ಮೀಟೂ ಗೆ ಒಂದು ಟೂ…

Share Button

ಆಫೀಸಿನ ಫೈಲಿನಲ್ಲಿ ತಲೆ ಹುದುಕಿಸಿಕೊಂಡು ಕೆಲಸದಲ್ಲಿ ಮಗ್ನನಾಗಿದ್ದ ರಾಮನಿಗೆ ಯಾರದೋ ನೆರಳು ತನ್ನ ಬಳಿ ಬಿದ್ದಂತಾಗಿ ತಲೆಯೆತ್ತಿದ. ಅಟೆಂಡರ್ ಲಿಂಗಪ್ಪ ”ಸಾರ್,.. ಎಲ್ಲರೂ ಮನೆಗೆ ಹೋದರು. ನೀವಿನ್ನೂ … ಅದೇನೇ ಇದ್ದರೂ ನಾಳೆ ಮಡುವಿರಂತೆ. ಈಗ ಹೊರಡಿ ಸಾರ್. ಇವತ್ತು ನಾನೂ ಒಸಿ ಬೇಗ ಮನೆಗೆ ಹೋಗಬೇಕಿತ್ತು. ಮನೇಲಿ ಚಿಕ್ಕಮಗೀಗೆ ಹುಷಾರಿಲ್ಲ ಸಾರ್. ತಪ್ಪು ತಿಳೀಬೇಡಿ” ಎಂದ.

”ಓ..ಸಾರಿ ಲಿಂಗಪ್ಪ. ಬಾಸ್ ಊರಲ್ಲಿಲ್ಲವಲ್ಲಾ, ನನ್ನದೇ ಜವಾಬ್ದಾರಿ ಅಲ್ವೇ. ಟೈಂ ಹೋಗಿದ್ದೇ ಗೊತ್ತಾಗಲಿಲ್ಲ. ಎಲ್ಲಾ ಸರಿಯಾಗಿ ನೋಡಿ ಬಾಗಿಲುಗಳನ್ನು ಹಾಕು” ಎಂದಂದು ತನ್ನ ಹೆಗಲಚೀಲ ತಗುಲು ಹಾಕಿಕೊಂಡು ರೂಮಿನಿಂದ ಹೊರಬಂದ ರಾಮ.

ಮೆಟ್ಟಿಲಿಳಿದು ಕಾಂಪೌಂಡಿನೊಳಗೆ ನಿಲ್ಲಿಸಿದ್ದ ಗಾಡಿಯನ್ನು ತೆಗೆದು ಹೊರ ಬರುವಷ್ಟರಲ್ಲಿ ಮೊಬೈಲ್ ಸದ್ದುಮಾಡಿತು. ನೋಡಿದರೆ ಮನೆಯಿಂದ. ”ಅದೇ ಎಂದಿನಂತಹ ಪ್ರಶ್ನೆ ಇರಬೇಕು ಆಹಾ ! ಯಾರಿಗೂ ಇಲ್ಲದ ಕೆಲಸ ಮಾಡ್ತಿದ್ದೀರಾ? ಬರೋ ಸಂಬಳವೇನು ಹೆಚ್ಚಾಗುತ್ತಾ”? ಇವಳು ಯಾವಾಗಲೂ ಹೀಗೇ ಎಂದುಕೊಳ್ಳುತ್ತಾ ಮೊಬೈಲನ್ನು ಕಿವಿಗೆ ಆನಿಸಿ ಯಾವ ಪ್ರಶ್ನೆಗೆ ಏನು ಉತ್ತರ ಹೇಳಬೇಕೆಂದು ಯೋಚಿಸುವಷ್ಟರಲ್ಲಿ ”ಹಲೋ ನಾನ್ರೀ ಲತಾ, ನಿಮಗಿನ್ನೂ ಆಫೀಸು ಬಿಟ್ಟಿಲ್ಲವೇ?”ಎಂದಳು.

”ಹೊರಟಿದ್ದೀನಿ ಮಹಾರಾಯ್ತೀ, ಹಾಗೇ ಮಾರ್ಕೆಟ್ಟಿಗೆ ಹೋಗಿ ಬೆಳಗ್ಗೆ ನೀನು ಕೊಟ್ಟಿದ್ದೀಯಲ್ಲಾ ಪಟ್ಟಿ ಅದರಲ್ಲಿರೋದನ್ನೆಲ್ಲ ತೆಗೆದುಕೊಂಡು ಬರ್‍ತೀನಿ ”ಎಂದ.
”ಅವೆಲ್ಲಾ ಏನೂ ತರೋದು ಬೇಡ, ವೆಂಕಣ್ಣ ಊರಿನಿಂದ ಮಧ್ಯಾನ್ಹವೇ ಬಂದರು. ಅವರು ತಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿಗಳನ್ನು ತಂದಿದ್ದಾರೆ. ಹದಿನೈದು ದಿನಕ್ಕಾಗುವಷ್ಟು. ಚಿಂತೆಯಿಲ್ಲ” ಎಂದಳು.

‘ಓ ! ವೆಂಕಿ ಬಂದಿದ್ದಾನೆಯೇ? ಅದೇನು ಫೋನಿಲ್ಲ ಮೆಸ್ಸೇಜಿಲ್ಲ ಇದ್ದಕ್ಕಿದ್ದಂತೆ?’
‘ಹೂನ್ರೀ, ಅದೇನೋ ಬಹಳಾ ಮುಖ್ಯವಾದ ವಿಷಯವಂತೆ ನಿಮ್ಮೆದುರಿಗೆ ಹೇಳಬೇಕಂತೆ. ಅದಕ್ಕೇ ನೇರವಾಗಿ ಬಂದಿದ್ದೇನೆ ಎಂದರು. ಆದಷ್ಟೂ ಬೇಗ ಮನೆಗೆ ಬನ್ನಿ’ ಎಂದು ಕಾಲ್ ಕಟ್ ಮಾಡಿದಳು ರಾಮನ ಮನದನ್ನೆ.

ಮನೆಯ ಕಡೆ ಹೊರಟ ರಾಮನ ಮನಸ್ಸಿನಲ್ಲಿ ತನ್ನ ಗೆಳೆಯ ವೆಂಕಿಯ ಬಾಲ್ಯದ ಸಹವಾಸದ ನೆನಪಿನ ಸುರುಳಿ ಬಿಚ್ಚತೊಡಗಿತು. ಪ್ರಾಥಮಿಕ ಶಾಲಾ ಹಂತದಿಂದ ಪದವಿಯವರೆಗೆ ಎಡಬಿಡದೆ ವ್ಯಾಸಂಗ ಮಾಡಿ ಪದವಿ ಗಳಿಸಿದ ರಾಮ. ಸಾರ್ವಜನಿಕ ಸೇವಾ ಇಲಾಖೆಯವರು ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮೊದಲ ದರ್ಜೆ ಸಹಾಯಕನಾಗಿ ನೌಕರಿ ಗಿಟ್ಟಿಸಿಕೊಂಡು ಗೃಹಸ್ಥಾಶ್ರಮ ಸ್ವೀಕರಿಸಿ ನೆಲೆಯೂರಿದ್ದ. ಆದರೆ ವೆಂಕಿಯ ಸಾಹಸಗಾಥೆ ವಿಭಿನ್ನವಾದದ್ದು. ಕಾಲೇಜಿನ ದಿನಗಳಲ್ಲಿ ಯಾವಾಗಲೂ ಏನಾದರೂ ಗೀಚುತ್ತಿದ್ದ. ಅದನ್ನು ಕವಿತೆ, ಕಥೆ, ಎಂದು ಹೇಳುತ್ತಿದ್ದ. ಯಾರನ್ನೋ ಹಿಡಿದು ಸಿನಿಮಾ ಎಂಬ ಮಾಯಾ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದ. ಅವನು ರಚಿಸುತ್ತಿದ್ದ ಗೀತೆಗಳಲ್ಲಿ ಕನ್ನಡ ಭಾಷೆಯ ಪದಗಳಿಗಿಂತ ಅನ್ಯ ಭಾಷಾ ಪದಗಳೇ ಹೆಚ್ಚಾಗಿರುತ್ತಿದ್ದವು. ಅವುಗಳನ್ನು ಅಬ್ಬರದ ವಾದ್ಯಗಳ ಸಂಗೀತದ ಹಿನ್ನೆಲೆಯಲ್ಲಿ ಹಾಡಿದರೆ ಏನೂ ಅರ್ಥವಾಗುವಂತಿರಲಿಲ್ಲ. ಅದು ಹೇಗೋ ಹೊಸಪೀಳಿಗೆಯ ಹೈಕಳುಗಳ ಬಾಯಲ್ಲಿ ಪ್ರಚಾರಗೊಂಡು ಪ್ರಸಿದ್ಧವಾಗುತ್ತಿದ್ದುದು ಒಂದು ಸೋಜಿಗದ ಸಂಗತಿಯಾಗಿತ್ತು.

ಇದೆಲ್ಲಕ್ಕೂ ಮಿಗಿಲಾಗಿ ಪ್ರಸಿದ್ಧ ನಿರ್ಮಾಪಕರೊಬ್ಬರ ಪುತ್ರಿ ಇವನ ಗೀತೆಗಳ ಅಭಿಮಾನಿಯಾಗಿದ್ದೇ ಅಲ್ಲದೆ ಇವರಿಬ್ಬರ ನಡುವೆ ಪ್ರೀತಿಯೇ ಬೆಳೆದುಬಿಟ್ಟಿತು. ಹಿರಿಯರನ್ನೂ ಒಪ್ಪಿಸಿ ಅವಳು ಇವನ ಕೈ ಹಿಡಿದೇಬಿಟ್ಟಳು. ವೆಂಕಿಯ ಬದುಕಿಗೆ ಅದೃಷ್ಟ ದೇವತೆಯಾದಳು. ಅನಂತರ ನಡದದ್ದೆಲ್ಲವೂ ಊಹೆಗೂ ನಿಲುಕದ್ದು. ಯಾವುದೋ ಮೂಲೆಯಲ್ಲಿ ಮುಸುಗಿಕ್ಕಿ ಮಲಗಿದ್ದ ಕಥೆಗೆ ಬೆಳಕು ಬಂದು ಸಿನಿಮಾ ತೆಗೆಯಲು ತಯಾರಾದರು. ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಯಿತು. ಬಹಳ ಖುಷಿಯಾಗಿ ಗೆಳೆಯ ರಾಮನೊಡನೆ ಎಲ್ಲವನ್ನೂ ಹೇಳಿದ್ದ. ಆದರೆ ಒಂದೆರಡು ವಾರಗಳ ಹಿಂದೆ ಮನೆಗೆ ಭೇಟಿಕೊಟ್ಠಿದ್ದಾಗ ಆ ಸಿನಿಮಾ ಬಗ್ಗೆ ಏಕೋ ಚಕಾರಕೂಡ ಎತ್ತಲಿಲ್ಲ. ರಾಮನೇ ಕೆದಕಿ ಕೇಳಿದ್ದಕ್ಕೆ ಒಂದು ನಿಡಿದಾದ ನಿಟ್ಟುಸಿರುಬಿಟ್ಟು ”ಹೂ..ಎಲ್ಲಾ ತಯಾರು ಮಾಡಿಕೊಂಡಿದ್ದೆವು. ಹಾಳಾದ್ದು ಈ ಮೀಟೂ ಸಮಸ್ಯೆಯಿಂದ ಹಾಳಾಗಿ ಹೋಯ್ತು” ಎಂದಿದ್ದ.

”ಅದಕ್ಕೂ ಇದಕ್ಕೂ ಏನು ಸಂಬಂಧವಿದೆ?”

”ಅದೇ ರಾಮ, ಹೀರೋಯಿನ್ ಓರಿಯೆಂಟೆಡ್ ಕಥೆ ನನ್ನದು. ಒಬ್ಬರಲ್ಲ ಇಬ್ಬರಲ್ಲ ಮೂರುಜನ ಹೀರೋಯಿನ್ನುಗಳ ಕಥೆ. ಪ್ರಸಿದ್ಧರಾಗಿರೋರನ್ನು ಹಾಕ್ಕೊಳ್ಳೋಣಾ ಅಂದರೆ, ಅವರೆಲ್ಲಾ ಮೀಟೂ ಸುದ್ಧಿ ಮಾಡುತ್ತಾ ಕೋರ್ಟು ಕಛೇರಿ ಅಲೀತಾ ಇದ್ದಾರೆ. ಹೊಸಬರನ್ನು ಹಾಕ್ಕೊಳ್ಳೋಣ ಅಂದರೆ, ಅವರ ಜೊತೆ ಆಕ್ಟ್ ಮಾಡೋಕೆ ಹೀರೋಗಳು ಸಾರ್ ಮೊದಲು ಹೀರೋಯಿನ್ನ್ ಪಾತ್ರ ಮಾಡೋರಿಂದ ಮುಂದೆ ಮೀಟೂ ಕೇಸ್ ಹಾಕೊಲ್ಲಾಂತ ಅಗ್ರೀಮೆಂಟಿನಲ್ಲೇ ಬರೆಸಿಕೊಳ್ಳಿ. ಇದರಿಂದ ನಮಗೆ ನಿಮಗೆ ಇಬ್ಬರಿಗೂ ಒಳ್ಳೆಯದು ಅಂತಾರೆ. ತಲೆಕೆಟ್ಟು ಗೊಬ್ಬರ ಆಗಿಬಿಟ್ಟಿದೆ ಕಣೋ.. ಕೈಯಿಗೆ ಬಂದ ತುತ್ತು ಬಾಯಿಗಿಲ್ಲ ಅನ್ನೋ ಹಾಗೆ ಆಗಿದೆ” ಎಂದು ಪೇಚಾಡಿಕೊಂಡಿದ್ದ. ಈಗ ನನ್ನ ಹೆಂಡತಿ ಬೇಗ ಬನ್ನಿ ನಿಮ್ಮ ಗೆಳೆಯ ಕಾಯುತ್ತಿದ್ದಾರೆ. ಅದೇನೋ ವಿಷಯ ನಿಮಗೇ ಹೇಳಬೇಕಾದೆಯಂತೆ ಎಂದು ಫೋನ್ ಮಾಡಿ ಕುತೂಹಲ ಕೆರಳಿಸಿದ್ದಾಳೆ. ಹೋಡೋಣ ಹೇಗಿದ್ರೂ ಹೊರಟು ಬಂದಾಯಿತಲ್ಲ ಎಂದು ವಾಸ್ತವಕ್ಕೆ ಬಂದ. ರಾಮನಿಗೆ ಮನೆಯ ಗೇಟಿನ ಹತ್ತಿರವೇ ಕಾಯುತ್ತಾ ನಿಂತಿದ್ದ ವೆಂಕಿ ಕಾಣಿಸಿದ.

”ಓಹೋ ! ರಾಯರು ಬಂದರು ಗೀತಾವೈನಿ…ಅಲ್ಲಲ್ಲ ನಿಷ್ಠಾವಂತ ಸರ್ಕಾರದ ಸೇವಕ ಬಂದ” ಎಂದು ಗೇಲಿ ಮಾಡುತ್ತಲೇ ಗೇಟನ್ನು ತೆಗೆದು ಒಳಗೆ ಬರಲು ಅನುವು ಮಾಡಿಕೊಟ್ಟ ವೆಂಕಿ ಉರುಫ್ ವೆಂಕಟೇಶ.

”ಏನು ಮಾಡೋದಪ್ಪ, ಸಿಕ್ಕಿರೋ ಕೆಲಸದಲ್ಲಿ ನಿಯತ್ತಾಗಿ ದುಡಿದು ನಾಲ್ಕು ಜನರ ಹತ್ತಿರ ಸೈ ಅನ್ನಿಸಿಕೊಂಡರೆ ತಾನೇ ಹುದ್ದೆಯಲ್ಲಿ ಮೇಲೆ ಬರೋದು. ಹೂ ನಂದಿರಲಿ ನಿಂದೇನು ಕಥೆ? ಹೋದ ಸಾರಿ ಸಿಕ್ಕಾಗ ಆಕಾಶವೇ ತಲೆಮೇಲೆ ಬಿದ್ದಂತೆ ಅತ್ತಿದ್ದೆ”.

‘ಹೂನಪ್ಪಾ ಗೆಳೆಯಾ, ನಾನು ಊಹಿಸಲಾಗದಷ್ಟು ಬದಲಾವಣೆಯಾಗಿದೆ. ಸಕತ್ತು ಖುಷಿಯಾಗಿದೆ. ಏನೇ ಆದರೂ ನಿನ್ನ ಹತ್ತಿರ ಹಂಚಿಕೊಳ್ಳೋದು ತಾನೇ. ಅದಕ್ಕೇ ಬಂದುಬಿಟ್ಟೆ. ಬೇಗ ನೀನು ಫ್ರೆಷ್ ಆಗು. ವೈನಿ ಕೇಸರಿಬಾತ್ ಪಕೋಡ ಮಾಡಿದ್ದಾರೆ. ಸಕತ್ತಾಗಿದೆ. ತಿಂದು ಸ್ವಲ್ಪ ಹಾಗೇ ಹೊರಗೆ ಹೋಗೋಣ. ಮಕ್ಕಳ ಮುಂದೆ ಮಾತು ಬೇಡ. ಅಲ್ಲೇ ಹೇಳ್ತೀನಿ” ಅಂತ ಕುತೂಹಲ ಕೆರಳಿಸಿದ.

ಹೂಂ ಇವನ್ಯಾವಾಗಲೂ ಹೀಗೇ. ಚಿಕ್ಕಂದಿನ ಗೆಳೆಯ, ನಿರಹಂಕಾರಿ, ನಿರುಪದ್ರವಿ, ಎಂದುಕೊಂಡು ಅವನು ಹೇಳಿದಂತೆ ಎಲ್ಲವನ್ನೂ ಮುಗಿಸಿ ರೆಡಿಯಾದೆ. ಅದಕ್ಕಾಗಿ ಕಾಯುತ್ತಿದ್ದ ವೆಂಕಿ ಈಗ ಸರಿಯಾಯಿತು ”ನೋಡು, ವೈನೀ, ನಾವು ಹೀಗೇ ಸ್ವಲ್ಪ ಹೊರಗೆ ಅಡ್ಡಾಡಿಕೊಂಡು ಬರುತ್ತೇವೆ. ಹೊರಗಿನಿಂದ ಏನಾದರೂ ತರೋದಿದೆಯಾ? ”ಎಂದು ಕೇಳಿದ.

”ಏನೂ ಇಲ್ಲ ವೆಂಕಣ್ಣಾ, ಬೇಗ ಬಂದುಬಿಡಿ, ನಿಮಗಿಷ್ಟವಾದ ಅವರೇಕಾಳು ಸಾರು, ಮುದ್ದೆ ಮಾಡ್ತೀನಿ” ನನ್ನವಳ ವಾಕ್ಯ ಮುಗಿಯುವುದರೊಳಗೇ ವೆಂಕಿ ಬಾಯಿಹಾಕಿ ”ಏನೂ ಬೇಡ ವೈನೀ, ಸಾಯಂಕಾಲದ ತಿಂಡಿಯೇ ಹೆಚ್ಚಾಗಿದೆ. ಅನ್ನ, ತಿಳೀಸಾರು ಸಾಕು. ಅದೇ ಅವರೇಕಾಳನ್ನು ಹಾಕಿ ನಾಳೆ ಬೆಳಗ್ಗೆ ಉಪ್ಪಿಟ್ಟು ಮಾಡಿಬಿಡಿ. ತೆಗೆದುಕೊಂಡು ಹೊರಟುಬಿಡ್ತೀನಿ” ಎಂದು ಅವಳ ಉತ್ತರಕ್ಕೂ ಕಾಯದೇ ನನ್ನ ಕೈಹಿಡಿದು ಹೊರಕ್ಕೆ ಅಡಿಯಿಟ್ಟ.
ವಿಧಿಯಿಲ್ಲದೇ ನಾನು ಅವನನ್ನು ಹಿಂಬಾಲಿಸಿದೆ. ಮನೆಯ ಎದುರಿಗಿನ ಪಾರ್ಕಿನಲ್ಲಿ ಒಂದೆರಡು ಸುತ್ತುಹಾಕಿ ಅಲ್ಲೇ ಇದ್ದ ಬೆಂಚಿನಮೇಲೆ ಕುಳಿತೆವು. ಒಂದೈದು ನಿಮಿಷ ಒಬ್ಬರಿಗೊಬ್ಬರು ಮಾತನಾಡಲಿಲ್ಲ.


ಆಗ ನಾನೇ ಮೌನಮುರಿದು ‘ಲೋ..ಮಾರಾಯಾ ಏನಾಯ್ತು ಒಳ್ಳೆ ಸಸ್ಪೆನ್ಸಿನಲ್ಲಿ ಇಟ್ಟಿದ್ದೀಯಲ್ಲ. ಬೇಗ ಹೇಳೋ ವಿಷಯ ಏನೂಂತ’
‘ಹೂ..ಅದೇ ನೋಡು, ಹೋದಸಾರಿ ಬಂದಾಗ ಹೇಳಿದ ವಿಷಯ ಜ್ಞಾಪಕವಿದೆಯಾ?’
‘ಹೋ.. ನೆನಪಿಗೆ ಬರದೇ ಏನು. ಅದನ್ನೇ ದಾರಿಯುದ್ದಕ್ಕೂ ಯೋಚಿಸಿಕೊಂಡೇ ಬಂದೆ. ಹಾ ! ಈಗೇನಾಯ್ತು?’

‘ಸಕ್ಸಸ್ ಕಣೋ, ಮುಂದಿನವಾರವೇ ಚಿತ್ರದ ಮುಹೂರ್ತ. ನಿನ್ನನ್ನು ಅದಕ್ಕೆ ಇನ್ವೈಟ್ ಮಾಡೋಣಾಂತ ಬಂದಿರೋದು’ ಎಂದ.
‘ಹೌದೇ? ಅದೇನೋ ಹೀರೋಯಿನ್ ಓರಿಯೆಂಟೆಡ್ ಕಥೆ, ಈ ಮೀಟೂ ಗಲಾಟೆ, ಅಗ್ರೀಮೆಂಟು, ಹಾಗೆಹೀಗೆ ಅಂತೆಲ್ಲಾ ಹೇಳಿದ್ದೆಲ್ಲೋ’
”ಹೂಂ..ನಾನು ಹೇಳಿದ್ದೆಲ್ಲಾ ನಿಜವೇ. ಆದರೆ ಈಗ ನನ್ನ ಕಥೇನೇ ಬದಲಾಯಿಸಿ ಹೀರೋ ಓರಿಯೆಂಟೆಡ್ ಮಾಡಿಬಿಡಿ ಅಳಿಯಂದಿರೇ, ಮುಂದಿನದೆಲ್ಲಾ ನಾನು ನೋಡಿಕೊಳ್ತೀನಿ ಅಂದ್ರು ನಮ್ಮಾವ. ಹಾಗೇ ಬದಲಾಯಿಸಿಬಿಟ್ಟೆ. ಅದರಲ್ಲಿ ಬರುವ ಒಂದೆರಡು ಫೀಮೇಲ್ ಕ್ಯಾರೆಕ್ಟರುಗಳಿಗೆ ನಮ್ಮ ಮಾವನವರು ಒಳ್ಳೆ ಮಾಸ್ಟರ್‌ಪ್ಲಾನ್ ಮಾಡಿದ್ದಾರೆ. ಚೆನ್ನಾಗಿ ಟ್ರೈನಿಂಗಾಗಿರೋ ರೋಬೋಗಳನ್ನು ತರಿಸುತ್ತಾರಂತೆ. ಡೈರೆಕ್ಟರನ್ನು ಒಪ್ಪಿಸಿಬಿಟ್ಟಿದ್ದಾರೆ. ಇನ್ನೂ ಕೇಳಿಲ್ಲಿ, ಬಿಡುಗಡೆಯ ದಿವಸವೇ ಅದೆಷ್ಟೋ ಲೆಕ್ಕವಲ್ಲದಷ್ಟು ಸಂಖ್ಯೆಯ ಥಿಯೇಟರ್‌ಗಳಲ್ಲಿ ಪ್ರದರ್ಶನ ಆಗುವಂತೆ ಮಾಡುತ್ತಾರಂತೆ. ಅದರಿಂದ ಚಿತ್ರ ಒಂದೇ ವಾರ ನಡೆದರೂ ಬಂಡವಾಳಕ್ಕೆ ಮೋಸವಿಲ್ಲವಂತೆ. ಇದನ್ನೆಲ್ಲ ನಿನಗೆ ನಾನು ಫೋನಿನಲ್ಲಿ ಹೇಳಬಹುದಿತ್ತು. ಆದರೆ ನಿನ್ನನ್ನು ನೋಡಿ ಹೇಳಿ ಸಂತೋಷವನ್ನು ಹಂಚಿಕೊಳ್ಳೋಣವೆಂದು ಬಂದೇಬಿಟ್ಟೆ. ಮುಹೂರ್ತಕ್ಕೆ ಬರ್ತೀ ತಾನೇ?” ಎಂದ.

‘ಹೂನಪ್ಪಾ..ನಿಜವಾಗಲೂ ಬ್ರಹ್ಮ ನಿನ್ನ ಹಣೆಬರಹವನ್ನು ಬರೆಯುವಾಗ ತಲೆಯಿಲ್ಲದೇ ಬದುಕುವ ಕಲೆ ಹೇಗೆಂದು ಪುರುಸೊತ್ತಾಗಿ ಬರೆದವನೆ ‘ಎಂದು ಮನಸ್ಸಿನಲ್ಲೇ ಅಂದುಕೊಂಡ.
‘ಏನೋ ರಾಮ, ಏನೋ ಅಂದಹಾಗಿತ್ತು’ ಎಂದ ವೆಂಕಿ.

”ಏನಿಲ್ಲ, ಬಾ..ಬೆಳಗ್ಗೆ ಬೇಗ ಹೋಗಬೇಕು ಅಂದ್ಯೆಲ್ಲ, ಮನೆಗೆ ಹೋಗಿ ಸೇರಿದಷ್ಟು ಊಟಮಾಡಿ ಮಲಗೋಣವೆಂದೆ ಅಷ್ಟೆ” ಎನ್ನುತ್ತಾ ಮನೆಯಕಡೆಗೆ ಗೆಳೆಯನ ಜೊತೆ ಹೆಜ್ಜೆ ಹಾಕಿದ ರಾಮ.

-ಬಿ.ಆರ್.ನಾಗರತ್ನ, ಮೈಸೂರು

9 Responses

 1. Padma Anand says:

  ಮೀ ಟೂ ಅಪವಾದಕ್ಕೆ ಹೆದರಿ ರೋಬೋಟ್ ಗಳನ್ನು ಹಾಕಿಕೊಂಡು ಸಿಜಿಮಾ ಮಾಡುವ ಪರಿಕಲ್ಪನೆ ಸೊಗಸಾಗಿದೆ. ಕಥೆ ಸರಾಗವಾಗಿ, ಕುತೂಹಲದಿಂದ ಓದಿಸಿಕೊಂಡಿತು.
  ಅಭಿನಂದನೆಗಳು ಗೆಳತಿ.

 2. ನಯನ ಬಜಕೂಡ್ಲು says:

  Nice

 3. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಪ್ರಿಯ ಗೆಳತಿ ಪದ್ಮಾ ಹಾಗೂ ನಯನಾ ಮೇಡಂ

 4. ಶಂಕರಿ ಶರ್ಮ says:

  ಆಹಾ..ರೋಬೋಟ್ ಹೀರೋಯಿನ್..ಒಳ್ಳೇ ಐಡಿಯಾದ ಕಥೆ ಚೆನ್ನಾಗಿದೆ..

 5. Vathsala says:

  ನಾಗರತ್ನರವರೆ, ನಿಮ್ಮ ಬರಹವನ್ನು ಯಾರಾದರೂ
  ನಿರ್ದೇಶಕರು ನೋಡಿದರೆ ಅವರ ಚಿತ್ರಕ್ಕೆ ನಿಮ್ಮ
  ಕಥೆಯನ್ನೇ ಕಥಾವಸ್ತುವನ್ನಾಗಿ ಮಾಡಿಕೊಳ್ಳುವ ಸಂಭವ
  ಜಾಸ್ತಿ ಇದೆ. ಯಾವುದಕ್ಕೂ ಪೇಟೆಂಟ್ ತೆಗೆದುಕೊಳ್ಳಿ.

 6. Malathi says:

  ಕಥೆ ಕಲ್ಪನೆ ಚೆನ್ನಾಗಿದೆ.

 7. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ

 8. ವಿದ್ಯಾ says:

  ಪ್ರಸ್ತುತ ‌ಪರಿಸ್ಥಿತಿಗೆ ಒಳ್ಳೆಯ ಪರಿಹಾರ ಕೊಟ್ಟಿದ್ದೀರಿ
  ಅಕ್ಕಾ

 9. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಪ್ರಿಯ ಸೋದರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: