ಕರಾವಳಿಯ ಮಳೆ ..ಶಾಲಾದಿನಗಳು
ಕರಾವಳಿ ತೀರದ ಮಳೆಗೂ ಮಲೆನಾಡಿನ ಮಳೆಗೂ ವ್ಯತ್ಯಾಸ ಇದೆ ಅಂತ ಸುಮಾರು ವರ್ಷ ನನಗೆ ಗೊತ್ತಿರಲಿಲ್ಲ. ಕುವೆಂಪು ಅವರ ಕಾದಂಬರಿಗಳಲ್ಲಿ ಮಳೆಯ ವೈಭವವನ್ನು ಅನುಭವಿಸಿದ್ದೆ. ಆದರೆ ಹಚ್ಚ ಹಸಿರಿನಂತೆ ನೆನಪಿನಲ್ಲಿ ಉಳಿದಿರುವುದು ಮಾತ್ರ ಕರಾವಳಿಯ ನಮ್ಮೂರಿನ ಮಳೆ. ಜೂನ್ ಮೊದಲ ವಾರದಲ್ಲೇ ಸಾಮಾನ್ಯವಾಗಿ ಮೋಡ ಕವಿದು ಮಳೆ ಸುರಿಯುತ್ತಿತ್ತು. ದಿನಾ ಸಮುದ್ರದ ಮೊರೆತ ಕಿವಿಯನ್ನು ತುಂಬುತ್ತದೆ. ಕುಂಬಳೆಯ ಸರಕಾರಿ ಶಾಲೆಯಂತೂ ಸಮುದ್ರ ಕಿನಾರೆಗೆ ತೀರಾ ಸನಿಹದಲ್ಲಿದೆ. ಆ ದಿನಗಳಲ್ಲಂತೂ ಕೆಲವೊಮ್ಮೆ ತರಗತಿಯಲ್ಲಿ ಕುಳಿತುಕೊಳ್ಳಲು ಬೇಸರವಾಗುತ್ತಿತ್ತು. ಹೊರಗೆ ಮಳೆಯ ಅಬ್ಬರವನ್ನೇ ಸುಮ್ಮನೆ ನೋಡುತ್ತಿದ್ದೆ. ಯಾಕಾದರೂ ಮಳೆಗಾಲದಲ್ಲಿ ಶಾಲೆ ಇದೆಯೋ ಎಂದು ಅನ್ನಿಸುತ್ತಿತ್ತು. ಜೂನಿನಲ್ಲಿ ತರಗತಿಗಳು ಬದಲಾಗುತ್ತವೆ. ಎಂಟರಲ್ಲಿದ್ದವ ಒಂಭತ್ತಕ್ಕೆ, ಒಂಭತ್ತರಲ್ಲಿದ್ದವ ಹತ್ತಕ್ಕೆ ಬರುವ ಸಮಯ.
ಹೀಗಾಗಿ ಸಹಪಾಠಿಗಳೆಲ್ಲ ಪರಿಚಯಸ್ತರಾದರೂ, ಹೊಸ ತರಗತಿ ಇನ್ನೂ ಒಗ್ಗಿರುವುದಿಲ್ಲ. ಅಂತಹ ವೇಳೆಯಲ್ಲಿ ಹೊರಗೆ ಮೋಡ ಕವಿದ ವಾತಾವರಣ ಇದ್ದರೆ ಮನಸ್ಸಿಗೂ ಮೋಡ ಕವಿದಂತಾಗುತ್ತಿತ್ತು. ಸಂಜೆ ಬಸ್ಸಿನಲ್ಲಿ ವಿಪರೀತ ರಶ್ಶು ಬೇರೆ. ಹೇಗಪ್ಪಾ ಮನೆಗೆ ಮಳೆಯ ನಡುವೆ ಹೋಗೋದು ಎಂಬ ಚಿಂತೆ ಕಾಡುತ್ತಿತ್ತು. ಮಧ್ಯಾಹ್ನ ಊಟದ ಬಿಡುವಿನಲ್ಲಿ ಮಳೆ ನಿಂತಿದ್ದರೆ , ಅಥವಾ ಚಿರಿಪಿರಿ ಮಳೆಯಿದ್ದರೆ ಸೀದಾ ಮೈದಾನದ ಬದಿಯಲ್ಲಿದ್ದ ಗೂಡಂಗಡಿಗಳಿಗೆ ಸ್ನೇಹಿತರೊಡನೆ ಹೋಗುತ್ತಿದ್ದೆ. ಅಲ್ಲಿ ಕಟ್ಲೀಸು ಅಥವಾ ಐಸ್ ಕ್ಯಾಂಡಿ ತೆಗೆದು ಚಪ್ಪರಿಸುತ್ತಿದ್ದೆವು.
ನಮ್ಮ ಶಾಲೆಯಲ್ಲಿ ಒಂದು ಬೋರ‍್ ವೆಲ್ ಇತ್ತು. ಮಧ್ಯಾಹ್ನ ಬುತ್ತಿ ಊಟ ಆದ ನಂತರ ಕೈ ತೊಳೆಯಲು ಬೋರ‍್ ವೆಲ್ ನ ಹಿಡಿ ಅಲ್ಲಾಡಿಸಿ ನೀರು ಸುರಿಸಿಕೊಳ್ಳುತ್ತಿದ್ದೆವು. ಆಗ ಅಲ್ಲಿ ಭಯಂಕರ ಗಡಿಬಿಡಿ, ರಶ್ ಆಗುತ್ತಿತ್ತು. ಮಕ್ಕಳೆಲ್ಲ ಒಬ್ಬರ ಮೇಲೊಬ್ಬರು ಮುಗಿಬೀಳುತ್ತಿದ್ದರು. ಮತ್ತೊಂದು ಕಡೆ ಇತರರು ಬೋರ‍್ ವೆಲ್ ನ ಹಿಡಿಯನ್ನು ಜಗ್ಗುತ್ತಿದ್ದರು. ಒಂದು ಸಲ ಏನಾಯಿತೆಂದರೆ ನೂಕು ನುಗ್ಗಲಿನಲ್ಲಿ ಬೋರ‍್ ವೆಲ್ ನ ಹಿಡಿಯ ಅಡಿಗೆ ನನ್ನ ಬೆರಳಿನ ತುದಿ ಸಿಕ್ಕಿತು. ಅತ್ತ ಕಡೆ ಜೋರಾಗಿ ಹಿಡಿಯನ್ನು ಜಗ್ಗುತ್ತಿದ್ದರು. ಇತ್ತ ನನ್ನ ಬೆರಳು ಜಜ್ಜಿತು.. ಅಯ್ಯೋ…ಅಂತ ಬೊಬ್ಬಿಟ್ಟೆ. ತಕ್ಷಣ ಹಿಡಿಯನ್ನು ಸಡಿಲಿಸಿದರು. ಮತ್ತೆ ದೊಡ್ಡ ಗುಂಪು ನೆರೆಯಿತು. ಶಾಲೆಯ ಕಚೇರಿಗೆ ನನ್ನನ್ನು ಹೊತ್ತು ತಂದರು. ನನಗೆ ಅಂತಹ ಪೆಟ್ಟೇನೂ ಆಗಿರಲಿಲ್ಲ. ಆದರೂ ಶಿಕ್ಷಕರು ಸಹಿತ ಎಲ್ಲರ ಅನುಕಂಪ ನನಗೆ ಸಿಕ್ಕಿತ್ತು. ಬಳಿಕ ವೈದ್ಯರ ಹತ್ತಿರ ಹೋಗಿ ತೋರಿಸಿದೆ. ಮುಂಜಾಗರೂಕತಾ ಕ್ರಮವಾಗಿ ಟಿಟಾನಸ್ ಇಂಜಕ್ಷನ್ ಕೊಟ್ಟರು. ಗಾಯ ಕ್ರಮೇಣ ವಾಸಿಯಾಯಿತು.
ವಿಷಯ ಎಲ್ಲಿಂದೆಲ್ಲಿಗೋ ಹೋಗುತ್ತಿದೆ. ಮತ್ತೆ ಮಳೆಗಾಲಕ್ಕೆ ಹೋಗೋಣ. ಪ್ರತಿ ವರ್ಷ ಮಳೆ ಬಂದೊಡನೆ ಅಜ್ಜನ ಮನೆಯ ಜಾಲಿನ ಎದುರು ಸಣ್ಣ ಕೈ ತೋಟದಲ್ಲಿ ಅಮ್ಮ ನಾನಾ ಬಗೆಯ ಹೂ ಗಿಡಗಳನ್ನು ನೆಡುತ್ತಿದ್ದಳು. ಊರಿನ ಹೆಣ್ಣು ಮಕ್ಕಳೆಲ್ಲ ಮನೆಗೆ ಬರೋರು. ಗುಲಾಬಿ, ಮಲ್ಲಿಗೆ, ಕ್ರಾಟನ್, ಲಿಲ್ಲಿ ಅಂತ ಗಿಡಗಳನ್ನು, ಅದರ ಗೆಲ್ಲುಗಳನ್ನು ಕೊಂಡೊಯ್ಯುತ್ತಿದ್ದರು. ನಾನೂ ಅಕ್ಕನೂ ಒಂದು ಕಡೆ ಎರಡು ವಿಭಾಗವನ್ನಾಗಿ ಹಂಚಿಕೊಂಡು ಸ್ಪರ್ಧಿಗಳಂತೆ ಕೈ ತೋಟವನ್ನು ಅಭಿವೃದ್ಧಿಪಡಿಸುತ್ತಿದ್ದೆವು. ಯಾರು ಹೆಚ್ಚು ಗಿಡಗಳನ್ನು ನೆಡುತ್ತಾರೆ ? ಯಾರ ಕೈ ತೋಟ ಚೆನ್ನಾಗಿದೆ ? ಎಂದು ಪರಸ್ಪರ ಅವಲೋಕನ, ಜಗಳ ಕೂಡ ನಡೆಯುತ್ತಿತ್ತು. ಅಕ್ಕ ತನ್ನ ತೋಟದ ಹೆಚ್ಚುಗಾರಿಕೆಯನ್ನು ಬಣ್ಣಿಸಿದರೆ, ನಾನು ನನ್ನ ತೋಟವೇ ಅದ್ಭುತ ಅಂತ ಪಟ್ಟು ಹಿಡಿದು ವಾದಿಸುತ್ತಿದ್ದೆ. ಈಗ ಆ ಜಾಗದಲ್ಲಿ ಎಷ್ಟು ಕಳೆ ಬೆಳೆದಿದೆಯೋ..
ಮಳೆ ಬಂದಾಗ ಮನೆಯ ಪಕ್ಕದ ಸುರಂಗದ ಒಳಗಿನಿಂದ ನೀರು ಉಕ್ಕಿ ಹರಿಯುತ್ತಿತ್ತು. ಅದು ಬಂಡೆಗಳ ನಡುವಿನಿಂದ ಪುಟ್ಟ ಜಲಪಾತವಾಗಿ ಹರಿದು ಊರಿನ ಹಳ್ಳವನ್ನು ಸೇರುತ್ತಿದ್ದ ದೃಶ್ಯ ಎಷ್ಟು ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ. ಗಂಟಗಟ್ಟಲೆ ಅದನ್ನೇ ನೋಡುತ್ತಿದ್ದೆ. ಕಲ್ಲೆಸೆಯುತ್ತಿದ್ದೆ. ಮಳೆ ಬಂದಾಗ ಅಂತಹ ಚಳಿ ಆಗುತ್ತಿರಲಿಲ್ಲ. ಒಂದು ಥರಾ ಬೆಚ್ಚಗಿನ ಅನುಭವವೇ ಆಗುತ್ತಿತ್ತು. ಚೌತಿಯ ವೇಳೆ ಬೆಳಗ್ಗೆ ಅಜ್ಜ ಪೂಜೆ ಮುಗಿಸಿದ ನಂತ ಪಚ್ಚಪ್ಪ ಕೊಡುತ್ತಿದ್ದರು. ಸ್ವಾದಿಷ್ಟವಾದ ಆ ಪ್ರಸಾದವನ್ನು ತಿನ್ನುತ್ತ, ಮಳೆಗೆ ಒದ್ದೆಯಾದ ಅಡಿಕೆ ತೋಟವನ್ನು ಮಾಳಿಗೆ ಮನೆಯ ಕಿಟಿಕಿಯಿಂದ ನೋಡುತ್ತ ಲೋಕವನ್ನೇ ಮರೆಯುತ್ತಿದ್ದೆ.
ಒಂದು ಸಲ ಸಾಯಂಕಾಲ ಕಪ್ಪನೆಯ ಕಾರ್ಮೋಡ ದಟ್ಟೈಸಿ ಬಂದು ಮಳೆ ಜೋರಾಗಿ ಸುರಿಯುತ್ತಿತ್ತು. ನಾನು ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದೆ. ನನಗೋ ಬೇಗನೆ ಮನೆ ಸೇರುವ ಆತುರ. ಆವತ್ತು ಕೊಡೆಯನ್ನು ತರಲು ಮರೆತು ಬಿಟ್ಟಿದ್ದೆ. ಆದರೆ ಮಳೆ ಬರುತ್ತೆ ಅಂತ ಶಾಲೆಯಲ್ಲಿಯೇ ಕಾಯಲು ನನ್ನಿಂದಾಗಲಿಲ್ಲ. ಹಾಗೆಯೇ ಮಳೆಯಲ್ಲಿ ನೆನೆಯುತ್ತಲೇ ಮನೆಯ ದಾರಿಯಲ್ಲಿ ಓಡುತ್ತಾ ಹೋಗುತ್ತಿದ್ದೆ. ಹೊಲದ ಬದಿಯ ಕಿರಿದಾದ ದಾರಿಯಲ್ಲಿ ಓಡುತ್ತಿದ್ದಾಗ, ಗಣಪತಿ ಭಟ್ಟರು ನನ್ನನ್ನೇ ನೋಡಿದರು. ಅವರು ಹಿರಿಯರು. ನನ್ನ ಅಜ್ಜನೂ ಅವರೂ ದೋಸ್ತಿಗಳು. ಹೀಗಾಗಿ ಏನೆನ್ನುತ್ತಾರೋ, ಅಂತ ಒಳಗೊಳಗೆ ಭಯವಾಗುತ್ತಿತ್ತು. ಆದ್ದರಿಂದ ಸ್ಪೀಡು ಸ್ವಲ್ಪ ಕಡಿಮೆ ಮಾಡಿ ನಡೆದೆ. ನನ್ನನ್ನು ಕಾಣುತ್ತಲೇ ” ಅಯ್ಯೋ..ಈ ಮಳೆಗೆ ಕೊಡೆಯೂ ಇಲ್ಲದೆ ಹೋಗುತ್ತಿದ್ದೀಯಾ..ಎಂಥ ಮಕ್ಕಳಾಟಿಕೆ ನಿನ್ನದು, ಬುದ್ಧಿಯಿಲ್ಲ.. ” ಎಂದು ಬೈಯ್ಯಲಿಲ್ಲ.ಬದಲಿಗೆ ಅದನ್ನೇ ಸೂಚಿಸುವ ಧಾಟಿಯಲ್ಲಿ ಮುಖದಲ್ಲಿ ಹುಬ್ಬು ಗಂಟಿಕ್ಕಿ ನೋಡಿದರು. ನಾನು ಕಂಡೂ ಕಾಣದಂತೆ ಮತ್ತೆ ಓಡಿ ಮನೆ ಸೇರಿದೆ. ಅವರ ಕಣ್ಣಿನ ನೋಟ ಈವತ್ತಿಗೂ ಮರೆಯಲಾಗುತ್ತಿಲ್ಲ.
-ಕೇಶವಪ್ರಸಾದ ಬಿ. ಕಿದೂರು.
ಲೇಖನ ತುಂಬಾ ತುಂಬಾ ಆಪ್ತವಾಯಿತು. ಶಾಲೆಯಲ್ಲಿ ನಾನೂ ಗಣಿತ ಪಾಠ ನಡೆಯುವಾಗ ಮಳೆ ನೋಡುತ್ತಾ ಹೊತ್ತು ಕಳೆಯುತ್ತಿದ್ದೆ. ಒಂದು ದಿನ ಮೇಸ್ಟರು “ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತು!” ಎಂದು ತಲೆಗೆ ಮೊಟಕಿದ್ದರು.. ಆದರೂ ಮಳೆ ನೋಡುವ ಸುಖ ಬೇರಾವುದರಲ್ಲೂ ಇರಲಿಲ್ಲ..
fantastic!! 🙂
ಲೇಖನ ಬಹಳ ಕುಶಿಯಾಇತು. ನನಗೂ ಬಾಲ್ಯದ ನೆನಪಾಇತು. ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈ ಭವವೇನು ಆ ಹಾಡನ್ನು ನಮ್ಮ ಕನ್ನಡ ಪ೦ಡಿತರು ವಿವರಿಸಿದುದು ಇನ್ನೂ ಹಸಿರಾಗಿದೆ
nicely narrated in a balanced manner. very moving. nostalgic.
ಆಪ್ತ ವಾಗಿದೆ .
ಮಳೆಯ ಕುರಿತಾದ ಬರಹ ಇಷ್ಟ ಆಯಿತು . ಆದರೆ ಈ ವರ್ಷ ಇದು ಮಳೆಗಾಲ ಅಂತ ಅನ್ನಿಸುತ್ತಾ ಇಲ್ಲ .