ಮಣಿಪಾಲದ ಮಧುರ ನೆನಪುಗಳು..ಭಾಗ 3

Share Button

 ಕುಂಜೂರು ಚೌಕಿ ಮನೆ:

ಶೃಂಗೇರಿ ಭಾರತೀ ಬೀದಿಯ ಮನೆಯ ವೈಭವವನ್ನು ವೀಕ್ಷಿಸಿ ಹೊರಬಂದಾಗ ಕುದುರೆ ಸಾರೋಟು ಸಿದ್ಧವಾಗಿತ್ತು ತಾನೇ.? ನಾವೇನೂ ಅದರಲ್ಲಿ ಕುಳಿತುಕೊಳ್ಳುವ ಸಾಹಸ ಮಾಡಲಿಲ್ಲವೆನ್ನಿ. ಮುಂದಕ್ಕೆ ಕಾಣ್ತಾ ಇದೆ.. ಕುಂಜೂರು ಚೌಕಿ ಮನೆ. ಅದರೊಳಗೆ ಏನೇನಿದೆ ನೋಡೋಣ ಬನ್ನಿ.‌.‌.

ಉಡುಪಿ- ಮಂಗಳೂರು ಹೆದ್ದಾರಿಯಲ್ಲಿರುವ ಎರ್ಮಾಳು ಎಂಬಲ್ಲಿಗೆ ಸಮೀಪದ ಕುಂಜೂರಿನಲ್ಲಿದ್ದ  ತುಳು ಶಿವಳ್ಳಿ ಮಾಧ್ವ ಸಮುದಾಯದವರ ಸುಮಾರು 204ವರ್ಷಗಳಷ್ಟು ಹಳೆಯ ಈ ಚೌಕಿ ಮನೆ ಸುಮಾರು 1816ನೇ  ಇಸವಿಯ ಕಾಲದ್ದಾಗಿದೆ. ಕೇರಳ ಶೈಲಿಯ ಕಲಾಕೌಶಲ್ಯದಿಂದ ಒಡಗೂಡಿದ ಎರಡಂತಸ್ತಿನ, ನಾಲ್ಕು ಚೌಕಿಯ ದೊಡ್ಡದಾದ ಅತ್ಯಂತ ಸುಂದರ ಮನೆ ಮನಸೆಳೆಯುವಂತಿದೆ. ಮನೆಯ ಯಥಾಸ್ಥಿತಿಯನ್ನು ಮತ್ತು ಅದನ್ನು ಬಿಚ್ಚುವ ಪ್ರಕ್ರಿಯೆಯ ಪ್ರತೀ ಹಂತವನ್ನು ವೀಡಿಯೋ ದಾಖಲೆ ಮಾಡಿ ಅದನ್ನು ಯಥಾವತ್ತಾಗಿ ಇಲ್ಲಿಗೆ ತಂದು ಮರುನಿರ್ಮಿಸಲಾಗಿದೆ. ಈ ಮನೆಯ ಮೂಲ ನಿರ್ಮಾಣದ ಕುರಿತು ಹೇಳುವುದಾದರೆ; ಕುಂಜೂರಲ್ಲಿ ವಾಸವಾಗಿದ್ದ ಶಿವಳ್ಳಿ ಬ್ರಾಹ್ಮಣ ಮನೆತನದವರು, ಕೇರಳದ ದೇಗುಲದಲ್ಲಿ ಪೂಜಾಕಾರ್ಯ ಕೈಗೊಳ್ಳಲು ಇಲ್ಲಿಂದ  ವಲಸೆ ಹೋಗಿದ್ದರು. ಆ ಬಳಿಕ, ಕುಟುಂಬದ ಸದಸ್ಯರೋರ್ವರಿಗೆ ಹುಟ್ಟೂರಲ್ಲಿ ಸ್ವಂತಕ್ಕಾಗಿ ಮನೆಯೊಂದನ್ನು ಕಟ್ಟುವ ಆಸೆಯಾಯಿತು. ಅವರು ಕೇರಳದಲ್ಲಿ ವಾಸ್ತವ್ಯವಿದ್ದುದರಿಂದ, ಕುಂಜೂರಿನಲ್ಲಿ ಕೇರಳದ ಶೈಲಿಯಲ್ಲಿಯೇ ಮನೆಯನ್ನು ಕಟ್ಟುತ್ತಾರೆ. ಹೆಸರೇ  ಸೂಚಿಸುವಂತೆ ಇದು ಚೌಕಾಕಾರದಲ್ಲಿರುವ ಮನೆ.

ಕುಂಜೂರು ಚೌಕಿ ಮನೆಯ ಸೊಬಗು-1

ಹೊರ ಅಂಗಳದಿಂದ ಈ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಹೊರಗಿನ ಚಿಕ್ಕ ವರಾಂಡದ ಛಾವಣಿ ಮೇಲೆ ಕಟ್ಟಿರುವ ಬಹಳ ದೊಡ್ಡ ಗಾತ್ರದ ತೆಂಗಿನಕಾಯಿಯೊಂದು ಮನೆಯನ್ನು ಕೆಟ್ಟ ದೃಷ್ಟಿಯಿಂದ  ಕಾಪಾಡಲು ಪಣತೊಟ್ಟಂತೆ ತೂಗಾಡುತ್ತಿದೆ. ಎದುರುಗಡೆಗೆ, ಹಳ್ಳಿಯ ಸಂಸ್ಕೃತಿಗೆ ಅನುಗುಣವಾಗಿ, ತಾಮ್ರದ ತಟ್ಟೆಯಲ್ಲಿ ತಾಂಬೂಲ ಮೆಲ್ಲಲು ಬೇಕಾಗುವಂತಹ ಸಾಮಗ್ರಿಗಳನ್ನು ಓರಣವಾಗಿ ಜೋಡಿಸಿಡಲ್ಪಟ್ಟಿದೆ. ಕಲಾತ್ಮಕವಾದ ಅಡಕತ್ತರಿ, ನಾಜೂಕಾದ ಸುಣ್ಣದ ಡಬ್ಬ ಇವುಗಳು ಬಹಳ ಆಕರ್ಷಕವಾಗಿದ್ದು; ಅವುಗಳನ್ನೊಮ್ಮೆ ಕೈಯಲ್ಲಿ ಹಿಡಿದು ನೋಡಿ ಖುಷಿಪಡಲು ಮನಸ್ಸಾಗುವುದು ಸುಳ್ಳಲ್ಲ. ಒಳಗಡೆಗೆ ಹೋಗಲು ಪುಟ್ಟದಾದ ಒಂದೇ ಬಾಗಿಲು. ಆದರೆ ಒಳಗಡೆ ಅಡಿ ಇಡುತ್ತಿದ್ದಂತೆಯೇ ನವಿರು ಗಂಧದ ಸುವಾಸನೆಯ ಅನುಭವವಾಗುವುದರೊಂದಿಗೆ, ಕಣ್ಣೆದುರಿಗೆ ನಾವು ಕಾಣುವ ದೃಶ್ಯ..ಆಹಾ.. ಅತ್ಯದ್ಭುತ..ನಂಬಲೇ ಸಾಧ್ಯವಿಲ್ಲ! ಬಹು ವಿಸ್ತಾರವಾಗಿ ಹರಡಿಕೊಂಡಿರುವ, ಅತ್ಯಂತ ಕಲಾತ್ಮಕ ಚೌಕಾಕಾರದ ಛಾವಣಿ..ಜಗುಲಿ. ಗಟ್ಟಿ ಮುಟ್ಟಾದ  ಉರುಟಾದ ಕಂಬಗಳೆಲ್ಲವೂ ಫಳಫಳ ಹೊಳೆಯುತ್ತವೆ. ಅಷ್ಟು ಚೆನ್ನಾಗಿ ಜೋಪಾನ ಮಾಡಿರುವುದನ್ನು ಗಮನಿಸಿದಾಗ ನಿಜವಾಗಿಯೂ ಆಶ್ಚರ್ಯವೆನಿಸುತ್ತದೆ. ಮನೆಯ ಮಧ್ಯಭಾಗದಲ್ಲಿ ನೇರವಾಗಿ ಬೀಳುವ ಬೆಳಕಿನಿಂದಾಗಿ ಇಡೀ ಪ್ರದೇಶದ ವಾತಾವರಣವೇ ನಮಗೆ ವಿಶೇಷ ಅನುಭವವನ್ನು ನೀಡುತ್ತದೆ. ಕೆಳಗಿನಿಂದ ಕಾಣುವ ಮೇಲ್ಭಾಗದ ಉಪ್ಪರಿಗೆಯ ನೋಟವಂತೂ ನಿಜಕ್ಕೂ ಅದ್ಭುತ! ಮೇಲ್ಗಡೆಯ ನಾಲ್ಕೂ ದಿಕ್ಕುಗಳ ಜಗಲಿಯ ಬದಿಗಳಿಗೆ   ಕಲಾತ್ಮಕವಾಗಿ ಜೋಡಿಸಲ್ಪಟ್ಟ ಮರದ ಪುಟ್ಟ ಕಂಬಗಳ ಆ ದೃಶ್ಯ ಅವರ್ಣನೀಯ ಆನಂದವನ್ನುಂಟು ಮಾಡುತ್ತದೆ… ಬರಹದ ಮೂಲಕ ವ್ಯಕ್ತಪಡಿಸಲಾಗದ ದಿವ್ಯ ನೋಟವದು!

ಕುಂಜೂರು ಚೌಕಿ ಮನೆಯ ಸೊಬಗು-2

         ಅದರ ಒಳಗೋಡೆಗಳಲ್ಲಿ ಹಸಿರು, ಬಿಳಿ ಬಣ್ಣಗಳಲ್ಲಿ ಬಿಡಿಸಲ್ಪಟ್ಟ, ಬಾಳೆಲೆಯ ಅತ್ಯದ್ಭುತ  ಚಿತ್ರಕಲೆಯು ನೈಜತೆಯಿಂದ ಕೂಡಿದ್ದು, ನಿಜವಾಗಿಯೂ ವಿಶೇಷವೆನಿಸುತ್ತದೆ. ಅದರಲ್ಲಿ ಬಿಳಿ ಬಣ್ಣಕ್ಕಾಗಿ ಗೋಪಿಚಂದನವನ್ನು ಬಳಸಲಾಗಿದೆ. ಆದ್ದರಿಂದಲೇ ಅಲ್ಲಿಯ ಪೂರ್ತಿ ಪರಿಸರವು ಪರಿಮಳದಿಂದ ಕೂಡಿದೆ. ಹಸಿರು ಬಣ್ಣವು, ಸೆಗಣಿ ಮತ್ತು ಮಸಿಯನ್ನು ಸೇರಿಸಿ ತಯಾರಿಸಲಾಗಿದೆ.  ಪಂಚಕರ್ಮಚಿಕಿತ್ಸೆಗಳಲ್ಲಿ ಒಂದಾದ ಶಿರೋಧಾರ ಚಿಕಿತ್ಸೆಗೆ ಉಪಯೋಗಿಸಲ್ಪಡುವ  ತೈಲ ತುಂಬುವ ಪಾತ್ರೆಯು ಎದುರು ಜಗುಲಿಯಲ್ಲಿ ತೂಗಾಡುತ್ತಿದ್ದರೆ, ಆ ಚಿಕಿತ್ಸೆಗಾಗಿರುವ ವ್ಯಕ್ತಿ ಮಲಗುವಂತಹ ಮರದ ತೊಟ್ಟಿಯು ಅದರ ಕೆಳಗಡೆಗಿದೆ. ಇವುಗಳನ್ನು ಕಾಣುವಾಗ ನಮ್ಮ ಆಯುರ್ವೇದ ಪರಂಪರೆಯ ಬಗ್ಗೆ ಹೆಮ್ಮೆ ಎನಿಸುವುದರ ಜೊತೆಗೆ, ಇಂತಹುಗಳನ್ನು ಆ ಕಾಲದಲ್ಲಿ ಮನೆಯಲ್ಲೇ ಉಪಯೋಗಿಸುತ್ತಿದ್ದುದನ್ನು ಕಂಡು ಬಹಳ ಅಭಿಮಾನವೆನಿಸುತ್ತದೆ. 

ಶಿರೋಧಾರ ಚಿಕಿತ್ಸೆಯ ಉಪಕರಣ ಹಾಗೂ ಹಿನ್ನೆಲೆಯಲ್ಲಿ ಬಾಳೆಲೆ ಚಿತ್ರ

ಮುಂದಕ್ಕೆ, ಹೆಂಗಸರು ಹಾಗೂ ಗಂಡಸರಿಗೋಸ್ಕರ ಎರಡು ಪ್ರತ್ಯೇಕ ಅಡುಗೆ ಕೋಣೆಗಳನ್ನು ಕಂಡಾಗ ಆಶ್ಚರ್ಯವಾಗುವುದು ಸುಳ್ಳಲ್ಲ.  ಆ ಕಾಲದಲ್ಲಿ ಬ್ರಾಹ್ಮಣ ಸಂಪ್ರದಾಯವಾದಿಗಳಲ್ಲಿ ಮಡಿಮೈಲಿಗೆಗಳು ಬಹಳ ಜಾಸ್ತಿ ಆಚರಣೆಯಲ್ಲಿ ಇರುತ್ತಿದ್ದುದರಿಂದ, ಹೆಂಗಸರು ದೇವರಿಗೆ ನೈವೇದ್ಯ ತಯಾರಿಸಬಾರದೆಂಬ ನಿಯಮವಿತ್ತು ಎಂಬುದು ಗೈಡ್ ಮೂಲಕ ತಿಳಿಯಿತು. ಆ ಕಾರಣಕ್ಕಾಗಿ ದೇವರ ನೈವೇದ್ಯ  ಗಂಡಸರಿಂದಲೇ ತಯಾರಿಸಲ್ಪಡುತ್ತಿತ್ತು. ಮತ್ತೊಂದು ಕೋಣೆಯಲ್ಲಿ ಸೊಗಸಾದ ಸಣ್ಣ ಮಂಚ, ಹಾಸಿಗೆ, ಚಂದದ ತೊಟ್ಟಿಲು, ಇತ್ಯಾದಿಗಳು ಅದು ಹೆರಿಗೆ ಕೋಣೆ ಎಂಬುದನ್ನು ಸೂಚಿಸುತ್ತಿತ್ತು. ಆ  ತೊಟ್ಟಿಲಲ್ಲಿ ಅದೆಷ್ಟು ಮುದ್ದು ಕಂದಮ್ಮಗಳು ಅಮ್ಮನ ಜೋಗುಳವನ್ನು ಆಲಿಸುತ್ತಾ ನಿದ್ರಿಸಿರಬಹುದು ಅಲ್ಲವೇ? ಶಿಶುಗಳ ಕಾಲಿನ ಗೆಜ್ಜೆಯ ನಾದ, ಅಳು ನಗುಗಳ ಧ್ವನಿ ಕೋಣೆಯಲ್ಲಿ ತುಂಬಿ ಹರಿಯುತ್ತಿರುವಂತೆ ಭಾಸವಾಗುವುದಂತೂ ನಿಜ! ಮಗದೊಂದು ಕೋಣೆಯಲ್ಲಿ ಚಿನ್ನಾಭರಣವಿರಿಸುವ ಸೊಗಸಾದ ಸಂದೂಕ..  ಅದರ ಮೇಲಿರುವ ಕಲಾಕೃತಿಯಂತೂ ಅತೀ ಸುಂದರ. ಅದೇ  ಕೋಣೆಯ ಬಲಗಡೆಗೆ ಮೇಲಿನ ಉಪ್ಪರಿಗೆಗೆ ಏರಲು ಚಂದದ ಮರದ ಏಣಿಯಿದೆ. ಜೊತೆಗೇ ಕೈಗೆ ಆಧಾರವಾಗಿ ಹಿಡಿದುಕೊಳ್ಳಲು ಉದ್ದನೆಯ ದಪ್ಪನೆಯ ಬಲವಾದ ಹಗ್ಗವನ್ನೂ ಇಳಿಬಿಡಲಾಗಿದೆ.

          ಮೇಲೇರುತ್ತಿದ್ದಂತೆಯೇ, ಉಪ್ಪರಿಗೆಯಲ್ಲಿ ಸುಮಾರು ಅರುವತ್ತು ಜನರು ಮಲಗಬಹುದಾದಂತಹ, ಕೆಂಪು ಕಾವಿ ಬಣ್ಣದಿಂದ ಮಾಡಿದ ನೆಲ ಹೊಂದಿರುವ  L ಆಕಾರದ ವಿಶಾಲವಾದ ಹಜಾರವು ಗಮನ ಸೆಳೆಯುತ್ತದೆ. ಹಜಾರದ ಕಿಟಕಿಗಳ ರಚನೆ ಇನ್ನೂ ಕುತೂಹಲಕಾರಿಯಾಗಿದೆ. ಮರದಲ್ಲಿ ಮಾಡಿದ, ಎಡ ಬಲಕ್ಕೆ ಸರಿಸಿ ಮುಚ್ಚುವ ಕಿಟಕಿಯ ಬಾಗಿಲು, ಆ ಕಿಟಿಕಿಯಲ್ಲಿ ಗುಬ್ಬಚ್ಚಿಗಳಿಗಾಗಿ ಮಾಡಿರುವ ಚಂದದ ಗೂಡುಗಳು… ನಿಜಕ್ಕೂ ಆ ಕರ್ಮಚಾರಿಯ ಕಲಾನೈಪುಣ್ಯತೆಯನ್ನು ಮೆಚ್ಚಲೇಬೇಕು. ಆ ಗೂಡುಗಳಲ್ಲಿ ಅದೆಷ್ಟು ಗುಬ್ಬಚ್ಚಿಗಳು ಕೂತು ಕಾಳು ತಿಂದು, ಆ ಮನೆಯನ್ನು ತಮ್ಮ ಚಿಲಿಪಿಲಿ ನಾದದಿಂದ   ತುಂಬಿರಬಹುದೆಂಬ ಯೋಚನೆಯೇ ಮನಸ್ಸನ್ನು ಮುದಗೊಳಿಸುತ್ತದೆ. ಅದರ ಪಕ್ಕದ ಇನ್ನೊಂದು ಬಹುದೊಡ್ಡದಾದ ಕಿಟಿಕಿಯ ರಚನೆ ಇನ್ನೂ ಕುತೂಹಲಕಾರಿಯಾಗಿದೆ. ಅದರ ಬಾಗಿಲನ್ನು ಕೆಳಗಡೆಗೆ ಬಿಡಿಸಿದರೆ, ಆ ಬಾಗಿಲೇ ಮಲಗುವ ಮಂಚವಾಗಿ ಮಾರ್ಪಾಡಾಗುವ ಪರಿ ನೋಡಲೇ ಸೊಗಸು!  ಹಜಾರದ ಇನ್ನೊಂದು ಪಕ್ಕದಲ್ಲಿ, ಕೇರಳದ ಮಾದರಿಯ, ಆರಾಮವಾಗಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಎತ್ತರದ, ಉದ್ದನೆಯ ಚಂದದ ವಿನ್ಯಾಸದ ಮರದ ಆಸನವು ನೋಡುಗರನ್ನು ಸ್ವಲ್ಪ ಸಮಯ ಅದರ ಮೇಲೆ ಕುಳಿತುಕೊಳ್ಳಲು ಪ್ರೇರೇಪಿಸುತ್ತದೆ. ಸಾಕಷ್ಟು ಗಾಳಿ ಬೆಳಕನ್ನು  ಹೊಂದಿರುವ ಈ ಜಾಗದಲ್ಲಿ  ಕುಳಿತರೆ, ಹೊರಗಡೆಯ ದೃಶ್ಯವು ಬಹುದೂರದ ವರೆಗೂ ಗೋಚರಿಸುವುದರಿಂದ, ಮನೆಯ ಯಜಮಾನನು ಅಲ್ಲಿಂದಲೇ ತನ್ನ ಕೃಷಿ ಕೆಲಸಗಳ ಬಗ್ಗೆ ನಿಗಾ ಇಡಲು ಸಾಧ್ಯವಿರುವುದು  ವಿಶೇಷ. ಅಲ್ಲಿಯೇ ಎಡ ಮೂಲೆಯಲ್ಲಿ ತುಂಬು ಬೆಳಕಿನ ವ್ಯವಸ್ಥೆಯಿರುವ ಓದುವ ಕೋಣೆಯಲ್ಲಿ ಕುರ್ಚಿ, ಮೇಜುಗಳಿದ್ದು ಯಜಮಾನನ ಬರುವಿಕೆಯನ್ನು ಕಾಯುತ್ತಿರುವಂತಿದೆ. ಅದರ ಪಕ್ಕದಲ್ಲಿರುವ ಹೊಗೆ ಅಟ್ಟದಲ್ಲಿ, ಅಡುಗೆಕೋಣೆಯಿಂದ ಹೊಗೆ ಹೊರಹೋಗಲು ವಿಶೇಷವಾದ ಕೊಳವೆಯ ವ್ಯವಸ್ಥೆ, ಉಪ್ಪಿನಕಾಯಿ, ಬೆಲ್ಲ, ಅಕ್ಕಿ ಇತ್ಯಾದಿಗಳನ್ನು  ಸುರಕ್ಷಿತವಾಗಿ ಸಂರಕ್ಷಿಸಿಡಲು ಇರುವ ಪಾತ್ರೆಗಳು, ಭರಣಿಗಳು ನಮ್ಮನ್ನು ಹಿಂದಿನ ಕಾಲಕ್ಕೆ ಕೊಂಡೊಯ್ಯುತ್ತವೆ. ಮುಂದಕ್ಕೆ, ದೊಡ್ಡದಾದ ಹಾಸಿಗೆಯಿರುವ ಮನೆಯ ಯಜಮಾನನ ಪ್ರತ್ಯೇಕ ಮಲಗುವ ಕೋಣೆಯು ವಿಶಾಲವಾಗಿದ್ದು, ಒಳ್ಳೆಯ ಗಾಳಿ ಬೆಳಕಿನ ವ್ಯವಸ್ಥೆಯಿದೆ. ಅಲ್ಲಿಯೂ ಮರದ ದೊಡ್ಡದಾದ ಕುರ್ಚಿ, ಮೇಜುಗಳನ್ನು ಕಾಣಬಹುದು. ಹೀಗೆ.. ಒಂದೇ.. ಎರಡೇ ..ನೋಡಿದಷ್ಟು ಮುಗಿಯದ ವಸ್ತುಗಳು.. ವಿನ್ಯಾಸಗಳು!! ಈ ಮನೆಯಲ್ಲಿರುವ ವಸ್ತುಗಳು ಕೂಡಾ ಮನೆ ಸ್ಥಳಾಂತರದ ಸಮಯದಲ್ಲಿ, ಅಲ್ಲಿಂದಲೇ ತಂದವುಗಳಾಗಿವೆ! ಇವೆಲ್ಲವನ್ನೂ ವೀಕ್ಷಿಸುವಾಗ ಮನಸ್ಸು ತುಂಬಿ ಬರುವುದು ಸುಳ್ಳಲ್ಲ. ಪೂರ್ತಿ ಮನೆಯನ್ನು ತೋರಿಸಿದ ಮಾರ್ಗದರ್ಶಕಿಯು, “ಸಮಯವಾಯಿತು.. ಇನ್ನು ಹೋಗೋಣವೇ?” ಎಂದಾಗ, “ಅಯ್ಯೋ ಇನ್ನೂ ಏನೂ ನೋಡಿಯೇ ಮುಗಿದಿಲ್ಲವಲ್ಲ!” ಎಂದುಕೊಂಡದ್ದಂತು ನಿಜ.

………ಮುಂದುವರಿಯುವುದು.

ಈ ಲೇಖನಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=33412

-ಶಂಕರಿ ಶರ್ಮ, ಪುತ್ತೂರು

13 Responses

 1. Anonymous says:

  ಕುಂಜೂರು ಚೌಕಿ ಮನೆ ನೋಡಿ, ಮನೆಯ ವಿಶೇಷತೆಗಳನ್ನು ಓದಿ ಮನ ಮುದಗೊಂಡಿತು. ಧನ್ಯವಾದಗಳು

  • ಶಂಕರಿ ಶರ್ಮ says:

   ತಮ್ಮ ಮೆಚ್ಚುಗೆಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು

 2. ಜಲಜಾರಾವ್ says:

  ಹೋದ ತಿಂಗಳ ಕೊನೆ ವಾರದಲ್ಲಿ ಉಡುಪಿಯಲ್ಲೇ ಇದ್ದೆವು. ಮಣಿಪಾಲದಲ್ಲಿರುವ ಅನಾಟಮಿ ಮ್ಯೂಸಿಯಂ ಅನ್ನು ನೋಡಿ ಬಂದೆವು. ಈ ಲೇಖನ ಓದಿದ್ದರೆ ಹೆರಿಟೇಜ್ ವಿಲೇಜ್ ಅನ್ನೂ ನೋಡಬಹುದಿತ್ತು. .. ಚೆಂದದ ಲೇಖನ.

  • ಶಂಕರಿ ಶರ್ಮ says:

   ಇನ್ನೊಮ್ಮೆ ಹೋದಾಗ ಹೋಗಿಬನ್ನಿ ಮೇಡಂ..ಬಹಳ ಚೆನ್ನಾಗಿದೆ.
   ತಮ್ಮ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು ಮೇಡಂ.

 3. ನಯನ ಬಜಕೂಡ್ಲು says:

  ತುಂಬಾ ಚೆನ್ನಾಗಿದೆ

 4. ನಾಗರತ್ನ ಬಿ. ಅರ್. says:

  ಮಣಿಪಾಲದ ಮಧುರ ನೆನಪುಗಳ ಲ್ಲಿ ಚೌಕಿ ಮನೆಗಳು ವಿಶೇಷ ತೆ ಉತ್ತಮ ಮಾಹಿತಿ ನೀಡಿದ್ದೀರಿ
  ಧನ್ಯವಾದಗಳು ಮೇಡಂ.

  • ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಸ್ಪಂದನೆಗೆ, ಮೆಚ್ಚುಗೆಯ ನುಡಿಗಳಿಗೆ ನಮಿನಿಸಿದೆ. ಮೇಡಂ.

 5. ಚೆನ್ನಾಗಿದೆ

  • ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು ಸರ್.

 6. Padma Anand says:

  ನಮಗೂ ಅಯ್ಯೋ ಇಷ್ಟು ಸುಂದರ ಮನೆಯ ವರ್ಣನೆ ಮುಗಿದೇ ಹೋಯಿತಲ್ಲ ಎನ್ನಿಸಿತು. ಅಂದದ ಮನೆಯನ್ನು ಎಷ್ಟು ಚಂದ ವಿವರಿಸಿದ್ದೀರಿ! ಅಭಿನಂದನೆಗಳು

  • ಶಂಕರಿ ಶರ್ಮ says:

   ಮನದಾಳದ ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ

 7. sudha says:

  Very nice description. i want to see this when i go on this route next time.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: