ಲು says:

  ವಾಸ್ತವೀಕತೆಯಿಂದ ಕೂಡಿದ ನಿಮ್ಮ ಲೇಖನ ಓದುವುದಕ್ಕೆ ಸಡಗರ. ಅವು ನಿಮಗೆ ಅನುಭವಗಳು, ಓದುಗರಿಗೆ ಹೀಗೆಲ್ಲ ಇದೆ ಅನ್ನುವ ಒಂದು ರೀತಿಯ ಪಾಠ, ಜೊತೆಗೆ ಬರಹಗಳಲ್ಲಿ ಅಡಗಿರುವ ಸಂದೇಶಗಳು ನಮ್ಮನ್ನು ಎಚ್ಚರಿಸುತ್ತವೆ. ಮಕ್ಕಳ ಮನಸು ಹಸಿಮಣ್ಣಿನ ಗೋಡೆ ಇದ್ದ ಹಾಗೆ – ಅನ್ನುವ ಮಾತು ಅಪ್ಪಟ ಸತ್ಯ

 4. Anonymous says:

  Bahala chennagide

 5. Malavika.R says:

  ಮಕ್ಕಳ ಜೊತೆಯ ಸುಂದರ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು

 6. Rajani says:

  Super

 7. Thejaswini says:

  Nice article… Beautifully written

 8. Dhanalaxmi says:

  ನೀವು ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಶೈಲಿ ತುಂಬಾ ಸುಂದರವಾಗಿದೆ ನೀವು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಗಳಿಸಿದೆ ಎಂದು ಹಾರೈಸುತ್ತೇನೆ

 9. Latha says:

  Tharagathi koneyanne nodidante aytu ….thumba chennagide

 10. ಸುನೀತ says:

  ನನ್ನದೇ ಅನುಭವವೆಂಬಷ್ಟು ಹೃದ್ಯ ಸಮತಾ..

 11. Suresh Kumar N L says:

  Super

 12. ವಿದ್ಯಾ ಶ್ರೀ ಎಸ್ ಅಡೂರ್ says:

  ಚಂದದ ಬರಹ…

 13. sudha says:

  What a beautiful article. company of innocent children is so nice

 14. ಪಾರ್ವತಿಕೃಷ್ಣ. says:

  ಎಷ್ಟು ಚೆನ್ನಾಗಿ ಬರೆದಿರುವಿರಿ !! ಮಕ್ಕಳೊಂದಿಗೆ ಬೆರೆತು ಅವರ ಮನವರಿತು ಕಲಿಸುವ ,ಅವರಿಂದ ಕಲಿಯುವ ಬಗ್ಗೆ ಆ ವೃತ್ತಿಯಲ್ಲಿರುವವರಿಂದ ಚೆನ್ನಾಗಿ ಕೇಳಿ ಬಲ್ಲೆ. ಪ್ರತಿ ವರ್ಷವೂ ಹೊಸತನ , ಹೊಸಮುಖ. ಹಸಿಮಣ್ಣಿನಂತ ಮನದ ಮಕ್ಕಳೊಡನೆ ಒಡನಾಟವೆಂದರೆ ಬಹು ಎಚ್ಚರಿಕೆಯು ಇರಬೇಕು.ಓದಿ ತುಂಬ ಖುಷಿಯಾಯಿತು.ಅಭಿನಂದನೆಗಳು.

 15. Samatha.R says:

  ಓದಿ ಅಭಿಪ್ರಾಯ ತಿಳಿಸಿ ದ ಎಲ್ಲರಿಗೂ ನನ್ನ ಧನ್ಯವಾದಗಳು

 16. ಶಂಕರಿ ಶರ್ಮ says:

  ಸಹಜ ಸುಂದರ ಬರಹ. ಚಿಲ್ಟುಗಳ ಕಿತಾಪತಿಗಳನ್ನು ಯಥಾವತ್ತಾಗಿ ನಿರೂಪಿಸಿದ ರೀತಿ ಖುಶಿ ಕೊಟ್ಟಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: