ನ್ಯಾನೋ ಕಥೆಗಳು
1.ಪಾಪಿ
ಊರಿಗೆ ಬಂದಿದ್ದ ಸನ್ಯಾಸಿಗಳ ಪ್ರವಚನ ಕೇಳಲು ಜನರು ಕಿಕ್ಕಿರಿದು ನೆರೆದಿದ್ದರು. ದೂರದಲ್ಲಿ ಕುಳಿತಿದ್ದ ಅನಂತನಿಗೆ ಅವನನ್ನು ಎಲ್ಲೋ ನೋಡಿದಂತೆನಿಸಿತು. ಧೈರ್ಯದಿಂದ ಪೋಲೀಸರಿಗೆ ಸುದ್ದಿ ಮುಟ್ಟಿಸಿದ. ಸ್ವಲ್ಪ ಹೊತ್ತಲ್ಲಿ ಬಂದ ಪೋಲೀಸರು ಸನ್ಯಾಸಿಗೆ ಕೋಳ ತೊಡಿಸಿದಾಗ ಎಲ್ಲರೂ ದಿಗ್ಭ್ರಾಂತರಾದರು. ಆಗಲೇ ಅನಂತ ಹೇಳಿದ, “ಗಾಬರಿಯಾಗಬೇಡ್ರೀ ಯಾರೂ, ಅಂತ:ಕಲಹದಿಂದ ಜಗಳವಾಡಿ ತನ್ನಣ್ಣನನ್ನು ಸಾಯಿಸಿ ಕಣ್ಮರೆಯಾದ ಪಾಪಿ ಶಿವು ಇವನೇ!” ಜನರೆಲ್ಲಾ ಬೈದುಕೊಳ್ಳುತ್ತಾ ಹೊರನಡೆದರು.
2.ತಿರುಗುಬಾಣ
ಸರಿರಾತ್ರಿ ಹೊತ್ತು. ಮಾಧವನ ಮನೆ ಮುಂಬಾಗಿಲು ಸದ್ದಾಯಿತು. ಬಾಗಿಲು ತೆರೆದಾಗ ಎದುರಿಗೆ ನಿಂತವರನ್ನು ಕಂಡು ಗಾಬರಿಗೊಂಡ. ಐದು ವರ್ಷಗಳ ಹಿಂದೆ ಕಾಶಿಗೆ ಯಾತ್ರೆ ಹೋಗಿದ್ದಾಗ, ದಾರಿ ಮಧ್ಯೆ ಬಿಟ್ಟುಬಂದು, ಮುದುಕ ಮಾವ ಗಂಗೆ ಪಾಲಾದರೆಂದು ತಾನು ವದಂತಿ ಮಾಡಿದ್ದ. ಅವರ ಒಬ್ಬಳೇ ಮಗಳಾದ ತನ್ನ ಪತ್ನಿ ಹೆರಿಗೆಯಲ್ಲಿ ತೀರಿಕೊಂಡಾಗ ಅವರ ಆಸ್ತಿಯನ್ನು ಲಪಟಾಯಿಸಲು ಮಾಡಿದ ನಾಟಕ ಅವನಿಗೇ ಮುಳುವಾಗಿತ್ತು. ಆಸ್ತಿಯನ್ನು ಅನಾಥಾಶ್ರಮಕ್ಕೆ ಬರೆದು ಬಿಟ್ಟಿದ್ದರು, ಅವನ ಮಾವ!
3.ಅಭಿಮಾನಿ
ಕಿಕ್ಕಿರಿದು ಸೇರಿತ್ತು ಜನ, ಮಧುರಕಂಠದ ಹಾಡುಗಾರ ಮಧುವಿನ ಹಾಡಿಗಾಗಿ. ಅವನ ಅಭಿಮಾನಿಯಾದ ಬಡ ಶಿವು ಹೊರಗಡೆ ಆಸೆ ಕಂಗಳಿಂದ ನಿಂತಿದ್ದ, ಕೈಯಲ್ಲಿ ಕಾಸಿಲ್ಲದೆ. ಹಿಂದಿನಿಂದ ಹೆಗಲ ಮೇಲೆ ಕೈಯಿರಿಸಿ ಕೇಳಿತೊಂದು ದನಿ, “ಏನಪ್ಪಾ ಇಲ್ಲಿ ನಿಂತಿದ್ದೀಯಾ, ಹಾಡು ಕೇಳ್ಬೇಕಾ, ಬಾ ಒಳಗೆ”. ತನ್ನ ಆರಾಧ್ಯ ದೈವವನ್ನು ಕಂಡು ನಂಬಲಾರದೆ ಕಾಲಿಗೆ ಬಿದ್ದ ಶಿವುವನ್ನು ಬಳಸಿ ಒಳತಂದು ಕುಳ್ಳಿರಿಸಿದ ಮಧು ವೇದಿಕೆಯೇರಿದ, ಹದಿನೈದು ವರ್ಷಗಳ ಮೊದಲು ತನ್ನ ಸ್ಥಿತಿಯೂ ಹೀಗೇ ಇದ್ದುದನ್ನು ನೆನೆಯುತ್ತಾ.
4.ಕ್ಷಮೆ
ರಾತ್ರಿ ಹನ್ನೆರಡು ಗಂಟೆ. ಮನೆ ಮುಂಬಾಗಿಲು ಸದ್ದಾಯಿತು. “ಇದ್ಯಾರಪ್ಪಾ ಇಷ್ಟು ಹೊತ್ತಲ್ಲಿ?” ಗಾಢ ನಿದ್ರೆಯಲ್ಲಿದ್ದ ಶಾರದಮ್ಮ ಎಚ್ಚೆತ್ತು ದೀಪ ಬೆಳಗಿಸಿ ಮುಂಬಾಗಿಲು ತೆರೆದಾಗ ಎದುರಿಗೆ ನಿಂತಿದ್ದ ವ್ಯಕ್ತಿಯನ್ನು ಕಂಡು ಅವಕ್ಕಾದರು. ಹತ್ತು ವರ್ಷಗಳ ಹಿಂದೆ ಜಗಳವಾಡಿ ತಮ್ಮನ್ನು ಮತ್ತು ಮಕ್ಕಳನ್ನು ತೊರೆದು ಹೋದ ಪತಿಯ ಹೀನಾಯ ಸ್ಥಿತಿ ಕಂಡು ಮನ ಕರಗಿತು. “ಬನ್ನಿ” ಎಂದು ಒಳ ಕರೆದಾಗ ಕಣ್ಣಲ್ಲಿ ನೀರು ತುಂಬಿ “ನನ್ನನ್ನು ಕ್ಷಮಿಸುವೆಯಾ?” ಎಂಬಂತೆ ದಯನೀಯ ನೋಟ ಬೀರಿದನವನು.
-ಶಂಕರಿ ಶರ್ಮ, ಪುತ್ತೂರು.
ಚಿಕ್ಕ ಕಥೆಗಳು ಚೊಕ್ಕ ದಾದಾ ಸಂದೇಶ ಕೊಟ್ಟ ನಿಮಗೆ ಧನ್ಯವಾದಗಳು ಮೇಡಂ
ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.
ನಾಲ್ಕೇ ಸಾಲುಗಳಲ್ಲಿ ಅರ್ಥಗರ್ಭಿತ ನ್ಯಾನೋ ಕಥೆಗಳನ್ನು ಕಟ್ಟುವ ನಿಮ್ಮ ನೈಪುಣ್ಯತೆಗೆ ಅಭಿನಂದನೆಗಳು.
ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು..ಪದ್ಮಾ ಮೇಡಂ
ಉತ್ತಮ ಸಂದೇಶಗಳನ್ನೊಳಗೊಂಡ ಕಥೆಗಳು
ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.
Very nice stories
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು..ಸುಧಾ ಮೇಡಂ
ಚಂದದ ಕಥೆಗಳು
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ಕೃಷ್ಣಪ್ರಭಾ ಮೇಡಂ.
ತುಂಬಾ ತುಂಬಾ ಚೆನ್ನಾಗಿದೆ
ಓದಿ, ಮೆಚ್ಚಿ, ಸ್ಪಂದಿಸಿದ ತಮಗೆ ಹೃತ್ಪೂರ್ವಕ ನಮನಗಳು ..ವಿದ್ಯಾ ಮೇಡಂ.
ಅಂದಚಂದದ ಪುಟ್ಟ ಕಥೆಗಳು