ಕವಿನೆನಪು 46 : ಅಳಿಸಲಾಗದ  ಕೆ ಎಸ್ ನ ಹೆಸರಿನ ಪ್ರಭಾವಳಿ

Share Button


ನಾನು  ನಮ್ಮ ಬ್ಯಾಂಕಿನ ಮಂಡ್ಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಸ್ಥಳೀಯ ನ್ಯಾಯಾಲಯದಲ್ಲಿ ಬ್ಯಾಂಕ್ ಸಾಲ ಪ್ರಕರಣದಲ್ಲಿ ಸಾಕ್ಷಿ ನುಡಿಯಬೇಕಾದ ಪ್ರಸಂಗ ಬಂತು. ಕಟಕಟೆಯಲ್ಲಿ ನನ್ನ ಹೆಸರು ವಯಸ್ಸು,ಹಾಗೂ ತಂದೆಯ ಹೆಸರು ಹೇಳುತ್ತಿರುವಾಗ  ಬ್ಯಾಂಕ್ ನ ವಕೀಲರು “ ಮಹಾಸ್ವಾಮಿ ,ಇವರು ಪ್ರಸಿದ್ಧ ಕವಿ ಕೆ ಎಸ್ ನ ಅವರ ಮಗ “ಎಂದು ತಿಳಿಸಿದರು. ಆಗ ನ್ಯಾಯಾಧೀಶರು ಕಲಾಪದ ಶಿಷ್ಟಾಚಾರದ ನಡುವೆಯೂ “ಸಂತೋಷ.ನಾನು ಅವರ ಅಭಿಮಾನಿ. ಅವರಿಗೆ ನನ್ನ ನಮಸ್ಕಾರ ತಿಳಿಸಿ.”ಎಂದರು.

ನಾನು ಆ ಶಾಖೆಯಲ್ಲಿದ್ದ ಮೂರು ವರುಷವೂ ಅಲ್ಲಿನ ಜನ ನನ್ನನ್ನು ಗುರುತಿಸುತ್ತಿದ್ದುದು “ನಮ್ಮ ಜಿಲ್ಲೆಯ ಕವಿ ಕೆ ಎಸ್ ನ ಅವರ ಮಗ ”ಎಂದೇ..

ಕೆ ಆರ್ ನಗರದ ಸಾಹಿತ್ಯ ಸಂಘಟಕ,ಸಮಾಜ ಸೇವಕ ಹಾಗೂ ನನ್ನ ಆತ್ಮೀಯ ಮಿತ್ರ  ಡಾ.ಭೇರ್ಯ ರಾಮಕುಮಾರ್ ಅವರು ಪ್ರತಿವರ್ಷ ಕೆ ಎಸ್ ನ ಸ್ಮಾರಕ ರಾಜ್ಯಮಟ್ಟದ ಕವನ ಸ್ಪರ್ಧೆ ಏರ್ಪಡಿಸಿ ಮೈಸೂರಿನಲ್ಲಿ ಒಂದು ಭಾರಿ ಪ್ರಶಸ್ತಿ ವಿತರಣಾ ಸಮಾರಂಭ ಏರ್ಪಡಿಸುತ್ತಾರೆ .ನಾನೂ ಬಿಡುವಿದ್ದಾಗಲೆಲ್ಲ  ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸುತ್ತೇನೆ .ಸಭಾ ಕಾರ್ಯಕ್ರಮ ಮುಗಿದ ನಂತರ ರಾಜ್ಯದ,ಹೊರನಾಡಿನ ಮೂಲೆ ಮೂಲೆಗಳಿಂದ ಬಂದ ಉದಯೋನ್ಮುಖ ಕವಿ, ಕವಯಿತ್ರಿಯರು ನನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುನ್ನುಗ್ಗುತ್ತಾರೆ. ನಾನು ಬಹಳ ಸಂಕೋಚದಿಂದ “ನನ್ನ ಜತೆ ಫೋಟೊ ಏಕೆ ? ನಾನು ಆ ಕವಿಯಲ್ಲ” ಎನ್ನುತ್ತೇನೆ. ಅದಕ್ಕೆ ಉತ್ತರವಾಗಿ ಒಮ್ಮೆ ಒಬ್ಬ ಮಹಿಳಾಮಣಿ” ನಿಮ್ಮ ಚಿತ್ರ ಅಲ್ಲ. ನಿಮ್ಮ ಮೂಲಕ ತಂದೆಯವರ ದರ್ಶನ ಮಾಡುತ್ತಿದ್ದೇನೆ” ಎಂದು ಸತ್ಯದರ್ಶನ ಮಾಡಿಸಿದ್ದಳು.

ಪರಿಚಯವಾದ ಪ್ರತಿಯೊಬ್ಬರೂ ಕೇಳುವ ಮೊದಲ ಪ್ರಶ್ನೆ ”ನೀವೂ ಬರೆದಿದ್ದೀರಾ? ಕವನ ಸಂಕಲನ ಹೊರತಂದಿದ್ದೀರಾ?“ಎಂದೇ. ಹಿಂದೆ ಕವನ ಹೊರತರದಿದ್ದ ದಿನಗಳಲ್ಲಿ ಒಮ್ಮೆ  ಉತ್ತರವಾಗಿ  ನಾನು “ಊರಿಗೆ ಊರೇ ಹಸೆಯಲಿ ನಿಂತರೆ ಆರತಿ ಬೆಳಗಲು ಜನರೆಲ್ಲಿ “ ಎಂಬ ಹಿಂದಿನ ಸಾಲಿನ ಹುಡುಗರು ಪದ್ಯದ ಸಾಲನ್ನು  ಹೀಗೆ ಪ್ರಶ್ನೆ ಕೇಳಿದ ಒಬ್ಬರಿಗೆ ಹೇಳಿದೆ. ಅವರಿಗೆ ಸ್ವಲ್ಪ ಬೇಸರವಾಯಿತು.

ಸಾಹಿತ್ಯ ಮಾರ್ಗದರ್ಶನದಲ್ಲಿ ನನ್ನ ಹಿರಿಯಕ್ಕನಂತಿರುವ ಡಾ.ಲತಾ ರಾಜಶೇಖರ್ ಒಮ್ಮೆ ”ನಿಮ್ಮ ಕೃತಿಗಳನ್ನೂ ಹೊರತರಬೇಕು ಮಹಾಬಲ .ಆಗಲೇ ಈ ನಾಮ ಪ್ರಭಾವದಿಂದ ತಪ್ಪಿಕೊಳ್ಳಲು ಸಾಧ್ಯ’ ಎಂದಿದ್ದರು. ಅವರ ಹಾರೈಕೆಯೋ ಏನೋ ಈಗ ನನ್ನ  “ಇಂದೂ ಇದ್ದಾರೆ” ಹೆಸರಿನ ಒಂದು ಕವನ ಸಂಕಲನ, “ಹಾಸ್ಯ ಬಂಧ ಹಾಸ್ಯ ಲೇಖನ ಸಂಗ್ರಹ ಹೊರಬಂದಿದೆ. ಸುನೀತಗಳ ಸಂಗ್ರಹ “ಬೊಗಸೆ ತುಂಬ ಹೂವು” ಸಿದ್ಧವಾಗುತ್ತಿದೆ.

ನಮ್ಮ ತಂದೆಯವರಿಗೂ ಇದೇ ರೀತಿ ಪ್ರಶ್ನೆ ಎದುರಾಗುತ್ತಿತ್ತು.”ನಿಮ್ಮ ಮಕ್ಕಳಲ್ಲಿ ಯಾರಿಗಾದರೂ ಸಾಹಿತ್ಯಾಸಕ್ತಿ ಇದೆಯೇ?” ಎಂದು ಸಂದರ್ಶಕರು ಪ್ರಶ್ನಿಸುವುದು ಸರ್ವೇಸಾಧಾರಣವಾಗಿತ್ತು. ಅಶ್ಚರ್ಯವೆಂದರೆ ಬಿ ಆರ್ ಲಕ್ಷ್ಮಣರಾವ್ ಅವರು ಸುಧಾ ವಾರಪತ್ರಿಕೆಗೆ ನಮ್ಮ ತಂದೆಯವರ ಸಂದರ್ಶನ ಮಾಡುತ್ತಾ ಇದೇ ಪ್ರಶ್ನೆ ಕೇಳಿದಾಗ “ ಬ್ಯಾಂಕಿನಲ್ಲಿ ಕೆಲಸದಲ್ಲಿರುವ ನನ್ನ ಮೂರನೇ ಮಗ ಮಹಾಬಲ, ಸಾಹಿತ್ಯಾಸಕ್ತ” ಎಂದಿದ್ದರು.

ನಿಧನರಾಗಿ ಹದಿನೇಳು ವರ್ಷಗಳಾದರೂ ಇನ್ನೂ ತಂದೆಯವರ ನಾಮದ ಪ್ರಭಾವಳಿ ಇನ್ನೂ ಪ್ರಖರವಾಗಿರುವುದು ಅಚ್ಚರಿಯ ಹಾಗೂ ಅಭಿಮಾನದ ಸಂಗತಿಯಾಗಿದೆ. ನಾವು ಅದರಿಂದ ಹೊರಬರುವ ಯತ್ನಗಳನ್ನು ನಮ್ಮ ಪ್ರತಿಭೆ, ಪರಿಶ್ರಮಗಳ ಮೂಲಕವೇ ಮಾಡಬೇಕಾಗಿದೆ.

(ಮುಂದುವರಿಯುವುದು)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=32310

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

4 Responses

  1. Sayilakshmi S says:

    ವೈದ್ಯರು ವಕೀಲರು ಸಾಮಾನ್ಯವಾಗಿ ತಮ್ಮ ವೃತ್ತಿ ಸಂಪತ್ತಲ್ಲಿ.ಮಕ್ಕಳ ಪ್ರಭೆ ಬೆಳಗಿಸುತ್ತಾರೆ. ಸಾಹಿತ್ಯಲೋಕದಲ್ಲಿ ಇದು ಸಾಧ್ಯವಾಗದ ಸಂಗತಿ. ಜನ್ಮದಾತರ ಹೆಸರು ಜೊತೆಗೆ ಇದ್ದರೂ ಅದು ಆಶೀರ್ವಾದವಷ್ಟೆ. ಸ್ವಂತ ಪರಿಶ್ರಮ ಪ್ರತಿಭೆಯೇ ಸಾಧನೆಯ ಮೂಲ ಬಂಡವಾಳ. ಇಲ್ಲಿ ಡಿ ವಿ ಜಿ‌ ಹಾಗು
    ಬಿ ಜಿ ಎಲ್ ಸ್ವಾಮಿ ಮೇರು ಸಾಹಿತಿಗಳ ಯಶಸ್ವಿ ಸಾಹಿತ್ಯ ಪಯಣ ನೆನಪಾಗುತ್ತದೆ. ಇಂದಿಗೂ ಅವರಿಬ್ಬರು ಚಿರಸ್ಥಾಯಿಯಾಗಿದ್ದಾರೆ ನಮ್ಮ.ಮನೋಪಟಲದಲ್ಲಿ.‌ಇಬ್ಬರೂ ಬೇರೆ ಬೇರೆ ತರದಲ್ಲಿ ಸ್ತರದಲ್ಲಿ ಗುರುತಿಸಿಕೊಂಡ ಅಪೂರ್ವ ಸಾಹಿತ್ಯರತ್ನಗಳು.

  2. ನಯನ ಬಜಕೂಡ್ಲು says:

    ಸರ್ ನಿಮ್ಮ ಕೃತಿಗಳ ವಿಚಾರ ತಿಳಿದು ಖುಷಿ ಆಯಿತು.

  3. Padma Anand says:

    ಮೇರು ಕವಿವರ್ಯರ ಬಗ್ಗೆ ಎಷ್ಟು ಓದಿದರೂ ಮತ್ತಷ್ಟು ಓದೋಣ ಎನ್ನಿಸುತ್ತದೆ. ನಿಮ್ಮ ಬರವಣಿಗೆಯಂತೂ ಅದಕ್ಕೆ ಪೂರಕವಾಗಿಯೇ ಇದೆ.

  4. ಶಂಕರಿ ಶರ್ಮ says:

    ನಿಮ್ಮ ತಂದೆಯವರ ಪ್ರಭಾವಳಿ ಬಹಳ ಪ್ರಭಾವಶಾಲಿಯಾಗಿರುವುದು ನಮ್ಮೆಲ್ಲರ ಹೆಮ್ಮೆ. ತಮ್ಮ ಬರಹಗಳೂ ಅಂತೆಯೇ ಪ್ರಸಿದ್ಧಿಪಡೆಯಲೆಂದು ಹಾರೈಸುವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: