ಪುಸ್ತಕ ಪರಿಚಯ: ಕಾಲಕೋಶ -ಕೃತಿಕಾರರು: ಶ್ರೀ ಶಶಿಧರ ಹಾಲಾಡಿ

Share Button

ಕಾದಂಬರಿ: ಕಾಲಕೋಶ
ಕೃತಿಕಾರರು: ಶ್ರೀ ಶಶಿಧರ ಹಾಲಾಡಿ
ನಮ್ಮ ದುರಂತಕ್ಕೆ ನಾವೇ ಬರೆದ ಮುನ್ನುಡಿ

ಹೊ.ವೆ. ಶೇಷಾದ್ರಿಯವರ `ದೇಶವಿಭಜನೆಯ ದುರಂತಕತೆ’ಯ ಎಳೆಯೊಂದಿಗೆ ತಳುಕು ಹಾಕಿಕೊಳ್ಳುವ, ಕಸ್ತೂರಿಯಲ್ಲಿ ಸುಮಾರು ವರ್ಷಗಳ ಹಿಂದೆ ಪ್ರಕಟವಾಗುತ್ತಿದ್ದ ಲೇಖನಗಳನ್ನು ನೆನಪಿಸುವ ಕಾದಂಬರಿ, ಕಾಲಕೋಶ. ಕಾಲಕೋಶ ಈ ಹೆಸರೇ ಸೂಚಿಸುವಂತೆ, ಕಾಲನ ಗರ್ಭದಲ್ಲಡಗಿಹೋದ ಅನೇಕ ವಿಷಯಗಳನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡುತ್ತದೆ.

ಕಥಾನಾಯಕ ಬ್ಯಾಂಕ್ ಉದ್ಯೋಗಾರ್ಥಿಯಾಗಿ ಚಾಮರಾಜನಗರದ ಒಂದು ಹಳ್ಳಿಯಿಂದ ಬೆಂಗಳೂರಿಗೆ ಬಂದು, ಆತನ ದೊಡ್ಡಪ್ಪನ ಕೊಲೆ ಕಾಡುಗಳ್ಳರಿಂದ ಸಂಭವಿಸಲ್ಪಟ್ಟು, ಹದಿನೈದು ದಿನಗಳ ರಜೆಯ ಅವಾಂತರದಲ್ಲಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಭಾರತದ ರಾಜಧಾನಿ ದೆಹಲಿಗೆ ವರ್ಗವಾಗಿ ಹೋಗಬೇಕಾಗುತ್ತದೆ. ಹೊಸದಾಗಿ ತಾನು ದೆಹಲಿಗೆ ಬಂದು, ಎಲ್ಲವನ್ನೂ ಗಮನಿಸುತ್ತಾ , ಮನೆ ಹುಡುಕ ತೊಡಗುವ ಕಥಾನಾಯಕನ ದೃಷ್ಟಿಗೆ ಗೋಚರಿಸುವ, ಆತನ ಅಂತರಾಳವನ್ನು ಕಲಕುವ, ಒಬ್ಬರಿಗೆ ತಪ್ಪಾಗಿದ್ದು, ಮತ್ತೊಬ್ಬರಿಗೆ ಸರಿಯಾಗಿ ಕಂಡು, ಸರಿತಪ್ಪುಗಳ ತಾಕಲಾಟಕ್ಕೆ, ಗೊಂದಲಕ್ಕೆ ಈಡಾಗುವ ಕಥಾನಕವೇ ಕಾಲಕೋಶ.

ಅನಾಮಿಕನಾಗಿಯೇ ಉಳಿದುಹೋಗುವ ಕಥಾನಾಯಕನ ಸ್ವಗತದಿಂದ ಕಾದಂಬರಿ ಪ್ರಾರಂಭವಾಗಿ ಓದುಗನ ಮುಂದೆ ಕಥೆಯು ಅನಾವರಣಗೊಳ್ಳುತ್ತಾ ಸಾಗುತ್ತದೆ. ಬ್ಯಾಂಕ್ ನೌಕರನಾದ ದಕ್ಷಿಣ ಭಾರತದ ಕಥಾನಾಯಕನಿಗೆ ವಿಲಕ್ಷಣ ವ್ಯಕ್ತಿ ಅಮರ್‌ಸಿಂಗನ ಪರಿಚಯವಾಗುತ್ತದೆ. ಅಮರಸಿಂಗನ ಆತ್ಮೀಯತೆಯಲ್ಲಿ ಸಿಲುಕಿದ ನಾಯಕ ಅನಿವಾರ್ಯವಾಗಿ ತ್ರಿಲೋಕ್ ಪುರಿಯಲ್ಲಿರುವ ಅವನ ಮನೆಗೇ ಬಾಡಿಗೆಗೆ ಹೋಗುವಂತಾಗುತ್ತದೆ. ಅಮರಸಿಂಗ್ ಮತ್ತವನ ಪತ್ನಿ ರಜನಿಗೆ ಅವರ ಮಗನಂತೆಯೇ ಭಾಸವಾಗುವ ನಾಯಕನಿಗೆ ಅವರಿಬ್ಬರಲ್ಲೂ ಒಂದು ಬಗೆಯ ಪ್ರೀತಿ, ಕರುಣೆ ಬೆಳೆದು ಅವರ ಕತೆಗಳಿಗೆ ಕಿವಿಯಾಗುತ್ತಾನೆ.

ಬ್ಯಾಂಕಿನ ಹಿರಿಯ ಸಹೋದ್ಯೋಗಿ ಆಪ್ಟೆ ಇವನಿಗೆ ಆಪ್ತನಾಗಿ, ಅವರ ಮನೆಗೆ ಹೋಗುವ, ಅನಿವಾರ್ಯವಾದಾಗ ಉಳಿಯುವಷ್ಟು ಆತ್ಮೀಯತೆ ಬೆಳೆಯುತ್ತದೆ. ತನ್ನ ಜಿಲ್ಲೆಯ ಬಗ್ಗೆ , ಅದರ ಇತಿಹಾಸದ ಬಗ್ಗೆ ಹೆಮ್ಮೆ ಅಭಿಮಾನ ಪಡುವ ಆಪ್ಟೆ, ತ್ರಿಲೋಕ್ ಪುರಿಯಲ್ಲಿ ಅವನು ಮನೆ ಮಾಡಿರುವ ಬಗ್ಗೆ ಆಕ್ಷೇಪಿಸುತ್ತಲೇ, ಸಿಕ್ ಜನಾಂಗದ ನಡುವೆ ವಾಸಿಸುವುದೂ ಅಪಾಯವೇ, ಅಲ್ಲದೆ ಅವರು ಲಾಹೋರಿನಿಂದ ಬಂದಿರುವವರು ಎಂಬೆಲ್ಲ ವಾದದೊಂದಿಗೆ ಎಚ್ಚರಿಕೆಯನ್ನೂ ನೀಡುತ್ತಾರೆ. ಒಂದು ಖೇದದ ಸಂಗತಿಯೆಂದರೆ ಅಮರಸಿಂಗನಿಗೂ ಅವನದೇ ದೇಶವೊಂದಿತ್ತು, ಅಲ್ಲಿಂದ ಓಡಿಬಂದು ಇಲ್ಲಿ ಭಾರತೀಯನಾಗಿದ್ದಾನೆಂಬುದನ್ನು ಮರೆಯುವುದು!
ಆಗಿಹೋದ ರಾಷ್ಟ್ರೀಯ ಘಟನೆಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ತುಲನೆ ಮಾಡುತ್ತಾ, ತಮ್ಮ ಸಂಕಷ್ಟಗಳನ್ನು ತಾವೇ ಅರುಹುವ ಪಾತ್ರಗಳು; ಘಟನೆಗಳ ಇನ್ನೊಂದು ಮುಖವನ್ನು ಓದುಗನಿಗೆ ವೇದ್ಯವಾಗಿಸುತ್ತಾ ಸಾಗುತ್ತದೆ.

ತಾವು ಹುಟ್ಟಿ ಬೆಳೆದ , ಬಾಳಿ ಬದುಕಿದ ಲಾಹೋರನ್ನು ಬಿಟ್ಟುಬಂದು, ತಮ್ಮದೆಲ್ಲವನ್ನೂ ಕಳೆದುಕೊಂಡು, ಕರುಳಕುಡಿಯ ನಷ್ಟವಾಗಿ, ಭಾರತದಲ್ಲಿ ಹೊಸದೊಂದು ಬದುಕನ್ನು ಕಟ್ಟಿಕೊಳ್ಳುವ ಅಮರಸಿಂಗ್, ಆ ಕ್ಲುಪ್ತ ಕಾಲದಲ್ಲಿ ದೇಶ ಬಿಟ್ಟು ತೆರಳಿದ, ದೇಶ ಬಿಟ್ಟು ಬಂದ ಜನರ ತೊಳಲಾಟದ ಊಹಾತೀತ ಬದುಕಿನ ಪ್ರತಿನಿಧಿಯಾಗಿ ನಿಲ್ಲುತ್ತಾನೆ. ಅಲ್ಲದೆ ಯಾರಿಗೂ ಹೊರೆಯಾಗದೆ ತೊಂದರೆ ಕೊಡದೆ ದುಡಿದು ತಿನ್ನುತ್ತಾ ಬದುಕುವ ಅವನೂ ಕೂಡ ಭಾರತದ ನಾಗರಿಕನಾಗಿ ಬದುಕಲು ಪ್ರಯತ್ನಿಸುತ್ತಾನೆ.
ಬರ್ಮಾದ ತಿಬಾವ್ ಮಿನ್‌ನ ಇತಿಹಾಸವನ್ನು ಬಿಚ್ಚಿಡುವ, ಸಿಪಾಯಿ ದಂಗೆಯ ಬಗ್ಗೆ ಅನೇಕ ವಿಷಯಗಳನ್ನು ಹೊರಚೆಲ್ಲುವ ಆಪ್ಟೆ, ರತ್ನಗಿರಿಯ ಐತಿಹಾಸಿಕ ಮಹತ್ವಗಳನ್ನು ಹೇಳುತ್ತಲೇ, ಜೊತೆಜೊತೆಗೆ ಅವರೊಳಗಿನ ದೇಶಭಕ್ತಿಯನ್ನು, `ನಮ್ಮ ದೇಶದ ಬಗ್ಗೆ ಯಾರೇ ಅವಹೇಳನ ಮಾಡಿದರೂ ನನ್ನಿಂದ ಸುಮ್ಮನಿರಲು ಸಾಧ್ಯವಿಲ್ಲ.’ ಎನ್ನುತ್ತಾ, ತಮ್ಮೊಳಗಿನ ದೇಶಾಭಿಮಾನವನ್ನು ಹೊರಗೆಡಹುತ್ತಾರೆ.

ಗೋಡ್ಸೆ ಮಹಾತ್ಮಗಾಂಧೀಜಿಯವರನ್ನು ಕೊಲ್ಲುವುದರ ಹಿಂದೆ ಉದ್ದೇಶವೇನಿತ್ತೋ, ಆದರೆ `ಗೋಡ್ಸೆ’ ಎಂಬ `ಸರ್ ನೇಮ್’ ಇದ್ದ ಕುಟುಂಬಗಳು ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿ ಹೊತ್ತಿಕೊಂಡ ದಳ್ಳುರಿ, ಎದೆ ನಡುಗಿಸುತ್ತದೆ. `ಗಾಂಧಿಯನ್ನು ಕೊಂದ ಗೋಡ್ಸೆ ನಿಮ್ಮ ಸಂಬಂಧಿಕನಂತೆ’ ಎನ್ನುತ್ತಾ ಹೆಸರಿನ ಮುಂದೆ `ಗೋಡ್ಸೆ’ ಎಂದಿರುವವರನ್ನೆಲ್ಲ; ಗುಮಾನಿಯಿಂದ ನೋಡುವ, ಪರಕೀಯರಂತೆ ಕಾಣುವ, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಅವರದಲ್ಲದ ತಪ್ಪಿಗೆ ಶಿಕ್ಷೆ ವಿಧಿಸುವ ಜನರ ಮನೋಭಾವ ಯಾವತ್ತಿಗೂ ಬದಲಾಗದೇನೋ!

1948 ರ ಘಟನೆಯ ನಂತರ ಸಿಕ್ಕ ಸಿಕ್ಕಲ್ಲಿ ಸಿಕ್ಕರನ್ನು ತರಿದು ಹಾಕುವ ಘಟನೆಗಳು ಮನಸ್ಸನ್ನು ಕಲಕುತ್ತವೆ. ಯಾರೋ ಒಬ್ಬನ ಆಕ್ರೋಶಕ್ಕೆ, ಆತನೆಸಗಿದ ತಪ್ಪಿಗೆ, ಆತ ಜನ್ಮಿಸಿದ ಜನಾಂಗವನ್ನೇ ದೂಷಿಸುತ್ತಾ, ಅವರನ್ನು ಸಂಹರಿಸಲು ಹವಣಿಸುವ ಮನಸ್ಸುಗಳ ಬಗ್ಗೆ ಏನೂ ಮಾಡಲಾಗದ ಓದುಗನ ಎದೆಯಲ್ಲೊಂದು ನೋವಿನ ಕಿಡಿಯೇ ಹೊತ್ತಿಕೊಳ್ಳುವಂತೆ ಮಾಡುತ್ತದೆ ಕಾದಂಬರಿ. ಆಪ್ಟೆಯವರ ಮುಖದಿಂದ ಬರುವ ಮಾತು, `ನೀವು ದಕ್ಷಿಣದವರಿಗೆ ಈ ಗಲಭೆಗಳ ಬಿಸಿ ತಟ್ಟಿಲ್ಲ ಬಿಡಿ. ನಮಗೆ ಈ ಗಲಭೆಗಳು ಊಟ ನಿದ್ದೆಯಂತೆ ಸಹಜವಾಗಿಬಿಟ್ಟಿವೆ’ ನ್ನುವ ಈ ಮಾತನ್ನು ನಾವು ದಕ್ಷಿಣದವರು ಮರುಮಾತಿಲ್ಲದೆ ಸಹಜವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಸತ್ಯವಾದ ಮಾತೇ!

ಬ್ರಿಟಿಷರ ಆಡಳಿತದಲ್ಲಿದ್ದ ನಾವು, ಅವರು ತೊಲಗಿಹೋದರೂ ಇಂತಹ ಗಲಭೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತೇವೆ. ಹೊರಗಿನವರ ಆಕ್ರಮಣವೇ ಮನಸ್ಸು ಮನಸ್ಸುಗಳನ್ನು ಬೇರ್ಪಡಿಸಬೇಕಿಲ್ಲ. ಅನವಶ್ಯಕವಾದ ದ್ವೇಷದ ಒಂದು ಸಣ್ಣ ಕಿಡಿಯೂ, ನಮ್ಮನಮ್ಮವರ ನಡುವೆಯೇ ಬೆಂಕಿ ಹೊತ್ತಿಸಿ, ಆ ಕಾವಿನಲ್ಲಿ ಬೆಚ್ಚಗಾಗುವ ಮನಃಸ್ಥಿತಿಗಳು ಎಲ್ಲ ಕಾಲಕ್ಕೂ ಇದ್ದೇ ಇವೆ. ಬೇರೆ ದೇಶದವರು ಕಾಡುವುದಕ್ಕಿಂತ ನಮ್ಮೊಳಗೊಳಗೇ ದ್ವೇಷದ ಮೊಟ್ಟೆಗಳು ಮರಿಯಾಗುತ್ತಲೇ ಹೋಗುತ್ತವೆ ಎಂಬುವುದನ್ನು ಕಾದಂಬರಿ ಸಾಬೀತು ಪಡಿಸುತ್ತದೆ.

ಕಾಲಕೋಶ, ಕಾಲನ ಗರ್ಭದಲ್ಲಡಗಿಹೋದ ಅನೇಕ ವಿಷಯಗಳಿಗೆ ಹೊಸ ಹೊಳಹೊಂದನ್ನು ನೀಡುತ್ತಾ, ವಿಷಯಗಳನ್ನು ಮಂಡಿಸುತ್ತಾ ಹೋಗುತ್ತದೆ. ಏನೆಲ್ಲಾ ಆದರೂ ಎಲ್ಲ ಕಾಲಕ್ಕೂ ಮನುಷ್ಯನ ಸ್ವಭಾವ ಒಂದೇ ತೆರನಾಗಿರುತ್ತದೆ ಎಂಬ ಮಾತನ್ನು ಕೊನೆಯಲ್ಲಿ ಭವಿಷ್ಯಕಾರನ ಮುಖೇನ ನಮ್ಮ ಮುಂದಿಡುತ್ತಾರೆ ಕಾದಂಬರಿಕಾರರು. ಹಿಂದೆಯೂ, ಈಗಲೂ, ಮುಂದೆಯೂ ಸಂಕಷ್ಟದ ಸ್ಥಿತಿಗಳು ಒದಗಿ ಬರುತ್ತಲೇ ಇರುತ್ತವೆ. ಅದೆಲ್ಲವನ್ನೂ ನಿಭಾಯಿಸಲೇ ಬೇಕು ಎನ್ನುವ ಸಂದೇಶವನ್ನು ನೀಡುತ್ತಾ, ಬದಲಾಗದ ಮನುಷ್ಯ ಸ್ವಾಭಾವಕ್ಕೆ ಸಾಕ್ಷಿಯಾಗುತ್ತಾರೆ ಈ ಭವಿಷ್ಯಕಾರರು.

ಕಾದಂಬರಿಯ ನಿರೂಪಣೆ, ಅರ್ಥವತ್ತಾದ ಮುಖಪುಟ, ಕಾದಂಬರಿಯ ಅಂತರಾಳದ ತಿರುಳನ್ನು ಹುದುಗಿಸಿಕೊಂಡ ಶೀರ್ಷಿಕೆ, ಸಮಾಧಾನ ಚಿತ್ತದಿಂದ ವಸ್ತುವಿಷಯಗಳನ್ನು ಅವಲೋಕಿಸುತ್ತಾ ಹೋಗುವ ಕಥಾನಾಯಕನ ನಿರೂಪಣೆ ಮನಸ್ಸಿಗೆ ತಟ್ಟುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮುಂದೇನಾಗುವುದೆಂಬ ತಹತಹದಲ್ಲಿ, ಕಾದಂಬರಿ ಎಡೆಬಿಡದಂತೆ ಓದಿಸಿಕೊಂಡು ಹೋಗುತ್ತದೆ. ಇವುಗಳು ಕಾದಂಬರಿಯ ಪ್ಲಸ್ ಪಾಯಿಂಟ್ ಗಳು. ವಿದ್ಯಾರ್ಥಿಗಳು ಮುಖ್ಯವಾಗಿ ಓದಬೇಕಾದ ಪುಸ್ತಕವಿದು. ಇದನ್ನು ಕೊಂಡು ಓದಿದರೆ ನಿಜಕ್ಕೂ ನಾವು ಕೊಟ್ಟ ಹಣ ಕಾದಂಬರಿಯ ಮೌಲ್ಯಕ್ಕೆ ಕಡಿಮೆಯೆನಿಸದಿರದು.

ಲೇಖನ ಪ್ರಬಂಧಗಳ ಜೊತೆಜೊತೆಗೆ ಕಾದಂಬರಿ ಲೋಕಕ್ಕೆ ಪಾದಾರ್ಪಣ ಮಾಡಿರುವ ಶಶಿಧರ ಹಾಲಾಡಿಯವರ ಬರವಣಿಗೆಯು, ಹೊಸ ಹೊಸ ಕಾದಂಬರಿಗಳ ಸೃಷ್ಟಿಗೂ ವಿಸ್ತಾರವಾಗುತ್ತಲೇ ಹೋಗಲಿ ಎಂಬುದು ಓದುಗಳಾಗಿ ನನ್ನ ಹಾರೈಕೆಯಾಗಿದೆ. ಇಂತಹ ವಿಶೇಷ ಕಥಾವಸ್ತುವುಳ್ಳ ಕಾದಂಬರಿಯನ್ನು ಲೋಕಾರ್ಪಣೆ ಮಾಡಿದ್ದಕ್ಕೆ ಧನ್ಯವಾದಗಳು ಸರ್.

-ಬಿ.ಕೆ.ಮೀನಾಕ್ಷಿ, ಮೈಸೂರು.

5 Responses

 1. ನಯನ ಬಜಕೂಡ್ಲು says:

  Nice

 2. km vasundhara says:

  ಕಾದಂಬರಿಯನ್ನೂ ನಾನೂ ಓದಿರುವೆ. ತಮ್ಮ ವೀಶ್ಲೇಷಣೆ ಹೃದ್ಯವಾಗಿದೆ.

 3. ಮಹೇಶ್ವರಿ ಯು says:

  ಕಾದಂಬರಿಯ ಸಮೀಕ್ಷೆ ಅದನ್ನು ಓದುವಂತೆ ಪ್ರೇರೇಪಿಸುತ್ತದೆ. ಅಭಿನಂದನೆ ಗಳು

 4. ಶಂಕರಿ ಶರ್ಮ says:

  ಸೊಗಸಾದ ಕಾದಂಬರಿಯೊಂದರ ವಿಮರ್ಶಾತ್ಮಕ ವಿಶ್ಲೇಷಣೆಯು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.

 5. Padma Anand says:

  ಎಂದಿನಂತೆ ಸುಂದರವಾಗಿ ಪುಸ್ತಕವನ್ನು ಪರಿಚಯಿಸಿದ್ದೀರಿ ಮೀನಾಕ್ಷಿ, ಅಭಿನಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: