ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 6

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು..)

20-04-2019 ಶನಿವಾರ
ಇಂದು ಕೂಡ ಕ್ಯೊಟೋ ನಗರದಲ್ಲಿಯೇ ನಮ್ಮ ಸುತ್ತಾಟ. ಬೆಳಿಗ್ಗೆ 5.30 ಕ್ಕೆ ಎಚ್ಚರ ಆಯಿತು. ಎದ್ದು ಕಾಫಿ ಕುಡಿದು ಸ್ನಾನ ಮುಗಿಸಿದೆವು. ಆರೂವರೆಗೆಲ್ಲಾ ಹೊರಡಲು ಸಿದ್ಧವಾಗಿದ್ದೆವು. ಆದರೆ ನಮಗೆ ಸಮಯ ಇನ್ನೂ ಒಂದು ಗಂಟೆ ಇತ್ತು. ಇಂತಹ ಸಮಯ ನಾವೇ ಹೊರಗೆ ಹೋಗಿ ಊರನ್ನು ನೋಡಲು ಪ್ರಶಸ್ತವಾಗಿರುತ್ತದೆ. ಹಾಗಾಗಿ ನಾವಿಬ್ಬರೂ ರೂಮಿನಿಂದ ಹೊರಬಿದ್ದೆವು. ತಣ್ಣಗಿನ ಗಾಳಿ ಬೀಸುತ್ತಿತ್ತು. ಬೆಚ್ಚಗಿರುವ ಉಡುಪು ಬೇಕಿತ್ತು. ಆದರೆ ನಾವು ಕೋಟ್ ಅಥವಾ ಸ್ವೆಟರ್ ಧರಿಸದೇ ಬಂದಿದ್ದೆವು. ಬೆಳಗಿನ ಏಳುಗಂಟೆ ಆಗಿದ್ದರಿಂದ ಇನ್ನೂ ಅಂಗಡಿಗಳೆಲ್ಲಾ ಮುಚ್ಚಿದ್ದುವು. ಅಲ್ಲಲ್ಲಿ ಕೆಲಸಕ್ಕೆ ಹೋಗುವವರು ಕಪ್ಪು ದಿರಿಸು ಧರಿಸಿ ಹೋಗುತ್ತಿದ್ದರು. ಕೆಲವು ಮಾರ್ಟ್‌ಗಳು ತೆರೆದಿದ್ದುವು. ಅಂದರೆ ಒಳಗೆ ಯಾರೂ ಇಲ್ಲ. ನಾವು ಹೋಗಿ ಸಾಮಾನು ಕೊಂಡು ಹಣ ಪಾವತಿಸಿ ಬರುವುದು. ಸೆವೆನ್ ಸೆವೆನ್ (೭೭) ಎನ್ನುವ ಮಾರ್ಟ್ ಹೀಗಿತ್ತು. ತಲೆಯೆತ್ತಿ ನೋಡಿದರೆ ಆಕಾಶದಲ್ಲಿ ಜೆಟ್ ಓಡಾಟದ ಗೆರೆಗಳು ಮಗು ಗೀಟುಗಳನ್ನು ಕಾಗದದ ಮೇಲೆ ಹಾಕಿದಂತಿತ್ತು. ಹತ್ತಿಪ್ಪತ್ತು ನಿಮಿಷ ನಡೆದು ಹೋಟೆಲಿಗೆ ವಾಪಸ್ ಬಂದೆವು. ರೂಮಿಗೆ ಹೋಗಿ ಮರೆಯದೆ ಕೋಟನ್ನು ಧರಿಸಿದೆ. ಹಿಂದಿನ ದಿನ ‘ತಿಲಗ’ದಲ್ಲಿ ತಿಂಡಿ ತಿಂದಿದ್ದೆವು. ಈಗಲೂ ಅಲ್ಲಿಗೇ ತಿಂಡಿ ತಿನ್ನಲು ಹೊರಟೆವು. ಹೋಟೆಲಿನಿಂದ ಹತ್ತು ನಿಮಿಷದ ದಾರಿ. ಚಿಕ್ಕ ರಸ್ತೆಗಳು, ಆದರೆ ಎಲ್ಲೂ ಕೊಳಕಿಲ್ಲ. ಎಲ್ಲರೂ ಮನೆಯ ಮುಂದೆ ಒಂದಾದರೂ ಪುಟ್ಟ ಹೂಗಿಡದ ಕುಂಡ ಇಟ್ಟಿದ್ದರು.

‘ತಿಲಗ’ದಲ್ಲಿ ತಿಂಡಿ ತಯಾರಾಗಿ ನಮ್ಮನ್ನು ಕಾಯುತ್ತಿತ್ತು. ಇಡ್ಲಿಯನ್ನು ಈ ದಿನವೂ ಮಾಡಲಾಗಿತ್ತು. ಆದರೆ ಇಂದು ಮೃದುವಾಗಿತ್ತು. ಹಿಂದಿನ ದಿನ ಹಿಟ್ಟು ಹುದುಗಿರಲಿಲ್ಲವೇನೋ? ಜಪಾನಿನ ಚಳಿಗೆ ಹಿಟ್ಟು ಮುದುಡಿ ಕುಳಿತಿರಬಹುದು! ಜೊತೆಗೆ ಆಂಬೊಡೆ, ಅದೂ ಚೆನ್ನಾಗಿತ್ತು. ತಿಂಡಿ ತಿಂದು ಹೊರಗೆ ಬಂದೆವು. ಪಕ್ಕದ ಮನೆಯ ಅಜ್ಜಿ ಹೊರಗೆ ನಿಂತಿತ್ತು. ಜಪಾನೀಯರು ದೀರ್ಘಾಯುಷಿಗಳು. ಅಲ್ಲಿ ತಂದೆ ತಾಯಿಯರು ಎಷ್ಟೇ ವಯಸ್ಸಾದರೂ ಚುರುಕಾಗಿ ಇದ್ದು, ತಮ್ಮ ಪಾಡಿಗೆ ಇರುತ್ತಾರೆ ಎನ್ನಿಸಿತು. ಮಕ್ಕಳಿಗೂ ಅವರನ್ನು ನೋಡಿಕೊಳ್ಳಲು ಪುರುಸೊತ್ತು ಕಡಿಮೆ. ಅಜ್ಜಿಯನ್ನು ನೋಡಿ ಮಾತನಾಡಿಸುವ ಮನಸ್ಸಾಯಿತು. ಅಜ್ಜಿ ಹೊರಗೆ ನಿಂತು ಯಾರನ್ನೋ ಅಥವಾ ಯಾವುದನ್ನೋ ನಿರೀಕ್ಷಿಸುವಂತಿತ್ತು. ನಾನು ಹತ್ತಿರ ಹೋಗಿ ಹಲೋ ಎಂದು ಹೇಳಿ ‘ನಮಸ್ತೆ’ ಹೇಳಿದೆ. ಅಜ್ಜಿಗೆ ಇಂಗ್ಲಿಷ್ ಗೊತ್ತಿಲ್ಲ. ಅವರು ಜಪಾನಿ ಭಾಷೆಯಲ್ಲೇ ಮಾತನಾಡಿದರು. ನಾನು ಆಂಗ್ಲಭಾಷೆಯಲ್ಲೇ ಮಾತನಾಡಿದೆ. ಸಂಜ್ಞೆಗಳು ಇದ್ದವಲ್ಲ! ಒಟ್ಟಿನಲ್ಲಿ ಇಬ್ಬರೂ ಒಬ್ಬರಿಗೊಬ್ಬರು ತಿಳಿಯದ ಭಾಷೆಯಲ್ಲೇ ಮಾತನಾಡಿದೆವು. ಅಜ್ಜಿ ನಾಲ್ಕು ಹೆಜ್ಜೆ ಒಳಗೆ ಕರೆದುಕೊಂಡು ಹೋಗಿ ತನ್ನ ಮನೆ ತೋರಿಸಿದರು. ಅಜ್ಜಿಯ ಜೊತೆಗೆ ಫೋಟೋ ತೆಗೆದುಕೊಂಡೆ. ಜಪಾನಿನಲ್ಲಿ ಎಂಭತ್ತು ವಯಸ್ಸಾದವರೂ ಜಿಮ್‌ಗೆ ಹೋಗುತ್ತಾರಂತೆ. ಈ ದೇಶದಲ್ಲಿ ಮಕ್ಕಳು ಕಡಿಮೆ, ವಯಸ್ಸಾದವರೇ ಜಾಸ್ತಿ ಆಗುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಶೇಕಡ ೪೦ರಷ್ಟು ಜನ ೬೫ ವಯಸ್ಸಿಗಿಂತ ಮೇಲ್ಪಟ್ಟವರಾಗುತ್ತಾರೆ. ಅಷ್ಟರಲ್ಲಿ ಒಂಭತ್ತು ಗಂಟೆ ಹತ್ತಿರವಾಯಿತು. ನಮ್ಮ ಬಸ್ ಬಂದಿತು. ನಾವು ನಾರ ಪಾರ್ಕ್‌ಗೆ ಹೊರಟೆವು. ಇದು ಕ್ಯೂಟೋವಿನಿಂದ ೩೦ ಕಿ.ಮೀ. ದೂರದಲ್ಲಿದೆ.

ನಾರ ಜಿಂಕೆ ಉದ್ಯಾನ
ಇದು ಒಂದು ಸಾರ್ವಜನಿಕ ಉದ್ಯಾನ. ಜಪಾನಿನ ಅತ್ಯಂತ ಹಳೆಯ ಉದ್ಯಾನಗಳಲ್ಲೊಂದಾಗಿದೆ (1880). ಇದು ಸುಂದರ ಉದ್ಯಾನ. ಇಲ್ಲಿಯ ವಿಶೇಷ ‘ಸಿಕಾ’ ಎನ್ನುವ ವನ್ಯ ಜಿಂಕೆಗಳು. ಸುಮಾರು 1200 ಜಿಂಕೆಗಳಿವೆ. ಇವು ತಮ್ಮ ಪಾಡಿಗೆ ಓಡಾಡಿಕೊಂಡಿವೆ. ಇವನ್ನೂ ರಾಷ್ಟ್ರೀಯ ನಿಧಿ ಎಂದು ಜಪಾನ್ ಘೋಷಿಸಿದೆ. ಸುಮಾರು ೫೦೦ ಹೆಕ್ಟೇರ್‌ಗಳಷ್ಟು ವಿಶಾಲವಾದ ಸ್ಥಳದಲ್ಲಿ ನಾರ ಉದ್ಯಾನ ಹರಡಿದೆ. ಪಕ್ಕದಲ್ಲಿಯೇ ತೊಡೈ-ಜಿ ದೇವಾಲಯ ಇದೆ. ಒಂದು ಕಡೆ ನಾರ ಸಂಗ್ರಹಾಲಯ ಇದೆ. ಜಾನಪದ ಕಥೆಗಳಲ್ಲಿ ಸಿಕ ಜಿಂಕೆಯ ಉಲ್ಲೇಖವಿದೆ. ದೇವರು ಇದರ ಮೇಲೆ ಸವಾರಿ ಮಾಡಿಕೊಂಡು ಮಿಕಾಸ ಪರ್ವತದ ಮೇಲೆ ಕಾಣಿಸಿಕೊಂಡನಂತೆ. ಆದ್ದರಿಂದ ಈ ಜಿಂಕೆ ಜಪಾನೀಯರಿಗೆ ಪವಿತ್ರವಾದದ್ದು. ಇದನ್ನು ಕೊಲ್ಲುವ ಹಾಗಿಲ್ಲ. ಕೊಂದರೆ ಮರಣದಂಡನೆಯೇ ಶಿಕ್ಷೆ ಎನ್ನುವ ಹಾಗಿತ್ತು. ಎರಡನೆಯ ಮಹಾಯುದ್ಧದ ಬಳಿಕ ಇದನ್ನು ತೆಗೆದುಹಾಕಲಾಯಿತು. ಆದರೂ ಈ ಜಿಂಕೆಗಳ ಮೇಲೆ ಕೈಮಾಡುವ ಹಾಗಿಲ್ಲ. ಇವುಗಳಿಗೆ ನೀವು ಏನಾದರೂ ತಿನ್ನಿಸಬೇಕೆನಿಸಿದರೆ, ಅಲ್ಲಿಯೇ ಸಿಗುವ ‘ಜಿಂಕೆ-ಬಿಸ್ಕತ್ತು’ ಖರೀದಿಸಿ ಕೊಡಬೇಕು. ಆಗ ನಿಮ್ಮನ್ನೇ ಅವು ಗುರಾಯಿಸಬಹುದು! ಕೆಲವರು ಈ ಬಿಸ್ಕತ್ತನ್ನು ಹಾಕುತ್ತಿದ್ದರು. ನನಗೇನೋ ಈ ಜಿಂಕೆಗಳು ಸುಂದರವಾಗಿ ಕಾಣಲಿಲ್ಲ. ನಮ್ಮ ಚುಕ್ಕಿ ಜಿಂಕೆಯಂತೆ ಇವು ಇಲ್ಲ. ಕಂದು ಬಣ್ಣಕ್ಕಿವೆ. ಇತ್ತೀಚೆಗೆ ಇವುಗಳ ಸಂಖ್ಯೆ ಜಾಸ್ತಿಯಾಗಿ, ಉದ್ಯಾನದ ಹೊರಭಾಗದಲ್ಲಿರುವವನ್ನು ಹಿಡಿದು ಕೊಲ್ಲುತ್ತಿದ್ದಾರೆ. ಜಿಂಕೆಗಳಿಗೆ ಯಾವ ರೀತಿಯಲ್ಲೂ ತೊಂದರೆ ಮಾಡಬಾರದು ಎಂದು 2018ರಲ್ಲಿ ಇಂಗ್ಲೀಷ್, ಚೈನೀಸ್ ಮತ್ತು ಜಪಾನಿ ಭಾಷೆಗಳಲ್ಲಿ ದೊಡ್ಡ ಬೋರ್ಡ್‌ಗಳನ್ನು ಹಾಕಿದ್ದಾರೆ. ಜಿಂಕೆಗಳಿಂದ ಮನುಷ್ಯರಿಗೇ ತೊಂದರೆ ಹೆಚ್ಚು! ಪ್ರತಿವರ್ಷ ನೂರಕ್ಕೂ ಹೆಚ್ಚು ಜನ ಈ ಜಿಂಕೆಗಳಿಂದ ಗಾಯಗೊಳ್ಳುತ್ತಾರೆ. ಕೈಯಲ್ಲಿ ಏನಾದರೂ ಕಾಗದ ಇದ್ದರೆ ಬಂದು ತಿಂದುಬಿಡುತ್ತವೆ. ನಂಬಿಕೆಗಳು, ಆಚರಣೆಗಳು ಎಂತಹ ಮುಂದುವರೆದ ದೇಶಗಳಲ್ಲಿಯೂ ಇದ್ದೇ ಇರುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಭಾರತದಲ್ಲಿ ಮಾತ್ರ ಇವೆ ಎಂದು ನಾವು ಭಾವಿಸಬೇಕಿಲ್ಲ. ನಮ್ಮಲ್ಲಿ ಹಸುವನ್ನು ಗೋಮಾತೆ ಎಂದು ಪೂಜಿಸುವ ಹಾಗೆ ಜಪಾನೀಯರಿಗೆ ಇಲ್ಲಿಯ ಜಿಂಕೆಗಳು ಪವಿತ್ರ.


ತೊಡೈ ಜಿ ದೇವಾಲಯ : ನಾರ ಉದ್ಯಾನದಲ್ಲಿಯೇ ಬಹಳ ಪ್ರಾಚೀನವಾದ ತೊಡೈ-ಜಿ ಮಂದಿರ ಇದೆ. ಇದು ಪ್ರವಾಸಿಗಳು ಕಡ್ಡಾಯವಾಗಿ ಭೇಟಿ ಕೊಡುವ ಸ್ಥಳ. ಯುನೆಸ್ಕೊ ಈ ದೇವಾಲಯವನ್ನು ಜಗತ್ತಿನ ಒಂದು ಪಾರಂಪರಿಕ ತಾಣ ಎಂದು ಗುರುತಿಸಿದೆ. ಇದು ಹಲವಾರು ಕಟ್ಟಡಗಳನ್ನು ಹೊಂದಿದೆ. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಮರದ ಕಟ್ಟಡ ಇದೆ. ದೂರದಿಂದ ನೋಡಲು ಬಹಳ ಭವ್ಯವಾಗಿ ಕಾಣುವ ಜಪಾನೀ ಶೈಲಿಯ ಕಟ್ಟಡ. ಬುದ್ಧನನ್ನು ಇಟ್ಟಿರುವ ವಿಶಾಲ ಹಜಾರ. 157 ಅಡಿ (48 ಮೀ) ಎತ್ತರ ಇದೆ. ಇದರ ಹೆಸರು ದೈಬುತ್ಸು ಡೆನ್. ಇದನ್ನು 743 ಕ್ರಿ.ಶ.ದಲ್ಲಿ ಕಟ್ಟಲಾಯಿತು. ಇದರಲ್ಲಿ ಬೃಹದಾಕಾರದ ಬುದ್ಧ ಕುಳಿತಿದ್ದಾನೆ. ಮೊದಲಿನ ಕಟ್ಟಡ ಮತ್ತು ಹೊರಗಿದ್ದ ಪಗೋಡಗಳು ಬೆಂಕಿಗೆ ಆಹುತಿಯಾಗಿತ್ತು. ಈಗಿರುವ ಕಟ್ಟಡವನ್ನು 1709 ನಲ್ಲಿ ಕಟ್ಟಲಾಯಿತು. ಇದು ಸ್ವಲ್ಪ ಚಿಕ್ಕದು.


ತೊಡೈ-ಜಿ ದೇವಾಲಯವನ್ನು ಚಕ್ರವರ್ತಿ ಶೋಮು ಎನ್ನುವವನು ಕಟ್ಟಿಸಿದ. ಇದು ಚಕ್ರಾಧಿಪತ್ಯದ ಶಕ್ತಿಯ ಸಂಕೇತವಾಗಿತ್ತು. ಕಟ್ಟಲು 15 ವರ್ಷಗಳು ಬೇಕಾದವು.
ಬುದ್ಧನ ವಿಗ್ರಹ ಕಂಚಿನಿಂದ ಮಾಡಿದೆ. ನೋಡಲು ಕತ್ತೆತ್ತಬೇಕು. ಪದ್ಮಾಸನದಲ್ಲಿ ಕಮಲಪುಷ್ಪದಲ್ಲಿ ಕುಳಿತಿದ್ದಾನೆ. ಕಮಲದ ಹೂವಿನ ಎಸಳುಗಳು 10 ಅಡಿ ಎತ್ತರ ಇವೆ. ಅದೇ ಶಾಂತ ಮುಖ, ಪ್ರಸನ್ನವಾಗಿದೆ. ಧ್ಯಾನ ಮಾಡುತ್ತಿದ್ದಾನೆ. ಬುದ್ಧನನ್ನು ದೈಬುತ್ಸು ಅಂದರೆ ಮಹಾಬುದ್ಧ ಎಂದು ಕರೆಯುತ್ತಾರೆ. ಇದು 49 ಅಡಿ (15ಮೀ) ಎತ್ತರ ಇದೆ. ಇದನ್ನು ಕ್ರಿ.ಶ. 749ರಲ್ಲಿ ಎರಕ ಹುಯ್ಯಲಾಯಿತು. ಜಗತ್ತಿನಲ್ಲಿಯೇ ಇದು ಅತಿ ದೊಡ್ಡ ಕಂಚಿನ ಬುದ್ಧ ಆಗಿದೆ. ಜಪಾನಿನ ಬೌದ್ಧರ ಕೆಗಾನ್ ಪಂಥದವರ ಸ್ಥಳವಿದು. ಇವನು ವೈರೋಚನ ಬುದ್ಧ. ಜಪಾನೀಯರು ಈ ಬುದ್ಧನನ್ನು ಅಧ್ಯಾತ್ಮಿಕ ರೂಪ ಎಂದು ತಿಳಿಯುತ್ತಾರೆ. ಗೌತಮ ಬುದ್ಧ ಅಥವಾ ಶಾಕ್ಯಮುನಿ ಎಂದೂ ಕರೆಯುತ್ತಾರೆ. ಈ ವಿಗ್ರಹ 506 ಟನ್ ಭಾರ ಇದೆ. ವಿಗ್ರಹ ಮಾಡಲು ಲಕ್ಷೆಪಲಕ್ಷ ಜನರು ಬೇಕಾಯಿತಂತೆ. ವಿಗ್ರಹದ ಮುಖ 17 ಅಡಿ ಇದೆ, ಕಣ್ಣು ಮೂರು ಅಡಿ ಇದೆ. ಕಿವಿಯ ಉದ್ದ 8 ಅಡಿ. ಮುಂಗುರುಳುಗಳು 900 ಕ್ಕೂ ಜಾಸ್ತಿ ಇವೆ. ಮೂಲ ವಿಗ್ರಹ ಭೂಕಂಪ ಮತ್ತು ಬೆಂಕಿಯಿಂದ ಬಹಳವಾಗಿಯೇ ನಾಶವಾಗಿತ್ತು. ಮತ್ತೆ ವಿಗ್ರಹವನ್ನು ಎರಕಹೊಯ್ದು ಸರಿಪಡಿಸಲಾಗಿದೆ. ಬುದ್ಧನ ವಿಗ್ರಹ ಹೆಚ್ಚು ಕಡಿಮೆ ಕಪ್ಪಾಗಿ ಕಾಣಿಸುತ್ತದೆ. ಯಾವುದೇ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ನೇತ್ರೋನ್ಮೀಲನ ಅಥವಾ ಕಣ್ಣು ಬಿಡಿಸುವುದು ಎನ್ನುವ ಕ್ರಿಯೆಯನ್ನು ನಡೆಸುತ್ತಾರೆ. ಪ್ರಾಣ ಪ್ರತಿಷ್ಠೆ ಮಾಡುತ್ತಾರೆ. ಬುದ್ಧನ ವಿಗ್ರಹದ ಈ ಸಮಾರಂಭಗಳಿಗೆ ದೂರದೇಶಗಳಿಂದ ಜನರು ಬಂದಿದ್ದರು. ಭಾರತ, ಪರ್ಷಿಯಾ ಮತ್ತು ಚೀನಾ ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಹತ್ತು ಸಾವಿರ ಬೌದ್ಧ ಭಿಕ್ಷುಗಳು ಮತ್ತು ಮೂರು ಸಾವಿರ ನರ್ತಕಿಯರು ಬಂದಿದ್ದರಂತೆ. ‘ಬೋಧಿಸೇನ’ ಆಚಾರ್ಯ ಎನ್ನುವ ಗುರು ಭಾರತದಿಂದ ಬಂದಿದ್ದರು.


ದೇವಾಲಯಕ್ಕೆ ಬಹಳ ವಿಶಾಲವಾದ ಮುಂಬಾಗಿಲು ಇದೆ. ಇದಕ್ಕೆ ನಂದೈಮಾನ್ ಬಾಗಿಲು ಎಂದು ಹೆಸರು. ದೇವಸ್ಥಾನದ ಮುಂದೆ ದೊಡ್ಡ ದೀಪದ ಕಂಬವಿದೆ. ಇದರಲ್ಲಿಯೂ ಉಬ್ಬುಶಿಲ್ಪಗಳಿವೆ. ಇವೂ ಕಂಚಿನ ಎರಕಗಳೇ ಇರಬಹುದು. ವಿಶೇಷವೆಂದರೆ ಇಲ್ಲಿ ಎರಡು ಕಡೆ ಕೃಷ್ಣ ಇದ್ದಾನೆ ಮತ್ತು ಕೊಳಲನ್ನು ಹಿಡಿದಿದ್ದಾನೆ.
ತೊಡೈ-ಜಿ ದೇವಾಲಯದ ಹತ್ತಿರವೇ ನಾರ ಉದ್ಯಾನದಲ್ಲಿ ಸಂಗ್ರಹಾಲಯ ಕೂಡ ಇದೆ. ಆದರೆ ನಾವು ಇದನ್ನು ನೋಡಲಿಲ್ಲ.

(ಮುಂದುವರಿಯುವುದು)

ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33444

-ಡಾ.ಎಸ್.ಸುಧಾ, ಮೈಸೂರು

8 Responses

 1. ನಾಗರತ್ನ ಬಿ. ಅರ್. says:

  ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.ತಾವು ಪ್ರವಾಸದ ತಾಣದಲ್ಲಿ ಸಣ್ಣ ಸಣ್ಣ ಅಂಶಗಳನ್ನು ಹಾಗೂ ಅಲ್ಲಿನ ನಂಬಿಕೆ ಆಚರಣೆಗಳನ್ನು ತಿಳಿಸಿರುವ ವಿಧಾನ ಮುದತಂದಿತು.ನಿಮ್ಮ ಜಪಾನಿ ಪ್ರವಾಸದ ಕಥೆಯ ಜೊತೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿರುವುದಕ್ಕೆ ಧನ್ಯವಾದಗಳು ಮೇಡಂ.

 2. ನಯನ ಬಜಕೂಡ್ಲು says:

  Beautiful

 3. Padma Anand says:

  ಜಪಾನಿನ ಪ್ರವಾಸಿ ಸ್ಥಳಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿರುವ ರೀತಿ ಮುಂದಿನ ಕಂತನ್ನು ಆಸಕ್ತಿಯಿಂದ ಕಾಯುವಂತೆ ಮಾಡುತ್ತಿದೆ.

 4. ಶಂಕರಿ ಶರ್ಮ says:

  ನಿಮ್ಮೊಂದಿಗೆ ನಾವೂ ಬಿಟ್ಟಿ ಜಪಾನ್ ಪ್ರವಾಸ ಮಾಡುವ ಯೋಗ! ಬಹಳ ಚಂದದ ನಿರೂಪಣೆ..ಧನ್ಯವಾದಗಳು ಮೇಡಂ.

 5. ಸೊಗಸಾದ ನಿರೂಪಣೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: