ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 3

Share Button

ಹಿಟಾಚಿ ಸೀ ಸೈಡ್ ಪಾರ್ಕ್
18-04-2019  ಗುರುವಾರ

ಟೋಕಿಯೋದಲ್ಲಿ ಇಂದು ಇದ್ದ ಶುಭ್ರ ಮುಂಜಾನೆ ನಮ್ಮನ್ನು ಎಚ್ಚರಿಸಿತು. ಸ್ನಾನಾದಿಗಳನ್ನು ಮುಗಿಸಿ ಎಂಟೂವರೆಗೆ ಗೋವಿಂದಕ್ಕೆ ಹೊರಟೆವು. ಅಲ್ಲಿ ಬಿಸಿ ತಿಂಡಿ ನಮ್ಮನ್ನು ಸ್ವಾಗತಿಸಿತ್ತು. ಪೂರಿ, ಉಪ್ಪಿಟ್ಟು ಅಂದಿನ ಮೆನು. ಎಲ್ಲರೂ ಉಪಾಹಾರ ಮುಗಿಸಿ ಅಂದಿನ ಪ್ರೇಕ್ಷಣೀಯ ಸ್ಥಳವಾದ ‘ಹಿಟಾಚಿ ಸೀ ಸೈಡ್ ಪಾರ್ಕ್‘ ನೋಡಲು ಹೊರಟೆವು. ಟೋಕಿಯೋನಿಂದ ಸುಮಾರು 130  ಕಿ.ಮೀ. ದೂರದಲ್ಲಿ ಹಿಟಾಚಿ ಇದೆ. ಅಂದಾಜು ಎರಡು ಗಂಟೆ ಪ್ರಯಾಣ. ಎರಡು ದಿನಗಳಾದರೂ ಎಲ್ಲರ ಪರಿಚಯ ಆಗಿರಲಿಲ್ಲ. ನಮ್ಮ ಮಾರ್ಗದರ್ಶಿ ಪ್ರಭುಜೀಯವರು ಬಸ್ಸಿನಲ್ಲಿ ಎರಡು ಗಂಟೆಗಳ ಸಮಯವಿರುವುದರಿಂದ ಎಲ್ಲರೂ ಒಬ್ಬೊಬ್ಬರಾಗಿ ಬಂದು ಬಸ್ಸಿನಲ್ಲಿ ಮುಂಭಾಗದಲ್ಲಿ ಕುಳಿತು ನಿಮ್ಮ ಪರಿಚಯ ಹೇಳಿಕೊಳ್ಳಿ ಎಂದರು. ಎಲ್ಲರೂ ಪರಿಚಯ ಮಾಡಿಕೊಳ್ಳಲು ಮುಂದಾದರು. ಕೆಲವರು ಒಬ್ಬರೇ ಬಂದಿದ್ದರು, ಪತ್ನಿ ಬಂದಿರಲಿಲ್ಲ. ಆಗಲೇ ಹೇಳಿದ ಹಾಗೆ ಅಕ್ಕತಂಗಿಯರು ಬಂದಿದ್ದರು. ದಂಪತಿಗಳು ವಿಶ್ರಾಂತ ಜೀವನವನ್ನು ಅನುಭವಿಸಲು ಬಂದಿದ್ದರು. ಕೆಲವರು ಚಿಕ್ಕ ವಯಸ್ಸಿನ ಉದ್ಯಮಿಗಳು ಸಂಸಾರದೊಡನೆ ಬಂದಿದ್ದರು. ವಿಶೇಷವೆಂದರೆ ಇಬ್ಬರು ಸ್ವಾಮೀಜಿಗಳು ಬಂದಿದ್ದರು. ಕಾಷಾಯವಸ್ತ್ರ ಧರಿಸಿ, ಬೆಚ್ಚಗೆ ಬಟ್ಟೆಯಿಲ್ಲದೆ, ಕಾಲಿಗೆ ಹವಾಯ್ ಚಪ್ಪಲಿ ಧರಿಸಿದ್ದರು. ನಮಗೆಲ್ಲಾ ಆಶ್ಚರ್ಯ ಇವರಿಗೆ ಚಳಿ ತಟ್ಟುವುದಿಲ್ಲವೋ ಹೇಗೆ? ಎಂದು. ನನ್ನ ಮನಸ್ಸಿಗೆ ಹೊಳೆದದ್ದು ಏನೆಂದರೆ ಇದು ಮನೋನಿಗ್ರಹದಿಂದ ಸಾಧ್ಯ. ಎಲ್ಲದಕ್ಕೂ ಮನಸ್ಸೇ ಮೂಲ ಕಾರಣ. ಚಿಕ್ಕದಾಗಿ, ಚೊಕ್ಕವಾಗಿ ಪರಿಚಯ ಮಾಡಿಕೊಂಡವರೇ ಜಾಸ್ತಿ. ಒಬ್ಬರು ಮಾತ್ರ ತಮ್ಮ ಬಗ್ಗೆ ಬಹಳವಾಗಿ ಹೇಳಿಕೊಂಡರು. ನಂತರ ಬಂದ ಕೆಲವರ ಪರಿಚಯವನ್ನು ಕೇಳಿ ಗಪ್‌ಚಿಪ್ ಆಗಿಬಿಟ್ಟರು ಎನ್ನಿ! ಎಲ್ಲೂ ನಮ್ಮ ಬಗ್ಗೆ ಕೊಚ್ಚಿಕೊಳ್ಳಲು ಹೋಗಬಾರದು ಅಲ್ಲವೇ? ಕೆಲವರ ಪರಿಚಯ ಮುಗಿಯುವುದರಲ್ಲಿ ಹಿಟಾಚಿ ಪಾರ್ಕ್ ಬಂದೇಬಿಟ್ಟಿತು.

ಹಿಟಾಚಿ ಸೀ ಸೈಡ್ ಪಾರ್ಕ್

ಅನೇಕಾನೇಕ ಬಸ್ಸುಗಳು, ಕಾರುಗಳು ಆಗಲೇ ಹೊರಗೆ ನಿಲುಗಡೆಯಲ್ಲಿ ಮಾಡಿದ್ದುವು. ಪಾರ್ಕ್‌ಗೆ ಅರ್ಧ ಕಿಲೋಮೀಟರ್ ದೂರದಿಂದಲೇ ರಸ್ತೆಯ ಎರಡೂ ಬದಿಗಳಲ್ಲಿ ಚೆರ್ರಿ ಮರಗಳನ್ನು ನೆಡಲಾಗಿದೆ. ಇಲ್ಲಿ ಬಿಳಿಯ ಹೂವಿನ ಚೆರ್ರಿ ಮರಗಳನ್ನೂ ನೋಡಿದ್ದಾಯಿತು. ಹಿಟಾಚಿ ಸೀ ಸೈಡ್ ಪಾರ್ಕ್ ಅಂದರೆ ಪೆಸಿಫಿಕ್ ಸಾಗರದ ಪಕ್ಕದಲ್ಲೇ ಇರುವ ಉದ್ಯಾನ. ಇದು ಜಪಾನಿನ ಅತೀ ಪೂರ್ವದಲ್ಲಿದೆ. ಇಲ್ಲಿಂದ ಸಮುದ್ರ ದಾಟಿದರೆ ಅಮೆರಿಕ ಸಿಗುತ್ತದೆ. ಬಹಳ ದೊಡ್ಡ ಉದ್ಯಾನ. ಇದರ ವಿಸ್ತೀರ್ಣ 190 ಹೆಕ್ಟೇರ್‌ಗಳು. ವರ್ಷಪೂರ್ತಿ ಹೂಗಳು ಅರಳಿ ನಿಂತು ನಿಮ್ಮನ್ನು ಸ್ವಾಗತಿಸುತ್ತವೆ. ಅಕ್ಕಪಕ್ಕದಲ್ಲಿ ಬೆಟ್ಟಗಳಿವೆ. ಆದ್ದರಿಂದ ತಣ್ಣಗೆ ಗಾಳಿ ಬೀಸುತ್ತಿತ್ತು. ಸಾಗರದ ಪಕ್ಕದ ಬೆಟ್ಟಗಳಲ್ಲಿ ‘ಬೇಬಿ ಬ್ಲೂ ಐ‘ ಅಂದರೆ ಮಗುವಿನ ನೀಲಿ ಕಣ್ಣು ಎನ್ನುವ ಚಿಕ್ಕ ಗಿಡಗಳನ್ನು ನೆಡುತ್ತಾರೆ. ಇವು ಏಪ್ರಿಲ್-ಮೇ ನಲ್ಲಿ ತಿಳಿನೀಲಿ ಬಣ್ಣದ ಚಿಕ್ಕ ಹೂಗಳನ್ನು ಬಿಡುತ್ತವೆ. ಇಡೀ ಬೆಟ್ಟ ನೀಲಿಯಾಗುತ್ತದೆ! ಇದರ ಹೆಸರು ನೀಮೋಫಿಲ (Nemophila). ಪಾರ್ಕ್‌ನಲ್ಲಿ ದೇವದಾರು ರೀತಿಯ ಮರಗಳು ತುಂಬಾ ಇದ್ದುವು. ಇವುಗಳ ಮಧ್ಯೆ ಹೂಗಳ ಪಾತಿಗಳು. ಒಂದು ಕಡೆ ನಾರ್ಸಿಸಸ್ ಹೂಗಳು ಸೌಂದರ್ಯವನ್ನು ಚೆಲ್ಲುತ್ತಾ ನೂರಾರು ಅಡಿಗಳ ವಿಸ್ತಾರದಲ್ಲಿ ನಗೆ ಚೆಲ್ಲುತ್ತಾ ನಿಂತಿದ್ದವು. ಗಾಢ ಬಣ್ಣಗಳಾದ ಹಳದಿ, ಕೆಂಪು, ರೋಜಾ ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದವು. ಹಾಗೇ ಬಿಳಿ, ಕೆನೆಬಣ್ಣ, ತಿಳಿಗುಲಾಬಿ ಹೀಗೆ ಅನೇಕ ಸೌಮ್ಯವಾದ ಬಣ್ಣಗಳಲ್ಲೂ ಇದ್ದವು. ಎಲ್ಲಾ ನಾರ್ಸಿಸಸ್ ಹೂಗಳು ನಗುತ್ತಾ ಸೂರ್ಯನನ್ನೇ ನೋಡುತ್ತಿದ್ದವು. ಸೂರ್ಯಕಾಂತಿ ಹೂ ಕೂಡ ಹೀಗೆ ಅಲ್ಲವೇ? ಅನೇಕ ರೀತಿಯ ಹೈಬ್ರಿಡ್‌ಗಳೂ ಇದ್ದುವು. ನಾರ್ಸಿಸಸ್ ಹೂವಿನಲ್ಲಿ ಹೊರಗೆ ಒಂದು ಸುತ್ತು ಪಕಳೆಗಳು ಮತ್ತು ಒಳಗೆ ಒಂದು ಕೊಳವೆಯಾಕಾರದ ಪಕಳೆ ಇರುತ್ತವೆ. ಹೈಬ್ರಿಡ್‌ಗಳಲ್ಲಿ ಹೊರಗೆ ಒಂದು ಬಣ್ಣ, ಒಳಗೆ ಇನ್ನೊಂದು ಬಣ್ಣ ಇತ್ತು. ಐನೂರು ಬಣ್ಣಗಳ ನಾರ್ಸಿಸಸ್‌ಗಳನ್ನು ಬೆಳೆಸಿದ್ದಾರೆ. ನಾರ್ಸಿಸಸ್ ಎನ್ನುವ ಹೆಸರು ಹೇಗೆ ಬಂತು? ಒಂದು ಕುತೂಹಲಕಾರಿ ಕಥೆ ಇದರ ಹಿಂದೆ ಇದೆ.

ನಾರ್ಸಿಸಸ್ ಎನ್ನುವವ ಗ್ರೀಕ್ ಪುರಾಣದಲ್ಲಿ ಒಬ್ಬ ಬೇಡ. ಇವನು ಥೇಸ್ಪಿಯದವನು. ನೋಡಲು ಅತ್ಯಂತ ಸುಂದರನಾಗಿದ್ದ. ಇವನು ನದಿಗಳ ದೇವತೆ ಸೆಫಿಸಸ್ ಮತ್ತು ಅಪ್ಸರೆ ಲಿರಿಯೋಪ್‌ಳ ಮಗ. ಒಂದು ದಿನ ನಾರ್ಸಿಸಸ್ ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಅಪ್ಸರೆಯಾಗಿದ್ದ ಇಕೊ ಇವನನ್ನು ನೋಡಿ ಮೋಹಕ್ಕೆ ಒಳಗಾದಳು. ಇವನನ್ನು ಹಿಂಬಾಲಿಸತೊಡಗಿದಳು. ನಾರ್ಸಿಸಸ್‌ಗೆ ಇದು ತಿಳಿಯಿತು. ಆಗ ಇಕೊ ತನ್ನ ಪ್ರೀತಿಯನ್ನು ನಾರ್ಸಿಸಸ್‌ನ ಹತ್ತಿರ ನಿವೇದಿಸಿಕೊಂಡಳು. ಆದರೆ ನಾರ್ಸಿಸಸ್ ಅವಳನ್ನು ದೂರ ತಳ್ಳಿ ತನ್ನ ತಂಟೆಗೆ ಬರಬೇಡವೆಂದ. ಇದರಿಂದ ಬೇಸತ್ತ ಇಕೊ ಕಾಡುಮೇಡುಗಳಲ್ಲಿ ಅಲೆಯತೊಡಗಿದಳು. ಅಲೆದು ಅಲೆದು ಕ್ಷೀಣವಾಗುತ್ತಾ ಹೋದಳು. ಕಡೆಗೆ ಕೇವಲ ಪ್ರತಿಧ್ವನಿಯಾಗಿ ಅಂದರೆ ಇಕೊ ಆಗಿ ಉಳಿದಳು. ಆದರೆ ನೆಮೆಸಿಸ್ ಅನ್ನುವ ಪ್ರತೀಕಾರದ ದೇವತೆಗೆ ಈ ವಿಷಯ ತಿಳಿಯಿತು. ಅವಳು ನಾರ್ಸಿಸಸ್‌ಗೆ ಶಿಕ್ಷೆ ಕೊಡಲು ನಿರ್ಧರಿಸಿದಳು. ನೆಮೆಸಿಸ್ ಒಂದು ಕೊಳದ ಹತ್ತಿರ ನಾರ್ಸಿಸಸ್ ಅನ್ನು ಕರೆದುಕೊಂಡು ನಡೆದಳು. ಕೊಳದಲ್ಲಿ ನಾರ್ಸಿಸಸ್ ತನ್ನ ಪ್ರತಿಬಿಂಬವನ್ನು ಕಂಡು ಅದರಲ್ಲಿಯೇ ಮೋಹಗೊಂಡ. ಮೊದಲು ಪ್ರತಿಬಿಂಬ ಎಂದು ತಿಳಿಯದೆ ಹೋದ. ಜಿಗುಪ್ಸೆಗೊಂಡು, ತನ್ನ ಪ್ರೀತಿ ಫಲಿಸಲಿಲ್ಲವೆಂದು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ. ಈ ಕೊಳದ ಪಕ್ಕದಲ್ಲಿಯೇ ಕೆಲಸ ಸಮಯದಲ್ಲಿ ಸುಂದರ ಹೂಗಳ ಗಿಡಗಳು ಹುಟ್ಟಿದುವು. ಅದೇ ನಾರ್ಸಿಸಸ್ ಹೂವು. ನೋಡಲು ಅತಿ ಸುಂದರ ಆದರೆ ವಿಷವುಳ್ಳ ಹೂವು. ‘ನಾರ್ಸಿಸಿಸಂ’ ಎನ್ನುವ ಪದ ಹುಟ್ಟಿರುವುದೇ ಈ ಕಥೆಯಿಂದ. ಇದರ ಅರ್ಥ ತನ್ನ ದೇಹವನ್ನು ತಾನೇ ಆರಾಧಿಸುವುದು, ಮೋಹಗೊಳ್ಳುವುದು ಎಂದು! ಉದ್ಯಾನದಲ್ಲಿ ನಾರ್ಸಿಸಸ್‌ಗಳ ಸೌಂದರ್ಯವನ್ನು ಕೊಂಡಾಡಿಕೊಂಡು ಮುಂದೆ ನಡೆದೆವು. ಹೋ! ಅಲ್ಲಿ ಟ್ಯುಲಿಪ್‌ಗಳ ಸಾಮ್ರಾಜ್ಯ ಕಂಡಿತು. ಅನೇಕಾನೇಕ ಟ್ಯುಲಿಪ್ ಹೂಗಳ ಪಾತಿಗಳು. ಒಂದೆಡೆ ಕೆಂಪು ಬಣ್ಣದ ಹಾಸು! ಆಂಗ್ಲಭಾಷೆಯಲ್ಲಿ ಸ್ಕಾರ್ಲೆಟ್ ರೆಡ್ ಎನ್ನುತ್ತಾರಲ್ಲ ಆ ಕೆಂಪು. ಸೂರ್ಯ ತನ್ನ ರಶ್ಮಿಗಳಿಂದ ಅದನ್ನು ಇನ್ನೂ ಹೊಳೆಯುವ ಕೆಂಪಾಗಿ ಮಾಡಿದ್ದ! ನೆದರ್‌ಲ್ಯಾಂಡ್‌ನ ಕ್ಯುಕೆನ್ ಹಾಫ್ ಉದ್ಯಾನ ನೆನಪಾಯಿತು. ಅಲ್ಲಿ ಟ್ಯುಲಿಪ್‌ಗಳ ಸಾಗರವೇ ಇರುತ್ತದೆ. ಹಿಟಾಚಿ ಪಾರ್ಕ್‌ನಲ್ಲಿ ಇಡೀ ವರ್ಷ ಒಂದಲ್ಲ ಒಂದು ರೀತಿಯ ಹೂವುಗಳು ಕಂಗೊಳಿಸುತ್ತಿರುತ್ತವೆ.

ನಾರ್ಸಿಸಸ್‌ ಹೂಗಳು

ನಂತರ ಉದ್ಯಾನದಲ್ಲೇ ಓಡಾಡಲು ಇರುವ ರೈಲಿಗಾಗಿ ಕುಳಿತೆವು. ಕೆಲವೇ ನಿಮಿಷಗಳಲ್ಲಿ ರೈಲು ಬಂದಿತು. ಇದಕ್ಕೆ ಸೀ-ಸೈಡ್ ಟ್ರೈನ್ ಎಂದು ಹೆಸರು. ಮುದ್ದಾಗಿ ಮಕ್ಕಳ ರೈಲಿನಂತಿದೆ. ಎಲ್ಲಾ ಕಡೆಯಿಂದಲೂ ತೆರೆದಿದೆ. ಸುತ್ತಮುತ್ತ ನೋಡುತ್ತಾ, ತಂಗಾಳಿಯನ್ನು ಸ್ಪರ್ಶಿಸುತ್ತಾ ಹೋಗುತ್ತೇವೆ. ಈಗ ನಾವು ನೀಲಿಹೂಗಳ ಬೆಟ್ಟಕ್ಕೆ ಪ್ರಯಾಣಿಸಿದೆವು. ಬೆಟ್ಟದ ಬುಡದಲ್ಲಿ ರೈಲಿನಿಂದ ಸುಂದರ ನಿಲ್ದಾಣದಲ್ಲಿ ಇಳಿದೆವು. ಎದುರಿಗೆ ನೀಲಿ ಹೂಗಳ ಸಮುದ್ರ! ಪಕ್ಕದಲ್ಲಿ ಪೆಸಿಫಿಕ್ ಸಮುದ್ರ, ಮೇಲೆ ನೀಲಿ ಆಕಾಶ! ಮೂರು ನೀಲಿ ಬಣ್ಣಗಳ ಮೇಳೈಸುವಿಕೆ ಓಹ್! ಎಂತಹ ಸುಂದರ ದೃಶ್ಯ. ಪ್ರಕೃತಿಗೆ ಮಾತ್ರ ಇದು ಸಾಧ್ಯ. ಈ ರೀತಿಯ ಬಣ್ಣಗಳ ಮಿಲನ ಸೃಷ್ಟಿಸುವುದು ಅಲ್ಲವೇ? ಮಾನವ ಮಾಡುವುದು ಕೆಲವೊಮ್ಮೆ ಕೃತ್ರಿಮ ಎನಿಸಿಬಿಡುತ್ತದೆ! ಏಪ್ರಿಲ್-ಮೇ ತಿಂಗಳಿನಲ್ಲಿ ಹೂ ಬಿಡುವಂತೆ, ಇಡೀ ಗುಡ್ಡಗಳಲ್ಲಿ ನೀಲಿ ಹೂವಿನ ಗಿಡಗಳನ್ನು ನೆಡುತ್ತಾರೆ. ಒಟ್ಟು 4.5 ಮಿಲಿಯ ಗಿಡಗಳು ನೀಲಿಹೂಗಳನ್ನು ಬಿಡುತ್ತವೆ. ಚಿಕ್ಕ ತೆಳುನೀಲಿಯ ಹೂಗಳು. ಇದಕ್ಕೆ ‘ನೀಮೋಫಿಲ’ ಎಂದು ಹೆಸರು. ಬೆಟ್ಟ ಕಡಿದಾಗಿಲ್ಲ, ಹತ್ತಲು ರಸ್ತೆ ತುಂಬಾ ಚೆನ್ನಾಗಿದೆ. ಕಾಲು ನೋವು, ಮಂಡಿ ನೋವು ಇದ್ದವರೂ ಸುಲಭವಾಗಿ ಹತ್ತಬಹುದು. ಮೇಲೆ ಹೋದಾಗ ಒಂದು ಗಂಟೆ ಕಾಣಿಸಿತು. ಅದನ್ನು ಬಾರಿಸಿದೆವು. ಇನ್ನೂ ನೂರು ಅಡಿ ಹತ್ತಿದರೆ ಒಂದು ದಿಬ್ಬವಿದೆ. ಅಲ್ಲಿಂದ ಪೆಸಿಫಿಕ್ ಸಾಗರ ಚೆನ್ನಾಗಿ ಕಾಣುತ್ತದೆ. ಇದನ್ನೆಲ್ಲಾ ಸವಿದು ನಿಧಾನವಾಗಿ ಕೆಳಗೆ ಬಂದೆವು. ಒಂದು ಕಡೆ ಊಟ ಮಾಡಲು ಬೆಂಚುಗಳನ್ನು ಹಾಕಿದ್ದರು. ಅಲ್ಲಿ ಕುಳಿತು ನಮಗೆ ನೀಡಿದ್ದ ಬುತ್ತಿಯನ್ನು ಬಿಚ್ಚಿದೆವು. ಎದುರಿಗೆ ನೀಲಿ ಹೂಗಳನ್ನು ನೋಡುತ್ತಾ ತೆಂಗಿನಕಾಯಿ ಚಿತ್ರಾನ್ನ ಮತ್ತು ಮೊಸರನ್ನ ತಿಂದೆವು. ಜೊತೆಗೆ ಸಿಹಿ ಇತ್ತು.

ಜಪಾನಿನಲ್ಲಿ ನಮ್ಮಲ್ಲಿರುವಂತೆ ಕಾಗೆಗಳು ಇವೆ. ಆದರೆ ಸ್ವಲ್ಪ ದೊಡ್ಡದಾಗಿವೆ ಎನ್ನಿಸಿತು. ಕೂಗುವುದು ಸ್ವಲ್ಪ ಬೇರೆ ರೀತಿ! ದೊಡ್ಡ ಉದ್ಯಾನಗಳಲ್ಲಿ ನಮಗೆ ನೋಡಲು ಸಿಕ್ಕಿದವು. ಇನ್ನೊಂದು ವಿಶೇಷ ವಿಷಯ ನಾನು ಗಮನಿಸಿದ್ದು ಜಪಾನೀಯರ ಮುದ್ದು ಪ್ರಾಣಿಗಳ ಪ್ರೀತಿ. ಬೆಕ್ಕಿನ ಮೇಲೆ ಜಪಾನಿಗರಿಗೆ ಬಲು ಪ್ರೀತಿ. ಆಸ್ತಿಯನ್ನು ಬೆಕ್ಕಿಗೇ ಬರೆದವರಿದ್ದಾರೆ! ನಾವು ಹಿಟಾಚಿ ಸೀ ಸೈಡ್ ಪಾರ್ಕಿನಲ್ಲಿ ವಿವಿಧ ತಳಿಗಳ ನೂರಾರು ನಾಯಿಗಳನ್ನು ನೋಡಿದೆವು. ಇವುಗಳನ್ನೂ ಸಾಕಿದವರು ಪಾರ್ಕ್‌ಗೆ ಕರೆತಂದಿದ್ದರು. ಅವುಗಳ ರಾಜವೈಭೋಗ ಹೇಳತೀರದು. ಅಂದಚೆಂದದ ಪುಟ್ಟ ಶರ್ಟ್, ಫ್ರಾಕ್ ತೊಡಿಸಿದ್ದರು. ಮಕ್ಕಳ ಬದಲಿಗೆ ಇವುಗಳನ್ನೇ ಪ್ರಾಮ್ (ತಳ್ಳುವ ಗಾಡಿ) ನಲ್ಲಿ ಕೂರಿಸಿ ತಿರುಗಾಡಿಸುತ್ತಿದ್ದರು. ಅವುಗಳಿಗೆ ವಿಧವಿಧವಾದ ತಿಂಡಿ ತಿನಿಸುಗಳು, ಅಂತಹ ಕುಡಿಯುವ ನೀರಿನ ಬಾಟಲ್ ನಮ್ಮಲ್ಲಿ ಜನರೇ ಉಪಯೋಗಿಸುವುದಿಲ್ಲ ಎನಿಸುತ್ತದೆ!

ನನಗೆ ಜಪಾನಿನ ಒಂದು ಪ್ರಸಿದ್ಧ ನಾಯಿಯ ಕಥೆ ನೆನಪಾಯಿತು. ಹಚಿಕೋ ಎನ್ನುವ ನಾಯಿ ಟೋಕಿಯೋದ ಪ್ರೊಫೆಸರ್ ಒಬ್ಬರು ಸಾಕಿದ ನಾಯಿ. ಹಚಿಕೋ ಅಂದರೆ ಕಾಲು ಸ್ವಲ್ಪ ಡೊಂಕು ಎಂದು. ಅದು ಪ್ರತಿದಿನ ಅಲ್ಲಿನ ಶಿಬುಯೋ ಸ್ಟೇಷನ್‌ಗೆ ಪ್ರೊಫೆಸರ್ ಅವರನ್ನು ಬಿಡಲು ಹೋಗುತ್ತಿತ್ತು. ಸಂಜೆ ಬರುವ ರೈಲಿಗೆ ಹೋಗಿ ಕಾದು ಒಟ್ಟಿಗೆ ಮನೆಗೆ ಬರುತ್ತಿತ್ತು. ಒಂದು ದಿನ ಕಾಲೇಜಿಗೆ ಹೋದ ಪ್ರೊಫೆಸರ್ ಪಾಠ ಮಾಡುತ್ತಾ ಹೃದಯಾಘಾತದಿಂದ ಮರಣ ಹೊಂದಿದರು. ಆದರೆ ಹಚಿಕೋ ಪ್ರತಿದಿನ ಒಂಭತ್ತು ವರ್ಷಗಳ ಕಾಲ ರೈಲುನಿಲ್ದಾಣಕ್ಕೆ ಹೋಗುತ್ತಿತ್ತು. ಮೊದಲು ಜನ ನಾಯಿಗೆ ಕಲ್ಲು ಹೊಡೆದರು. ಆದರೆ ಅಸಾಹಶಿಂಬುನ್ ಪತ್ರಿಕೆ ಹಚಿಕೋ ಕಥೆಯನ್ನು ಪ್ರಕಟಿಸಿತು. ಪ್ರತಿದಿನ ಯಜಮಾನನಿಗೆ ಕಾಯುತ್ತಾ 13 ವರ್ಷದ ಹಚಿಕೋ ನಿಲ್ದಾಣದಲ್ಲಿಯೇ ಮರಣ ಹೊಂದಿತು. ಅದಕ್ಕೆ ಸ್ಮಾರಕವನ್ನು ನಿಲ್ದಾಣದಲ್ಲಿ ಕಟ್ಟಿದ್ದಾರೆ. ಬಹುಶಃ ಈ ಪ್ರಾಣಿ ಪ್ರೀತಿಗೆ ಕಾರಣಗಳೂ ಇವೆ. ಜಪಾನೀಯರು ತಮ್ಮ ಕೆಲಸವೇ ಜೀವನದಲ್ಲಿ ಮುಖ್ಯ ಎಂದುಕೊಳ್ಳುತ್ತಾರೆ. ನಂತರ ಮನೆಯವರು. ಪ್ರತಿದಿನ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಕೆಲಸದ ಒತ್ತಡ ತುಂಬಾ ಜಾಸ್ತಿ. ಮಾನಸಿಕವಾಗಿ ಬಹಳ ಬಳಲುತ್ತಾರೆ. ಮನೆ ಮಂದಿಯೊಂದಿಗೆ ಕಳೆಯಲು ಸಮಯ ಸಾಲದು. ಮಕ್ಕಳನ್ನು ಹೆತ್ತು ನೋಡಿಕೊಳ್ಳುವುದೂ ಕಷ್ಟ. ಹಾಗಾಗಿ ನಾಯಿ, ಬೆಕ್ಕುಗಳನ್ನು ಸಾಕಬಹುದು. ನಮ್ಮಲ್ಲಿ ಅನೇಕ ಮಕ್ಕಳಿಗೇ ಇಂತಹ ಪ್ರೀತಿ, ಐಷಾರಾಮಿ ಜೀವನ ಸಿಗುವುದಿಲ್ಲವಲ್ಲಾ ಎಂದು ಮನಸ್ಸು ಹೇಳಿತು. ಜನಸಂಖ್ಯೆ ಜಾಸ್ತಿ ಇರುವುದರಿಂದ ನಮ್ಮಲ್ಲಿ ಮೂಲಭೂತ ಸೌಕರ್ಯಗಳೇ ಸಾಕಾಗುವುದಿಲ್ಲ. ಒಟ್ಟಿನಲ್ಲಿ ಹಿಟಾಚಿ ಪಾರ್ಕ್‌ನ ಅನುಭವ ಚೆನ್ನಾಗಿತ್ತು. ಮತ್ತೆ ಅಲ್ಲಿರುವ ರೈಲು ಹತ್ತಿದೆವು. ನಮ್ಮ ಪಕ್ಕದಲ್ಲಿ ಯುವ ದಂಪತಿ ಕುಳಿತಿದ್ದರು. ಅಪ್ಪನ ಕೈಯಲ್ಲಿ ಪುಟ್ಟ ಬೊಂಬೆಯಂತಹ ಮಗು. ಅದಕ್ಕೆ ಒಂದು ತಿಂಗಳು ಇರಬಹುದು. ಗಾಳಿ ಚಳಿಯಲ್ಲಿ ಅದನ್ನು ಪಾರ್ಕಿಗೆ ತಿರುಗಾಡಲು ಕರೆದುಕೊಂಡು ಬಂದಿದ್ದರು. ಅದು ಕಣ್ಣೇ ಬಿಡಲಾರದು, ಮುಷ್ಟಿ ಬಿಡಿಸಲಾರದು. ಅಪ್ಪ ಅದನ್ನು ಮುದ್ದು ಮಾಡಿದ್ದೂ ಮಾಡಿದ್ದೇ! ಅಷ್ಟರಲ್ಲಿ ಪಾರ್ಕಿನ ಪ್ರವೇಶದ್ವಾರ ಬಂದಿತು. ನಾವು ರೈಲನ್ನು ಇಳಿದು ಹೊರಗೆ ನಡೆದೆವು. ನಂತರ ಬಸ್ಸನ್ನೇರಿ ಟೋಕಿಯೋ ಕಡೆಗೆ ಮುಖ ಮಾಡಿದೆವು. ನಮ್ಮ ಇಂದಿನ ಕಾರ್ಯಕ್ರಮ ಮುಗಿಯಿತು.

ಮಾರನೆಯ ದಿನ ನಾವು ಕ್ಯೊಟೋಗೆ ಪ್ರಯಾಣ ಮಾಡಬೇಕು. ಎರಡು ರಾತ್ರಿಗಳನ್ನು ಅಲ್ಲಿಯ ಹೋಟೆಲ್‌ನಲ್ಲಿ ಕಳೆದು ಮತ್ತೆ ಟೋಕಿಯೋಗೆ ಬರಬೇಕಿತ್ತು. ಎರಡು ದಿನಗಳಿಗಾಗುವಷ್ಟು ನಮ್ಮ ಬಟ್ಟೆ ಇತ್ಯಾದಿಗಳನ್ನು ಚಿಕ್ಕ ಸೂಟ್‌ಕೇಸ್‌ನಲ್ಲಿ ಜೋಡಿಸಿಕೊಂಡೆವು. ನಮ್ಮ ಇತರ ವಸ್ತುಗಳನ್ನು ದೊಡ್ಡ ಸೂಟ್‌ಕೇಸಿನಲ್ಲಿಟ್ಟು, ಟೋಕಿಯೋ ಹೋಟೆಲ್ ಲ್ಯುಮಿಯೆರ್‌ನಲ್ಲಿಯೇ ಅವರ ಲಗ್ಗೇಜ್‌ರೂಮಿನಲ್ಲಿ ಇಟ್ಟೆವು.

ಸಂಜೆ ಕ್ಯೊಟೋಗೆ ಹೊರಟೆವು. ಸಂಜೆ  6.30 ಗೆ ಬುಲೆಟ್ ರೈಲು ಇದ್ದು ರಾತ್ರಿ 8.45 ಕ್ಕೆ ಕ್ಯೋಟೋ ತಲುಪಿತು. ನಮ್ಮ ಚಿಕ್ಕ ಸೂಟ್‌ಕೇಸಿನೊಂದಿಗೆ ಕ್ಯೊಟೋ ನಗರಕ್ಕೆ ಹೊರಟೆವು. ಬಸ್ಸಿನಲ್ಲಿ ರೈಲುನಿಲ್ದಾಣ ತಲುಪಿದೆವು. ಅಲ್ಲಿಂದ ಮೊದಲು ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿ ನಂತರ ಕ್ಯೊಟೋಗೆ ಬುಲೆಟ್ ರೈಲಿನಲ್ಲಿ ಹೊರಟೆವು. ಕ್ಯೊಟೊ ನಗರ ನಮ್ಮ ಮೈಸೂರಿನ ಹಾಗೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿ ಎನ್ನಬಹುದು. ಹೊನ್‌ಶು ಎನ್ನುವ ದ್ವೀಪದ ಮಧ್ಯದಲ್ಲಿದೆ. ಜನಸಂಖ್ಯೆ ಸುಮಾರು 1.5 ಮಿಲಿಯ. ಮೊದಲು ಸಾವಿರ ವರ್ಷಗಳ ಕಾಲ ಕ್ಯೊಟೊ ಜಪಾನಿನ ರಾಜಧಾನಿಯಾಗಿತ್ತು. ಜಪಾನೀ ಭಾಷೆಯಲ್ಲಿ ಕ್ಯೊಮಿಯಾಕೊ ಎನ್ನುತ್ತಾರೆ. ಕ್ಯೊಟೋ ಎಂದರೆ ರಾಜಧಾನಿ ಎಂದು ಅರ್ಥ. ಇಲ್ಲಿ 1600 ಬೌದ್ಧ ದೇವಾಲಯಗಳು ಮತ್ತು 400 ಶಿಂಟೋ ಮಂದಿರಗಳು ಇವೆ. ನಮ್ಮಲ್ಲಿ ಕಾಶಿ, ಕಾಂಚೀಪುರಂನಲ್ಲಿ ಅನೇಕ ದೇವಸ್ಥಾನಗಳಿರುವ ಹಾಗೆ. ಜೊತೆಗೆ ಅರಮನೆಗಳು, ಉದ್ಯಾನಗಳೂ ಕ್ಯೊಟೋವನ್ನು ಸುಂದರಗೊಳಿಸಿವೆ. ಬಹಳ ಎತ್ತರದ ಗಗನಚುಂಬಿ ಕಟ್ಟಡಗಳನ್ನು ಇಲ್ಲಿ ಕಟ್ಟುವ ಹಾಗಿಲ್ಲ. ನಿಯಾನ್ ದ್ವೀಪದ ಬೋರ್ಡ್‌ಗಳಿಲ್ಲ. ಮೆಕ್‌ಡೊನಾಲ್ಡ್ ಕೂಡಾ ಕೆಂಪು ದೀಪ ಹಾಕಿಲ್ಲ. ಬದಲಿಗೆ ಕಂದುಬಣ್ಣದ ಬೋರ್ಡ್ ಹಾಕಿದೆ. ಇಲ್ಲಿರುವ ದೇವಸ್ಥಾನಗಳಲ್ಲಿ ಕಿಯೋಮಿಜು-ಡೇರ ಮತ್ತು ಕಿಂಕಾಕು-ಜಿ ಪ್ರಸಿದ್ಧವಾದವು. ಕಿಂಕಾಕು-ಜಿ ಗೆ ನಾವು ಭೇಟಿ ನೀಡಿದೆವು.

(ಮುಂದುವರಿಯುವುದು)

(ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33166  )

-ಡಾ.ಎಸ್.ಸುಧಾ, ಮೈಸೂರು

11 Responses

 1. ನಾಗರತ್ನ ಬಿ. ಅರ್. says:

  ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.ಒಂದೆರಡು ಸ್ಥಳೀಯ ಕಥೆಗಳು ನನಗೆ ಹೆಚ್ಚು ಮುದ ಕೊಟ್ಟಿತು.ಮುಂದಿನ ಸಂಚಿಕೆಗೆ ಕಾಯುವಂತೆ ಮಾಡುತ್ತದೆ ನಿಮ್ಮ ನಿರೂಪಣೆ.ಅಭಿನಂದನೆಗಳು ಮೇಡಂ.

 2. Padma Anand says:

  ನಿಮ್ಮ ಪ್ರವಾಸ ಕಥನದೊಂದಿಗೆ ನಾವೂ ಜಪಾನಿನ ಪಾರ್ಕಗಳನ್ನು ಸುತ್ತಾಡಿಕೊಂಡು ಬಂದತಾಯಿತು. ಮನಸ್ಸು ಮುದಹೊಂಡಿತು.
  ಜಪಾನಿನಲ್ಲಿ ಒಲಂಪಿಕ್ಸ್ ನಡೆಯುತ್ತಿರುವ ಈ ಸಮಯದಲ್ಲೇ “ಸುರಹೊನ್ನೆ” ಜಪಾನ್ ಪ್ರವಾಸ ಕಥನ ಪ್ರಕಟಿಸುತ್ತಿರುವುದು ಸಂದರ್ಭೋಚಿತವಾಗಿದೆ.
  ಅಭಿನಂದನೆಗಳು

 3. ನಯನ ಬಜಕೂಡ್ಲು says:

  Beautiful

 4. Anonymous says:

  ಚೆನ್ನಾಗಿ ಮೂಡಿ ಬರುತ್ತಿದೆ ಮೇಡಂ

 5. ಶಂಕರಿ ಶರ್ಮ says:

  ಪೂರಕ ಚಿತ್ರಗಳೊಂದಿಗಿನ ಸುಂದರ ನಾರ್ಸಿಸಸ್ ಹೂಗಳ ವೈಭವ ಮನತುಂಬಿತು..ತುಂಬಾ ಚಂದದ ಪ್ರವಾಸ ವರ್ಣನೆ.. ಧನ್ಯವಾದಗಳು ಮೇಡಂ

 6. Vathsala says:

  ಹೂಗಳ ಸಾಮ್ರಾಜ್ಯವನ್ನು ಅದರ ಹಿನ್ನೆಲೆಯೊಂದಿಗೆ
  ವಿವರಿಸಿರುವ ರೀತಿ ಮನಮುಟ್ಟುವಂತೆ ಭಾಸವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: