ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 6

Share Button

ಪ್ರತಿಭಟನಾಕಾರರಾಗಿ:

ಇಂದಿನ ಮುಖ್ಯ ಸಮಸ್ಯೆಗಳಾದ ಲಂಚ, ಭ್ರಷ್ಟಾಚಾರ, ಅಪರಾಧಿಗಳ ಅಧಿಕಾರ-ಗ್ರಹಣ, ಅಂತರ್ಜಾತೀಯ, ಅಂತರ್ಧಮೀಯ ಸಂಘರ್ಷ, ಸಬಲರಿಂದ ದುರ್ಬಲರ ಶೋಷಣೆ, ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತಾತ್ಮಕ ಮೌಲ್ಯಗಳ ನಿರಾಕರಣೆ, ಜಾಗತೀಕರಣ, ಹಾಗೂ ಉದಾರೀಕರಣಗಳ ದುಷ್ಪರಿಣಾಮಗಳ ಅಧ್ಯಯನ ಮತ್ತು ಅವುಗಳ ಬಗೆಗೆ ಜಾಗೃತಿ ಮುಂತಾದವುಗಳನ್ನು ಗಮನಿಸುವ ಮತ್ತು ಆ ದಿಕ್ಕಿನಲ್ಲಿ ತೀವ್ರವಾಗಿ ಕಾರ್ಯೋನ್ಮುಖವಾಗುವ ಸಂಸ್ಥೆಯ ಸ್ಥಾಪನೆಯೂ ಆಗಿದೆ. ಈ ಸಂಸ್ಥೆ ಉಗ್ರವಾದ ಆದರೆ ಶಾಂತಿಯುತವಾದ ಪ್ರತಿಭಟನಾ ಕೂಟಗಳನ್ನು ಏರ್ಪಡಿಸುತ್ತದೆ. ಅತ್ಯಾಚಾರ, ವರದಕ್ಷಿಣೆ ಸಂಬಂಧಿ ಸಾವು, ಆತ್ಮಹತ್ಯೆ, ಹಸಿವು, ಕಪ್ಪುಹಣ, ಪ್ರಾಣಾಂತಿಕ ಆಹಾರ-ಕಲಬೆರಕೆ ಮುಂತಾದ ಸ್ತ್ರೀ-ವಿರೋಧಿಯೂ ಆದ ಸಂಗತಿಗಳನ್ನೂ ಸಮಾನ ತೀವ್ರತೆಯಿಂದ ವಿರೋಧಿಸುತ್ತದೆ. ಮುಖ್ಯವಾಗಿ ಸ್ತ್ರೀಯರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಈ ಸಂಸ್ಥೆ ಶ್ರಮಿಸುತ್ತಿದೆ.

ದುರ್ಬಲರ ಸಬಲೀಕರಣ:

ಅತ್ಯಾಚಾರಕ್ಕೆ ಒಳಗಾದ, ಗಂಡನ ಕ್ರೌರ್ಯಕ್ಕೆ ತುತ್ತಾದ, ಅತಿಯಾಗಿ ಮನೆಗೆಲಸದ ಭಾರ ಹೊರುವ ನಿರ್ಬಂಧಕ್ಕೆ ಒಳಗಾದ, ಲೈಂಗಿಕ ಶೋಷಣೆಗೆ ಒಳಗಾದ ಸ್ತ್ರೀಯರಿಗೆ ರಕ್ಷಣೆ ಮತ್ತು ಭರವಸೆ ನೀಡುವ; ಮನರಂಜನೆ, ವಿಶ್ರಾಂತಿ, ಅಭಿವ್ಯಕ್ತಿ ಸ್ವಾತಂತ್ರ್ಯಗಳಿಂದ ವಂಚಿತರಾದ ದುರ್ಬಲ ಸ್ತ್ರೀಯರ ಪರವಾಗಿ ನಿಲ್ಲುವ ಜವಾಬ್ದಾರಿಯುತ ಸಂಸ್ಥೆಯೂ ತಲೆಯೆತ್ತಿದೆ. ಇದು ತೊಂದರೆಗೆ ಸಿಕ್ಕಿಕೊಂಡವರಿಗೆ ತಾತ್ಕಾಲಿಕ ವಸತಿ ಸೌಕರ್ಯ ಒದಗಿಸುವುದು, ಅವರ ಪರವಾಗಿ ಕಾರ್ಯಾಚರಣೆಗೆ ತೊಡಗುವ ಕಾರ್ಯಕರ್ತರ ಅಂತರ್ಜಾಲವನ್ನು ರೂಪಿಸುವುದು, ಸಾರ್ವಜನಿಕರಲ್ಲಿ ಮಹಿಳೆಯರ ಸಮಸ್ಯೆಗಳ ಬಗೆಗೆ ಅರಿವನ್ನು ಮೂಡಿಸುವುದೇ ಮುಂತಾದ ಕಾರ್ಯಕ್ರಮಗಳನ್ನು ಹೊಂದಿದೆ. ಇದು ಶೋಷಿತರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಅವರ ದೂರು ದುಮ್ಮಾನಗಳನ್ನು ಸುಪ್ರೀಂಕೋರ್ಟಿನವರೆಗೂ ಒಯ್ದಿದೆ. ಅವರಲ್ಲಿ ಜೀವನೋತ್ಸಾಹ ತುಂಬಿದೆ. ಸ್ತ್ರೀಯರನ್ನು ಒಟ್ಟಾರೆ ಸಬಲಗೊಳಿಸುವ ಕ್ಷೇತ್ರ, ರೀತಿ, ವಿಧಾನಗಳ ಬಗೆಗೆ ಸಂಶೋಧನೆ ನಡೆಸುತ್ತಿದೆ.

ಅಸಂಘಟಿತ ಸ್ತ್ರೀಯರ ಕಲ್ಯಾಣ:

ಗೃಹ ಉದ್ಯೋಗಿಗಳು, ಬೀದಿಯಲ್ಲಿ ಮಾರಾಟಮಾಡುವವರು, ಕೃಷಿ ಕಾರ್ಮಿಖರು, ದಿನಗೂಲಿಗಳು, ನಿರ್ದಿಷ್ಟ ಋತುವಿನಲ್ಲಿ ಕೆಲಸ ಪಡೆಯುವವರೇ ಮೊದಲಾದ ಅಸಂಘಟಿತ ಸ್ತ್ರೀಯರ ಪರವಾಗಿ ಕೆಲಸಮಾಡುವ ಸಂಸ್ಥೆಯೂ ರೂಪುಗೊಂಡಿದೆ. ಇದು ಅನಕ್ಷರಸ್ಥರ ಹಣದ ಬೇಡಿಕೆಯನ್ನು ಪೂರೈಸುತ್ತದೆ. ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯಲು ಶ್ರಮಿಸುತ್ತದೆ ವೃತ್ತಿಕೌಶಲ್ಯ ಹೆಚ್ಚಿಸಿಕೊಳ್ಳಲು ತರಬೇತಿ ನೀಡುತ್ತದೆ. ಹೆರಿಗೆ ಸೌಲಭ್ಯ, ಕ್ರೆಚೆ, ಆಸ್ಪತ್ರೆಗಳ ಸೌಕರ್ಯ ಮೊದಲಾದವುಗಳು ದೊರೆಯುವಂತೆ ನೋಡಿಕೊಳ್ಳುತ್ತದೆ.

 ಸ್ತ್ರೀ ಸ್ವ ಸಹಾಯ ಸಂಘಗಳು:

ಸ್ತ್ರೀಯರ ಪರವಾಗಿ ಕೆಲಸ ಮಾಡುವ ಹಲವಾರು ಸಂಸ್ಥೆಗಳು ವ್ಯಕ್ತಿಯೊಬ್ಬನ ನೇತೃತ್ವದಲ್ಲಿ, ಟ್ರಸ್ಟ್ ಒಂದರ ನಿರ್ದೇಶನದಲ್ಲಿ, ಸರ್ಕಾರದ ನೆರವಿನಲ್ಲಿ, ದೇಶ ವಿದೇಶದವರ ಔದಾರ್ಯದಲ್ಲಿ, ಫಲಾನುಭವಿಗಳ ಸ್ವಸಹಾಯ ಸಂಘಟನೆಗಳ ಮಾಧ್ಯಮದಲ್ಲಿ – ಹೀಗೆ ಬಹುಮುಖೀ ನೆಲೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಎಲ್ಲ ರಂಗಗಳಲ್ಲೂ ಸ್ತ್ರೀ ಪುರುಷ ಭೇದವಿಲ್ಲದೆ ಸ್ತ್ರೀಯರು ಕಾರ್ಯನಿರತರಾಗಲು ಪ್ರೋತ್ಸಾಹ ಪೋಷಣೆ ಕೊಡುತ್ತಿವೆ. ಸ್ತ್ರೀಯರು ಸಾಂಪ್ರದಾಯಿಕ ಲಿಂಗಾಧಾರಿತ ವಿಭಾಗೀಕರಣದ ಅಡ್ಡಗೋಡೆಗಳನ್ನು ಮುರಿಯಲು ಪ್ರೇರಕವಾಗುವ ಮನಸ್ಥಿತಿಯನ್ನು ರೂಢಿಸುತ್ತಿವೆ.

ಬಗೆ ಬಗೆಯ ಉದ್ದೇಶಗಳಿಗಾಗಿ ರೂಪುಗೊಳ್ಳುತ್ತಿರುವ ಸ್ವಸಹಾಯ ಸಂಘಗಳ ಕಾರ್ಯಶೀಲ ಸ್ತ್ರೀ ಸದಸ್ಯರು ಔದ್ಯೋಗಿಕ ಪರಿಣತಿಯಿಂದ ಬೇರೆ ಬೇರೆ ಔದ್ಯೋಗಿಕ ಸಂಸ್ಥೆಗಳಲ್ಲಿಯ ಸ್ಥಿರ ಸ್ತ್ರೀ ಉದ್ಯೋಗಿಗಳಂತೆ ಕುಟುಂಬ ಮತ್ತು ಸ್ವ ಉದ್ಯೋಗಗಳೆರಡನ್ನೂ ಸಮತೂಗಿಸಿದ್ದಾರೆ. ಆರ್ಥಿಕವಾಗಿ, ಮಾನಸಿಕವಾಗಿ. ಬೌದ್ಧಿಕವಾಗಿ ದೃಢ ವ್ಯಕ್ತಿತ್ವವುಳ್ಳವರಾಗುತ್ತಿದ್ದಾರೆ. ಕಲಾತ್ಮಕವಾಗಿ, ಸೃಜನಶೀಲರಾಗಿ ತಮ್ಮನ್ನು ಅಭಿವ್ಯಕ್ತ ಪಡಿಸಿಕೊಳ್ಳುತ್ತಿದ್ದಾರೆ. ಸ್ತ್ರೀಪರವಾದ ಮಾನವಹಕ್ಕುಗಳ ಪ್ರತಿಪಾದನೆ, ಮಾನವ ಸಂಪನ್ಮೂಲಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವೇದಿಕೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಸ್ತ್ರೀಯರ ಸಬಲೀಕರಣ:

ಗ್ರಾಮೀಣ ಸ್ತ್ರೀಯರಲ್ಲೂ 20ನೇ ಶತಮಾನದ ಕೊನೆಯ ದಶಕದಲ್ಲಾದರೂ ಸ್ವಾತಂತ್ರ್ಯ, ಸಮಾನತೆ, ಗೌರವಯುತ ಆತ್ಮವಿಶ್ವಾಸಗಳಿಂದ ಕೂಡಿದ ಬದುಕಿನ ಕಲ್ಪನೆಯನ್ನು ಮೂಡಿಸಲು ಸಾಧ್ಯವಾಗಿರುವುದು ಸಹಸ್ರಮಾನದ ಆಶಾಕಿರಣ. ಈಗ ಗ್ರಾಮೀಣ ಸ್ತ್ರೀಯರಿಗೂ ತಮ್ಮ ಬೇಡಿಕೆಗಳೇನು, ದೌರ್ಬಲ್ಯಗಳೇನು ಎಂಬುದು ಅರ್ಥವಾಗುವಂತಾಗಿದೆ. ಅಗತ್ಯಗಳ ಪೂರೈಕೆ ಮತ್ತು ದೌರ್ಬಲ್ಯಗಳ ನಿವಾರಣೆಗಳಿಗಾಗಿ ಸಂಘಟಿತರಾಗುತ್ತಿದ್ದಾರೆ. ಮನೆಯನ್ನು ಮಾತ್ರವಲ್ಲದೆ ಸಮಾಜವನ್ನೂ ಮುನ್ನಡೆಸುವ ಸಾಮರ್ಥ್ಯ ತಮಗಿರುವುದನ್ನು ಕಂಡುಕೊಳ್ಳುತ್ತಿದ್ದಾರೆ. ಚುನಾವಣೆಗೆ ಧೈರ್ಯದಿಂದ ನಿಲ್ಲುತ್ತಿದ್ದಾರೆ. ಜಯಶೀಲರಾಗಿ ಜನಹಿತಕ್ಕಾಗಿ ಗ್ರಾಮೀಣ ಸರ್ಕಾರಿ ಯಂತ್ರವಾದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ರಾಜ್ಯದ ಮತ್ತು ದೇಶದ ರಾಜಕೀಯದಲ್ಲೂ ಕೈ ಆಡಿಸ ಬಯಸುವ ಗ್ರಾಮೀಣ ಸ್ತ್ರೀಯರು ಅಕ್ಷರಸ್ಥರಾಗುತ್ತಿದ್ದಾರೆ. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ತಮ್ಮ ಛಾಪನ್ನು ಮೂಡಿಸ ಬಯಸಿದರೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದೇ ಮುಖ್ಯ ಎಂದು ಯೋಚಿಸುವ ಗ್ರಾಮೀಣ ಸ್ತ್ರೀಯರು ತಮಗೆ ದೊರೆಯುವ ಎಲ್ಲಾ ಸೌಕರ್ಯಗಳನ್ನು ಬಳಸಿಕೊಂಡು ಸ್ವ ಉದ್ಯೋಗಿಗಳಾಗುತ್ತಿದ್ದಾರೆ. ವೈಯಕ್ತಿಕ ಮತ್ತು ರಾಷ್ಟ್ರದ ವಿವಿಧಮುಖೀ ಬಡತನ ನಿರ್ಮೂಲನಾ ಕಾರ್ಯ ಹಾಗೂ ಮಾನವ-ಅಭಿವೃದ್ಧಿ ಕಾರ್ಯಕ್ರಮಗಳ ಯಶಸ್ಸಿಗೆ ತಮ್ಮದೇ ಆದ ಕಾಣಿಕೆಯನ್ನು ಕೊಡುತ್ತಿದ್ದಾರೆ.

4

ಕ್ರಮಿಸಬೇಕಾದ ಹಾದಿ

ಸ್ತ್ರೀಯರು ಕ್ರಿಸ್ತಪೂರ್ವದಿಂದಲೂ ಪುರುಷರ ಶಕ್ತಿ ಸಾಮರ್ಥ್ಯಗಳಿಗೆ ಸಮಾನವಾಗಿಯೇ ತಮ್ಮನ್ನು ತೆರೆದಿಟ್ಟುಕೊಳ್ಳುತ್ತಾ ಬಂದಿದ್ದರೂ ಒಟ್ಟಾರೆ ಸ್ತ್ರೀ ಸಮೂಹವನ್ನು ಗಮನಿಸಿದಾಗ ಅವರ ಪ್ರಕಟಣೆ ನಗಣ್ಯ ಎಂದೇ ಹೇಳಬೇಕು. ಸ್ತ್ರೀಯರ ಜವಾಬ್ದಾರಿ ಗಂಡಸರಿಗಿಂತ ಭಿನ್ನ. ತಾಯ್ತನದ ಸಮರ್ಥ ನಿರ್ವಹಣೆ ಅವರಿಗೆ ತಮ್ಮನ್ನು ತೋರಿಸಿಕೊಳ್ಳುವುದಕ್ಕಿಂತ ಇತರರನ್ನು ಪೋಷಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುವಂತೆ ಅವರನ್ನು ಒಂದು ರೀತಿಯಲ್ಲಿ ಒತ್ತಾಯಿಸುತ್ತದೆ ಎಂದೇ ಹೇಳಬೇಕು. ಅವರು ಬಹು ಮಟ್ಟಿಗೆ ತೆರೆಯ ಹಿಂದೆಯೇ ಕಾರ್ಯನಿರತರಾಗಿ ಉಳಿದು ಅಗತ್ಯದ ಸಂದರ್ಭಗಳಲ್ಲಿ ಮಾತ್ರ ಮುನ್ನೆಲೆಗೆ ಬರುವುದರಿಂದ ಅವರ ಕಾರ್ಯ ನಿರ್ವಹಣೆಯಲ್ಲಿ ತಂತ್ರಗಾರಿಕೆಯ ಕೊರತೆ ಕಾಣಬಹುದು. ಸಂದರ್ಭವನ್ನು ಅದರ ಎಲ್ಲಾ ಮುಖಗಳಲ್ಲಿ ಅತಿ ಸೂಕ್ಷ್ಮವಾಗಿ ವಿವೇಚಿಸುವುದರಲ್ಲಿ, ದೂರಗಾಮಿ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಬಹುದು. ಸಂದರ್ಭವೊಂದು ಬಹುಮುಖಿಯಾಗಿ ಹೇರುವ ಒತ್ತಡದ ಭಾರವನ್ನು ಹೊರಲಾಗದೆ ಕುಸಿಯಬಹುದು.

ಇವೆಲ್ಲಾ ಮಿತಿಗಳು ಪುರುಷರಿಗೆ ಸ್ತ್ರೀಯರನ್ನು ಹಿನ್ನೆಲೆಗೆ ತಳ್ಳುವುದಕ್ಕೆ ಕಾರಣ ಆಗಬಾರದು ಎಂಬುದಕ್ಕೆ ಸ್ತ್ರೀಯರು ಸಮಾನತೆಯ ಹಾದಿಯಲ್ಲಿ ಕ್ರಮಿಸಿದ ಹೆಜ್ಜೆಗಳು, ಊರಿದ ಮೈಲಿಗಲ್ಲುಗಳು ಸಮರ್ಥ ಆಧಾರಗಳು. ಪ್ರಜಾಪ್ರಭುತ್ವದ ಒಂದು ಆಶಯ ಎಲ್ಲರೂ ಒಟ್ಟುಗೂಡಿ ಸಮೃದ್ಧವಾಗಿ ಬದುಕುವ ದಾರಿಯಲ್ಲಿ ಹೆಜ್ಜೆಹಾಕಬೇಕು; ದಾಪುಗಾಲು ಹಾಕುತ್ತಾ ಮುಂದೆ ಮುಂದೆ ಸಾಗಿ ಇತರರನ್ನು ಕೀಳಾಗಿಯಾಗಲೀ ಅಥವಾ ಅಯ್ಯೋ ಪಾಪ ಎಂದು ಕರುಣೆಯಿಂದಾಗಲೀ ಕಾಣಬಾರದು; ಹಿಂದೆ ಬಿದ್ದವರನ್ನು ಮುಂದಕ್ಕೆ ಬರುವಂತೆ ಪ್ರೋತ್ಸಾಹಿಸುವ ಮನಸ್ಥಿತಿ ನಮ್ಮೆಲ್ಲರದೂ ಆಗಬೇಕು; ಯಾರೊಬ್ಬರ ಸಾಮರ್ಥ್ಯವೂ ಇತರರ ಸಾಮರ್ಥ್ಯಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಅಲ್ಲ; ಅದಕ್ಕೆ ಅದರದೇ ಆದ ಮಹತ್ವ ಇದೆಯೆಂಬುದನ್ನು ಮನಗಾಣುವುದು ಬಹಳ ಮುಖ್ಯವಾದದ್ದು.

ಪುರುಷರದ್ದಕ್ಕಿಂತ ಸ್ತ್ರೀಯರ ಪರಿಸ್ಥಿತಿ ಗೌರವದಿಂದ, ಆತ್ಮಾಭಿಮಾನದಿಂದ, ಸ್ವಾವಲಂಬಿಗಳಾಗಿ ಬದುಕುವುದಕ್ಕೆ ಅನನುಕೂಲ ಆಗಿರುವುದಕ್ಕೆ ಹಲವಾರು ಕಾರಣಗಳು ಇವೆ: ಬಡವರು ಮತ್ತು ಶ್ರೀಮಂತರ ನಡುವಿನ ಗಮನಾರ್ಹ ಅಂತರದಿಂದಾಗಿ ಸ್ತ್ರೀ ಸಮೂಹದಲ್ಲಿಯ ಅನಕ್ಷರತೆ, ವೃತ್ತಿ ಅಕುಶಲತೆ, ಅಯೋಜಿತ ರೀತಿನೀತಿಗಳ ಜೊತೆಗೆ ಮುನ್ನುಗ್ಗುವಿಕೆ, ಮುಂಧೋರಣೆ, ಯೋಜಿತ ಬದುಕು ಹಾಗೂ ನಾಯಕತ್ವದ ಅಭಾವಗಳೂ ಎದ್ದುಕಾಣುತ್ತಿವೆ. ಸಮಾಜದ ವಿವಿಧ ವರ್ಗಗಳ ನಡುವೆ ಬಲವಾಗಿಯೇ ಇರುವ ಬಗೆ ಬಗೆಯ ತಡೆಗೋಡೆಗಳು ಮುಂದೆ ಬರುವ ಸ್ತ್ರೀಯರಿಗೆ ತೊಡರುಗಾಲು ಆಗುತ್ತಿವೆ. ಪುರುಷನ ಶ್ರೇಷ್ಠತೆಯನ್ನು, ಪುರುಷ ಪ್ರಧಾನ ಸಮಾಜವನ್ನು ಹಾಗೂ ಪುರುಷ ಪ್ರಧಾನ ಮೌಲ್ಯಗಳನ್ನು ಸಹಜವೆಂಬಂತೆ ಒಪ್ಪಿಕೊಳ್ಳುವ ಮನಸ್ಥಿತಿ, ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿಯಿಂದಾಗಿ ಮತ್ತು ರಕ್ಷಣಾ ಕೋಟೆಗೋಡೆಯೊಳಗೇ ತಮ್ಮೆಲ್ಲಾ ಸಾಧ್ಯತೆಗಳನ್ನು ವಾಸ್ತವಗೊಳಿಸಬೇಕಾಗಿರುವುದರಿಂದ ಸ್ತ್ರೀಯರಿಗೆ ಬಂಡವಾಳಶಾಹಿಗಳ, ದಲ್ಲಾಳಿಗಳ, ಮಧ್ಯವರ್ತಿಗಳ, ಸಬಲರ ಶೋಷಣೆಗಳನ್ನು ಎದುರಿಸುವ ಜ್ಞಾನ ಮತ್ತು ಧೈರ್ಯ ಸೀಮಿತವಾಗಿಯೇ ಇವೆ.

                 ಹೀಗಾಗಿ ಸಮಾನತೆಯ ಸಾಧನೆಯ ಹಾದಿಯಲ್ಲಿ ಸ್ತ್ರೀಯರು ಸಾಕಷ್ಟು ಕ್ರಮಿಸಿದ್ದರೂ ಅವರು ಸಾಗಬೇಕಾದದ್ದು ಬಹಳವೇ ಇದೆ, ಸಾಗಬಲ್ಲರು, ಸಾಗುತ್ತಾರೆ ಎನ್ನುವ ವಿಶ್ವಾಸವೂ ಇದೆ.

(ಮುಗಿಯಿತು)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ :http://surahonne.com/?p=32009

ಕೆ.ಎಲ್. ಪದ್ಮಿನಿ ಹೆಗಡೆ,   ಮೈಸೂರು 

6 Responses

 1. ನಯನ ಬಜಕೂಡ್ಲು says:

  ಇಷ್ಟು ದಿನ ಮೂಡಿ ಬಂದ ಲೇಖನ ಸರಣಿ ಬಹಳ ಚೆನ್ನಾಗಿತ್ತು

 2. sudha says:

  Well studied and written

 3. Padma Anand says:

  ಸ್ರೀಯರ ಬಗ್ಗೆ ಇರುವ ಧೋರಣೆಯನ್ನು ತೆರೆದಿಡುವುದರ ಜೊತೆಗೆ ಅವರ ಶಕ್ತಿ ಮಹತ್ವವನ್ನೂ ತಿಳಿಸಿಕೊಡುವ ಪ್ರಬುದ್ಧ ಲೇಖನ. ಮೆಚ್ಚುಗೆಯಾಯಿತು. ಅಭಿನಂದನೆಗಳು.

 4. ಶಂಕರಿ ಶರ್ಮ says:

  ಅನಾದಿಕಾಲದಿಂದ ಇಂದಿನ ವರೆಗೆ ಸಮಾಜದಲ್ಲಿ ಸ್ತ್ರೀಯರ ಪರಿಸ್ಥಿತಿ, ಸಮಾನತೆಗಾಗಿ ಅವರು ಮಾಡಿದ ಹೋರಾಟದ ರೀತಿ, ಮುಂದೆ ಅವರು ಸವೆಸಬೇಕಾದ ಹಾದಿ ಎಲ್ಲವನ್ನೂ ಹಂತ ಹಂತವಾಗಿ ಬಿಚ್ಚಿಟ್ಟ ಈ ಪ್ರಬುದ್ಧ ಲೇಖನವು ಸಂಗ್ರಹಯೋಗ್ಯವಾಗಿದೆ. ಧನ್ಯವಾದಗಳು, ಪದ್ಮಿನಿ ಮೇಡಂ.

 5. K. L, Padmini Hegade says:

  Friends,
  Thank you very much for your useful and encouraging comments. Special thanks to Hemamala Madam for publishing my lenthy article. Of-course there are limitations to my article. I cannot give full information on the pioneers who worked for their own personal integrity and also for the wellbeing of their society. Posted Comments motivated me to go for further reading on the upholders of women dignity. Thanku all.
  With regards
  Padmini Hegade

  • Hema says:

   ಸಾಧಕಿಯರನ್ನು ಗುರುತಿಸಿ, ಅವರ ಬಗ್ಗೆ ಅಧ್ಯಯನ ಮಾಡಿ ಬರೆದ ಪ್ರೌಢಬರಹದ ಲೇಖನ ಸರಣಿಯು ಸುರಹೊನ್ನೆಯಲ್ಲಿ ಪ್ರಕಟವಾದುದು ನಮಗೂ ಸಂತಸವಾಯಿತು. ಧನ್ಯವಾದಗಳು ಮೇಡಂ. .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: