ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 19 : ಸೋಮನಾಥ ದೇವಾಲಯ
‘ಭಾಲ್ಕಾ ತೀರ್ಥ್’ ನಿಂದ 4ಕಿಮೀ ದೂರದಲ್ಲಿ ಗುಜರಾತಿನ ಪ್ರಸಿದ್ಧವಾದ ಸೋಮನಾಥ ಕ್ಷೇತ್ರವಿದೆ. ಸಂಜೆಯ ವೇಳೆಗೆ ಸೋಮನಾಥ ತಲಪಿದೆವು. ಅರಬೀ ಸಮುದ್ರ ತೀರದಲ್ಲಿ ಕಂಗೊಳಿಸುವ ಭವ್ಯವಾಗಿರುವ ಮಂದಿರವಿದು. ಈ ದೇವಾಲಯಕ್ಕೆ ಹೋಗುವ ಮುನ್ನ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಕೈಯಲ್ಲಿ ಬ್ಯಾಗ್ , ಮೊಬೈಲ್ ಇತ್ಯಾದಿ ಇರಬಾರದು ಎಂಬ ನಿಯಮವಿದೆ. ಪುಟ್ಟ ಪರ್ಸ್ ಕೂಡಾ ಇಟ್ಟುಕೊಳ್ಳುವಂತಿಲ್ಲ. ಅವೆಲ್ಲವನ್ನೂ ಕೌಂಟರ್ ನಲ್ಲಿ ಕೊಟ್ಟು ಖಾಲಿ ಕೈಯಲ್ಲಿ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತೆವು.
ದೇವಸ್ಥಾನದ ಶಿಲ್ಪ ವೈಭವ ಬಲು ಸೊಗಸು. ನಾವು ಅಲ್ಲಿಗೆ ತಲಪಿದ ಸಮ್ಯ ಸಂಜೆಯಾಗಿತ್ತು. ಇಲ್ಲಿ ಸಂಜೆ 0700 ಗಂಟೆಗೆ ಸೋಮನಾಥನಿಗೆ ಪೂಜೆ ಮಾಡಿ, ಆರತಿ ಬೆಳಗುವ ದೃಶ್ಯ ಬಲು ಸೊಗಸು. ಇದು ಅರ್ಧ ಗಂಟೆಗೂ ಹೆಚ್ಚು ಸಮಯ ಇರುತ್ತದೆ. ಅಲ್ಲಿನ ಶಿವಲಿಂಗಕ್ಕೆ ಸೊಗಸಾಗಿ ಪೂಜೆ, ಆರತಿ ನೆರವೇರಿಸಿದ ಅರ್ಚಕರು, ಆಮೇಲೆ ದೇವಸ್ಥಾನದ ಪಶ್ಚಿಮ ದ್ವಾರದ ಕಡೆಗೆ ಬಂದು ಸಮುದ್ರಕ್ಕೂ ಆರತಿ ಎತ್ತುವುದು ನಮಗೆ ಅಲ್ಲಿಯ ವಿಶೇಷ ಪದ್ಧತಿಯೆನಿಸಿತು. ದೇವಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಂಗಳವಾದ್ಯ, ಮಂತ್ರಘೋಷಗಳೊಂದಿಗೆ ಪೂಜೆ,ಆರತಿ ನೆರವೇರುತ್ತಿದ್ದಾಗ, ವಿಶಾಲವಾದ ಪ್ರಾಂಗಣದಲ್ಲಿ ನೆರೆದಿದ್ದ ಭಕ್ತಸಮೂಹ ಭಜನೆ, ನಾಮೂಹಿಕ ನರ್ತನ ಮಾಡುತ್ತಿದ್ದುದು ಸಮ್ಮೋಹನಕಾರಿಯಾಗಿತ್ತು. ನಮ್ಮ ತಂಡದ ಹೆಚ್ಚಿನವರು ತಮಗೆ ಸೋಮನಾಥದ ನೆಲದಲ್ಲಿ ಅದ್ಭುತವಾದ ದೈವಿಕ ಅನುಭವವಾಯಿತೆಂದರು.
ಪೂಜೆಯ ನಂತರ ದೇವಸ್ಥಾನದ ಹಿಂದೆ ಇರುವ ವಿಶಾಲವಾದ ಜಾಗದಲ್ಲಿ ಓಪನ್ ಏರ್ ಥಿಯೇಟರ್ ನಂತೆ ಇರುವಲ್ಲಿಗೆ ನಮ್ಮನ್ನು ಕರೆದೊಯ್ದರು. ರಾತ್ರಿ 8 ಗಂಟೆಗೆ ಅಲ್ಲಿ ದೇವಾಲಯದ ಮೇಲೆ ಬಿಂಬಿಸಲಾಗುವ ಬೆಳಕು-ದ್ವನಿ ಲೇಸರ್ ಶೋ ಕಾರ್ಯಕ್ರಮವಿವಿರುತ್ತದೆ. ಈ ಕಾರ್ಯಕ್ರಮದಲ್ಲಿ, ಸೋಮನಾಥ ದೇವಸ್ಥಾನದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ. ಹಿಂದೆ ಅಪಾರವಾದ ಸಂಪತ್ತನ್ನು ಹೊಂದಿದ್ದ ಸೋಮನಾಥ ದೇವಾಲಯದ ಮೇಲೆ ಇತಿಹಾಸದುದ್ದಕ್ಕೂ ಹಲವಾರು ಬಾರಿ ದಾಳಿಯಾಗಿದೆ. ದೇವಾಲಯವನ್ನು ಸಂಪೂರ್ಣ ಧ್ವಂಸಗೊಳಿಸಲಾಗಿತ್ತು. ಮಹಮ್ಮದ್ ಘಜನಿ ಒಬ್ಬನೇ 17 ಬಾರಿ ದಂಡೆತ್ತಿಕೊಂಡು ಬಂದು ಇಲ್ಲಿದ್ದ ಸಂಪತ್ತನ್ನು ದೋಚಿಕೊಂಡು ಹೋಗಿದ್ದನಂತೆ . ಕಾಲಾನಂತರದಲ್ಲಿ, ಹಲವಾರು ಬಾರಿ ಸಾಮ್ರಾಜ್ಯಶಾಹಿ ದೊರಗಳಿಂದ ಧ್ವಂಸಕ್ಕೊಳಗಾಗಿದೆ. ಪ್ರತಿ ಬಾರಿಯೂ ವಿವಿಧ ರಾಜರುಗಳ ಶ್ರಮದಿಂದ ಮತ್ತಷ್ಟು ಸೊಗಸಾಗಿ ಪುನರಪಿ ನಿರ್ಮಾಣಗೊಂಡ ದೇವಾಲಯವಿದು. ಸ್ವಾತಂತ್ರ್ಯಾನಂತರ, ಗುಜರಾತಿನವರೇ ಆದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮುಂದಾಳುತನ ಹಾಗೂ ಮಾರ್ಗದರ್ಶನದಲ್ಲಿ ಇಂದು ಕಾಣಿಸುವ ಭವ್ಯ ಮಂದಿರವನ್ನು 1951 ರಲ್ಲಿ ಪುನರ್ ನಿರ್ಮಾಣ ಮಾಡಲಾಯಿತು.
ಈಗಲೂ, ಪಾಕಿಸ್ಥಾನದ ಸಮುದ್ರ ಮಾರ್ಗಕ್ಕೆ ಹತ್ತಿರುವ ಕಾರಣ ಆತಂಕ ತಪ್ಪಿಲ್ಲ. ಹಾಗಾಗಿ, ಇಲ್ಲಿ ಹಡಗುಗಳು ಮತ್ತು ದೋಣಿ ತೀರಾ ಹತ್ತಿರಕ್ಕೆ ಬರಲಾಗದಂತೆ, ಸಮುದ್ರ ಕಿನಾರೆಯಲ್ಲಿ ಬಲವಾದ ಕಲ್ಲು ಕೋಟೆ ಕಟ್ಟಿ, ಸಮುದ್ರವನ್ನು ಹಿಮ್ಮೆಟ್ಟಿಸಿದ್ದಾರೆ. ಈ ಮಂದಿರದ ಏಳು ಬೀಳುಗಳ ಚರಿತ್ರೆಯನ್ನು ನೋಡುವಾಗ ರೋಮಾಂಚನವಾಗುತ್ತದೆ. ನಮಗೆ ಅರಿವಿಲ್ಲದೆಯೇ , ಈ ಮಂದಿರವು ಸಮಗ್ರ ಭಾರತೀಯತೆಯ ದ್ಯೋತಕ, ಸ್ವಾಭಿಮಾನದ ಸಂಕೇತ ಎಂಬ ಹೆಮ್ಮೆಯ ಭಾವ ಮನದಲ್ಲಿ ಉಕ್ಕುತ್ತದೆ. ಈ ಭೇಟಿ ಎಲ್ಲರಿಗೂ ಬಹಳ ಧನ್ಯತಾ ಭಾವ ಕೊಟ್ಟಿತು.
ಸ್ಥಳಪುರಾಣದ ಪ್ರಕಾರ, ದಕ್ಷ ಬ್ರಹ್ಮನಿಗೆ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ಮೊದಲಾದ ಇಪ್ಪತ್ತೇಳು ಮಂದಿ ಹೆಣ್ಣು ಮಕ್ಕಳಿದ್ದರು. ದಕ್ಷಬ್ರಹ್ಮನು ತನ್ನ ಎಲ್ಲಾ ಹೆಣ್ಣುಮಕ್ಕಳನ್ನು ಚಂದ್ರನಿಗೆ ಮದುವೆ ಮಾಡಿಕೊಟ್ಟು, ಎಲ್ಲಾ ಹೆಣ್ಣು ಮಕ್ಕಳನ್ನೂ ಸಮಾನವಾಗಿ ಪರಿಗಣಿಸಬೇಕೆಂಬ ಷರತ್ತು ವಿಧಿಸಿದ್ದ. ಆದರೆ ಚಂದ್ರನಿಗೆ ನಾಲ್ಕನೆಯವಳಾದ ರೋಹಿಣಿಯಲ್ಲಿ ಹೆಚ್ಚಿನ ಒಲವಿತ್ತಂತೆ. ಹೀಗಾಗಿ , ಚಂದ್ರನು ರೋಹಿಣಿಯ ಹೊರತಾಗಿ, ತನ್ನ ಇತರ ಇಪ್ಪತ್ತಾರು ಮಡದಿಯನ್ನು ಅಲಕ್ಷಿಸಲು ಪ್ರಾರಂಭಿಸಿದನು. ಇದರಿಂದ ನೊಂದ ಆ ಇಪ್ಪತ್ತಾರು ಹೆಣ್ಣುಮಕ್ಕಳು , ಚಂದ್ರನ ಬಗ್ಗೆ ತಮ್ಮ ತಂದೆ ದಕ್ಷರಾಜನ ಬಳಿ ದೂರು ಕೊಟ್ಟರು. ದಕ್ಷನು ಅಳಿಯ ಚಂದ್ರನನ್ನು ಕರೆಸಿಕೊಂಡು ಬುದ್ದಿ ಮಾತುಗಳನ್ನು ಹೇಳಿದನಾದರೂ, ತನ್ನ ನಡವಳಿಕೆಯನ್ನು ಬದಲಿಸದೆ, ಮಾವನ ಬುದ್ದಿವಾದಗಳನ್ನು ಪರಿಗಣಿಸದೆ, ರೋಹಿಣಿಯೊಂದಿಗೆ ಕಾಲಕಳೆಯುವುದನ್ನೇ ಮುಂದುವರಿಸಿದನು. ಆಗ ಕೋಪಗೊಂದ ದಕ್ಷರಾಜನು ಚಂದ್ರನಿಗೆ ‘ನೀನು ಕ್ಷಯಿಸುತ್ತಿರು’ ಎಂದು ಶಪಿಸಿದನು. ಈ ಶಾಪದಿಂದ ಕಂಗೆಟ್ಟ ಚಂದ್ರನು, ವಿಧಿಯಿಲ್ಲದೆ ಬ್ರಹ್ಮನ ಮೊರೆ ಹೊಕ್ಕಾಗ, ಬ್ರಹ್ಮನು ನೀನು ಪರಮೇಶ್ವರನನ್ನು ಕುರಿತು ತಪಸ್ಸು ಮಾಡು, ಪರಿಹಾರ ಸಿಗಬಹುದು ಎಂದು ಉಪದೇಶಿಸಿದ. ಅಂತೆಯೇ, ಚಂದ್ರನು ಶಿವನನ್ನು ಕುರಿತು ಹಲವಾರು ವರ್ಷಗಳ ಕಾಲ ತಪ್ಪಸ್ಸನ್ನು ಮಾಡಿ ಶಿವನನ್ನು ಒಲಿಸಿದ ಕ್ಷೇತ್ರವಿದು. ಶಿವನು ಚಂದ್ರನ ತಪಸ್ಸಿಗೆ ಒಲಿದು, ತಾನು ಆ ಶಾಪವನ್ನು ಹಿಂಪಡೆಯಲು ಸಾಧ್ಯವಾಗದು, ಆದರೆ ‘ನೀನು ಒಂದು ತಿಂಗಳಿನಲ್ಲಿ ಹದಿನೈದು ದಿನ ಕ್ಷಯಿಸುವೆ , ಮತ್ತೆ ಹದಿನೈದು ದಿನ ವೃದ್ದಿಸುವೆ’ ಎಂಬ ವರವನ್ನಿತ್ತನು.’
ಇದರಿಂದ ಸಂತುಷ್ಟನಾದ ಚಂದ್ರನು ಸೌರಾಷ್ಟ್ರ ಪ್ರದೇಶದಲ್ಲಿ, ಅಂದರೆ ಇಂದಿನ ಗುಜರಾತಿನ ಪ್ರಭಾಸ ಕ್ಷೇತ್ರದಲ್ಲಿ, ಶಿವನಿಗಾಗಿ ಸ್ವರ್ಣಮಂದಿರವನ್ನು ಕಟ್ಟಿಸಿದನು, ಅದರಲ್ಲಿ ಶಿವನು ಜ್ಯೋತಿರ್ಲಿಂಗ ಸ್ವರೂಪಿಯಾಗಿ ನೆಲೆಸಿದನು. ಹೀಗೆ ಚಂದ್ರನಿಂದ ನಿರ್ಮಾಣಗೊಂಡ ಈ ಕ್ಷೇತ್ರವು ‘ಸೋಮನಾಥ’ ಎಂದು ಖ್ಯಾತವಾಯಿತು . ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಸೋಮನಾಥವು ಮೊದಲನೆಯದು
ಅಲ್ಲಿಗೆ ನಮ್ಮ ಆ ದಿನದ ಪ್ರವಾಸ ಸಂಪನ್ನವಾಗಿ, ನಮಗಾಗಿ ಕಾಯ್ದಿರಿಸಿದ್ದ ಹೋಟೆಲ್ ಗೆ ತೆರಳಿ ಊಟ, ವಿಶ್ರಾಂತಿ ಮಾಡಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=32016
– ಹೇಮಮಾಲಾ.ಬಿ
ಎಂದಿನಂತೆ ಚಂದದ ನಿರೂಪಣೆ ಈ ಸ್ಥಳ ವನ್ನು ನಾನು ನೋಡಿದ್ದರಿಂದ ಮತ್ತೊಮ್ಮೆ ಮೆಲಕು ಹಾಕುವ ಮೂಲಕ ಸೋಮನಾಥ ಕಣ್ಣಮುಂದೆ ಬಂದಂತಾಯಿತು.ಧನ್ಯವಾದಗಳು ಗೆಳತಿ ಹೇಮಾ.
ನೀವು ಪ್ರತಿಯೊಂದು ಸ್ಥಳದ ಮಾಹಿತಿಯನ್ನು ಕಲೆಹಾಕುವ ರೀತಿಗೆ ಶರಣು.
ಸೋಮನಾಥ ದೇಗುಲದ ಸ್ಥಳ ಪುರಾಣ, ಐತಿಹಾಸಿಕ ಹಿನ್ನೆಲೆಯೊಂದಿಗೆ, ಸ್ಥಳದ ದೈವಿಕತೆಯನ್ನು ಉದ್ದೀಪನಗೊಳಿಸುವ ಶ್ರದ್ಧಾಭಕ್ತಿಯ ಪೂಜೆ.. ಬಹಳ ಸೊಗಸಾದ ಪ್ರವಾಸ ಕಥನ..ಧನ್ಯವಾದಗಳು.
ಅನಂತ ಧನ್ಯವಾದಗಳು.
beautiful narration.