ದೂರವಾಣಿ – ದೂರಿದ ವಾಣಿ

Share Button

ಹಿಂದೊಮ್ಮೆ ದೂರವಾಣಿ ಅಂದರೆ ಸ್ಥಿರವಾಣಿ ದೂರದಲ್ಲಿರುವವರ  ಜೊತೆ ವಾಣಿ ಅಂದರೆ ಮಾತು ಕೇಳುವ  ಹೇಳುವ ಒಂದು ಮಾಧ್ಯಮ ಆಗಿತ್ತು ನಿಜ. ಈಗೆಲ್ಲಾ  ಇದು ಬಹಳ ದುಸ್ತರವಾಗಿದೆ. ಇಂದು ಚರವಾಣಿ ಪ್ರತಿಯೊಬ್ಬರ ಕರದಲ್ಲಿ…ನನ್ನ ಪ್ರಕಾರ 95%  ಜನಜೀವನದ ಪ್ರಮುಖ ಅಂಗ,ಬದುಕೇ ಈ ಚರವಾಣಿ ಆಗಿದೆ..ಇದೀಗ ದೂರದಲ್ಲಿರುವವರಿರಲಿ,ಒಂದೇ ಮನೆಯ ಸದಸ್ಯರೂ ಒಂದೇ ಸೂರಿನಡಿ ಇದ್ದಾಗಲೂ ಸಹ ಚರವಾಣಿಯ ಮೂಲಕವೇ ಪರಸ್ಪರ ಮಾತನಾಡುವುದಿದೆ. ಸೋಜಿಗ ಅಲ್ಲವೆ?

ಇದರ ಇನ್ನೊಂದು ಮುಖ ಇದರ ಉಪಯುಕ್ತತೆ…ಹೀಗೆ ಹಾಸುಹೊಕ್ಕಾಗಿರುವ ಈ ಚರವಾಣಿ ಉಪಯೋಗವೂ ಇಂದಿನ ಬದುಕಿಗೆ ಅತ್ಯಗತ್ಯ,ಉಪಯುಕ್ತ. ಪ್ರಮುಖವಾಗಿ ನಮ್ಮ ವಿಶ್ವವನ್ನು ಮಹಾಮಾರಿ ಕರೋನ ಆವರಿಸಿಕೊಂಡ ಈ ಸಂದರ್ಭದಲ್ಲಿ ಎಲ್ಲರ ಪಾಲಿಗೆ ಈ  ಸ್ಥಿರವಾಣಿ,ಚರವಾಣಿ ಎರಡೂ ವರವಾಗಿ ಎಲ್ಲರ ಜೊತೆ ಸಂಪರ್ಕದಲ್ಲಿರಲು, ಮನೆಯಲ್ಲೇ ಕೂತು ಅಂತರ್ಜಾಲ ಬಳಸಿ  ಬೇಕಾದ ಸರಕು, ಸಾಮನುಗಳಾಗಲಿ, ಅಗತ್ಯ ವಸ್ತುಗಳಿರಲಿ, ಬಳಸಿದ ವಿದ್ಯುತ್, ನೀರು, ಅನಿಲ ಇನ್ನಿತರ ಪಾವತಿಗಳಿಗಾಗಲಿ ಹೀಗೆ ಹತ್ತು ಹಲವಾರು ರೀತಿಯಲ್ಲಿ ಇದು ವರವಾಗಿದೆ.

ಹೀಗೆ ಹಾಸುಹೊಕ್ಕಾಗಿರುವ ಸ್ಥಿರವಾಣಿ, ಚರವಾಣಿ ತುಂಬಾ ಸಹಕಾರಿ. ಇದರ ಇತಿಮಿತಿ ಇಷ್ಟೆಯೆ? ಮನುಜರ ಅಂತರಾಳ,ಅಂತರಂಗ ಅರಿಯುವ, ತಿಳಿಸಬಲ್ಲ ಮಾಯಗಾರ  ಆಗಬಹುದೇ ಎಂಬ ವಿಚಾರಕ್ಕೆ ಬಂದಾಗ… ಚರವಾಣಿ ಮೂಲಕ ಪರಿಚಯಸ್ಥರು, ಯಾರಿಗಾದರೂ ಕರೆ ಮಾಡಿ   “ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ” ಅನ್ನೋ ಹಾಗೆ  ಕುಶಲೋಪರಿ, ವಿಷಯ ವಿನಿಮಯ, ಮನೆಗೆ, ಸಮಾರಂಭಗಳಿಗೆ ಆಹ್ವಾನ ಇದು ಯಾವುದಾದರೂ ಆಗಿ ಸಂಭಾಷಣೆ ಮುಗಿದ ನಂತರ ಆ ಕರೆ ಸರಿಯಾಗಿ ಸಂಪರ್ಕ ಕಳೆದುಕೊಂಡಿದೆಯೇ ಅಥವಾ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಿ ಅದೇ ಸಂಖ್ಯೆಗೆ ಕರೆ ಹೋಗಿದೆಯೇ ಎಂದು ಖಾತ್ರಿ  ಪಡಿಸಿಕೊಳ್ಳುವುದು ಬಹಳ ಅತ್ಯಗತ್ಯ…ಇಲ್ಲವಾದರೆ?

“ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ” ಎಂಬ ಮಾತಿದೆ. ಹಲವರು “ಕೈಯಲ್ಲಿ ಶರಣಾರ್ಥಿ..ಕಂಕುಳಲ್ಲಿ ದೊಣ್ಣೆ” ಇದಕ್ಕೆ ಪ್ರತ್ಯಕ್ಷ  ನಿದರ್ಶನ…ನಿಮ್ಮಿಂದ ಕೆಲಸವಾಗಬೇಕಿದ್ದಾಗ ನೀನೇ ಇಂದ್ರ, ನೀನೇ ಚಂದ್ರ ಎಂದು ಎಣಿಸಲಾಗದಷ್ಟು ಬಾರಿ ಪ್ರಯೋಜನ ಪಡೆದು, ನಿಮ್ಮೊಡನೆ ಸಂಭಾಷಿಸುತ್ತಿದ್ದಾಗ, ಹೊಗಳಿ ಹೊಗಳಿ ನಿಮ್ಮನು ಹೊನ್ನ ಶೂಲಕ್ಕೇರಿಸಿ,ನಂತರ ಕರೆ ಸಂಪರ್ಕ ಕಡಿತಗೊಳಿಸಿದೆನೆಂದು ಆ ವ್ಯಕ್ತಿ… ಆದರೆ ನಿಮ್ಮ ಅದೃಷ್ಟವೋ, ದುರದೃಷ್ಟವೋ…ಆ  ಕರೆ ಚಾಲ್ತಿಯಲ್ಲಿದ್ದು ಕರೆ ಮಾಡಿದ ವ್ಯಕ್ತಿ ಹಾಗೂ ಮನೆಯ ಇನ್ನಿತರ ಸದ್ಯಸರ ಪರಸ್ಪರ  ಸಂಭಾಷಣೆ ಎಂದಾದರೂ ನೀವು ಕೇಳುವಂತಾದರೆ?  ಅದು ನಿಮ್ಮದೇ ಬಗ್ಗೆ ದೂಷಣೆ,ಇಲ್ಲಸಲ್ಲದ ಮಾತು  ಯಾಕಾಗಿ ಇವರನ್ನು ಆಹ್ವಾನಿಸಿದೆವೆಯೋ ಎಂಬೆಲ್ಲ ಆದರೆ ? ಕೇಳುವವರ ಕಿವಿ, ಮನ ? ಎಂತಹ ಧನ್ಯ? . ಎದುರಿಗೆ ಮಾತು ಎಷ್ಟು ನಯ…ಮನದಲ್ಲಿ ಇಂತಹ ವಿಚಾರವೇ??

ಹೌದು ಮಾತೇ ಮುತ್ತು.ಮಾತೇ ಮೃತ್ಯು. ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ. ನಿಜ. ಯಾರ ದೂಷಿಸುತ್ತಿದ್ದೇವೋ ಅವರು ಶಾಂತ ಸ್ವಭಾವದವರು ,ಸಲುಗೆ ಕೊಟ್ಟಿದ್ದಾರೆಂದರೆ ಮೂರ್ಖರೆಂದು ಅರ್ಥವಲ್ಲ. ನಿಂದಿಸಿದವರ ಮೇಲೆ ಕೋಪಗೊಳ್ಳದೆ ಎದುರು ಬಂದಾಗ ಸ್ವಾಭಾವಿಕವಾಗಿ ವರ್ತಿಸಿ,ನಗುಮೊಗದಿಂದ ಮಾತನಾಡಿಸಿದರೆ ಅದು ಕೊಚ್ಚೆ ಮೇಲೆ ಕಲ್ಲೆಸೆದು  ಹೊಲಸು ಮಾಡಿಕೊಳ್ಳಲೇಕೆ? ಎಂದರ್ಥ. ಎದುರಿಗಿಲ್ಲ ಎಂಬ ಭಂಡ ಧೈರ್ಯ ನಾಲಿಗೆ ಹಿಡಿತ ತಪ್ಪಿಸಿ ಆಡಿದ ಮಾತುಗಳು ಹಿಂಪಡೆಯಲಾದೀತೇ?

ನಂತರ ಅದರ ಅರಿವಾಗಿ ಅದು ನಿಮ್ಮಲ್ಲಿ ಹೇಳಿಕೊಳ್ಳಲು ಆಗದೆ ಸುಮ್ಮನಿರಲೂ ಆಗದೆ ಮನದಲ್ಲೇ ಆಗುವ ಹೊಯ್ದಾಟ,ಘರ್ಷಣೆ ಹೇಗಿರಬಹುದು? ಒಂದು ಪಕ್ಷ ತಪ್ಪಿನ ಅರಿವಾಗಿ ಕ್ಷಮೆ ಕೇಳಿದರೂ ಅದು “ಸಂತೇಲಿ ಮಂತ್ರ ಹೇಳಿದಂಗೆ” ….ನಗಣ್ಯ…ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೊಯ್ತು…

ನಿಮ್ಮ ಜೀವನದ ಈ ತರಹದ ಘಟನೆ ಮರುಕಳಿಸಿತೇ??  ….ದೂರವಾಣಿ  ದೂರುವ ವಾಣಿಯ ಕೇಳಿಸಿದೆಯೆ???ನಕ್ಕು ಸುಮ್ಮನಾಗಿಬಿಡಿ….ನಿಂದಕರು ಇದ್ದಾಗ ಅವರಿಗೆ ಅರಿವಿಲ್ಲದಂತೆ ನಮ್ಮ ಉನ್ನತಿ ಶತಸಿದ್ದ!   ಶ್ರೀ ಪುರಂದರದಾಸರ ಉಕ್ತಿ ನೆನಪಿಸಿಕೊಳ್ಳಿ..ನಿಂದಕರಲ್ಲಿಡಿ ಭಕ್ತಿ…ಅವರಿದ್ದರೇ ನಿನಗೆ ದೊರಕುವುದು ಮುಕ್ತಿ…ಕಲಿಸುವರು ಹೋರಾಟದ ಯುಕ್ತಿ …ತುಂಬುವರು ಸಹನೆಯಾ ಶಕ್ತಿ…ಆಗೋದೆಲ್ಲ ಒಳ್ಳೇದಕ್ಕೆ!

-ಲತಾ ಪ್ರಸಾದ್

13 Responses

 1. ನಾಗರತ್ನ ಬಿ. ಅರ್. says:

  ಲಘು ಲೇಖನದ ಮೂಲಕ ಮಾನವನ ಗುಣಸ್ವಭಾವಗಳ ಒಂದು ಪುಟ್ಟ ಅವಲೋಕನ ಚೆನ್ನಾಗಿ ಮೂಡಿ ಬಂದಿದೆ ಮೇಡಂ.

 2. Latha says:

  ಧನ್ಯವಾದಗಳು

 3. Hema says:

  ಸಾರ್ವಕಾಲಿಕ ಸತ್ಯ. ಚೆನ್ನಾಗಿದೆ.

 4. ನಯನ ಬಜಕೂಡ್ಲು says:

  ಮುತ್ತು ಒಡೆದರೆ ಹೋಯಿತು, ಮಾತು ಆಡಿದರೆ ಮುಗಿಯಿತು ಅನ್ನುವ ಗಾದೆ ಇಲ್ಲಿ ನೆನಪಿಗೆ ಬರುತ್ತದೆ. ಸುಂದರವಾದ ಬರಹ

 5. Vani says:

  ತುಂಬಾ ಚೆನ್ನಾಗಿ ವಿವರಿಸಿದ್ದೀರಿ ವಾಸ್ತವದಲ್ಲಿ ಆಗುತ್ತಿದ್ದ ಇದನ್ನು ತೋರಿಸಿದ್ದೀರಾ ಸುಂದರ ಬರಹ ಲತಾ ಅವರೆ

 6. Padma Anand says:

  ಒಳ್ಳೆಯ ಕಿವಿಮಾತುಗಳನ್ನೊಳಗೊಂಡ ಸುಂದರ ಲೇಖನ ಅಭಿನಂದನೆಗಳು

 7. Latha says:

  ಎಲ್ಲರಿಗೂ ಧನ್ಯವಾದಗಳು

 8. Vathsala says:

  ದೂರವಾಣಿಯ ಬಳಕೆ ಅಗತ್ಯಕ್ಕಿಂತ ಅಧಿಕವಾಗಿ ಬಳಸುವ
  ಈ ಹೊತ್ತಿನಲ್ಲಿ ಸೌಜನ್ಯದ ಗಡಿದಾಟಬಾರದು ಎಂದು
  ಎಚ್ಚರಿಕೆ ಮೂಡಿಸುವ ನಿಮ್ಮ ಲೇಖನ ಚೆನ್ನಾಗಿದೆ.

 9. ಶಂಕರಿ ಶರ್ಮ says:

  ದೂರವಾಣಿ, ಚರವಾಣಿಗಳ ಬಳಕೆಯಲ್ಲಿನ ಕಥೆ, ವ್ಯಥೆಗಳನ್ನು, ಸೂಕ್ತ ಗಾದೆ ಮಾತುಗಳೊಂದಿಗೆ ಸಹಜವಾಗಿ ನಿರೂಪಿಸಿದ ರೀತಿ, ದೂರವಾಣಿ ಇಲಾಖೆಯಲ್ಲಿದ್ದ ನನಗೆ ಬಹಳ ಆಪ್ತವೆನಿಸಿತು.

Leave a Reply to Vathsala Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: