‘ಕಾಡು’
ನನ್ನ ಮಗುವಿನ ಕಲ್ಪನೆಯ ಕಾಡಲ್ಲಿ
ಬರಿಯ ನಗುವಿನ ಮರಗಳು
ಗಟ್ಟಿಯಾಗಿ ಎತ್ತರಕೆ ಬೆಳೆದು…
ಅವುಗಳ ಬುಡದಲಿ ನೇಹದ
ಸಸಿಗಳು ನಳನಳಿಸಿ; ನಂಬುಗೆ
ಹೂವರಳಿ, ವಿಶ್ವಾಸದ ಫಲ ಬಿಟ್ಟು
ತೊನೆದಾಡುತ್ತಾ ದಟ್ಟವಾಗಿದೆ ಕಾಡು.
ನನ್ನ ಕಲ್ಪನೆಯಲೂ ಒಂದು ಕಾಡು
ಅಭದ್ರ ಬೇರುಗಳಲಿ ನಿಂತ, ಕತ್ತಲೆ
ತೂರಿಕೊಂಡು ಬೆಳಕಿಗೆ ನಿಷೇಧ
ಹೇರಿಕೊಂಡ ಕಳೆ ಮರಗಳು ಹಬ್ಬಿ
ಹರಡಿದ ನಿಬಿಡ ಕಾಡು.. ಸುಮ್ಮನೆ
ಶ್ರಮಪಡದೆ ಪಾಲಿಸಿಕೊಂಡು ಬಂದಿರುವೆ
‘ಕಾಡು ಕಡಿಯಬಾರದು’ ಎಂಬಿತ್ಯಾದಿ
ನಿಯಮಗಳನು. ಒಟ್ರಾಷಿ ಈ
ಕಾಡೆಂದರೆ ನನ್ನ ಅಭಯಾರಣ್ಯ;
ಅದರೊಳು ಖೂಳ ಬೇಟೆಗಾರ- ಮುಗ್ಧ
ಬಲಿ ಯಾವ ರೂಪದ್ದೋ…!
ಮಗುವಿನ ಕಾಡೊಳಗೆ ಚಿಟ್ಟೆ, ನವಿಲು,
ಜಿಂಕೆ, ವ್ಯಾಘ್ರ.. ಮೃಗಖಗಗಳಿವೆ
ಸ್ನೇಹದಿಂದ. ನನ್ನ ಕಾಡಿನಲಿ ಮಾತ್ರ
ಕೋಲಾಹಾಲದ ರಣಕೇಕೆ ಅವರಿವರ
ಕಂಡರೆ, ಬರಿಯ ಅಂಜಿಕೆ-ಶಂಕೆ..!
ನಗೆ ನಿಷೇಧಿಸಿ; ಹಗೆ ಸಾಧಿಸಿ
ಕಿಡಿ ಹಾಯಿಸಿ ಹೊಗೆ ತುಂಬಿಸಿದ ಕಾಡನು
ನಾನೇ ಕಾಪಾಡಿಕೊಂಡು ಬಂದಿರುವಾಗ,
ಕಂಗೆಡುತ್ತಾ ದಾರಿತಪ್ಪಿ ಅಂಡಲೆಯುತ್ತಾ
ದಿಕ್ಕೆಟ್ಟು ಕೂತಾಗ.. ನನ್ನನು ಅದು
ಕಾಡಬಾರದೆಂದರೆ ಹೇಗೆ…!?
– ವಸುಂಧರಾ ಕದಲೂರು
ಅರ್ಥಪೂರ್ಣವಾದ ಕವನ. ಧನ್ಯವಾದಗಳು
ಧನ್ಯವಾದಗಳು
ಸುಂದರವಾಗಿದೆ ಕವನ
ಧನ್ಯವಾದಗಳು
ಹೌದಲ್ವಾ…ಮಗು ನೇಯುವ ಕಲ್ಪನೆ…..ಅದರ ಮುಗ್ಧತೆಯಲ್ಲಿ ಎಲ್ಲ ಸುಂದರ!
ಅನುಭವ, ನೋವು ಸಂಕಷ್ಟಗಳಿಂದ ಬೆಂದ ಹಿರಿಯ ಜೀವದ ಅನುಭವದಲಿ ಕಂಡರಿವುದೆಲ್ಲಾ ಬರೀ ಬೇಗುದಿ ಕಹಿ ಅನುಭವ.
ಅರ್ಥಪೂರ್ಣ ಕವನ
ಕವನ ಇಷ್ಟವಾಯಿತು .
ಮುಗ್ಧ ಮಗುವಿನ ನಿರ್ಮಲ ಮನಸ್ಸಿನಂತಿಲ್ಲ ನಮ್ಮ ಮನಸ್ಸು… ಅರ್ಥಪೂರ್ಣ ಕವನ.
ಸೂಪರ್
ಮಗು ಹುಟ್ಟಿದಾಗ ಸರಳತೆ, ಸಂತೋಷ ಎಂಬ ಅಮೃತದಿಂದ ತುಂಬಿರುವ ಬಾಳಿನ ಕೊಡ, ದಿನಗಳದಂತೆ ಮಲಿನಗೊಳ್ಳುವುದರ ಪರಿಕಲ್ಪನೆ ವಿಷಾದ ಹುಟ್ಟಿಸುತ್ತದೆ. . ಅರ್ಥವತ್ತಾದ ಕವನ. ಅಭಿನಂದನೆಗಳು.
ಚಂದದ ಕವನ
ಮಗುವಿನ ಮುಗ್ಧತೆ ಯಲ್ಲಿ ಜಗತ್ತು ಸುಂದರ ಆದರೆ ಬೆಳೆದಂತೆಲ್ಲಾ ಮಗುವಿನ ಮನಸ್ಸು ಕಲುಷಿತಗೊಳ್ಳುವುದನ್ನು ತೆರೆದಿಟ್ಟ ಪರಿ ಸೊಗಸಾಗಿದೆ