ನ್ಯಾನೋ ಕಥೆಗಳು
- ತಬ್ಬಲಿ
ರೈಲಿನಲ್ಲಿ ಮಲಗಿದ್ದ ರಾಮು ಹಿಂದಿನ ದಿನಗಳನ್ನು ನೆನಪಿಸಿಕೊಂಡ. ತಬ್ಬಲಿಯಾದ ತನ್ನನ್ನು, ಅಜ್ಜಿ ಕಷ್ಟಪಟ್ಟು ಸಾಕಿದ್ದಳು. ಹಣ ಸಂಪಾದಿಸಿ ಬೇಗ ಬರುವೆನೆಂದು ಹೋದವನು ಯಾರದೋ ಕೈವಾಡದಿಂದ ಜೈಲು ಸೇರಿದ್ದ! “ಎರಡು ವರ್ಷಗಳೇ ಕಳೆದು ಹೋದವಲ್ಲಾ, ಅಜ್ಜಿ ಏನ್ಮಾಡ್ತಿದ್ದಾರೋ” ಎಂದುಕೊಂಡು ನಿಲ್ದಾಣದಲ್ಲಿಳಿದು ಮನೆಗೆ ಹೋದರೆ ಅಲ್ಲೇನಿದೆ?ಅಂಗಳದಲ್ಲಿ ಬಿದ್ದಿತ್ತು ಅವನಜ್ಜಿಯ ಕಪ್ಪಾದ ಕಂದೀಲು ಅನಾಥವಾಗಿ. ಅಜ್ಜಿಯನ್ನು ಕರೆಯುತ್ತಾ ಒಳಹೋದ, ಖಾಲಿ ಮನೆಯೊಳಗೆ. ರಾಮು ಇನ್ನೊಮ್ಮೆ ತಬ್ಬಲಿಯಾಗಿದ್ದ.
- ಪ್ರೀತಿ
ಮನೆ ಮುಂದೆ ಬಿಳಿ ಕಾರು ಬಂದು ನಿಂತಾಗ, ಒಬ್ಬಂಟಿಯಾಗಿದ್ದ ವೃದ್ಧ ರಾಮರಾಯರಿಗೆ ಆಶ್ಚರ್ಯವಾಯ್ತು. ಅದರಿಂದ ಕೆಳಗಿಳಿದ ಯುವಕ ಬಳಿ ಬಂದು ಕಾಲಿಗೆರಗಿ, “ನಾನು ಅಪ್ಪಾ, ನಿಮ್ಮ ರವಿ” ಎಂದ. ರಾಯರ ಮನಸ್ಸು ಹಿಂದಕ್ಕೋಡಿತು.. ಮನೆಯಲ್ಲಿ ಹಣ ಕದ್ದಿರುವನೆಂದು ಸಿಟ್ಟಲ್ಲಿ, ಬಾಸುಂಡೆ ಬರುವಂತೆ ಚೆನ್ನಾಗಿ ಹೊಡೆದು ಹೊರ ದಬ್ಬಿದ್ದು ನೆನಪಾಯ್ತು! “ ಅಪ್ಪಾ, ನನ್ನೊಂದಿಗೆ ನಿಮ್ಮನ್ನು ಕರೆದೊಯ್ಯಲು ಬಂದೆ.. ಬನ್ನಿ” ಎಂದ. ರಾಯರ ಮನಸ್ಸು ಅಪರಾಧಿ ಪ್ರಜ್ಞೆಯಿಂದ ಬಳಲಿತಾದರೂ, ಮಗನ ಪ್ರೀತಿಗೆ ಸೋತಿತು.
- ತಿರುಗುಬಾಣ
ಆಶ್ರಮದ ಬೆಂಚಿನ ಮೇಲೆ ಕುಳಿತಿದ್ದ ಶ್ರೀಧರನನ್ನು ಅನಾಥಪ್ರಜ್ಞೆ, ಪಾಪಪ್ರಜ್ಞೆಗಳು ಕಾಡುತ್ತಿದ್ದುವು. ಮಕ್ಕಳಿಲ್ಲದ ಅಕ್ಕ, ಭಾವನವರು ತನ್ನ ಮೇಲೆ ನಂಬಿಕೆಯಿಟ್ಟು ಕೈಗೆ ಕೊಟ್ಟಿದ್ದ ಅವರ ಆಸ್ತಿ ಮಾರಿದ ಹಣವನ್ನೆಲ್ಲಾ ಮೋಸದಿಂದ ಲಪಟಾಯಿಸಿ, ಅವರು ಅನಾಥರಾಗಿ ಆಶ್ರಮ ಸೇರುವಂತೆ ಮಾಡಿದ್ದ. ಈಗ ತನ್ನ ಮಕ್ಕಳು ಅದೇ ಆಶ್ರಮದಲ್ಲಿ ತನ್ನನ್ನು ಬಿಟ್ಟು ಹೋಗಿದ್ದರು.. ತನ್ನ ಮೋಸ ತನಗೇ ತಿರುಗುಬಾಣವಾದುದು ತಿಳಿದಾಗ ಕಾಲ ಮಿಂಚಿತ್ತು.
- ಸಂಧಾನ
ದೇಶಗಳೆರಡರ ನಡುವೆ ಯುದ್ಧ ಭೀತಿ ಉದ್ವಿಗ್ನ ಪರಿಸ್ಥಿತಿ… ಶಾಂತಿ ಸಂಧಾನಕ್ಕಾಗಿ ಎರಡು ಕಡೆಯ ನಾಯಕರ ಉನ್ನತಮಟ್ಟದ ಮಾತುಕತೆ ನಡೆಯುತ್ತಿತ್ತು. ಅವುಗಳಲ್ಲೊಂದು ದೇಶದ ರಾಷ್ಟ್ರೀಯ ಹಬ್ಬದ ದಿನವಾಗಿತ್ತು, ಅಂದು. ಎದುರಾಳಿ ರಾಷ್ಟ್ರದ ಯೋಧನೊಬ್ಬ ಸಿಹಿತಿಂಡಿಯ ಪೊಟ್ಟಣ ಹಿಡಿದು ಬಂದು ಹಬ್ಬದ ಶುಭಾಶಯ ಕೋರಿದ. ನಿಯಂತ್ರಣ ರೇಖೆಯ ಬಳಿ ಆಗಲೇ ಶಾಂತಿ ಸಂಧಾನವಾಗಿಬಿಟ್ಟಿತ್ತು.
- ಸಾರ್ಥಕತೆ
“ತಗೊಳ್ಳಿ…ನವೀನನಿಗಾಗಿ..” ಕೈಯಲ್ಲಿ ತನ್ನ ಬಂಗಾರದ ಒಡವೆಗಳನ್ನು ಹಿಡಿದು ನಿಂತಿದ್ದಳು; ರಘುವಿನ ಎರಡನೇ ಪತ್ನಿ, ನವೀನನ ಮಲತಾಯಿ ಲತಾ. ಅವನಿಗೆ ನಂಬಲಾಗಲಿಲ್ಲ! ಮಗನ ಉನ್ನತ ಶಿಕ್ಷಣಕ್ಕೆ ಹಣ ಸಾಲದೆ ಬಂದಾಗ ರಘು ವ್ಯಾಕುಲನಾಗಿದ್ದ. ಚಿಕ್ಕಮ್ಮ ಈ ತನಕ ತನ್ನ ಮೇಲೆ ಹರಿಸಿದ ನಿರ್ಮಲ ಒಲವನ್ನು ಕಪಟವೆಂದೇ ತಿಳಿದಿದ್ದ ನವೀನನ ಕಣ್ಣು ತೆರೆಸಿತ್ತು, ಅವಳ ಈ ಕಾರ್ಯ! ಲತಾಳ ಮೊಗ ಸಾರ್ಥಕ್ಯ ಭಾವದಿಂದ ಮಿನುಗುತ್ತಿತ್ತು.
-ಶಂಕರಿ ಶರ್ಮ, ಪುತ್ತೂರು
ಒಳ್ಳೆಯ ಸಂದೇಶವಿರುವ ಕತೆಗಳು.
ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ಸರ್.
ಇಂದಿನ ಧಾವಂತದ ಬದುಕಿಗೆ ಇಂಥ ಕಥೆಗಳು ಬೇಕಾಗಿವೆ.ಒಳ್ಳೆಯ ಪ್ರಯತ್ನ ಉತ್ತಮ ಸಂದೇಶ ಹೊತ್ತ ವಿಶಿಷ್ಟ ಕಥೆಗಳು ಅಭಿನಂದನೆಗಳು ಮೇಡಂ
ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು ಮೇಡಂ.
ಅರ್ಥಗರ್ಭಿತ ಕಥೆಗಳು, ಚೆನ್ನಾಗಿವೆ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಯನ ಮೇಡಂ.
ಕತೆಗಳು ಬಹಳ ಚೆನ್ನಾಗಿವೆ. ಅಭಿನಂದನೆಗಳು
ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು ಮೇಡಂ.
ಪುಟ್ಟ ಕತೆಗಳಲ್ಲಿ ದೊಡ್ಡ ಸಂದೇಶ..ಚೆನ್ನಾಗಿವೆ.
ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ಹೇಮಾ ಅವರಿಗೆ.
ಚೆನ್ನಾಗಿ ದೆ ನ್ಯಾನೋ ಕಥೆಗಳು..
ಅಕ್ಕೊ
ನಾಲ್ಕೇ ಸಾಲುಗಳಲ್ಲಿ ಎಷ್ಟು ಅರ್ಥವತ್ತಾದ, ಮನಮುಟ್ಟುವ ಕಥೆಗಳಿವು. ಭಾವನೆಗಳನ್ನು ಮೀಟಿದಂತಾಯಿತು. ಸುಂದರ ಕಥೆಗಳು
A Storm in a teacup
Thank you
ಚೆನ್ನಾಗಿದೆ ಬರಹ.
ಪುಟ್ಟ ಕಥೆಗಳು ಮನ ಮುಟ್ಟಿತು