ಮಣಿಪಾಲದ ಮಧುರ ನೆನಪುಗಳು..ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ದಾರುಮೂರ್ತಿಗಳ ಸೊಗಸು…

          ಅತ್ಯದ್ಭುತ ಕಲಾತ್ಮಕ ಕುಂಜೂರು ಚೌಕಿ ಮನೆಯನ್ನು ಮನಸ್ಸಲ್ಲಿ ತುಂಬಿಸಿಕೊಂಡು,  ಮುಂದೆ ನಡೆದಾಗ ಗೋಚರಿಸುವುದೇ, ಶ್ರೀರಾಮಚಂದ್ರಾಪುರ ಮಠದ ಗುರುಗಳು ನಿವಾಸವಾಗಿದ್ದ ನಾಡಹಂಚಿನ ಛಾವಣಿಯುಳ್ಳ  ವಿದ್ಯಾಮಂದಿರ. ಇದು ಸುಮಾರು 300 ವರ್ಷಗಳ ಚರಿತ್ರೆಯುಳ್ಳದ್ದಾಗಿದೆ. ಈ ವಿದ್ಯಾಮಂದಿರವೆನ್ನುವ ಧ್ಯಾನಮಂದಿರವು, ಮನೆಗಳ ಸಮುಚ್ಚಯದ ಮಧ್ಯ ಭಾಗದಲ್ಲಿದೆ. ಇದು ಮೂಲತ: ಚೌಕಾಕಾರದಲ್ಲಿದ್ದು ಪೂರ್ವಕ್ಕೆ ಮುಖ ಮಾಡಿದೆ. ಕುಸುರಿ ಕೆತ್ತನೆಯ ಕಂಬ, ತೆರೆದ ಚಾವಡಿ,  ಅದರ ಮೂರೂ ದಿಕ್ಕುಗಳಲ್ಲಿ ಧ್ಯಾನ, ಅಧ್ಯಯನ, ದರ್ಶನ, ಅಡುಗೆ, ಭೋಜನ ಇತ್ಯಾದಿಗಳಿಗಾಗಿ ಬಳಸುವ ಕೊಠಡಿಗಳಿವೆ. ಮೇಲ್ಗಡೆಗೆ ಉಪ್ಪರಿಗೆಯಲ್ಲಿ ಗುರುಗಳ ವಿಶ್ರಾಂತಿ ಕೊಠಡಿ. ಉಪ್ಪರಿಗೆಯ ಸುತ್ತ ಜಗುಲಿಯ ಕಿಟಿಕಿ, ಬಾಗಿಲು, ಕಂಬ,ಚಾವಣಿ ಎಲ್ಲದರಲ್ಲೂ ಕಲಾತ್ಮಕ ಕೆತ್ತನೆಗಳಿವೆ. ಈ ಧ್ಯಾನಮಂದಿರದ ಪಕ್ಕದ ವಿಷ್ಣು ಮಂದಿರ ಮತ್ತು ನಂದಿಕೇಶವರ ಮಂದಿರಗಳನ್ನು ಶೆಣೈಯವರೇ ಕಟ್ಟಿಸಿರುವರು.

             ಈ ನಂದಿಕೇಶ್ವರ ಮಂದಿರದ ಛಾವಣಿಯು ಕೂಡಾ ನಾಡಹಂಚಿನಿಂದ ಮಾಡಲ್ಪಟ್ಟಿದ್ದು, ವಿವಿಧ ಅಂತಸ್ತುಗಳಲ್ಲಿ, ವಿವಿಧ ಆಕಾರಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಟ್ಟಲ್ಪಟ್ಟಿದೆ. ಇದರೊಳಗಡೆಗೆ, ವಿಶಾಲವಾದ ಸುರಕ್ಷಿತ ಜಾಗದಲ್ಲಿ, ಭಗ್ನಗೊಂಡ ನೂರಾರು ದಾರು (ಮರ) ಮೂರ್ತಿಗಳನ್ನು ಸಂರಕ್ಷಿಸಿ ಇಡಲಾಗಿದೆ. ಅವುಗಳ ಆಕಾರ, ಗಾತ್ರ ಎಲ್ಲವೂ ಬಹಳ ವಿಚಿತ್ರ… ನೂರಾರು ದೈವಗಳಿರುವ ಸಭೆಯೊಳಗೆ ಕಾಲಿಟ್ಟ ಅನುಭವ. ದೈವಗಳಾದ ಕಲ್ಲುರ್ಟಿ, ಪಂಜುರ್ಲಿ, ನಂದಿಕೋಣ, ಮಾಯಂದಲಿ ಮೊದಲಾದ ಚಿತ್ರ ವಿಚಿತ್ರ ಮೂರ್ತಿಗಳು ನಮ್ಮಲ್ಲಿ ಕುತೂಹಲವನ್ನು ಮೂಡಿಸುತ್ತವೆ.. ಕೆಲವು ಮೂರ್ತಿಗಳ ಮುಖಗಳಂತೂ  ಭಯ ಹುಟ್ಟಿಸುವಂತಿವೆ. ಒಂದಡಿಗಿಂತಲೂ   ಚಿಕ್ಕ ಗಾತ್ರದ ದಾರುಮೂರ್ತಿಗಳ ಜೊತೆಗೆ  10-15ಅಡಿಗಳಷ್ಟು ಎತ್ತರದ ಮೂರ್ತಿಗಳು ಸಾಲು ಸಾಲಾಗಿ ಶಿಸ್ತಿನಿಂದ ನಿಂತು ನಮ್ಮನ್ನು ಎದುರುಗೊಳ್ಳುವಂತಿವೆ. ಭಗ್ನಗೊಂಡ ವಿಗ್ರಹಗಳ ಶಕ್ತಿ ನಾಶವಾಗುವುದರಿಂದ  ಪೂಜಿಸಲು ಯೋಗ್ಯವಲ್ಲವೆಂಬ ನಂಬಿಕೆಯಿಂದ ಜನರು ಅವುಗಳನ್ನು ಸಮುದ್ರಕ್ಕೆ ಎಸೆಯುತ್ತಿದ್ದರು. ಅವುಗಳು ಸಮುದ್ರದಲ್ಲಿ ತೇಲಿ ದಡಕ್ಕೆ ಬಂದಾಗ, ಅದು ಸಿಕ್ಕಿದವರು ಶೆಣೈಯವರಿಗೆ ಸುದ್ದಿ ತಲಪಿಸಿದಾಗ, ಅವುಗಳನ್ನು  ತಂದು ಸಂಗ್ರಹಿಸಿ  ಇಡುತ್ತಿದ್ದರು. ಈ ಅಗಾಧ ಸಂಗ್ರಹವನ್ನು ನೋಡುವಾಗ ಶೆಣೈಯವರ ಕರ್ತೃತ್ವಶಕ್ತಿಗೆ ನಿಬ್ಬೆರಗಾಗಲೇ ಬೇಕು! ಅವುಗಳಲ್ಲಿ ಸುಮಾರು 1000ವರ್ಷಗಳಷ್ಟು ಹಳೆಯದಾದ, ಆದರೆ ಇನ್ನೂ ಗಟ್ಟಿಮುಟ್ಟಾಗಿ ಚೆನ್ನಾಗಿರುವ, ಸುಮಾರು ಹತ್ತಡಿಗಿಂತಲೂ ಎತ್ತರವಿರುವ ರಾಹು ಮತ್ತು ಕೇತುವಿಗ್ರಹಗಳಿರುವುದು ಇನ್ನೂ ಆಶ್ಚರ್ಯವೆನಿಸುತ್ತದೆ!

ದಾರು (ಮರ) ಮೂರ್ತಿಗಳು

       ಇವುಗಳ ಮುಂಭಾಗದಲ್ಲಿದೆ.. ತುಳುನಾಡಿನ ಯುದ್ಧ ಇತಿಹಾಸದ ದಾಖಲೆಯಂತಿರುವ ಜನಪದ ಆರಾಧನಾ ಕೇಂದ್ರ, ಗರಡಿ ಮನೆ.  ಅದರ ಬಾಗಿಲು ಮುಚ್ಚಲ್ಪಟ್ಟಿದ್ದು, ಪಕ್ಕದ ದೊಡ್ಡ ಕಿಟಿಕಿಯಲ್ಲಿ ಇಣುಕಿ ನೋಡಿದರೆ, ಕತ್ತಿ, ಗುರಾಣಿಗಳಂತಹ ಕೆಲವು ಯುದ್ಧೋಪಕರಣಗಳು  ಕಂಡುಬಂದವು.  ಅಲ್ಲೇ ಪಕ್ಕದಲ್ಲಿದೆ, ಬೆಂಗಳೂರಿನಿಂದ ತಂದು ಮರು ನಿರ್ಮಾಣ ಮಾಡಿದ, ಸುಮಾರು 120ವರ್ಷಗಳಷ್ಟು ಹಳೆಯದಾದ ನಿಟೇಶ್ ಮನೆ. ಮನೆಯ ಹೊರಗೋಡೆಯು ಮಣ್ಣಿನದಾಗಿದ್ದು ಕೆಂಪು ಬಣ್ಣದಿಂದ ಕೂಡಿದೆ. ಗೋಡೆಯ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಸುಂದರ ರಂಗೋಲಿಯಂತಹ  ಚಿತ್ರಗಳಿವೆ. ಮನೆಯ ಒಳಗಡೆ ದುರಸ್ಥಿ ಕಾರ್ಯ ನಡೆಯುತ್ತಿದ್ದುದರಿಂದ ಪ್ರವೇಶ ನಿಷಿದ್ಧವಿತ್ತು.

        ಆ ಮನೆಯ ಎದುರು ಭಾಗದಲ್ಲಿ ಪೂರ್ತಿ ಜೋಡಣೆಯಾಗದ ರಥವೊಂದರ ಕೆಳಭಾಗವನ್ನು ನಿಲ್ಲಿಸಿದ್ದರು. ಅದರ ಬೇರೆ ಬೇರೆ ಭಾಗಗಳಲ್ಲಿ, ಬೇರೆ ಬೇರೆ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಇಂತಹುಗಳನ್ನು ಬೇರೆ ಕಡೆಯಿಂದ ತಂದ ಬಳಿಕ, ಯಾವ ರೀತಿಯಲ್ಲಿ  ಮರುಜೋಡಿಸಲಾಗುತ್ತದೆ ಎಂಬುದನ್ನು  ಪ್ರವಾಸಿಗರಿಗೆ  ತಿಳಿಸಲೋಸುಗ  ಅದನ್ನು ಅಲ್ಲಿ ಇರಿಸಿರುವರು. ಯಾವುದೇ ವಸ್ತು ಇದ್ದ ಜಾಗದಲ್ಲಿ ಇದ್ದಂತೆಯೇ ಪ್ರತೀ ಭಾಗದಲ್ಲೂ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಆಮೇಲೆ ಎಲ್ಲಾ ಭಾಗಗಳ ಫೋಟೋ ಮತ್ತು ವೀಡಿಯೋ ತೆಗೆದ ಬಳಿಕ ಅವುಗಳನ್ನು ಕಳಚಿ ತಂದು, ಅದರ ಪ್ರಕಾರವಾಗಿ ಕೊಂಚವೂ ತಪ್ಪದಂತೆ ಜೋಡಿಸಲಾಗುತ್ತದೆ ಎಂಬ ಅತ್ಯುತ್ತಮ ಮಾಹಿತಿಯು ನಮಗೆ ಲಭಿಸಿತು. ಇದನ್ನು ಹೇಳಲು ಮತ್ತು  ಕೇಳಲೇನೋ ಸುಲಭ..ಆದರೆ ಆ ಕೆಲಸವನ್ನು ಮಾಡುವುದು ಎಷ್ಟು ಕಷ್ಟವೆಂಬುದನ್ನು ಯೋಚಿಸುವಾಗ, ಶೆಣೈಯವರಿಗೆ ಅವರ  ಕೆಲಸದಲ್ಲಿದ್ದ ಬದ್ಧತೆ, ತಾದಾತ್ಮ್ಯತೆ ಬಗ್ಗೆ ನಮಗೆ ತಿಳಿಯುತ್ತದೆ ಅಲ್ಲವೇ? ಮುಂದಕ್ಕೆ….

………ಮುಂದುವರಿಯುವುದು.

ಈ ಲೇಖನಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=33426

-ಶಂಕರಿ ಶರ್ಮ, ಪುತ್ತೂರು

7 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ ಬರಹ, ಜೊತೆಗೆ ಫೋಟೋಗಳೂ.

  • ಶಂಕರಿ ಶರ್ಮ says:

   ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

 2. ನಾಗರತ್ನ ಬಿ. ಅರ್. says:

  ಮಣಿಪಾಲದ ಮಧುರ ನೆನಪುಗಳ ಅನಾವರಣ ಚೆನ್ನಾಗಿ ಮೂಡಿ ಬರುತ್ತಿದೆ.. ನಿರೂಪಣಾ ಶೈಲಿ ಉತ್ತಮ ವಾಗಿದೆ.ಮೇಡಂ ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ.. ಧನ್ಯವಾದಗಳು.

  • ಶಂಕರಿ ಶರ್ಮ says:

   ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.

 3. Padma Anand says:

  ನೂರಾರು ದೈವಗಳಿರುವ ಸಭೆಯೊಳಗೆ ಕಾಲಿಟ್ಟ ಅನುಭವ – ಎಂತಹ ಸುಂದರ ಪರಿಕಲ್ಪನೆ! ಸುಲಲಿತವಾಗಿ ಸಾಗುತ್ತಿದೆ ಲೇಖನಮಾಲಿಕೆ.

  • ಶಂಕರಿ ಶರ್ಮ says:

   ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು..ಪದ್ಮಾ ಮೇಡಂ

 4. Samatha.R says:

  Interesting

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: