ಕಿರು ಕಾದಂಬರಿ: ಭಾವ ಸಂಬಂಧ- ಎಳೆ 3
(ಕಳೆದ ಸಂಚಿಕೆಯಿಂದ : ವಿಶಿಷ್ಟ ಸನ್ನಿವೇಶದಲ್ಲಿ ಭೇಟಿಯಾಗಿ, ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸಿಸಲಾರಂಭಿಸಿದ ಒಂಟಿಜೀವಗಳಾದ ಸೀತಕ್ಕ ಹಾಗೂ ನರ್ಸ್ ಸರಸ್ವತಿ ಅವರ ನಡುವೆ ಬಹಳ ಆತ್ಮೀಯವಾದ ಬಾಂಧವ್ಯ ಬೆಳೆಯುತ್ತಿದೆ. ಅವರಿನ್ನೂ ಪರಸ್ಪರರ ಗತಜೀವನದ ಬಗ್ಗೆ ತಿಳಿಯಲು ಆಸಕ್ತಿ ತೋರಿಸಿರಲಿಲ್ಲ. ಸೀತಕ್ಕ ತನ್ನ ಬಗ್ಗೆ ನಾಳೆ ತಿಳಿಸುವೆನೆಂದು ನಿದ್ರೆಗೆ ಜಾರಿದರೆ, ಸರಸ್ವತಿಯ ಮನಸ್ಸಿನಲ್ಲಿ ತನ್ನ ಬಾಲ್ಯದ ಕಹಿ, ಆಸರೆ ಕೊಟ್ಟ ದಂಪತಿಯ ವಾತ್ಸಲ್ಯ..ಇತ್ಯಾದಿ ನೆನಪುಗಳ ಮೆರವಣಿಗೆ ಶುರುವಾಯಿತು.. …..ಮುಂದಕ್ಕೆ ಓದಿ)
ಒಂದೆರಡು ತಿಂಗಳಲ್ಲಿ ಚೇತರಿಸಿಕೊಂಡ ಸರಸ್ವತಿ, ಬಂದಿದ್ದೆಲ್ಲಾ ಬರಲಿ, ಎದುರಿಸಿ ಬದುಕೋಣ, ಇನ್ನು ಮುಂದೆ ಈ ತಂದೆ ತಾಯಿಯ ಕೂದಲೂ ಕೊಂಕದಂತೆ ನೋಡಿಕೊಳ್ಳುವುದೇ ನನ್ನ ಜೀವನದ ಪರಮ ಗುರಿ ಎಂದು ನಿರ್ಧರಿಸಿ ಒಂದೊಂದಾಗಿ ಎಲ್ಲ ಕೆಲಸಗಳಲ್ಲಿ ಮೊದಲಿಗಿಂತಲೂ ಜಾಸ್ತಿಯಾಗಿ ತನ್ನನ್ನು ತಾನು ತೊಡಗಿಸಿಕೊಳ್ಳತೊಡಗಿದಳು.
ಇವಳಿಲ್ಲಿ, ಹೀಗೆ ಯೋಚಿಸುತ್ತಿದ್ದರೆ, ರಾಜಮ್ಮ, ರಾಮಾರಾಯ ದಂಪತಿಗಳು,
ಸರಸ್ವತಿಗೆ ಮಗುವಾಗಿ, ಆ ಮಗುವನ್ನು ಚೆನ್ನಾಗಿ ಬೆಳೆಸಿಬಿಟ್ಟರೆ, ಅವಳ ಬಾಳಿಗೊಂದು ಆಸರೆಯಾಗುವುದೆಂದು ಭಾವಿಸಿದರೆ, ಈ ರೀತಿಯಾಯಿತಲ್ಲಾ, ನಾವಿರುವ ತನಕ ಸರಿ, ಮುಂದೇನು? ಎಂದು ಯೋಚಿಸ ತೊಡಗಿದರು.
ಒಂದು ಮಧ್ಯಾನ್ಹ ಊಟಕ್ಕೆಂದು ಮನೆಗೆ ಬಂದ ರಾಮರಾಯರು – ಸರಸ್ವತಿ ಎಲ್ಲಿ? -ಎಂದು ಕೇಳಿದರು.
ರಾಜಮ್ಮ – ಅವಳು ತರಕಾರಿ, ಹಾಗೇ ಕೆಲವು ಮನೆ ದಿನಸಿ ಸಾಮಾನುಗಳನ್ನು ತರಲು ತಾನೇ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದಾಳೆ – ಎಂದರು.
ಅಬ್ಬಾ, ಎಷ್ಟು ಚುರುಕಿನ ಹುಡುಗಿ, ನಮ್ಮ ಸರಸ್ವತಿ. ಅವಳಲ್ಲಿ ಎಷ್ಟು ಕಲಿಯುವ ಉತ್ಸಾಹ ಮತ್ತು ಜಾಣ್ಮೆ ಸಹ ಇದೆ. ಹತ್ತೇ ದಿನಗಳಲ್ಲಿ ಕಾರ್ ಡ್ರೈವಿಂಗ್ ಕಲಿತು, ಒಂದು ತಿಂಗಳಲ್ಲೆ ಎಷ್ಟೇ ಟ್ರಾಫಿಕ್ ಇರುವ ಸ್ಥಳಕ್ಕಾದರು ಹೋಗಿ ಬರುವಂತಹ ನಿಪುಣತೆ ಸಾಧಿಸಿಬಿಟ್ಟಳಲ್ಲಾ ಈ ಹುಡುಗಿ – ಎಂದರು ರಾಮರಾಯರು.
ಹುಂ, ಯಾವುದೇ ಕೆಲಸವನ್ನು ನನಗೆ ಆಗದು ಎನ್ನುವುದು ಗೊತ್ತೇ ಇಲ್ಲ, ಈ ನಮ್ಮ ಸರಸ್ವತಿಗೆ. ಕಂಪ್ಯೂಟರ್, ಮೊಬೈಲ್ಲುಗಳನ್ನೂ ಹೀಗೇ ಕಲಿತುಬಿಟ್ಟಳು. ಅಡುಗೆ ಮನೆಯಲ್ಲೂ ಅಷ್ಟೇ ಅಚ್ಚುಕಟ್ಟು, ಒಪ್ಪ, ಓರಣ, ನಮ್ಮ ಸರಸವಿನದು.
ಎರಡೂ ಕೈಗಳಲ್ಲಿ ನಾಲ್ಕು ನಾಲ್ಕು ಚೀಲಗಳನ್ನಿಟ್ಟುಕೊಂಡು ಒಳ ಬಂದ ಸರಸ್ವತಿ, ಬಟ್ಟೆ ಬರೆಗಳ ಚೀಲಗಳನ್ನು ರೂಮಿನಲ್ಲಿ, ದಿನಸಿಯ ಚೀಲಗಳನ್ನು ಅಡುಗೆ ಮನೆಯಲ್ಲಿ, ತರಕಾರಿ ಹಣ್ಣುಗಳ ಚೀಲವನ್ನು ಫ್ರಿಡ್ಜ್ ಹತ್ತಿರ ಇಟ್ಟು, ಕಾರಿನ ಕೀಯನ್ನು ಸ್ಟ್ಯಾಂಡಿನಲ್ಲಿದ್ದ ಅದರ ಗೂಟಕ್ಕೆ ನೇತು ಹಾಕಿ,
ಅಣ್ಣಾ, ಅಮ್ಮ, ಏನು ನನ್ನ ಗುಣಗಾನವಾಗುತ್ತಿತ್ತಲ್ಲಾ, ಹೆತ್ತವರಿಗೆ ಹೆಗ್ಗಣ ಮುದ್ದು, ಕಟ್ಟಿಕೊಂಡವರಿಗೆ ಕೋಡಂಗಿ ಮುದ್ದು ಎನ್ನವ ಗಾದೆಯನ್ನೇನೋ ನಾನು ಕೇಳಿದ್ದೀನಿ, ನೀವು ನನ್ನ ಹೆತ್ತವರೂ ಅಲ್ಲ, ಕಟ್ಟಿಕೊಂಡವರೂ ಅಲ್ಲ, ಅಷ್ಟೇ ಅಲ್ಲ, ನಾನು ಹೆತ್ತವರ ಹೆಗ್ಗಣವೂ ಆಗಲಿಲ್ಲ, ಕಟ್ಟಿಕೊಂಡವನ ಕೋಡಂಗಿಯೂ ಆಗಲಿಲ್ಲ, ಆದರೂ ನೀವ್ಯಾಕೆ ಹೀಗೆ ನನ್ನ ಮುದ್ದಿಸುತ್ತೀರಿ ಎಂದಾಗ ಅವಳ ಕಣ್ಣುಗಳಲ್ಲಿ ಕೃತಕ್ಞತೆಯಿಂದ ಕೂಡಿದ ಸಂತಸ ಮಿಂಚುತ್ತಿತ್ತು.
ರಾಜಮ್ಮ, ಫ್ರಿಡ್ಜಿನಿಂದ ತಣ್ಣಗಿನ ಜ್ಯೂಸ್ ಬಗ್ಗಿಸಿ, ಅವಳ ಕೈಗಿಡುತ್ತಾ
ನೀನು ಹೆಗ್ಗಣವೂ ಅಲ್ಲ, ಕೋಡಂಗಿಯೂ ಅಲ್ಲ, ನಮ್ಮ ಮನೆ ಅರಗಿಣಿ, ಸುಸ್ತಾಗಿದೆ ಕುಡಿ ಜ್ಯೂಸು – ಎಂದರು.
ಬರಡಾಗಿದ್ದ ತಮ್ಮ ಬಾಳಲ್ಲಿ ಪಸರಿಸುತ್ತಿರಿವ ಬೆಳಕಿನಿಂದ ಸಂತೃಪ್ತರಾದ ರಾಮರಾಯರು, –
ಇರಲಿ, ಇರಲಿ, ಬರೀ ಕಾಡು ಹರಟೆಯೇ ಆಗಿ ಹೋಯಿತು. ಇಬ್ಬರೂ ಇಲ್ಲಿ ಬಂದು ಕುಳಿತುಕೊಳ್ಳಿ, ಇಂದು ಒಂದು ಪ್ರಮುಖ ವಿಚಾರದ ಚರ್ಚೆಯಾಗಬೇಕಿದೆ – ಎಂದರು.
ರಾಜಮ್ಮ, ಸರಸ್ವತಿ ಮುಖ ಮುಖ ನೋಡಿಕೊಂಡರು. ಸರಸ್ವತಿಯೇ ಮುಂದಾಗಿ, –
ಅಣ್ಣಾ, ನಿಮಗೆ ಊಟಕ್ಕೆ ಲೇಟಾಗುತ್ತಿದೆ. ಮೊದಲು ಊಟ ಮಾಡಿರಿ, ನಂತರ ಮಾತನಾಡಿದರೆ ಆಗದೇ – ಎಂದಳು.
ಬೇಡ ಸರಸ್ವತೀ, ಹತ್ತೇ ನಿಮಿಷ, ಮಾತನಾಡಿ ನಂತರ ಊಟ ಮಾಡೋಣ, ನಿನಗೆ ಗೊತ್ತಲ್ಲ, ನನ್ನ ತಲೆಗೆ ಏನಾದರೂ ಬಂದರೆ – – –
ಸರಿ, ಸರಿ, ಹೇಳಿ ಅಣ್ಣಾ, ನಿಮ್ಮ ಮಾತು ನಮಗೆ ವೇದವಾಕ್ಯ –
ಎನ್ನುತ್ತಾ, ಸತ್ಯವಾದ ಮಾತಾದರೂ, ಅದನ್ನು ವಿನೋದವಾಗಿ ಹೇಳುತ್ತಾ, ಅವರ ಮುಂದಿದ್ದ ಕುರ್ಚಿಯಲ್ಲಿ ಬಂದು ಕುಳಿತಳು.
ಅವಳ ಮುಖದಲ್ಲಿ ರಾಮನ ಮುಂದೆ ಕುಳಿತ ಹನುಮಂತನ ಮುಖದಲ್ಲಿ ಇರುವ ವಿನೀತ ಭಾವ ಇತ್ತು. ಅಷ್ಟು ಆಸ್ಥೆ ಮತ್ತು ಗೌರವ, ಅವಳಿಗೆ, ಅವರ ಮಾತೆಂದರೆ.
ರಾಜಮ್ಮನವರೂ ಬಿಸಿಯಾಗಲೆಂದು ಸಾರಿಟ್ಟಿದ್ದ ಗ್ಯಾಸಿನ ಸ್ವಿಚನ್ನು ಆರಿಸಿ ಬಂದು ಸರಸ್ವತಿ ಕುಳಿತಿದ್ದ ಕುರ್ಚಿಯ ಪಕ್ಕದ ಕುರ್ಚಿಯಲ್ಲಿ ಕುಳಿತರು.
ರಾಮರಾಯರು ಹೇಳತೊಡಗಿದರು. –
ನೋಡು ಸರಸ್ವತಿ, ನಾವು ಇರುವಾಗಲೇ ನೀನು ಸ್ವತಂತ್ರವಾಗಿ, ನಿನ್ನ ಕಾಲ ಮೇಲೆ ನೀನು ನಿಂತುಕೊಳ್ಳುವಂತೆ ಆಗಬೇಕು. ಅದನ್ನು ನೋಡುತ್ತಾ ನಾವುಗಳು ನೆಮ್ಮದಿ ಹೊಂದಬೇಕು. ಅಯ್ಯೋ, ನಮ್ಮ ನಂತರ ಇವಳ ಗತಿಯೇನೋ ಎಂಬ ಕೊರಗಿನಲ್ಲಿ ನಾವು ಹೋಗಬಾರದು. ಹಾಗಾಗಿ, ನಿನ್ನ ಮುಂದಿನ ಜೀವನದ ಬಗ್ಗೆ ನಿರ್ಧರಿಸುವ ಸಮಯ ಈಗ ಬಂದಿದೆ. ನಿಮ್ಮಿಬ್ಬರಿಗೂ ತಿಳಿದಂತೆ ನನ್ನ ತಲೆಗೆ ಒಂದು ವಿಷಯ ಹೊಕ್ಕಿತೆಂದರೆ ಅದರ ಸಾಧಕ, ಬಾಧಕಗಳ ಬಗ್ಗೆ ಚಿಂತನ, ಮಂಥನಗಳು ನಡೆದು ಒಂದು ನಿರ್ಧಾರಕ್ಕೆ ಬರುವ ತನಕ ನನಗೆ ಸಮಾಧಾನವಿರುವುದಿಲ್ಲ.
ಸರಿ ಅಣ್ಣಾ, ಹೇಳಿ, ಈಗ ನಾನು ಏನು ಮಾಡಬೇಕು?
ಈಗ ನಿನ್ನ ಮುಂದೆ ನನಗೆ ತಿಳಿದ ಮಟ್ಟಿಗೆ ಮೂರು ದಾರಿಗಳು ಇವೆ.
ಒಂದು – ನಿನ್ನ ಓದನ್ನು ಮುಂದುವರೆಸಿ, ಅದನ್ನು ಮುಗಿಸಿ ಒಂದು ಕೆಲಸಕ್ಕೆ ಸೇರಿಕೊಳ್ಳಬಹುದು.
ಆದರೆ ಈ ಸಾಧಕದಲ್ಲಿ ಇರುವ ಬಾಧಕ ಎಂದರೆ, ನಿನ್ನಂಥಹ ಚುರುಕು ಬುದ್ಧಿಯವಳಿಗೆ, ಕುಶಾರ್ಗಮತಿಗೆ, ಸೇವಾ ಮನೋಭಾವ ಇರುವವಳಿಗೆ, ಡಾಕ್ಟರ್ ಓದು, ಓದುವುದೇ ಸರಿ. ಆದರೆ ನೀನೋ ಒಂದು ಪಿಯುಸಿಯನ್ನೂ ಮುಗಿಸದೆ ಆ ಹುಡುಗನೊಂದಿಗೆ ಬಂದು ವಿದ್ಯಾಭ್ಯಾಸವನು ಮೊಟಕು ಗೊಳಿಸಿಕೊಂಡಿದ್ದೀಯ. ಈಗ ಪಿಯುಸಿಯಿಂದ ಓದು ಪ್ರಾರಂಭಿಸಿ, ಎಂ.ಬಿ.ಬಿ.ಎಸ್., ಮುಗಿಸಿ ಅಗತ್ಯ ಬಿದ್ದರೆ, ಮುಂದೆಯೂ ಓದಿ ನಂತರ ನಿನ್ನ ಕಾಲ ಮೇಲೆ ನೀನು ನಿಲ್ಲುವುದೆಂದರೆ ಕನಿಷ್ಟ ಪಕ್ಷ ಈಳೆಂಟು ವರುಷಗಳ ಸಮಯ ಬೇಕು. ನಮಗೂ ವಯಸ್ಸಾಗುತ್ತಿದೆ, – ಒಂದರೆಕ್ಷಣ ನಿಲ್ಲಿಸಿ, – ಆದರೂ ನಿನಗಿಷ್ಟ ಎಂದರೆ ಖಂಡಿತಾ ಓದು, ಓದಿಸುತ್ತೇನೆ.
ಎರಡನೆಯದು, ಯಾವುದಾದರೂ ಒಳ್ಳೆಯ ಹುಡುಗನನ್ನು ಹುಡುಕಿ, ನಿನ್ನೆಲ್ಲಾ ಹಿನ್ನೆಲೆಯನ್ನೂ ತಿಳಿದು, ನಿನ್ನನ್ನು ಅಂಗೀಕರಿಸುವ, ಪ್ರೀತಿಸುವ, ಒಪ್ಪಿಕೊಳ್ಳುವ ಹುಡುಗನನ್ನು ಹುಡುಕಿ ಮದುವೆ ಮಾಡುವುದು.
ನೀನೊಪ್ಪಿದರೆ ಇದು ನನಗೆ ಕಷ್ಟವೂ ಅಲ್ಲ, ಇಷ್ಟವೂ ಹೌದು, ರಾಜುವುಗೂ ಇದೇ ಇಷ್ಟ ಎನ್ನುವುದು ನನ್ನ ಭಾವನೆ, – ಎನ್ನುತ್ತಿದ್ದರೆ,
ರಾಜಮ್ಮನವರು, – ಹೌದು, ಹೌದು – ಎನ್ನುವಂತೆ ತಲೆ ಆಡಿಸ ಹತ್ತಿದರು.
ಆದಾಗ್ಯೂ, ನಿನ್ನ ಮನಸ್ಸಿನ ಭಾವನೆಯನ್ನು ಮನಃಪೂರ್ವಕವಾಗಿ ನಾನು ಗೌರವಿಸುತ್ತೀನೆ.
ಇನ್ನು ಮೂರನೆಯದು, ಇಂದಿನ ದಿನಪತ್ರಿಕೆಯಲ್ಲಿ ನರ್ಸಿಂಗ್ ಟ್ರೈನಿಂಗಿಗಾಗಿ, ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಎರಡು ವರುಷಗಳ ಕೋರ್ಸ್. ಅದೂ ಸಹ ನಿನ್ನ ಸೇವಾ ಮನೋಭಾವಕ್ಕೆ ತಕ್ಕುದಾದ ಕೆಲಸ. ಎರಡು ವರುಷಗಳ ಕೋರ್ಸ್ ಮುಗಿಸಿ ಒಳ್ಳೆಯ ದರ್ಜೆಯಲ್ಲಿ ಪಾಸಾದರೆ, ಸರ್ಕಾರೀ ನೌಕರಿ ಸಿಗುವ ಸಾಧ್ಯತೆಯೂ ಬಹಳ ಇದೆ. ನಿನ್ನ ದಕ್ಷತೆಯಿಂದ ಹೆಡ್ ನರ್ಸ್ ಕೂಡ ಆಗಬಹುದು. ವೃತ್ತಿಯಲ್ಲಿ ತೃಪ್ತಿ ಇರುತ್ತದೆ. ಸರ್ಕಾರೀ ಉದ್ಯೋಗ ದೊರೆತರಂತೂ ಉದ್ಯೋಗ ಭದ್ರತೆಯೂ ಇರುತ್ತದೆ. ಹದಿನೈದು ದಿನಗಳ ಒಳಗೆ ಅರ್ಜಿ ಹಾಕ ಬೇಕು. ನಿನ್ನ ಊರಿನ ಶಾಲೆಗೆ ಹೋಗಿ ಕಾಗದ ಪತ್ರಗಳನ್ನು ತರಬೇಕು.
ಈ ಮೂರು ದಾರಿಗಳಲ್ಲಿ ನೀನು ಯಾವುದನ್ನು ಆರಿಸಿಕೊಂಡರೂ ನನಗೆ ಸಂತೋಷವೇ. ಮೂರರಲ್ಲೂ ನೀನು ಗುರಿ ಸಾಧಿಸುತ್ತೀಯ ಎಂಬ ನಂಬಿಕೆ ನನಗೆದೆ, ಯೋಚಿಸಿ ಹೇಳು ಸರಸ್ವತಿ – ಎನ್ನುತ್ತಾ ರಾಜಮ್ಮನವರ ಕಡೆ ತಿರುಗಿ, –
ರಾಜೂ, ನಿನಗೂ ಯಾವುದು ಸರಿ ಅನ್ನಿಸುತ್ತದೆ ಹೇಳು, ಆದರೂ ಸರಸ್ವತಿಯದೇ ಅಂತಿಮ ತೀರ್ಮಾನ – ಎಂದು ತಮ್ಮ ಮಾತು ಮುಗಿಸಿದರು.
ರಾಜಮ್ಮನವರು – ಸರಸ್ವತೀ, ನನಗಂತೂ ಎರಡನೇ ಆಯ್ಕೆಯೇ ಸರಿ ಎನ್ನಿಸುತ್ತದೆ. ಯಾರೋ ಒಬ್ಬ ಗಂಡಸು ಮೋಸ ಮಾಡಿದರೆ ಎಲ್ಲರೂ ಹಾಗೆಯೇ ಇರುತ್ತಾರೆಯೇ? – ಎಂದರು.
ತಕ್ಷಣ ಸರಸ್ವತಿ – ಇಲ್ಲ ಅಮ್ಮಾ, ಅವನೂ ಮೋಸಗಾರ ಅಲ್ಲ. ಆದರೆ ಬದ್ದತೆ ಮತ್ತು ಜವಾಬ್ದಾರಿ ಇಲ್ಲದ ಮನುಷ್ಯ ಎಂದು ಹೇಳಬಹುದೇನೋ, ಅಲ್ಲದೆ ಪಕ್ವತೆ ಇಲ್ಲದ ವಯಸ್ಸು ಇಬ್ಬರದೂ ಆಗಿತ್ತು. ಆದರೆ ನಾನು ಕಷ್ಟ ಪಡಲು ತಯಾರಿದ್ದೆ. ಕೊನೇ ಪಕ್ಷ ನನ್ನಲ್ಲಿ ತನ್ನ ಶಂಕೆ, ಆತಂಕಗಳನ್ನು ಹೇಳಿಕೊಂಡಿದ್ದರೆ ಇಬ್ಬರೂ ಸೇರಿ ಏನಾದರೂ ಪರಿಹಾರ ಹುಡುಕಿ ಜೀವಿಸಬಹುದಿತ್ತೇನೋ, ಇರಲಿ, ಇನ್ನು ಆ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಅದು ಮುಗಿದ ಕಥೆ. ನನಗೇನೂ ಗಂಡಸರು ಕೆಟ್ಟವರು, ಮೋಸಗಾರರು ಎಂಬ ಭಾವನೆಯಿಲ್ಲ, ಈಗ ಅಣ್ಣನನ್ನೇ ತಗೆದುಕೊಳ್ಳೋಣ, ಅವರಿಗಿಂತ ಬೇರೆ ಉದಾಹರಣೆ ಏಕೆ ಬೇಕು? ನನ್ನ ಅಪ್ಪನೂ ಅಷ್ಟೆ, ಆದರೆ ನನ್ನಪ್ಪನ ಅಸಹಾಯಕತೆ ನನಗೆ ಮರುಕ ಹುಟ್ಟಿಸುತ್ತದೆ ಅಷ್ಟೆ.
ಅಮ್ಮಾ, ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಪೂರ್ತಿಯಾಗಿ, ನನ್ನ ಮೇಲಿನ ಪ್ರೀತಿಯಿಂದಲೇ ಈ ಆಯ್ಕೆಯ ಸಲಹೆಯನ್ನು ನೀಡುತ್ತಿದ್ದೀರಿ, ಗೊತ್ತು ನನಗೆ. ಆದರೆ, ಇಲ್ಲಾ ಅಮ್ಮ, ಸಾಧ್ಯವಿಲ್ಲ. ಆ ಒಂದೂವರೆ ತಿಂಗಳಲಲಿ ನಾನು ಏನು ಅನುಭವಿಸಿದೆನೋ ಅಷ್ಟೇ ನನ್ನ ಜೀವನದ ಪ್ರೇಮ, ಕಾಮ, ದಾಂಪತ್ಯ ಸಾಂಸಾರಿಕ ಸುಖ, ದುಃಖ, ದುಮ್ಮಾನಗಳು ಎಲ್ಲಾ. ಇನ್ನು ನನಗೆ ಆ ಜೀವನ ಬೇಡ. ನನ್ನ ಬಾಳಲ್ಲಿ ಒಬ್ಬನೇ ಗಂಡಸಿಗೆ ಆ ಸ್ಥಾನ, ಅಷ್ಟೇ. ನನ್ನ ದುರಾದೃಷ್ಟ, ಅದು ಅಪಾತ್ರ ದಾನವಾಯಿತು. ನಿಮ್ಮಿಬ್ಬರ ಅಂತಃಕರಣ ನನ್ನನ್ನು ಆ ವಲಯದಿಂದ ಹೊರಬಂದು, ಜೀವನ ಕಟ್ಟಿಕೊಳ್ಳುವ, ಜೀವನ ಪ್ರೀತಿ ಹುಟ್ಟುವಂತೆ ಮಾಡಿದೆ. ಅಮ್ಮ, ಮತ್ತೊಮ್ಮೆ ಕೇಳಿ ಕೊಳ್ಳುತ್ತಿದ್ದೇನೆ, ನಿಮ್ಮ ಆಯ್ಕೆಯನ್ನು ತಿರಸ್ಕರಿಸುತ್ತಿದ್ದೀನಿ, ನೊಂದುಕೊಳ್ಳ ಬೇಡಿ. ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ. ಅದು ನನ್ನ ಶ್ರೀರಕ್ಷೆಯೂ ಹೌದು, ಆದರೆ ನನಗೆ ಸಾಧ್ಯವಾಗುವುದಿಲ್ಲ ಅಮ್ಮಾ ಪ್ಕೀಸ್.
ಎನ್ನುತ್ತಾ ಆರ್ದ್ರಳಾಗಿ, ಪಕ್ಕದಲ್ಲಿ ಕುಳಿತಿದ್ದ ರಾಜಮ್ಮನವರ ಎರಡೂ ಕೈಗಳನ್ನು ಹಿಡಿದು ಕಣ್ಣಿಗೊತ್ತಿಕೊಂಡಳು. ಧಾರಾಕಾರವಾಗಿ ಸುರಿದ ಕಣ್ಣಿರು ರಾಜಮ್ಮನವರ ಕೈಗಳನ್ನು ಒದ್ದೆ ಮಾಡಿತು.
ಕೈಗಳನ್ನು ಬಿಡಿಸಿಕೊಂಡ ರಾಜಮ್ಮನವರು, ಅವಳ ಕಣ್ಣೀರನ್ನು ತಮ್ಮ ಸೆರಗಿನಿಂದ ಒರೆಸುತ್ತಾ, ತಲೆಯನ್ನು ತಮ್ಮ ಹೆಗಲಿಗಾನಿಸಿಕೊಂಡು –
ಅಳಬೇಡ ಕಂದಾ, ನಿನ್ನ ಬದ್ಧತೆಯನ್ನು ನಾನು ಗೌರವಿಸುತ್ತೀನಿ. ಯಾವ ಆಯ್ಕೆಯಿಂದ ನಿನ್ನ ಆತ್ಮಸ್ಥೈರ್ಯ ಗಟ್ಟಿಗೊಳ್ಳುತ್ತದೋ ಅದನ್ನು ನೀನು ಆಯ್ಕೆ ಮಾಡಿಕೋ. ಅದಕ್ಕೆ ಸಹಕರಿಸುವುದರಲ್ಲೇ ನನಗೆ ಸುಖವಿದೆ – ಎಂದರು.
ಹೆಂಡತಿಯ ಪರಿಪಕ್ವ ಮಾತಿಗೆ ರಾಮರಾಯರು ಮೆಚ್ಚಗೆಯಿಂದ ದೃಷ್ಟಿಸಿದರೆ, ಸರಸ್ವತಿ, ಸಧ್ಯ, ತಾನು ಬೇರೆ ನಿರ್ಧಾರ ತೆಗೆದುಕೊಂಡರೆ, ಅಮ್ಮನ ಮನಸ್ಸು ನೋಯಿಸಿದಂತಾಗುವುದಿಲ್ಲ ಎಂಬ ನಿರಾಳತೆಯಿಂದ ಒಮ್ಮೆ ದೀರ್ಘವಾಗಿ ಅವರನ್ನು ದೃಷ್ಟಿಸಿ, ಕಣ್ಣಲ್ಲೇ ತನ್ನ ಕೃತಜ್ಞತೆಯನ್ನು ತಿಳಿಸಿ, ರಾಯರ ಕಡೆ ತಿರುಗಿದಳು.
ಅಣ್ಣಾ, ನನಗೆ ನೀವು ಮೂರು ಆಯ್ಕೆಗಳನ್ನು ನೀಡಿದ್ದೀರಿ, ನಾನು ಅದಕ್ಕೆ ಥ್ಯಾಂಕ್ಸ್ ಹೇಳುವುದಿಲ್ಲ. ಏಕೆಂದರೆ, ಸದಾ ನನ್ನ ಹಿತವನ್ನೇ ಬಯಸುವ ನಿಮಗೆ ಆ ಚಿಕ್ಕ ಪದ ಹೇಳಿ, ನಮ್ಮ ಬಾಂಧವ್ಯದ ಗಟ್ಟಿತನವನ್ನು ಸಡಿಲಗೊಳಿಸುವುದಿಲ್ಲ. ನನಗೆ ಯೋಚಿಸಲು ಯಾವ ಸಮಯವೂ ಬೇಡ. ಮೂರನೆಯದೇ ನನ್ನ ಆಯ್ಕೆ. ಇಂದಿನಿಂದಲೇ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲು ಪ್ರಾರಂಭಿಸೋಣ.
ಎರಡನೇ ಆಯ್ಕೆ, ಬೇಡ ಎನ್ನಲು ಆಗಲೇ ಕಾರಣಗಳನ್ನು ಹೇಳಿದ್ದೀನಿ. ಇನ್ನು ಮೊದಲನೇ ಆಯ್ಕೆ, ಅದು ನೀವು ಹೇಳಿದಂತೆ ತುಂಬಾ ದೀರ್ಘವಾದ ದಾರಿ. ಅಲ್ಲದೇ ನಾನೆಂದೂ ಡಾಕ್ಟರ್ ಆಗಬೇಕೆಂಬ ಕನಸು ಕಂಡವಳೂ ಅಲ್ಲ. ನಿಮಗೆ ಹೇಗೆ, ನನ್ನ ಕಾಲ ಮೇಲೆ ನಿಲ್ಲುವುದನ್ನು ನೋಡಬೇಕೆಂಬ ಆಕಾಂಕ್ಷೆ ಇದೆಯೋ, ಹಾಗೇ ನನಗೂ ನೀವಿಬ್ಬರು ಇರುವವರೆಗೂ, ನಿಮ್ಮಬ್ಬರಿಗೂ ಒಂದು ಚೂರೂ ತೊಂದರೆಯಾಗದಂತೆ ನೋಡಿಕೊಂಡು ನಿಮ್ಮಿಬ್ಬರ ಜೊತೆಗಿರುವ ಒಂದೊಂದು ಕ್ಷಣವನ್ನೂ ವ್ಯರ್ಥ ಮಾಡದೆ ನಿಮ್ಮ ಪ್ರೀತಿ ವಿಶ್ವಾಸಗಳ ಸವಿಯನ್ನು ಉಣ್ಣುವುದೇ ಸರಿ, ನಂತರ ಮಿಕ್ಕ ಆಯಸ್ಸನ್ನು ಹೇಗೋ ಕಳೆದರಾಯಿತು ಎಂದೇ ಇದ್ದೆ. ಆದರೆ, ಆಗಲೇ ಹೇಳಿದಂತೆ, ನನ್ನ ಕಾಲ ಮೇಲೆ ನಾನು ನಿಲ್ಲುವುದನ್ನು ನೋಡಲು ನಿಮಗೆ ಇಚ್ಛೆಯಿದೆ ಎಂದರೆ ನಾನು ಹಾಗೇ ಮಾಡುತ್ತೇನೆ. ನನಗೆ ಮೂರನೇ ಆಯ್ಕೆ ಒಪ್ಪಿಗೆ –
ಎನ್ನುತ್ತಾ ಇನ್ನು ಮಾತಿಗೆ ಅವಕಾಶವೀಯದಂತೆ,
ಸರಿ, ಅಮ್ಮ, ಅಣ್ಣ, ನಿಮಗೆ ಊಟಕ್ಕೆ ತಡವಾಗುತ್ತಿದೆ, ಏಳಿ ಊಟ ಮಾಡೋಣ, ಹೊತ್ತಾಯಿತು, ತಟ್ಟೆ ಇಡುತ್ತೇನೆ, ಇನ್ನು ಮುಂದೆ ನಾನು ನಿಮ್ಮ ಮಗಳು ಮಾತ್ರವಲ್ಲ, ನಿಮ್ಮ ಪರ್ಸನಲ್ ನರ್ಸ್ ಕೂಡ ಹೌದು. ಹಿಂದಿಗಿಂತ ಹೆಚ್ಚು ಇನ್ನು ಮುಂದೆ ನೀವು ನನ್ನ ಮಾತು ಕೇಳಬೇಕು – ಎನ್ನುತ್ತಾ ಎದ್ದಳು.
ಮುಂದಿನ ಎರಡು ವರುಷಗಳು ಸಲೀಸಾಗಿ ಕಳೆದು ಹೋಯಿತು. ಸರಸ್ವತಿ, ನರ್ಸಿಂಗ್ ಪರೀಕೆಯಲ್ಲಿ ಅತ್ಯತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಗೊಂಡು ಸರ್ಕಾರೀ ಕೆಲಸಕ್ಕೂ ಆಯ್ಕೆಯಾದಳು. ಈ ಅವಧಿಯಲ್ಲಿ ಅವಳ ದಕ್ಷತೆ, ಪುಟಕ್ಕಿಟ್ಟ ಚಿನ್ನದಂತೆ ಇನ್ನೂ ಜಾಸ್ತಿಯಾಯಿತು.
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32339
(ಮುಂದುವರಿಯುವುದು)
-ಪದ್ಮಾ ಆನಂದ್, ಮೈಸೂರು
ಕಾದಂಬರಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ..ಎಷ್ಟೊಂದು positive vibes ಹುಟ್ಟು ಹಾಕಿದೆ…ಅಭಿನಂದನೆಗಳು ಮೇಡಂ
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ವಂದನೆಗಳು
ಸೊಗಸಾಗಿದೆ ಕಾದಂಬರಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಕಾದಂಬರಿ ಉತ್ತಮವಾಗಿ ಮತ್ತು ವೇಗವಾಗಿ ಸಾಗುತ್ತದೆ.ಹೀಗೆ ಮುಂದುವರಿಯಲಿ.
ಧನ್ಯವಾದಗಳು. ಈಗ ನಿಮಗೆ ನಿರಾಸೆಯಾಗದಂತೆ ಕಾದಂಬರಿಯನ್ನು ಮುಂದುವರೆಸುವ ಜವಾಬ್ದಾರಿ ನನ್ನ ಮೇಲಿದೆ.
ಸೇವಾ ಮನೋಭಾವದ ಸರಸ್ವತಿ, ಅವಳ ನಿರ್ಧಾರ ಇಷ್ಟವಾಯ್ತು.. ಮುಂದಿನ ಭಾಗಕ್ಕೆ ಕಾಯುವಂತಾಗಿದೆ..ಚಂದದ ಕಾದಂಬರಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಚಂದದ ನಿರೂಪಣೆ
ಕಾದಂಬರಿ ಸೊಗಸಾಗಿ ಮೂಡಿಬರುತ್ತಿದೆ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು