ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 4

Share Button


(
ಉ) ಇತಿಹಾಸ ನಿರ್ಮಾಪಕಿಯರು

ಎಂಟು ನೆಲೆಗಳಲ್ಲಿ:

ಕ್ರಿಸ್ತಪೂರ್ವದಲ್ಲಿದ್ದಂತೆ ಕ್ರಿಸ್ತಶಕೆಯಲ್ಲಿಯೂ ರಾಜಮನೆತನದ ಸ್ತ್ರೀಯರು ಮಾತ್ರ ರಾಜ್ಯಾಡಳಿತ ಮತ್ತು ಯುದ್ಧನೀತಿಗೆ ಸಂಬಂಧಿಸಿದಂತೆ, ವ್ಯಾಪಾರೀ ಮನೆತನದವರು ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ವಿದ್ಯಾಭ್ಯಾಸ ಪಡೆಯುತ್ತಿದ್ದರು; ರಾಜ್ಯಾಡಳಿತ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಆಸಕ್ತಿ ತೋರುತ್ತಿದ್ದರು. ಇತಿಹಾಸವು ಪ್ರಧಾನವಾಗಿ ರಾಜ್ಯಾಡಳಿತ ಮತ್ತು ರಾಜ್ಯಗಳ ಏಳುಬೀಳುಗಳ ಇತಿಹಾಸವೇ ಆಗಿದೆ. ಇತಿಹಾಸದಲ್ಲಿ ದಾಖಲಾಗಿರುವ ಸ್ತ್ರೀಯರು ಇಂಥ ಇತಿಹಾಸದ ನಿರ್ಮಾಪಕಿಯರಾಗಿರುವುದು ಸಹಜವೇ ಆಗಿದೆ.

ಇಂತಹವರನ್ನು ಎಂಟು ನೆಲೆಗಳಲ್ಲಿ ಗಮನಿಸಬಹುದು –

1 ಆಡಳಿತ ನಿರ್ವಹಣೆಯಲ್ಲಿ ಸಲಹೆ ಕೊಡುತ್ತಿದ್ದವರು ಮತ್ತು ಪ್ರಭಾವ ಬೀರುತ್ತಿದ್ದವರು: ರಾಮಾಯಣ ಕಾಲದ ಕೈಕೇಯಿ, ಕೌಸಲ್ಯೆ, ಮಹಾಭಾರತ ಕಾಲದ ಕುಂತಿ, ದ್ರೌಪದಿ ಮುಂತಾದವರು.

2 ರಾಜ್ಯಭಾರಕ್ರಮ ಅರಿತವರ ಮತ್ತು ಜನಸಾಮಾನ್ಯರ ಮೆಚ್ಚಿಗೆಗೆ, ಪ್ರೀತಿ ಗೌರವಗಳಿಗೆ ಪಾತ್ರರಾಗುವಂತೆ ಅಪ್ರಾಪ್ತ ವಯಸ್ಸಿನ ಮಗನ ಪರವಾಗಿ ರಾಜ್ಯವಾಳಿದವರು: ಕ್ರಿಸ್ತಪೂರ್ವ 2ನೇ ಶತಮಾನದಿಂದ ಕ್ರಿಸ್ತಶಕ 18ನೇ ಶತಮಾನದವರೆಗೆ ಕಾಣಿಸಿಕೊಂಡ ನಾಯನಿಕಾ, ಪ್ರಭಾವತಿ ಗುಪ್ತ, ವಿಜಯಾಂಬಿಕಾ, ರುದ್ರಾಂಬಾ, ಸುಗಂಧಾ, ದಿಡ್ಡಾ, ತಾರಾಬಾಯಿ, ಅಹಲ್ಯಾಬಾಯಿ, ಚೆನ್ನಮ್ಮ, ಭೈರಾದೇವಿ, ಲಕ್ಷ್ಮೀಬಾಯಿ, ಅಬ್ಬಕ್ಕದೇವಿ, ಚೆನ್ನಮ್ಮಾಜಿ, ರಜಿಯಾ ಸುಲ್ತಾನಾ, ಚಾಂದ್ ಬೀಬಿಯೇ ಮೊದಲಾದವರು.

3 ಚಾಲುಕ್ಯರ ಮತ್ತು ವಿಜಯನಗರ ಅರಸರ ಆಡಳಿತದ ಕಾಲದಲ್ಲಿ ಪ್ರದೇಶವೊಂದರ ರಾಜ್ಯಪಾಲರಾಗಿ ವೀರವಿಕ್ರಮದಿಂದ, ನ್ಯಾಯಪರತೆಯಿಂದ ಆಡಳಿತನಿರ್ವಹಿಸಿದ ಅಧಿಕ ಸಂಖ್ಯೆಯ ಶಾಸನೋಕ್ತ ಸ್ತ್ರೀಯರು: ನಾಗರಖಂಡದಲ್ಲಿ ಜಕ್ಕಿಯಬ್ಬೆ, ಕರ್ಗಲ್ಲಿನಲ್ಲಿ ಸರಮಬ್ಬೆ, ಎಡತೊರೆಯಲ್ಲಿ  ರೋಮಕ ನಿರ್ಮಡಿ, ಇಂಗುಳಿಕೆಯಲ್ಲಿ ಜಾಕಲದೇವಿ, ಪುರುಗೆರೆಯಲ್ಲಿ ಪಂಪಾದೇವಿ, ಕಿಸುನಾಡಿನಲ್ಲಿ ಅಕ್ಕಾದೇವಿ, ಬನವಾಸಿಯಲ್ಲಿ ಮೈಲಾದೇವಿ, ಕಣ್ಣಾನೂರು ಕೊಪ್ಪಗಳಲ್ಲಿ ಉಮಾದೇವಿ, ಪದ್ಮಲಾ, ಕಾಕಲಾ; ಧಾರವಾಡದಲ್ಲಿ ಕುಂಕುಮಾದೇವಿ, ಅಸುಂಡಿಯಲ್ಲಿ ಬಮ್ಮಲದೇವಿ, ಗುಂಟೂರಿನಲ್ಲಿ ರುದ್ರಾಂಬಾ ಮುಂತಾದವರು.

4  ಉತ್ತರಾಧಿಕಾರಿಯಾಗಿ ಮಗ ಇಲ್ಲದಿದ್ದಾಗ ಆಡಳಿತ ಸೂತ್ರ ಕೈಗೆತ್ತಿಕೊಂಡವರು: ಬನಾರಸಿನ ರಾಜ ಸನ್ಯಾಸಿಯಾದಾಗ, ಒರಿಸ್ಸಾದ ರಾಜ ಮತ್ತು ಅವನ ಮಗ ಇಬ್ಬರೂ ಸತ್ತುಹೋದಾಗ ಆಸ್ಥಾನಿಕರ ಮತ್ತು ಜನರ ಬೇಡಿಕೆಯ ಮೇರೆಗೆ ರಾಣಿಯೇ ರಾಜ್ಯಭಾರ ನಿರ್ವಹಿಸಿದಂತೆ ಪಾಂಡ್ಯರ ಆಳ್ವಿಕೆಯಲ್ಲಿ ರಾಜಕುಮಾರಿಯರು ಉತ್ತರಾಧಿಕಾರ ಪಡೆದುದಕ್ಕೆ ಮೆಗಾಸ್ತನೀಸನಂತಹವರು ಒದಗಿಸಿದ ದಾಖಲೆಗಳಿವೆ. ರಟ್ ರಾಜಮನೆತನದ ಗೌರೀ ತನ್ನ ತಂದೆಯ ನಂತರ ರಾಜ್ಯಕ್ಕೆ ಉತ್ತರಾಧಿಕಾರಿಯಾಗಿ ಸಿಂಹಾಸನವೇರಿದುದನ್ನು ಶಾಸನವು ದಾಖಲಿಸಿರುವಂತೆ ಪೇಷ್ವೆ ಬಾಲಾಜಿ ವಿಶ್ವನಾಥನ ಮಗಳು ಅನುಬಾಯಿ ಘೋರ್ಪಡೆ ತಂದೆಯ ರಾಜ್ಯಕ್ಕೆ ಉತ್ತರಾಧಿಕಾರಿಯಾಗಿ ಸಿಂಹಾಸನವೇರಿದುದನ್ನೂ ದಾಖಲಿಸುತ್ತದೆ, 18ನೇ ಶತಮಾನದಲ್ಲೂ ಈ ವ್ಯವಸ್ಥೆ ಮುಂದುವರೆದುಕೊಂಡು ಬಂದಿರುವುದನ್ನು ಸಮರ್ಥಿಸುತ್ತದೆ.

5 ದಂಡನಾಯಕಿತ್ತಿಯರಾಗಿ ಶತ್ರುಗಳ ಆಕ್ರಮಣವನ್ನು ಎದುರಿಸಿದವರು: ಅಲೆಕ್ಸಾಂಡರನ ಧಾಳಿಯನ್ನು ಎದುರಿಸಿದ ಮಸಗ ರಾಜ್ಯದ ರಾಣಿ, ಕಾಶಿಯ ರಾಜನನ್ನು ಸೋಲಿಸಿ ಅವನ ಸೆರೆಯಲ್ಲಿದ್ದ ಗಂಡನನ್ನು ಬಿಡಿಸಿದ ಕುಮಾರದೇವೀ, ಮಹಮದ್ ಇಬ್ನ್ ಕಾಸಿಂನೊಂದಿಗೆ ಹೋರಾಡಿದ ರಾಣೀಬಾಯಿ, ಬಹದ್ದೂರ್ ಷಹನ ಧಾಳಿಯನ್ನು ಎದುರಿಸಿದ ಕರ್ಮಾವತೀ ಮತ್ತು ಜವಾಹಿರಿಬಾಯಿ, ಕುತುಬುದ್ದೀನ್ ಐಬಕ್ ನೊಂದಿಗೆ ಹೋರಾಡಿದ ಕೂರ್ಮಾದೇವಿ, ಚೋಳರ ಧಾಳಿಯನ್ನು ಸದೆಬಡಿದ ಅಕ್ಕಾಬಾಯಿ. ಇವರೆಲ್ಲಾ ರಾಜ್ಯದ ಸ್ವಾತಂತ್ರ್ಯ, ಸ್ವಾಭಿಮಾನ, ಘನತೆಗಾಗಿ ಹೋರಾಡಿದ ದಂಡನಾಯಕಿತ್ತಿಯರು. ಸಾವು ಬಂದರೂ ರಣರಂಗದಿಂದ ಕಾಲ್ತೆಗೆಯದಿದ್ದವರು. ಅಂಥ ವರ್ಗಕ್ಕೆ ಸೇರಿದ ಪುರುಷರ ಸಾಲಿನಲ್ಲಿ ವಿಶೇಷವಾಗಿ ಹೊಳೆಯುವವರು.

6 ಜಯವಧುಗಳು: ಶೂರರೂ, ವೀರರೂ, ವಿಜೇತರೂ ಆದ ಸ್ತ್ರೀಯರನ್ನು ಜಯವಧುಗಳು ಎಂದು ಕರೆಯುತ್ತಿದ್ದರು. ಯುದ್ಧದಲ್ಲಿ ಜಯವಧುವಿನಂತೆ ಇರುತ್ತಿದ್ದ ಲಕ್ಷ್ಮೀಬಾಯಿ, ರೆಬ್ಬಲದೇವಿ, ಚಾಗಲದೇವಿ, ವಿಜಯಾಂಬಿಕೆಯರ ಜಯಘೋಷವನ್ನು ಶಾಸನಗಳು ಮಾಡಿವೆ. ಅನೇಕ ಕ್ಷತ್ರಿಯ ಮಹಿಳೆಯರು ಜನಸಾಮಾನ್ಯರ ಪರವಾಗಿ ದುಷ್ಟರ ವಿರುದ್ಧ ಹೋರಾಡಿದುದನ್ನೂ ಇವರೆಲ್ಲ ತೋರಿದ ಗಮನಾರ್ಹ ಕ್ಷಾತ್ರತೇಜಸ್ಸನ್ನು ಶಾಸನಗಳು ದಾಖಲಿಸಿವೆ. ಮೈಸೂರು ರಾಜ್ಯದ ಸಿದ್ಧನಹಳ್ಳಿಯ ರಕ್ಷಣೆಗಾಗಿ ಹೋರಾಡಿದವಳನ್ನು ಹೊಗಳುವ 1041ರ ಶಾಸನ, ಡಕಾಯಿತರನ್ನು ಓಡಿಸಿ ಗ್ರಾಮಸ್ಥರನ್ನು ರಕ್ಷಿಸಿದುದನ್ನು ಸ್ತುತಿಸುವ 1264ರ ಶಾಸನ, ಯಶಸ್ವೀ ದಂಡಯಾತ್ರೆ ಮಾಡಿ ಸಾಮ್ರಾಜ್ಯದ ಘನತೆಯನ್ನು ಎತ್ತರಿಸಿದವಳನ್ನು ವರ್ಣಿಸುವ ನೀಲಗುಂದದ ಶಾಸನ, ತಂದೆಯ ಕೊಲೆಯನ್ನು ಪ್ರತಿಭಟಿಸಿ ಹೋರಾಡಿ ಸಾವನ್ನಪ್ಪಿದವಳನ್ನು ಕೊಂಡಾಡುವ 1446ರ ಶಾಸನ, ದರೋಡೆಕೋರರನ್ನು ಅಟ್ಟಿ ವೀರಗಲ್ಲಿನ ಪ್ರಶಸ್ತಿ ಪಡೆದ ಹರಿಯಕ್ಕನನ್ನು ವರ್ಣಿಸುವ ಶಾಸನ ಇವೆಲ್ಲಾ ಜಯವಧುಗಳನ್ನು ಚಿತ್ರಿಸುವ ಕೆಲವು ಶಾಸನಗಳು.

7 ಸ್ವತಂತ್ರ ಸಾರ್ವಭೌಮರಂತೆ ರಾಜ್ಯವಾಳಿದವರು: ಇಂತಹವರ ಗುಂಪಿನಲ್ಲಿ ಗಮನ ಸೆಳೆಯುವವರು ಕಾಶ್ಮೀರದ ದಿಡ್ಡಾ, ಪ್ರಾಚೀನ ಒರಿಸ್ಸಾದ ಭೌಮಾಕರ ಮನೆತನದ ರಾಣಿಯರು.

ಕಾಶ್ಮೀರದ ದಿಡ್ಡಾ: ಕ್ರಿಸ್ತಶಕ 958ರಿಂದ 1003ರ ವರೆಗಿನ ಕಾಶ್ಮೀರದ ಇತಿಹಾಸದಲ್ಲಿ ದಿಡ್ಡಾಳದೇ ಪ್ರಮುಖ ಪಾತ್ರ. ಗಂಡ ಕ್ಷೇಮಗುಪ್ತನ ಹೆಸರನ್ನು ಒಳಗೊಳ್ಳುವಂತೆ ದಿಡ್ಡಕ್ಷೇಮ ಎಂದು ತನ್ನನ್ನು ಮುಂದಾಗಿಟ್ಟು ಗಂಡನನ್ನು ಅನಂತರದಲ್ಲಿಟ್ಟು ನಾಣ್ಯಗಳನ್ನು ಮುದ್ರಿಸುವಷ್ಟು ಈಕೆ ಪ್ರಭಾವಶಾಲಿ. ಅಪ್ರಾಪ್ತ ವಯಸ್ಕ ಮಗನ ಪರವಾಗಿ ರಾಜ್ಯಸೂತ್ರವನ್ನು ಕೈಗೆತ್ತಿಕೊಂಡ ಈಕೆ ಸಿಂಹಾಸನವನ್ನು ಕಬಳಿಸಲು ಪಿತೂರಿ ಮಾಡಿದವರನ್ನು ಸದೆಬಡಿದಳು. ತನ್ನ ಹಕ್ಕುದಾರಿಕೆಯ ವಿರುದ್ಧ ಬಂಡೆದ್ದವರನ್ನು ಹಣದಿಂದ ತನ್ನ ಕಡೆಗೆ ಸೆಳೆದುಕೊಂಡಳು. ಅವರನ್ನೇ ತನ್ನ ಪರವಾಗಿ ದಂಡಯಾತ್ರೆಗೆ ಕಳುಹಿಸಿದಳು. ಕೆಲಕಾಲದ ನಂತರ ಲಂಚ ತೆಗೆದುಕೊಂಡ ಆರೋಪದ ಮೇಲೆ ಅವರನ್ನು ಅಧಿಕಾರದಿಂದ ಹೊರದಬ್ಬಿದಳು. ಶೂರರ ಪಡೆಯಿಂದ ಅವರನ್ನು ಬಗ್ಗುಬಡಿದಳು.

ಗ್ರಾಮೀಣ ಶ್ರೀಮಂತರ ಬಂಡಾಯವನ್ನು ಮಂತ್ರಿಗಳ ಸಹಾಯದಿಂದ ತುಳಿದಳು. ಕೆಳಜಾತಿಯವನೊಬ್ಬನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಮೇಲ್ಜಾತಿಯವರ ದರ್ಪವನ್ನು ಮುರಿದಳು. ಕಾಶ್ಮೀರದ ಘನತೆಗೆ ಮಸಿ ಬಳಿಯುತ್ತಿದ್ದುದರ ಜೊತೆಗೆ ಕಾಶ್ಮೀರದ ಸಂಪತ್ತನ್ನೂ ದೋಚುತ್ತಿದ್ದ ಮತ್ತು ಸಮಯ ಸಾಧಿಸಿ ಪೀಠಸ್ಥ ರಾಜರ ಪ್ರಾಣವನ್ನೂ ತೆಗೆಯುತ್ತಿದ್ದ ದುಷ್ಟರ ಕೂಟವನ್ನು ಅಡಗಿಸಿದಳು. ತನ್ನದರ ಜೊತೆಗೆ ಕಾಶ್ಮೀರದ ಘನತೆಯನ್ನೂ ಎತ್ತರಿಸಿದವಳು ಕಾಶ್ಮೀರದ ದಿಡ್ಡಾ.

ಭೌಮಾಕರ ಸಾಮ್ರಾಜ್ಞಿಯರು: 9ನೇ ಶತಮಾನದ ಒರಿಸ್ಸಾದಲ್ಲಿ ಭೌಮಾಕರ ಸಾಮ್ರಾಟನ ಮಗ 3ನೇ ಶುಭಕರನು ಸತ್ತನಂತರ ಅಧಿಕಾರಕ್ಕೆ ಬಂದವಳು 1ನೇ ತ್ರಿಭುವನ ಮಹಾದೇವಿ. ಅವಳ ನಂತರ ಅಧಿಕಾರ ಪಡೆದವಳು 4ನೇ ಶುಭಕರನ ಹೆಂಡತಿ 2ನೇ ತ್ರಿಭುವನ ಮಹಾದೇವಿ. ಈಕೆಯ ನಂತರ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡವಳು 5ನೇ ಶುಭಕರನ ಹೆಂಡತಿ ಗೌರೀ ಮಹಾದೇವಿ. ಈಕೆಯ ನಂತರ ಈಕೆಯ ಮಗಳು ದಂಡೀ ಮಹಾದೇವಿ ಸಿಂಹಾಸನದ ಮೇಲೆ ಕುಳಿತವಳು. ಈಕೆಯ ನಂತರ ಸಿಂಹಾಸನವನ್ನು ತನ್ನದಾಗಿಸಿಕೊಂಡವಳು ಈಕೆಯ ಬಲತಾಯಿ ಬಕುಳ ಮಹಾದೇವಿ. ಈಕೆಯ ನಂತರ ಸಿಂಹಾಸನವನ್ನೇರಿದವಳು ಈಕೆಯ ಗಂಡನ ಅಣ್ಣ 3ನೇ ಶುಭಕರನ ಹೆಂಡತಿ ಧರ್ಮಮಹಾದೇವಿ. ಈಕೆಯ ನಂತರ ಭೌಮಾಕರ ಮನೆತನವು ಇತಿಹಾಸಕ್ಕೆ ಯಾವ ದಾಖಲೆಯ ಕಾಣಿಕೆಯನ್ನೂ ಕೊಡಲಿಲ್ಲ.

8 ಭಾರತದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರು:

ವ್ಯಾಪಾರ ಮಾಡಲೆಂದು ಕೋಠಿ ಕಟ್ಟಿಕೊಂಡು ಆಶ್ರಯ ಕೊಟ್ಟವರ ಪ್ರದೇಶಗಳನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡು ಸೈನ್ಯವನ್ನು ಸಹಾಯಕ್ಕೆ ಇಡುತ್ತೇವೆ ಎಂದೋ, ತನ್ನ ಸ್ನೇಹಿತರ ಶತ್ರುಗಳು ತಮಗೂ ಶತ್ರುಗಳೆಂದೋ, ತಮ್ಮಶತ್ರುಗಳ ಸ್ನೇಹಿತರೂ ತಮ್ಮ ಶತ್ರುಗಳೆಂದೋ, ದತ್ತುಮಕ್ಕಳಿಗೆ ಹಕ್ಕು ಇಲ್ಲ ಎನ್ನುವಂತಹ ತಮ್ಮ ನೀತಿಗಳನ್ನು ವಿರೋಧಿಸಿದರು ಎಂದೋ ಇತರ ರಾಜರ ಮೇಲೆ ಯುದ್ಧ ಹೂಡಿ ಕುತಂತ್ರದಿಂದ ಭಾರತವನ್ನು ನಿಧಾನವಾಗಿ ತಮ್ಮ ಅಧೀನಕ್ಕೆ ತೆಗೆದುಕೊಂಡ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಲಕ್ಷ್ಮೀಬಾಯಿಯ ಹೆಸರು ಅಜರಾಮರ. ಈಕೆಯ ಬಲಗೈಯಂತೆ ಈಕೆಯ ಹೋರಾಟದಲ್ಲಿ ಎಲ್ಲಾ ರೀತಿಯಲ್ಲಿಯೂ ಭಾಗಿಯಾದವಳು ಈಕೆಯ ನೆರೆ ರಾಜ್ಯದ ರಾಣಿ ಲಲಿತಾಬಾಯಿ ಭಕ್ಷಿ. ಇವರ ಸ್ತ್ರೀ ಸೈನ್ಯದ ಮುಂದಾಳಾಗಿ ಕೆಲಸಮಾಡಿದವರು ಜಲ್ ಕಾರಿ ಸುಂದರ್, ಕಾಶೀಬಾಯಿ, ಮುಂದರ್ ಮೊದಲಾದವರು.

ಈ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಯ ಕಿಡಿ ಎಂದು ಜನ ಗುರುತಿಸಿದುದು ದೆಹಲಿಯ ಜೀನತ್ ಮಹಲಳನ್ನು. ಈಕೆಯಂತೆಯೇ ಹೋರಾಟಕ್ಕೆ ನಿಂತವಳು ಭೂಪಾಲಿನ ನವಾಬ್ ಸುಲ್ತಾನ್ ಜೆಹಾನ್ ಬೇಗಂ. ಸ್ವಾತಂತ್ರ್ಯ ಸಂಗ್ರಾಮದ ಹರಿಕಾರನಾದ ನಾನಾ ಸಾಹೇಬನ ಸೋದರನಿಗೆ ರಕ್ಷಣೆಕೊಟ್ಟು ಬ್ರಿಟಿಷರೊಂದಿಗೆ ಯುದ್ಧಕ್ಕೆ ನಿಂತವಳು ತುಳಸಿಪುರದ ರಾಣಿ. ಇವರೆಲ್ಲರಂತೆ ಗಮನ ಸೆಳೆಯುವ ಇನ್ನೊಬ್ಬ ಮಹಿಳೆ ಇಂಟೆಲಿಜೆನ್ಸ್ ವಿಭಾಗದ ಮುಖ್ಯಾಧಿಕಾರಿಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಮೋತೀಬಾಯಿ.

(ಊ) ವಿವಿಧ ಕ್ಷೇತ್ರಗಳಲ್ಲಿ ಮಿಂಚಿದವರು

ಧಾರ್ಮಿಕ ಕ್ಷೇತ್ರ: ಬ್ರಿಟಿಷ್ ಆಡಳಿತ ಆರಂಭವಾಗುವ ಪೂರ್ವದಲ್ಲಿ ಭಾರತೀಯ ಸ್ತ್ರೀಯರು ದೇವಸ್ಥಾನ ಕಟ್ಟಿಸಿ, ದಾನ ದತ್ತಿ ಕೊಟ್ಟು, ದೇವಸ್ಥಾನ ಬಸದಿ ವಿಹಾರಗಳನ್ನು ಜೀರ್ಣೋದ್ಧಾರ ಮಾಡಿ ಧಾರ್ಮಿಕ ಕ್ಷೇತ್ರದಲ್ಲಿಯೂ ಪುರುಷರಂತೆ ತಮ್ಮ ಮುದ್ರೆ ಒತ್ತಿದ್ದಾರೆ. ಅವರಲ್ಲಿ ಅತ್ತಿಮಬ್ಬೆಗೆ ವಿಶಿಷ್ಟ ಸ್ಥಾನ. ಈಕೆ ಸುಮಾರು 200 ವರ್ಷಗಳ ಕಾಲ ಧಾರ್ಮಿಕ ಚಟುವಟಿಕೆಯ ಮಹತ್ವವನ್ನು, ಕಾರ್ಯವ್ಯಾಪ್ತಿಯನ್ನು ಅಳೆಯುವುದಕ್ಕೆ ಮಾನದಂಡ ಆಗಿದ್ದವಳು.

ಸಾಮಾಜಿಕ ಕ್ಷೇತ್ರ: ಸಮಾಜದ ಹಿತಚಿಂತನೆ ಮಾಡಿದ ಸ್ತ್ರೀಯರು ಪುರುಷರಂತೆ ಬ್ರಹ್ಮಪುರಿ, ಅಗ್ರಹಾರಗಳನ್ನು ರೂಪಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿದ್ದಾರೆ. ಬಾವಿ, ತೀರ್ಥ, ಅರವಟ್ಟಿಗೆ, ಆರಮೆ, ಛತ್ರಗಳನ್ನು ನಿರ್ಮಿಸಿ ಸಾಮಾಜಿಕರ ಅಗತ್ಯಕ್ಕೆ ಸ್ಪಂದಿಸಿದ್ದಾರೆ.

ಕಲಾಕ್ಷೇತ್ರ: ಸಂಗೀತ, ನೃತ್ಯಗಳಲ್ಲಿ ಪರಿಣತಿ ಪಡೆದ ಸ್ತ್ರೀಯರು ಆ ಕ್ಷೇತ್ರವನ್ನೂ ಸಮೃದ್ಧಗೊಳಿಸಿದ್ದಾರೆ. ಪಾತ್ರ ಜಗದಗಲೆ ಬಲಚಿದೇವಿ, ಪ್ರತಿಭಾ ಸರಸ್ವತಿ ರೆಬ್ಬಲ ದೇವಿ, ವಿವಿಧ ದೇಶ ಭಾಷಾ ಸಂಗೀತ ವಿದ್ಯಾಧರಿ ಕೇತಲದೇವಿ, ಶ್ರೀ ನೃತ್ಯ ವಿದ್ಯಾಧರಿ ಚಂದಲದೇವಿ, ಗೀತ ವಾದ್ಯ ನೃತ್ಯ ಸೂತ್ರಧಾರಿ ಶಾಂತಲೆ, ನೃತ್ಯ ರೂಪಕ ರಚನಾಕಾರ್ತಿ ಸರಸ್ವತಿಯ ಸಹಚರಿ ಗಂಗಾದೇವಿ ಮೊದಲಾದ ಬಿರುದಾಂಕಿತರು ಜನಸಾಮಾನ್ಯರ ಮತ್ತು ವಿದ್ವಾಂಸರ ಮೆಚ್ಚಿಗೆ ಪಡೆದ ಕಲಾವಿದೆಯರು.

ತತ್ತ್ವಚಿಂತನೆ: ಅವ್ವಯ್ಯಾರ್, ಜ್ಞಾನಾಬಾಯಿ, ಆಂಡಾಳ್, ಮೀರಾಬಾಯಿ, ಅಕ್ಕಮಹಾದೇವಿ, ಹೊನ್ನಮ್ಮ, ಗಿರಿಯಮ್ಮ ಮೊದಲಾದವರೆಲ್ಲ ತಾತ್ತ್ವಿಕ, ಆಧ್ಯಾತ್ಮಿಕ. ಗೀತ ಗೇಯಾತ್ಮಕ, ಸಾಹಿತ್ಯಕ ವಿಶೇಷತೆಯುಳ್ಳ ಸಾಹಿತ್ಯ ರಚಿಸಿದ ಹೆಗ್ಗಳಿಕೆಯುಳ್ಳವರು.

(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ :   http://surahonne.com/?p=31872

-ಪದ್ಮಿನಿ ಹೆಗಡೆ, ಮೈಸೂರು

3 Responses

  1. ನಯನ ಬಜಕೂಡ್ಲು says:

    ಅಪರೂಪದ ಮಾಹಿತಿಗಳನ್ನೊಳಗೊಂಡ ಸಂಚಿಕೆ

  2. ಅರ್ಥಪೂರ್ಣವಾದ ಬರಹ.ಧನ್ಯವಾದಗಳು

  3. ಶಂಕರಿ ಶರ್ಮ says:

    ಅಗಾಧ ಸಾಮರ್ಥ್ಯದ ಮಹಿಳೆಯರು ಮಾಡದ ಕೆಲಸಗಳಿಲ್ಲ ಎಂಬ ಅಮೂಲ್ಯ ಮಾಹಿತಿಯನ್ನು ತಮ್ಮ ಸತ್ವಪೂರ್ಣ ಬರಹವು ಒದಗಿಸುತ್ತಿದೆ..ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: