ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ? ಪುಟ 6
ವಿಕ್ಟೋರಿಯ ಜಲಪಾತ
ಗಂಗೆಯ ರುದ್ರನರ್ತನವನ್ನು ಕಂಡು ಬೆರಗಾದ ಲಿವಿಂಗ್ ಸ್ಟೊನ್ ಈ ಜಲಪಾತವನ್ನು ತನ್ನ ಸಾಮ್ರಾಜ್ಞಿಯ ಹೆಸರಿನಿಂದ ಕರೆದನು. ಅಕಾಶದಲ್ಲಿ ಸಂಚರಿಸುತ್ತಿದ್ದ ದೇವತೆಗಳು ಈ ದೃಶ್ಯ ವೈಭವ ನೋಡಿ ಮೋಹಿತರಾಗಿ ಅಲ್ಲೇ ನಿಂತುಬಿಟ್ಟರಂತೆ. ಹಾಗಾಗಿ ಇದಕ್ಕೆ ‘ಏಂಜಲ್ ಫಾಲ್ಸ್’ ಎಂಬ ಅನ್ವರ್ಥನಾಮವೂ ಇದೆ. ಸ್ಥಳೀಯರು ಈ ಜಲಪಾತವನ್ನು ಗುಡುಗುವ ಮಂಜು ‘ಮೊಸಿ-ಓಯಾ-ಟುನ್ಯ’ (Mosi-Oa-Tunya -Smoke that Thunders)) ಎಂದು ಕರೆಯುವರು. ಇನ್ನೂ ಕೆಲವರು ಮರಳುತ್ತಿರುವ ನೀರು ‘ಶುಂಗು-ನಾಮುಟಿಟೀಮಾ’ (Shungu Namutitima – Boiling Water) ಎಂದೂ ಕರೆಯುವರು. ಈ ಜಲಪಾತ ವಿಶ್ವದ ಏಳು ಪ್ರಾಕೃತಿಕ ಅದ್ಭುತಗಳಲ್ಲೊಂದಾಗಿದೆ.
ಜಾಂಬಿಯ ಮತ್ತು ಜಿಂಬಾವೆ ನಡುವೆ ಹರಿಯುವ ಜಾಂಬೆಜಿ ನದಿಯ ರುದ್ರ ರಮಣೀಯ ಜಲಪಾತಕ್ಕೆ ಭೇಟಿ ನೀಡುವ ಅದೃಷ್ಟ ನನ್ನದಾಗಿತ್ತು. ನಾನು ಈ ಜಲಪಾತದ ಮುಂದೆ ನಿಂತಾಗ ಕಂಡಿದ್ದು – ಆದಿ ಅಂತ್ಯವಿಲ್ಲದ ಈ ಜೀವನದಿ ಧುಮ್ಮಿಕ್ಕುವ ಸೊಬಗು, ಆರ್ಭಟಿಸುತ್ತಾ ಕಂದಕಕ್ಕೆ ಜಿಗಿಯುವ ಗಂಗೆ, ಮುಗಿಲೆತ್ತರಕ್ಕೆ ಏರುವ ಮಂಜು ಹಾಗೂ ಈ ರಮಣೀಯ ಜಲಪಾತಕ್ಕೆ ದೃಷ್ಟಿ ಆಗದಿರಲೆಂದು ಪ್ರಕೃತಿಯು ಮಂಜಿನ ಮುಸುಕು ಹಾಕುವ ಪರಿ, ಉಕ್ಕಿ ಹರಿಯುವ ಈ ಜಲಪಾತವನ್ನು ವೀಕ್ಷಿಸಲು ಬಾಗಿರುವ ಜೋಡಿ ಕಾಮನಬಿಲ್ಲುಗಳು, ಶಿವ ಧನುಸ್ಸನ್ನು ಮುರಿದ ರಾಮ ಬರುವನೆಂದು ಕಾಯುತ್ತಿರುವಂತೆ ಕಂಡವು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆಂದು ಹೋದವರು ವಿಕ್ಟೋರಿಯ ಜಲಪಾತ ನೋಡದೆ ಬರುವುದುಂಟೆ. ಜೊಹಾನ್ಸ್‌ಬರ್ಗ್‌ನಿಂದ 1260 ಕಿ.ಮೀ. ದೂರದಲ್ಲಿರುವ ಈ ಜಲಪಾತಕ್ಕೆ ಹೋಗಲು ವಿಮಾನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪಯಣ. ಇಲ್ಲಿನ ವಿಮಾನ ನಿಲ್ದಾಣದಲ್ಲಿಯೇ ಪ್ರವಾಸಿಗರಿಗೆ ‘ವೀಸ’ ಕೊಡುವ ವ್ಯವಸ್ಥೆ ಇದೆ. ವೀಸಾ ಪಡೆಯಲು ಒಬ್ಬರಿಗೆ ಮೂವತ್ತು ಡಾಲರ್. ಅಲ್ಲಿದ್ದ ಒಂದು ಫಲಕ ನೋಡಿ ನಗು ಬಂತು. ‘ಇಲ್ಲಿನ ಜನರ ರೂಪ, ಗಾತ್ರ ಅಥವಾ ಬಣ್ಣದ ಬಗ್ಗೆ ಯಾರಾದರೂ ಟೀಕಿಸಿದರೆ ಅಥವಾ ನಿಂದಿಸಿದರೆ ಅದು ಶಿಕ್ಷಾರ್ಹ ಅಪರಾಧ’. ಒಂದು ಕಾರು ಬಾಡಿಗೆಗೆ ಗೊತ್ತು ಮಾಡಿಕೊಂಡು ಮೊದಲೇ ಬುಕ್ ಮಾಡಿದ್ದ ಕಾಟೇಜ್‌ಗೆ ಹೊರಟೆವು. ಡ್ರೈವರ್ ಅಲ್ಲಿನ ಜಲಪಾತದ ಬಗ್ಗೆ ಮಾಹಿತಿ ನೀಡುತ್ತಾ ಸಾಗಿದೆ. ಆ ಊರಿನ ಹೆಸರೇ ‘ವಿಕ್ಟೋರಿಯ ಫಾಲ್ಸ್’. ಈ ಜಲಪಾತವನ್ನು ಜಾಂಬಿಯ ದೇಶದ ಕಡೆಯಿಂದ ಅಥವಾ ಜಿಂಬಾವೆ ದೇಶದ ಕಡೆಯಿಂದಾದರೂ ನೋಡಬಹುದು. ಈ ಜಲಪಾತದ ಆಳ ನೂರಾ ಎಂಟು ಮೀಟರ್ ಹಾಗೂ ಅಗಲ 1708 ಮೀಟರ್ ಇದೆ. ಇದನ್ನು ವಿಶ್ವದಲ್ಲೇ ಅತ್ಯಂತ ದೊಡ್ಡ ಜಲಪಾತವೆಂದೇ ಪರಿಗಣಿಸಲಾಗಿದೆ. 1857 ರಲ್ಲಿ ಲಿವಿಂಗ್ ಸ್ಟೋನ್ ಎನ್ನುವ ಆಂಗ್ಲ ಪರಿಶೋಧಕ ಈ ಜಲಪಾತಕ್ಕೆ ‘ವಿಕ್ಟೋರಿಯ ಫಾಲ್ಸ್’ ಎಂದು ನಾಮಕರಣ ಮಾಡಿದನು. ಈ ಜಲಪಾತದ ಗುಡುಗುವ ಸದ್ದು ನಲವತ್ತು ಕಿ.ಮೀ. ದೂರದಿಂದಲೇ ಕೇಳುವುದು ಹಾಗೂ ಇಲ್ಲಿ ಹೊರಹೊಮ್ಮುವ ಮಂಜಿನ ಮೋಡಗಳು ಐವತ್ತು ಕಿ.ಮೀ. ದೂರದಿಂದಲೇ ಕಾಣುವುದು. ಈ ಜಲಪಾತವು ನಯಾಗರ ಜಲಪಾತದ ಎರಡರಷ್ಟು ಅಗಲ ಮತ್ತು ಎರಡರಷ್ಟು ಆಳ ಇದೆ. ಪಕ್ಕದಲ್ಲಿಯೇ ಇರುವ ಝಾಂಬೆಸಿ ರಾಷ್ಟ್ರೀಯ ಅಭಯಾರಣ್ಯದಲ್ಲಿ ಆನೆಗಳು, ಸಿಂಹಗಳು, ಚಿರತೆ, ಕಾಡುಕೋಣ, ಜಿರಾಫೆ ಮುಂತಾದ ವನ್ಯಜೀವಿಗಳು ಇವೆ.
ಪ್ರವಾಸಿಗರನ್ನು ಆಕರ್ಷಿಸಲು ಹೆಲಿಕಾಪ್ಟರ್ ಸವಾರಿ, ರಾಪ್ಟಿಂಗ್, ಬಂಗೀ ಜಂಪಿಂಗ್, ಟ್ರೆಕ್ಕಿಂಗ್, ಬೋಟಿಂಗ್ ಮುಂತಾದ ಚಟುವಟಿಕೆಗಳು ಇವೆ. ಡ್ರೈವರ್ ಮೂಲಕ ‘ಫ್ಲೈಟ್ ಆಫ್ ಏಂಜಲ್ಸ್’ (Flight of Angels) ಎಂಬ ಹೆಸರಿನ ಹೆಲಿಕಾಪ್ಟರ್ ಬುಕ್ ಮಾಡಿದೆವು. ಹೆಲಿಕಾಪ್ಟರ್‌ನಲ್ಲಿ ಕೂರುವ ಮೊದಲು ಪ್ರತಿಯೊಬ್ಬರ ತೂಕ ನೋಡಿ ಮೂರು ಅಥವಾ ನಾಲ್ಕು ಮಂದಿಯನ್ನು ಕೂರಿಸುತ್ತಾರೆ. ಹೆಲಿಕಾಪ್ಟರ್‌ನಲ್ಲಿ ಹಾರುವಾಗ ಹೆಡ್ ಫೋನಿನಲ್ಲಿ ಎಲ್ಲ ವಿವರ ನೀಡುತ್ತಿರುತ್ತಾರೆ. ವಿಕ್ಟೋರಿಯ ಜಲಪಾತವನ್ನು ನೋಡುವಾಗ ನಾವು ನಾಲ್ಕೂ ಮಂದಿಯ ಉದ್ಗಾರಗಳು ಮುಗಿಲು ಮುಟ್ಟುವಂತಿದ್ದವು. ನಾವು ಕನಸಿನಲ್ಲಿಯೂ ಕಾಣದಂತಹ ಸುಂದರ ದೃಶ್ಯಗಳು. ರಮಣೀಯ, ಮನಮೋಹಕ, ಅದ್ಭುತ – ಯಾವ ಶಬ್ಧ ಉಪಯೋಗಿಸಲಿ ಈ ಜಲಪಾತವನ್ನು ಬಣ್ಣಿಸಲು, ಯಾವ ಶಬ್ಧದಿಂದಲೂ ಈ ಜಲಪಾತದ ವೈಭವವನ್ನು ಬಣ್ಣಿಸಲು ಆಗುತ್ತಿಲ್ಲ. ಅಭಯಾರಣ್ಯದಲ್ಲಿನ ವನ್ಯಜೀವಿಗಳ ದರ್ಶನವೂ ಆಯಿತು.
ವಿಕ್ಟೋರಿಯ ಜಲಪಾತದ ಸೌಂದರ್ಯ ಸವಿಯಲು ಹತ್ತು ವೀಕ್ಷಣೆಯ ಸ್ಥಳಗಳು ಇದ್ದವು. ಒಂದೊಂದು ಸ್ಥಳದಲ್ಲೂ ಆ ಜಲಪಾತ ವಿಭಿನ್ನವಾಗಿ ಕಾಣುತ್ತಿತ್ತು. ಒಂದೆಡೆ ಸ್ವರ್ಗದಿಂದ ರಭಸವಾಗಿ ಧುಮ್ಮಿಕ್ಕುವ ಗಂಗೆಯಂತೆ, ಇನ್ನೊಂದೆಡೆ ಬಳುಕುವ ಜಲಕನ್ಯೆಯಂತೆ, ಮತ್ತೊಂದೆಡೆ ಉಕ್ಕುವ ಜಲರಾಶಿಯಂತೆ. . . ಹೀಗೆ ನಾನಾ ರೂಪದಲ್ಲಿ ತನ್ನ ಚೆಲುವನ್ನು ಪ್ರದರ್ಶಿಸುವಂತಿತ್ತು. ಒಂದೆಡೆ ಜಲಪಾತದ ಮಧ್ಯೆ ಒಂದು ಕೋಡುಗಲ್ಲಿನ ಮೇಲೆ ಶಿವಲಿಂಗದ ಆಕೃತಿಯಂತೆ ಕಾಣುವ ಬಂಡೆ, ಅದರ ನೆತ್ತಿಯ ಮೇಲೆ ಬೀಳುತ್ತಿರುವ ಜಲಧಾರೆ. ಅಬ್ಬಾ ಪ್ರಕೃತಿಯ ಸೃಷ್ಟಿ ಎಷ್ಟು ಅದ್ಭುತ! ಇಲ್ಲಿ ಎಂತಹ ನಾಸ್ತಿಕರು ಬಂದರೂ ಕ್ಷಣಮಾತ್ರದಲ್ಲಿ ಪ್ರಕೃತಿಯ ಆರಾಧಕರಾಗಿಬಿಡುತ್ತಾರೆ ಇಲ್ಲ ಕವಿಯಾಗುತ್ತಾರೆ ಅಥವಾ ಯೋಗಿಗಳಾಗಿಬಿಡುತ್ತಾರೆ.
ಪ್ರಕೃತಿಯ ಸಾನಿಧ್ಯ ದೇಹ ಮತ್ತು ಮನಸ್ಸನ್ನು ಒಂದು ಮಾಡಿ ಆತ್ಮನಲ್ಲಿ ಲೀನಗೊಳಿಸುವುದು. ವಿಕ್ಟೋರಿಯ ಜಲಪಾತದ ಝೇಂಕಾರ, ನೀಲ ಆಗಸ, ಮೇಲೇರುತ್ತಿರುವ ಮಂಜಿನ ಮೋಡಗಳು – ಮನುಜನ ಮನದಾಳದಲ್ಲಿ ಹೊಕ್ಕು ಸ್ಥಿರವಾಗಿ ನೆಲೆಸಿಬಿಡುತ್ತವೆ. ದೇವಾನುದೇವತೆಗಳೇ ಈ ಜಲಪಾತದ ಸೌಂದರ್ಯಕ್ಕೆ ಮರುಳಾದ ಮೇಲೆ ನಮ್ಮಂತಹ ಹುಲುಮಾನವರ ಗತಿ – ಮನತುಂಬಿ, ಎದೆತುಂಬಿ ಆ ಪ್ರಕೃತಿ ಸೌಂದರ್ಯದ ಮುಂದೆ ತಲೆಬಾಗಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32752
-ಡಾ.ಗಾಯತ್ರಿದೇವಿ ಸಜ್ಜನ್
ಎಂದಿನಂತೆ ಪ್ರವಾಸ ಕಥನ ಆಕರ್ಷಕವಾಗಿ ಮೂಡಿ ಬಂದಿದೆ.ವಿಕ್ಟೋರಿಯ ಜಲಪಾತದ ಸೊಬಗನ್ನು ವರ್ಣಿಸಿರುವ ರೀತಿಯಂತೂ ನಮ್ಮ ಕಣ್ಣಿಗೆ ಕಟ್ಟುವಂತಿದೆ ಆ ಸೊಬಗನ್ನು ಉಣಬಡಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ.
ವಂದನೆಗಳು
ಈ ಪ್ರವಾಸ ಕಥನವನ್ನು ಓದಿ ಮೆಚ್ಚುಗೆಯ ಮಾತನಾಡಿರುವ ನಿಮಗೆ ಧನ್ಯವಾದಗಳು
Beautiful
ಸೊಗಸಾಗಿ ಸಾಗುತ್ತಿದೆ ನಿಮ್ಮ ಅನುಭವ ವಿಸ್ಮಯ ರೋಚಕತೆಯನ್ನು ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೀರಿ ಎರಡನೇ ಪ್ಯಾರಾ ತುಂಬಾ ಇಷ್ಟಾಯ್ತು ಮೇಡಂ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಆಪ್ರಿಕಾದೊಳಗೊಂದು ಸುತ್ತು ಓದುಗರಿಗೆ!
ಪ್ರವಾಸಪ್ರಿಯೆಯಾದ ನನಗೆ ಉಚಿತವಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿಸಿದ ನಿಮಗೆ ಧನ್ಯವಾದಗಳು..ಪ್ರವಾಸಕಥನ ಚೆನ್ನಾಗಿ ಮೂಡಿ ಬರುತ್ತಿದೆ…
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು
ವಿಕ್ಟೋರಿಯಾ ಜಲಪಾತದ ವಿವರಣೆ ಬಹಳ ಹಿಡಿಸಿತು…ನಾನು ನೋಡಿದ ನಯಾಗರ ಜಲಪಾತದ ನೆನಪಾಯ್ತು. ಚಂದದ ಲೇಖನ.. ಧನ್ಯವಾದಗಳು ಮೇಡಂ.
ನಿಮ್ಮ ಪ್ರೀತಿಯ ನುಡಿಗಳಿಗೆ ನಮಸ್ಕಾರ
ವಿಕ್ಟೋರಿಯಾ ಜಲಪಾತದ ಸುಂದರ ವರ್ಣನೆ. ಜಲರಾಶಿಯ ಅಗಾಧತೆಯ ಮನೋಜ್ಞ ವಿವರಣೆ ಸೊಗಸಾಗಿ ಮೂಡಿಬಂದಿದೆ.
ಧನ್ಯವಾದಗಳು
ಆಫ್ರಿಕಾದ ಜೀವನದಿ ಯಾವುದು