ಪ್ರಾಮಾಣಿಕತೆಗೆ ಈಗ *ಅವನದೇ* ಹೆಸರು…

Share Button

ಅದೇನೋ ಚಿಕ್ಕವಯಸ್ಸಿನಿಂದಲೂ ನಾನು ಓದುವ ಶಾಲೆ ಮನೆಯಿಂದ ತುಂಬಾ ದೂರ. ಕಾಲೇಜು ಓದುವಾಗಲಂತೂ‌ ಒಂದೂರಿಂದ ಮತ್ತೊಂದೂರಿಗೆ  ಓಡಾಟ.‌ ನಾವಿದ್ದ ಊರಿನ ಮನೆಯಿಂದ ರೈಲ್ವೇಸ್ಟೇಷನ್  ಸಾಕಷ್ಟು ದೂರ. ಮತ್ತು ಕಾಲೇಜಿದ್ದ ಊರಿನ ಸ್ಟೇಷನ್‌ನಿಂದಲಂತೂ ನಮ್ಮ ಕಾಲೇಜ್ ಸಿಕ್ಕಾಪಟ್ಟೆ ದೂರ. ಹಾಗಾಗಿ‌ ಮೊದಲಿನಿಂದಲೂ ನನ್ನದು ಓಡು ನಡಿಗೆ. ನನ್ನ ನಡಿಗೆಯ ಅಪಾರ ವೇಗವನ್ನು ನೋಡಿ ನನಗೆ ನಮ್ಮ ತಂದೆಯ ಸಹೋದ್ಯೋಗಿಗಳು ಇಟ್ಟಿದ್ದ ಹೆಸರು *ಬೀಸುಗಾಲಮ್ಮ*!!

ಮನೆ ಕೆಲಸದ ಜವಾಬ್ದಾರಿಯೂ ಇರುತ್ತಿದ್ದುದರಿಂದ ವಿದ್ಯಾಭ್ಯಾಸ ಮುಗಿಸಿ ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ   ಕೆಲಸಕ್ಕೆ  ಸೇರಿದ ಮೇಲೂ ನಾನು *ಬೀಸುಗಾಲಮ್ಮನೇ‌* . ಆದರೇನು  ಶಾಲೆಯಲ್ಲಿ  ದಿನವೂ ಮಕ್ಕಳಿಂದ ದೊರೆಯುತ್ತಿದ್ದ  ಅಭೂತಪೂರ್ವ ಸ್ವಾಗತ ಎಲ್ಲಾ ಆಯಾಸವನ್ನೂ ಮರೆಸುತ್ತಿತ್ತು. ಶಾಲೆಯ ಗೇಟು ಇನ್ನೂ ಅಷ್ಟು ದೂರದಲ್ಲಿರುವಾಗಲೇ *ಮಿಸ್ ಬಂದ್ರು‌. ಮಿಸ್ ಬಂದ್ರು* ಎಂದು ಹಿಗ್ಗಿನಿಂದ ಕೇಕೆ ಹಾಕುತ್ತಾ,  ಗೇಟು ದಾಟಿ ನಾನು ಒಳ ಬಂದೊಡನೇ ಮುತ್ತಿಕೊಂಡು ಮೇಲಾಟದಲ್ಲಿ ಕೈ ಹಿಡಿದುಕೊಂಡು  ಕಿಲಕಿಲದ ಮೆರವಣಿಗೆಯಲ್ಲಿ ಕರೆದೊಯ್ವ ಆ ಮುಗ್ಧತೆ, ಪ್ರೀತಿಗೆ ಸಾಟಿಯುಂಟೇ?!!

ಇನ್ನು ಮಿಸ್‌ನ ವ್ಯಾನಿಟಿ ಬ್ಯಾಗ್ ಹಿಡಿದುಕೊಳ್ಳಲಂತೂ ಮಕ್ಕಳಲ್ಲಿ ದಿನಾ ಪೈಪೋಟಿ, ಜಗಳ. ಹುಡುಗ ಹುಡುಗಿಯರ ಭೇದವಿಲ್ಲದೆ ಮೊದಲು ಓಡಿ ಬಂದವರ  ಕೈ ಸೇರುತ್ತಿತ್ತು ನನ್ನ ಚೀಲ. ಅದನ್ನು ಪಡೆದವರು ಟ್ರೋಫಿ ಗೆದ್ದಷ್ಟು ಹೆಮ್ಮೆಯಿಂದ ಹೆಗಲಿಗೆ ಹಾಕಿಕೊಂಡು ನನ್ನ ಜೊತೆ ನಡೆದು ಅಸೆಂಬ್ಲಿ ಮುಗಿದು ತರಗತಿ ಸೇರಿದ ಮೇಲೆ ನನಗೆ ಒಪ್ಪಿಸುತ್ತಿದ್ದರು. ಕಾಸಿನ ಹಂಗಿರದ, ಎಳೆಯ ವಯಸ್ಸಿನ ಚಿಕ್ಕ ಚಿಕ್ಕ ಸಂತೋಷಗಳೇ‌ ಹೀಗೆ ಅಲ್ಲವೇ?

ಇನ್ನು ಕಷ್ಟದಲ್ಲಿರುವವರಿಗೆ  ಅನುಕಂಪದಿಂದ ನೆರವಾಗುವ ಗುಣವನ್ನು ಮಕ್ಕಳಲ್ಲಿ ಬೆಳಸಲೋ ಏನೋ ವರ್ಷದಲ್ಲಿ ಒಂದೆರಡು ಬಾರಿ ಯಾವುದಾದರೂ ಉತ್ತಮ ಕಾರ್ಯಕ್ಕೆ ಮಕ್ಕಳಿಂದ ಒಂದಿಷ್ಟು ಕಿರು ದೇಣಿಗೆಯನ್ನು ಸಂಗ್ರಹಿಸಲು ಶಾಲೆಗಳಿಗೆ ಸುತ್ತೋಲೆ ಬರುತ್ತಿತ್ತು. ಅದರ ಜವಾಬ್ದಾರಿಯನ್ನು ಶಾಲೆಯ ಅಧಿಕಾರಿಗಳು ಸಹಜವಾಗಿಯೇ  ತರಗತಿಯ ಶಿಕ್ಷಕರಿಗೆ ರವಾನಿಸುತ್ತಿದ್ದರು. ತರಗತಿಯಲ್ಲಿ ಈ ಬಗ್ಗ ಮಾಹಿತಿ ಕೊಟ್ಟು ತಮ್ಮ ಪೋಷಕರಿಗೂ ತಿಳಿಸಿ ಅವರುಗಳು ಕೊಡುವ ಹಣವನ್ನು ತಂದು ಕೊಡಲು ಹೇಳುತ್ತಿದ್ದೆವು. ಅದಕ್ಕಾಗಿಯೇ ಮೇಲಿನವರು ಕಳಿಸುತ್ತಿದ್ದ ಫಾರಂನಲ್ಲಿ ಮಕ್ಕಳು ಕೊಡುತ್ತಿದ್ದ ಹಣದ ವಿವರ ತುಂಬಿ, ನಿಗದಿತ ದಿನ ಕಳೆದ ಮೇಲೆ ತರಗತಿಯಿಂದ ಸಂಗ್ರಹವಾದ ಮೊತ್ತ‌ ತಿಳಿಸಿ ನಂತರ ಆಫೀಸಿಗೆ ಒಪ್ಪಿಸಿ ಸಹಿ ಪಡೆಯುತ್ತಿದ್ದೆವು.

ಆದರೆ ಕೆಲವು ತರಗತಿಯವರು ತಮ್ಮ ತರಗತಿಯೇ ಅತಿ ಹೆಚ್ಚು ಸಂಗ್ರಹಿಸಬೇಕು‌ ಎಂಬ ಹುಮ್ಮಸ್ಸಿನ ಪೈಪೋಟಿಯಿಂದ ಅಮ್ಮ ಅಪ್ಪನನ್ನು ಕಾಡಿಬೇಡಿ ಜಗಳ ಕಾದು ಜಾಸ್ತಿ ತಂದುಕೊಡುತ್ತಿದ್ದುದೂ ಉಂಟು.

ಹೀಗೊಂದು ದೇಣಿಗೆ ಸಂಗ್ರಹದ ಸಂದರ್ಭ. ಆಗಲೇ ನಾಲ್ಕು ದಿನದ ದೇಣಿಗೆ ಸಂಗ್ರಹವಾಗಿತ್ತು. ಮನೆಗೆ ಹೋಗಿ ಅದುವರೆವಿಗೂ ಸಂಗ್ರಹವಾದ ಹಣವನ್ನು ಒಂದು ಕಡೆ ಜೋಪಾನವಾಗಿಡೋಣವೆಂದು ಕೊಂಡು ನನ್ನ ವ್ಯಾನಿಟಿ  ಬ್ಯಾಗಿನೊಳಗಿದ್ದ ಪರ್ಸ್ ತೆಗೆದರೆ  ಹಣ ಕಾಣಲಿಲ್ಲ.  ಇಡೀ ವ್ಯಾನಿಟಿ ಬ್ಯಾಗನ್ನು ಬುಡ ಮೇಲು ಮಾಡಿ ಮೂಲೆ ಮೂಲೆಯನ್ನು ಜಾಲಾಡಿದರೂ ಸಂಗ್ರಹಿಸಿದ್ದ ಹಣ ನಾಪತ್ತೆ. ಎದೆ ಧಸಕ್ಕೆಂದಿತು. ಶಾಲೆಯಿಂದ ಸೀದ ಮನೆಗೆ ಬಂದಿದ್ದೇನೆ. ಸುಮಾರು 75-80  ರೂಪಾಯಿಯಾದರೂ ಇತ್ತು. 70  ರ ದಶಕದ ಕಟ್ಟ ಕಡೆಯಲ್ಲಿ ಅದೇನು ಸಣ್ಣ ಮೊತ್ತವಾಗಿರಲಿಲ್ಲ.  ಏನಾಯಿತು? ಎಲ್ಲಿ ಹೋಯಿತು? ಮನೆಯಲ್ಲಿನ ಲೆಕ್ಕಾಚಾರದ ಆರ್ಥಿಕ ಪರಿಸ್ಥಿತಿಯ ಕಾರಣ ನನಗೆ ಯಾವ ವಿಷಯದಲ್ಲೂ ಅದರಲ್ಲೂ ಹಣದ ಬಗ್ಗೆ‌‌ ತುಸುವೂ ಅಜಾಗರೂಕತೆ ಇರಲಿಲ್ಲ. ಹಾಗಾದರೆ, ಹಾಗಾದರೇ ಮಕ್ಕಳೇ ಯಾರಾದರೂ ದುಡ್ಡನ್ನು ಎತ್ತಿಕೊಂಡಿರಬಹುದೇ ಎಂಬ ಯೋಚನೆ ಸುಳಿದದ್ದೇ ನನ್ನ ನಂಬಿಕೆಯ ಕೋಟೆ ಬಿರುಕುಬಿದ್ದು ಗಡಗಡನೆ ಅಲ್ಲಾಡತೊಡಗಿತು. ಇದು ನನಗೆ ಅರಗಿಸಿಕೊಳ್ಳಲಾಗದ ವಿಷಯ. ಮನಸ್ಸು ವಿಲಿವಿಲಿ ಒದ್ದಾಡತೊಡಗಿತು.

ಯಾರು ತೆಗೆದುಕೊಂಡರು? ಹೇಗೆ? ಅದೂ ಇಡೀ ತರಗತಿಯ ಮತ್ತು ನನ್ನ ಕಣ್ಣು ತಪ್ಪಿಸಿ???. ನನಗೆ ಅಷ್ಟು ಹಣ ಹೊಂದಿಸುವುದು ತುಂಬಾ ಕಷ್ಟದ ವಿಚಾರವಾಗಿದ್ದರೂ ನಾನು ಅಪಾರವಾಗಿ ಪ್ರೀತಿಸುತ್ತಿದ್ದ, ಲೋಕದ ಯಾವ ಕೆಟ್ಟತನ ಸುಳ್ಳು ಮೋಸ ಏನೊಂದನೂ ಅರಿಯದ ಮುಗ್ಧರು ಎಂದುಕೊಂಡಿದ್ದ ಮಕ್ಕಳಲ್ಲೇ ಒಬ್ಬರಿಂದ ಈ ಕಳ್ಳತನದ ಕೃತ್ಯ ನಡೆದಿದೆ ಎಂಬುದು ನನ್ನ ಮನಸ್ಸನ್ನು ಅಪಾರವಾಗಿ ಘಾಸಿಗೊಳಿಸಿತು. ರಾತ್ರಿ ಸಾಕಷ್ಟು ಹೊತ್ತಾಗಿದ್ದರೂ ಈ ಮನಃಸ್ಥಿತಿಯಲ್ಲಿ ನಿದ್ರೆ ಸುಳಿಯಲು ಸಾಧ್ಯವೇ?

ಮನಸ್ಸನ್ನು ಸ್ವಲ್ಪ ತಹಬಂದಿಗೆ ತಂದುಕೊಂಡು ಅಂದು ನಾನು ಶಾಲೆಗೆ ಬಂದಾಗಿನಿಂದ ನಡೆದ ಘಟನೆಗಳನ್ನು ಒಂದೊಂದೊಂದಾಗಿ‌ ಮನಃಪಟಲದ ಮೇಲೆ ತಂದುಕೊಳ್ಳತೊಡಗಿದೆ. ಅಂದು ವೇಗವಾಗಿ ಓಡಿ ಬಂದು ನನ್ನ ಚೀಲ ಪಡೆದುಕೊಂಡ ವಿದ್ಯಾರ್ಥಿಯ  ಸುತ್ತ ಮನಸ್ಸು ಸುತ್ತ ತೊಡಗಿತು. ಹಾಗಾದರೇ ಇವನೇ ಏನು???!!! ತಕ್ಷಣ ನಿರ್ಧಾರಕ್ಕೆ ಬಂದು ಅವನನ್ನು ದೋಷಿಯಾಗಿ‌ ಕಾಣುವುದು ಬೇಡ ಎನಿಸಿತು. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡೋಣವೆಂಬ ನಿಶ್ಚಯ ಹುಟ್ಟಿ, ಅದೇ ನಿಶ್ಚಯ ಬಲಿದ ಕೂಡಲೇ ನಿದ್ದೆ ತಾನಾಗಿ ಅಮರಿಕೊಂಡಿತು.

ಮಾರನೆ ದಿನ ನನ್ನದೇ ಒಂದಿಷ್ಟು ಹಣವನ್ನು ಉದ್ದಿಶ್ಯಪೂರ್ವಕವಾಗಿ ಚೀಲದಲ್ಲಿರಿಸಿಕೊಂಡು ಬಂದೆ. ಯಥಾ ಪ್ರಕಾರ ಆ ವಿದ್ಯಾರ್ಥಿಯೇ ಧಾವಿಸಿ ಬಂದಾಗ, ಬೇಕೆಂತಲೇ ನಾನು ಅವನ ಕೈಗೇ ಚೀಲವನ್ನು ಕೊಟ್ಟೆ. ನಂತರ ಬಿಡುವಿನಲ್ಲಿ ಗುಟ್ಟಾಗಿ ಪರೀಕ್ಷಿಸಿದಾಗ ಹಣ ಕಾಣೆಯಾಗಿತ್ತು. ಇರಲಿ ಎಂದು ಕೊಂಡೆ. ಆ ದಿನವೂ ಸಂಗ್ರಹವಾದ ದೇಣಿಗೆ ಹಣವನ್ನು ಮಾತ್ರ ಎಚ್ಚರಿಕೆಯಾಗಿ ಎಣಿಸಿ ಇಟ್ಟುಕೊಂಡು ಮನೆಗೆ ಬಂದು ಜೋಪಾನ ಮಾಡಿದೆ.

ಮಾರನೆ ಬೆಳಿಗ್ಗೆಯೂ ಉದ್ದಿಶ್ಯಪೂರ್ವಕವಾಗಿ ತುಸುವೇ ಹಣವನ್ನು ಪರ್ಸಿನಲ್ಲಿಟ್ಟುಕೊಂಡೆ. ಆ ದಿನವೂ ಅವನೇ ನನ್ನ ಚೀಲವನ್ನು ಪಡೆದ ಅಥವಾ ಬೇಕೆಂದೇ ಅವನಿಗೇ ನಾನು ಚೀಲವನ್ನು ಕೊಟ್ಟೆ. ಮತ್ತೆ ಗುಟ್ಟಾಗಿ‌ ಪರೀಕ್ಷಿಸಿದಾಗ ಎರಡು ದಿನಗಳಂತೆಯೂ ಅಂದೂ‌ ಹಣ ಕಾಣೆಯಾಗಿತ್ತು. ಇನ್ನು‌ ನಾನೀಗ ಬಹಳ ನಾಜೂಕಾಗಿ ಈ ಪರಿಸ್ಥಿತಿಯನ್ನು ನಿರ್ವಹಿಸಬೇಕಾಗಿತ್ತು.

ಆ ದಿನ ಶಾಲೆ ಮುಗಿದು ಮಕ್ಕಳು ಕೇಕೆ‌ಹಾಕುತ್ತಾ ಹೊರನಡೆಯುತ್ತಿರುವಾಗ,  *ಒಂದು ಹತ್ತು ನಿಮಿಷ ಇರು ಪುಟ್ಟ* ಎಂದು ಅವನನ್ನು ಹಿಂದೆ ಉಳಿಸಿಕೊಂಡೆ.  ನಾನು ಎಲ್ಲರಂತೆ ಅವನೊಂದಿಗೂ ಆ ಎರಡು ಮೂರು ದಿನಗಳೂ ಯಾವ ಭಾವ ವಿಕಾರ ತೋರದೆ ನಗುನಗುತ್ತಲೇ ಮಾತಾಡುತ್ತಿದ್ದರಿಂದ ಅವನಿಗೆ ಯಾವ ಅಳುಕೂ ಕಾಡಲಿಲ್ಲವೇನೋ, ಸಹಜವಾಗೇ *ಯಾಕೆ ಮಿಸ್?* ಎಂದ.

*ತಡಿ ಮರಿ ಒಂದ್ನಿಮ್ಷ* ಎಂದು ಹೇಳಿ ಮಕ್ಕಳೆಲ್ಲಾ ಹೊರಟು ತರಗತಿ ಮತ್ತು ತುಸು ಹೊತ್ತಿನಲ್ಲೇ ಇಡೀ ಶಾಲೆ ಖಾಲಿಯಾಗುವವರೆಗೂ ಕಾದಿದ್ದು ನಂತರ ಮೃದುವಾಗಿಯೇ *ಬಾ ನಂಜೊತೆ* ಎಂದು ಶಾಲೆ ಆವರಣದಲ್ಲಿದ್ದ ಒಂದು ಕಲ್ಲು ಬೆಂಚಿನ ಮೇಲೆ ಕುಳಿತೆ.

ಪೀಠಿಕೆಯ ಅವಶ್ಯಕತೆಯಿಲ್ಲ ಎನಿಸಿದ್ದರಿಂದ *ಮೂರು ದಿನದಿಂದ ನನ್ನ ಬ್ಯಾಗಿನಿಂದ ಹಣ ತೆಗಿತಿದೀ ಅಲ್ವಾ?* ಎಂದು ಯಾವ ಉದ್ವೇಗ ಸಿಟ್ಟೂ ಇಲ್ಲದೆ  ಶಾಂತ ಸ್ವರದಲ್ಲಿಯೇ ಕೇಳಿದೆ. ದಿಗ್ಭ್ರಾಂತಿಯಿಂದ ಅವನ ಮುಖ‌ ಕಪ್ಪಿಟ್ಟಿತು.

*ಇಲ್ಲಾ ಮಿಸ್. ಗಾಡ್ ಪ್ರಾಮಿಸ್. ನಂಗೇನು ಗೊತ್ತಿಲ್ಲ* ಎಂದ ಮುಗ್ಧತೆ ನಟಿಸುತ್ತಾ.

*ನೋಡು ಮಗು ಮೂರು ದಿನದಿಂದ ನನ್ನ ಬ್ಯಾಗ್ ಇಸ್ಕೊತಿರೋದು ನೀನೆ. ಮೂರು ದಿನವೂ ನನ್ನ ಪರ್ಸ್ನಲ್ಲಿಟ್ಟ ದುಡ್ಡು ಕಾಣ್ತಾ ಇಲ್ಲ. ಮತ್ತೆಲ್ಲಿ ಹೋಗುತ್ತೆ?  ಅಕಸ್ಮಾತ್ ತಪ್ಪಾಗೋದು ಸಹಜ. ಹೇಳು ಯಾಕೆ ಹಾಗೆ ಮಾಡಿದೆ?* ಎಂದು ಅನುನಯದಿಂದಲೇ ಕೇಳಿದರೂ ಅವನು ತಪ್ಪೊಪ್ಪಿಕೊಳ್ಳದೆ ತಾನು ತೆಗೆದಿಲ್ಲವೆಂದೇ ಸಾಧಿಸಿದ.

ಈಗೇನು ಮಾಡಲಿ ಮೇಲಿನವರ ಗಮನಕ್ಕೆ‌ ತರಬಹುದು. ಅವನ ತಂದೆ ತಾಯಿಗೆ ಹೇಳಿ ಕಳಿಸಬಹುದು. ಆಗ ಮೈಮುರಿವ ಹೊಡೆತ, ಹೀನಾಮಾನ ಬೈಗುಳ,  ಕ್ರಮೇಣ ಇಡೀ ತರಗತಿಗೆ ಶಾಲೆಗೆ, ಅಕ್ಕಪಕ್ಕ ಎಲ್ಲರಿಗೂ ತಿಳಿಯದಿದ್ದೀತೆ?? ಕಳ್ಳನೆಂಬ ಹಣೆಪಟ್ಟಿ ಬೀಳದಿದ್ದೀತೆ??? ಬೇಡ. ಈ ಪ್ರಸಂಗ ಸಾರ್ವಜನಿಕವಾಗುವುದೇ ಬೇಡ. ಏನೋ‌ ತಪ್ಪಿದ್ದಾನೆ‌‌. ತಿದ್ದಿಕೊಳ್ಳುತ್ತಾನೆ ಎನಿಸಿದ್ದೇ ಮೃದುವಾಗಿಯೇ ನುಡಿದೆ, *ನೋಡು ಪುಟ್ಟಾ, ಮೂರು ದಿನದಿಂದ‌ ನನ್ನ ಬ್ಯಾಗ್ ಇಸ್ಕೋತಿರೋನು ನೀನು. ಆದ್ದರಿಂದ ಹಣವನ್ನು‌ ನೀನು ಬಿಟ್ಟು ಇನ್ಯಾರೂ ತಗೊಳೋಕೆ ಸಾಧ್ಯವಿಲ್ಲ. ಒಂದು ಕೆಲಸ ಮಾಡೋಣ. ನಾನೂ ಮನೆಗೆ ಹೋಗೊಲ್ಲ.  ನೀನೂ ಹೋಗೋದು ಬೇಡ. ಅದೆಷ್ಟೊತ್ತಾದ್ರೂ ಆಗ್ಲಿ. ತೀರ ಕತ್ತಲಾದ್ರೂ ಚಿಂತಿಲ್ಲ. ನಿಮ್ಮಮ್ಮ ಅಪ್ಪ ಯಾರಾದ್ರೂ ನಿನ್ನನ್ನು  ಹುಡ್ಕೊಂಡು ಬಂದ್ರೆ ಹೀಗೆ ತಗೊಂಡಿದಾನೆ‌ ಅದಕ್ಕೆ ನಿಲ್ಲಿಸ್ಕೊಂಡಿದೀನಿ ಅಂತ ಹೇಳಲೇ ಬೇಕಾಗುತ್ತೆ. ಅಲ್ವಾ?  ನೀನು ತಪ್ಪು ಮಾಡಿಲ್ಲದಿದ್ಮೇಲೆ ನೀನೇನು ಭಯ ಪಡಬೇಕಾದ್ದಿಲ್ಲ ಬಿಡು* ಎಂದು ಹೇಳಿ ಮೌನವಾಗಿ ಚೀಲದಿಂದ ಒಂದು ಪುಸ್ತಕ ತೆಗೆದು ಅದರ ಮೇಲೆ ಕಣ್ಣಾಡಿಸತೊಡಗಿದೆ.

20,25, 30 ನಿಮ್ಷ ಇನ್ನೂ ಹೆಚ್ಚು ಹೊತ್ತು , ದಾಟಿದರೂ  ಅವನು‌ ಹಾಗೇ ನಿಂತಿದ್ದ. ಒಂದು ಸ್ವಲ್ಪ ಹೊತ್ತು ಕಾದು ಮಿಸ್‌ಗೇ‌ ತುಂಬಾ  ತಡ ಆಗಿಬಿಟ್ರೆ ತನ್ನನ್ನು ಮನೆಗೆ ಕಳಿಸಿಬಿಡ್ತಾರೆ ಅಂತ ಯೋಚಿಸಿದ್ನೇನೋ.  ಆದರೆ ನಾನು ಜಪ್ಪಯ್ಯ ಅನ್ನಲಿಲ್ಲ. ಅತ್ಯಂತ ತಾಳ್ಮೆಯಿಂದಲೇ ಕಾಯುತ್ತಿದ್ದೆ.

ಇನ್ನೂ ಒಂದಿಷ್ಟು ವೇಳೆ ಕಳೆದ ಮೇಲೆ *ತುಂಬಾ ಹೊತ್ತಾಯ್ತು ಇನ್ನು ನಿಮ್ಮ ಅಪ್ಪನೋ ಅಮ್ಮನೋ ಹುಡುಕ್ಕೊಂಡು ಬರ‌್ಬಹುದು ಅಲ್ವಾ?*  ಎಂದು ಕೇಳುತ್ತಾ ಕಿರುಗಣ್ಣಲ್ಲಿ ನೋಡತೊಡಗಿದೆ. ಆಗ ಅವನ ಧೃತಿ ಉಡುಗುತ್ತಾ ಬಂದದ್ದು ನನಗೆ ಗೋಚರವಾಗುತ್ತಿದ್ದಂತೆಯೇ *ಸಾರಿ ಮಿಸ್. ಸಾರಿ ಮಿಸ್ ಇನ್ಯಾವತ್ತೂ ಹೀಗ್ಮಾಡೊಲ್ಲ. ಯಾರ್ಗೂ ಹೇಳ್ಬೇಡಿ ಮಿಸ್.  ನಾಳೆನೇ ನಾ ತಗೊಂಡಿದ್ ದುಡ್ಡು ತಂದ್ಕೊಡ್ತೀನಿ.  ಆದ್ರೆ ಅದರಲ್ಲಿ ಸ್ವಲ್ಪ ಖರ್ಚ್ ಮಾಡ್ಬಿಟ್ಟಿದೀನಿ ಮಿಸ್* ಎಂದು ಪಶ್ಚಾತ್ತಾಪ ಅಥವಾ ಅದಕ್ಕಿಂತ ಹೆಚ್ಚಾದ ಭಯದಿಂದ ಬಿಕ್ಕಿಬಿಕ್ಕಿ ಅಳತೊಡಗಿದ.

ನನ್ನ ಅಪಾರ ತಾಳ್ಮೆ ಫಲಕೊಟ್ಟಿತ್ತು.

ಅನುಕಂಪದಿಂದ ಅವನನ್ನು ಹತ್ತಿರ ಕರೆದು ತಲೆ ಸವರಿ, *ಆಯ್ತು ಮರಿ. ಮಕ್ಕಳು ನೀವು ತಿಳುವಳಿಕೆ ಇರದೆ ತಪ್ಪು ಮಾಡೋದು ಸಹಜ. ಇರ‌್ಲಿ ನಂಗೇನು ನಿನ್ನ ಮೇಲೆ ಸಿಟ್ಟಿಲ್ಲ. ಆದ್ರೆ ಇನ್ಯಾವತ್ತೂ ಇಂಥ ಕೆಲಸ ಮಾಡೋದಿಲ್ಲ ಅಲ್ವಾ? ಜಾಣ ಹುಡುಗ ನೀನು* ಎಂದೆ.

*ಇಲ್ಲಾ ಮಿಸ್. ನಿಮ್ಮಾಣೆಗೂ ಇನ್ಮೇಲೆಂದೂ ಇಂಥ ಕೆಲಸ ಮಾಡೊಲ್ಲ* ಎಂದ. ಮಮತೆಯಿಂದ ಅವನ ಕಣ್ಣೀರೊರೆಸಿ, ನೆತ್ತಿಗೆ ಮುತ್ತಿಟ್ಟು, ಬೆನ್ನು ತಟ್ಟಿ ಮನೆಗೆ ಕಳಿಸಿದೆ.  ಮಾರನೆ ದಿನ ಪ್ರಾಮಾಣಿಕವಾಗಿ ಹಣ ತಂದು, ಗುಟ್ಟಾಗಿ ಒಪ್ಪಿಸಿದ.  ಅವನು ಖರ್ಚು ಮಾಡಿದ್ದ ಹಣವನ್ನು ನಾನು  ಹೇಗೋ ಹೊಂದಿಸಿಕೊಂಡು ಒಟ್ಟು ಮೊಬಲಗನ್ನು‌ ಆಫೀಸಿಗೆ ಒಪ್ಪಿಸಿದೆ.

ಮುಂದೆ ಅಲ್ಲಿಂದ ಸುಮಾರು 39-40 ವರ್ಷಗಳಾದ ಮೇಲೆ ಅದೇ ಬ್ಯಾಚಿನ ಮಕ್ಕಳು *ಗುರುವಂದನಾ* ಕಾರ್ಯಕ್ರಮ ಹಮ್ಮಿಕೊಂಡು ತಮಗೆ ಮೊದಲಿನಿಂದ ಕಲಿಸಿದ ಎಲ್ಲಾ ಗುರುಗಳನ್ನೂ ಪತ್ತೆಮಾಡಿ ಸಂಪರ್ಕಿಸಿ ಪ್ರೀತಿ ಗೌರವಗಳಿಂದ ಆಹ್ವಾನಿಸಿದರು. ಇದು ಉಪಾಧ್ಯಾಯರುಗಳ‌ ಜೀವನದ ಒಂದು‌ ಅವಿಸ್ಮರಣೀಯ ಘಳಿಗೆ.

ನಮ್ಮ ಕಣ್ಣ ಮುಂದಿನ ಆ ಮುದ್ದು ಮಕ್ಕಳು ಓದು ಮುಗಿಸಿ ತಮ್ಮ ತಮ್ಮ ವೃತ್ತಿಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಾ, ಸಂಸಾರಸ್ಥರಾಗಿ, ಮಕ್ಕಳು, ಮತ್ತೆ ಕೆಲವರು ಮೊಮ್ಮಕ್ಕಳನ್ನೂ ಪಡೆದವರು. ಬಾಲ್ಯದ ತಮ್ಮೆಲ್ಲಾ ತುಂಟಾಟಗಳನ್ನು ನೆನಪಿಸಿಕೊಳ್ಳುತ್ತಾ ಉಪಾಧ್ಯಾಯರೊಂದಿಗಿನ ತಮ್ಮ ಬಾಂಧವ್ಯವನ್ನು ಕೃತಜ್ಞತೆಯಿಂದ ಸ್ಮರಿಸಿ ವಂದಿಸುವ ಆ ಘಳಿಗೆ ಅವರನ್ನಷ್ಟೇ ಅಲ್ಲ ನಮ್ಮನ್ನೂ ಭಾವುಕರನ್ನಾಗಿ ಮಾಡುತ್ತದೆ.

ಆ ದಿನದ ಕಾರ್ಯಕ್ರಮ ಮುಗಿದ ಮೇಲೆ ಅವನು ನನ್ನನ್ನು ಸ್ವಲ್ಪ ಪಕ್ಕಕ್ಕೆ ಕರೆದು, *ನ‌ನ್ನನ್ನು ಕ್ಷಮಿಸಿ ಬಿಡಿ ಮಿಸ್. ಈಗಲೂ ನಾನು ಹಾಗೆ ಮಾಡಿದ್ದರ ಬಗ್ಗೆ ನನಗೆ ತುಂಬಾ ನಾಚಿಕೆಯಾಗುತ್ತೆ* ಎಂದು ಕೈ ಜೋಡಿಸಿದ.


*ಅಯ್ಯೋ! ಪುಟ್ಟ ಅದ್ಯಾವ ಮಹಾ ದೊಡ್ಡ ವಿಷಯ? ಅವತ್ತೇ ನಾನು ಕ್ಷಮಿಸಿದೀನಿ ಮರಿ.  ಮಕ್ಕಳು ತಪ್ಪು ಮಾಡೋದು ಸಹಜ‌ ಇನ್ನೂ ಯಾಕೆ ಆ ಬಗ್ಗೆ ಕೊರಗು. Forget it* ಎಂದೆ.

*ನಂಗೊತ್ತು ನೀವು ಕ್ಷಮಿಸಿದೀರ ಅಂತ. ಆದರೆ ನನಗೆ‌ ಸಮಾಧಾನವಾಗಿರಲಿಲ್ಲ. ಎಂಥಾ ಕೆಲಸ ಮಾಡಿಬಿಟ್ನಲ್ಲಾ ಅಂತ ಈಗಲೂ‌‌ ನಾಚಿಕೆಯಾಗುತ್ತೆ. ನಿಮ್ಮ ಹತ್ತಿರ ಮತ್ತೊಮ್ಮೆ ಕ್ಷಮೆ ಕೇಳಬೇಕು ಅಂತ  ಕಾಯ್ತಿದ್ದೆ. ಇಷ್ಟು ವರ್ಷ ಬೇಕಾಯ್ತು ಮಿಸ್. ಮತ್ತೆ ಅವತ್ತೇನಾದ್ರೂ ನೀವು ಇಡೀ ಕ್ಲಾಸಿನೆದುರಿಗೆ ಹೇಳಿಬಿಟ್ಟಿದ್ದರೆ ಅಥವಾ ನಮ್ಮ ಅಮ್ಮ ಅಪ್ಪನಿಗೆ, ಹೆಡ್ಮಾಸ್ಟರಿಗೆ ತಿಳಿಸಿಬಿಟ್ಟಿದ್ದರೆ ನಾನೇನಾಗ್ತಿದ್ನೋ ಗೊತ್ತಿಲ್ಲ ಮಿಸ್. ಆದರೆ ನೀವು ಯಾರ ಎದುರಿಗೂ ಹೇಳದೆ, ನನ್ನ  ಮರ್ಯಾದೆ ತೆಗೀದೆ ನನ್ನ ಡಿಗ್ನಿಟಿ ಉಳಿಸಿದ್ರಿ. I am so greatful to you. ಇವತ್ತು  ಯಾವುದೇ ವಿಚಾರದಲ್ಲಿಯಾದರೂ ಪ್ರಾಮಾಣಿಕತೆ ವಿಶ್ವಾಸಾರ್ಹತೆಗೆ ಎಲ್ಲರೂ‌ ನಂಬೋದು ನನ್ನನ್ನೇ ಮಿಸ್.. ಸಾಕ್ಷಿಗೂ ನನ್ನನ್ನೇ ಕರೆಯೋದು ಮಿಸ್. ನನ್ನ ಬಗ್ಗೆ ಎಲ್ಲರಿಗೂ ತುಂಬಾ ಗೌರವ ಇದೆ ಮಿಸ್. ಅದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಮಿಸ್* ಎಂದ.

ನನ್ನ ಖುಷಿಯೇನು ಕಡಿಮೆಯೇ. ನನಗೂ ಧನ್ಯತೆಯ‌ ಭಾವ. *ನನಗೂ ನಿನ್ನ ಬಗ್ಗೆ ಅಷ್ಟೇ ಹೆಮ್ಮೆ ಇದೆ ಮಗು* ಎಂದು ಸಂತೋಷದಿಂದ‌ ಭಾವುಕಳಾಗಿ ಬೆನ್ನುತಟ್ಟಿದೆ.

-ರತ್ನಾ ಮೂರ್ತಿ

13 Responses

  1. Hema says:

    ತಾವು ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ಕುಗ್ಗಿಸದೆ, ನಿಂದಿಸದೆ, ತಿದ್ದಿದ ಪರಿ ಶ್ಲಾಘನೀಯ.

  2. ಬಿ.ಆರ್.ನಾಗರತ್ನ says:

    ಗುರು ಸ್ಥಾನಕ್ಕೆ ಇರುವ ಸಹನೆ ಪ್ರೀತಿ ತಿದ್ದುವಕೆ ರೀತಿ ಇನ್ನೊಬ್ಬರ ಮುಂದೆ ತೆಜೋವಧೆಯಾಗದಂತೆ ತಪ್ಪು ಮಾಡಿದೆ ವಿದ್ಯಾರ್ಥಿಗೆ ತೋರಿಸಿದ ಮಾರ್ಗದರ್ಶನ ನನಗೆ ಬಹಳ ಮುಂದೆ ತಂದಿತು ಒಳ್ಳೆಯ ಸಂದೇಶ ಹೊತ್ತ ಲೇಖನ ಅಭಿನಂದನೆಗಳು ಮೇಡಂ.

  3. ಸೀತಾ, ಹರಿಹರ says:

    ಶಿಕ್ಷಕಿ ಎರಡನೇ ತಾಯಿ ಎಂಬ ಮಾತು ನಿಜವಾಯ್ತು. ಆ ವೃತ್ತಿ ಮಾಡಿದ ನಿಮ್ಮ ಜೀವನ ಸಾರ್ಥಕವಾಗಿದೆ. ಇದಕ್ಕಿಂತ ಪ್ರಶಸ್ತಿ ಬೇಕೇ?

  4. ನಯನ ಬಜಕೂಡ್ಲು says:

    ಹಾದಿ ತಪ್ಪುವ ಮಕ್ಕಳನ್ನು ಸಮಾಧಾನವಾಗಿ ವಿಚಾರಿಸಿ, ಬುದ್ಧಿ ಹೇಳಿ ಸರಿ ದಾರಿಗೆ ತರುವಲ್ಲಿ ನಿಜಕ್ಕೂ ಅಪಾರ ತಾಳ್ಮೆ ಬೇಕು. ಇದು ಒಬ್ಬ ಒಳ್ಳೆಯ, ಶಿಕ್ಷಕರಿಂದ ಮಾತ್ರ ಸಾಧ್ಯ. ಮೇಡಂ ನಿಮ್ಮ ಕೆಲಸ ಇಲ್ಲಿ ಶ್ಲಾಘನೀಯ.

  5. ಡಾ. ಕೃಷ್ಣಪ್ರಭ ಎಂ says:

    ನಿಮ್ಮ ತಾಳ್ಮೆ ಅನುಕರಣೀಯ

  6. ಚನ್ನಕೇಶವ says:

    ರತ್ನಕ್ಕ,
    ಸರಿಯಾಗಿ ನಿಮ್ಮ ಕರ್ತವ್ಯ ನಿಭಾಯಿಸಿದ್ದೀಯ. ತಾಳ್ಮೆಯಿಂದ ನಾವು ತೆಗೆದುಕೊಳ್ಳುವ ನಿರ್ಧಾರ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ.

  7. ಶಂಕರಿ ಶರ್ಮ says:

    ಪ್ರತಿಯೊಬ್ಬ ಶಿಕ್ಷಕಿ/ಶಿಕ್ಷಕರ ಜೀವನದಲ್ಲಿ ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಆದರೂ ಆ ಮಗುವಿನ ತಪ್ಪನ್ನು ತಾಳ್ಮೆಯಿಂದ ನಾಜೂಕಾಗಿ ತಿದ್ದಿದ ಪರಿ ಬಹಳ ಇಷ್ಟವಾಯ್ತು.. ಕಣ್ಣನ್ನು ಹನಿಗೂಡಿಸಿತು. ಧನ್ಯವಾದಗಳು ಮೇಡಂ.

  8. Venkatasubbaiah K says:

    ಮಕ್ಕಳು ತಮ್ಮ ಮನಸ್ಸನ್ನು ಅರಿತುಕೊಳ್ಳಲು ಘಾಸಿಮಾಡದಂತೆ ತಿದ್ದುವ ಕಲೆ ನಿಜವಾದ ಒಂದು ಗುರುವಿನ ಉತ್ತಮ ಗುಣ

  9. Ramesh K R says:

    Just great. a lesson for the teachers community

  10. sudha says:

    What a great way of handling the situation. hats off to you madam.

  11. Sayilakshmi S says:

    ಎಂದಿನಂತೆ‌ ಉತ್ತಮ ಶೈಲಿ ಹೊತ್ತ ಮಾನವೀಯ ಕಳಕಳಿಯುಳ್ಳ ಅನುಭವ ಪ್ರಧಾನ ಬರಹ. ನೀವು ಬಹಳ‌ ಜನಪ್ರಿಯ ಶಿಕ್ಷಕಿ ಶಿಷ್ಯವತ್ಸಲೆ. ನಿಮ್ಮ ತಾಳ್ಮೆಯ ಫಲ ಎಷ್ಟು ದೊಡ್ಡದು. ಅಭಿನಂದನೆ ಗೆಳತಿ

    • ರತ್ನಾ ಮೂರ್ತಿ says:

      ನಿಮ್ಮ ಅಭಿಮಾನದ ನುಡಿಗಳಿದೆ ಧನ್ಯವಾದಗಳು ಸಾಯಿ ಲಕ್ಷ್ಮಿ

  12. Samatha.R says:

    ಮನಸು ತಟ್ಟಿದ ಬರಹ…ತುಂಬಾ ಚೆನ್ನಾಗಿದೆ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: