ಅಕ್ಕಾ ಕೇಳವ್ವಾ.. ನನ್ನ ಪುಟ್ಟ ಹೆಜ್ಜೆ ಸರಿಯಿದೆಯಾ?

Share Button

ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು, ಉದ್ಯೋಗ ಅರಸಿ ಹೊರಟೆ. ಹಾದಿಯಲ್ಲಿ ಎದುರಾದ ಎಡರು ತೊಡರುಗಳನ್ನು ತಾಳ್ಮೆಯಿಂದ ಎದುರಿಸುತ್ತಾ ಮುಂದೆ ಸಾಗಿದೆ. ನಿನ್ನದೇ ನೆನಪು ಕಾಡುತ್ತಿತ್ತು. ಅಕ್ಕಾ ಹೇಗೆ ಎದುರಿಸಿದೆ ನೀನು ಈ ಲೋಕದ ಕಷ್ಟ ಕಾರ್ಪಣ್ಯಗಳನ್ನು?

ಮದುವೆಯಾದ ಮೂರೇ ತಿಂಗಳಲ್ಲಿ ಗಂಡನ ನಿಜವಾದ ರೂಪ ಕಂಡಾಗ ನಾನು ಬೆಚ್ಚಿ ಬಿದ್ದೆ. ತಂದೆಯಿಲ್ಲದ ನನಗೆ, ಅಣ್ಣನೇ ಮುಂದೆ ನಿಂತು, ಮದುವೆ ಮಾಡಿದ್ದ. ಹುಡುಗ ಸರ್ಕಾರಿ ಕೆಲಸದಲ್ಲಿದ್ದಾನೆ, ತಂಗಿ ಯಾವುದೇ ಕೊರತೆಯಿಲ್ಲದೆ ಜೀವನ ಸಾಗಿಸಬಹುದು ಎಂಬ ಲೆಕ್ಕಾಚಾರ ಹಾಕಿ ತುಸು ಹೆಚ್ಚೇ ವರದಕ್ಷಿಣೆ, ವರೋಪಚಾರ ಎಂದೆಲ್ಲಾ ಕೊಟ್ಟು, ಮದುವೆ ಮಾಡಿ ಅತ್ತಿಗೆಯ ಕಣ್ಣು ಕೆಂಪಾಗಿಸಿದ್ದ. ನನ್ನ ಮದುವೆಗೆ ಅಣ್ಣ ಸಾಕಷ್ಟು ಸಾಲ ಮಾಡಿದ್ದ. ಮದುವೆಯಾದ ಹೊಸದರಲ್ಲಿ ಪತಿರಾಯ ಚೆನ್ನಾಗಿಯೇ ನೋಡಿಕೊಂಡ. ನಿಧಾನವಾಗಿ, ಅವನ ಬಣ್ಣ ಬೆಳಕಿಗೆ ಬಂತು. ತನ್ನ ಕಛೇರಿಯಲ್ಲಿ ಕೆಲಸ ಮಾಡುವ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ವಾರದಲ್ಲಿ ನಾಲ್ಕು ದಿನ ಮನೆಗೇ ಬರುತ್ತಿರಲಿಲ್ಲ. ವಿಷಯ ತಿಳಿದಾಗ ನಾನು ಅವನ ಜೊತೆ ಜಗಳವಾಡಿದೆ, ಕೂಗಾಡಿದೆ, ಗೋಳಾಡಿದೆ. ಅಚ್ಚರಿ ಎಂದರೆ, ಅವನಿಗೆ ಈ ವಿಷಯದ ಬಗ್ಗೆ ಯಾವುದೇ ಅಪರಾಧಿ ಪ್ರಜ್ಞೆ ಕಾಡುತ್ತಿರಲಿಲ್ಲ. ಇದು ಸರ್ವೇ ಸಾಮಾನ್ಯವಾದ ಸಂಗತಿಯಾಗಿತ್ತು ಅವನಿಗೆ. ನನ್ನ ಬಿಟ್ಟರೂ ಬಿಟ್ಟಾನು, ಆದರೆ ಆ ಹೆಣ್ಣಿನ ಸಂಗ ಬಿಡಲು ಅವನು ಸಿದ್ದನಿರಲಿಲ್ಲ, ನನಗೆ ಅಂಥವನ ಜೊತೆ ಸಂಸಾರ ಮಾಡಲು ಮನಸ್ಸಾಗಲಿಲ್ಲ. ಎಲ್ಲಿಗೆ ಹೋಗಲಿ? ತವರು ಮನೆಗೆ ಹೋಗಿ ಅಣ್ಣನಿಗೆ ಹೊರೆಯಾಗಲು ಮನಸ್ಸಿಲ್ಲ. ಕೊನೆಗೆ ಉದ್ಯೋಗ ಅರಸಿ ಹೊರಟೆ. ನನ್ನ ಗೆಳತಿಯೊಬ್ಬಳು ಮೆಡಿಕಲ್ ಕಾಲೇಜಿನ ಹೆಣ್ಣು ಮಕ್ಕಳ ಹಾಸ್ಟೆಲ್ಲಿನಲ್ಲಿ ವಾರ್ಡನ್ ಹುದ್ದೆ ಖಾಲಿಯಿದೆ, ಬರುತ್ತೀಯಾ? ಎಂದಳು. ತಕ್ಷಣ, ಗಂಡನಿಗೊಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಹೊರಟೆ. ಎಲ್ಲಿಲ್ಲದ ಆತಂಕ, ಭಯ ಕಾಡುತ್ತಿತ್ತು. ಬೇರೆ ದಾರಿಯಿರಲಿಲ್ಲ.

ನನ್ನ ಸುದ್ದಿ ತಿಳಿದ ತಾಯಿ, ಅಣ್ಣ ಬಹಳ ಬೇಸರ ಪಟ್ಟರು. ಗಂಡನ ಬಳಿ ಹಿಂದಿರುಗು ಎಂತಲೂ ಒತ್ತಾಯಿಸಿದರು. ಜೀವನವೇ ಒಂದು ಹೊಂದಾಣಿಕೆ ಎಂದು ಬುದ್ಧಿ ಹೇಳಿದರು. ಆದರೆ ನನಗೆ ಅಂತಹ ಮೋಸಗಾರ ಗಂಡನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮನಸ್ಸಾಗಲಿಲ್ಲ್ಲ.

ನನ್ನ ಬದುಕಿನ ಹೊಸ ಆಧ್ಯಾಯ ಆರಂಭವಾಗಿತ್ತು. ಹಾಸ್ಟೆಲ್ಲಿನಲ್ಲಿ ವಾಸಕ್ಕೆ ಒಂದು ಕೊಠಡಿ ಕೊಟ್ಟಿದ್ದರು. ಊಟ ಹಾಸ್ಟೆಲ್ಲಿನಲ್ಲಿಯೇ. ಇದು ಅಸಹಾಯಕ ಒಂಟಿ ಹೆಣ್ಣಿಗೆ ಸುರಕ್ಷಿತವಾದ ಸ್ಥಳವೂ ಆಗಿತ್ತು. ಬಲು ಬೇಗ, ಅಲ್ಲಿನ ಕೆಲಸ ಕಾರ್ಯಗಳನ್ನು ಕಲಿತೆ. ಹಾಸ್ಟೆಲ್ಲ್ಲಿನ ವಿಧ್ಯಾರ್ಥಿನಿಯರ ಜೊತೆ ಸ್ನೇಹದಿಂದ ಇರುತ್ತಿದ್ದೆ. ನನ್ನೆಲ್ಲಾ ನೋವನ್ನು ಅವರ ಒಡನಾಟದಲ್ಲಿ ಮರೆಯಲು ಯತ್ನಿಸುತ್ತಿದ್ದೆ. ನಾಲ್ಕಾರು ವರ್ಷ ಕಳೆದವು. ಇದು ನನ್ನ ಕಥೆಯಾದರೆ ಇಲ್ಲಿನ ಹುಡುಗಿಯರ ನೋವು ನಲಿವಿನ ಕಥೆ ಕೇಳುವೆಯಾ, ಅಕ್ಕಾ. ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ ಹುಡುಗಿಯೊಬ್ಬಳು ನನ್ನ ಉಡಿಗೆ ಬಿದ್ದಳು. ಅವಳ ಬಾಳಿನ ವ್ಯಥೆಯನ್ನು ಅವಳ ಮಾತಿನಲ್ಲೇ ಹೇಳಲೇ?

ನಾನಿನ್ನು ಗರ್ಭದಲ್ಲಿದ್ದಾಗಲೇ ಅಮ್ಮ ತನ್ನ ಹೊಂಗನಸುಗಳನ್ನು ಅಪ್ಪನ ಜೊತೆ ಮೆಲುದನಿಯಲ್ಲಿ ಉಸುರುತ್ತಿದುದನ್ನು ಕೇಳಿಸಿಕೊಂಡೇ ಬೆಳೆದೆ. ಅಬ್ಬಾ, ಇನ್ನೂ ಈ ಪ್ರಪಂಚಕ್ಕೆ ಕಾಲಿಡದ ನನ್ನ ಬಗ್ಗೆ ಅಮ್ಮನಿಗೆ ಅದೆಷ್ಟು ಕನಸುಗಳು! ಮುಗಿಲೆತ್ತರಕ್ಕೆ ಬೆಳೆಯುತ್ತಿದ್ದ ಅಮ್ಮನ ಕನಸುಗಳ ಕಂಡ, ನಾನು ಗಾಬರಿಯಿಂದ ಕೆಲವು ಬಾರಿ ಕಾಲು ಝಾಡಿಸುತ್ತಿದ್ದೆ. ಅಮ್ಮ ನನ್ನ ಆತಂಕದ ಕ್ಷಣಗಳನ್ನೂ ಸಂತಸದಿಂದ ಅಪ್ಪನ ಜೊತೆ ಹಂಚಿಕೊಳ್ಳುತ್ತಿದ್ದಳು. ಅವಳ ತವರಿನವರು ಚೊಚ್ಚಲ ಕೂಸೆಂದು ಸಂಭ್ರಮ ಸಡಗರದಿಂದ ಸೀಮಂತ ಆಚರಿಸಿ, ಮೊದಲನೆಯದು ಗಂಡು ಕೂಸಾಗಲಿ ಎಂದು ಹರಸಿದರು. ಆದರೆ ಎಲ್ಲರ ಹಾರೈಕೆಗಳನ್ನೂ ಹುಸಿಮಾಡಿ ನಾನು ಹುಟ್ಟಿದ್ದೆ. ಆ ಕ್ಷಣ ಅಮ್ಮ ಪೆಚ್ಚಾದರೂ, ಮರುಕ್ಷಣವೇ ನನ್ನ ಮುದ್ದಿಸಿ – ಹೆಣ್ಣಾದರೇನು? ಚೆನ್ನಾಗಿ ಓದಿಸಿ ಡಾಕ್ಟರ್ ಮಾಡೋಣ ಎಂದುಸುರಿದ್ದಳು. ನನ್ನನ್ನು ‘ಯಶಸ್ವಿನಿ’ ಎಂದೇ ಕರೆದರು. ಅವರ ಕನಸುಗಳನ್ನೆಲ್ಲಾ ನನಸು ಮಾಡಲೆಂದೇ ಈ ಭೂಮಿಗೆ ಬಂದವಳೆಂದು. ನಾನಿನ್ನೂ ಅಂಬೆಗಾಲು ಇಡುತ್ತಿದ್ದೆನೇನೋ, ಆಗಲೇ ಯಾವ ಶಾಲೆಗೆ ಸೇರಿಸಬೇಕೆಂಬ ಬಿರುಸಾದ ಚರ್ಚೆ ಮನೆಯಲ್ಲಿ ನಡೆಯುತ್ತಿತ್ತು. ತೊದಲು ಮಾತನಾಡುತ್ತಿದ್ದ ಹಸುಗೂಸಿಗೆ ಅಕ್ಷರ ಕಲಿಸಲು ಆರಂಭಿಸಿಯೇ ಬಿಟ್ಟರು. ಹಗಲು, ರಾತ್ರಿ ನನ್ನ ಭವಿಷ್ಯದ ಬಗ್ಗೆ ದಂತ ಗೋಪುರವನ್ನೇ ನಿರ್ಮಿಸಿಬಿಟ್ಟರು.

ಶಾಲೆಗೆ ಸೇರಿದ ಮೊದಲ ದಿನದಿಂದಲೇ ನಾನು ಎಲ್ಲದರಲ್ಲೂ ಮೊದಲಿಗಳಾಗಬೇಕೆಂದು ಅವರ ಹೆಬ್ಬಯಕೆ. ನನಗಾಗಿಯೇ ಒಂದು ವೇಳಾಪಟ್ಟಿ ಸಿದ್ಧಪಡಿಸಿದ್ದರು. ಅವರ ಪ್ರಯತ್ನ ಫಲ ಕೊಡದೇ ಇದ್ದೀತೆ? ನಾನು ಎಲ್ಲ ತರಗತಿಯಲ್ಲೂ ಮೊದಲನೆಯವಳಾಗಿದ್ದೆ. ಆಡಲು ಹೊರಗೆಂದೂ ಹೋಗಿದ್ದೇ ನೆನಪಿಲ್ಲ. ಶಾಲೆಯಿಂದ ಹಿಂತಿರುಗಿದ ನಂತರ ಅಮ್ಮನ ಜೊತೆ ಆಟ. ಅಪ್ಪ ಬಂದ ಮೇಲೆ ಶಾಲೆಯಲ್ಲಿ ಅಂದು ನಡೆದಿದ್ದನ್ನೆಲ್ಲಾ ವರದಿ ಮಾಡಬೇಕಿತ್ತು. ಆಟ, ಪಾಠ ಎಲ್ಲ ಅಪ್ಪ ಅಮ್ಮನ ಜೊತೆಗೇ. ಹೈಸ್ಕೂಲಿಗೆ ಬರುವವರೆಗೂ ನಾನೂ ಅವರ ಜೊತೆಗೇ ಹೊಂದಿಕೊಂಡುಬಿಟ್ಟಿದ್ದೆ.

ಕಣ್ಣಿಗೊಂದು ದಪ್ಪ ಗಾಜಿನ ಕನ್ನಡಕ ಹುಟ್ಟಿನಿಂದಲೇ ಬಂದ ಬಳುವಳಿ. ಶಾಲೆಯಲ್ಲಿ ‘ಸೋಡಬುಡಿ’ ಎಂದೇ ಎಲ್ಲರಿಗೂ ಚಿರಪರಿಚಿತಳು. ಓದಿನಲ್ಲಿ ಸದಾ ಮುಂದಿದ್ದ ನನಗೆ ಯಾರೂ ಆತ್ಮೀಯರಾಗಲೇ ಇಲ್ಲ. ನನ್ನನ್ನು ‘ಅನ್ಯಗ್ರಹ ಜೀವಿ’ ಎಂಬಂತೆ ತುಸು ದೂರದಲ್ಲಿಯೇ ಇಟ್ಟಿದ್ದರು. ಕ್ಲಾಸಿಗೆ ಚಕ್ಕರ್ ಹೊಡೆದು ಕೆಲವರು ಸಿನೆಮಾ, ಹೋಟೆಲ್ ಎಂದು ಸುತ್ತುತ್ತಿದ್ದರು. ಗುಸುಗುಸು ಮಾತಾಡುತ್ತಾ ಮುಸಿಮುಸಿ ನಗುತ್ತಿದ್ದರು. ನಾನು ಅವರನ್ನು ನೋಡಿ ಅಸಹನೆಯಿಂದ ಕುದಿಯುತ್ತಿದ್ದೆ. ಮನೆ, ಶಾಲೆ ಎಲ್ಲಾ ಜೈಲಿನಂತೆ ಎನ್ನಿಸತೊಡಗಿತ್ತು. ನಿಧಾನವಾಗಿ ಓದಿನಲ್ಲಿ ಆಸಕ್ತಿ ಕಡಿಮೆಯಾಯಿತು. ಓದಿದ್ದು ನೆನಪಿರುತ್ತಿರಲಿಲ್ಲ. ಅಪ್ಪ ನನ್ನ ಅಂಕಪಟ್ಟಿ ನೋಡಿ ಕೂಗಾಡುತ್ತಿದ್ದರು. ಒಮ್ಮೆ ಪುಸ್ತಕವನ್ನು ತಲೆಕೆಳಗಾಗಿ ಹಿಡಿದು ಕೂತಿದ್ದೆ. ಅಮ್ಮ ಕೋಪದಿಂದ ಎರಡೇಟು ಹಾಕಿದಳು. ನಾನೂ ಸಿಟ್ಟಿನಿಂದ ಅಮ್ಮನ ಮೇಲೆ ಕಿರುಚಾಡಿದೆ. ನನ್ನಲ್ಲಿ ಆಗುತ್ತಿದ್ದ ಬದಲಾವಣೆ ಅವರಿಗೆ ನುಂಗಲಾರದ ತುತ್ತಾಗಿತ್ತು. ದಿನೇ ದಿನೇ ಮಂಕಾಗುತ್ತಿದ್ದೆ. ಅಪ್ಪನಿಗೆ ಆಕಾಶವೇ ತಲೆಮೇಲೆ ಕಳಚಿ ಬಿತ್ತೇನೋ ಎನ್ನವ ಭಾವ. ಅಮ್ಮನಂತೂ ಎಲ್ಲ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಿದ್ದಳು.

ಆಗ ನನ್ನ ಪಾಲಿಗೆ ಸಂಜೀವಿನಿಯಂತೆ ಪಕ್ಕದ ಮನೆಗೆ ಒಂದು ಕುಟುಂಬ ಬಂದಿಳಿಯಿತು. ಅಷ್ಟೇನೂ ಸ್ಥಿತಿವಂತರಲ್ಲದ ಅವರಿಗೆ ನಾಲ್ಕು ಜನ ಮಕ್ಕಳು. ಅಬ್ಬಾ ಅದೇನು ನಗು, ಅದೆಷ್ಟು ಮಾತು ಆ ಮಕ್ಕಳದು. ಆ ಮಹಾತಾಯಿ ಎಂದೂ ಅವರನ್ನು ಗದರಿದ್ದೇ ಇಲ್ಲ. ಸದಾ ನಗುಮುಖದ ಹೆಂಗಸು. ಅಪ್ಪ ಅಮ್ಮನಿಗೆ ಮೊದಲೇ ಎಚ್ಚರಿಕೆ ನೀಡಿದ್ದರು – ‘ಯಶೂಳನ್ನು ಆ ಮಕ್ಕಳ ಜೊತೆ ಕಳುಹಿಸಬೇಡ. ಅವರ ಜೊತೆ ಸೇರಿದರೆ ಅವಳು ಓದಿನಲ್ಲಿ ಸೊನ್ನೆ ಆಗುತ್ತಾಳೆ ಅಷ್ಡೆ’. ನಮ್ಮ ಮನೆ ಬಂಗಾರದ ಪಂಜರದಂತಿತ್ತು. ಅವರ ಮನೆಯಾದರೋ ಸುಂದರವಾದ ಹೂದೋಟದಂತೆ ನಳನಳಿಸುತ್ತಿತ್ತು. ಆ ಮಕ್ಕಳು ಅರಳುವ ಹೂಗಳಂತಿದ್ದರು, ಹಾರಾಡುವ ಬಣ್ಣ ಬಣ್ಣದ ಚಿಟ್ಟೆಗಳಂತಿದ್ದರು, ಚಿಲಿಪಿಲಿಗುಟ್ಟುವ ಹಕ್ಕಿಗಳಂತಿದ್ದರು. ನಾನೋ ಷೋಕೇಸಿನಲ್ಲಿದ್ದ ಗಾಜಿನ ಗೊಂಬೆಯಂತಿದ್ದೆ. ಇಸ್ತ್ರಿಮಾಡಿದ ಶಾಲಾ ಸಮವಸ್ತ್ರ, ಪಾಲಿಷ್ ಮಾಡಿದ ಷೂ, ದೊಡ್ಡ ಬ್ಯಾಗನ್ನು ಹೆಗಲಿಗೇರಿಸಿ, ಪ್ರೈವೇಟ್ ಶಾಲೆಗೆ ಹೋಗುತ್ತಿದ್ದೆ. ಆ ಮಕ್ಕಳು ನಗುತ್ತಾ ನಲಿಯುತ್ತಾ ಸರ್ಕಾರಿ ಶಾಲೆಗೆ ಹೋಗುತ್ತಿದ್ದರು. ಅಪ್ಪ ಇಲ್ಲದಿದ್ದಾಗ ಅಮ್ಮನ್ನ ಕಾಡಿಬೇಡಿ ಅವರ ಮನೆಗೆ ಆಡಲು ಹೋಗುತ್ತಿದ್ದೆ. ಅವರಲ್ಲಿದ್ದ ಉಲ್ಲಾಸ, ಉತ್ಸಾಹವನ್ನು ಹೊತ್ತೇ ಮನೆಗೆ ಹಿಂದಿರುಗುತ್ತಿದ್ದೆ. ಒಮ್ಮೊಮ್ಮೆ ಅಮ್ಮ ನನ್ನ ಕರೆಯಲು ಬರುತ್ತಿದ್ದಳು. ಅವರ ಸ್ನೇಹ, ವಿಶ್ವಾಸಕ್ಕೆ ಅವಳೂ ಮಾರುಹೋಗಿದ್ದಳು. ನನ್ನಲ್ಲಿ ಆಗುತ್ತಿರುವ ಬದಲಾವಣೆಯನ್ನು ಅಚ್ಚರಿಯಿಂದ ಗಮನಿಸಿದಳು ಅಮ್ಮ. ಹಳಿ ತಪ್ಪಿದ್ದ ನನ್ನ ಓದು ಮತ್ತೆ ಸರಾಗವಾಗಿ ಓಡಲು ಸಿದ್ದವಾಗಿತ್ತು.

ಒಮ್ಮೆ ಪಕ್ಕದ ಮನೆಯಲ್ಲಿ ಗೊಂಬೆಯಂತಿದ್ದ ಪುಟ್ಟ ಹುಡುಗಿಯ ಕಾಲಿಗೆ ನಾಯಿ ಕಚ್ಚಿ ಬಿಟ್ಟಿತು. ಆ ಮಗುವಿನ ನೋವು ಕಂಡ ನಾನು ಅವಳಿಗಿಂತಾ ಜೋರಾಗಿ ಅತ್ತಿದ್ದೆ.. ತಕ್ಷಣವೇ ಅಪ್ಪ ಅವಳನ್ನು ನಮ್ಮ ಕಾರಿನಲ್ಲಿಯೇ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಏಳು ದಿನ ಆ ಮುದ್ದಾದ ಪುಟ್ಟ ಹುಡುಗಿಯ ಹೊಕ್ಕುಳದ ಸುತ್ತ ಇಂಜೆಕ್ಷನ್ ಕೊಡಬೇಕಾಗಿತ್ತು. ನಾನಂತೂ ಒಂದು ದೊಡ್ಡ ಚಾಕ್ಲೇಟ್ ಹಿಡಿದು ವೈದ್ಯರು ಬರುವ ಮೊದಲೇ ಅವಳ ಬಳಿ ಓಡುತ್ತಿದ್ದೆ. ಆ ಇಂಜೆಕ್ಷನ್ ಚುಚ್ಚುವಾಗ ಅವಳಿಗಿಂತಾ ಹೆಚ್ಚು ನೋವು ನನಗಾಗುತ್ತಿತ್ತು. ಐದು ವರ್ಷದ ಆ ಮಗುವಿಗೆ ಗೊಂಬೆ ಎಂದೇ ಕರೆಯುತ್ತಿದ್ದೆ. ಅವರಮ್ಮನೂ ನನ್ನನ್ನು ಮಗಳಂತೆಯೇ ಕಾಣುತ್ತಿದ್ದರು. ನಾನಂತೂ ಅವರ ಪ್ರೀತಿ ವಾತ್ಸಲ್ಯ ತುಂಬಿದ ಹೃದಯದಲ್ಲಿ ನಿಧಾನವಾಗಿ ಕರಗುತ್ತಿದ್ದೆ. ಅವರು ಹೇಳಿದ ಬುದ್ಧಿ ಮಾತುಗಳು ನನ್ನ ಮನಸ್ಸಿಗೆ ನಾಟುತ್ತಿದ್ದವು.

ಅಂತು ಇಂತೂ ಮಕ್ಕಳ ಬುದ್ಧಿಮತ್ತೆ ಅಳೆಯುವಂತಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆ ನನ್ನ ಬಾಳಿನಲ್ಲಿ ಬಂದೇ ಬಿಟ್ಟಿತು. ಅಪ್ಪ ಆಫೀಸಿಗೆ ಒಂದು ತಿಂಗಳ ರಜೆ ಹಾಕಿ ನನ್ನ ಓದಿಸಲು ಕುಳಿತರು. ಅಪ್ಪನ ಕಸರತ್ತಿನ ಫಲವೋ, ಅಮ್ಮನ ಹರಕೆಯ ಫಲವೋ, ಪಕ್ಕದ ಮನೆಯವರ ಮಧುರ ಬಾಂಧವ್ಯದ ಫಲವೋ- ನಾನು ಪರೀಕ್ಷೆಯಲ್ಲಿ 98% ಗಳಿಸಿ ಶಾಲೆಗೇ ಮೊದಲನೆಯವಳಾದೆ. ಇನ್ನು ಮುಂದಿತ್ತು ಅತಿ ದೊಡ್ಡ ಸವಾಲು. ಪಾಂಡವರು ಹನ್ನೆರಡು ವರ್ಷ ವನವಾಸ ಮಾಡಿ ಒಂದು ವರ್ಷ ಅಜ್ಞಾತವಾಸ ಮಾಡಿದ ಹಾಗಿತ್ತು. ಅವರೇ ಪುಣ್ಯವಂತರು, ಕಾರಣ ಅವರ ಅಜ್ಞಾತವಾಸ ಒಂದೇ ವರ್ಷ, ನಮ್ಮದಾದರೋ ಎರಡು ವರ್ಷ. ಇಪ್ಪತ್ತೈದು ತಿಂಗಳ ಕಾಲ, ಹಗಲು ರಾತ್ರಿ ಒಂದು ಮಾಡಿ, ಅಜೀರ್ಣವಾಗುವಷ್ಟು ಓದು. ನಾನೂ ಪಣತೊಟ್ಟು ಓದತೊಡಗಿದೆ. ಓದಿ ಓದಿ ಬೇಸರವಾದಾಗ, ಒಂದರ್ಧ ಗಂಟೆ ಗೊಂಬೆಯ ಜೊತೆ ಆಡುತ್ತಿದ್ದೆ. ಎಲ್ಲರ ನಿರೀಕ್ಷೆಯಂತೆ, ಪರೀಕ್ಷೆಯಲ್ಲಿ ಉತ್ತಮವಾದ ಫಲಿತಾಂಶ ನನ್ನದಾಗಿತ್ತು. ಮೆಡಿಕಲ್ ಕಾಲೇಜಿನಲ್ಲಿ ಸೀಟೂ ಸಿಕ್ಕಿತು. ಅಪ್ಪ ಅಮ್ಮನಿಗೆ ಸ್ವರ್ಗ ಮೂರೇ ಗೇಣು. ಬಂಧು ಬಳಗದವರಿಗೆ, ಸ್ನೇಹಿತರಿಗೆ ಒಂದು ಔತಣ ಕೂಟ ಏರ್ಪಡಿಸಿ ಸಂಭ್ರಮಿಸಿದರು.

ಮೆಡಿಕಲ್ ಕಾಲೇಜಿನ ಹಾಸ್ಟೆಲ್ಲಿಗೆ ಅಳುಕಿನಿಂದಲೇ ಅಡಿಯಿಟ್ಟಿದ್ದೆ. ಅಪ್ಪ, ಅಮ್ಮನ ಒಡನಾಟದಲ್ಲಿ ಪುಸ್ತಕದ ಹುಳುವಿನಂತೆ ಬೆಳೆದಿದ್ದ ನಾನು ಶಾಲಾ ದಿನಗಳಲ್ಲಿ ಸಹಪಾಠಿಗಳ ಜೊತೆ ಬೆರೆತದ್ದೇ ಇಲ್ಲ. ಹೊಸ ವಾತಾವರಣದಲ್ಲಿ ನೀರಿನಿಂದ ಹೊರಬಿದ್ದ ಮೀನಿನಂತಾಗಿತ್ತು ನನ್ನ ಪರಿಸ್ಥಿತಿ. ನನ್ನ ಮನಸ್ಥಿತಿಯೂ ಸರಿ ಇರಲಿಲ್ಲ. ಆತ್ಮವಿಶ್ವಾಸದ ಲವಲೇಶವೂ ನನ್ನಲ್ಲಿ ಇರಲಿಲ್ಲ. ಯಾರೊಂದಿಗೂ ಮಾತನಾಡದೆ ಒಂಟಿಯಾಗಿರುತ್ತಿದ್ದೆ. ಊಟ ಸೇರುತ್ತಿರಲಿಲ್ಲ, ನಿದ್ರೆ ದೂರವಾಗಿತ್ತು, ಓದಿದ್ದು ಅರ್ಥವಾಗುತ್ತಿರಲಿಲ್ಲ. ಆಗಾಗ್ಗೆ ತರಗತಿಗೆ ಚಕ್ಕರ್ ಹಾಕುತ್ತಿದ್ದೆ. ಒಮ್ಮೆ ಅನಾಟಮಿ ಕ್ಲಾಸಿನಲ್ಲಿ ಹೆಣ ಕುಯ್ಯುವಾಗ ತಲೆ ಸುತ್ತು ಬಂದು ಬಿದ್ದು ಬಿಟ್ಟಿದ್ದೆ. ದಿನಕಳೆದಂತೆ ದೈಹಿಕವಾಗಿ, ಮಾನಸಿಕವಾಗಿ ಕುಸಿಯುತ್ತಲೇ ಹೋದೆ. ಕಿರು ಪರೀಕ್ಷೆಗಳಲ್ಲಿ ತುಂಬಾ ಕಡಿಮೆ ಅಂಕಗಳಿಸಿದರೂ, 70% ಬಂದಿದೆ ಎಂದು ಅಪ್ಪ ಅಮ್ಮನ ಬಳಿ ಸುಳ್ಳು ಹೇಳಿದೆ. ಇಲ್ಲಿಯೂ ಚಿನ್ನದ ಪದಕ ಪಡೆದೇ ಮಗಳು ಮನೆಗೆ ಬರುತ್ತಾಳೆಂಬ ಕನಸು ಅವರದು. ಅವರು ನಿತ್ಯ ಫೋನಿನಲ್ಲಿ ಹೇಳುತ್ತಿದ್ದ ಮಾತು ಒಂದೇ – ‘ಚೆನ್ನಾಗಿ ಓದು. ರ್‍ಯಾಂಕು ಗಳಿಸು.’

PC: Internet

ಆ ದಿನ ಇದ್ದಕ್ಕಿದ್ದಂತೆ ಅಪ್ಪ ನನ್ನ ಭೇಟಿಯಾಗಲು ಹಾಸ್ಷೆಲ್ಲಿಗೆ ಬಂದರು. ಅವರ ಮುಖ ಕೋಪದಿಂದ ಧುಮು ಧುಮುಗುಟ್ಟುತ್ತಿತ್ತು. ತಮ್ಮ ಗೆಳೆಯರೊಡನೆ ಏನೋ ಆಫೀಸಿನ ಕೆಲಸ ಇತ್ತೆಂದು ಬಂದವರಿಗೊಂದು ದೊಡ್ಡ ಆಘಾತ ಕಾದಿತ್ತು. ಅವರ ಗೆಳೆಯನ ಸ್ನೇಹಿತರು ನನ್ನ ಅನಾಟಮಿ ಪ್ರೊಫೆಸರ್ ಆಗಿದ್ದರು. ಅವರ ಬಳಿ ನನ್ನ ಬಗೆ ವಿಚಾರಿಸಿದಾಗ -ನನ್ನ ನಿಜವಾದ ಬಣ್ಣ ಬಯಲಾಗಿತ್ತು. ಹಾಸ್ಟೆಲ್ಲಿನಲ್ಲಿ ಎಲ್ಲರ ಮುಂದೆ ಕೂಗಾಡಿದರು. ನಿಂತ ನೆಲ ಕುಸಿಯಬಾರದೇ ಎನ್ನಿಸಿತು. ಮೌನವಾಗಿ ನಿಂತಿದ್ದೆ. ತಿರಸ್ಕಾರದಿಂದ ಒಮ್ಮೆ ನೋಡಿ ಹೊರಟೇ ಹೋದರು ಅಪ್ಪ. ಅವರಿಗೆ ನನ್ನ ಶೈಕ್ಷಣಿಕ ಸಾಧನೆ ಒಂದು ಪ್ರತಿಷ್ಠೆಯ ಸವಾಲಾಗಿತ್ತು. ಒಮ್ಮೆಯಾದರೂ ಅಪ್ಪ -‘ಯಾಕೆ ಮಗಳೇ, ನಿನಗೆ ಮೆಡಿಕಲ್ ಓದಲು ಕಷ್ಟವಾಗುತ್ತಿದೆಯೇ? ಮನೆಗೆ ಬಾ, ಎರಡು ದಿನ ಎಲ್ಲವನ್ನೂ ನಿಧಾನವಾಗಿ ಮಾತಾಡೋಣ.’ ಎಂದು ಕರೆಯಲಿಲ್ಲ. ಅಪ್ಪ ಹೋದ ನಂತರ ಮೇಲಿಂದ ಮೇಲೆ ಅಮ್ಮನ ಫೋನು. ಅವಳ ಮಾತು ಜ್ವಾಲಾಮುಖಿ ಸಿಡಿದ ಹಾಗೆ ಹೊರಬರುತ್ತಿದ್ದವು. ನಾನು ಸುಳಿಗೆ ಸಿಕ್ಕ ತರಗೆಲೆಯಂತೆ ಆಳಕ್ಕಿಳಿಯುತ್ತಿದ್ದೆ. ಹೀಗೆ ಎಷ್ಟು ದಿನ ಬದುಕಲಿ? ಅಪ್ಪ ಅಮ್ಮನ ನೋವಿಗೆ ಕಾರಣವಾಗಲಿ? ಓದಿದ್ದಾಗಲೀ, ಕೇಳಿದ್ದಾಗಲೀ ಅರ್ಥವಾಗುತ್ತಿರಲಿಲ್ಲ.

ಮೆಡಿಕಲ್ ಕಾಲೇಜು ಸೇರಿ ಆರು ತಿಂಗಳು ಕಳೆದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬರುತ್ತಿತ್ತು. ಫ್ಯಾನಿಗೆ ನೇಣು ಹಾಕಿಕೊಳ್ಳಲೇ? ಧೈರ್ಯ ಬರಲಿಲ್ಲ. ನಿದ್ರೆ ಮಾತ್ರೆ ಸೇವಿಸುವುದೇ ಒಳಿತು ಎಂದೆನ್ನಿಸಿ ಔಷಧಿ ಅಂಗಡಿಗೆ ಹೋದೆ. ಅವನು ನನ್ನ ಬೆವೆತ ಮುಖ, ನಡುಗುವ ಧ್ವನಿ ಕೇಳಿ – ಅನುಮಾನಿಸಿದ. ಡಾಕ್ಟರ್ ಚೀಟಿ ಎಲ್ಲಿ? ಎಂದ. ಅವನ ಮಾತು ಕೇಳಿ ಅಲ್ಲಿಯೇ ಕುಸಿದು ಬಿದ್ದೆ. ಎರಡು ದಿನ ಊಟ ಮಾಡಿರಲಿಲ್ಲ. ಅಂಗಡಿಯವನು ನಿಮ್ಮ ಬಳಿ ಕರೆ ತಂದಿದ್ದಾನೆ. ಮೇಡಂ, ಓದಲು ಆಗುತ್ತಿಲ್ಲ. ಅಪ್ಪ ಅಮ್ಮನಿಗೆ ಮುಖ ಹೇಗೆ ತೋರಿಸಲಿ? ಬದುಕಿನಲ್ಲಿ ಸೋತು ಹೋದೆ. ನಾನು ಸಾಯಬೇಕು. ಅದೊಂದೇ ದಾರಿ ನನಗಿರುವುದು. ಇದು ಯಶಸ್ವ್ವಿನಿಯ ಗೋಳಿನ ಕಥೆ.

ಅಕ್ಕಾ ..ಬದುಕಿನ ಎರಡು ಪುಟವನ್ನೂ ತೆರೆದಿಲ್ಲ ಈ ಹುಡುಗಿ. ಆಗಲೇ ಸಾಯಲು ಸಿದ್ಧಳಾಗಿದ್ದಾಳೆ. ನಾನು ಮಾಡುವ ಒಣ ಉಪದೇಶ ಅವಳ ಮನಸ್ಸಿಗೆ ನಾಟಲಾರದು ಎಂದೆನ್ನಿಸಿತು. ಖಿನ್ನತೆಗೆ ಒಳಗಾಗಿದ್ದ ಇವಳಿಗೆ ದಾರಿ ತೋರಿಸಲೇಬೇಕಿತ್ತು. ಮೊದಲು ಅವಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿತ್ತು. ‘ಯಶೂ, ಮೊದಲು ಸ್ನಾನ ಮಾಡಿ ಊಟ ಮಾಡು. ಒಂದು ವಾರ ನನ್ನ ಜೊತೆಯಿರು. ಆಮೇಲೆ ನಿನಗೆ ಸರಿ ಎನಿಸಿದ್ದನ್ನು ಮಾಡುವೆಯಂತೆ.’ ಮುಂಜಾನೆ ನನ್ನ ಜೊತೆ ವಾಕ್ ಕರೆದೊಯ್ಯುತ್ತಿದ್ದೆ. ಪೇಪರ್ ಹಾಕುವ ಹುಡುಗರು, ಹಾಲು ತರುವ ಹುಡುಗರು, ತರಕಾರಿ ಮಾರುವವರು ಎಲ್ಲರ ಜೊತೆ ಮಾತಾಡುತ್ತಾ ಸಾಗುತ್ತಿದ್ದೆ. ಹಾಲು ಹಾಕುವ ಹುಡುಗನಿಗೆ, ಅವಳ ಮುಂದೆಯೇ, ಅವನ ಸ್ಕೂಲು ಫೀಸಿಗೆ ಹಣ ಹೊಂದಿಸಿ ಕೊಟ್ಟೆ. ಅವನು ಕಣ್ಣಿರು ಹಾಕುತ್ತಾ ನನ್ನ ಕಾಲಿಗೆ ನಮಸ್ಕರಿಸಿದ. ಅವರೆಲ್ಲರ ಬಡತನದ ಬವಣೆಯನ್ನು ಅವಳ ಮುಂದೆ ತೆರೆದಿಡುತ್ತಿದ್ದೆ.

ಸಂಜೆ ಆಸ್ಪತ್ರೆಯ ವಾರ್ಡ್‌ನಲ್ಲಿ ಒಂದು ಸುತ್ತು ಹಾಕುತ್ತಿದ್ದೆ. ನಿತ್ಯ ಅವರ ಕಷ್ಟ, ಸುಖ ವಿಚಾರಿಸುತ್ತಾ ನನ್ನ ಕೈಲಾದ ನೆರವು ನೀಡುತ್ತಿದ್ದೆ. ಒಬ್ಬ ರೋಗಿಗೆ ಗರ್ಭಕೋಶದ ಕ್ಯಾನ್ಸರ್. ಅವಳ ಸಾವು ಸನಿಹದಲ್ಲೇ ಇತ್ತು. ನಿತ್ಯ ಅವಳ ಎರಡು ವರ್ಷದ ಮಗ ಬಂದು -‘ಅಮ್ಮಾ, ಮನೆಗೆ ಬಾ’ ಎಂದರೆ ನಾಳೆ ಬರ್‍ತೀನಿ ಪುಟ್ಟ ಎಂದು ಮುದ್ದು ಮಾಡಿ ಅವನಿಗೆ ಟಾ, ಟಾ ಮಾಡುತ್ತಿದ್ದಳು. ‘ಯಶೂ ನೋಡು, ಅವಳು ಇನ್ನೆರಡು ದಿನ ಬದುಕಿದರೆ ಹೆಚ್ಚು. ಆದರೂ ಮಗನ ಮುಂದೆ ಎಷ್ಟು ಗೆಲುವಾಗಿರುತ್ತಾಳೆ.’ ಇನ್ನೊಬ್ಬ ರೋಗಿಗೆ ಮಧುಮೇಹದಿಂದ ಒಂದು ಕಾಲು ಮಂಡಿಯ ತನಕ ಕತ್ತರಿಸಿದ್ದರು. ಅವಳು ‘ಅಕ್ಕಾ, ನನಗೆ ನಡೆಯಲು ಆಗುತ್ತಾ? ನನಗೆ ಯಾರಿಗೂ ಹೊರೆಯಾಗಲು ಇಷ್ಟವಿಲ್ಲ’ ಎಂದಳು. ನಾನು ಅವಳನ್ನು ಎಬ್ಬಿಸಿ ಕೋಲಿನ ಸಹಾಯದಿಂದ ನಡೆಸಿದಾಗ ಅವಳು ಗೆಲುವಿನ ನಗೆ ಬೀರಿದಳು. ಇನ್ನೇನು ಹಾಸ್ಟೆಲ್ಲಿಗೆ ಹಿಂತಿರುಗಬೇಕು ಅಷ್ಟರಲ್ಲಿ ‘ಅಕ್ಕಾ’ ಎಂಬ ಕೂಗು ಕೇಳಿತು. ಹದಿನೈದು ವರ್ಷದ ಹುಡುಗಿಯೊಬ್ಬಳ ಕೂಗು ಇದಾಗಿತ್ತು. ಅವಳೋ ಹುಟ್ಟು ಕುರುಡಿ. ಅವಳಿಗೆ ನಮ್ಮ ಇರುವು ಹೇಗೆ ಗೊತ್ತಾಯಿತೋ ಆ ದೇವರೇ ಬಲ್ಲ? ಮಾರನೆಯ ದಿನ ಅವಳಿಗೆ ಬೇರೆಯವರ ಕಣ್ಣು ಜೋಡಿಸುವವರಿದ್ದರು. ‘ನನಗೆ, ನಾಳೆ ಕಣ್ಣು ಬರುತ್ತೆ ಅಲ್ವಾ? ನಿಮ್ಮನ್ನು ನೋಡಬಹುದೇ ಅಕ್ಕಾ’ ‘ಖಂಡಿತಾ ನಿನಗೆ ಕಣ್ಣು ಬರುತ್ತೆ ತಂಗಿ. ನಾಳೆ ನೀನು ಎಲ್ಲರನ್ನೂ ನೋಡಬಹುದು’ ಎಂದು ಅವಳ ಕೈ ಹಿಡಿದೆ. ಅವಳ ಮುಖದ ಮೇಲಿನ ನಗು ಹೇಗೆ ಬಣ್ಣಿಸಲಿ?.

ಯಶೂ ನಿತ್ಯ ಡೈರಿ ಬರೆಯುತ್ತಿದ್ದಳು. ಅವಳಲ್ಲಿ ಆಗುತ್ತಿರುವ ಬದಲಾವಣೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ವಾರದ ಕೊನೆಯ ದಿನ. ನಾನು ಮಾತಾಡುವ ಮೊದಲೇ ಹೇಳಿದಳು – ಮೇಡಂ, ಕಣ್ಣಿಲ್ಲದ ಹುಡುಗಿ ನನ್ನ ಕಣ್ಣು ತೆರೆಸಿದಳು. ಒಂದು ಕಾಲಿಲ್ಲದ ಹೆಣ್ಣು ಬದುಕಿನಲ್ಲಿ ಮುನ್ನೆಡೆಯುವುದನ್ನು ಕಲಿಸಿದಳು. ಇನ್ನೆರಡೇ ದಿನ ಬದುಕಲಿರುವ ಕ್ಯಾನ್ಸರ್ ರೋಗಿ ಬದುಕಿನ ಅರ್ಥವನ್ನು ತಿಳಿಸಿದಳು. ಹಾಲು ಹಾಕುವ ಹುಡುಗನಿಂದ ಬಡತನದ ಬವಣೆಯ ಅರಿವಾಯಿತು. ನೀವು ಬದುಕಿನ ನೈಜ ಪರಿಚಯ ಮಾಡಿಸಿ, ನನ್ನ ಕಣ್ಣು ತೆರೆಯಿಸಿದಿರಿ.. ನಿಮ್ಮ ಹೃದಯವಂತಿಕೆ, ಅಂತಃಕರಣ, ಕರುಣೆ ನನಗೆ ದಾರಿದೀಪವಾಗಿದೆ ದೇವರು ನನಗೆ ಒಂದು ಅಪೂರ್ವವಾದ ಅವಕಾಶವನ್ನು ಕರುಣಿಸಿದ್ದಾನೆ. ನನ್ನ ತಂದೆ ತಾಯಿಯ ಕನಸನ್ನು ಪೂರ್ಣಗೊಳಿಸುವೆ. ನಿಮಗೆ ಮಾತು ಕೊಡುತ್ತೇನೆ. ನಾನು ಉತ್ತಮ ವೈದ್ಯಳಾಗಿ ನೊಂದವರ ಸೇವೆ ಮಾಡುವೆ .’

ಅಕ್ಕಾ ..ಈ ನನ್ನ ಪುಟ್ಟ ಹೆಜ್ಜೆ ಸರಿಯಿದೆಯಾ?

-ಡಾ.ಗಾಯತ್ರಿದೇವಿ ಸಜ್ಜನ್

6 Responses

 1. Samatha.R says:

  ಆಪ್ತವಾದ ಬರಹ

 2. ನಯನ ಬಜಕೂಡ್ಲು says:

  ಸೋತು, ಬಸವಳಿದು ಜೀವವನ್ನೇ ಕಳೆದುಕೊಳ್ಳಲು ಹೊರಟ ಕತ್ತಲು ತುಂಬಿದ ಮನಸಲ್ಲಿ ಬೆಳಕನ್ನು ತುಂಬಿ ಇಲ್ಲಿ ಬರೀ ನೋವು ಮಾತ್ರವಲ್ಲ ಇನ್ನೇನೋ ಸುಂದರವಾದ ಬಣ್ಣಗಳಿಂದ ಕೂಡಿದೆ ಬದುಕು ಅನ್ನುವುದನ್ನು ಮನದಟ್ಟು ಮಾಡಿಸುವ ಬರಹ.

 3. ಬಿ.ಆರ್.ನಾಗರತ್ನ says:

  ಭರವಸೆಗಳೇ ಬಾಳಿನ ಬೆಳಕು ಅವುಗಳನ್ನು ಕಳೆದುಕೊಳ್ಳಬಾರದೆಂಬ ಸಂದೇಶ ಹೊತ್ತ ವಿಶಿಷ್ಟ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ.

 4. ಶಂಕರಿ ಶರ್ಮ says:

  ಕುಗ್ಗಿದ ಮನಸ್ಸಿಗೆ ಆಧಾರವಾಗಿ ನಿಂತು, ಸಮಾಜದಲ್ಲಿರುವ ವಿವಿಧ ಕಷ್ಟಗಳ ಕಡೆಗೆ ಕಣ್ತೆರೆದು ನೋಡಿ ತಿಳಿಯುವಂತೆ ಮಾಡಿ, ಹುಡುಗಿಯ ಬಾಳನ್ನು, ಭವಿಷ್ಯವನ್ನು ರೂಪಿಸಿದ ಪರಿ ಮನಗೆದ್ದಿತು.. ವಿಶಿಷ್ಟವಾದ ಲೇಖನ ಮೇಡಂ..ಧನ್ಯವಾದಗಳು.

 5. Padma Anand says:

  ಸಕಾಲದಲ್ಲಿ ಸೂಕ್ತ ಮಾರ್ಗದರ್ಶನ ದೊರಕಿದರೆ, ಕಮರಿಹೋಗಬೇಕಿರುವ ಯುವಮನಸ್ಸುಗಳು ಸಮಾಜಮುಖಿಯಾಗಿ ಬದಲಾಗಬಹುದು ಎಂಬಂತ ಆಶಯವನ್ನು ಹೊಂದಿದ ಸಕಾರಾತಕ ಲೇಖನ. ಆಪ್ತವಾಗಿ ಮೂಡಿ ಬಂದಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: