ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 5

Share Button

 

ದಕ್ಷಿಣ ಆಪ್ರಿಕಾದ ಸಫಾರಿಗಳು , ಅಭಯಾರಣ್ಯಗಳು ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರಬಿಂದುಗಳು. ಜೊಹಾನ್ಸ್‌ಬರ್ಗ್‌ನಿಂದ 340 ದೂರದಲ್ಲಿರುವ ‘ಕೃಗೇರ್ ರಾಷ್ಟ್ರೀಯ ಅಭಯಾರಣ್ಯಕ್ಕೆ’ ನಾವು ಉತ್ಸಾಹದಿಂದ ಹೊರಟೆವು. ಆಭಯಾರಣ್ಯ ಹತ್ತಿರವಾದಂತೆ ಅಲ್ಲಲ್ಲಿ ‘ಬಿಗ್ ಫೈವ್’ ಎಂಬ ಜಾಹೀರಾತಿನ ಫಲಕಗಳು ಕಂಡವು. ತಕ್ಷಣ ನನಗೆ ನನ್ನ ಮೊಮ್ಮಗ ಯಶಸ್ವಿ- ‘ಅಜ್ಜಿ, ಬಿಗ್ ಫೈವ್ ಅಂದರೆ ಯಾವ ಪ್ರಾಣಿಗಳು ಹೇಳು?” ಎಂದು ಕೇಳಿದ್ದು ನೆನಪಾಯಿತು. ನಾನು ಮೆಲ್ಲನೆ ಗೂಗಲ್ ನೋಡಿ – ಅತ್ಯಂತ ಭೀಕರವಾಗಿ ಘರ್ಜಿಸುವ ಸಿಂಹ, ಬೃಹದಾಕಾರದ ಆನೆ, ಮಿಂಚಿ ಮರೆಯಾಗುವ ಸುಂದರವಾದ ಚಿರತೆ, ಬಲಶಾಲಿಯಾದ ಕಾಡುಕೋಣ, ಎರಡು ಕೊಂಬಿನ ಘೆಂಡಾಮೃಗ -ಎಂದು ಹೇಳುವಾಗ ಅವನು ಆ ಪ್ರಾಣಿಗಳ ಅನುಕರಣೆ ಮಾಡುತ್ತಿದ್ದ. ಅವನಿಗೆ ವನ್ಯ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಸದಾ ಡಿಸ್ಕ್‌ವರಿ, ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್(Discovery, National Geographic, Animal Planet)- ಚಾನಲ್ ನೋಡುತ್ತಾ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಿರುತ್ತಾನೆ. ಅಜ್ಜಿ, ಇವರೆಲ್ಲಾ ಎಲ್ಲಿ ಚಿತ್ರೀಕರಿಸುತ್ತಾರೆ ಗೊತ್ತಾ? ಅಂತ ಕೇಳಿದಾಗ ನಾನು ಉತ್ತರಿಸಲು ತಡವರಿಸಿದಾಗ – ದಕ್ಷಿಣ ಆಪ್ರಿಕಾ ಎಂದ ತಟ್ಟನೆ.

ಹಿಂದೊಮ್ಮೆ ಬಿಗ್ ಫೈವ್-ಎನ್ನುವ ಪದ ಬೇಟೆಗಾರರನ್ನು ಕೈ ಬೀಸಿ ಕರೆಯುತ್ತಿದ್ದವು. ಆದರೆ ಈಗ ಈ ಪದ ಪ್ರವಾಸಿಗರನ್ನು ಆಕರ್ಷಿಸುವ ತಂತ್ರ. ಇಲ್ಲಿ ದೊಡ್ಡದಾದ ಪ್ರಾಣಿಗಳು ಇನ್ನೂ ಸಾಕಷ್ಟಿವೆ. ತನ್ನ ಉದ್ದನೆಯ ಕತ್ತು ಚಾಚಿ ಮರದ ಮೇಲಿರುವ ಚಿಗುರು ತಿನ್ನುವ ಜಿರಾಫೆ, ನೀರಿನಲ್ಲಿ ಮಿಂಚಿನಂತೆ ಈಜುವ ಹಿಪ್ಪೊ, ಕೊರಡಿನಂತೆ ನಿಶ್ಚಲವಾಗಿ ಬಿದ್ದುಕೊಂಡಿರುವ ಮೊಸಳೆ,.. ಅಲ್ಲಿನ ಪ್ರಾಣಿಗಳ ಹೆಸರು ಹೇಳತೊಡಗಿದರೆ ಪಟ್ಟಿಯು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿ ವನ್ಯಜೀವಿಗಳು ಸ್ವಚ್ಛಂದವಾಗಿ ತಿರುಗಾಡಲು ವಿಶಾಲವಾದ ಹುಲ್ಲುಗಾವಲುಗಳೂ, ಮರಗಿಡಗಳೂ, ಬೆಟ್ಟಗುಡ್ಡಗಳೂ, ನದಿಗಳೂ ಇವೆ. ಈ ಅಭಯಾರಣ್ಯದ ವಿಸ್ತೀರ್ಣ 7,523 ಚದರ ಮೈಲಿಗಳು. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಅಭಯಾರಣ್ಯ ಇದು.ಲಿಂಪೋಪೊ ಮತ್ತು ಪುಮಲಾಂಗ ಪ್ರಾಂತ್ಯಗಳ ಮಧ್ಯೆ ಇರುವ ಈ ಅರಣ್ಯ ಪ್ರದೇಶವು ‘ಸಾಬಿ ನದಿ ಹಾಗೂ ಕ್ರೊಕಡೈಲ್’ ನದಿಗಳಿಂದ ಸುತ್ತುವರೆಯಲ್ಪಟ್ಟಿದೆ. ಸುಮಾರು ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಲವು ಬಗೆಯ ಪಕ್ಷಿಗಳು, ಪ್ರಾಣಿಗಳು, ಮರಗಿಡಗಳು ಇವೆ. ಜೀವಶಾಸ್ತ್ರಜ್ಞರ ದಾಖಲೆಗಳಲ್ಲಿ – 763 ಬಗೆಯ ಪಶು ಪಕ್ಷಿಗಳು, 1982 ಜಾತಿಯ ಗಿಡಮರಗಳು ಗುರುತಿಸಲ್ಪಟ್ಟಿವೆ. ಅಷ್ಟೇ‌ಅಲ್ಲ, ಈ ಅರಣ್ಯದಲ್ಲಿ ಪ್ರಾಕ್ತನಶಾಸ್ತ್ರಜ್ಞರು ಐದು ಲಕ್ಷ ವರ್ಷಗಳ ಹಿಂದೆ ‘ಹೋಮೋ-ಎರೆಕ್ಟಸ್’ (Homo- Erectus) ವಾಸಿಸುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಶಿಲಾಯುಗದಲ್ಲಿ ವಾಸವಾಗಿದ್ದ ಆದಿ ಮಾನವನ ಹಾಗೂ ಕಬ್ಬಿಣ ಯುಗದ ಆದಿ ಮಾನವನ ಕೆಲವು ಕುರುಹುಗಳೂ ದೊರೆತಿವೆ. ಸುಮಾರು 254 ಸಾಂಸ್ಕೃತಿಕ ಸ್ಮಾರಕಗಳೂ ಹಾಗೂ 130 ಶಿಲಾಗುಹೆಗಳನ್ನೂ ದಾಖಲಿಸಲಾಗಿದೆ. ಹಲವು ಬುಡಕಟ್ಟು ಜನಾಂಗಗಳ ವಾಸಸ್ಥಾನವೂ ಆಗಿದ್ದ ಈ ಅರಣ್ಯದಲಿ ‘ಬುಷ್‌ಮೆನ್’ ಎಂದೇ ಕರೆಯಲ್ಪಡುವ ಜನಾಂಗದವರು – ಅವರ ತಮ್ಮ ನಿತ್ಯಜೀವನದ ಕೆಲವು ಚಿತ್ರಣಗಳನ್ನು ಈ ಗುಹೆಗಳ ಗೋಡೆಗಳ ಮೇಲೆ ಕೆತ್ತಿರುವುದನ್ನು ಈಗಲೂ ಕಾಣಬಹುದು. ಇಂತಹ ಪ್ರದೇಶವನ್ನು ಕೆಲವು ಬೇಟೆಗಾರರು ಕೊಳ್ಳೆ ಹೊಡೆಯಲಾರಂಭಿಸಿದಾಗ ಇದನ್ನು ರಕ್ಷಿಸಲು ಮುಂದಾದವರು ದಕ್ಷಿಣ ಆಫ್ರಿಕ ರಿಪಬ್ಲಿಕ್‌ನ ಅಧ್ಯಕ್ಷರಾದ ‘ಪಾಲ್ ಕೃಗೇರ್’. ಈ ಪ್ರದೇಶವನ್ನು ‘ಸಾಬಿ ಅಭಯಾರಣ್ಯ’ ಎಂದು ಘೋಷಿಸಿದರು. 1926 ರಲ್ಲಿ ಈ ಅಭಯಾರಣ್ಯವನ್ನು ವಿಸ್ತರಿಸಿ ‘ಕೃಗೇರ್ ರಾಷ್ಟ್ರೀಯ ಅಭಯಾರಣ್ಯ’ ಎಂದು ಪುನರ್ ನಾಮಕರಣ ಮಾಡಲಾಯಿತು.

ಪ್ರವಾಸಿಗರಿಗೆ ಆ ಅಭಯಾರಣ್ಯದಲ್ಲಿ ತಂಗಲು ಹಲವು ಬಗೆಯ ಸುಸಜ್ಜಿತ ಕಾಟೇಜುಗಳು ಇವೆ. ಆಧುನಿಕ ಸೌಲಭ್ಯಗಳನ್ನೊಳಗೊಂಡ ವೃತ್ತಾಕಾರದ ಹುಲ್ಲಿನ ಛಾವಣಿಯ ಕಾಟೇಜುಗಳು. ನಾವು ಎರಡು ಕಾಟೇಜು ಬುಕ್ ಮಾಡಿದ್ದೆವು.

ಅಲ್ಲಿನ ಪ್ರಶಾಂತ ವಾತಾವರಣ, ಕ್ಷಣಕ್ಷಣಕ್ಕೂ ಆಗಸದ ಬಣ್ಣ ಬದಲಾಯಿಸುತ್ತಿದ್ದ ಅಸ್ತಮಿಸುತ್ತಿದ್ದ ಸೂರ್ಯ, ಪಕ್ಷಿಗಳ ಕಲರವ, ಕೀಟಗಳ ಕಿಚಿಕಿಚಿ ಸದ್ದು ಕೇಳುತ್ತಾ ಮೈಮರೆತೆವು. ಆ ಕಾಡಿನ ಮಧ್ಯೆ ನಾವು ಉಂಡ ಬುತ್ತಿಯ ರುಚಿ ಹೆಚ್ಚೇ ಎನ್ನಿಸಿತು. ಕಾಟೇಜುಗಳ ಹೊರಗೆ ಎಲ್ಲೂ ದೀಪಗಳ ಬೆಳಕಿರಲಿಲ್ಲ. ಕಾರಣ ವನ್ಯ ಜೀವಿಗಳು ಸುತ್ತಾಡುವ ಹೊತ್ತಿನಲ್ಲಿ ಈ ಬೆಳಕಿನಿಂದ ಅವುಗಳಿಗೆ ಯಾವುದೇ ಗೊಂದಲವಾಗದಿರಲಿ ಎಂದು. ಹೊರಗಡೆ ನಕ್ಷತ್ರ ಎಣಿಸುತ್ತಿದ್ದ ಗಿರಿಜಕ್ಕನ ಮೊಮ್ಮಗ ‘ಜಯ್’ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ. ಎಲ್ಲರೂ ಮೊಬೈಲ್‌ನ ಬೆಳಕಿನಲ್ಲಿ ಅವನನ್ನು ಹುಡುಕಲು ಹೊರಟೆವು. ಅವನಮ್ಮನ ಧ್ವನಿ ಕಾಡಿನಲ್ಲಿ ಪ್ರತಿಧ್ವನಿಸುತ್ತಿತ್ತು. ಅರ್ಧಗಂಟೆ ಕಳೆದರೂ ಅವನ ಪತ್ತೆ ಇಲ್ಲ. ಕಗ್ಗತ್ತಲೆ ಎಲ್ಲೆಡೆ ತನ್ನ ಭೀಕರ ಬಾಹುಗಳನ್ನು ಚಾಚಿತ್ತು. ನಮ್ಮೆಲ್ಲರ ಉಸಿರು ನಿಂತ ಹಾಗಾಗಿತ್ತು. ಆಗ ಒಬ್ಬ ಗಾರ್ಡ್‌ನ ಕೈಹಿಡಿದು ಅಳುತ್ತಾ ಬಂದ ಜಯ್. ಬಂದವನೇ ಅಮ್ಮನನ್ನು ತಬ್ಬಿ ಹಿಡಿದು ಗಟ್ಟಿಯಾಗಿ ಅಳತೊಡಗಿದ. ಆಫೀಸಿಗೆಂದು ಹೊರಟ, ಅವರಪ್ಪನಿಗೆ ಗೊತ್ತಿಲ್ಲದ ಹಾಗೆ ಅವರನ್ನು ಹಿಂಬಾಲಿಸಿದ್ದಾನೆ. ಕತ್ತಲಲ್ಲಿ ದಾರಿ ತಪ್ಪಿ ದೂರ ಹೋಗಿಬಿಟ್ಟಿದ್ದಾನೆ. ಅವನನ್ನು ನೋಡಿದ ಗಾರ್ಡ್ ವಾಪಸ್ ಕರೆತಂದಿದ್ದ. ಇಂದು ನಮಗೆ ಪ್ರಕೃತಿಯ ಸೌಂದರ್ಯದ ಜೊತೆಜೊತೆಗೇ ಅದರ ಭೀಕರತೆಯ ಅರಿವಾಯಿತು.

ಮಾರನೆಯ ದಿನದ ಬೆಳಗು, ಹಕ್ಕಿಗಳ ಚಿಲಿಪಿಲಿಯೊಂದಿಗೆ ನಮ್ಮನ್ನು ಸ್ವಾಗತಿಸಿತು. ಕೆಟಲ್‌ನಲ್ಲಿ ಕಾಫಿ ಮಾಡಿ ಬಿಸಿಬಿಸಿಯಾಗಿ ಕುಡಿಯುತ್ತಾ, ಅಲ್ಲಿದ್ದ ಅಡುಗೆ ಮನೆ ಕಡೆ ಹೋದೆವು. ಕಾಟೇಜುಗಳ ಮಧ್ಯೆ ಪ್ರವಾಸಿರು ಒಂದು ವೃತ್ತಾಕಾರದ ಷೆಡ್‌ನಲ್ಲಿ ಅಡುಗೆ ಮಾಡಲು ಎಲ್ಲಾ ಸೌಲಭ್ಯಗಳು ಇವೆ. ಮಧ್ಯದಲ್ಲಿರುವ ಕಟ್ಟೆ – ಎರಡು ಎಲೆಕ್ಟ್ರಿಕ್ ಸ್ಟೌ, ಬಿಸಿ ನೀರಿನ ಮತ್ತು ತಣ್ಣೀರಿನ ನಲ್ಲಿಗಳೂ, ವಾಷ್ ಬೇಸಿನ್.. ಇದ್ದವು. ನಾವು ಉಪ್ಪಿಟ್ಟು, ಅನ್ನ, ತಿಳಿಸಾರು ಮಾಡಿ ಡಬ್ಬಿಗಳನ್ನು ತುಂಬಿಸಿದೆವು. ಹೆಚ್ಚು ಮಂದಿ ಬ್ರೆಡ್ ಬಿಸಿ ಮಾಡಿಕೊಂಡು ಆಮ್ಲೆಟ್ ಮಾಡಿಕೊಳ್ಳತ್ತಿದ್ದರು. ಅವರ ಊಟ ತಿಂಡಿ ಬಹಳ ಸರಳ, ನಮ್ಮಷ್ಟು ಕ್ಲಿಷ್ಟವಲ್ಲ. ಅಡುಗೆಮನೆಯಲ್ಲೇ ಹೆಚ್ಚು ಸಮಯ ಕಳೆಯುವ ನಮ್ಮ ಹೆಣ್ಣುಮಕ್ಕಳಿಗೆ ಅವರನ್ನು ನೋಡಿದಾಗ ಹೊಟ್ಟೆ ಉರಿಯುವುದು ಖಂಡಿತ.

ಅರಣ್ಯದೊಳಗೆ ಸಂಚರಿಸಲು ಕೆಲವು ನಿಯಮಗಳನ್ನು ಪಾಲಿಸಬೇಕು. ಪ್ರವೇಶ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ ಮಾತ್ರ, ಅರಣ್ಯದೊಳಗೆ ಕಾರಿನಿಂದ ಕೆಳಗಿಳಿಯಬಾರದು, ಕಾರಿನ ಕಿಟಕಿಯನ್ನು ತೆರೆಯುವಂತಿಲ್ಲ. ಇಲ್ಲಿ ಅರಣ್ಯ ಇಲಾಖೆಯ ವಾಹನಗಳು ಇದ್ದವು ಜೊತೆಗೆ ಪ್ರವಾಸಿಗರು ತಮ್ಮ ತಮ್ಮ ಕಾರುಗಳಲ್ಲಿಯೂ ಸಂಚರಿಸಬಹುದು. ಪ್ರತಿಯೊಬ್ಬರೂ ಈ ಕಾಯ್ದೆಗಳನ್ನು ಅಕ್ಷರಶಃ ಪಾಲಿಸುತ್ತಾರೆ. ನಾವು ಮುಂಜಾನೆ ಒಂಬತ್ತು ಗಂಟೆಗೆ ಹೊರಟೆವು. ನಮಗೆ ಮೊದಲು ಕಂಡದ್ದು ಜಿಂಕೆಗಳು, ಕಡವೆ ಹಾಗೂ ಸಾರಂಗಗಳು. ಹಿಂಡುಹಿಂಡಾಗಿ ಹುಲ್ಲು ಮೇಯುತ್ತಾ ಅಲೆದಾಡುತ್ತಿದ್ದವು. ಸಾಮಾನ್ಯವಾಗಿ ವನ್ಯಜೀವಿಗಳು ಒಂಟಿಯಾಗಿರುವುದಿಲ್ಲ. ಗುಂಪಿನಲ್ಲಿಯೇ ವಾಸಿಸುತ್ತವೆ. ಒಂದೆರಡು ಗಂಟೆ ಕಳೆದಿರಬಹುದು – ಧೂಳು, ಏನೂ ಕಾಣದಷ್ಟು ಧೂಳು – ನಾವು ಕಾರು ನಿಲ್ಲಿಸಿದೆವು. ಇಪ್ಪತ್ತು -ಮೂವತ್ತು ಕಾಡುಕೋಣಗಳು ಜೋರಾಗಿ ಓಡಿಬರುತ್ತಿದ್ದವು. ಕಾರಣ ಗೊತ್ತಾಗಲಿಲ್ಲ. ಅಷ್ಟರಲ್ಲಿ ಬೈನಾಕ್ಯುಲರ್ ಹಿಡಿದಿದ್ದ ಜಯ್ ‘ಅಲ್ಲಿ ಒಂದು ಚಿರತೆ’ ಎಂದಾಗ ಎಲ್ಲರಲ್ಲೂ ಭಯ, ಆತಂಕ, ಕುತೂಹಲ. ಅಷ್ಟರಲ್ಲಿ ಓಡುತ್ತಿದ್ದ ಚಿರತೆ ನಾಲ್ಕಾರು ಕಾರುಗಳನ್ನುನೋಡಿದ ತಕ್ಷಣ ಒಂದು ಮರವೇರಿ ಕುಳಿತಿತು. ನಮ್ಮ ಹಿಂದೆ ಅರಣ್ಯ ಇಲಾಖೆಯವರ ತೆರೆದ ಪ್ರವಾಸಿಗರ ವ್ಯಾನ್ ನಿಂತಿತ್ತು. ನಾನು ‘ಅಬ್ಬಾ ಚಿರತೆ ಏನಾದರೂ ಅವರ ಮೇಲೆ ಜಿಗಿದರೆ’ ಎಂದು ಉಸಿರು ಬಿಗಿ ಹಿಡಿದು ನೋಡುತ್ತಿದ್ದೆ. ಆದರೆ ವ್ಯಾನ್‌ನಲ್ಲಿದ್ದ ಗಾರ್ಡ್ ಬಳಿ ಬಂದೂಕು ಇತ್ತು. ಮುಂದೆ ಸಾಗಿದ ಹಾಗೆ ಒಂದು ಜಿರಾಫೆ ಠೀವಿಯಿಂದ ನಮ್ಮ ಮುಂದೆಯೇ ರಸ್ತೆ ದಾಟಿತು. ಅದರ ಹಿಂದೆಯೇ ನಾಲ್ಕಾರು ಜಿರಾಫೆಗಳು ಮರದ ಮೇಲಿನ ಚಿಗುರನ್ನು ತಿನ್ನುತ್ತಾ ಅತ್ತಿತ್ತ ನೋಡುತ್ತಿದ್ದವು.

 

 

ಜಯ್ ಕಣ್ಣು ತುಂಬಾ ಚುರುಕು ‘ಅಲ್ಲಿ ಆನೆ’ ಎಂದ. ನಮಗೆ ಆ ಹಸಿರಿನ ಮಧ್ಯೆ ಏನೂ ಕಾಣಲಿಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಮರದ ರೆಂಬೆಗಳನ್ನು ಮುರಿಯುತ್ತಾ ಅದರ ಎಲೆಗಳನ್ನು ತಿನ್ನುತ್ತಿದ್ದ ಆನೆಗಳ ಹಿಂಡು ಕಾಣಿಸಿತು. ಎಲ್ಲರೂ ಉದ್ಗಾರ ಮಾಡಿದರು. ನಮಗೆ ಮಾತ್ರ ಏನೂ ವಿಶೇಷವೆನಿಸಲಿಲ್ಲ. ಕಾರಣ ಭಾರತದ ದೇವಸ್ಥಾನಗಳಲ್ಲಿ, ಮಠಗಳಲ್ಲಿ ಆನೆಗಳನ್ನು ನೋಡಿ, ಬಾಳೆಹಣ್ಣು ತಿನ್ನಿಸಿ, ಅದರ ಸೊಂಡಿಲನ್ನು ತಲೆಯ ಮೇಲೆ ಇಡಿಸಿಕೊಳ್ಳುವುದು ಸರ್ವೆಸಾಮಾನ್ಯ.

ಸಂಜೆ ನಾಲ್ಕು ಗಂಟೆಯಾಗಿತ್ತು. ಹಿಂದಿರುಗಿ ಹೊರಟೆವು. ದೊಡ್ಡ ಹುಲ್ಲುಗಾವಲು ಕಾಣಿಸಿತು. ದೂರದಲ್ಲಿ ಕಾಡೆಮ್ಮೆಯೊಂದು ಹುಲ್ಲು ಮೇಯುತ್ತಿತ್ತು. ಆದರೆ ಅದರ ಗಾತ್ರ ದೊಡ್ಡದೇ. ಬೈನಾಕ್ಯುಲರ್‌ನಲ್ಲಿ ನೋಡಿದಾಗ ಅದು ಕಾಡೆಮ್ಮೆಯಾಗಿರದೇ ಘೆಂಡಾಮೃಗವಾಗಿತ್ತು. ಹಾಗೆಯೇ ಸುತ್ತಮುತ್ತ ಕಣ್ಣು ಹಾಯಿಸಿದಾಗ ಮೂವತ್ತರಿಂದ ನಲವತ್ತು ಘೆಂಡಾಮೃಗಗಳು ಕಂಡವು. ಇದರ ಕೊಂಬಿನಲ್ಲಿ ಕಾಮೋತ್ತೇಜಕ ಗುಣಗಳಿವೆ ಎಂಬ ನಂಬಿಕೆ ಇರುವುದರಿಂದ ಇದನ್ನು ಹೆಚ್ಚಾಗಿ ಬೇಟೆಯಾಡುವರು.

ಆ ದಿನದ ಪ್ರವಾಸ ಮುಗಿಸಿ ಕಾಟೇಜಿಗೆ ಹಿಂತಿರುಗಿದೆವು. ಗಿರಿಜಕ್ಕ ಅಂದು ನಾವು ಅರಣ್ಯದಲ್ಲಿ ನೋಡಿದ ಪ್ರಾಣಿಗಳ ಲೆಕ್ಕ ಹಾಕುತ್ತಿದ್ದಳು – ಆನೆ, ಚಿರತೆ, ಕಾಡೆಮ್ಮೆ, ಘೇಂಡಾಮೃಗ ಇತ್ಯಾದಿ. Big Five  ನ ಸದಸ್ಯರಲ್ಲಿ ಸಿಂಹವೊಂದು ಕಂಡಿರಲಿಲ್ಲ. ಬಹುಶಃ ಈ ಕಾಡಿನ ರಾಜನ ದರ್ಶನ ನಾಳೆ ಆಗಬಹುದೇನೋ ಎಂದೆನಿಸಿತು. ನಾವು ಉಳಿದಿದ್ದ ಕಾಟೇಜಿನ ಪಕ್ಕದವರು ಬಹಳ ಉತ್ಸಾಹದಿಂದ ಸಿಂಹ ಕಾಡೆಮ್ಮೆಯೊಂದನ್ನು ಬೇಟೆಯಾಡಿದ್ದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ‘ನೀವು ನಾಳೆ ಬೆಳಿಗ್ಗೆ ಸಾಬಿ ನದಿಯ ಪಕ್ಕದಲ್ಲಿಯೇ ಹೋಗಿ, ಅಲ್ಲಿ ಸಿಂಹಗಳು ನಿಮಗೆ ಕಾಣಬಹುದು’ ಎಂದರು. ನಾವು ಬೆಳಿಗ್ಗೆ ಸ್ವಲ್ಪ ಬೇಗನೇ ಎದ್ದವರು, ಅಲ್ಲಿದ್ದ ಅಡುಗೆ ಮನೆಯಲ್ಲಿ ಟೊಮ್ಯಾಟೋ ಬಾತ್, ಮೊಸರನ್ನ ಮಾಡಿಕೊಂಡು ಸಿಂಹವನ್ನು ಕಾಣುವ ಆತುರದಿಂದ, ಅವರು ಸೂಚಿಸಿದ ಮಾರ್ಗದಲ್ಲಿ ಹೊರಟೆವು. ಅಲ್ಲಲ್ಲಿ ಜಿಂಕೆಗಳ ಹಿಂಡು, ಜಿರಾಫೆಗಳು ಕಂಡವು. ವಿಧ ವಿಧವಾದ ಪಕ್ಷಿಗಳು ಕಂಡವು. ಒಂದೆರಡು ಗಂಟೆ ಕಳೆದಿರಬಹುದು – ಒಂದೆಡೆ ನಾಲ್ಕು, ಐದು ಕಾರುಗಳು ನಿಂತಿದ್ದವು. ವನ್ಯ ಜೀವಿಗಳ ಚಿತ್ರೀಕರಣ ನಡೆಸಲು ‘ನ್ಯಾಷನಲ್ ಜಿಯೋಗ್ರಾಫಿಕ್’ – ವ್ಯಾನ್ ಗಳೂ ನಿಂತಿದ್ದವು. ನಾವೂ ಅಲ್ಲಿಗೆ ಹೋಗಿ ಕಾರು ನಿಲ್ಲಿಸಿದೆವು. ಪಕ್ಕದಲ್ಲೇ ಸಾಬಿ ನದಿ ಹರಿಯುತ್ತಿತ್ತು. ಐದು, ಆರು ಸಿಂಹಗಳು ಕಾಡುಕೋಣವನ್ನು ಎಳೆದಾಡುತ್ತಾ ತಿನ್ನುತ್ತಿದ್ದವು. ಹೊಟ್ಟೆ ತುಂಬಿದ ಮೂರು, ನಾಲ್ಕು ಸಿಂಹಗಳು ಅಲ್ಲಿಯೇ ಇದ್ದ ಮರದ ಕೆಳಗೆ ಮಲಗಿದ್ದವು. ನಾವು ಬೈನಾಕ್ಯುಲರ್‌ಗಾಗಿ ಕೂಗಾಡುತ್ತಾ ಒಬ್ಬರ ಮೇಲೊಬ್ಬರು ಬಾಗಿ ಸಿಂಹಗಳನ್ನು ನೋಡುತ್ತಿದ್ದೆವು. ನಮ್ಮನ್ನು ಗಮನಿಸಿದ ಇಬ್ಬರು ಯುರೋಪಿಯನ್ನರು ತಮ್ಮ ಬಳಿ ಇದ್ದ ಒಂದು ಬೈನಾಕ್ಯುಲರ್‌ನ್ನು ನಮಗೆ ಕೊಟ್ಟರು. ಅದರಲ್ಲಿ ನೋಡಿದಾಗ ಸಿಂಹಗಳ ಗಾತ್ರ ಇನ್ನೂ ದೊಡ್ಡದಾಗಿ ಕಂಡಿತು. ಒಂದೆರಡು ಸಿಂಹದ ಮರಿಗಳೂ ಅಲ್ಲಿಯೇ ಆಟವಾಡುತ್ತಿದ್ದವು. ಒಂದು ಗಂಡು ಸಿಂಹ ನಿಧಾನವಾಗಿ ಮೇಲೇರಿ ಬಂದು ನಮ್ಮ ಮುಂದೆಯೇ ರಸ್ತೆ ದಾಟಿತು. ಅಬ್ಬ ಅದರ ಗಾತ್ರ, ಕೇಸರ, ನಡಿಗೆಯ ಠೀವಿ ನೋಡಿ ಒಂದು ಕ್ಷಣ ಎಲ್ಲರ ಎದೆ ಝಲ್ಲೆಂದಿತು. ಸಿಂಹವನ್ನು ಕಾಡಿನ ರಾಜ ಎನ್ನುವುದರ ಮರ್ಮ ಈಗ ಅರಿವಾಯಿತು. ಕೆಲವೇ ಕ್ಷಣಗಳ ಬಳಿಕ ಎಲ್ಲ ಸಿಂಹಗಳೂ ತಮ್ಮ ತಂಡದ ನಾಯಕನನ್ನು ಹಿಬಾಲಿಸಿದವು. ಅವು ಬಿಟ್ಟು ಹೋಗಿದ್ದ ಮಾಂಸದ ತುಣುಕಗಳನ್ನು ತಿನ್ನಲು ಅಲ್ಲಿ ಸೀಳು ನಾಯಿಗಳ ತಂಡವೇ ಕಾದಿತ್ತು. ಅವುಗಳ ಸುತ್ತ ರಣಹದ್ದುಗಳು ತಮ್ಮ ಸರದಿಗಾಗಿ ಕಾಯುತ್ತಿದ್ದವು. ನೆನ್ನೆ ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಕಾಡುಕೋಣ ಇಂದು ಒಂದು ಎಲುಬಿನ ಹಂದರವಾಗಿ ಬಿದ್ದಿತ್ತು. ಹಸಿದ ಸಿಂಹಗಳ ಹೊಟ್ಟೆಯೇನೋ ತುಂಬಿತ್ತು. ಆದರೆ ಆ ಕಾಡುಕೋಣ……? ಇದೇ ಬದುಕಿನ ಸತ್ಯ ಅಲ್ಲವೇ?

ಮಾರನೆಯ ದಿನದ ನಮ್ಮ ಪಯಣ ‘ಪಿಲಾನ್ಸ್‌ಬರ್ಗ್’ ಸಫಾರಿಗೆ. ಜೊಹಾನ್ಸ್‌ಬರ್ಗ್‌ನಿಂದ ಮೂರು ಗಂಟೆಯ ಪಯಣ. ವನ್ಯ ಪ್ರಾಣಿಗಳನ್ನು ಬೇರೆ ಬೇರೆ ಆವರಣದಲ್ಲಿ ಕೂಡಲಾಗಿತ್ತು. ಘೇಂಡಾಮೃಗ, ಸಿಂಹ, ಚಿರತ, ಆನೆ, ಜೀಬ್ರಾ, ಜಿರಾಫೆ, ಹುಲಿ (ಭಾರತದಿಂದ ಆಮದು ಆದವು), ನೀರಾನೆ, ಮೊಸಳೆ ಇತ್ಯಾದಿ. ಅಭಯಾರಣ್ಯದಲ್ಲಿ ಪ್ರಾಣಿಗಳನ್ನು ಕಂಡಾಗ ಆದ ಆನಂದ ಇಲ್ಲಿ ಸಿಗಲಿಲ್ಲ. ಅದು ಪ್ರಕೃತಿ ಸಹಜವಾದ ತಾಣ, ಇದು ಮಾನವ ನಿರ್ಮಿತ. ಅಲ್ಲಿ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಾ ಆಹಾರಕ್ಕಾಗಿ ಬೇಟೆಯಾಡುವ ದೃಶ್ಯಗಳು ರೋಮಾಂಚಕ. ಆದರೆ ಇಲ್ಲಿ ಸಮಯಕ್ಕೆ ಸರಿಯಾಗಿ ಅರಣ್ಯ ಇಲಾಖೆಯವರು ನೀಡುವ ಆಹಾರ ಕಬಳಿಸಿ, ಮರದ ಕೆಳಗೆ ಅರ್ಧಂಬರ್ಧ ಕಣ್ಣು ತೆರೆದು ಮಲಗಿರುವ ಸಿಂಹ, ಹುಲಿ, ಮರದ ರೆಂಬೆಗೆ ಆತುಕೊಂಡಿರುವ ಚಿರತೆಗಳು – ಸನ್ಯಾಸ ತೆಗೆದುಕೊಂಡಿರುವಂತೆ ಕಂಡವು.

ಪ್ರವಾಸಿಗರನ್ನು ಆಕರ್ಷಿಸಲು ಕೆಲವು ಯೋಜನೆಗಳೇನೋ ಇದ್ದವು. ಜಿರಾಫೆಗಳಿಗೆ ಚಿಗುರು ತಿನ್ನಿಸಲು ಒಂದು ಅಟ್ಟಣಿಗೆ ಹಾಕಿದ್ದರು. ಅದಕ್ಕೊಂದು ಟಿಕೆಟ್. ನಾವೂ ಅಟ್ಟಣಿಗೆ ಹತ್ತಿ ಜಿರಾಫೆಗೆ ಚಿಗುರು ತಿನ್ನಿಸಿದೆವು. ಸಿಂಹದ ಮರಿಗಳ ಜೊತೆ ಓಡಾಡಲು ಟಿಕೆಟ್. ಅವುಗಳನ್ನು ಒಂದು ಬೇಲಿಯೊಳಗೆ ಕೂಡಿ ಹಾಕಿದ್ದರು. ನಾವೂ ಸಿಂಹದ ಮರಿಗಳ ಬೆನ್ನು ಸವರುತ್ತಾ ಫೋಟೋ ತೆಗೆಸಿಕೊಂಡೆವು. ಸಿಂಹದ ಜೊತೆ ನಡಿಗೆ’. – ಎನ್ನುವುದು ಬಹು ದುಬಾರಿಯಾದ ಕ್ರೀಡೆ. ಆಗ ವನ್ಯ ಜೀವಿಗಳ ಊಟದ ಸಮಯವಾಗಿದೆ ಎನ್ನಲಿಕ್ಕೆ ಒಂದು ಸೈರನ್ ಮೊಳಗಿತು. ಎಲ್ಲರೂ ಸಿಂಹಗಳಿಗೆ ಆಹಾರ ಹಾಕುವ ಸ್ಥಳದ ಬಳಿಗೆ ಧಾವಿಸುತ್ತಿದ್ದರು. ಒಬ್ಬ ಗಾರ್ಡ್ ವಿಸಲ್ ಊದುತ್ತಾ ಬರುತ್ತಿದ್ದ ಹಾಗೇ ಸಿಂಹಗಳು ಓಡೋಡಿ ಬರುತ್ತಿದ್ದವು. ಹತ್ತು ನಿಮಿಷದಲ್ಲಿ ಸುಮಾರು ನಲವತ್ತು ಸಿಂಹಗಳು ಅಲ್ಲಿ ಪ್ರತ್ಯಕ್ಷ. ಅವನು ಎಸೆಯುವ ಮಾಂಸದ ತುಂಡುಗಳನ್ನು ದೂರ ಎಳೆದುಕೊಂಡು ಹೋಗಿ ತಿನ್ನುತ್ತಿದ್ದವು. ಪಕ್ಕದಲ್ಲೇ ಒಂದು ಆವರಣದಲ್ಲಿ ಕೂಡಿದ್ದ ಹುಲಿಗಳ ಮಧ್ಯೆ ಒಂದು ಜೀವಂತ ಕೋಳಿಯನ್ನು ಎಸೆದರು. ಆದರೆ ಹುಲಿರಾಯ ಯಾವ ಆಸಕ್ತಿಯನ್ನು ತೋರಲಿಲ್ಲ. ಹೆದರಿದ ಕೋಳಿ ಕ್ಕೊ, ಕ್ಕೊ ಎಂದು ಕೂಗುತ್ತಾ ಹಾರಿ ಹೋಯಿತು. ಸಫಾರಿಗಳಲ್ಲಿ ಪ್ರಾಣಿಗಳಿಗೆ ನಿಯಮಿತವಾಗಿ ಆಹಾರ ನೀಡುವುದರಿಂದ ಅವುಗಳ ಬೇಟೆಯಾಡುವ ಆಸಕ್ತಿಯೇ ಬತ್ತಿ ಹೋಗಿರಬಹುದೇನೋ. ಹೊರಗಡೆ ಕೆಲವರು ಆಫ್ರಿಕನ್ ಆದಿವಾಸಿಗಳಂತೆ ಉಡುಪು ಧರಿಸಿ ಜಾನಪದ ನೃತ್ಯ ಮಾಡುತ್ತಿದ್ದರು. ಅಂದಿನ ಪ್ರವಾಸ ಅಷ್ಟೇನೂ ಹಿತಕರವೆನ್ನಿಸಲಿಲ್ಲ. ಎಲ್ಲರಿಗೂ ದಣಿವಾಗಿತ್ತು.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ http://surahonne.com/?p=32638

-ಡಾ.ಗಾಯತ್ರಿದೇವಿ ಸಜ್ಜನ್

10 Responses

  1. Anonymous says:

    ಸಾದಾ ಸರಳ ನಿರೂಪಣೆಯ ಪ್ರವಾಸ ಕಥನ..ತ್ಯಾಂಕ್ಯೂ

  2. Samatha.R says:

    ನಿರೂಪಣಾ ಶೈಲಿ ಚೆನ್ನಾಗಿದೆ..ಆಸಕ್ತಿದಾಯಕ ಪ್ರವಾಸಿ ಕಥನ..ಚೆನ್ನಾಗಿ ಮೂಡಿ ಬರುತ್ತಿದೆ..

  3. ನಾಗರತ್ನ ಬಿ.ಆರ್ says:

    ಇಂದಿನ ಪ್ರವಾಸಕಥನ ಸ್ಪಷ್ಟ ನಿರೊಪಣೆಯದ್ದಾಗಿದೆ ಧನ್ಯವಾದಗಳು ಮೇಡಂ.

  4. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ ಪ್ರವಾಸ ಕಥನ

  5. Padma Anand says:

    ಅರಣ್ಯದೊಳಗೆ ಪ್ರಾಣಿಗಳೊಂದಿಗಿನ ಸುತ್ತಾಟದ ನಿರೂಪಣೆ ಸುಂದರವಾಗಿ ಮೂಡಿಬಂದಿದೆ

  6. ಮಹೇಶ್ವರಿ ಯು says:

    ಪ್ರವಾಸ ಕಥನ ವೆಂದರೆ ನನಗೆ ಬಹಳ ಇಷ್ಟ. ನಿಮ್ಮ ಗಮನಿಸುವಿಕೆ ಮತ್ತು ಅದರ ನಿರೂಪಣೆ ಚೆನ್ನಾಗಿದೆ.

  7. ಶಂಕರಿ ಶರ್ಮ says:

    ತಮ್ಮ ಪ್ರಯಾಣದ ತಿಳಿಹಾಸ್ಯ ಭರಿತ ನಿರೂಪಣೆ ಬಹಳ ಇಷ್ಟವಾಯ್ತು. ಸೊಗಸಾದ ಬರಹ..ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: