ಅಪ್ಪನ ಒಲೆಉರಿ ಪ್ರೀತಿ

Share Button

‘ಉಂಡರೆ ಉಗಾದಿ ಮಿಂದರೆ ದೀವಳಿಗೆ’  ಅನ್ನೋ‌ ಮಾತು ಬಹು ಪ್ರಚಲಿತ. ಯುಗಾದಿಯಂದು ಮೀಯಲೂ ಬೇಕು ಹಾಗೆ ದೀಪಾವಳಿ ದಿನ ಉಣ್ಣಲೂ ಬೇಕು. ಇದು ಅಷ್ಟೇ ನಿಜ.

ನಮ್ಮ‌ ಬಾಲ್ಯಕಾಲದಲ್ಲಿ ಯಾವುದೇ‌ ಹಬ್ಬ ಬರಲಿ ಅಭ್ಯಂಜನ ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ‌ ನಮಸ್ಕರಿಸುವ ಸಿಹಿ ತಿನ್ನುವ ಸಂಪ್ರದಾಯ ಜಾರಿಯಲ್ಲಿತ್ತು. ಮನೆಯ ಮುಂಬಾಗಿಲಿನಲ್ಲಿ ಅಂದವಾಗಿ ಅರಳಿದ ರಂಗವಲ್ಲಿ, ಹೊಸಲಿಗೆ ಹಚ್ಚಿದ ಅರಿಶಿನ ಕುಂಕುಮ, ಬಾಗಿಲಿಗೆ ಕಟ್ಟಿದ ಮಾವಿನೆಲೆಯ ಹಸಿರ ತೋರಣ, ವಿಶೇಷ ಪೂಜೆ ಈ ಎಲ್ಲವೂ ದೊಡ್ಡ ದೊಡ್ಡ ಹಬ್ಬಗಳ ಸಂಭ್ರಮಾಚರಣೆಯ ವೈವಿಧ್ಯಪೂರ್ಣ ದೃಶ್ಯ ವೈಭವ.  ಈಗ ಆ ಸಡಗರವೇ ಮಾಯವಾಗಿರುವಾಗ ತರತರದ ಅಡುಗೆಯ‌ ಮಾತು ದೂರವೇ ಉಳಿಯಿತು. ಇನ್ನು ತಲೆಸ್ನಾನವು ಅದೇ ಹಾದಿ ತುಳಿದು ಗುರು ಹಿರಿಯರಿಗೆ ಪ್ರಣಾಮ ಸಲ್ಲಿಸುವುದು ಹೆಚ್ಚು ಕಮ್ಮಿ ಮರೆಯಾಗಿದೆ.  ಇಂದು ಹಬ್ಬ ಎಂದರೆ ಒಂದು ಸಾಂಕೇತಿಕ ಆಚರಣೆ. ನಗರೀಕರಣದ ವಿಭಕ್ತ ಕುಟುಂಬದ ಪರಿಣಾಮ ಶಾಸ್ತ್ರೀಯ ಭೋಜನ ತಯಾರಿ ಹಾಗೆ ಅದನ್ನು ಸವಿಯುವ‌ ಮನಸ್ಥಿತಿಗೆ ಬಿಡುವು ಇಲ್ಲವಾಗಿದೆ. ಒಟ್ಟಾರೆ‌ ನಮ್ಮ ಅನುಕೂಲ ಸಿಂಧು ಜೀವನಕ್ರಮದಲ್ಲಿ ಇವೆಲ್ಲ ಸಂಕ್ಷಿಪ್ತ  ರೂಪ ತಾಳಿದೆ ಎನ್ನೋಣ.

ನಮ್ಮ‌ ಮನೋಸಾನ್ರಾಜ್ಯದಲ್ಲಿ ನೆನಪಿಗೆ ಅದರ ಶಕ್ತಿಗೆ ಮಿತಿಯಿಲ್ಲದ ಜೀವಂತಿಕೆ. ನಾನು ಬಾಲೆಯಾಗಿದ್ದಾಗಿನ ಶಾಲೆಗೆ ಹೋಗುತ್ತಿದ್ದ ದಿನಗಳವು. ಮಲೆನಾಡಿನವರಾದ ಅಪ್ಪ ಸದಾ ಚಟುವಟಿಕೆಯ ಚಿಲುಮೆ.  ಮನೆಯಲ್ಲಿದ್ದಷ್ಟು ಕಾಲವು ಒಂದಿಲ್ಲೊಂದು ಕಾರ್ಯದಲ್ಲಿ ತಲ್ಲೀನರವರು. ಅವರ ಶಬ್ದಕೋಶದಲ್ಲಿ ದಣಿವು, ಬೇಸರ ಈ ಪದಗಳು ಅರ್ಥವನ್ನೇ ಪಡೆದಿರಲಿಲ್ಲವೆಂದರೂ ಸರಿಯೇ. ಸುತ್ತಮುತ್ತಲಿನವರ ಸಹಾಯಕ್ಕೆ ಹುಟ್ಟಿದ್ದರೇನೋ ಎನ್ನುವಂತೆ ಅವರ ನಿತ್ಯಬದುಕು.

ಶೃಂಗೇರಿ ಮೂಲದ ‘ಶಾರದೆ’ ಮನೆತನವೆಂದು ಗುರುತಿಸಿಕೊಂಡ ಅಪ್ಪ ತಮ್ಮ ಎಜೀಸ್ ಆಫೀಸ್ ಉದ್ಯೋಗದ ದೆಸೆಯಿಂದ ಬೆಂಗಳೂರಿಗರಾದರು. ತಮ್ಮದೇ ಸ್ವಂತ ನಿವೇಶನ ಖರೀದಿಸಿ ಅಲ್ಲಿ ಪುಟ್ಟಮನೆ ನಿರ್ಮಿಸಿ ಸುತ್ತಲೂ ಹಸಿರು ಹೊಚ್ಚಿ ಮರಿ ಮಲೆನಾಡನ್ನೇ‌ ಸೃಷ್ಟಿಸಿಬಿಟ್ಟರು. ಮಾವು, ತೆಂಗು, ಹಲಸು, ಸಪೋಟಾ, ಮಾದಲಾ, ಪರಂಗಿ ಹಣ್ಣು‌ನೀಡುವ ಮರಗಳಾದರೆ ಸೊಪ್ಪು, ಹೂವು, ತರಕಾರಿಗೂ ಕೊರತೆ ಇರದ ನುಗ್ಗೆ ಹಿಗ್ಗಿ ಹಿಗ್ಗಿ ಕಾಯಿ ಸುರಿಸುತ್ತಿತ್ತು. ಹಾಗಿತ್ತು ಆ ಹಸಿರು ಸಂಪತ್ತು. ಒಂದೈದು ವರ್ಷಗಳ ಅಪ್ಪನ ಆರೈಕೆಯಲ್ಲಿ ಅದೊಂದು ನಂದನವನವಾಯಿತು. ಅಪಾರ ಪ್ರಮಾಣದಲ್ಲಿ ಉದುರುತ್ತಿದ್ದ ಒಣಗಿದ ಎಲೆ‌ ಕಸಕಡ್ಡಿಗೂ ಬರವಿರಲಿಲ್ಲ ಆ ಸಸ್ಯಕಾಶಿಯಲ್ಲಿ. ಸಂಜೆಯಾದರೆ ಅವನ್ನೆಲ್ಲ ಗುಡಿಸಿ ಒಟ್ಟು ಮಾಡಿ ಒಣಗಿದ ತೆಂಗಿನಗರಿಯ ನೆರವಿನಿಂದ ತರಗೆಲೆಗಳ fuel pack ಸಿದ್ಧಪಡಿಸಿ ಒಲೆಗೆ ಒಟ್ಟುವುದು ಅಪ್ಪನ ಪ್ರಿಯ ಹವ್ಯಾಸ. ಬೆಳಗಾಗುತ್ತಿದ್ದಂತೆ ಹೋಮಕುಂಡವೇನೋ ಎಂಬಂತೆ ಅದರ ಮುಂದೆ  ಸ್ಥಾಪಿತರಾಗಿ ಬೆಂಕಿ ತೋರಿಸಿ ಅದು ದಗದಗ ಉರಿಯುವಾಗ ಅದರ ಬೆಳಕಲ್ಲಿ ಧನ್ಯತೆ ಅನುಭವಿಸುವ ಧ್ಯಾನಸ್ಥಿತಿ ತಲುಪುವರು. ಬೆರಣಿ, ಕರಟ ಹೊಟ್ಟಿನ ಹವಿಸ್ಸು ಆಗಾಗ ಸಮರ್ಪಿಸುವರು. ನಡುವೆ ಎದ್ದು ತಾಮ್ರದ ಹಂಡೆಯ ನೀರಿನ ಬಿಸಿಯ ಮೌಲ್ಯ ಮಾಪನ ನಡೆಯುವುದು. ಇದು ನಿತ್ಯದ ನೋಟ.

ಅಪ್ಪ ತಮ್ಮ ಒಂದು ಕಾಲದ ಶಿವಮೊಗ್ಗೆಯ ಬ್ರಾಹ್ಮಣರ ಬೀದಿಯ ಸ್ವಗೃಹದಿಂದ ದೊಡ್ಡದೊಂದು ತಾಮ್ರದ ಹಂಡೆ ಬಲು ಮಮತೆಯಿಂದ ತಂದು ಇಲ್ಲಿ ಹೂಳಿಸಿದ್ದರು. ಪ್ರತಿದಿನ ಅದಕ್ಕೆ ಯಥೇಚ್ಛ ಉರವಲ ಸೇವೆಯ ಅರ್ಪಣೆ. ಈ ಅಗ್ನಿದೇವನ ಆಹುತಿಗೆ ಹೊಟ್ಟು, ಬೆರಣಿ, ಕರಟ ಇವುಗಳ ಮೂಟೆಯೂ ಜೊತೆಯಾಗುವುವು. ಮಳೆಗಾಲಕ್ಕೆ ಮುಂಚಿತವಾಗಿ ಭರ್ಜರಿಯಾಗಿ ಸಂಗ್ರಹವಾಗುವವು ಸಹ.

ಅಪ್ಪ ತಂದು ಹೂಳಿಸಿದ ಹಂಡೆಯ ಹಿಂದೆ ಒಂದು ಸ್ವಾರಸ್ಯಕರ ಇತಿಹಾಸವೇ ಅಡಗಿದೆ. ಅಪ್ಪನಿಗೆ ಅವರಪ್ಪ ಕೃಷ್ಣಪ್ಪನವರು ಶಿವಮೊಗ್ಗೆಯ ಮನೆಯನ್ನೇ ಬಳುವಳಿಯಾಗಿ ಬರೆಯಬೇಕೆಂದಿದ್ದರಂತೆ. ಕಾರಣ ಅಪ್ಪನೇ ತಂದೆತಾಯಿಯ ಕ್ಷೇಮ ಕಡೆಗಾಲದಲ್ಲಿ‌ ಗಮನಿಸಿದ ಕೃತಜ್ಞತೆಯ ದ್ಯೋತಕವಾಗಿ. ಅಪ್ಪ ಹಟಕ್ಜೆ ಬಿದ್ದರಂತೆ  ಅಪ್ಪ ‌ಖಂಡಿತ ಅಂತಾ ಕೆಲಸ ಮಾಡಬೇಡಿ. ಮಗನಾಗಿ ನನ್ನ ಕರ್ತವ್ಯ ನಿಮ್ಮನ್ನ ನೋಡಿಕೊಳ್ಳೋದು. ಅದನ್ನ‌ ಮಾಡತಿದೀನಿ ಅಷ್ಟೆ. ಮನೆಗೋಸ್ಕರವೇ ನಿಮ್ಮನ್ನ ಗಮನಿಸಿದೆ ಅನ್ನೋ ಮಾತು ಬರಬಾರದು. ಉಳಿದ ಮಕ್ಕಳು ಇದಾರಲ್ಲ’ . ಏನೇ ಮಾಡಿದರೂ ಮಗ ರಿಜಿಸ್ಟಾರ್ ಕಛೇರಿಗೆ ಬಾರಲು‌ ಒಪ್ಪದೇ ಹೋದಾಗ ತಾತ ಕೃಷ್ಣಪ್ಪನವರು‌ ಪರಿಚಯದವರನ್ನು ಸೇರಿಸಿ  ‘ನೋಡ್ರಿ ನನ್ನ‌ ಮಗ ಇವನು ಎಂತಹ ಅಯೋಗ್ಯ.‌ ಮನೆ ಬರೀತೀನಿ ಇವನ ಹೆಸರಿಗೆ ಅಂದರೆ ತನಗೆ ಬೇಡ ಅಂತಿದಾನೆ. ನೀವಗಳಾದರೂ ಬುದ್ಧಿ ಹೇಳಿ ಒಪ್ಪಿಸಿ ಇವನನ್ನ’  ಎಂದು ನ್ಯಾಯ‌ ಒಪ್ಪಿಸಿದರಂತೆ. ಕಡೆಗೂ ಅಪ್ಪ ಮಣಿಯದಾದಾಗ ಅವರೇ ಸೋತು   ‘ಹೋಗಲಿ ಗುರುತಿಗೇ ಏನಾದ್ರೂ ತೆಗೋ’   ಎಂದಾಗ ಅಪ್ಪ ಕೇಳಿದ್ದು ಈ ತಾಮ್ರದ ಹಂಡೆ.


ತಂದೆತಾಯಿಯ ನೆನಪಲ್ಲಿ ತಂದ ಆ ಹಂಡೆಗೆ ಅಪ್ಪ ಅಷ್ಟೇ ಪೂಜ್ಯ ಸ್ಥಾನ ನೀಡಿದ್ದರು. ನಿತ್ಯನೇಮದಿಂದ ನಡೆದುಕೊಳ್ಳುವರು. ಅದಕ್ಕೇ ಇರಬೇಕು ಒಲೆಗೆ ಉರಿಯನ್ನು ಖುದ್ದು ಮುತುವರ್ಜಿಯಿಂದ ಅಟ್ಟುವರು. ಅಪ್ಪನಿಗೆ ಸ್ನಾನ ಎಂದರೆ ಹಂಡೆಯಲ್ಲಿ ನೀರು ಮರಳುತ್ತಿರಬೇಕು. ಇನ್ನು ಅಭ್ಯಂಜನವಾದರೆ ಅದು‌ ಕೊತಕೊತ ಕುದಿಯುತ್ತಿರಬೇಕು. ಅದು ಅವರ ಮುದದ ಹದ. ಅವರು ಸ್ನಾನ‌ ಪೂರೈಸಿ ಬಚ್ಚಲು‌ಮನೆಯಿಂದ ಹೊರಬಂದರೆ ಮೊಗ ಕೆಂಪಾಗಿ ಮೈ ಕೈಯಿಂದ ಹಬೆಯ ನರ್ತನ. ಹಂಡೆಗೆ ನೀರು ತುಂಬಿಸಿ ಒಲೆ ಪುನ: ಊದಿ ಉರಿ ಸರಿಪಡಿಸಿಯೇ ಅವರು ಹೊರಗೆ ಅಡಿಯಿಡುತ್ತಿದ್ದದ್ದು.

ನಾನು ಕಾಲೇಜಿಗೆ ಸೇರಿದಾಗ ಭಾನುವಾರದಂದು ಅಪ್ಪನ ವಿಶೇಷ ಉಪಚಾರ. ‘ಸಾಯಿ ಒಂದು ಹಂಡೆ ನೀರು ಮರಳತಾ ಇದೆ. ಹರಳೆಣ್ಣೆ ಹಚ್ಚಿಕೊಂಡು ತಲೆಸ್ನಾನ ಮಾಡು.’. ನನಗೋ ತಲೆಯ ತುಂಬಾ ಒತ್ತು ಕೂದಲು. ಅಪ್ಪನ ಒಲೆ ಉರಿಯಿಂದ ಅದಕ್ಕೆ ಸೊಂಪಾದ ಆರೈಕೆ.  ಕೆಲಸಕ್ಕೆ ಸೇರಿದ ಮೇಲೂ ಅಪ್ಪನ ಈ ಕಳಕಳಿ ಮುಂದುವರೆಯಿತು. ಟೆಲಿಪೋನ್ಸ್ ನಲ್ಲಿ ನೌಕರಿಯಲ್ಲಿದ್ದ ಕಾರಣ ನೈಟ್ ಡ್ಯೂಟಿ ಆಗೀಗ ಇರುವುದು. ಅದು ವಾರದ ರಜೆಯ ಹಿಂದಿನ ದಿನ ಕಡ್ಡಾಯ. ನೈೃಟ್ ಡ್ಯೂಟಿ ಮುಗಿಸಿ ಬರುತ್ತಿದ್ದಂತೆ ಅಪ್ಪ ‘ಇವತ್ತೆಲ್ಲ ಪೂರ ನಿದ್ದೆ ಮಾಡು. ಅದಕ್ಕೆ‌ ಮುಂಚೆ ಎಣ್ಣೆ ಹಚ್ಚಿಕೊಂಡು ಚೆನ್ನಾಗಿ ಎರಕೋ. ನೀರಂತೂ‌ ಕಾಯಸಿದೀನಿ. ದಂಡ ಮಾಡಬೇಡ’ ಅವರಿಗೆ ಆ ಬಿಸಿನೀರು ವ್ಯರ್ಥವಾಗಬಾರದೆಂಬ ಪರಮ ಕಾಳಜಿ. ಹೀಗೆ ನನ್ನನ್ನು ಅಭ್ಯಂಜನ ಸ್ನಾನಕ್ಕೆ ಪುಸಲಾಯಿಸುವರು. ಸ್ವತಹ ಅವರು ವಾರಕ್ಕೊಮ್ಮೆ ಈ ಜಲ ಶಾಖಸುಖ ಅನುಭವಿಸುವರು. ಮನೆಮಂದಿಯು ಅನುಭವಿಸುವ ಹಾಗೆ ನೋಡಿಕೊಳ್ಳುವರು.

ಒಲೆ ಉರಿ ಅಡುಗೆಗೆ ಹೇಗೆ ರುಚಿವರ್ಧಕ ಎಂಬುದನ್ನು ರೋಚಕವಾಗಿ ಹೇಳುವರು. ಅದರಲ್ಲಿ ಮಾವಿನಕಾಯಿ ಸುಟ್ಟು ಗೊಜ್ಜು ಮಾಡುವುದಿರಲಿ, ಕೆಂಡದ ರೊಟ್ಟಿ ತಯಾರಿಯಾಗಲಿ, ಕಲ್ಲು ಮೊಸರನ್ನವಾಗಿರಲಿ ಇವುಗಳನ್ನೆಲ್ಲ ತಾವು ಉಂಡು ಸವಿದ ಮಲೆನಾಡಿನ ವಿಶೇಷ ಖಾದ್ಯಗಳಾಗಿ ಬಣ್ಣಿಸುವರು. ನಾವು ಬೆರಗಿನಿಂದ ಬಿಟ್ಟ ಬಾಯಿ ತೆರೆದ ಕಣ್ಣಲ್ಲಿ ಕಿವಿಯಾಗಿ ಕೇಳುತ್ತಿದ್ದೆವು.

ನಾವು ಮೊದಲಿದ್ದದ್ದು ಶಂಕರಪುರದ ಬಾಡಿಗೆ‌ಮನೆಯೊಂದರಲ್ಲಿ. ಅಲ್ಲಿ‌ ಸ್ನಾನಕ್ಕೆ ಒಲೆ ಇದ್ದರೂ ಅಪ್ಪ ಬಳುವಳಿಯಾಗಿ ತಂದಿದ್ದ ಹಂಡೆ ಹೂಳಿಸಲು ಅವಕಾಶವಿರಲಿಲ್ಲ. ಹಾಗಾಗಿ ಹಂಡೆ ಹಾಯಾಗಿ ಅಟ್ಟದ ಮೇಲೆ ವಿರಾಜಮಾನವಾಗಿತ್ತು. ಸ್ವಂತಮನೆಯ ಕನಸು ನನಸಾಗುತ್ತಿದ್ದಂತೆ ಆ ಬೃಹತ್ ಹಂಡೆಯನ್ನು ಅಪ್ಪ ತಮ್ಮ ಪ್ರಾಣ ಪಕ್ಷಿಯಂತಿದ್ದ ಸೈಕಲ್ ಕ್ಯಾರಿಯರ್ ಮೇಲೆ  ಕಟ್ಟಿಕೊಂಡು ಹೊಸಮನೆಗೆ ತಂದು ಅದರ ಜಾಗದಲ್ಲಿ ಕೂರಿಸಿದ್ದರು. ಅಂತೂ ಹಂಡೆಗೆ  ಶಾಪವಿಮೋಚನೆಯಾಗಿ ಇಲ್ಲಿ ಒಲೆರಾಯನ ನಿರಂತರ ಸಾಂಗತ್ಯ ಲಭಿಸಿತು.

ಮುಂದೊಂದು ಕಾಲಕ್ಕೆ ಅಪ್ಪ ಕಾಲನ ವಶವಾದ ಮೇಲೆ ವಾರಸುದಾರರಿಲ್ಲದ ಆ ಹಂಡೆಯನ್ನು ಶ್ರೀ ನಗರದ ಅಜ್ಜಿ‌ಮನೆಗೆ ಸಾಗಿಸುವ ಸಂದರ್ಭ. ಆ ದಿನಗಳಲ್ಲಿ ಮಾಜಿ ಪ್ರಧಾನಿ ರಾಜೀವ ಗಾಂಧಿಯ ಹಂತಕ ಶಿವರಸನ್ ಗಾಗಿ ಶೋಧ ನಡೆಯುತ್ತಿತ್ತು. ಅವನನ್ನು  ಹೋಲುವ ಅನೇಕ ಅಮಾಯಕರನ್ನು ಹಿಡಿದು ಪ್ರಶ್ನಿಸಲಾಗುತ್ತಿತ್ತು. ಅಂತಹವರಲ್ಲಿ ಮೈಸೂರಿನ ಮುಗ್ಧ ಪ್ರೊಫೆಸರ್ ಸಹ ಒಬ್ಬರು. ಈ ವಾರ್ತೆ ನಾನು ದಿನಪತ್ರಿಕೆಯಲ್ಲಿ ಓದಿದ್ದೆ.  ಅದೇ ಸಮಯಕ್ಜೆ ನಮ್ಮಪ್ಪನ ಹಂಡೆ ತಮ್ಮನ ಸೈಕಲ್‌ ಮೇಲೆ ಸಮೀಪದಲ್ಲೇ ಶ್ರೀನಗರದಲ್ಲಿದ್ದ ಅಜ್ಜಿಮನೆಗೆ ವಲಸೆ ಹೊರಟಿತ್ತು. ಸೈಕಲ್ ಮೇಲೆ ಹಂಡೆಯೊಡನೆ ಸಹಪ್ರಯಾಣ ಕೈಗೊಳ್ಳುವುದು ವಂಶ ಪಾರಂಪರ್ಯ ಗುಣವೇ ಅಲ್ಲವೇ.

ತಮ್ಮ ಮಟ್ಟಸ ಎತ್ತರದ ಮಧ್ಯಮಗಾತ್ರದ ಗೋಧಿ ಮೈಬಣ್ಣದ ಯುವಕ. ತಲೆತುಂಬ ಸೊಂಪಾದ ಕ್ರಾಪು, ಕನ್ನಡಕಧಾರಿ. ಸಂಗೀತಪ್ರಿಯ ಸ್ವತಹ ಕಲಾವಿದ. ಅವನ‌ಪಾಡಿಗೆ ಅವನು ಕಾಪಿಯೋ ಕಲ್ಯಾಣಿಯೋ ಹಾಡಿಕೊಳ್ಳುತ್ತ ಹಂಡೆ ಹೊತ್ತ ಸೈಕಲ್ ತಳ್ಳಿಕೊಂಡು ನಡೆಯುತ್ತಿದ್ದಾನೆ. ಇದ್ದಕ್ಕಿದಂತೆ ನಾಲ್ಕುಮಂದಿ ಸುತ್ತುವರಿದು ಇಂಗ್ಲೀಷ್ ಭಾಷೆಯಲ್ಲಿ ‘ನೀವು ಶಿವರಸನ್ ತಾನೆ. ಬನ್ನಿ ಸ್ಟೇಷನ್ ಗೆ’ ಎಂದಿದ್ದಾರೆ.  ಇವನಿಗೋ ತಬ್ಬಿಬ್ಬು. ತಲೆಬುಡ ತಿಳಿಯದು. ಆದರೆ ಶಿವರಸನ್ ಕುಖ್ಯಾತಿಯ ಪರಿಚಯ ಮಾಧ್ಯಮಗಳ ಹಾವಳಿ ಈ‌ ಮಟ್ಟಿಗೆ ಇಲ್ಲವಾದರೂ ಜನ ಸಾಮಾನ್ಯರಿಗೆ ಸಾಕಷ್ಟು ತಿಳುವಳಿಕೆ ನೀಡಿತ್ತು. ಶಿವರಸನ್ ಹೆಸರು ಕಿವಿಗೆ ಬೀಳುತ್ತಿದ್ದಂತೆ ಮೊದಲಿಗೆ ಶಾಕ್ ಆದರೂ ಇವ ಕನ್ನಡದಲ್ಲೇ ಉತ್ತರಿಸಲಾರಂಭಿಸಿದ. ಓಡಾಡುತ್ತಿದ್ದ ಜನವೂ ಜಮಾಯಿಸಿದರು.

‘ನಾನ್ಯಾಕ್ರೀ ಶಿವರಸನ್ ಆಗಲಿ?’
ಪ್ರಶ್ನೆಯ ಬಾಣ ಹೊರಡಿಸಿದ. ಆದರೂ‌ ಬಿಡದೆ ಅವರು ಪ್ರಶ್ನೆಯ ಮಳೆ ಸುರಿಸತೊಡಗಿದರು. ಸುತ್ತಲ ಜನಬಲ ಇವನಿಗೆ ಸಾಕಷ್ಟು ಧೈರ್ಯ ತುಂಬಿ ಆತ್ಮವಿಶ್ವಾಸದಲ್ಲಿ ನುಡಿದ.
‘ಏನ್ರೀ ಸ್ವಾಮಿ, ಶಿವರಸನ್ ಗೆ ಕನ್ನಡ ಮಾತಾಡೋಕೆ ಬರತ್ತಾ?
ಈಗ ಗಪಚಿಪ್ ಆಗುವ ಸರದಿ ಅವರದು. ಅಷ್ಟರಲ್ಲಿ ಆಪತ್ ಬಾಂಧವನಂತೆ ಗೆಳೆಯನೊಬ್ಬ ತೆಲುಗು ಸಿನಿಮಾದ ದೇವರಂತೆ ಪ್ರತ್ಯಕ್ಷನಾದ. ಅವನು ಇವನ‌ ಪರಿಚಯ ಹೆಸರು ಸಮೇತ ಅವರಿಗೆ ಮಾಡಿಕೊಟ್ಟುವಿವರಿಸಿದ.

ಇವನು ನನ್ನ ಬಾಲ್ಯಸ್ನೇಹಿತ. ಇವನ‌ ಮನೆ ಅಶೋಕನಗರದಲ್ಲಿ ಅಜ್ಜಿಮನೆ ಇಲ್ಲೇ ಶ್ರೀ ನಗರದಲ್ಲಿ. ದಿನ ಸೈಕಲ್ ಮೇಲೆ ಇವನು ಓಡಾಡೋದು. ಇವತ್ತು ಹಂಡೆ ಸಾಗಸ್ತಾ ಇರೋದ್ರಿಂದ ನಡಕೊಂಡು ಬರ್ತಾ ಇದಾನೆ. ಶಿವರಸನ್ ಹಿಡೀಬೇಕೂಂದ್ರೆ ಸಿಕ್ಕಸಿಕ್ಕವರನ್ನೆಲ್ಲ ಅನುಮಾನಿಸೋದಾ?. ಹಾಗೆ ಅವನು ಸಾಮಾನ್ಯನ ಹಾಗೆ ಓಡಾಡತಾನೇನ್ರೀ? ಈ ಹಂಡೆ ಹೀಗೆ ಕಟ್ಟಿಕೊಂಡು ಈ‌ ಮೈನ್ ರೋಡಿನಲ್ಲಿ ಬರೋಕ್ಕೆ ಅವನಿಗೇನು ಗ್ರಹಚಾರ? ಹಂಡೆ ಹೂಳಿಸಿದ್ದ ಜಾಗ ಹೋಗಿ ನೋಡಿ. ತೆಗೆದಿರೋ ಸಾಕ್ಷಿ ಸಿಗತ್ತೆ, ಹೀಗೆಲ್ಲ ಸಿಕ್ಕಸಿಕ್ಕವರನ್ನ ಅನುಮಾನಿಸಬೇಡಿ. ಅವಮಾನಿಸಬೇಡಿ’ ಅಂತೂ ಶಿವರಸನ್ ಹೋಲಿಕೆಯಿದ್ದ ತಮ್ಮನನ್ನು ಅ ಮಿತ್ರ ಕಾಪಾಡಿದ. ಆ ಸನ್ನಿವೇಶದಿಂದ ಪಾರು ಮಾಡಿದ ಹಂಡೆಯ ಪಾತ್ರ ಮಹಿಮೆಯು ಹಿರಿದೇ.

ಪ್ರಿಯ ಓದುಗರೇ ಈಗ ಮತ್ತೆ ಅಪ್ಪನ ಬದುಕಿನ ಕಾಲಘಟ್ಟಕ್ಕೆ ಮರಳೋಣ.

ಮಳೆಗಾಲಕ್ಕೆ ಮುನ್ನ ಬೆರಣಿ ಶೇಖರಣೆ ಅಪ್ಪನಿಗೆ ತೃಪ್ತಿದಾಯಕವಾಗಿದ್ದರೆ ಸರಿ ಇಲ್ಲವಾದಲ್ಲಿ ಹಸು‌ ಕಟ್ಟಿರುವ ಕೆಂಚಮ್ಮ ಕಾಳಮ್ಮ‌ ಕರಿಯಮ್ಮ ಇವರಿಗೆಲ್ಲ ಬೆರಣಿಗಾಗಿ ಅಡ್ವಾನ್ಸ್ ಸಂದಾಯವಾಗುತ್ತಿತ್ತು. ಅಮ್ಮನಿಗೆ ಇದರ ಸುಳಿವು ಕೊಡುತ್ತಿರಲಿಲ್ಲ.  ಒಮ್ಮೆ ಮನೆದೇವರ ಯಾತ್ರೆಗೆಂದು ಅಮ್ಮ ಅಪ್ಪನನ್ನು ತಿರುಪತಿಗೆ ಬಲವಂತವಾಗಿ ಹೊರಡಿಸಿದರು. ಅಪ್ಪನಿಗೆ ಊರು ಬಿಡಲು ಇಷ್ಷವಿಲ್ಲ. ಬೆರಣಿದಾತೆಯರನ್ನು ಕಾಯುವ ಕೆಲಸವಿತ್ತಲ್ಲ. ಪಾಪ ಅಮ್ಮನಿಗೆ ಹೇಳುವಂತಿಲ್ಲ. ಕಡೆಗೂ ಹೊರಟರು‌ ಮನೆ ಕಾಯಲು ನಮ್ಮನ್ನು ಬಿಟ್ಟು. ಅಪ್ಪ ನನಗೆ ಗುಟ್ಟಾಗಿ ಹೇಳಿ ಹೋದರು.

‘ಸಾಯಿ ಕೆಂಚಮ್ಮ ಹಿಂದಿನ ರಸ್ತೇಲೇ ಹಾಲು ಮಾರೋದು ಬೆಳಿಗ್ಗೇನೇ ಅಯ್ಯಂಗಾರ್‌ ಮನೆಮುಂದೆ ಹಸು ಕಟ್ಟಿ ಹಾಲು ಕರೀತಾಳೆ. ಕಾಳಮ್ಮನ ಹತ್ರ ಎದುರು ಮನೆಯವರು ವರ್ತನೆ ತೆಗೋತಾರೆ. ಹಾಗೆ ಕರಿಯಮ್ಮ ನಮ್ಮನೆಗೆ ಹಾಲು  ತಂದುಕೊಡತಾಳೆ. ಇವರಿಗೆಲ್ಲ ಜ್ಞಾಪಿಸು. ಬೆರಣಿ ತಂದುಕೊಟ್ಟರೆ ಒಣಗಿದೆಯಾ ಇಲ್ವಾ ನೋಡಿ ಎಣಿಸಿಕೊಂಡು ಚೀಲಕ್ಕೆ ತುಂಬಿಸಿ ಬಾಯಿ ಕಟ್ಟಿಡು’. ಒಟ್ಟಲ್ಲಿ ನನಗೆ ಪತ್ತೇದಾರಿ ಒಪ್ಪಿಸಿದರು. ಈ ಗೋಪಾಲಿಕೆಯರ ಪತ್ತೆಯೇ ಒಂದು‌ ಕಡೆಯಾದರೆ ದಾರಿಯೇ ಮತ್ತೊಂದು ಕಡೆ ಎಂದು ತಿಳಿಯಲು ತಡವಾಗಲಿಲ್ಲ.

(ತಮ್ಮ ತಂದೆ ಸತ್ಯನಾರಾಯಣ ಅಯ್ಯರ್ ಅವರೊಂದಿಗೆ ಲೇಖಕಿ)

ಆ ಮಲೆಯೊಡೆಯನ ದರ್ಶನದಲ್ಲೂ ಅಪ್ಪನ ಮನವೆಲ್ಲ ಬೆರಣಿ ಧ್ಯಾನದಲ್ಲೇ ಇದ್ದಿರಬೇಕು. ಅಂತೂ ಲಡ್ಡು ಪ್ರಸಾದದೊಂದಿಗೆ ಅಮ್ಮ ಅಪ್ಪ ಸುಸೂತ್ರವಾಗಿ ಯಾತ್ರೆ ಮುಗಿಸಿ ಬಂದರು. ಅಪ್ಪನ ಬೆರಣಿ ಪತ್ತೆದಾರಿ ಮತ್ತೆ ಶುರುವಾಯಿತು. ಅವರ ಆತಂಕ ಅವರಿಗೆ. ಒಲೆ ಉರಿಯ ಹೊಣೆಗಾರಿಕೆ ಹೊತ್ತಿದ್ದರಲ್ಲ ಪಾಪ.

ಅಪ್ಪನಿಗೆ ಅದೇನು ಎಣೆಯಿಲ್ಲದ ಪ್ರೀತಿಯೋ ಮೋಹವೋ ಸೆಳೆತವೋ ಆ ಹಂಡೆ ಒಲೆ ಉರಿಯ ಮೇಲೆ ಕಾಣೆ. ಆ ಹಂಡೆ ಎಂಬ ಬೃಹತ್ ಬಿಸಿನೀರಿನ ಕಾರ್ಖಾನೆಗೆ ಕಾರಕೂನನಂತೆ ಇವರೇ ನೆಲ್ಲಿಯಿಂದ ನೀರು ಹಿಡಿದು ತುಂಬುವುದು ಒಲೆ ಉರಿಯ ಮೊದಲ ಹಂತ. ನೀರು ತುಂಬಿಸಲು ಪೈಪ್ ಇದ್ದರೂ ಎಂದೂ ಬಳಸುತ್ತಿರಲಿಲ್ಲ. ಅವರ ದೃಷ್ಟಿಯಲ್ಲಿ ಅದರಿಂದ ನೀರು ತುಂಬಿಸಿದರೆ ಕರ್ತವ್ಯಲೋಪ ಬಗೆದಂತೆ.

ಅಪ್ಪ ರಿಟೈರ್ ಆದ ಮೇಲೂ Theosophical Society ಎಂಬ ಸಂಸ್ಥೆಯ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಸೈಕಲ್ಲೇ ಅವರ ವಾಹನ. ಒಂದು ದಿನ ತಮ್ಮ, ಅಪ್ಪ ಬರುವದರೊಳಗೆ ಹಂಡೆ ಭರ್ತಿ ಮಾಡಿಬಿಡಬೇಕೆಂದು ನೆಲ್ಲಿಗೆ ಪೈಪ್ ಸಿಕ್ಕಿಸಿ ಅದನ್ನು ಬೆರಣಿ ತುಂಬಿಸಿದ ಸಿಮೆಂಟ್ ತೊಟ್ಟಿಯ ಮೂಲಕ  ಹಂಡೆಗೆ ಹಾಯಿಸಿ ನೆಲ್ಲಿ ತಿರುಗಿಸಿ ಬಂದವನು ಒಂದು ಪತ್ತೆದಾರಿ ಪುಸ್ತಕ ಓದುತ್ತ ಮಂಚದ ಮೇಲೆ ವಿರಮಿಸಿದವನು ಆ ಪುಸ್ತಕದ ಶಕ್ತಿ ಇರಬೇಕು ನಿದ್ರೆಗೆ ಜಾರಿಬಿಟ್ಟ. ಇಹದ ಪರಿವೆ ಕಾಡದಂತೆ ನಿದ್ರಾದೇವಿ ಆಲಂಗಿಸಿದಳು.

ಅಪ್ಪ ಎಂದಿನಂತೆ ಕೆಲಸದಿಂದ‌ ಮರಳಿದ್ದಾರೆ. ಬಚ್ಚಲಮನೆಗೆ ಕಾಲು ತೊಳೆಯಲು ಹೋಗಿದ್ದಾರೆ. ಅಲ್ಲಿ ಅವರು‌ ಕಂಡದ್ದೇನು? ಎಂತಹ ಆಘಾತ. ಹಂಡೆ ಭರ್ತಿಯಾಗಿ ನೀರು‌ ಪ್ರವಾಹೋಪಾದಿಯಲ್ಲಿ ಬಚ್ಚಲಲ್ಲಿ ಉಕ್ಕಿ ಹರಿಯುತ್ತಿದೆ. ಬೆರಣಿಯತೊಟ್ಟಿಯೂ ನೀರಿಂದ ಅವೃತವಾಗಿ ಬೆರಣಿ ಒದ್ದೆಯಾಗಿ ವಿಷ್ಣುಚಕ್ರದಂತೆ ಬಚ್ಚಲಲ್ಲಿ ಸುತ್ತುತ್ತಿದೆ. ಕೆಲವು‌ ಕರಗಿ‌ ನೀರಾಗಿವೆ. ಸೊರಗಿತು ಅಪ್ಪನ ಮುಖ ನೋವಿಂದ. ಕೂಡಲೇ ನೆಲ್ಲಿ ನಿಲ್ಲಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವಾಗ ತಮ್ಮನಿಗೆ ದಡಕ್ಕನೆ
ಗಾಢನಿದ್ರೆಯಿಂದ ಎಚ್ಚರವಾಯಿತು. ಹಂಡೆಗೆ ನೀರು ಬಿಟ್ಟ‌ ನೆನಪಾಗಿ ಓಡಿ ನೋಡುತ್ತಾನೆ. ಅಪ್ಪ ಬಗ್ಗಿ ಬಾಗಿ ಬೆರಣಿ ಒಟ್ಟು‌ಮಾಡುತ್ತಿದ್ದಾರೆ. ಅವರಿಗೆ ಸಹಾಯವಾಗಲೆಂದೇ ತಮ್ಮ ಸುಲಭ ಮಾರ್ಗದಲ್ಲಿ ನೀರು ತುಂಬಿಸಲು ಹೊರಟಿದ್ದ. ಅವನು ಬಗೆಬಗೆಯಾಗಿ ಅಪ್ಪನಲ್ಲಿ ತನ್ನ‌ ಪ್ರಾಮಾಣಿಕ ಉದ್ದೇಶ ಬಿನ್ನವಿಸಿಕೊಂಡ. ಅದರೆ ಅಪ್ಪ ಅಂದರು. ‘ಇವತ್ತಿಗಾಯ್ತು. ಇನ್ನು‌ ಮುಂದೆ ಯಾರು ಈ ತರ ನನ್ನ ಕ್ಷೇಮ ಚಿಂತನೆ ಮಾಡಬೇಡಿ.‌ಕೈ ಮುಗಿದು ಕೇಳಕೋತೀನಿ.‌ ಅದೇ ನನಗೆ ದೊಡ್ಡ ಸಹಾಯ’.

ಕ್ಯಾನ್ಸರ್ ‌ವ್ಯಾಧಿಗೆ ಒಳಗಾಗಿದ್ದ ಅಮ್ಮನ ಕಡೆಯ ದಿನಗಳವು. ಮಂಚದ ಮೇಲೆ ಮಲಗುತ್ತಿದ್ದ ಅಮ್ಮ ತುಸು ಹೊರಳಿದರೆ ಸಾಕು, ಅಲ್ಲೇ ಬುಡದಲ್ಲಿ ಅಮ್ಮನ ಸೇವೆಗಾಗಿ ಕಾಯುತ್ತಿದ್ದ ಅಪ್ಪ, ನೆಪಕ್ಕೆ ಮಲಗಿರುತ್ತಿದ್ದರಷ್ಟೇ. “ಜಯಾ ಬಾಯಿ ಒಣಗಿತಾ, ನೀರು  ಕೊಡಲಾ, ಹಾಲು ಬಿಸಿ ಮಾಡಿ ತರಲಾ?.”

“ನೆಮ್ಮದಿಯಾಗಿ ನಿದ್ದೆ ಮಾಡಿ. ಸದಾ ನಿಮಗೆ ನಂದೇ ಚಿಂತೆ”  ಎಂದು ಅಮ್ಮ ಹುಸಿಮುನಿಸು ತೋರುವರು.

ಅಮ್ಮನ ಸಾನಿಧ್ಯದಲ್ಲಿ ಅವರ ಬೇಕುಬೇಡಗಳಿಗೆ ಲಕ್ಷ್ಯ ನೀಡುವುದೆ ಅಪ್ಪನ ಮೋಕ್ಷಸಾಧನೆಯ ಮಾರ್ಗ. ಹೀಗೆ ಅಮ್ಮನ ಕೊನೆ ಗಳಿಗೆಯವರೆಗೂ, ಅತಿ ಮಮಕಾರದಿಂದ ಕಾವಲಾಗಿದ್ದ ಅಪ್ಪ ಅಮ್ಮನ ಅಂತ್ಯ ಸಂಸ್ಕಾರ ಮುಗಿಸಿ ಬಂದ ಮಧ್ಯಾಹ್ನ ಮಾರನೆಯ ದಿನದ ಒಲೆಉರಿಗಾಗಿ, ಹಂಡೆಗೆ ತುಂಬಲು, ಕೈತೋಟದಲ್ಲಿ ದೊರೆಯುವ ಉರುವಲ ಸಾಧನವನ್ನು ಒಟ್ಟುಗೂಡಿಸುತ್ತಿದ್ದದು ನನಗೆ ಅಚ್ಚರಿ ಮೂಡಿಸಿತು. ನಮ್ಮ ಕಣ್ಣೆಲ್ಲ ಅತ್ತು ಅತ್ತು ಬಾತುಕೊಂಡಿದ್ದವು.

‘ಅಮ್ಮ ಹೋದ ದುಃಖ: ಇವರಿಗೆ ಇಲ್ಲವೆ ಇಲ್ಲ’ ಎಂಬ ಕೋಪವು ಬಂತು. ತಡೆಯದೆ ಕೇಳಿಬಿಟ್ಟೆ,  “ಅಲ್ಲ, ಅಮ್ಮ ಇರೋವರೆಗೂ ಒಂದು ಕ್ಷಣ ಬಿಟ್ಟಿರತಾ ಇರಲಿಲ್ಲ. ಈಗ ನೋಡಿದ್ರೆ, ಮಾಮೂಲಿನ ತರಹ ಆರಾಮಾಗಿ ಇದೀಯಾ, ಒಲೆಉರಿ ಸಿದ್ಧ ಮಾಡ್ತಿದೀಯಾ, ನಿಂಗೆ ಒಂದ್ಚೂರು ಬೇಜಾರಿಲ್ವಾ?”

ಅದಕ್ಕೆ ಅಪ್ಪನ ಪ್ರೌಢಿಮೆಯ ಉತ್ತರ, “ನಿಮ್ಮಮ್ಮ ಇರೋವರೆಗೂ ಅವಳನ್ನ ಚೆನ್ನಾಗಿ ನೋಡಿಕೊಂಡಿದೀವಿ. ಸಾವು ಅವಳ ನೋವಿಗೆ ದಿವ್ಯಔಷದವಾಗಿ, ಮುಕ್ತಿ ಕರುಣಿಸಿತು. ಅವಳು ಚೆನ್ನಾಗಿ ಆರೋಗ್ಯವಂತಳಾಗಿ ವಾಪಸ್ಸು ಬರೋದಾದರೆ ಹೇಳು ನಾನು ನಿಮ್ಮ ಜೊತೇಲಿ ಕೂತು ಬೇಕಾದಷ್ಟು ಅಳ್ತೀನಿ.” ಅದೆಂತಹ ಅದ್ಭುತವಾದವಾಸ್ತವಾಂಶ. ಆ ಮಾತಿಗೆ ಬದಲು ಹೇಳಲು ಏನಿದೆ?

ಇಂದು ಅಪ್ಪನ ವ್ಯಕ್ತಿತ್ವ ನೆನವಾಗ ಪ್ರತಿ ಸಣ್ಣ ಸಂಗತಿಯಲ್ಲೂ ಬದುಕಿನ ಉತ್ಕೃಷ್ಟತೆ ಕಂಡುಕೊಳ್ಳುವುದರಲ್ಲಿ ಎಂತಹ ಸಾರ್ಥಕತೆ ಇದೆ ಎಂಬುದೇ ನಾನು ಕಲಿತ ಪಾಠ. ಹಾಗೆ ಸರಳತೆಯಲ್ಲಿ ಶ್ರೇಷ್ಠತೆಯ ಅನನ್ಯತೆ ಹಾಸುಹೊಕ್ಕಾಗಿ ಅಲ್ಲಿ ಹೊಕ್ಕಳುಬಳ್ಳಿ ಸಂಬಂಧವೇ ಅಡಗಿದೆ ಎಂಬ ವಾಸ್ತವ ದರ್ಶನ.  ಆ ಕರ್ಮಯೋಗಿ,ವೈರಾಗ್ಯಮೂರ್ತಿಯ ಸಾರ್ಥಕ ಬದುಕಿನ ಬೆಳಕಿನ ಅನುಸಂಧಾನ ಕ್ರಮ ನಮ್ಮನ್ನೀಗ ಕಾಯುತ್ತಿದೆ, ಮಾರ್ಗಬಂಧುವಾಗಿ ಮುನ್ನಡೆಸುತ್ತಿದೆ ಎಂಬುದನ್ನು ಅವರ ಅಭಿಮಾನದ ಪುತ್ರಿಯಾದ ನಾನು ಬಲು ಅಕ್ಕರೆಯಿಂದ ದಾಖಲಿಸುತ್ತಿದ್ದೇನೆ.

– ಸಾಯಿಲಕ್ಷ್ಮಿ, ಬೆಂಗಳೂರು

24 Responses

 1. Hema says:

  ಆಪ್ತವಾದ ಬರವಣಿಗೆ ..ಸೊಗಸಾದ ನಿರೂಪಣೆ..ಇಷ್ಟವಾಯಿತು.

 2. ಬಿ.ಆರ್.ನಾಗರತ್ನ says:

  ಅಬ್ಬಾ ಎಂಥಹ ನೆನಪಿನಪ್ಪಿಗೆಯ ಆಪ್ತ ಬರವಣಿಗೆ ಸುಂದರ ನಿರೂಪಣೆ.ಅಭಿನಂದನೆಗಳು ಮೇಡಂ.

 3. Anonymous says:

  ಒಲೆ ಉರಿ ಹಾಕುವ ಕೆಲಸವೇ ಆಗಲಿ, ಎಮ್ಮೆ ಮೈ ತೊಳೆಯುವ ಕೆಲಸವೇ ಆಗಲಿ, ಪೂಜೆಗೆ ಹೂಮಾಲೆ ಪೋಣಿಸುವ ಕೆಲಸವೇ ಆಗಲಿ, ಶ್ರದ್ಧೆ ಯಿಂದ ಮಾಡುವುದು ನಮ್ಮ ಹಿರಿಯರ ಜೀವನ ಪ್ರೀತಿ, ಆದರೆ ಸಾಮಾನ್ಯ ವಿಷಯಕ್ಕೂ ಔನ್ನತ್ಯ ಕಲ್ಪಿಸುವ ನಿಮ್ಮ ಲೇಖನಿಯೊಂದು ಪರುಷ ಮಣಿ.

 4. Suma says:

  ನಮಸ್ತೆ ಮೇಡಂ. ಸೊಗಸಾದ ಬರಹ. ನಿಮ್ಮಲ್ಲಿ ತುಂಬಿರುವ ತಂದೆಯ ಬಗೆಗಿನ ಪ್ರೀತಿ ಪ್ರತಿ ಪದದಲ್ಲೂ ತುಂಬಿ ತುಳುಕುತ್ತಿದೆ. ಅಭ್ಯಂಜನ ಸ್ನಾನದ ವಿವರಣೆ ಕು ವೆಂ ಪು ಅವರ ಇದೇ ವಿಷಯದ ಬರಹ ಜ್ಞಾಪಿಸಿತು. ಒಟ್ಟಿನಲ್ಲಿ ಬಹಳ ಆಪ್ತವಾದ ಲೇಖನ. Thanks for sharing.

 5. ಸುಗುಣ ಸಿಂಹ says:

  ಒಲೆ ಉರಿ ಹಾಕುವ ಕೆಲಸವೇ ಆಗಲಿ, ಎಮ್ಮೆ ಮೈ ತೊಳೆಯುವ ಕೆಲಸವೇ ಆಗಲಿ, ಪೂಜೆಗೆ ಹೂಮಾಲೆ ಪೋಣಿಸುವ ಕೆಲಸವೇ ಆಗಲಿ, ಶ್ರದ್ಧೆ ಯಿಂದ ಮಾಡುವುದು ನಮ್ಮ ಹಿರಿಯರ ಜೀವನ ಪ್ರೀತಿ ಆದರೆ ಸಾಮಾನ್ಯ ವಿಷಯಕ್ಕೂ ಔನ್ನತ್ಯ ಕಲ್ಪಿಸುವ ನಿಮ್ಮ ಲೇಖನಿಯೊಂದು ಪರುಷ ಮಣಿ.

 6. ವಿದ್ಯಾ ಮೂರ್ತಿ says:

  ಬಹಳ ಆಪ್ತ ಬರಹ.ಸಾಯಿಲಕ್ಷ್ಮೀ, ಪುಣ್ಯ ಜೀವಿ ತೀರ್ಥರೂಪು.ನನಗೆ ನಮ್ಮ ಮನೆ ಹಂಡೆ ಸ್ನಾನದ ನೆನಪಾಯಿತು.

 7. Anonymous says:

  ನೋಡಿದೆ ಓದಿದೆ ಎಂದಿನ ಶೈಲಿ . ಯಾರೋ ಬಂದ್ರು ಕೂಡಿ ಅಂತ ಸನ್ನಿಸಿದೆ . ಕತೆ ಎಳೆ ಎಳೆಯಾಗಿ ಬಿಚ್ಚಿದೆ . ಹಂಡೆ ಕಾರಣ ಅಷ್ಟೇ, ಕುಟುಂಬದ ಅನ್ಯೋನ್ಯತೆ ಕತೆ ಪೂರಕ .ಕೊತ್ತಮರಿ ಸೊಪ್ಪಿಗು ಕಾದಂಬರಿಯ ಸ್ಥಾನ ಕೊಡುವ ಸೂಕ್ಷ್ಮ ಮತಿ ನಿಮ್ಮದು.

 8. Anonymous says:

  ಓಂ ದಿನಗಳು ಮರಳಿ ಬರಬಾರದೇ? ಇದೆಲ್ಲಾ ಸವಿ ನೆನಪು ಮಾತ್ರ

 9. T S SHRAVANA KUMARI says:

  ತುಂಬಾ ತುಂಬಾ ಚೆನ್ನಾಗಿದೆ. ಇಂತಹ ದಿನನಿತ್ಯದ ಕೆಲಸವನ್ನೂ ಒಂದು ವ್ರತದಂತೆ ಮಾಡುತ್ತಿದ್ದ ಅಂದಿನ ಕಾಲದವರ ಜೀವನ ಶ್ರದ್ಧೆಗೆ ದೊಡ್ಡ ಸಲಾಂ.

 10. ರತ್ನಾ ಮೂರ್ತಿ says:

  ಬಹಳ ಅದ್ಭುತವಾದ ನಿಮ್ಮ ಛಾಪನ್ನು‌ ಹೊತ್ತ ಬರಹ ಸಾಯಿಲಕ್ಷ್ಮೀ
  ಪತ್ನಿಯನ್ನು ಕಳೆದುಕೊಂಡ ಮಾರನೆದಿನ ಅವರಾಡಿದ ಮಾತು ಬದುಕಿನ ಮೀಮಾಂಸೆಯಂತಿದೆ.

 11. Savithri bhat says:

  ನಿಮ್ಮ ನೆನಪಿನ ಆಳದ ಬರವಣಿಗೆ ತುಂಬಾ ಚೆನ್ನಾಗಿತ್ತು.

 12. Kumuda Purushotham says:

  Very interesting and reflective narration. Makes good reading.

 13. ನಯನ ಬಜಕೂಡ್ಲು says:

  ಚಂದದ ಬರಹ

 14. A S CHANDRA MOULI says:

  A very touching tribute from a loving daughter to a caring father. The feelings exude depth and intense sincerity. Words of gratitude fill the write up. Family values then were the cementing force. It begot love respect and affection. The present generation is oblivious of these values. In such a context Sai Lakshmi’ efforts to reliven them is commendable

 15. vasundhara says:

  ಮನ ಮುಟ್ಟುವಂತಿದೆ ನಿಮ್ಮ ಬರವಣಿಗೆ ಅನುಭವಗಳನ್ನು
  ಮತ್ತೆ ಮತ್ತೇ ನಮ್ಮ ನೆನಪಿನಾಳದೊಳಗೆ ಮರುಕಳಿಸುವಂತೆ
  ಮಾಡಿದ್ದೀರಿ ಧನ್ಯವಾದಗಳು

 16. Anonymous says:

  Simply beautiful

 17. Jahnavi Rao says:

  ಹೃದಯ ಭಾರವಾಯಿತು ಸಾಯಿ!!ನಿನ್ನ ಅಮ್ಮ ಅಪ್ಪನ ಜೀವನ ಶೈಲಿನ ನೋಡಿದ , ಮಾತನಾಡಿಸಿದ ಸೌಭಾಗ್ಯ ನನ್ನದು ಎಂಬ ಸಮಾಧಾನ !!

 18. Anonymous says:

  ಓಹ್, ಅದೆಂತಹ ಸುಂದರವಾದ ಅಯಸ್ಕಾಂತೀಯ ಶಕ್ತಿ ನಿಮ್ಮ ಬರವಣಿಗೆಯಲ್ಲಿ ಇದೆ. ಹಂಡೆ ಕಥೆ, ಬೆರಣಿ ಕಥೆ, ಜೀವನ ಸಂಗಾತಿಯ ಕೊನೆಯ ಕ್ಷಣಗಳ ಸೇವೆ ಎಲ್ಲವನ್ನೂ ಮೀರಿದ ಸ್ಥಿತಪ್ರಜ್ಞತೆ , ಇಡೀ ಲೇಖನ ನನ್ನನ್ನು ೫೦ ವರ್ಷಗಳ ಕಾಲ ಹಿಂದಕ್ಕೆ ಕರೆದೊಯ್ಯಿತು.

 19. ಅಜಿತ್ ಪ್ರಸಾದ್ says:

  ಓಹ್, ಅದೆಂತಹ ಸುಂದರವಾದ ಅಯಸ್ಕಾಂತೀಯ ಶಕ್ತಿ ನಿಮ್ಮ ಬರವಣಿಗೆಯಲ್ಲಿ ಇದೆ. ಹಂಡೆ ಕಥೆ, ಬೆರಣಿ ಕಥೆ, ಜೀವನ ಸಂಗಾತಿಯ ಕೊನೆಯ ಕ್ಷಣಗಳ ಸೇವೆ ಎಲ್ಲವನ್ನೂ ಮೀರಿದ ಸ್ಥಿತಪ್ರಜ್ಞತೆ , ಇಡೀ ಲೇಖನ ನನ್ನನ್ನು ೫೦ ವರ್ಷಗಳ ಕಾಲ ಹಿಂದಕ್ಕೆ ಕರೆದೊಯ್ಯಿತು.

 20. ಹಳೆಯ ದಿನಗಳಿಗೆ ನನ್ನನ್ನು ನಿಮ್ಮ ಲೇಖನ ಕರೆದೊಯ್ಯಿತು. ಅಪ್ಪನ ಬೆರಣಿ ಪ್ರೀತಿ, ಹಂಡೆ ಪ್ರೀತಿ, ತಮ್ಮನ ಹಂಡೆ ಮತ್ತು ಭಯೋತ್ಪಾದಕ ನಿರೂಪಣೆ, ಒಂದಕ್ಕಿಂತ ಒಂದು ಘಟನೆಗಳು ಓದಿಸಿಕೊಂಡು ಹೋಯಿತು. ಕೊನೆಯ ದಿನಗಳಲ್ಲಿ ಜೀವನ ಸಂಗಾತಿಯನ್ನು ಕಳೆದುಕೊಂಡ ನಂತರ ಅಪ್ಪ ಸಾಧಿಸಿದ ನಿರ್ಲಿಪ್ತ ಮನೋಭಾವ ಬೆರಗು ಮೂಡಿಸಿತು.

 21. ಪುಟ್ಟಸ್ವಾಮಿ ಕೆ says:

  ಮೇಡಂ ನಿಮ್ಮ ತಂದೆಯವರ ಜೀವನಪ್ರೀತಿ ಮತ್ತು ಬತ್ತದ ಜೀವನೊತ್ಸಾಹ ಹಾಗು ಜಂಮದಾತರ್ ಸೇವೆ ಮಾಡಿ ಆಸ್ತಿಯನ್ನು ನಿರಾಕರಿಸಿದ ನಿಸ್ವಾರ್ಥ ಮನೋಭಾವ ಒಂದು ಹಿರಿಯ ತಲೆಮಾರು ಪ್ರತಿನಿಧಿಸುತ್ತಿದ್ದ ಅಪ್ಪಟ ಜೀವನ ಮೌಲ್ಯಗಳಿಗೆ ಮಾದರಿ. ಅಂಥವರ ಬದುಕಿನ ವಿವರಗಳನ್ನು ಓದಿದಾಗ ನಮ್ಮ ಮನಸ್ಸೂ ಆರ್ದ್ರ ವಾಗುತ್ತದೆ. ಇನ್ನು ತಂದೆಯ ನೆನಪಿಗಾಗಿ ತಂದ ಆ ಹಂಡೆ, ಅದರ ಬಗೆಗಿನ ಪ್ರೀತಿ ಅ ಹಂಡೆ ಯೊಳಗೆ ಇರುವ ಉಗುರು ಬೆಚ್ಚಗಿನ ನೀರು ಕೊಡುವ ಮುದವನ್ನೇ ನೀಡಿತು. ನೆನಪು ಎಂದೂ ಕಹಿಯಲ್ಲ ಎಂಬುದನ್ನು ನಿರೂಪಿಸಿತು. ಧನ್ಯವಾದಗಳು

 22. ಶಂಕರಿ ಶರ್ಮ says:

  ಬಹಳ ಆತ್ಮೀಯವಾದ ಸೊಗಸಾದ ಬರವಣಿಗೆಯು ತಮ್ಮ ತಂದೆಯವರ ದಟ್ಟ ಜೀವನ ಪ್ರೀತಿಯನ್ನು ನವಿರಾಗಿ ತಿಳಿಸಿದೆ.

 23. Deepti says:

  Mam
  So beautifully written!!! The description is wonderful !!! Ur father seems to be a karmayogi!!! The people in that generation lived a simple life. Loved simple things! A thamrada hande could give him so much of joy! Loved the heading surahonne!!!

 24. Deepti says:

  Really loved reading mam. So beautiful .. si touching!!! Wish people like ur father and those days come back!!!

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: