ಕೆ ಎಸ್‌ ನ ಕವಿನೆನಪು 40: ಸಹೋದ್ಯೋಗಿಗಳ ಸ್ನೇಹಾಭಿಮಾನ-ಬಾಡಿಗೆ ಮನೆ ಪ್ರಸಂಗ

Share Button

 

ನಮ್ಮ ತಂದೆ ಕರ್ನಾಟಕ ಗೃಹಮಂಡಳಿಯಲ್ಲಿ ಸುಪರಿಂಟೆಂಡೆಂಟ್ ಆಗಿ 1970 ರಲ್ಲಿ ನಿವೃತ್ತರಾದರು. ತಮ್ಮ ಸೇವೆಯ ಅವಧಿಯಲ್ಲಿ ಬಹುಪಾಲು ಸಹೋದ್ಯೋಗಿಗಳ ಸ್ನೇಹಾಭಿಮಾನಗಳನ್ನೂ ಸಂಪಾದಿಸಿದ್ದರು. ಅವರಲ್ಲಿ ಒಬ್ಬರು ನಾರಾಯಣ ಐಯ್ಯಂಗಾರ್ ನಮ್ಮ ನೆರೆಮನೆಯವರೇ ಆಗಿದ್ದು, ನಮ್ಮ ಹಾಗೂ ಅವರ ಕುಟುಂಬದವರ ನಡುವೆ  ಒಂದು ಸೌಹಾರ್ದಯುತ ಬಾಂಧವ್ಯವಿತ್ತು. ಶ್ರೀನಾಥ್,ದಶರಥರಾಮಯ್ಯ,ಮುಂತಾದವರ ಹೆಸರುಗಳನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು. ಗೃಹ ಮಂಡಳಿ ಅಧ್ಯಕ್ಷರಾಗಿದ್ದ ಶ್ರೀ ಭೀಮಪ್ಪ ನಾಯಕ್ ಹಾಗೂ ತಿಮ್ಮೇಗೌಡ ಅವರುಗಳಿಗೂ ನಮ್ಮ ತಂದೆಯವರನ್ನು ಕಂಡರೆ ಬಹಳ ಗೌರವ ಹಾಗೂ ಅಭಿಮಾನ. ತಿಮ್ಮೇಗೌಡರವರ ಅಧಿಕಾರಾವಧಿಯಲ್ಲಿ ನಮ್ಮ ತಂದೆ ನಿವೃತ್ತರಾದಾಗ ಅವರ ಕಾರಿನಲ್ಲಿ ಮನೆಯವರೆಗೂ ಬಂದು ಬೀಳ್ಕೊಟ್ಟಿದ್ದರು.

ನನ್ನ ವೃತ್ತಿಜೀವನದಲ್ಲೂ ಅವರಲ್ಲಿ ಇಬ್ಬರು ಸಹೋದ್ಯೋಗಿಗಳ ಪರಿಚಯ ಹಾಗೂ ಸಾಂಗತ್ಯ ಉಂಟಾಯಿತು.

1998 ರಲ್ಲಿ ನಾನು ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಬೇಕಾದ ಪ್ರಸಂಗ ಒದಗಿತು. ಸರಸ್ವತಿಪುರದಲ್ಲೇ (ಅದನ್ನು ಸರಸ್ವತಿಪುರಂ ಎನ್ನುವವರೂ ಇದ್ದಾರೆ) ಮನೆ ಹುಡುಕಲು ಆರಂಭಿಸಿದೆ : ಎರಡು ಕಾರಣಗಳಿಗಾಗಿ. ಒಂದು ನನ್ನ ಶ್ರೀಮತಿ ಅಧ್ಯಾಪನ ವೃತ್ತಿಯಲ್ಲಿದ್ದ ಮಹಾರಾಣಿ ಕಾಲೇಜಿಗೆ ಹತ್ತಿರವಾಗಿದೆ ಎಂಬುದು ಮತ್ತೊಂದು ನಮ್ಮೆಲ್ಲರ ಗುರುಗಳಾದ ಪ್ರಾಚಾರ್ಯ ಎಚ್ಚೆಸ್ಕೆಯವರು  ಅದೇ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಅವರನ್ನು ಆಗಾಗ್ಗೆ ಭೇಟಿ ಮಾಡಬಹುದು ಎಂಬ ಸ್ವಾರ್ಥ.

ಅದರಂತೆ ಮನೆಯ ದಲ್ಲಾಳಿ ಸರಸ್ವತಿಪುರಂ ಮಧ್ಯಭಾಗದಲ್ಲಿದ್ದ ನರಸಿಂಹಯ್ಯ ಎನ್ನುವವವರ ಮನೆಗೆ ಕರೆದುಕೊಂಡು ಹೋದ. ಅವರ ಮಹಡಿ ಮನೆ ಖಾಲಿ ಇತ್ತು.ಸುಮಾರು ಎಪ್ಪತ್ತು ವರುಷದ ಹಿರಿಯ ಪ್ರಜೆ ಅವರು. ಮನೆಯನ್ನು ತೋರಿಸಿ, ಬಾಡಿಗೆ, ಮುಂಗಡ ಮುಂತಾದ ವಿವರಗಳನ್ನು ಬಹಳ ಕಟ್ಟುನಿಟ್ಟಾಗಿ ತಿಳಿಸಿದರು. ನಾನು ಒಂದಷ್ಟು ಕಡಿಮೆ ದರ ಕೇಳಿದ್ದಕ್ಕೆ ಆಗುವುದಿಲ್ಲವೆಂದರು. ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತ ನೀವು ಎಲ್ಲಿ ಕೆಲಸದಲ್ಲಿದ್ದಿರಿ? ಎಂದು ಕೇಳಿದೆ. ಅವರು ಗೃಹಮಂಡಳಿ ಎಂದರು.

‘ಕೆ ಎಸ್ ನರಸಿಂಹ ಸ್ವಾಮಿ ಅವರ ಹೆಸರು ಕೇಳಿದ್ದೀರಾ ?’ಎಂದು ನಾನು ಪ್ರಶ್ನಿಸಿದಾಗ,

“ಗೊತ್ತಿಲ್ಲದೆ ಏನು. ಅವರು ನನ್ನ ಗುರುಗಳು. ಅವರು ನಿಮಗೆ ಪರಿಚಯವೇ?” ಎಂದು ಉಲ್ಲಾಸದಿಂದ ಕೇಳಿದರು.

‘ನಾನು ಅವರ ಮಗ‘ ಎಂದೆ.

ತಕ್ಷಣ ಭಾವುಕರಾಗಿ ”ಮೊದಲೇ ಏಕೆ ಹೇಳಲಿಲ್ಲ.ಇದು ಮುಚ್ಚಿಡುವ ವಿಷಯವೇ? ನೀವು ಹೇಳಿದಷ್ಟೇ ಬಾಡಿಗೆ, ಮುಂಗಡ ಕೊಡಿ” ಎನ್ನುತ್ತ ಅವರ ಹೆಂಡತಿಗೆ ಕಾಫಿ ತರಲು ಹೇಳಿದರು.

ನಾವು ಅವರ ಮನೆಯಲ್ಲಿ ಬಾಡಿಗೆಗೆ ಇರುವವರೆಗೂ ನಮ್ಮನ್ನು ಮನೆಯವರಂತೇ ಕಂಡರು. ಆಗಾಗ್ಗೆ ಮನೆಗೆ ಬಂದು ನಮ್ಮ ತಂದೆಯವರ ಒಡನಾಟದ ರಸನಿಮಿಷಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ತಂದೆಯವರು ಹಲವು ಬಾರಿ ಪದ್ಯದ ಕರಡುರೂಪ ಸಿದ್ಧಪಡಿಸಿ ,ಟೇಬಲ್ ಮೇಲೆ ಇರಿಸಿ ಅತ್ತಿತ್ತ ಹೋದಾಗ ನರಸಿಂಹಯ್ಯನವರು ಬಂದು ಪದ್ಯವನ್ನು ಓದಿ, ಕಂಠಪಾಠ ಮಾಡಿಕೊಂಡು ಕಛೇರಿಯವರ ಹತ್ತಿರವೆಲ್ಲ ವಾಚಿಸುತ್ತಿದ್ದರಂತೆ. ಒಮ್ಮೆ ನಮ್ಮ ತಂದೆಯವರಿಗೆ ಇದು ಗೊತ್ತಾಗಿ ”ಏನೋ ನರಸಿಂಹಯ್ಯ, ಇನ್ನೂ ಪದ್ಯ ಪೂರ್ತಿ ಆಗಿಲ್ಲ. ಊರಿಗೆಲ್ಲ ಟಾಂ ಟಾಂ ಮಾಡ್ತೀಯಲ್ಲೋ? ” ಎಂದು ಗದರಿದರು ಎಂದು ಸಂಭ್ರಮದಿಂದಲೇ ಹೇಳುತ್ತಿದ್ದರು ಅವರು.

ನಮ್ಮ ತಂದೆಯವರಿಗೆ ಹೌಸಿಂಗ್ ಬೋರ್ಡ್ ನಲ್ಲಿ ನಿಮ್ಮ ಜತೆ ಕೆಲಸ ಮಾಡುತ್ತಿದ್ದ ನರಸಿಂಹಯ್ಯನವರು ಗೊತ್ತೆ ಎಂದು ಒಮ್ಮೆ ಕೇಳಿದೆ.

‘ಓಹೋ ಗೊತ್ತಿಲ್ಲದೆ ಏನು? ಅವನ ಹೆಸರು ವೆಂಕಟನರಸಿಂಹಯ್ಯ ,ಅವನ ಸ್ವಂತ ಊರು ತಲಕಾಡು, ಬಹಳ ಅಭಿಮಾನಿ.ನಿನಗೆ ಹೇಗೆ ಪರಿಚಯ ?” ಎಂದು ಪ್ರಶ್ನಿಸಿದರು. ಅವರ ಮನೆಯಲ್ಲಿ ಬಾಡಿಗೆಗೆ ಇರುವ ವಿಷಯ ತಿಳಿಸಿದೆ.

‘ಒಂದು ಸಾರಿ ಕರೆದುಕೊಂಡು ಬಾ, ಮಾತನಾಡಿಸೋಣ” ಎಂದರು.

ಆದರೆ ನರಸಿಂಹಯ್ಯನವರು ನನ್ನ ಹತ್ತಿರ ವಿಳಾಸ ಪಡೆದು ,ತಾವೇ ಕುಟುಂಬಸಮೇತ ಹೋಗಿ, ಭೇಟಿಮಾಡಿ ಸಂತಸಪಟ್ಟರು.

(ಮುಂದುವರಿಯುವುದು)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:    http://surahonne.com/?p=31801


-ಕೆ ಎನ್ ಮಹಾಬಲ

(ಕೆ ಎಸ್ ನ ಪುತ್ರ, ಬೆಂಗಳೂರು)

3 Responses

  1. ನಯನ ಬಜಕೂಡ್ಲು says:

    Very nice

  2. ಮೈಸೂರು ಮಲ್ಲಿಗೆ ಖ್ಯಾತಿ ಯ ಕವಿಯ ಬಗ್ಗೆ ಕೇಳಲು ಹಿತವೆನಿಸುತ್ತದೆ

  3. ಶಂಕರಿ ಶರ್ಮ says:

    ‘ಮೈಸೂರು ಮಲ್ಲಿಗೆ’ಯ ಹಿರಿಯ ಕವಿ, ಸಾಹಿತಿಗಳ ಬಗೆಗೆ ನಾಡಿನ ಜನತೆಗೆ ಬಹಳ ಗೌರವ, ಅಭಿಮಾನ. ಅವರ ಜೀವನ ಚರಿತ್ರೆ ಸವಿಯುವ ಭಾಗ್ಯವನ್ನು ಒದಗಿಸಿದ ತಮಗೆ ಆದರ ಪೂರ್ವಕ ಪ್ರಣಾಮಗಳು. ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: