ಪುಸ್ತಕ ಪರಿಚಯ: ಕೃಪಾ ದೇವರಾಜ್ ಅವರ ‘ಭಾವದ ಕದತಟ್ಟಿ’

Share Button

ಸರಳ, ಸುಂದರ, ಅರ್ಥಗರ್ಭಿತ ಕವಿತೆಗಳ ಒಡತಿ ಶ್ರೀಮತಿ ಕೃಪಾ ದೇವರಾಜ್ ಇವರ ಪ್ರಥಮ ಕಾವ್ಯ ಕೃತಿ ‘ಭಾವದ ಕದ ತಟ್ಟಿ’ ನೇರವಾಗಿ ನಮ್ಮ ಹೃದಯವನ್ನು ತಟ್ಟುವಂತಹ ಕವಿತೆಗಳು. ಓದಿದೊಡನೆ ಮನಸ್ಸಿನ ಕದ ದಾಟಿ ನೇರವಾಗಿ ಒಳಗೆ ಬಂದು ನೆಲೆಗೊಳ್ಳುವ ಸಾಲುಗಳು. ಆದರಿಂದ ಇವರ ಕವಿತೆಗಳಿಗೆ ಮುಂದೊಂದು ದಿನ ಭದ್ರ ನೆಲೆ ಸಿಗುತ್ತವೆ ಎಂಬ ವಿಶ್ವಾಸವನ್ನು  ನಾವೆಲ್ಲರೂ ಇರಿಸಿಕೊಳ್ಳಬಹುದು. ಕೃತಿಯಲ್ಲಿ ತಮ್ಮ ಮನದ ಮಾತು ಹೇಳುವಾಗ ಅವರ ಅಕ್ಷರ ಪ್ರೀತಿಯ ಆಳವಾದ ಅರಿವು ನಮಗಾಗುತ್ತದೆ. ಪುಸ್ತಕಗಳನ್ನು ಪ್ರೀತಿಸುವವರು ಅಪಾರ ಜೀವನ ಪ್ರೀತಿಯನ್ನು ಹೊಂದಿರುತ್ತಾರೆ ಎಂಬ ನನ್ನನಿಸಿಕೆಯನ್ನು  ಕೃಪಾರವರು ಸಾಬೀತು ಪಡಿಸಿದ್ದಾರೆ. ಇದಕ್ಕೆ ಇವರ ಇನ್ನುಳಿದ ಅನೇಕ ಹವ್ಯಾಸಗಳು ಸಾಕ್ಷಿ.  ಚಿಕ್ಕಂದಿನಿಂದಲೇ ಇದ್ದ ಇವರ ಅಪಾರವಾದ ಓದಿನ ಹಸಿವು ಇವರ ಈಗಿನ ಬರವಣಿಗೆಯ ಬೆಳವಣಿಗೆಗೆ ಕಾರಣವಾಗಿದೆ.

‘ಅವಳು ಬುದ್ಧನಲ್ಲ ಹೆಣ್ಣು’ ಎಂಬ ಅರ್ಥವತ್ತಾದ ಕವಿತೆಯಲ್ಲಿ “ಒಟ್ಟಾಗಿರುವುದು ಏತಕ್ಕೆ …? ಬಿಟ್ಟು ಬಿಡುವುದಿದ್ದರೆ / ಪಟ್ಟು ಹಿಡಿದು ನಡೆದು ಬಿಡುತ್ತಿದ್ದೆ / ನಟ್ಟಿರುಳಲ್ಲಿ ಬುದ್ಧನಂತೆ……! ಎಂದು ಪ್ರಶ್ನಿಸಿ ಇರುಳಲ್ಲಿ ಬಿಟ್ಟು ಹೋದ ಬುದ್ಧನ ಪ್ರಜ್ಞೆಯನ್ನು ಧೈರ್ಯದಿಂದ ಪ್ರಶ್ನಿಸುವಂತಹ ಮನೋಭಾವದ ಕವಿ ಮನಸ್ಸು ಇವರದು. ಸ್ತ್ರೀ ಪರ ನೆಲೆಯಲ್ಲಿ ಚಿತ್ರಿಸಿದಂತಹ ಈ ಕವಿತೆ ನಮ್ಮ ಒಳಗನ್ನು ಗಾಢವಾಗಿ ತಟ್ಟುತ್ತದೆ.

ನೆನಪು ಮತ್ತು ಅ‌ನುಭವ ಒಂದಕ್ಕೊಂದು ಪೂರಕವಾದ ಅಂಶ. ನಮ್ಮ ಅನುಭವಗಳು ಸವಿ ನೆನಪುಗಳಾಗಿ ಪ್ರಸ್ತುತ ದಿನದಲ್ಲಿರುವಾಗ ಅದರಲ್ಲಿ ಅತ್ಯುತ್ತಮವೆನಿಸುವುದನ್ನು ಹೆಕ್ಕಿ ಕವಿತೆ ಸ್ಪುರಿಸಿದಾಗ ಮಾತ್ರವೆ ಕಟ್ಟುವ ಕಲೆ ಕೃಪಾರವರಿಗೆ ಕರಗತವಾಗಿದೆ. ಕವಿತೆಯ ಮೂಲ ಸೆಲೆಯು ಇದೆ ಅಲ್ಲವೇ? ನೆನಪು ಮಾಗಿ ಹರಳು ಕಟ್ಟಿದ ಮೇಲೆ ಕವಿತೆ ಹೆಣೆದರೆ ಅದು ತುಂಬಾ ಗಟ್ಟಿತನದಿಂದ ಕೂಡಿರುತ್ತದೆ. ಹುಟ್ಟಿದ ದಿನದಿಂದ  ಪ್ರತಿದಿನ ಸಹಚರ್ಯದಲ್ಲಿರುವ ಅಮ್ಮನ ಕುರಿತು ಈಗ ಬರೆದ ಕವಿತೆ ಮಾಗಿದ ಪ್ರತಿಮೆಯಾಗಿದೆ. ನೆರೆ ಬಿದ್ದ ಹಣೆ/ ಮಾಸಿದ ಯೌವ್ವನ / ಗುಳಿಬಿದ್ದ ಕಣ್ಣು / ಸುಣ್ಣದ ಮೈಮನ / ಈಗ ಬದಲಾದ ಉರುಳು ಚಕ್ರದಲ್ಲಿ …… ತುಂಬಾ ಕಾಡುವ ಕವಿತೆ ಪ್ರತಿ ಓದುಗರ ಎದೆಯಲ್ಲಿ ನೆಲೆ ನಿಲ್ಲುವಂತದ್ದು.

ಕೊಡಗಿನ ದುರಂತದ ಬಗ್ಗೆ ಕವಿಮನಸ್ಸು ಕಂಪಿಸದಿದ್ದರೆ ಅದಕ್ಕೆ ಅರ್ಥವೆ ಇಲ್ಲ ಅಲ್ಲವೇ? ‘ದಿಬ್ಬಣದೂರಲ್ಲಿ ಸಾವಿನ ಸೂತಕ ‘ಎಂಬ ಅಪರೂಪದ ಶೀರ್ಷಿಕೆಯಲ್ಲಿ ಮನಮಿಡಿಯುವ ಸಾಲುಗಳಿವೆ. ಕವಿತೆ ಎಂಬುದು ಸುಖದ ಅನ್ವೇಷಣೆಯು ಹೌದು. ನಮ್ಮೊಳಗಿನ ಸುಖ , ಶಾಂತಿ , ನೆಮ್ಮದಿ , ಆರೋಗ್ಯ ಎಲ್ಲವು  ಕವಿತೆಯ ಸಖ್ಯದಲ್ಲಿದೆ ಎಂದರೆ ನೀವು ನಂಬಲೇಬೇಕು. ಆದರೆ ಅದನ್ನು ಅಂತರ್ಗತಗೊಳಿಸುವ ಕಲೆ ನಮಗೆ ಒಲಿಯಬೇಕು ಅಷ್ಟೆ. ಇವರ ಸುಖದ ಅನ್ವೇಷಣೆ ಎಂಬ ಕವಿತೆಯಲ್ಲಿ ಈ ಅನ್ವೇಷಣೆ ವ್ಯರ್ಥ ಎಂದು ವ್ಯಾಖ್ಯಾನಿಸಿದರು , ಸುಖ ಅದಾಗಿಯೆ ಬಳಿಗೆ ಬರುವುದಿಲ್ಲ , ನಾವೆ ಅದನ್ನರಸಿ ಹೋಗಬೇಕೆಂಬ ಒಂದು ಸಾಲು ನಮ್ಮ ಗಮನ ಸೆಳೆಯುತ್ತದೆ. ಕೊನೆಗು ಸುಖ ಸಿಗಲೇ ಇಲ್ಲ ಇದು ವ್ಯರ್ಥ ಪ್ರಯತ್ನ . ಈ ನಿರಂತರ ಹುಡುಕಾಟದಲ್ಲಿ ಯಾವ ಮಹಾಮಹಿಮರಿಗು ಸುಖದ ಅನ್ವೇಷಣೆ ಆಗಲಿಲ್ಲ ಎಂಬುದು ಕವಯತ್ರಿಯ ನಿಲುವಾದರು , ಈ ಕವಿತೆಗಳನ್ನು ಬರೆಯುವ ಸುಖದಲ್ಲಿಯೆ ಇವರು ಸುಖ ಕಾಣುತ್ತಿದ್ದಾರೆ ಎಂಬುದು ನಮ್ಮರಿವಿಗೆ ಬರುತ್ತದೆ. ಇದರೊಂದಿಗೆ ಹೇಳಬಹುದಾದ ‘ನಗಲು ಕಲಿತಿದ್ದೇನೆ ‘ಎಂಬ ಇನ್ನೊಂದು ಕವಿತೆ ಇವರ ಸುಖದ ಅನ್ವೇಷಣೆ ಕವಿತೆಗೆ ಪೂರಕವಾಗಿಯು , ಮುಖಾಮುಖಿಯು  ಆಗಿ‌ ನಿಲ್ಲುತ್ತದೆ. ಮೌನದ ವಿಷಾದ ಮುಟ್ಟಿ / ಮೊಗ ತುಂಬಾ ನಗೆ ಮಲ್ಲಿಗೆ ಹರಡುವ ಕಲೆ ಕಲಿತಿದ್ದೇನೆ.……ಹೀಗೆ ಸಾಗುತ್ತದೆ.

ಕೃಪಾರವರ ಭಾವದ ಕದ ತಟ್ಟಿ ಸಂಕಲನದಲ್ಲಿರುವ ನಲ್ವತ್ತು ಕವಿತೆಗಳು ಒಂದೊಂದು ರೀತಿಯ ಭಾವಭಿತ್ತಿಯನ್ನು ನಮ್ಮ ಮನದ ಕ್ಯಾನ್ವಾಸ್ ಗೆ ಸುಲಭವಾಗಿ ರವಾನಿಸಿಬಿಡುತ್ತವೆ. ಕುಂಚದಲ್ಲದ್ದಿ ತೆಗೆದ ಖಾಲಿ ಹಾಳೆ ಅನುರೂಪವಾದ ಬಣ್ಣಗಳನ್ನು ಹೊಂದಿ ಕಾಣುವಂತೆ ಕವಿತೆಗಳ ಚಿತ್ರಣ ನಮ್ಮಂತರಂಗಕ್ಕೆ ಕಾಣುತ್ತದೆ. ಕೃಪಾರವರ ಕವಿತೆಗಳು ಒಂದು ಕ್ಷಣದ ಓದಿಗೆ ದಕ್ಕುವುದಕ್ಕಿಂತಲೂ , ನಿರಂತರ ಕಾಡುತ್ತಿರುತ್ತದೆ ಎಂಬುದೆ ಹೆಚ್ಚು ಸೂಕ್ತ . ಇವರ ಭಾವದ ಬತ್ತಳಿಕೆಯಲ್ಲಿ ಇನ್ನು ಕವಿತೆಗಳು ನಿರಂತರ ಜನಿಸುತ್ತಿರಲಿ ಎಂಬುದಾಗಿ ನಾವೆಲ್ಲ ಆಶಿಸೋಣ.

-ಸಂಗೀತ ರವಿರಾಜ್

4 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ ಪುಸ್ತಕ ಪರಿಚಯ

 2. ಸಂಗೀತ ರವಿ ರಾಜ್ says:

  ಧನ್ಯವಾದಗಳು ನಯನಾರವರೆ

 3. ಸಂಗೀತ ರವಿ ರಾಜ್ says:

  ಧನ್ಯವಾದಗಳು ಸುರಹೊನ್ನೆ

 4. ಕೃಪಾ ದೇವರಾಜ್ says:

  ಧನ್ಯವಾದಗಳು……
  ಸಂಗೀತ ರವಿರಾಜ್ ಅವರಿಗೂ ಹಾಗು
  ಪ್ರಕಟಿಸಿದ ಸುರಹೊನ್ನೆಯವರಿಗೂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: