ನಾವೇ ಯೋಚಿಸಿ ನೋಡಬೇಕು ಅಲ್ಲವೇ?

Share Button

ಕೃಷ್ಣನ ಹುಡುಕಾಟದಲ್ಲಿ…
ನನ್ನ ಗಂಡ ಆ ಕೃಷ್ಣನಂತಿಲ್ಲ, ಆ ಕೃಷ್ಣನಂತೆ ಮಾತನಾಡುವುದಿಲ್ಲ, ನಗಿಸುವುದಿಲ್ಲ, ನನಗಾಗಿ ಏನೂ ಮಾಡುವುದಿಲ್ಲ, ಅವನಂತೆ ಪ್ರೀತಿ ಮಾಡುವುದಿಲ್ಲ…
ಹೀಗೆ ಆಕೆ ಕನ್ನಡ ರಾಧಾಕೃಷ್ಣ ಧಾರಾವಾಹಿಯಲ್ಲಿನ ಕೃಷ್ಣನಿಗೆ ತನ್ನ ಗಂಡನನ್ನು ಹೋಲಿಸಿಕೊಂಡು ಮಾತನಾಡುತ್ತಿದ್ದರು.
‘ನನ್ನ ಮಗ ಆ ಕೃಷ್ಣನಂತೇ ಆಗಬೇಕು’ ಎಂಬುದು ಮತ್ತೊಬ್ಬರ ಆಶಯ.
‘ನನಗೆ ಆ ಕೃಷ್ಣನಂತಹ ಗೆಳೆಯನಿಲ್ಲ’ ಎಂಬುದು ಇನ್ನೊಬ್ಬರ ಅಳಲು.
ಇದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರಾವಾಹಿಯ (ಹಿಂದಿ ರಾಧಾಕೃಷ್ಣ ಧಾರಾವಾಹಿಯ ಕನ್ನಡ ಅವತರಣಿಕೆ) ಪ್ರಭಾವ.
ನೀ ಪ್ರೀತಿಯೋ,
ನೀ ಪ್ರೇಮವೋ,
ಈ ಕೊಳಲಿನ ಸವಿ ರಾಗವೋ…
ಇದು ಆ ಧಾರಾವಾಹಿಯಲ್ಲಿ ಆಗಾಗ ಕೇಳಿಬರುವ ಹಾಡು.

ಈ ಹಾಡು ಕೆಲವರಲ್ಲಿ ಅದೆಷ್ಟು ಹುಚ್ಚು ಹಿಡಿಸಿದೆ ಎಂದರೆ ಈ ಹಾಡೊಂದನ್ನೇ ಗಂಟಗಟ್ಟಲೆ ಸತತವಾಗಿ ಕೇಳುವವರಿzರೆ. ಜೊತೆಗೆ ಈ ಧಾರಾವಾಹಿಯ ಶೀರ್ಷಿಕೆ ಸಂಗೀತ, ಮಧ್ಯೆ ಮಧ್ಯೆ ಬರುವ ಬೇರೆ ಸಂಗೀತವೂ ಬಹಳಷ್ಟು ಜನರ ಮನಸೂರೆಗೊಂಡಿದ್ದು, ಕೆಲವರ ಮೊಬೈಲ್ ರಿಂಗ್‌ಟನ್ ಆಗಿ ರಿಂಗಣಿಸುತ್ತಿದೆ.

2018 ರ ಅಕ್ಟೋಬರ್‌ನಿಂದ ಹಿಂದಿಯ ಸ್ಟಾರ್ ಭಾರತ್‌ನಲ್ಲಿ ಪ್ರಸಾರವಾಗುತ್ತಿರುವ ಹಿಂದಿ ರಾಧಾಕೃಷ್ಣ ಧಾರಾವಾಹಿಯು ಕನ್ನಡದ ಸ್ಟಾರ್ ಸುವರ್ಣ ಚಾನಲ್‌ನಲ್ಲಿ 2020  ಮೇ 18 ರಿಂದ ಪ್ರಸಾರವಾಗುತ್ತಿದೆ. ನಾನು ಈ ಧಾರಾವಾಹಿಯ ಟಿ‌ಆರ್‌ಪಿ, ಜನಪ್ರಿಯತೆಯ ಬಗ್ಗೆ ಮಾತನಾಡುತ್ತಿಲ್ಲ. ಆಪ್ತಸಮಾಲೋಚಕಿಯಾಗಿ ನಾನು ಇದು ಕೆಲವರ ಮನಸ್ಸಿನ ಮೇಲೆ ಉಂಟುಮಾಡಿರುವ ಪರಿಣಾಮದ ಬಗ್ಗೆ ಹೇಳಲು ಬಯಸುತ್ತೇನೆ.
******
ಜಗತ್ತಿನ ಮೊದಲ ಹಾಗೂ ಪ್ರಮುಖ ಆಪ್ತಸಮಾಲೋಚಕ ಎಂದರೆ ಶ್ರೀ ಕೃಷ್ಣನೇ ಎಂಬುದು ಕೆಲವರ ಅಭಿಮತ. ಇಂಥ ಕೃಷ್ಣನ ಸಲುವಾಗಿಯೇ ಈಗ ಕೆಲವರು ಆಪ್ತಸಮಾಲೋಚಕರನ್ನು ಭೇಟಿಯಾಗುವಂತಿದೆ.

ನಾವು ಪುರಾಣಗಳಲ್ಲಿ ಓದಿರುವಂತೆ, ಹಿರಿಯರಿಂದ ಕೇಳಿ ತಿಳಿದಿರುವಂತೆ ಕೃಷ್ಣನ ಅನೇಕ ಗುಣಗಳಲ್ಲಿ ಹೆಚ್ಚಾಗಿ ಪ್ರಕಟವಾಗಿರುವುದು ಅವನು ತುಂಟ, ಮಾಯಾವಿ, ಹೆಂಗಳೆಯರನ್ನು ಕಾಡುವವನು… ಇತ್ಯಾದಿಯಾಗಿ.

ಆದರೆ ಈಗ ಈ ಧಾರಾವಾಹಿಯಲ್ಲಿ ಕೃಷ್ಣ ವಿಶೇಷವಾಗಿ ಕಂಡುಬರುತ್ತಿರುವುದು ಕೇವಲ ಕಾಡುವವನಾಗಿ ಅಲ್ಲ; ಕಾಯುವವನಾಗಿ. ತನ್ನ ಪ್ರೀತಿಯನ್ನು, ಪ್ರೇಮಿಯನ್ನು ಕಾಯುವವನು, ಕಾಪಾಡುವವನು, ಪ್ರೀತಿಯ ಅನಂತತೆಯನ್ನು ಸಾರುವವನು, ಜಗತ್ತಿಗೇ ಪ್ರೀತಿಯನ್ನು ಕಲಿಸಲು ಬಂದವನು, ಪ್ರೀತಿಯೇ ಮೈವೆತ್ತಂತೆ ಕಾಣುವವನು, ತನ್ನ ತಾಯಿಯನ್ನು ಅಳುವಂತೆ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡುವವನು, ಜೊತೆಗೆ ಕಷ್ಟ ಬಂದಾಗ ಸ್ವತಃ ಪರಿಹರಿಸುವವನು ಅಥವಾ ಪರಿಹಾರದ ದಾರಿ ತೋರಿಸುವವನು, ತನ್ನ ಸುತ್ತಮುತ್ತಲಿನ ಜನರಿಗೆ ನೆರವಾಗುವವನು… ಇನ್ನೂ ಏನೇನೋ ಆಗಿ ಕಾಣುತ್ತಿzನೆ.
‘ಇಂಥ ಕೃಷ್ಣ ನನ್ನ ಮನೆಯಲ್ಲಿ ಇರಬಾರದೇ?’
‘ಇಂಥ ಕೃಷ್ಣ ನನ್ನ ಸಖನಾಗಬಾರದೇ?’
‘ಇಂಥ ಕೃಷ್ಣನ ಗುಣ ಇರುವವನು ನನ್ನ ಸಂಗಾತಿಯಾಗಿ ದೊರೆಯಬಾರದೇ?’
‘ತಾಯಿಯ ಕಣ್ಣಲ್ಲಿ ನೀರನ್ನು ನೋಡಬಯಸದ ಕೃಷ್ಣನಂಥ ಮಗ ಇರಬಾರದೇ?’

ಹೀಗೆ ಆಲೋಚನೆಯನ್ನು ಉಂಟುಮಾಡಿರುವ ಆ ಕೃಷ್ಣ ಪರಮಾತ್ಮ, ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು, ‘ಏನಾದರೂ ಪವಾಡ ಮಾಡಿ ಪ್ರಸ್ತುತ ಇರುವ ನನ್ನ ಸಂಗಾತಿಯನ್ನು ಮಾರ್ಪಡಿಸಿ ಅವನಂತೆ ಮಾಡಬಾರದೆ?’… ಎನ್ನುವ ಮಟ್ಟಕ್ಕೂ ಹೋಗಿದ್ದಾನೆ.
ಕೆಲವರು ಈಗ ವಿಶೇಷವಾಗಿ ಕೃಷ್ಣನನ್ನು ಆರಾಧಿಸಲು ತೊಡಗಿದ್ದಾರೆ. ‘ಇಷ್ಟದಿನ ಇಂಥ ಕೃಷ್ಣನನ್ನು ಪೂಜಿಸಲೇ ಇಲ್ಲವಲ್ಲ’, ‘ಕಳ್ಳ ಕೃಷ್ಣ ಅದು ಹೇಗೆ ನನ್ನಿಂದ ದೂರವಾಗಿದ್ದ, ನಾನು ಹೇಗೆ ಅವನನ್ನು ಮರೆತುಬಿಟ್ಟಿದ್ದೆ’, ‘ಕೃಷ್ಣನ ಜೀವನ ಮೌಲ್ಯ ನನಗೇಕೆ ಅಥವಾಗಿರಲಿಲ್ಲ, ಅವನ ನೀತಿ, ಉಪದೇಶ ನಾನು ಗ್ರಹಿಸದೇ ಹೋದೆನಲ್ಲಾ..’ ಎಂದು ಪೇಚಾಡಿಕೊಂಡು ಹೊಸದಾಗಿ ಶ್ರೀ ಕೃಷ್ಣನ ಆರಾಧನೆಗೆ ತೊಡಗಿದ್ದಾರೆ.

ಅಬ್ಬಬ್ಬಾ, ಎಷ್ಟೊಂದು ಕೋರಿಕೆಗಳು, ಎಷ್ಟೊಂದು ಬದಲಾದ ನಡವಳಿಕೆಗಳು! ವಯಸ್ಸಿನ ಅಂತರವಿಲ್ಲದೆ ಹೀಗೆ ಕೇಳಿಕೊಳ್ಳುತ್ತಿರುವವರು, ಅಂದುಕೊಳ್ಳುತ್ತಿರುವವರು, ನಡೆದುಕೊಳ್ಳುತ್ತಿರುವವರು ಕೃಷ್ಣನ ಮಾಯೆಗೆ ಒಳಗಾದವರೇ ಅಥವಾ ನಿಜವಾಗಲೂ ಅವರ ಸುಪ್ತ ಮನಸ್ಸಿನಲ್ಲಿ ಅಡಗಿ ಕುಳಿತಿದ್ದ ವಿಷಯ ಈಗ ಧಾರಾವಾಹಿಯ ಕೃಷ್ಣನ ಮೂಲಕ ಹೊರಬಂದಿವೆಯೇ?

ಅದೂ ಕೃಷ್ಣನಂತೆಯೇ?- ಕೆಲವೊಮ್ಮೆ ಕೃಷ್ಣ ನಿಜ ಹೇಳಿದರೂ ಗೊತ್ತಾಗುತ್ತಿರಲಿಲ್ಲ, ಅವನು ಸೂಚ್ಯವಾಗಿ ವಿಷಯ ವ್ಯಕ್ತಪಡಿಸುತ್ತಿದ್ದರೂ ತಿಳಿಯುತ್ತಿರಲಿಲ್ಲ. ತಾನು ಮಾಡುವ ಕೆಲಸಗಳಿಗೆ ಸ್ಪಷ್ಟೀಕರಣ ನೀಡುತ್ತಲೂ ಇರಲಿಲ್ಲ. ಹಾಗಾಗಿ ಅವನು ಮಾಯಾವಿಯಾಗಿಯೇ ಪ್ರಸಿದ್ಧನಾಗಿಬಿಟ್ಟ. ಕೆಲವೊಮ್ಮೆ ನಮ್ಮ ಮನಸ್ಸುಗಳು ಹಾಗೆ, ಅರ್ಥ ಮಾಡಿಕೊಳ್ಳುವುದು ಕಷ್ಟ. ಅಂತರಂಗವನ್ನು ತೆರೆದಿಡುವುದು ಸುಲಭವಲ್ಲ, ಕೆಲವೊಮ್ಮೆ ಕೆಲವು ಭಾವನೆಗಳ ಮೂಲಕ ನಾವು ಏನೆಂಬುದನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿದರೂ ಫಲ ದೊರೆಯದೇ ಹೋಗಬಹುದು. ಹಾಗಂತ ಈ ಮನಸ್ಸುಗಳು ಮಾಯಾವಿ ಆಗಲು ಸಾಧ್ಯವಿಲ್ಲ; ಕೆಲವರಿಗೆ ಅರ್ಥವಾಗಲು ಕಠಿಣವಾಗಬಹುದು.

ಇದೇ ಈಗಿನ ಒಂದು ಸಮಸ್ಯೆಯಾಗಿರಬಹುದು. ಈ ಸಮಸ್ಯೆ ಹಿಂದಿನಿಂದಲೂ ಇದ್ದು, ಈಗ ಪ್ರಕಟವಾಗುತ್ತಿರಲೂ ಬಹುದು. ಸಾಮಾನ್ಯವಾಗಿ ನಾವು ಕಷ್ಟದಲ್ಲಿ ಇರುವಾಗ ಪರಿಹಾರ ನೀಡುವ, ನಮಗೆ ಮಾರ್ಗದರ್ಶನ ಮಾಡುವ ಹಿತೈಷಿಗಳು ಬೇಕು ಎನಿಸುತ್ತದೆ. ಇನ್ನೂ ಕೆಲವೊಮ್ಮೆ, ಏನೂ ಹೆಚ್ಚಿನ ಕಷ್ಟವಿಲ್ಲದಿದ್ದರೂ ನಮ್ಮ ಭಾವನೆಗಳಿಗೆ ಸ್ಪಂದಿಸುವವರು ಇರಬೇಕು ಎನಿಸುತ್ತದೆ, ಮತ್ತೊಮ್ಮೆ ನಮ್ಮನ್ನು ಅರ್ಥ ಮಾಡಿಕೊಂಡು, ನಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುವವರು ಸಿಗಬೇಕು ಎನಿಸುತ್ತದೆ.

ಇದು ಸಹಜವಾದದ್ದೇ. ಅಪೇಕ್ಷೆ ತಪ್ಪಲ್ಲ, ಆದರೆ ನಮ್ಮ ಪರಿಧಿಯ ವ್ಯಾಪ್ತಿಯಲ್ಲಿ ನಾವು ಬಯಸಿದಂತಹವರು ನಮಗೆ ಸಿಗದಿದ್ದರೆ, ನಮಗೆ ಸಿಗುವವರನ್ನೇ ನಾವು ಸರಿಮಾಡಿಕೊಳ್ಳಬೇಕಾಗುತ್ತದೆ, ಅವರೊಂದಿಗೆ ಹೊಂದಿಕೊಳ್ಳಬೇಕಾಗುತ್ತದೆ. ಯಾರೂ ಪರಿಪೂರ್ಣರಲ್ಲ, ಕೆಲವೊಮ್ಮೆ ನಮ್ಮ ಅಪೇಕ್ಷೆಯಲ್ಲೂ ದೋಷವಿರಬಹುದು. ನೋಡುವ ನೋಟದಲ್ಲೂ ವ್ಯತ್ಯಾಸವಿರಬಹುದು, ಇನ್ನೊಬ್ಬರನ್ನು ಅಥ ಮಾಡಿಕೊಳ್ಳುವ ರೀತಿಯಲ್ಲೂ ತಪ್ಪಿರಬಹುದು, ನಾವೇ ಯೋಚಿಸಿ ನೋಡಬೇಕು ಅಲ್ಲವೇ?
ಎಲ್ಲರೂ ಕೃಷ್ಣನಾಗಲು ಸಾಧ್ಯವಿಲ್ಲ. ಹಾಗೇ ಎಲ್ಲರೂ ರಾಧೆಯರೂ ಅಲ್ಲ. ಯಶೋದಾ ಮಾತೆಯೂ ಅಲ್ಲ, ದ್ವಾಪರ ಯುಗವಂತೂ ಅಲ್ಲವೇ ಅಲ್ಲ. ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ ನಮ್ಮನಮ್ಮ ಮನೆಯಲ್ಲಿ, ನಮ್ಮ ನಮ್ಮ ಮನಸ್ಸಿನಲ್ಲಿ ಕೃಷ್ಣನಿದ್ದೇ ಇರುತ್ತಾನೆ.

-ಡಿ. ಯಶೋದಾ

17 Responses

 1. Vasundhara K M says:

  ಬಹಳ ಚೆನ್ನಾದ ಬರಹ.

 2. ವಿದ್ಯಾ says:

  ನಮಸ್ಕಾರ,,, ಸುಲಲಿತವಾಗಿ ಮನಸ್ಸಿಗೆ ನಾಟುವಂತೆ
  ಚಿಂತನೆ ಗೆ ಹಚ್ಚುವಂತಿದೆ ಲೇಖನ,,, ನನಗೆ ತುಂಬಾ ಇಷ್ಟ ವಾಯಿತು ಮೇಡಂ,,, ಹೀಗೆ ಲೇಖನ ಗಳು ಬರುತ್ತಿರಲಿ

 3. SHRAVANA KUMARI T S says:

  ಚಂದದ ಬರಹ

 4. Hema says:

  ಹೌದು..ಸೂಕ್ತ ಅರಿವು ಮೂಡಿಸುವ ಬಹಳ ಸಕಾಲಿಕವಾದ ಬರಹ..

 5. ವಿಭಾ ಪುರೋಹಿತ says:

  ಚೆಂದದ ವಿಶ್ಲೇಷಣೆ ಯಶೋದಾ

 6. Anonymous says:

  ಚೆಂದದ ವಿಶ್ಲೇಷಣೆ

 7. ನಯನ ಬಜಕೂಡ್ಲು says:

  ಸೂಪರ್. ವಾಸ್ತವವನ್ನು ಅರ್ಥ ಮಾಡಿಸುವ ಒಂದು ಪ್ರಯತ್ನ.

 8. ಉತ್ತಮ ಮಾಹಿತಿಯನ್ನು ನೀಡುವ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ ಅಭಿನಂದನೆಗಳು.

 9. Padma Anand says:

  ಪ್ರೌಢ ವಿಶ್ಲೇಷಣೆ. ಮನಸ್ಸಿಗೆ ನಾಟುವಂತಿದೆ.

 10. ಮಧುರಾ ಕರ್ಣಮ್. says:

  ನಿಜ ಯಶೋಧಾ. ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಬೇಕೆಂದು ಬಯಸುವುದು ಸಹಜ. ಯಾರೂ ಪರಿಪೂರ್ಣ ರಲ್ಲ. ಇರುವವರಲ್ಲೇ ನಾವು ಸರಿ ಮಾಡಿಕೊಳ್ಳಬೇಕು… ಒಳ್ಳೆಯ ಮಾತುಗಳು.

 11. Anonymous says:

  ಒಳ್ಳೆಯ ಬರಹ.

 12. ಗಿರೀಶ ಬಾಬು says:

  ನಮಸ್ಕಾರ ಯಶೋಧ ಲೇಖನ ಚೆನ್ನಾಗಿದೆ. ಕೃಷ್ಣ ಪ್ರೇಮ ಎನ್ನುವ ಮಹತ್ತಾದ ವಿಷಯವನ್ನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ರಾಧಾಕೃಷ್ಣರ ವ್ಯಕ್ತಿತ್ವದಲ್ಲಿ ರಾಧೆಯಂತೆ ಗೆಳತಿ ಕೃಷ್ಣನಂಥ ಗೆಳೆಯನನ್ನು ಪಡೆದುಕೊಳ್ಳುವ ಹಂಬಲ ಎಲ್ಲರಿಗೂ ಇದ್ದೇ ಇರುತ್ತದೆ. ಯಾವುದೇ ವ್ಯಕ್ತಿ ಬೆಳೆಯುತ್ತ ಹೋದಂತೆ ಹಾಗೆಯೇ ಮಾಗುತ್ತಾ ಹೋದಂತೆ ಒಂದಷ್ಟು ಈ ದಿಕ್ಕಿನಲ್ಲಿ ಪಯಣ ಪ್ರಾರಂಭಿಸಬಹುದು. ವೈಯಕ್ತಿಕವಾಗಿ ನಾನು ಇದನ್ನು ಒಂದುರೀತಿಯ ತಪಸ್ಸು ಎಂದು ಕರೆಯಲು ಇಚ್ಚಿಸುತ್ತೇನೆ.
  ಆದರೆ ಈ ಅವಕಾಶ ನಮ್ಮೆಲ್ಲರಿಗೂ ಇದೆ ಎನ್ನುವ ನಂಬಿಕೆ ನಮ್ಮಲ್ಲಿ ಬಲವಾಗಿರಬೇಕು. ರಾಧೆಗೆ ಕೃಷ್ಣನ ಮೇಲೆ ಮತ್ತು ಕೃಷ್ಣನಿಗೆ ರಾಧೆಯ ಮೇಲೆ ಇರುವಂತಹದ್ದು. ಸಾಧಾರಣವಾಗಿ ಟಿವಿ ಮುಂದೆ ಕೂಡದ ನಾನು ರಾಧಾಕೃಷ್ಣ ಕಂತುಗಳನ್ನು ನೋಡಿದೆ. ಈ ದಾರಾವಾಹಿ ಗಾಗಿ ಸಂಶೋಧನೆ ಮಾಡಿದ ಮತ್ತು ಸಂಭಾಷಣೆಯನ್ನು ಬರೆದ ತಂಡ ನಿಜವಾಗಿಯೂ ಶ್ಲಾಘನೆಗೆ ಅರ್ಹ. ಹಾಗೆಯೇ ಈ ಪಾತ್ರಗಳ ಕುರಿತಂತೆ ನಿಮ್ಮ ಬರವಣಿಗೆ ಮತ್ತು ಅಭಿಪ್ರಾಯವು ಕೂಡ ಅಭಿನಂದನಾರ್ಹ. ವಂದನೆಗಳು ಗಿರೀಶ ಬಾಬು

 13. Anonymous says:

  ಚೆಂದದ ವಿವರಣೆ

 14. ಶಂಕರಿ ಶರ್ಮ says:

  ಇನ್ನೊಬ್ಬರಂತೆ ತಾನಾಗಬಯಸುವವರು ಬಹಳ ಮಂದಿ ಇದ್ದಾರೆ.. ಆದರೆ, ನಮ್ಮೊಳಗೇ ಎಲ್ಲವೂ ಅಡಗಿರುವಾಗ ಅದನ್ನು ಹುಡುಕಿ ಮೇಲೆ ತರಲು ಪ್ರಯತ್ನಿಸುವ ಬಗ್ಗೆ ಬಹಳ ಸೂಕ್ಷ್ಮವಾಗಿ ತಿಳಿಸಿರುವ ಲೇಖನ ಆಪ್ತವಾಗಿದೆ.. ಧನ್ಯವಾದಗಳು ಯಶೋದಾ ಮೇಡಂ

 15. Anonymous says:

  ಒಳ್ಳೆಯ ಲೇಖನ. ಅಭಿನಂದನೆಗಳು.

 16. ಡಾ.ರಾಧಿಕಾರಂಜಿನಿ says:

  ಸೂಪರ್ ಲೇಖನ. ಧಾರವಾಹಿಗಳ ಪರಿಣಾಮಗಳು ಅನೇಕ, ಈ ರೀತಿಯ ಅನುಭವದ ಪರಿಣಾಮ ವಿಭಿನ್ನ. ವಾಸ್ತವತೆಯ ಅರಿವಿನಲ್ಲಿ‌ ಬಯಸುವುದು ತಪ್ಪಲ್ಲ, ನೀವಂದಂತೆ ಇತಿಮಿತಿ‌ ಎಂದಾಗ ಭಾವನೆಗಳು ಬರುವುದಲ್ಲ, ವಾಸ್ತವ ಬದುಕಿಗೆ ತೊಂದರೆ ‌ಆಗದಿದ್ದರೆ ಸಾಕು. ಉತ್ತಮ ಆಲೋಚನೆಗಳ ಬರಹ. ಪ್ರತಿಯೊಂದು ಧಾರವಾಹಿಗಳಲ್ಲಿ ಅನಿಸುತ್ತದೆ. ಆದರೆ ನಿಮ್ಮಂತೆ ಬರೆಯಲಾಗದು. ಬರೆದ ಕೆಲಬರಹಗಳನ್ನೇ ತಮ್ಮ ಜೀವನದ್ದೇ ಎಂದು ಬರೆಯುವ ಸ್ವಾತಂತ್ರ್ಯ ಕಳೆಯುವವರೇ ಹೆಚ್ಚಾಗಿದ್ದಾರೆ. ಏನು ಬರೆಯುವುದು?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: